ಈ ಬಾರಿಯ ಕಾವೇರಿ ವಿವಾದ ಕನ್ನಡಿಗರಿಗೆ ಕೊಡುತ್ತಿರುವ ಸಂದೇಶವೇನು?

ಕಾವೇರಿ ವಿವಾದಕನ್ನಡಿಗರಿಗೆ ಕೊಡುತ್ತಿರುವ ಸಂದೇಶ

ತಮಿಳುನಾಡಿನ ಜೊತೆಗಿನ ಕರ್ನಾಟಕದ ಕಾವೇರಿ ವಿವಾದ ನೂರು ವರುಶಗಳಿಗೂ ಮಿಗಿಲಾದದ್ದು. ಸ್ವಾತಂತ್ರ್ಯಕ್ಕೆ ಮುಂಚೆ ಬ್ರಿಟಿಷರ ಪ್ರಭಾವದಿಂದಲೂ, ಸ್ವಾತಂತ್ರ್ಯ ನಂತರ ದೆಹಲಿಯಲ್ಲಿ ತಮಿಳುನಾಡಿನ ಪ್ರಾದೇಶಿಕ ಪಕ್ಷಗಳಿಗಿದ್ದ ಪ್ರಭಾವದಿಂದಲೂ ನಿರಂತರವಾಗಿ ತಮಿಳುನಾಡು ತನ್ನನ್ನು ತಾನು ಶೋಷಿತರಂತೆಯೂ, ಕರ್ನಾಟಕವನ್ನು ಶೋಷಿಸುವವರಂತೆಯೂ ಬಿಂಬಿಸುತ್ತ ಕಾವೇರಿ ನೀರಿನ ಮೇಲೆ ಹಕ್ಕು ಸಾಧಿಸಿ, ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಲೇ ಬಂದಿದೆ. ಪ್ರತಿ ಬಾರಿ ಮಳೆಯ ಕೊರತೆಯಾದಾಗಲೂ ಭುಗಿಲೇಳುವ ವಿವಾದ, ಕರ್ನಾಟಕ ತನಗೆ ಎಷ್ಟೇ ಕಷ್ಟವಾದರೂ ಕೊನೆಯಲ್ಲಿ ನೀರು ಬಿಡುವ ಮೂಲಕವೇ ಕೊನೆಯಾಗುತ್ತಿದ್ದದ್ದು ಒಂದೆಡೆಯಾದರೆ ಈ ಹಗ್ಗಜಗ್ಗಾಟದಲ್ಲಿ  ಸುಪ್ರೀಂ ಕೋರ್ಟಿನ ಕಣ್ಣಲ್ಲೂ, ದೆಹಲಿಯ ಮಾಧ್ಯಮಗಳ ಕಣ್ಣಲ್ಲೂ ಮತ್ತು ದೇಶದ ಇತರೆ ರಾಜ್ಯಗಳ ಕಣ್ಣಲ್ಲೂ ಕರ್ನಾಟಕ ಒಂದು ಹಟಮಾರಿ ರಾಜ್ಯ ಎಂಬಂತೆಯೇ ಬಿಂಬಿತವಾಗುತ್ತ ಬಂದಿದ್ದು ಇನ್ನೊಂದೆಡೆ. “ಕಾವೇರಿ ನಮ್ಮದು”, “ರಕ್ತ ಕೊಟ್ಟೇವು, ನೀರು ಬಿಡೆವು” ಅನ್ನುವ ಕೂಗಿಗೆ, “ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು” ಅನ್ನುವ ಮಾಧ್ಯಮಗಳ ವರದಿಗಾರಿಕೆಗೆ, ಇಲ್ಲವೇ ನಮ್ಮ ಜನಪ್ರತಿನಿಧಿಗಳು ಸರಿಯಿಲ್ಲ ಅನ್ನುವ ಲೋಚಗುಡುವಿಕೆಗೆ ಕರ್ನಾಟಕದ ಪ್ರತಿಕ್ರಿಯೆಯೂ ಸೀಮಿತವಾಗುತ್ತಿತ್ತು. ಈ ಬಾರಿ ಕರ್ನಾಟಕದ ಪ್ರತಿಕ್ರಿಯೆ, ಚಂಡಿ ಹಿಡಿದಂತಿದ್ದ ಸುಪ್ರೀಂ ಕೋರ್ಟನ್ನು ನಿಭಾಯಿಸಿದ ರೀತಿ, ತನಗೂ ಇದಕ್ಕೂ ಸಂಬಂಧವೇ ಇಲ್ಲ ಅನ್ನುವಂತಿದ್ದ ಕೇಂದ್ರ ಸರ್ಕಾರವನ್ನು ಕೊನೆಗೂ ಎಳೆ ತಂದು ಕಾವೇರಿ ನೀರು ನಿರ್ವಹಣಾ ಮಂಡಳಿ ಮಾಡದಂತೆ ತಡೆದ ರೀತಿ ಎಲ್ಲವೂ ಒಂದು ಹೊಸ ಸಂಪ್ರದಾಯಕ್ಕೆ, ಒಂದು ಹೊಸ ಮಾದರಿಯ ರಾಜಕಾರಣಕ್ಕೆ ನಾಂದಿ ಹಾಡಿತು ಅನ್ನಬಹುದು.

ಒಗ್ಗಟ್ಟಲ್ಲಿ ಬಲ

ತಮಿಳುನಾಡಿನ ವಿಷಯಕ್ಕೆ ಬಂದಾಗ ತಮಿಳು ರಾಜಕಾರಣಿಗಳು ಎಲ್ಲವನ್ನು ಮರೆತು ಒಂದಾಗಿ ನಿಲ್ಲುತ್ತಾರೆ. ಅಂತಹದೊಂದು ಒಗ್ಗಟ್ಟು ನಮ್ಮ ರಾಜಕಾರಣಿಗಳಿರಲಿಲ್ಲ. ಕಾವೇರಿ ವಿವಾದ ಸ್ಪೋಟಗೊಂಡ ಹೊತ್ತಲ್ಲೂ ಅದು ಕಾಣಿಸಿರಲಿಲ್ಲ. ಯಾವಾಗ ಕೋರ್ಟು ಕಾವೇರಿ ಕೊಳ್ಳದ ವಸ್ತು ಸ್ಥಿತಿಯನ್ನು ಅರಿಯದೇ ಒಂದರ ಹಿಂದೆ ಒಂದರಂತೆ ನೀರು ಬಿಡಲೇಬೇಕು ಅನ್ನುವ ತೀರ್ಮಾನಗಳನ್ನು ಕೈಗೊಳ್ಳಲಾರಂಭಿಸಿತೋ ಆಗ ತೀವ್ರ ಬಿಕ್ಕಟ್ಟಿಗೆ ಸರ್ಕಾರವೂ ಸಿಲುಕಿತು, ಎಲ್ಲ ಪಕ್ಷಗಳೂ ಸಿಲುಕಿದವು. ಇಂತಹ ಹೊತ್ತಲ್ಲಿ ನಿಸ್ಸಂದೇಹವಾಗಿಯೂ ಕರ್ನಾಟಕದ ಎಲ್ಲ ನೀರಾವರಿ ವಿಚಾರಗಳಲ್ಲಿ ಆಳವಾದ ಅರಿವುಳ್ಳ ದೇವೆಗೌಡರನ್ನು ಮುಖ್ಯಮಂತ್ರಿಗಳೇ ಹೋಗಿ ಕಂಡು, ಮಾರ್ಗದರ್ಶನ ಕೋರಿದ್ದು ಒಂದು ದೊಡ್ಡ ಬದಲಾವಣೆಯ ಮೊದಲ ಹೆಜ್ಜೆಯಾಯಿತು. ಸರ್ವ ಪಕ್ಷದ ಸಭೆಗೆ ಬಿಜೆಪಿ ಗೈರಾದಾಗಲೂ ಅದನ್ನು ಉಳಿದೆರಡು ಪಕ್ಷಗಳು ರಾಜಕೀಯ ಮಾಡಲು ಬಳಸಲಿಲ್ಲ. ಬದಲಿಗೆ, ಹಾಗೇ ಗೈರಾದದ್ದು ಜನರ ಆಕ್ರೋಶ ಬಿಜೆಪಿಯತ್ತಲೇ ತಿರುಗುವಂತಾದದ್ದು ಅರಿತ ಬಿಜೆಪಿಯೂ ತಕ್ಷಣ ತನ್ನ ತಪ್ಪು ತಿದ್ದಿಕೊಂಡು ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಪಾಲ್ಗೊಂಡು, ಮೂರೂ ಪಕ್ಷಗಳು ಒಕ್ಕೊರಲಿನಿಂದ “ಕುಡಿಯುವ ನೀರಿಗಾಗಿ ಮಾತ್ರ ಕಾವೇರಿ ನೀರು ಬಳಸುತ್ತೇವೆ” ಅನ್ನುವ ಜಾಣತನದ ನಿರ್ಣಯವನ್ನು ಕೈಗೊಂಡು ಒಂದರ್ಥದಲ್ಲಿ ನದಿ ನೀರಿನಂತಹ ಸೂಕ್ಷ್ಮ ವಿಷಯಗಳಲ್ಲಿ ನ್ಯಾಯಾಂಗದ ಪಾತ್ರವೇನಿರಬೇಕು ಅನ್ನುವ ಬಗ್ಗೆಯೇ ಒಂದು ಚರ್ಚೆ ಹುಟ್ಟುವಂತೆ ಮಾಡಿದರು. ರಂಗೋಲಿ ಕೆಳಗೆ ನುಸುಳುವ ಕರ್ನಾಟಕದ ಈ ನಡೆಗೆ ಸುಪ್ರೀಂ ಕೋರ್ಟಿನಲ್ಲಿ ಸಹಜವಾಗಿಯೇ ಪ್ರತಿರೋಧ ಕಂಡು ಬಂದಿತು. ಕರ್ನಾಟಕವನ್ನು ದಂಡಿಸುವಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ ಸ್ಥಾಪನೆಯನ್ನು ಇನ್ನು ಮೂರು ದಿನದಲ್ಲಿ ಮಾಡಿ ಅನ್ನುವ ದುಡುಕಿನ ನಿರ್ಧಾರವನ್ನು ಕೇಂದ್ರಕ್ಕೆ ತಿಳಿಸಿತು. ಅದಕ್ಕೂ ಹೂಂಗುಟ್ಟಿದ ಕೇಂದ್ರದ ಆಟಾರ್ನಿ ಜನರಲ್ ನಿರ್ಧಾರ ಕರ್ನಾಟಕವನ್ನು ತೀವ್ರ ಆತಂಕಕ್ಕೆ ತಳ್ಳಿತು. ಮಹರಾಜರು ತಮ್ಮ ಮಡದಿಯ ಆಭರಣಗಳನ್ನು ಅಡ ಇಟ್ಟು ಕಟ್ಟಿದ ಕನ್ನಂಬಾಡಿಯಾಗಲಿ, ನಮ್ಮ ರಾಜ್ಯದ ಜನರ ತೆರಿಗೆ ಹಣದಿಂದಲೇ ಕಟ್ಟಿದ ಹಾರಂಗಿ, ಕಬಿನಿ, ಹೇಮಾವತಿಯನ್ನು ಕೇಂದ್ರ ಸರ್ಕಾರದ ಕೈಗೆ, ಆ ಮೂಲಕ ಪರೋಕ್ಷವಾಗಿ ತಮಿಳುನಾಡಿನ ಕೈಗೆ ಒಪ್ಪಿಸುವುದು ಕನ್ನಡಿಗರ ಆತ್ಮಾಭಿಮಾನಕ್ಕೆ ದೊಡ್ಡ ಹೊಡೆತ ನೀಡುವ ಘಟನೆಯಾಗಿತ್ತು. ಈ ಆಣೆಕಟ್ಟೆಗಳನ್ನು ಕಟ್ಟಲು ಯಾರೂ ಒಂದು ಪೈಸೆ ನೀಡಿಲ್ಲ, ಇದು ಕನ್ನಡಿಗರ ಹಣದಲ್ಲಿ ಕಟ್ಟಿದ್ದು ಅನ್ನುವರ್ಥದ  ಮಾತುಗಳನ್ನು ಮುಖ್ಯಮಂತ್ರಿಗಳೇ ಆಡಿದರು. ಕುಮಾರಸ್ವಾಮಿಯವರು ಒಕ್ಕೂಟ ವ್ಯವಸ್ಥೆಯನ್ನೇ ಪ್ರಶ್ನಿಸುವ ಹಂತಕ್ಕೆ ತಲುಪಿದರು. ಇದರ ಬೆನ್ನಲ್ಲೇ ದೇವೆಗೌಡರು ಕೈಗೊಂಡ ಉಪವಾಸ ಮತ್ತು ಅದಕ್ಕೆ ಪಕ್ಷಾತೀತವಾಗಿ ವ್ಯಕ್ತವಾದ ಬೆಂಬಲ, ಮಂಡಳಿ ಸ್ಥಾಪಿಸುವ ನಿರ್ಧಾರ ಕೈಗೊಂಡರೆ ಕರ್ನಾಟಕದಲ್ಲಿ ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ಹೊಡೆತ ಕೊಡಲಿದೆ ಅನ್ನುವ ಇಂಟೆಲಿಜೆನ್ಸ್ ದೆಹಲಿಗೂ ತಲುಪಿಸಿತೆನ್ನಬಹುದು. ಅಂತಹದೊಂದು ಸಂದೇಶವನ್ನು ಪರಿಣಾಮಕಾರಿಯಾಗಿ ದೆಹಲಿಗೆ ತಲುಪಿಸುವಲ್ಲಿ ಕರ್ನಾಟಕದ ಬಿಜೆಪಿ ನಾಯಕರು ಶ್ರಮವಹಿಸಿ ದುಡಿದರು ಅನ್ನುವುದು ಸುಳ್ಳಲ್ಲ. ಅದಾದ ನಂತರವೇ ಕೇಂದ್ರ ಸರ್ಕಾರ ಈ ವಿಷಯದಲ್ಲಿ ತನ್ನ ನಿಲುವು ಬದಲಿಸಿ, ಮಂಡಳಿ ಸ್ಥಾಪಿಸುವ ನಿರ್ಧಾರ ಸಂಸತ್ತಿನದ್ದೇ ಹೊರತು ಕೋರ್ಟಿನದ್ದಲ್ಲ ಎಂದು ತನ್ನ ತಪ್ಪನ್ನು ತಿದ್ದಿಕೊಂಡಿತು. ಈ ಹೊತ್ತಿನಲ್ಲೂ ಇದನ್ನು ರಾಜಕೀಯಕ್ಕೆ ಬಳಸದೇ ಎಲ್ಲ ಪಕ್ಷಗಳೂ ಒಟ್ಟಾಗಿ ಪ್ರಧಾನಿಯವರನ್ನು, ದೇವೆಗೌಡರನ್ನು ಪಕ್ಷಾತೀತವಾಗಿ ಅಭಿನಂದಿಸಿದ್ದು ಒಂದು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿತು ಅಂದರೆ ಯಾವ ತಪ್ಪೂ ಇಲ್ಲ.

ಕರ್ನಾಟಕ ಕೇಂದ್ರಿತ ರಾಜಕಾರಣದ ಸಮಯ

ಕರ್ನಾಟಕದ ರಾಜಕಾರಣದಲ್ಲಿ ಕರ್ನಾಟಕ ಕೇಂದ್ರಿತ ವಿಷಯಗಳಿಗೆ ಬಲವಿಲ್ಲ ಅನ್ನುವ ಮಾತನ್ನು ನಾವೆಲ್ಲರೂ ಕೇಳುತ್ತಲೇ ಬಂದಿದ್ದೇವೆ. ಇಲ್ಲೇನಿದ್ದರೂ ಜಾತಿ, ಧರ್ಮ, ಹಣ, ಹೆಂಡದ ರಾಜಕೀಯ ಮಾಡಿದರೆ ಸಾಕು ಅನ್ನುವ ನಂಬಿಕೆ ಬಹಳ ಗಟ್ಟಿಯಾಗಿತ್ತು. ಆ ನಂಬಿಕೆಯನ್ನು ಕೊಂಚ ಅಲುಗಾಡಿಸಿ, ಎಲ್ಲ ಪಕ್ಷಗಳಿಗೂ ಚುರುಕು ಮುಟ್ಟಿಸುವ ಕೆಲಸ ಕಾವೇರಿಯ ವಿವಾದ ಈ ಬಾರಿ ಮಾಡಿದೆ. ಇದರ ಹಿಂದೆ ಕಳೆದ ಹತ್ತು-ಹದಿನೈದು ವರುಷಗಳಿಂದ ಸಕ್ರೀಯವಾಗಿರುವ ಕನ್ನಡ ಚಳವಳಿ, ಸಾಮಾಜಿಕ ಜಾಲ ತಾಣಗಳ ಮೂಲಕ ಕನ್ನಡಿಗರಲ್ಲಾಗುತ್ತಿರುವ ಜಾಗೃತಿ, ಸಂಘಟನೆ ಹಾಗೂ ಕನ್ನಡ ಪರವೆಂದರೇನು ಅನ್ನುವ ಬಗ್ಗೆ ಹೊಸ ಸ್ಪಷ್ಟತೆ ತರುತ್ತಿರುವ ಹೊಸ ತಲೆಮಾರಿನ ಚಿಂತಕರ ಪಾತ್ರ ಖಂಡಿತವಿದೆ. ಅದು ಪರಭಾಷಿಕರನ್ನು ರಾಜ್ಯಸಭೆಗೆ ಕಳಿಸುವ ವಿಚಾರದಲ್ಲಿ ಬಂದ ವಿರೋಧವಿರಬಹುದು, ಮಹದಾಯಿಯ ವಿಚಾರದಲ್ಲಿ ಸಮಗ್ರ ಕರ್ನಾಟಕ ಸ್ಪಂದಿಸಿರುವ ರೀತಿ ಇರಬಹುದು, ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಹಿಂದಿ ಹೇರಿಕೆಯ ಬಗ್ಗೆ ಉಂಟಾಗುತ್ತಿರುವ ವಿರೋಧವಿರಬಹುದು, ಎಲ್ಲವನ್ನೂ ಸಮಗ್ರವಾಗಿ ಗಮನಿಸಿದರೆ ಕರ್ನಾಟಕ ಕೇಂದ್ರಿತ ರಾಜಕಾರಣಕ್ಕೆ ಬೇಕಾದ ಒತ್ತಡವೊಂದು ರೂಪುಗೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಅದು ಇನ್ನು ಹೆಚ್ಚಿನ ರೀತಿಯಲ್ಲಿ ಮುನ್ನೆಲೆಗೆ ಬರಲಿದೆ ಅನ್ನುವುದನ್ನು ಕಾಣಬಹುದು. ಮತ ಪಡೆಯಲು ಈಗಿರುವ ಆಯಾಮಗಳಿಗೆ ಇದೊಂದು ಹೊಸ ಆಯಾಮವಾಗಿ ಸೇರಿಕೊಂಡು ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ವಿಷಯಗಳೂ ಚುನಾವಣೆಯ ಅಂಶಗಳಾಗುವ ದಿನ ದೂರವಿಲ್ಲ ಅನ್ನುವ ನಂಬಿಕೆ ಕನ್ನಡಿಗರಲ್ಲಿದೆ. ಭಾರತದ ಒಕ್ಕೂಟದಲ್ಲಿ ಕನ್ನಡಿಗರ ರಾಜಕೀಯ ದನಿ ಗಟ್ಟಿಗೊಳ್ಳುವಲ್ಲಿ ಈ ಬಾರಿಯ ನಮ್ಮ ಪ್ರತಿಕ್ರಿಯೆ  ಬುನಾದಿಯಾಗಲಿ. ಅಂತಹ ತಮಿಳುನಾಡನ್ನೇ ಬಗ್ಗಿಸಲು ಸಾಧ್ಯವಾಗಿರುವಾಗ ಗೋವಾದಂತಹ ಚಿಕ್ಕ ರಾಜ್ಯವನ್ನು ಪಳಗಿಸುವುದು ಕಷ್ಟವಾಗಬಾರದು. ಮಹದಾಯಿಯ ವಿಚಾರದಲ್ಲೂ ಇಂತಹದೊಂದು ಇಚ್ಛಾಶಕ್ತಿಯ ಪ್ರದರ್ಶನವಾಗಲಿ.

Posted in ಒಕ್ಕೂಟ ವ್ಯವಸ್ಥೆ, ಕನ್ನಡತನ, ಕರ್ನಾಟಕ | ನಿಮ್ಮ ಟಿಪ್ಪಣಿ ಬರೆಯಿರಿ

ಜಿಎಸ್ಟಿ ಕುರಿತ ಹೊಗಳಿಕೆಗಳ ಮಹಾಪೂರದಲ್ಲಿ ಕೊಚ್ಚಿ ಹೋಯಿತೇ ರಾಜ್ಯಗಳ ಹಿತಾಸಕ್ತಿ?

ಕಳೆದ ಹದಿನೈದು ವರ್ಷಗಳಿಂದ ರಾಜ್ಯಗಳು ಮತ್ತು ಕೇಂದ್ರ ಸರ್ಕಾರದ ನಡುವೆ ನಿರಂತರ ಹಗ್ಗಜಗ್ಗಾಟಕ್ಕೆ ಕಾರಣವಾಗಿದ್ದ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ(ಜಿ.ಎಸ್.ಟಿ)ಗೆ ಕಳೆದ ವಾರ ರಾಜ್ಯಸಭೆಯಲ್ಲಿ ಒಪ್ಪಿಗೆ ದೊರೆತಿದೆ. 1991ರಲ್ಲಿ ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರ ಮುಂದಾಳತ್ವದಲ್ಲಿ ಶುರುವಾದ ಆರ್ಥಿಕ ಸುಧಾರಣೆಯ ಪ್ರಕ್ರಿಯೆ ಈಗ ಇನ್ನೊಂದು ಹಂತ ತಲುಪಿದ್ದು, ಜಿ.ಎಸ್.ಟಿ ದೇಶದ ಜಿಡಿಪಿ ಬೆಳವಣಿಗೆಯನ್ನು ಒಂದರಿಂದ ಎರಡು ಪ್ರತಿಶತ ಹೆಚ್ಚಿಸುವ ಮೂಲಕ ಅರ್ಥ ವ್ಯವಸ್ಥೆಗೆ ದೊಡ್ಡ ಕೊಡುಗೆ ನೀಡಲಿದೆ ಅನ್ನುವ ವಾದವನ್ನು ಜಿ.ಎಸ್.ಟಿ ಪರವಾಗಿರುವವರು ಮಂಡಿಸುತ್ತಿದ್ದಾರೆ. ಆದರೆ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರಗಳು ತೆರಿಗೆ ವಿಧಿಸುವ ಹಕ್ಕನ್ನು ಬಹುತೇಕ ಕಳೆದುಕೊಳ್ಳುವ ಸ್ವರೂಪದಲ್ಲಿ ಜಿ.ಎಸ್.ಟಿ ಬರುವುದು ಸಂವಿಧಾನದ ಆಶಯಗಳಿಗೆ ಪೂರಕವಾಗಿದೆಯೇ?, ಜಿ.ಎಸ್.ಟಿಯನ್ನು ಕೇವಲ ಆರ್ಥಿಕತೆಯ ಆಯಾಮದಿಂದಷ್ಟೇ ನೋಡದೆ ರಾಜಕೀಯ ಮತ್ತು ಸಾಮಾಜಿಕ ಆಯಾಮದಿಂದಲೂ ನೋಡಬೇಕಿದೆಯೇ?, ಜಿ.ಎಸ್.ಟಿ ಅನುಷ್ಟಾನಕ್ಕೆ ಏರ್ಪಟ್ಟಿರುವ ಜಿ.ಎಸ್.ಟಿ ಕೌನ್ಸಿಲ್ ತರದ ಏರ್ಪಾಡುಗಳು ಕೇಂದ್ರ ಮತ್ತು ರಾಜ್ಯಗಳ ನಡುವೆ ಅಪನಂಬಿಕೆ ಹೆಚ್ಚಲು ಕಾರಣವಾಗಲಿದೆಯೇ? ಅನ್ನುವ ಪ್ರಶ್ನೆಗಳತ್ತಲೂ ಈಗ ಗಮನ ಹರಿಸಬೇಕಿದೆ.

ಭಾರತದ ತೆರಿಗೆ ಏರ್ಪಾಡು ಹೇಗಿದೆ?

ಜಿ.ಎಸ್.ಟಿ ಎಂದರೇನು ಅನ್ನುವುದನ್ನು ನೋಡುವ ಮೊದಲು ಭಾರತ ಒಕ್ಕೂಟದಲ್ಲಿ ತೆರಿಗೆ ವ್ಯವಸ್ಥೆ ಹೇಗೆ ಏರ್ಪಟ್ಟಿದೆ ಅನ್ನುವುದನ್ನು ಕೊಂಚ ತಿಳಿಯಬೇಕು. ಭಾರತದ ಸಂವಿಧಾನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡಕ್ಕೂ ಬೇರೆ ಬೇರೆ ವಿಷಯಗಳ ಮೇಲೆ ತೆರಿಗೆ ಹಾಕುವ ಹಕ್ಕನ್ನು ನೀಡಲಾಗಿದೆಯಾದರೂ ಹೆಚ್ಚಿನ ವಿಷಯಗಳ ಮೇಲೆ ತೆರಿಗೆ ವಿಧಿಸುವ ಹಕ್ಕು ಕೇಂದ್ರಕ್ಕೇ ದಕ್ಕಿದೆ. ನೇರ ತೆರಿಗೆಯಾಗಿರುವ ಆದಾಯ ತೆರಿಗೆ, ಕಂಪನಿಗಳು ಕಟ್ಟುವ ಕಾರ್ಪೊರೇಟ್ ತೆರಿಗೆ ಮುಂತಾದವುಗಳನ್ನು ಸಂಗ್ರಹಿಸುವ ಹಕ್ಕನ್ನು ಕೇವಲ ಕೇಂದ್ರ ಸರ್ಕಾರಕ್ಕೆ ನೀಡಲಾಗಿದೆ. (ಅಮೇರಿಕದಲ್ಲಿ ರಾಜ್ಯ ಸರ್ಕಾರಗಳಿಗೂ ಆದಾಯ ತೆರಿಗೆ ವಿಧಿಸುವ ಹಕ್ಕಿದೆ.) ಇನ್ನು ಬೇರೆ ಬೇರೆ ಉತ್ಪನ್ನ, ಸೇವೆ ಇತ್ಯಾದಿಗಳ ಮೇಲೆ ಹಾಕಲಾಗುವ ವಾರೆ ತೆರಿಗೆ (ಇಂಡೈರೆಕ್ಟ್ ಟ್ಯಾಕ್ಸ್)ಯ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯಗಳೆರಡಕ್ಕೂ ಅವಕಾಶ ನೀಡಲಾಗಿದೆ. ಕೇಂದ್ರ ಸರ್ಕಾರಕ್ಕೆ ಸೇವಾ ತೆರಿಗೆ, ಎಕ್ಸೈಸ್ ಡ್ಯುಟಿ, ಕಸ್ಟಂ ಡ್ಯುಟಿ ಮುಂತಾದವುಗಳನ್ನು ಹಾಗೂ ರಾಜ್ಯ ಸರ್ಕಾರಕ್ಕೆ ಮಾರಾಟ ತೆರಿಗೆ, ಅಬಕಾರಿ ಸುಂಕ, ಮನರಂಜನಾ ತೆರಿಗೆ ಇತ್ಯಾದಿಗಳನ್ನು ವಿಧಿಸುವ ಹಕ್ಕನ್ನು ನೀಡಲಾಗಿದೆ. ಇದಲ್ಲದೇ ಸ್ಪೆಕ್ಟ್ರಂ ಮತ್ತು ಇತರೆ ನೈಸರ್ಗಿಕ ಸಂಪನ್ಮೂಲಗಳ ಹರಾಜಿನಿಂದ ಸಂಗ್ರಹವಾಗುವ ಆದಾಯವೂ ಕೇಂದ್ರದ ಕೈಗೆ ಹೋಗುತ್ತದೆ. ಜನರಿಗೆ ಶಿಕ್ಷಣ, ಆರೋಗ್ಯ ಸೇವೆ, ಸಾರಿಗೆ, ಕಾನೂನು ಸುವ್ಯವಸ್ಥೆ ಮುಂತಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಹೊಣೆ ಹೊತ್ತಿರುವ ರಾಜ್ಯ ಸರ್ಕಾರಗಳು ತಮ್ಮಲ್ಲಿ ಸಂಗ್ರಹವಾಗುವ ತೆರಿಗೆಯೊಂದರಿಂದಲೇ ಎಲ್ಲ ಖರ್ಚು ವೆಚ್ಚವನ್ನು ನಿಭಾಯಿಸಲಾರವು. ಆದ್ದರಿಂದಲೇ ಕೇಂದ್ರ ಸರ್ಕಾರ ತಾನು ಸಂಗ್ರಹಿಸುವ ತೆರಿಗೆಯಲ್ಲಿ ಒಂದಿಷ್ಟು ಪಾಲನ್ನು ರಾಜ್ಯಗಳ ಜೊತೆ ಹಣಕಾಸು ಆಯೋಗ ಅನ್ನುವ ಅರೆ ನ್ಯಾಯಾಂಗ ವ್ಯವಸ್ಥೆಯ ಶಿಫಾರಸ್ಸಿನ ಅನ್ವಯ ಮರಳಿ ರಾಜ್ಯಗಳ ಜೊತೆ ಹಂಚಿಕೊಳ್ಳಬೇಕು ಎಂದು ಸಂವಿಧಾನದಲ್ಲಿ ಬರೆಯಲಾಗಿದೆ. ಇದಲ್ಲದೇ ಈ ಹಿಂದೆ ಇದ್ದ ಯೋಜನಾ ಆಯೋಗದ ಮೂಲಕ ಯೋಜಿತವಲ್ಲದ ಖರ್ಚಿನ ಬಾಬ್ತಿನಲ್ಲಿ (ಅನ್ ಪ್ಲಾನ್ಡ್ ಎಕ್ಪೆನ್ಸ್) ಬಹಳ ದೊಡ್ಡ ಮೊತ್ತದ ಹಣವನ್ನು ತನಗೆ ಇಷ್ಟ ಬಂದ ರಾಜ್ಯಗಳ ಜೊತೆ, ತನ್ನಿಷ್ಟದ ಯೋಜನೆಗಳ ಮೇಲೆ ಖರ್ಚು ಮಾಡುವ ಅಧಿಕಾರವೂ ಕೇಂದ್ರದ ಕೈಯಲ್ಲಿತ್ತು. ಈ ಏರ್ಪಾಡನ್ನು ಗಮನಿಸಿದಾಗ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಆರ್ಥಿಕತೆಯ ತಕ್ಕಡಿ ಬಹಳ ದೊಡ್ಡ ಮಟ್ಟದಲ್ಲೇ ಕೇಂದ್ರದತ್ತ ವಾಲಿರುವುದನ್ನು ಗಮನಿಸಬಹುದು. ಬಡ ರಾಜ್ಯಗಳನ್ನು ಮೇಲೆತ್ತಲು ಕೇಂದ್ರದ ಕೈಯಲ್ಲಿ ಸಂಪನ್ಮೂಲದ ಕೀಲಿಕೈ ಇರಬೇಕು ಅನ್ನುವ ಆಲೋಚನೆ ಇಲ್ಲಿ ಗುರುತಿಸಬಹುದು. ಆದರೆ ಶಿಕ್ಷಣ, ಉದ್ಯಮದ ವಿಷಯದಲ್ಲಿ ಅಪಾರ ಪ್ರಗತಿ ಸಾಧಿಸಿ, ಕೇಂದ್ರದ ಖಜಾನೆಗೆ ದೊಡ್ಡ ಕೊಡುಗೆ ನೀಡುತ್ತಿರುವ ದಕ್ಷಿಣ ಮತ್ತು ಪಶ್ಚಿಮ ಭಾರತದ ಹಲವು ರಾಜ್ಯಗಳ ಏಳಿಗೆಯನ್ನು ಇಂತಹದೊಂದು ಏರ್ಪಾಡು ಕಟ್ಟಿ ಹಾಕಿದೆ ಅನ್ನುವುದಕ್ಕೆ ಸಾಕಷ್ಟು ಅಂಕಿಅಂಶಗಳಿವೆ. ಜೊತೆಯಲ್ಲೇ ಹೆಚ್ಚಿನ ಜನಸಂಖ್ಯೆಯ ಆಧಾರದ ಮೇಲೆ ಸಂಸತ್ತಿನಲ್ಲಿ ಹೆಚ್ಚಿನ ಸ್ಥಾನ ಪಡೆದು ದೆಹಲಿಯ ರಾಜಕೀಯವನ್ನು ನಿಯಂತ್ರಿಸುವ ಉತ್ತರದ ಬಡ ರಾಜ್ಯಗಳು ಈ ವ್ಯವಸ್ಥೆಯ ನಿವ್ವಳ ಲಾಭ ಪಡೆಯುತ್ತಿದ್ದಾರೆ ಅನ್ನುವುದಕ್ಕೂ ಸಾಕಷ್ಟು ಅಂಕಿಅಂಶಗಳಿವೆ.

ಜಿ.ಎಸ್.ಟಿ ಅಂದರೇನು?

ಇಂತಹದೊಂದು ತೆರಿಗೆ ಏರ್ಪಾಟಿರುವ ಒಕ್ಕೂಟದಲ್ಲಿ ಜಿ.ಎಸ್.ಟಿ ತೆರಿಗೆ ಮಾಡಲು ಹೊರಟಿರುವುದು ಏನು ಅನ್ನುವುದನ್ನು ತಿಳಿಯುವ ಮುನ್ನ ಜಿ.ಎಸ್.ಟಿ ಅಂದರೇನು ಅನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ತೆರಿಗೆ ಸಂಬಂಧಿಸಿದ ವಿಚಾರಗಳು ಜನಸಾಮಾನ್ಯರಿರಲಿ, ಆಳುವ ನಾಯಕರಲ್ಲೂ ಬಹುತೇಕರಿಗೆ ಕಬ್ಬಿಣದ ಕಡಲೆಯಂತದ್ದು. ಹೀಗಾಗಿ ಇಂತಹ ತೆರಿಗೆ ಸುಧಾರಣೆಯ ಕ್ರಮವನ್ನು ಕೆಲ ಮಟ್ಟಿಗಾದರೂ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಜಿ.ಎಸ್.ಟಿ ಇಲ್ಲವೇ ಗೂಡ್ಸ್ ಅಂಡ್ ಸರ್ವಿಸಸ್ ಟ್ಯಾಕ್ಸ್ ಅನ್ನುವುದು ಸರಕು ಮತ್ತು ಸೇವೆಗಳ ಮೇಲೆ ಹಾಕಲಾಗುವ ಒಂದು ವಾರೆ ತೆರಿಗೆ (ಇಂಡೈರೆಕ್ಟ್ ಟ್ಯಾಕ್ಸ್). ಈ ಮುಂಚಿನ ತೆರಿಗೆ ಪದ್ದತಿಯಲ್ಲಿ ಸರಕು ಮತ್ತು ಸೇವೆಯ ವಿಷಯಕ್ಕೆ ಬಂದಾಗ ಜನರು ಬೇರೆ ಬೇರೆ ಹಂತದಲ್ಲಿ ತೆರಿಗೆ ಕಟ್ಟಬೇಕಾಗಿತ್ತು. ಅಂದರೆ ಒಂದು ಉತ್ಪನ್ನಕ್ಕೆ ಬಳಸುವ ಮೂಲವಸ್ತುವಿನ ಖರೀದಿಯಿಂದ ಹಿಡಿದು ಉತ್ಪಾದನೆ, ಹಂಚಿಕೆ, ಸಾಗಾಟ ಕೊನೆಯಲ್ಲಿ ಗ್ರಾಹಕನಿಗೆ ಮಾರುವ ಹಂತದವರೆಗೆ ಪ್ರತಿ ಹಂತದಲ್ಲೂ ತೆರಿಗೆ ಕಟ್ಟಬೇಕಾದ ಅಗತ್ಯವಿತ್ತು. ಸರಿಯಾದ ವ್ಯವಸ್ಥೆಯಲ್ಲಿ ಉತ್ಪಾದಕನೊಬ್ಬ ಒಂದು ವಸ್ತುವಿಗೆ ತನ್ನ ಮಟ್ಟದಲ್ಲಿ ತಾನು ಸೇರಿಸಿದ ಮೌಲ್ಯ ವರ್ಧನೆಗೆ ತಕ್ಕುದಾಗಿ ತೆರಿಗೆ ಕಟ್ಟುವ ಹಾಗಿರಬೇಕಿತ್ತು. ಹಾಗಿರದೇ ಇದ್ದ ವ್ಯವಸ್ಥೆಯಿಂದಾಗಿ ಉತ್ಪಾದಕರು ಅತಿ ಹೆಚ್ಚಿನ ತೆರಿಗೆ ಕಟ್ಟುವ ಒತ್ತಡಕ್ಕೊಳಗಾಗುತ್ತಿದ್ದರು. ಇದರಿಂದ ಸಹಜವಾಗಿಯೇ ತೆರಿಗೆ ವ್ಯವಸ್ಥೆಯಿಂದಲೇ ಆಚೆ ಉಳಿಯುವ, ತೆರಿಗೆ ವಂಚಿಸುವವರ ಸಂಖ್ಯೆ ಹೆಚ್ಚಿತ್ತು. ಈ ಸಮಸ್ಯೆಗೆ ಪರಿಹಾರವೆಂಬಂತೆ ಮೌಲ್ಯ ವರ್ಧಿತ ತೆರಿಗೆ (ವ್ಯಾಟ್) ಅನ್ನು ಕೆಲ ವರ್ಷಗಳ ಹಿಂದೆ ಪರಿಚಯಿಸಲಾಯಿತು. ವ್ಯಾಟ್ ಹೆಚ್ಚಾಗಿ ಸರಕುಗಳ ಮೇಲೆ ಹಾಕುವ ತೆರಿಗೆಯಾಗಿದ್ದರೆ ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ) ಹೆಸರೇ ಹೇಳುವಂತೆ ಸರಕಿನೊಂದಿಗೆ ಸೇವೆಯ ಮೇಲೂ ತೆರಿಗೆ ವಿಧಿಸುವ ಅವಕಾಶ ಹೊಂದಿದೆ. ಈಗ ಕೇಂದ್ರ ಮತ್ತು ರಾಜ್ಯಗಳಲ್ಲಿರುವ ಬಹುತೇಕ ವಾರೆ ತೆರಿಗೆಗಳೆಲ್ಲವನ್ನೂ ಒಂದಾಗಿಸಿದ, ಸುಲಭಗೊಳಿಸಿದ ತೆರಿಗೆ ಮಾದರಿಯನ್ನು ಜಿ.ಎಸ್.ಟಿ ಎಂದು ಕರೆಯಬಹುದು. ದೇಶಾದ್ಯಂತ ಒಂದು ನಿಗದಿಪಡಿಸಿದ ದರದ ತೆರಿಗೆ ಕಟ್ಟಿ ಸಲೀಸಾಗಿ ವ್ಯಾಪಾರ-ವಹಿವಾಟು ಮಾಡಬಹುದು, ತೆರಿಗೆ ಮೇಲೆ ತೆರಿಗೆ ಕಟ್ಟುವ ಗೋಜಿಲ್ಲ, ವಿದ್ ಬಿಲ್ ಬೇಕಾ, ವಿದೌಟ್ ಬಿಲ್ ಬೇಕಾ ಅಂತ ಕದ್ದುಮುಚ್ಚಿ ವ್ಯವಹಾರ ಮಾಡುವ ಅಗತ್ಯವಿಲ್ಲ, ಅಂತರ್ ರಾಜ್ಯ ಟೋಲ್ಗಳಲ್ಲಿ ಚೆಕಿಂಗ್ ಹೆಸರಿನಲ್ಲಿ ಕಾಯುವ ಗೋಜಿಲ್ಲ, ಹೀಗೆ ಪ್ರಯೋಜನಗಳ ಪಟ್ಟಿ ತೋರಿಸುವವರನ್ನು ಕಂಡಾಗ  ನಿಜಕ್ಕೂ ಎಷ್ಟು ಸಕತ್ ಆಗಿದೆಯಲ್ಲ ಅಂತ ಯಾರಿಗೂ ಅನ್ನಿಸುತ್ತೆ. ಇಷ್ಟೆಲ್ಲ ಲಾಭದ ಲೆಕ್ಕವೇ ಆದರೆ ರಾಜ್ಯಗಳು ಯಾಕೆ ಮೊಂಡು ಹಟ ಹಿಡಿದು ಇದನ್ನು ವಿರೋಧಿಸುತ್ತ ಬಂದಿದ್ದವು ಅನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಮುಖ್ಯ. ಗುಜರಾತಿನ ಮುಖ್ಯಮಂತ್ರಿಯಾಗಿದ್ದ ದಿನಗಳುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿಯವರು ಜಿ.ಎಸ್.ಟಿಯನ್ನು ವಿರೋಧಿಸುತ್ತಲೇ ಬಂದಿದ್ದರು. ಡೆವಿಲ್ ಇಸ್ ಇನ್ ದಿ ಡಿಟೇಲ್ ಅನ್ನುವ ಇಂಗ್ಲಿಷ್ ಗಾದೆಯಂತೆ ಜಿ.ಎಸ್.ಟಿಯನ್ನು ಇನ್ನೊಂದು ಮಗ್ಗುಲಿಂದ ನೋಡದೇ ಹೋದಲ್ಲಿ ಅದರಿಂದ ಆಗುವ ತೊಂದರೆಗಳ ಪರಿಣಾಮ ಅರ್ಥವಾಗುವುದಿಲ್ಲ. ಏನು ಹಾಗೆಂದರೆ?

ಜಿ.ಎಸ್.ಟಿ ಕೌನ್ಸಿಲ್ ನಿಜಕ್ಕೂ ರಾಜ್ಯಗಳ ಪರವೇ?

ಭಾರತ ಒಂದು ಹಲತನದ ನಾಡು. ಪ್ರತಿಯೊಂದು ರಾಜ್ಯ, ಅದರ ಭಾಷೆ, ಸಂಸ್ಕೃತಿ, ಸಮಸ್ಯೆಗಳು, ಆಶೋತ್ತರಗಳು ಎಲ್ಲದರಲ್ಲೂ ಅಗಾಧ ಭಿನ್ನತೆಯಿದೆ. ಹೀಗಿರುವಾಗ ಪ್ರತಿಯೊಂದು ರಾಜ್ಯ ಸರ್ಕಾರಕ್ಕೂ ತನ್ನ ಜನರ ಏಳಿಗೆ, ಅನುಕೂಲಕ್ಕೆ ತಕ್ಕಂತೆ ತೆರಿಗೆ ವಿಧಿಸುವ ಹಕ್ಕು ಇರಬೇಕಾದದ್ದು ಅವಶ್ಯ. ಈಗ ಜಿ.ಎಸ್.ಟಿ ಅನ್ವಯ ದೇಶದೆಲ್ಲೆಡೆ ಒಂದೇ ದರದ ತೆರಿಗೆ ವಿಧಿಸಿದರೆ ಅದು ರಾಜ್ಯಗಳನ್ನು ಕಟ್ಟಿ ಹಾಕುವ ಕೆಲಸವಲ್ಲವೇ? ಜಿ.ಎಸ್.ಟಿ ಅನ್ವಯ ಜಿ.ಎಸ್.ಟಿ ವ್ಯಾಪ್ತಿಯಲ್ಲಿರುವ ಯಾವುದೇ ವಿಷಯದ ಬಗ್ಗೆ ತೆರಿಗೆ ಹೆಚ್ಚಿಸುವ, ಕಡಿಮೆಗೊಳಿಸುವ, ವಿನಾಯ್ತಿ ನಿರ್ಧರಿಸುವ ಯಾವುದೇ ಹಕ್ಕು ಇನ್ನು ಮುಂದೆ ರಾಜ್ಯಗಳಿಗೆ ಇರುವುದಿಲ್ಲ. ಆ ಹಕ್ಕೆಲ್ಲವೂ ಜಿ.ಎಸ್.ಟಿ ಕೌನ್ಸಿಲ್ ಅನ್ನುವ ಕೇಂದ್ರ ಮತ್ತು ರಾಜ್ಯಗಳ ಪ್ರತಿನಿಧಿತ್ವದ ಮಂಡಳಿಯ ಕೈಯಲ್ಲಿರಲಿದೆ. ರಾಜ್ಯ-ರಾಜ್ಯಗಳ ನಡುವೆ ಉಂಟಾಗುವ ಯಾವುದೇ ತೆರಿಗೆ ಸಂಬಂಧಿತ ಜಗಳ ಬಗೆಹರಿಸುವ ಕೆಲಸವೂ ಇದೇ ಮಂಡಳಿಯದ್ದು. ಜಿ.ಎಸ್.ಟಿ ದರ ಎಷ್ಟಿರಬೇಕು ಅನ್ನುವುದನ್ನು ಇದೇ ನಿರ್ಧರಿಸುತ್ತೆ. ಇದೆಲ್ಲವನ್ನೂ ಕೇಂದ್ರ ಸರ್ಕಾರವೇನು ನಿಯಂತ್ರಿಸುತ್ತಿಲ್ಲವಲ್ಲ, ಮಂಡಳಿಯಲ್ಲಿ ರಾಜ್ಯಗಳ ಪ್ರತಿನಿಧಿತ್ವವೂ ಇದೆಯಲ್ಲ ಅನ್ನಬಹುದು. ಆದರೆ ಮಂಡಳಿಯ ಪ್ರತಿನಿಧಿತ್ವ ಗಮನಿಸಿದರೆ ಜಿ.ಎಸ್.ಟಿ ಕೌನ್ಸಿಲ್ ಮೇಲೆ ಕೇಂದ್ರದ ಸ್ಪಷ್ಟವಾದ ಹಿಡಿತ ಇರುವುದನ್ನು ಕಾಣಬಹುದು. ಮಂಡಳಿಯಲ್ಲಿ 33.33% ವಿಟೋ ಮಾಡುವ ಅಧಿಕಾರವನ್ನು ಕೇಂದ್ರ ತನ್ನ ಬಳಿಯೇ ಉಳಿಸಿಕೊಂಡಿದೆ.( ಜಯಲಲಿತಾ ಅವರು ಕೇಂದ್ರದ ವಿಟೋ ಮಾಡುವ ಅಧಿಕಾರ 25% ದಾಟಬಾರದು ಎಂದು ವಾದಿಸಿದ್ದರು.) ಇನ್ನುಳಿದ 66.67% ವಿಟೋ ಅಧಿಕಾರವನ್ನು ರಾಜ್ಯಗಳೆಲ್ಲವಕ್ಕೂ ಸೇರಿ ನೀಡಿದೆ (ಅಲ್ಲಿಗೆ ಇಪ್ಪತ್ತೊಂಬತ್ತು ರಾಜ್ಯ ಮತ್ತು ವಿಧಾನಸಭೆಯಿರುವ ಎರಡು ಕೇಂದ್ರಾಡಳಿತ ಪ್ರದೇಶಗಳಿಗೆ ಇದನ್ನು ಹಂಚಿದಾಗ ಪ್ರತಿಯೊಂದು ರಾಜ್ಯಕ್ಕೆ 2.15% ವಿಟೋ ಮಾಡುವ ಅಧಿಕಾರ ಸಿಕ್ಕುತ್ತದೆ.). ಮಂಡಳಿಯಲ್ಲಿ ಯಾವುದೇ ಪ್ರಸ್ತಾಪ ಒಪ್ಪಿಗೆಯಾಗಬೇಕೆಂದರೆ ಅದಕ್ಕೆ 75% ಮತ ಬೀಳಬೇಕು ಎಂದು ಕಾಯ್ದೆಯಲ್ಲಿ ಹೇಳಲಾಗಿದೆ. ಅಲ್ಲಿಗೆ ಎಲ್ಲ ರಾಜ್ಯಗಳು ಸೇರಿ ಒಂದು ಬೇಡಿಕೆಯಿಟ್ಟು, ಆ ಬೇಡಿಕೆ ಕೇಂದ್ರಕ್ಕೆ ಒಪ್ಪಿಗೆಯಾಗದಿದ್ದರೆ ಕೇಂದ್ರ ತನ್ನ ವಿಟೋ ಬಳಸಿ ಅದನ್ನು ಸುಲಭವಾಗಿ ಕೆಡವಿ ಹಾಕಬಹುದು. ಆದರೆ ಕೇಂದ್ರವೇನಾದರೂ ಒಂದು ಪ್ರಸ್ತಾಪ ಇಟ್ಟರೆ ಅದಕ್ಕೆ ಮೂವತ್ತೊಂದರಲ್ಲಿ ಹತ್ತೊಂಬತ್ತು ರಾಜ್ಯಗಳು ಒಪ್ಪಿದರೆ ಸಾಕು. ನಾಣ್ಯ ಎಸೆದು ಹೆಡ್ಸ್ ಬಿದ್ದರೆ ನಾನು ಗೆದ್ದೆ, ಟೇಲ್ಸ್ ಬಿದ್ದರೆ ನೀನು ಸೋತೆ ಅನ್ನುವಂತಿದೆಯಲ್ಲವೇ ಇದು? ಇನ್ನೊಂದೆಡೆ ದೇಶದ ಬೊಕ್ಕಸ ತುಂಬಿಸುವ ತಮಿಳುನಾಡು, ಗುಜರಾತ್, ಕರ್ನಾಟಕ, ಮಹಾರಾಷ್ಟ್ರದಂತಹ ರಾಜ್ಯಕ್ಕೂ ಒಂದೇ ಮತ, ಬಡ ರಾಜ್ಯಗಳಾದ ಉತ್ತರಪ್ರದೇಶ, ಬಿಹಾರಕ್ಕೂ ಒಂದೇ ಮತ, ಗೋವಾ, ಮಿಜೋರಾಂನಂತಹ ಸಣ್ಣ ರಾಜ್ಯಗಳಿಗೂ ಒಂದೇ ಮತದ ಅಧಿಕಾರ ನೀಡುವ ಮೂಲಕ ಒಂದು ರೀತಿಯಲ್ಲಿ ಮುಂದುವರೆದ ರಾಜ್ಯಗಳ ಅಭಿಪ್ರಾಯಕ್ಕೆ ಮಂಡಳಿಯಲ್ಲಿ ಹೆಚ್ಚಿನ ಮನ್ನಣೆ ಸಿಗದ ವ್ಯವಸ್ಥೆ ಏರ್ಪಟ್ಟಿದೆ ಅನ್ನುವುದನ್ನು ಇಲ್ಲಿ ಗಮನಿಸಬೇಕಿದೆ. ಇಷ್ಟೇ ಅಲ್ಲ, ಮಂಡಳಿಯ ನಿರ್ಧಾರಗಳ ಬಗ್ಗೆ ಯಾವುದೇ ತಕರಾರು, ದೂರುಗಳಿದ್ದಲ್ಲಿ, ಅದನ್ನು ಹೇಗೆ ನಿರ್ವಹಿಸಬೇಕು ಅನ್ನುವುದರ ಬಗ್ಗೆ ಸಂವಿಧಾನ ತಿದ್ದುಪಡಿ ಮಸೂದೆ ಸ್ಪಷ್ಟವಾಗಿ ಮಾತನಾಡಿಲ್ಲ. ಮಂಡಳಿಯ ನಿರ್ಧಾರವನ್ನು ರಾಜ್ಯವೊಂದು ಪ್ರಶ್ನಿಸಲು ಬೇಕಿರುವ ವ್ಯವಸ್ಥೆಯನ್ನು ಸ್ಥಾಪಿಸುವ ಹಕ್ಕನ್ನು ಮಂಡಳಿಗೇ ನೀಡಲಾಗಿದೆ. ನನ್ನ ನಿರ್ಧಾರವನ್ನು ಪ್ರಶ್ನಿಸಲು ಬೇಕಿರುವ ವ್ಯವಸ್ಥೆ ಹೇಗಿರಬೇಕು, ಯಾರು ಅದನ್ನು ಕೇಳಬೇಕು ಅನ್ನುವುದನ್ನು ನಾನೇ ನಿರ್ಧರಿಸುತ್ತೇನೆ ಅನ್ನುವ ಏರ್ಪಾಡು ಕೊಂಚ ವಿಚಿತ್ರವಾಗಿದೆಯಲ್ಲವೇ? ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ದೇಶದ ಮೂವತ್ತು ರಾಜ್ಯಗಳಲ್ಲಿ ಯಾವ ಪಕ್ಷಗಳ ಆಳ್ವಿಕೆ ಇದೆ ಅನ್ನುವುದು. ಈ ಹೊತ್ತಿಗೆ ನೇರ, ಇಲ್ಲವೇ ಸಮ್ಮಿಶ್ರ ಸರ್ಕಾರದ ಸ್ವರೂಪದಲ್ಲಿ, 14 ರಾಜ್ಯಗಳಲ್ಲಿ ಬಿಜೆಪಿ ಮತ್ತು 9 ರಾಜ್ಯಗಳಲ್ಲಿ ಕಾಂಗ್ರೆಸ್ ಆಳ್ವಿಕೆಯಲ್ಲಿವೆ. ಈ ಎರಡರಲ್ಲಿ ಯಾವ ಪಕ್ಷ ದೆಹಲಿಯಲ್ಲಿ ಅಧಿಕಾರದಲ್ಲಿದ್ದರೂ, ಅದರ ಹೈಕಮಾಂಡ್ ಮಾತನ್ನು ಮೀರುವ ಧೈರ್ಯ ರಾಜ್ಯದಲ್ಲಿ ಅಧಿಕಾರದಲ್ಲಿರುವ ಅದರ ಸರ್ಕಾರಗಳಿಗೆ ಇಲ್ಲ ಅನ್ನುವುದನ್ನು ಎಲ್ಲರಿಗೂ ತಿಳಿದಿರುವ ವಿಚಾರ. ಅಲ್ಲಿಗೆ ಒಂದು ಕಡೆ ಕೇಂದ್ರಕ್ಕಿರುವ ವಿಟೋ ಪವರ್, ಇನ್ನೊಂದೆಡೆ ಮಂಡಳಿಯ ತೀರ್ಮಾನವನ್ನು ಪ್ರಶ್ನಿಸಲು ಬೇಕಿರುವ ನ್ಯಾಯಯುತ ಏರ್ಪಾಡಿನ ಕೊರತೆ ಮತ್ತು ಮತ್ತೊಂದೆಡೆ ಹೈಕಮಾಂಡ್ ರಾಜಕಾರಣದ ಒತ್ತಡವನ್ನು ಗಮನಿಸಿದಾಗ ಜಿ.ಎಸ್.ಟಿ ಕೌನ್ಸಿಲ್ ಅನ್ನುವುದು ಹೆಚ್ಚು ಕಡಿಮೆ ಕೇಂದ್ರದ ಹಿಡಿತದಲ್ಲಿರುವ ಮಂಡಳಿಯಾಗಿದ್ದು, ಕೇಂದ್ರದ ನಿಲುವಿಗೆ ತಕ್ಕಂತೆ ರಾಜ್ಯಗಳೆಲ್ಲವೂ ಕುಣಿಯಬೇಕಾದ ಒತ್ತಡ ಜಿ.ಎಸ್.ಟಿ ಹುಟ್ಟುಹಾಕಲಿದೆ ಅನ್ನುವ ಆತಂಕ ಹಲವು ರಾಜ್ಯಗಳಿಗಿವೆ. ವಿಧಿ ಸೆಂಟರ್ ಫಾರ್ ಲೀಗಲ್ ರಿಸರ್ಚ್ ಸಂಸ್ಥೆಯ ಅಲೋಕ್ ಪ್ರಸನ್ನ ಕುಮಾರ್ ಅವರು “ಇವತ್ತಿರುವ ಸ್ವರೂಪದಲ್ಲಿ ಜಿ.ಎಸ್.ಟಿ ಕೇಂದ್ರ ಮತ್ತು ರಾಜ್ಯಗಳ ನಡುವಿನ ಅಪನಂಬಿಕೆಗೆ ಒಂದು ಸಾಂಸ್ಥಿಕ ಸ್ವರೂಪ ನೀಡಿ, ಎರಡೂ ತಮ್ಮನುಕೂಲಕ್ಕೆ ತಕ್ಕ ಹಟಮಾರಿ ನಿಲುವು ತಳೆಯುವತ್ತ ದೂಡಬಹುದು” ಅನ್ನುತ್ತಾರೆ. ಅಲೋಕ್ ಅವರು ಇನ್ನೊಂದು ಮುಖ್ಯ ವಿಚಾರವನ್ನು ತಮ್ಮ ಇತ್ತೀಚಿನ ಅಂಕಣದಲ್ಲಿ ಎತ್ತಿದ್ದರು. ಸಂವಿಧಾನದ ಪ್ರಕಾರ, ಯಾವುದೇ ಒಂದು ವಿಷಯದ ಮೇಲೆ ತೆರಿಗೆ ವಿಧಿಸುವ ಹಕ್ಕು ಕೇಂದ್ರ ಮತ್ತು ರಾಜ್ಯಗಳೆರಡಕ್ಕೂ ಇಲ್ಲ. ಸಂವಿಧಾನದ ಜಂಟಿ ಪಟ್ಟಿಯನ್ವಯ ಒಂದು ವಿಷಯದ ಮೇಲೆ ಕೇಂದ್ರ, ರಾಜ್ಯಗಳೆರಡೂ ಕಾನೂನು ಮಾಡಬಹುದು, ಆದರೆ ಒಂದೇ ವಿಷಯದ ಮೇಲೆ ತೆರಿಗೆ ವಿಧಿಸುವ ಹಕ್ಕು ಒಂದೇ ವಿಷಯದ ಮೆಲೆ ಇಲ್ಲ. ರಾಜ್ಯ ಮತ್ತು ಕೇಂದ್ರಗಳ ನಡುವೆ ತೆರಿಗೆಯ ವಿಚಾರದಲ್ಲಿ ಗೊಂದಲ ಇರಬಾರದು ಅನ್ನುವ ಕಾರಣಕ್ಕೆ ಇಂತಹದೊಂದು ಬಗೆತ ಏರ್ಪಟ್ಟಿದ್ದು, ಜಿ.ಎಸ್.ಟಿ ಮೂಲಕ ಸರಕು ಮತ್ತು ಸೇವೆಗಳೆರಡರ ಮೇಲೆ ರಾಜ್ಯ ಮತ್ತು ಕೇಂದ್ರ ಇಬ್ಬರೂ ತೆರಿಗೆ ವಿಧಿಸುವಂತಾಗುವುದು ಒಕ್ಕೂಟ ವ್ಯವಸ್ಥೆಯ ಸಂವಿಧಾನದ ಏರ್ಪಾಡಿನಲ್ಲಿ ಆಗುತ್ತಿರುವ ದೊಡ್ಡ ಬದಲಾವಣೆಯೆಂದೇ ಅವರು ಗುರುತಿಸುತ್ತಾರೆ. ಇದೇ ನೆಲೆಯಲ್ಲಿ ಎಐಎಡಿಎಂಕೆ ಪಕ್ಷ ಜಿ.ಎಸ್.ಟಿ ಮಸೂದೆಯನ್ನು ಅಸಂವಿಧಾನಿಕ ಎಂದು ವಿರೋಧಿಸಿತ್ತು. ಇದೇ ನೆಲೆಯಲ್ಲಿ ಸುಪ್ರೀಂ ಕೋರ್ಟಿನ ಸಂವಿಧಾನ ಪೀಠದಲ್ಲಿ ಇದನ್ನು ಎಐಎಡಿಎಂಕೆ ಪ್ರಶ್ನಿಸುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

ಹಿಂದೂ ಪತ್ರಿಕೆಯಲ್ಲಿ ಬರೆದಿರುವ ಮುಂಬೈ ಮೂಲದ ಎಕನಾಮಿಸ್ಟ್ ಅಜಿತ್ ರಾನಡೆ ಜಿ.ಎಸ್.ಟಿ ಬಂದರೆ ಆಗುವ ಪ್ರಯೋಜನಗಳನ್ನು ಒಪ್ಪುತ್ತಲೇ ಜಿ.ಎಸ್.ಟಿ ಬಗೆಗಿನ ತಮಗಿರುವ ಆತಂಕಗಳನ್ನು ಮಂಡಿಸಿದ್ದಾರೆ. ಯಾವ ರಾಜ್ಯದಿಂದ ಎಷ್ಟು ಹಣ  ಜಿ.ಎಸ್.ಟಿಯ ಲೆಕ್ಕದಲ್ಲಿ ಬೊಕ್ಕಸಕ್ಕೆ ಬರುತ್ತೆ ಅನ್ನುವುದನ್ನು ಪರಿಗಣಿಸದೇ ಎಲ್ಲ ರಾಜ್ಯಗಳಿಗೂ ಒಂದು ಮತ ನೀಡಿರುವ ಕ್ರಮವನ್ನು ಸರಿಯಲ್ಲ ಅನ್ನುವ ಅವರು ರಾಜ್ಯಗಳಿಗೆ ತಮ್ಮ ಅಗತ್ಯಕ್ಕೆ ತಕ್ಕಂತೆ ತೆರಿಗೆ ವಿಧಿಸುವ ಹಕ್ಕನ್ನು ಪೂರ್ತಿಯಾಗಿ ಮೊಟಕುಗೊಳಿಸುವ ಜಿ.ಎಸ್.ಟಿ ಹೆಜ್ಜೆಯನ್ನು ಗಮನಿಸಬೇಕು ಎಂದಿದ್ದಾರೆ. 1962ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಕಾಮರಾಜ್ ಅವರು ತಮಿಳುನಾಡಿನಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟದ ಯೋಜನೆಯನ್ನು ಜಾರಿಗೊಳಿಸಿದರು. ಅವರ ನಡೆಯನ್ನು ವಿರೋಧಿಗಳು ಆರ್ಥಿಕವಾಗಿ ಅಶಿಸ್ತಿನ ನಡೆಯೆಂದೇ ಟೀಕಿಸಿದರು. ಅದಕ್ಕೆ ಉತ್ತರವಾಗಿ ಯೋಜನೆಯ ವೆಚ್ಚ ಭರಿಸಲು ಸರಕಿನ ಮೇಲಿನ ತೆರಿಗೆಯನ್ನು ಹೆಚ್ಚಿಸಿದ ಅವರು (ಜಿ.ಎಸ್.ಟಿ ಬಂದ ಮೇಲೆ ಇದು ಸಾಧ್ಯವಿಲ್ಲ) ಆ ಯೋಜನೆ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಲು ಕಾರಣರಾದರು. ಇಂದಿಗೂ ಆ ಯೋಜನೆಯನ್ನು ಭಾರತವಷ್ಟೇ ಅಲ್ಲದೇ ವಿದೇಶದಲ್ಲೂ ಕೊಂಡಾಡುತ್ತಾರೆ. ಶಾಲಾ ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಯ ಜೊತೆ ಹಾಜರಾತಿಯನ್ನು ಹೆಚ್ಚಿಸಿದ ಖ್ಯಾತಿ ಆ ಯೋಜನೆಯದ್ದು. ಮಹಾರಾಷ್ಟ್ರದಲ್ಲಿ 1972ರಲ್ಲಿ ಉಂಟಾದ ಬರ ಪರಿಸ್ಥಿತಿ ನಿಭಾಯಿಸಲು ಶುರುವಾದ ಉದ್ಯೋಗ ಖಾತ್ರಿ ಯೋಜನೆಗಾಗಿ ನಗರವಾಸಿಗಳ ಮೇಲೆ ಪ್ರೊಫೆಶನ್ ಟ್ಯಾಕ್ಸ್ ಹಾಕುವ ನಿರ್ಧಾರ ಅಲ್ಲಿನ ಸರ್ಕಾರ ಕೈಗೊಂಡಿತ್ತು(ಜಿ.ಎಸ್.ಟಿ ಬಂದ ಮೇಲೆ ಇದೂ ಸಾಧ್ಯವಿಲ್ಲ). ಮೂರು ದಶಕಗಳ ನಂತರ ಅದೇ ಯೋಜನೆ ನರೇಗಾ ಯೋಜನೆಗೆ ಸ್ಪೂರ್ತಿಯಾಯಿತು. ಹೀಗೆ ಎರಡು ಉದಾಹರಣೆ ನೀಡುವ ಅವರು ಜಿ.ಎಸ್.ಟಿ ವ್ಯವಸ್ಥೆ ರಾಜ್ಯಗಳ ಆರ್ಥಿಕ ಸ್ವಾಯತ್ತತೆಯ ಕಳವಳದ ಬಗ್ಗೆ ಸಹಾನುಭೂತಿಯಾಗಿರಬೇಕು ಎಂದು ವಾದಿಸಿದ್ದಾರೆ.

ಸಿ.ಪಿ.ಎಂ ಪಕ್ಷದ ಮಾಜಿ ರಾಜ್ಯಸಭಾ ಸಂಸದ ಕೆ.ಎನ್.ಬಾಲಗೋಪಾಲ್ ಇಂಡಿಯನ್ ಎಕ್ಸಪ್ರೆಸ್ಸಿನಲ್ಲಿ ತೆರಿಗೆ ಸಂಗ್ರಹಣೆಗೆ ಆರ್ಥಿಕ ಆಯಾಮದ ಹೊರತಾಗಿ ಇರಬಹುದಾದ ಸಾಮಾಜಿಕ ಆಯಾಮವೊಂದರ ಬಗ್ಗೆ ಗಮನ ಸೆಳೆಯುತ್ತಾರೆ. ತಂಬಾಕು ಉತ್ಪನ್ನಗಳು ಸಮಾಜದ ಮೇಲೆ ಉಂಟುಮಾಡುವ ದುಷ್ಪರಿಣಾಮಗಳ ಹಿನ್ನೆಲೆಯಲ್ಲಿ ಅದಕ್ಕೆ ಅತಿ ಹೆಚ್ಚಿನ ತೆರಿಗೆಯನ್ನು ಎಲ್ಲ ಸರ್ಕಾರಗಳು ವಿಧಿಸುತ್ತವೆ. ತಂಬಾಕು ಬೆಳೆಯುವ ರಾಜ್ಯ ಹೆಚ್ಚು ಮಾರಾಟವಾಗಲಿ ಎನ್ನುವ ಕಾರಣಕ್ಕೆ ತೆರಿಗೆ ಕಡಿಮೆ ಇಡಲು ಬಯಸುತ್ತದೆ. ಆದರೆ ತಂಬಾಕು ಉತ್ಪನ್ನಗಳಿಂದ ಆರೋಗ್ಯ ಸಂಬಂಧಿ ಸಮಸ್ಯೆ ಎದುರಿಸುತ್ತಿರುವ ರಾಜ್ಯವೊಂದು ಹೆಚ್ಚಿನ ತೆರಿಗೆ ವಿಧಿಸಲು ಬಯಸುತ್ತದೆ. ಈಗ ಎಲ್ಲೆಡೆ ಒಂದೇ ತೆರಿಗೆ ದರ ಬಂದರೆ ಕೇಂದ್ರ ಯಾರ ಹಿತಾಸಕ್ತಿ ಕಾಪಾಡುತ್ತದೆ? ಹೊಸತಾಗಿ ಯಾವುದಾದರೂ ಸೆಸ್ ಇಲ್ಲವೇ ಸರ್ಚಾರ್ಜ್ ಹಾಕುವ ಅಧಿಕಾರ ಕೇಂದ್ರಕ್ಕೆ ಮಾತ್ರ ಇರುವುದರಿಂದ ರಾಜ್ಯವೊಂದರಲ್ಲಿ ಉಂಟಾಗುವ ತುರ್ತು ಅಗತ್ಯಕ್ಕೆ ಸ್ಪಂದಿಸಲು ಸಂಪನ್ಮೂಲ ಹೊಂದಿಸುವ ಯಾವ ಆಯ್ಕೆಗಳು ರಾಜ್ಯಗಳಿಗೆ ಇಲ್ಲವಾಗುತ್ತೆ. “ಮೇಕ್ ಇನ್ ಇಂಡಿಯಾ” ಸ್ಥಳೀಯ ಉದ್ಯಮವನ್ನು ಹೊರ ದೇಶದ ಆಮದಿನ ಮುಂದೆ ಉಳಿಸಿ, ಗಟ್ಟಿಗೊಳಿಸಲು ಬಯಸುತ್ತದೆ. ಅಂತೆಯೇ ರಾಜ್ಯಗಳು ತಮ್ಮಲ್ಲಿನ ಸ್ಥಳೀಯ ಉದ್ಯಮ, ಉದ್ಯೋಗವನ್ನು ಕಾಪಾಡಲು ಬಯಸುತ್ತವೆ. ಸ್ಥಳೀಯ ಉದ್ಯಮಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ತಕ್ಕ ತೆರಿಗೆ ನಿರ್ಧರಿಸುವ ಹಕ್ಕು ರಾಜ್ಯಗಳು ಕಳೆದುಕೊಂಡರೆ ಅದರಿಂದ ಈ ಆಶಯಕ್ಕೆ ಧಕ್ಕೆಯುಂಟಾಗುತ್ತದೆ ಅನ್ನುವರ್ಥದ ವಾದವನ್ನು ಅವರು ಮಂಡಿಸುತ್ತಾರೆ.

ರಾಜ್ಯಗಳ ಸ್ವಾಯತ್ತತೆಯ ವಾದವೊಂದೇ ಅಲ್ಲದೇ ಜಿ.ಎಸ್.ಟಿ ಅನುಷ್ಟಾನದ ಸವಾಲುಗಳು, ಜಿ.ಎಸ್.ಟಿ ಬಂದ ತಕ್ಷಣ ಉಂಟಾಗಬಹುದಾಗ ಹಣದುಬ್ಬರ, ಜಿ.ಎಸ್.ಟಿ ಬಂದ ಮೇಲೆ ಆಗುವ ತೆರಿಗೆ ಕೊರತೆ ನಿಭಾಯಿಸಬೇಕೆಂದರೆ ಮಾರುಕಟ್ಟೆಯಲ್ಲಿ ಸರಕು/ಸೇವೆಗಳಿಗೆ ಬೇಡಿಕೆ ಹೆಚ್ಚಿ, ತೆರಿಗೆ ಸಂಗ್ರಹ ಹೆಚ್ಚಬೇಕು, ಆದರೆ ಇಂದಿನ ಆರ್ಥಿಕ ಹಿಂಜರಿತದ ಪ್ರಭಾವದ ನಡುವೆ ಇದಕ್ಕೆ ಎದುರಾಗಬಹುದಾದ ಸಮಸ್ಯೆಗಳ ಬಗ್ಗೆ ಹಲವು ಚರ್ಚೆಗಳು ಈಗ ಎಲ್ಲೆಡೆ ನಡೆದಿವೆ. ಏನೇ ಆದರೂ ಜಿ.ಎಸ್.ಟಿ ಮುಂದಿನ ದಿನಗಳಲ್ಲಿ ಕಾವಿನ ರಾಜಕೀಯ ಚರ್ಚೆ, ಪಲ್ಲಟಗಳಿಗೆ ಕಾರಣವಾದರೆ ಅಚ್ಚರಿಯಿಲ್ಲ. ಇಡೀ ಜಿ.ಎಸ್.ಟಿ ಚರ್ಚೆಯನ್ನು ಗಮನಿಸಿದಾಗ ತಮಿಳುನಾಡಿನ ಎಐಎಡಿಎಂಕೆ ಪಕ್ಷವೊಂದೇ ರಾಜ್ಯಗಳ ತೆರಿಗೆ ಸ್ವಾಯತ್ತತೆಗಾಗಿ ಅದ್ಭುತವಾದ ವಾದ ಮಂಡಿಸಿ ಕೊನೆ ಗಳಿಗೆಯವರೆಗೂ ಹೋರಾಡಿತು ಅನ್ನುವುದನ್ನು ಕಾಣಬಹುದು. ಇನ್ನೊಂದೆಡೆ ಜಿ.ಎಸ್.ಟಿಯಿಂದ ಸದ್ಯಕ್ಕೆ ಅಷ್ಟು ದೊಡ್ಡ ಮಟ್ಟದ ತೆರಿಗೆ ಹಾನಿಯಾಗದ, ಉತ್ಪಾದನೆಗಿಂತ ಹೆಚ್ಚಾಗಿ ಕನಸ್ಯೂಮ್ ಆಧಾರಿತ ಅರ್ಥವ್ಯವಸ್ಥೆಯನ್ನು ಹೊಂದಿರುವ ಕರ್ನಾಟಕದ ರಾಜಕಾರಣಿಗಳು ಇದರ ವಿರುದ್ಧ ಯಾವುದೇ ಮಾತನಾಡಿಲ್ಲ. ರಾಜಕಾರಣಿಗಳಿಗೆ ಐದು ವರ್ಷದ ಆಚೆಗಿನ ವಿಶನ್ ಇರಲು ಸಾಧ್ಯವಿಲ್ಲ. ಐದು ವರ್ಷ ಆಗಬಹುದಾದ ತೆರಿಗೆ ಹಾನಿಯನ್ನು ಕೇಂದ್ರ ತುಂಬಿ ಕೊಡುವ ಮಾತನಾಡಿರುವ ಕಾರಣ ಕರ್ನಾಟಕವಂತೂ ನಿರುಮ್ಮಳವಾಗಿ ಇದಕ್ಕೆ ಬೆಂಬಲ ಸೂಚಿಸಿದೆ. ಆದರೆ ಕರ್ನಾಟಕದ ತುರ್ತು ಅಗತ್ಯಗಳಿಗೆ ತಕ್ಕಂತೆ ಹೊಸ ಸಂಪನ್ಮೂಲ ಹೊಂದಿಸಬೇಕಾದ ವಿಶೇಷ ಸಂದರ್ಭ ಬಂದಾಗಲಷ್ಟೇ ಜಿ.ಎಸ್.ಟಿ ಹೇಗೆ ತನ್ನ ಕೈ ಕಟ್ಟಿ ಹಾಕಿದೆ ಅನ್ನುವುದು ನಮ್ಮ ಸರ್ಕಾರಗಳಿಗೆ ಅರ್ಥವಾಗಬಹುದೇನೋ.

ಗಮನಿಸಿ: ಈ ಅಂಕಣ ಮೊದಲು ಡಿಜಿಟಲ್ ಕನ್ನಡದಲ್ಲಿ ಪ್ರಕಟವಾಗಿತ್ತು.

Posted in ಒಕ್ಕೂಟ ವ್ಯವಸ್ಥೆ, ಕರ್ನಾಟಕ, GST | ನಿಮ್ಮ ಟಿಪ್ಪಣಿ ಬರೆಯಿರಿ

ಕರ್ನಾಟಕದ ಬ್ಯಾಂಕುಗಳಲ್ಲಿ ಕನ್ನಡದ ಕತೆ ವ್ಯಥೆ

ಇತ್ತೀಚೆಗೆ ಕರ್ನಾಟಕದ ಬ್ಯಾಂಕುಗಳಲ್ಲಿ ಕನ್ನಡ ಮತ್ತು ಕನ್ನಡಿಗರು ಸಂಪೂರ್ಣವಾಗಿ ಕಡೆಗಣನೆಗೆ ಒಳಗಾಗುತ್ತಿರುವುದು ಹೆಚ್ಚುತ್ತಿದೆ. ಈ ಬಗ್ಗೆ ಸಾಮಾಜಿಕ ತಾಣಗಳ ಮೂಲಕ ನಮ್ಮ ಜನಪ್ರತಿನಿಧಿಗಳ ಗಮನ ಸೆಳೆಯುವ ಕೆಲಸ ಹಲವಾರು ಕನ್ನಡಿಗರು ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸ್ಪಂದಿಸಿದ ಮೈಸೂರು-ಕೊಡಗು ಸಂಸದರಾದ ಪ್ರತಾಪ್ ಸಿಂಹ ಅವರು ಬ್ಯಾಂಕಿನಲ್ಲಿನ ಸಮಸ್ಯೆಗಳ ಬಗ್ಗೆ ಒಂದಿಷ್ಟು ವಿವರವಾದ ಮಾಹಿತಿಯನ್ನು ಕೋರಿದ್ದರು. ಅವರಿಗೆ ಕಳಿಸಲಾದ ಉತ್ತರ ಇಲ್ಲಿದೆ. ಇಲ್ಲಿರುವ ಮಾಹಿತಿಯನ್ನು ಬಳಸಿ ಅವರು ಮತ್ತು ಕರ್ನಾಟಕದ ಇತರೆ ಸಂಸದರು ಈ ಬಗ್ಗೆ ಸಂಸತ್ತಿನಲ್ಲಿ ದನಿ ಎತ್ತಿ,  ನ್ಯಾಯ ದೊರಕಿಸಿಕೊಡಲಿ ಅನ್ನುವ ಒತ್ತಾಯ ಕನ್ನಡಿಗರದ್ದು.

  • ಸಂಪಾದಕ, ಮುನ್ನೋಟ

ಯಾವುದೇ ನಾಡಿನ ಏಳಿಗೆಯಲ್ಲಿ ಅಲ್ಲಿನ ಬ್ಯಾಂಕಿಂಗ್ ವ್ಯವಸ್ಥೆ ಪ್ರಮುಖ ಪಾತ್ರ ವಹಿಸುವುದರಿಂದ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಜನರಿಗೆ ಬ್ಯಾಂಕಿಂಗ್ ಸೇವೆಗಳು ದೊರೆಯುವಂತಾಗುವುದು ಬಹಳ ಮುಖ್ಯವಾದ ಹೆಜ್ಜೆಯೆಂದೇ ಪರಿಗಣಿತವಾಗಿದೆ. ಭಾರತದಂತಹ ವಿಪರೀತ ಆರ್ಥಿಕ ತಾರತಮ್ಯವಿರುವ ದೇಶದಲ್ಲಿ ಇನ್ನು ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಜನರು ಬ್ಯಾಂಕಿಂಗ್ ವ್ಯವಸ್ಥೆಯ ಹೊರಗೇ ಉಳಿದಿದ್ದಾರೆ. ಬಡವರು, ಶ್ರಮಿಕರು ತಮ್ಮ ದಿನದ  ದುಡಿಮೆಯ ಒಂದು ಪಾಲನ್ನಾದರೂ ಉಳಿತಾಯ ಮಾಡುವತ್ತ ಅಡಿಯಿಟ್ಟರೆ ಅದು ಉಳಿತಾಯದ ಸಂಸ್ಕೃತಿಯೊಂದನ್ನು ಪೋಷಿಸುವುದಲ್ಲದೇ ಆರ್ಥಿಕ ತಾರತಮ್ಯ ಕಡಿಮೆಗೊಳಿಸುವತ್ತಲೂ ಕೊಡುಗೆ ನೀಡಬಲ್ಲ ಶಕ್ತಿ ಹೊಂದಿದೆ. ಅಂತೆಯೇ ದೇಶದ ಎಲ್ಲ ನಾಗರೀಕರಿಗೂ ಬ್ಯಾಂಕಿಂಗ್ ಸೇವೆ ದೊರೆಯಬೇಕು ಅನ್ನುವ ಆಶಯದೊಂದಿಗೆ ಜನಧನದಂತಹ ಯೋಜನೆಗಳು ಜಾರಿಗೆ ಬಂದಿವೆ. ಇದಲ್ಲದೇ ಸರ್ಕಾರವು ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಜನರ ಒಳಿತಿಗಾಗಿ ರೂಪಿಸಿರುವ ಎಲ್ಲ ಕಲ್ಯಾಣ ಯೋಜನೆಗಳು ಫಲ ಕಾಣಲು ಅವುಗಳ ಅನುಷ್ಟಾನದಲ್ಲಿ ಆಗುತ್ತಿರುವ ಸೋರಿಕೆ ಮತ್ತು ಭ್ರಷ್ಟಾಚಾರವನ್ನು ತಡೆಯುವ ನಿಟ್ಟಿನಲ್ಲೂ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಳಸಿಕೊಳ್ಳುವ ದಿಶೆಯಲ್ಲಿ ಡೈರೆಕ್ಟ್ ಬೆನೆಫಿಟ್ ಟ್ರಾನ್ಸಫರ್ ತರದ ಯೋಜನೆಗಳು ಮಹತ್ವ ಪಡೆದುಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಆರ್ಥಿಕ ಒಳಗೊಳ್ಳುವಿಕೆ (Financial Inclusion)ಯ ಮುಖ್ಯ ಹೆಜ್ಜೆಯಾಗಿ ಬ್ಯಾಂಕಿಂಗ್ ತಲುಪುವಿಕೆಯನ್ನು (Banking Penetration) ಆರ್ಥಿಕ ನೀತಿನಿಯಮ ರೂಪಿಸುವವರು ಗುರುತಿಸಿದ್ದಾರೆ.

ಜನರಿಗೆ ಬ್ಯಾಂಕಿಂಗ್ ಸೇವೆಗಳು ಪರಿಣಾಮಕಾರಿಯಾಗಿ ತಲುಪಬೇಕು ಎಂದು ಆಶಿಸುವವರು ಅದು ಜನರ ಭಾಷೆಯಲ್ಲಿದ್ದರೆ ಮಾತ್ರ ಸಾಧ್ಯ ಅನ್ನುವುದನ್ನು ಮರೆಯಲು ಸಾಧ್ಯವೇ? ದುರ್ದೈವವೆಂದರೆ ಭಾರತದಲ್ಲಿ ಇಂತಹದೊಂದು ದುರಂತವನ್ನು ಕಾಣಬಹುದಾಗಿದೆ. ಭಾರತದಂತಹ ಬಹುಭಾಷಾ ಒಕ್ಕೂಟದಲ್ಲಿ ಆಯಾ ರಾಜ್ಯದಲ್ಲಿ ಅಲ್ಲಿನ ನುಡಿಗಳಲ್ಲಿ ಎಲ್ಲ ಹಂತದ ಬ್ಯಾಂಕಿಂಗ್ ಸೇವೆಗಳು ದೊರೆಯಬೇಕಾದದ್ದು ನ್ಯಾಯಸಮ್ಮತವೂ, ಜನಪರವೂ ಆದ ನಿಲುವು ಆಗಿದ್ದರೂ ಸ್ವಾತಂತ್ರ್ಯ ಬಂದು ಏಳು ದಶಕಗಳಾದ ಮೇಲೂ ಭಾರತದಲ್ಲಿ ಬಹುತೇಕ ಎಲ್ಲ ಬ್ಯಾಂಕಿಂಗ್ ಸೇವೆಗಳು ಹಿಂದಿ ಮತ್ತು ಇಂಗ್ಲಿಷ್ ನುಡಿಗಳಿಗೆ ಸೀಮಿತವಾಗಿವೆ. ಇದರ ಹಿಂದೆ ದೇಶದೆಲ್ಲೆಡೆ ಹಿಂದಿ ಭಾಷೆಯೊಂದೇ ಸಲ್ಲಬೇಕು ಮತ್ತು ಅದು ದೇಶದ ಭಾವೈಕ್ಯತೆ ಹೆಚ್ಚಿಸುವ ಸಾಧನ ಅನ್ನುವ ವೈವಿಧ್ಯತೆ ವಿರೋಧಿಯಾದ ತಪ್ಪು  ನಿಲುವುಗಳನ್ನು ಕಾಣಬಹುದಾಗಿದೆ. ದೇಶದೆಲ್ಲೆಡೆ ಹಿಂದಿಯೊಂದೇ ಇರಬೇಕು ಅನ್ನುವ ನಿಲುವು ಸ್ವಾತಂತ್ರ್ಯ ಬಂದಾಗಿಂದಲೂ ಇದ್ದು, ತಮಿಳುನಾಡಿನಲ್ಲಿ ನಡೆದ ಹಿಂದಿ ಹೇರಿಕೆ ವಿರೋಧಿ ಚಳವಳಿಯ ಪರಿಣಾಮವಾಗಿ ಹಿಂದಿಯೊಂದಿಗೆ ಇಂಗ್ಲಿಷ್ ಕೂಡ ಉಳಿದುಕೊಂಡಿತು. ಹಿಂದಿಯೊಂದಕ್ಕೇ ಮಣೆ ಹಾಕಿದರೆ  ಬ್ಯಾಂಕು ಸೇರಿದಂತೆ ಎಲ್ಲ ಕೇಂದ್ರ ಸರ್ಕಾರಿ ನೌಕರಿಗಳಲ್ಲಿ ಹಿಂದಿ ಭಾಷೆ ಅರಿಯದ ಹಿಂದಿಯೇತರ ರಾಜ್ಯಗಳ ಜನರು ತೀವ್ರ ಅನ್ಯಾಯಕ್ಕೊಳಗಾಗುತ್ತಾರೆ ಅನ್ನುವ ಕಳವಳವೇ ಹಿಂದಿ ಹೇರಿಕೆ ವಿರೋಧಿ ಚಳವಳಿಯ ಮೂಲದಲ್ಲಿತ್ತು. ಹೋರಾಟದ ಫಲವಾಗಿ ಹಿಂದಿಯೊಂದಿಗೆ ಇಂಗ್ಲಿಷ್ ಉಳಿದುಕೊಂಡಿತಾದರೂ ದೇಶದ ಬಹುತೇಕ ಭಾಗದ ಜನರಿಗೆ ಇವೆರಡೂ ನುಡಿಗಳು ಪರಕೀಯವೇ ಆಗಿವೆ ಅನ್ನುವುದನ್ನು ಇಲ್ಲಿ ಮನಗಾಣಬೇಕಿದೆ. ಕೇಂದ್ರ ಸರ್ಕಾರದ ಆಡಳಿತ ಭಾಷೆ ಹಿಂದಿ ಮತ್ತು ಇಂಗ್ಲಿಷ್ ಆಗಿದ್ದು, ಇವೆರಡೇ ಭಾಷೆಗಳಲ್ಲಿ ತನ್ನೆಲ್ಲ ಆಡಳಿತ ನಡೆಯಬೇಕು ಅನ್ನುವ ನಿಲುವಿನಿಂದಾಗಿ ಕೇಂದ್ರ ಸರ್ಕಾರದ ಅಧಿಕೃತ ಭಾಷಾ ನೀತಿಯನ್ವಯ ಎಲ್ಲ ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕುಗಳ ಸೇವೆಗಳು ಬಹುತೇಕ ಹಿಂದಿ, ಇಂಗ್ಲಿಷ್ ಎರಡೇ ನುಡಿಗಳಲ್ಲಿ ಇಂದು ದೊರೆಯುತ್ತಿದೆ. ರಾಜ್ಯದ ವ್ಯಾಪ್ತಿಯಲ್ಲಿ ಮಾತ್ರ ಕಾರ್ಯ ನಿರ್ವಹಿಸುವ ಸಹಕಾರಿ ಕ್ಷೇತ್ರದ ಬ್ಯಾಂಕುಗಳು ಮಾತ್ರ ಇದಕ್ಕೆ ಹೊರತಾಗಿವೆ. ಇಂತಹದೊಂದು ನೀತಿಯ ಪರಿಣಾಮವಾಗಿ ಯಾವ ಬ್ಯಾಂಕಿಂಗ್ ವ್ಯವಸ್ಥೆ ಜನರ ಪಾಲಿಗೆ ಸೇತುವೆಯಾಗಬೇಕಿತ್ತೋ ಅದೇ ವ್ಯವಸ್ಥೆ ಇಂದು ಕಂದರವಾಗಿ ಮಾರ್ಪಟ್ಟಿದೆ. ಕರ್ನಾಟಕದಂತಹ ರಾಜ್ಯದಲ್ಲಿ ಕಳೆದ ಒಂದೆರಡು ದಶಕಗಳಲ್ಲಿ ಆಗಿರುವ ಬದಲಾವಣೆ ಮತ್ತು ಅದು ಬ್ಯಾಂಕಿಂಗ್ ಕ್ಷೇತ್ರದ ಮೇಲೆ  ಮಾಡಿರುವ ಪರಿಣಾಮದ ಹಿನ್ನೆಲೆಯಲ್ಲಿ ನೋಡಿದಾಗ ಬ್ಯಾಂಕುಗಳ ಈ ಭಾಷಾ ನೀತಿ ಕನ್ನಡಿಗರನ್ನು ತೀವ್ರವಾಗಿ ತೊಂದರೆಗೀಡು ಮಾಡುತ್ತಿದೆ ಅನ್ನುವುದನ್ನು ಕಾಣಬಹುದಾಗಿದೆ.

ಬ್ಯಾಂಕುಗಳಲ್ಲಿ ಕನ್ನಡದ ಸ್ಥಿತಿ ಯಾಕೆ ಹೀಗಾಗಿದೆ?

ಭಾರತದ ಬ್ಯಾಂಕಿಂಗ್ ಕ್ಷೇತ್ರಕ್ಕೆ ಕರ್ನಾಟಕದ ಕೊಡುಗೆ ಅತ್ಯಂತ ಹಿರಿದಾದದ್ದು. ದೇಶದ 27 ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳಲ್ಲಿ 4 ಬ್ಯಾಂಕುಗಳು ಕರ್ನಾಟಕ ಮೂಲದವು. ದೇಶದ ಹತ್ತು ದೊಡ್ಡ ಸಾರ್ವಜನಿಕ ಬ್ಯಾಂಕುಗಳಲ್ಲಿ ಕರ್ನಾಟಕ ಮೂಲದ ಕೆನರಾ ಮತ್ತು ಸಿಂಡಿಕೇಟ್ ಬ್ಯಾಂಕುಗಳು ಸ್ಥಾನ ಪಡೆದಿದ್ದಾವೆ. ಕರ್ನಾಟಕ ಇಂದು ಕೇಂದ್ರಕ್ಕೆ ದೇಶದಲ್ಲೇ ಮೂರನೆಯ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯವಾಗಿದ್ದರೆ, ಅಂತಹದೊಂದು ಆರ್ಥಿಕ ಬೆಳವಣಿಗೆಯ ಹಿಂದೆ ಬ್ಯಾಂಕುಗಳು ದೊಡ್ಡ ಪಾತ್ರವಹಿಸಿವೆ. 2011ರ ಜನಗಣತಿಯನ್ವಯ ಕರ್ನಾಟಕದಲ್ಲಿರುವ 1,31,79,911 ಕುಟುಂಬಗಳ ಪೈಕಿ 80,54,677 ಕುಟುಂಬಗಳು, ಅಂದರೆ ಸರಿಸುಮಾರು 61 ಪ್ರತಿಶತ ಕುಟುಂಬಗಳು,  ಬ್ಯಾಂಕಿಂಗ್ ಸೇವೆಗಳನ್ನು ಪಡೆಯುತ್ತಿದ್ದಾರೆ. (ಗಮನಿಸಿ: ಆರ್ಥಿಕವಾಗಿ ಹಿಂದುಳಿದಿರುವ ಆದರೆ ಹಿಂದಿ ಭಾಷಿಕ ಉತ್ತರಪ್ರದೇಶದಲ್ಲಿ 72% ಕುಟುಂಬಗಳು ಬ್ಯಾಂಕಿಂಗ್ ಸೇವೆಗಳನ್ನು ಪಡೆಯುತ್ತಿವೆ !) ಇದರರ್ಥ ಇನ್ನೂ ಕರ್ನಾಟಕದ  39% ಕುಟುಂಬಗಳು ಬ್ಯಾಂಕಿಂಗ್ ವ್ಯವಸ್ಥೆಯ ಹೊರಗಿದ್ದು, ಅವುಗಳನ್ನು ಬ್ಯಾಂಕಿಂಗ್ ವ್ಯವಸ್ಥೆಯ ಒಳಗೆ ತರಬೇಕಿದೆ. ಕರ್ನಾಟಕದಲ್ಲೇ ಶುರುವಾದ ಹಲವು ಬ್ಯಾಂಕುಗಳು ರಾಷ್ಟ್ರೀಕರಣವಾಗುವ ಮೊದಲು ಬಹುತೇಕ ಕನ್ನಡಿಗರನ್ನೇ ತಮ್ಮ ಉದ್ಯೋಗಿಗಳನ್ನಾಗಿ ಹೊಂದಿದ್ದರು. 1965ರಲ್ಲಿ ಬ್ಯಾಂಕ್ ರಾಷ್ಟ್ರೀಕರಣವಾದ ಮೇಲೂ ಸಾಕ್ಷರತೆಯಲ್ಲಿ ಉತ್ತರದ ರಾಜ್ಯಗಳಿಗಿಂತ ಮುಂದಿದ್ದ ಕನ್ನಡಿಗರು ಬ್ಯಾಂಕುಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗದಲ್ಲಿದ್ದರು. ಇದರಿಂದಾಗಿ ಬ್ಯಾಂಕುಗಳ ಹಿಂದಿ/ಇಂಗ್ಲಿಷ್ ನೀತಿಯ ನಡುವೆಯೂ ಕನ್ನಡಿಗರಿಗೆ ಕನ್ನಡದಲ್ಲೇ ಬ್ಯಾಂಕು ಸೇವೆಗಳನ್ನು ಪಡೆಯುವುದು ತೀವ್ರ ಸವಾಲಿನ ಕೆಲಸವಾಗಿರಲಿಲ್ಲ. ಆದರೆ ಕಳೆದ ಇಪ್ಪತ್ತು ವರ್ಷಗಳಲ್ಲಿ ಈ ಪರಿಸ್ಥಿತಿ ಬದಲಾಗಿದ್ದು, ಕರ್ನಾಟಕದ ಬ್ಯಾಂಕುಗಳಲ್ಲಿ ಕನ್ನಡದಲ್ಲಿ ಸೇವೆ ಪಡೆಯುವುದು ಕಷ್ಟದ ಕೆಲಸವಾಗಿ ಪರಿಣಮಿಸಿದೆ. ಇದರ ಹಿಂದೆ ಕೆಲ  ಕಾರಣಗಳನ್ನು ಗುರುತಿಸಬಹುದು.

  1. ಬ್ಯಾಂಕುಗಳ ಉದ್ಯೋಗ ನೇಮಕಾತಿಯಲ್ಲಿ ಹಿಂದಿ/ಇಂಗ್ಲಿಷ್ ಎರಡೇ ಭಾಷೆಗಳಿಗೆ ಅವಕಾಶ ಕಲ್ಪಿಸಿರುವುದರಿಂದ ಈ ಭಾಷೆಗಳು ಬಾರದ ಕನ್ನಡಿಗರು ಬ್ಯಾಂಕ್ ಉದ್ಯೋಗ ಪಡೆಯುವಲ್ಲಿ ಹಿಂದೆ ಬೀಳುತ್ತಿರುವುದು.
  2. IBPS ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ ಮೂಲಕ ಎಲ್ಲ ಬ್ಯಾಂಕುಗಳು ತಮ್ಮ ನೇಮಕಾತಿ ಮಾಡುತ್ತಿದ್ದು, 2011ರಿಂದ ಈ ಸಂಸ್ಥೆ ಕಾಮನ್ ರಿಟನ್ ಎಕ್ಸಾಮಿನೆಶನ್ ಅನ್ನುವ ಆನ್ ಲೈನ್ ಪರೀಕ್ಷೆ ಮೂಲಕ ಬ್ಯಾಂಕ್ ನೇಮಕಾತಿ ಹಮ್ಮಿಕೊಳ್ಳಲು ಆರಂಭಿಸಿದ್ದು, ಅಲ್ಲಿ ಪರೀಕ್ಷೆಗಳು ಕೇವಲ ಇಂಗ್ಲಿಷ್/ಹಿಂದಿಯಲ್ಲಿ ಮಾತ್ರವೇ ಲಭ್ಯವಿದ್ದು ಇದರ ಪರಿಣಾಮವಾಗಿ ಕೇವಲ ರಾಷ್ಟ್ರೀಕೃತ ಬ್ಯಾಂಕುಗಳೊಂದೇ ಅಲ್ಲದೇ ಗ್ರಾಮೀಣ ಬ್ಯಾಂಕು (ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್, ಕಾವೇರಿ ಗ್ರಾಮೀಣ ಬ್ಯಾಂಕ್ ಇತ್ಯಾದಿ)ಗಳಲ್ಲಿಯೂ ಕನ್ನಡ ಬಾರದ ಸಿಬ್ಬಂದಿ ನೇಮಕವಾಗುತ್ತಿದ್ದಾರೆ. ಇದು ಹಳ್ಳಿಗಾಡಿನ ರೈತರಿಗೆ ತೀವ್ರ ತೊಂದರೆಯುಂಟು ಮಾಡುತ್ತಿರುವ ವಿಷಯ ಮೈಸೂರು-ಕೊಡಗು ಸಂಸದರಾದ ಪ್ರತಾಪ್ ಸಿಂಹ ಅವರ ಗಮನಕ್ಕೂ ಬಂದಿರುವ ಬಗ್ಗೆ ಬ್ಯುಸಿನೆಸ್ ಸ್ಟಾಂಡರ್ಡ್ ಪತ್ರಿಕೆ ವರದಿ ಮಾಡಿದ್ದನ್ನು ಇಲ್ಲಿ ನೆನೆಯಬಹುದು. ಈ ವರ್ಷದಿಂದ ಸಂದರ್ಶನವನ್ನು ಪೂರ್ತಿಯಾಗಿ ತೆಗೆದು ಹಾಕಿ, ಕೇವಲ ಆನ್ ಲೈನ್ ಪರೀಕ್ಷೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುವ ಐ.ಬಿ.ಪಿ.ಎಸ್ ನಿರ್ಧಾರದಿಂದ ಈ ಸಮಸ್ಯೆ ಇನ್ನಷ್ಟು ತೀವ್ರವಾಗುವ ಸಾಧ್ಯತೆ ಹೆಚ್ಚಿದೆ.
  3. ಐಟಿ ಮುಂತಾದ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗವಕಾಶಗಳ ಕಾರಣ ಬ್ಯಾಂಕ್ ನೌಕರಿಯತ್ತ ಕನ್ನಡಿಗರ ಆಸಕ್ತಿ ಕೊಂಚ ಕಡಿಮೆಯಾಗಿರುವುದು.
  4. ಮೂವತ್ತು-ನಲವತ್ತು ವರ್ಷಗಳ ಹಿಂದೆ ಕೆಲಸಕ್ಕೆ ಸೇರಿದ್ದ ಕನ್ನಡಿಗರು ನಿವೃತ್ತಿ ಆಗುತ್ತಿದ್ದಂತೆಯೇ ಆಗುತ್ತಿರುವ ಹೊಸ ನೇಮಕಾತಿಯಲ್ಲಿ ಬಹುತೇಕ ಪಾಲು ಈ ಪರೀಕ್ಷೆಗಳನ್ನು ಹಿಂದಿಯಲ್ಲಿ ಬರೆಯಬಲ್ಲ ಹಿಂದಿ ಭಾಷಿಕರ ಪಾಲಾಗುತ್ತಿರುವುದು.
  5. ಬ್ಯಾಂಕ್ ಸೇವೆಗಳನ್ನು ಆಯಾ ರಾಜ್ಯದಲ್ಲಿ ಅಲ್ಲಿನ ಭಾಷೆಯಲ್ಲಿ ನೀಡಲೇಬೇಕು ಅನ್ನುವ ಯಾವುದೇ ಗ್ರಾಹಕ ಸೇವೆಯ ಕಾನೂನುಗಳು ಇಲ್ಲದಿರುವುದರ ಪರಿಣಾಮವಾಗಿ ಕನ್ನಡ ಬಾರದ ಸಿಬ್ಬಂದಿ, ಕನ್ನಡವೇ ಇಲ್ಲದ ವಾತಾವರಣದಲ್ಲಿ ಕೆಲಸ ಮಾಡುತ್ತ, ಕಚೇರಿಗೆ ಭೇಟಿ ಕೊಡುವ ಸಾಮಾನ್ಯ ಕನ್ನಡಿಗರಿಗೆ ತೀವ್ರ ತೊಂದರೆಗೆ ಕಾರಣವಾಗುತ್ತಿರುವುದು.

ಆದರೆ ಇಲ್ಲಿ ಪ್ರಮುಖವಾಗಿ ಗಮನಿಸಬೇಕಿರುವ ಕಾರಣ ಭಾಷಾ ನೀತಿಯದ್ದಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಕನ್ನಡ ಬಾರದ ಸಿಬ್ಬಂದಿ ಇಲ್ಲಿ ಕೆಲಸ ಪಡೆಯಲು ಸಾಧ್ಯವಾಗುತ್ತಿರುವುದು, ಮತ್ತು ಕನ್ನಡದಲ್ಲಿ ಸೇವೆ ನೀಡದೆ, ಜನಸಮಾನ್ಯರಿಗೆ ತೊಂದರೆಯಾದರೂ ಮುಂದುವರೆಯಲು ಸಾಧ್ಯವಾಗುತ್ತಿರುವುದು ಯಾಕೆಂದರೆ ಭಾರತದ ಭಾಷಾ ನೀತಿ ಅದನ್ನು ಸಾಧ್ಯವಾಗಿಸಿದೆ. ಆರ್ಟಿಕಲ್ 343ರಿಂದ 351ರವರೆಗೆ ಬರೆಯಲಾಗಿರುವ ಕೇಂದ್ರ ಸರ್ಕಾರದ ಭಾಷಾ ನೀತಿಯನ್ವಯ ಬ್ಯಾಂಕುಗಳ ನೇಮಕಾತಿ ಪರೀಕ್ಷೆ/ ಸಂದರ್ಶನ ಕೇವಲ ಹಿಂದಿ/ಇಂಗ್ಲಿಷಿಗೆ ಸೀಮಿತವಾಗಿದೆ. ಇದರ ಲಾಭ ಅತೀ ಹೆಚ್ಚು ಪ್ರಮಾಣದಲ್ಲಿ ಹಿಂದಿ ಭಾಷಿಕರಿಗೆ ಲಭ್ಯವಾಗುತ್ತಿದೆ. ಇನ್ನೊಂದೆಡೆ ಹೀಗೆ ವಲಸೆ ಬಂದವರು ಕನ್ನಡ ಕಲಿತು ಕನ್ನಡದಲ್ಲಿ ಸೇವೆ ನೀಡುವ ಅಗತ್ಯ ಯಾಕೆ ಕಂಡುಕೊಳ್ಳುತ್ತಿಲ್ಲವೆಂದರೆ ಅದೇ ಭಾಷಾ ನೀತಿ ಅನ್ವಯ ಬ್ಯಾಂಕುಗಳು ಹಿಂದಿ/ಇಂಗ್ಲಿಷಿನಲ್ಲಿ ಸೇವೆ ನೀಡಿದರೆ ಸಾಕು ಅನ್ನುವ ನಿಲುವು. ಪ್ರತಿಯೊಂದು ಬ್ಯಾಂಕಿನ ಸಿಬ್ಬಂದಿಯೂ ಹಿಂದಿಯ ಬಳಕೆ ಹೆಚ್ಚಿಸುವತ್ತ ವಿಶೇಷ ಗಮನ ಹರಿಸಬೇಕು ಅನ್ನುವ ರಾಜ್ ಭಾಷಾ ಆಯೋಗ ನಿಗದಿಪಡಿಸಿರುವ ಗುರಿಯ ಬೆಂಬತ್ತುವ ಬ್ಯಾಂಕ್ ಸಿಬ್ಬಂದಿ ಕನ್ನಡದಲ್ಲಿ ಸೇವೆ ನೀಡುವ ಯಾವುದೇ ಆಸಕ್ತಿ ಹೊಂದಿಲ್ಲ. ಭಾರತದ ಎಲ್ಲ ಬ್ಯಾಂಕುಗಳ ಉಸ್ತುವಾರಿ ಹೊತ್ತಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೂಡಾ ಭಾರತದ ಕೇಂದ್ರ ಸರ್ಕಾರದ ಭಾಷಾ ನೀತಿ ಅನ್ವಯ ಕೆಲಸ ನಿರ್ವಹಿಸಬೇಕಿರುವುದರಿಂದ ಬ್ಯಾಂಕುಗಳಲ್ಲಿ ಆಗುತ್ತಿರುವ ಈ ಕನ್ನಡದ ಕಡೆಗಣನೆಗೆ ಕೊನೆಯಿಲ್ಲದಂತಾಗಿದೆ.  ರಾಷ್ಟ್ರೀಕೃತ ಮತ್ತು ಖಾಸಗಿ ನೆಲೆಯ ಎಲ್ಲ ದೊಡ್ಡ ಬ್ಯಾಂಕುಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಗದಿಪಡಿಸಿರುವಂತೆ ಹಿಂದಿ ಮತ್ತು ಇಂಗ್ಲಿಷಿನಲ್ಲಿ ತಮ್ಮ ಎಲ್ಲ ಬ್ಯಾಂಕ್ ಸೇವೆಗಳನ್ನು ಕೊಡುತ್ತಿವೆ. ತಂತ್ರಜ್ಞಾನ ಬಳಸಿ ನೀಡುವ ಸೇವೆಗಳಾದ ಎ.ಟಿ.ಎಂ/ ಐ.ವಿ.ಆರ್/ ನೆಟ್ ಬ್ಯಾಂಕಿಂಗ್ ಸೇರಿದಂತೆ ಎಲ್ಲ ಸೇವೆಗಳು, ಕನ್ನಡದಲ್ಲಿ ಸುಲಭದಲ್ಲಿ ಕೊಡಲು ಸಾಧ್ಯವಿರುವಾಗಲೂ, ಹಿಂದಿ/ಇಂಗ್ಲಿಷ್ ಎರಡೇ ಭಾಷೆಯಲ್ಲಿ ಲಭ್ಯವಾಗುತ್ತಿವೆ. ಆರ್.ಬಿ.ಐ ಸ್ಥಳೀಯ ಭಾಷೆಗಳ ಬಗ್ಗೆ ಯಾವುದೇ ನೀತಿ ಹೊಂದಿಲ್ಲ ಅಂತೇನಿಲ್ಲ. ತ್ರಿಭಾಷಾ ಸೂತ್ರದ ಹೆಸರಿನಲ್ಲಿ ರಾಜ್ಯ ಭಾಷೆಗಳಿಗೆ ಸಂಬಂಧಿಸಿದಂತೆ ಆರ್.ಬಿ.ಐ ರೂಪಿಸಿರುವ ಯಾವುದೇ ಕಾನೂನುಗಳನ್ನು ಈಗ ಪಾಲಿಸಲಾಗುತ್ತಿಲ್ಲ.

ರಿಸರ್ವ್ ಬ್ಯಾಂಕಿನ ಹಿಂದಿ ಪ್ರೇಮ

ಪ್ರತಿ ವರ್ಷ ರಿಸರ್ವ್ ಬ್ಯಾಂಕ್ ಗ್ರಾಹಕ ಸೇವೆಗೆ ಸಂಬಂಧಿಸಿದಂತೆ ಸುತ್ತೊಲೆಗಳನ್ನು ಹೊರಡಿಸುತ್ತದೆ. ಈ ಸುತ್ತೋಲೆಯಲ್ಲಿ ಸೂಚಿಸಿರುವುದನ್ನು ಎಲ್ಲಾ ಬ್ಯಾಂಕುಗಳೂ ಪಾಲಿಸಬೇಕಾಗಿದೆ. ಈ ಸುತ್ತೋಲೆಯನ್ನು Master Circular on Customer Service in Banks ಎಂದು ಕರೆಯಲಾಗಿದೆ. ಈ ಸುತ್ತೋಲೆಯನ್ನು ಈ ಕೆಳಗಿನ ಕೊಂಡಿಯಲ್ಲಿ ನೋಡಬಹುದು : https://www.rbi.org.in/Scripts/BS_ViewMasCirculardetails.aspx?id=9862

  1. ಈ ಸುತ್ತೋಲೆಯ ಭಾಗ ೧.೧(1.1 General (c)) ವಿಭಾಗದಲ್ಲಿ ಹೀಗೆಂದು ಹೇಳಲಾಗಿದೆ- ಬ್ಯಾಂಕಿನಲ್ಲಿರುವ ಎಲ್ಲಾ ರೀತಿಯ ಕೌಂಟರ್ ಗಳ ಬಗೆಗಿನ ವಿವರಗಳನ್ನು ಹಿಂದಿ/ಇಂಗ್ಲೀಷ್ ಮತ್ತು ಆಯಾ ರಾಜ್ಯದ ಭಾಷೆಯಲ್ಲಿ ಬರೆಯಬೇಕಿದೆ.
  2. (e) ಬ್ಯಾಂಕಿನಲ್ಲಿ ದೊರೆಯುವ ಎಲ್ಲಾ ಸೌಲಬ್ಯಗಳ ಬಗೆಗಿನ ಪುಸ್ತಕವನ್ನು ಹಿಂದಿ/ಇಂಗ್ಲೀಷ್ ಮತ್ತು ಆಯಾ ರಾಜ್ಯದ ಭಾಷೆಗಳಲ್ಲಿ ಒದಗಿಸಬೇಕು.
  3. ೪.೩ Printed materials in trilingual form- ಚಲನ್ ಗಳು/ಬ್ರೋಷರ್ ಗಳು ಸೇರಿದಂತೆ ಗ್ರಾಹಕರ ಅನುಕೂಲಕ್ಕೆಂದು ಮುದ್ರಿಸಿರುವ ಎಲ್ಲಾವೂ ಹಿಂದಿ/ಇಂಗ್ಲಿಷ್ ಮತ್ತು ರಾಜ್ಯದ ಭಾಷೆಯಲ್ಲಿ ಇರಬೇಕು.
  4. 7.2 Writing the cheques in any language – ಈ ನಿಯಮದ ಪ್ರಕಾರ ಕನ್ನಡದಲ್ಲಿ ಚೆಕ್ ಬುಕ್ ಮುದ್ರಿಸಲಾಗುವುದಿಲ್ಲ, ಆದರೆ ಸದ್ಯೆಕ್ಕೆ ಕನ್ನಡದಲ್ಲಿ ಚಕ್ ಬುಕ್ಕಿನ ಮೇಲೆ ಬರೆಯುವ ಅವಕಾಶವಿದೆ.
  5. ೮.೩.೧ Notice Boards – ಎಲ್ಲಾ ನೋಟಿಸ್ ಬೋರ್ಡ್ ಮೇಲೆ ಹಿಂದಿ/ಇಂಗ್ಲೀಷ್ ಮತ್ತು ರಾಜ್ಯ ಭಾಷೆಯಲ್ಲಿ ಮಾಹಿತಿ ಒದಗಿಸಬೇಕು.

ಈ ರೀತಿಯ ನಿಯಮಗಳನ್ನು ರೂಪಿಸಿದ್ದರೂ ಕರ್ನಾಟಕದ ಬಹುತೇಕ ಬ್ಯಾಂಕುಗಳಲ್ಲಿ ಇದನ್ನು ಗಾಳಿಗೆ ತೂರಲಾಗಿದೆ ಅನ್ನುವುದು ಕಾಣುತ್ತಿದೆ. ಬೆಂಗಳೂರಿನ ಹಲವು ಬ್ಯಾಂಕುಗಳಲ್ಲಿ ಕನ್ನಡದಲ್ಲಿ ಚೆಕ್ ಬರೆದರೆ ಅದು ಅರ್ಥವಾಗದ ಸಿಬ್ಬಂದಿ ಅದನ್ನು ಮರಳಿಸುವ ಕೆಲಸ ಮಾಡುತ್ತಿರುವ ಬಗ್ಗೆ ಹಲವು ದೂರುಗಳು ಪತ್ರಿಕೆಗಳ ಓದುಗರೆ ಓಲೆಯ ವಿಭಾಗದಲ್ಲಿ ಬಂದಿವೆ. ಅಲ್ಲದೇ ಆರ್.ಬಿ.ಐ ಸ್ಥಳೀಯ ಭಾಷೆಗಳಿಗಿಂತ ಹೆಚ್ಚಾಗಿ ಹಿಂದಿ ಪ್ರಚಾರಕ್ಕೆ ಒತ್ತು ಕೊಡುತ್ತಿದೆ ಅನ್ನುವುದಕ್ಕೆ ಸಾಕಷ್ಟು ಆಧಾರಗಳಿವೆ. ಹಿಂದಿಯಲ್ಲಿ ಸೇವೆ ನೀಡುವ ಬ್ಯಾಂಕುಗಳಿಗೆ ರಾಜಭಾಷಾ ಶೀಲ್ಡ್, “Excellent writing in the field of banking in Hindi” ಮುಂತಾದ ಹೆಸರಿನ ಬಹುಮಾನ ನೀಡುವ ಸಂಪ್ರದಾಯ ಆರ್.ಬಿ.ಐ ನಲ್ಲಿದೆ. ಈ ಬಗ್ಗೆ ಮಾಹಿತಿ ಕೆಳಗಿನ ಕೊಂಡಿಯಲ್ಲಿ ನೋಡಬಹುದು.

ಅಲ್ಲದೇ ಬ್ಯಾಂಕುಗಳಲ್ಲಿ ಹಿಂದಿಯಲ್ಲಿ ಸೇವೆ ದೊರಕಿಸುವ ಕುರಿತು 41 ಅಂಶಗಳ ವಿವರವಾದ ಸರ್ಕುಲರ್ ಅನ್ನು ಆರ್.ಬಿ.ಐ ಬ್ಯಾಂಕುಗಳಿಗೆ ಹೊರಡಿಸಿರುವುದನ್ನು ಕೆಳಗಿನ ಕೊಂಡಿಯಲ್ಲಿ ನೋಡಬಹುದು: https://www.rbi.org.in/Scripts/BS_ViewMasCirculardetails.aspx?id=8205

ಇಂತಹ ಯಾವುದೇ ವಿವರವಾದ ನೀತಿ ನಿಯಮಗಳನ್ನು ಹಿಂದಿಯೇತರ ಭಾಷೆಗಳ ಕುರಿತಾಗಿ ಆರ್.ಬಿ.ಐ ಹೊರಡಿಸಿಲ್ಲ ಅನ್ನುವುದನ್ನು ಕಂಡಾಗ ಸ್ಥಳೀಯ ಭಾಷೆಗಳಲ್ಲಿ ಬ್ಯಾಂಕಿಂಗ್ ಸೇವೆ ಕಲ್ಪಿಸುವ ಕುರಿತು ಆರ್.ಬಿ.ಐ ಎಷ್ಟು ಗಂಭೀರವಾಗಿದೆ ಅನ್ನುವ ಪ್ರಶ್ನೆಗಳು ಏಳುತ್ತವೆ. ಹಿಂದಿಯಲ್ಲಿ ಆಡಳಿತ ಅನ್ನುವ ಕೇಂದ್ರದ ಭಾಷಾ ನೀತಿಗೆ ಪೂರಕವಾಗಿಯೇ ಆರ್.ಬಿ.ಐ ಇಂತಹ ನಿಲುವು ರೂಪಿಸುತ್ತಿದೆ ಅನ್ನುವುದು ಯಾರಿಗೂ ಅರ್ಥವಾಗುತ್ತದೆ.

ಕರ್ನಾಟಕದಲ್ಲಿ ಹಿಂದಿ ಹೇರಿಕೆಯ ತೊಂದರೆಗಳು

ಇಂತಹ ಭಾಷಾ ನೀತಿಯ ಪರಿಣಾಮವಾಗಿ ಕಳೆದ ಕೆಲ ವರ್ಷದಿಂದ ಕರ್ನಾಟಕದ ಬ್ಯಾಂಕುಗಳಲ್ಲಿ ಕನ್ನಡದಲ್ಲಿ ಸೇವೆ ಪಡೆಯುವುದು ಬಹು ದೊಡ್ಡ ಸವಾಲಾಗುತ್ತಿದ್ದು, ಉದ್ಯೋಗದಲ್ಲೂ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಕನ್ನಡೇತರ ಸಿಬ್ಬಂದಿ ಸಾಮಾನ್ಯ ಕನ್ನಡಿಗರನ್ನು ಹಿಂದಿ ಇಲ್ಲವೇ ಇಂಗ್ಲಿಷಿನಲ್ಲಿ ಮಾತನಾಡಿ ಎಂದು ದಬಾಯಿಸುವ ಘಟನೆಗಳು ನಡೆಯುತ್ತಿದ್ದು, ಇದರ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ಇತ್ತೀಚಿಗೆ ಪತ್ರಿಕೆಯಲ್ಲಿ ವರದಿಯಾದ ಕೆಲ ಘಟನೆಗಳು:

  1. PIL opposes selection of bank staff who don’t know Kannada : http://goo.gl/V467tu
  2. Kannada must for bank staff : http://goo.gl/PkvyUN
  3. ಕನ್ನಡ ಬರುವವರನ್ನು ಕಳಸ್ರಿ – ಮಂಟೂರು ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಒತ್ತಾಯ: https://goo.gl/10pVLY
  4. ರಾಷ್ಟ್ರೀಕೃತ ಬ್ಯಾಂಕ್‌ ಹುದ್ದೆಗಳ  ನೇಮಕಾತಿಯಲ್ಲಿ ಕನ್ನಡ ಭಾಷೆ ಕಡ್ಡಾಯ ಎಂಬ ನಿಯಮ ತೆಗೆದು ಹಾಕಿರುವ ಕ್ರಮ ಖಂಡಿಸಿ ಬ್ಯಾಂಕಿಂಗ್‌ ಕ್ಷೇತ್ರದ ನೂರಾರು ಉದ್ಯೋಗ ಆಕಾಂಕ್ಷಿಗಳು ನಗರದಲ್ಲಿ ಪ್ರತಿಭಟನೆ: http://goo.gl/lZySBs
  5. ಹೊರರಾಜ್ಯದವರಿಗೆ ಅವಕಾಶ: ಬ್ಯಾಂಕಿಂಗ್‌ ಉದ್ಯೋಗಾಂಕ್ಷಿಗಳ ಪ್ರತಿಭಟನೆ: http://goo.gl/afM3Ke
  6. ಬ್ಯಾಂಕ್‌ನಲ್ಲಿ ಕನ್ನಡ ಮಾತನಾಡಿದರೆ ಜೋಕೆ: http://goo.gl/GtXeuz
  7. ಇಂಗ್ಲಿಷ್ ಬರಲ್ಲ ಅಂತ್ಲೂ ಇಂಗ್ಲಿಷಲ್ಲೇ ಬರೆದು ಕೊಡ್ಬೇಕಂತೆ!: http://goo.gl/66Fi58

ಇವು ಕೆಲ ಉದಾಹರಣೆಗಳಾಗಿದ್ದು, ಇಂತಹ ಹತ್ತಾರು ಘಟನೆಗಳು ದಿನವೂ ನಡೆಯುತ್ತಿವೆ. ಈ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಹಿಡಿದು ಸ್ವತಹ ಮುಖ್ಯಮಂತ್ರಿಗಳೇ ಹಲವು ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದರೂ ಯಾವುದೇ ಬದಲಾವಣೆ ಆಗಿಲ್ಲ.

ಸಮಸ್ಯೆಗೆ ಪರಿಹಾರ:

  1. ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಯನ್ನು ಸಂವಿಧಾನದ ಎಂಟನೆಯ ಶೆಡ್ಯೂಲಿನಲ್ಲಿರುವ ಎಲ್ಲ ೨೨ ಭಾಷೆಗಳಲ್ಲೂ ಬರೆಯುವ ಅವಕಾಶವಿರಬೇಕು. ರೈಲ್ವೇ ನೇಮಕಾತಿಯಲ್ಲಿ ಇಂತಹದೊಂದು ಬದಲಾವಣೆ ಮಮತಾ ಬ್ಯಾನರ್ಜಿ ಅವರು ರೈಲ್ವೇ ಮಂತ್ರಿಯಾಗಿದ್ದಾಗ ಜಾರಿ ಮಾಡಿದ್ದು, ಅದು ಈಗ ಯಶಸ್ವಿಯಾಗಿ ಜಾರಿಯಲ್ಲಿದೆ.
  2. ಬ್ಯಾಂಕಿಂಗ್ ನೇಮಕಾತಿಯಾಗುವಾಗ ಕ್ಲೆರಿಕಲ್ ಮತ್ತು ಗ್ರಾಹಕರನ್ನು ಎದುರುಗೊಳ್ಳುವ ಹುದ್ದೆಗಳಿಗೆ ನೇಮಕಾತಿಗೆ ಕನ್ನಡ ಗೊತ್ತಿರುವವರನ್ನೇ ಕಡ್ಡಾಯವಾಗಿ ನೇಮಿಸಬೇಕು ಅನ್ನುವ ನಿಯಮ ರೂಪಿಸಬೇಕು.
  3. ಬ್ಯಾಂಕುಗಳಿಗೆ ನೇಮಕವಾಗುವ ಕನ್ನಡೇತರರು ನಿಗದಿತ ಕಾಲಮಾನದಲ್ಲಿ ಕನ್ನಡ ಕಲಿಯುವುದನ್ನು ಕಡ್ಡಾಯಗೊಳಿಸುವಂತೆ ಬ್ಯಾಂಕ್ ಆಡಳಿತ ಮಂಡಳಿಗೆ ಸೂಚಿಸಬೇಕು.
  4. ಬ್ಯಾಂಕು ನೇಮಕಾತಿಗೆ ಸ್ಥಳೀಯರ ನೇಮಕಕ್ಕೆ ಆದ್ಯತೆ ನೀಡಬೇಕು,
  5. ಬ್ಯಾಂಕುಗಳು ನೀಡುವ ತಂತ್ರಜ್ಞಾನ ಆಧಾರಿತ ಸೇವೆಗಳಾದ ಎಟಿಎಂ, ಐವಿಆರ್, ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮುಂತಾದ ಸೇವೆಗಳು ಕರ್ನಾಟಕದಲ್ಲಿ ಕನ್ನಡದಲ್ಲಿಯೂ ಕೊಡಬೇಕು ಅನ್ನುವುದನ್ನು ಕಡ್ಡಾಯಗೊಳಿಸಬೇಕು.
  6. ಕರ್ನಾಟಕದ ಬ್ಯಾಂಕುಗಳಲ್ಲಿ ಹಿಂದಿಯಲ್ಲಿ ಎಲ್ಲ ತರದ ಸೇವೆ ಕೊಡುತ್ತಿದ್ದರೂ ಅದನ್ನು ಬಳಸುವವರ ಪ್ರಮಾಣ ಒಂದು ಪ್ರತಿಶತದಷ್ಟೂ ಇಲ್ಲ. ಹೀಗಿರುವಾಗ ಅಮೂಲ್ಯ ಸಂಪನ್ಮೂಲವನ್ನು ಪೋಲು ಮಾಡದೇ ಕರ್ನಾಟಕದಲ್ಲಿ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಬ್ಯಾಂಕ್ ವ್ಯವಹಾರ ಕಲ್ಪಿಸುವ ದ್ವಿಭಾಷಾ ನೀತಿಗೆ ಒತ್ತು ನೀಡಬೇಕು.
  7. ಭಾರತದ ಅಧಿಕೃತ ಭಾಷಾ ನೀತಿಗೆ ತಿದ್ದುಪಡಿ ತಂದು ಸಂವಿಧಾನದ ಎಂಟನೆಯ ಶೆಡ್ಯೂಲಿನಲ್ಲಿರುವ ಎಲ್ಲ ಭಾಷೆಗಳನ್ನು ಕೇಂದ್ರದ ಅಧಿಕೃತ ನುಡಿಗಳೆಂದು ಘೋಷಿಸಿ, ಆಯಾ ರಾಜ್ಯದಲ್ಲಿ ಕೇಂದ್ರದ ಎಲ್ಲ ಆಡಳಿತ ಅಲ್ಲಿನ ಸ್ಥಳೀಯ ಭಾಷೆಯಲ್ಲಿ ನಡೆಯುವಂತೆ ಮಾಡುವುದು ದೀರ್ಘಾವಧಿಯಲ್ಲಿ ಆಗಬೇಕಿರುವ ಸುಧಾರಣೆಯಾಗಿದ್ದು, ಈ ನಿಟ್ಟಿನಲ್ಲಿ ಸಂವಿಧಾನ ತಿದ್ದುಪಡಿಗೆ ದನಿ ಎತ್ತಬೇಕು.
Posted in ಕನ್ನಡ, ಕರ್ನಾಟಕ, ಹಿಂದಿ ಹೇರಿಕೆ | 1 ಟಿಪ್ಪಣಿ

ಬಲಿಷ್ಟ ರಾಜ್ಯಗಳಿಂದಲೇ ಭಾರತದ ಏಳಿಗೆ – ಮೋದಿಯವರಿಗೆ ರಾಜ್ಯಗಳ ಪಾಠ

ಕಳೆದ ವಾರ ದೆಹಲಿಯಲ್ಲಿ ನಡೆದ ಅಂತರ್ ರಾಜ್ಯ ಸಮಿತಿ ಸಭೆ ಭಾರತದ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಸಭೆಯಾಗಿತ್ತು. ಪ್ರಧಾನಿ ಮೋದಿಯವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಈ ಸಭೆಯಲ್ಲಿ ಬಹುತೇಕ ರಾಜ್ಯಗಳ ಮುಖ್ಯಮಂತ್ರಿಗಳು ಇಲ್ಲವೇ ಹಿರಿಯ ಸಚಿವರು ಪಾಲ್ಗೊಂಡಿದ್ದರು. ಹತ್ತು ವರ್ಷಗಳ ದೊಡ್ಡ ಅಂತರದ ನಂತರ ಏರ್ಪಾಡಾಗಿದ್ದ ಈ ಸಭೆಯಲ್ಲಿ ಒಕ್ಕೂಟದ ಬೇರೆ ಬೇರೆ ರಾಜ್ಯಗಳು ತಮ್ಮ ತಮ್ಮ ರಾಜ್ಯಗಳ ಏಳಿಗೆಯತ್ತ ಕೇಂದ್ರ ಸರ್ಕಾರದಿಂದ ದೊರೆಯಬೇಕಾದ ಸಹಕಾರದತ್ತ ಗಮನ ಸೆಳೆದರು. ಭಾರತದಂತಹ ಭಾಷಾವಾರು ಪ್ರಾಂತ್ಯಗಳ ಒಕ್ಕೂಟದಲ್ಲಿ ರಾಜ್ಯ ರಾಜ್ಯಗಳ ನಡುವಿನ ಸಾಮಾಜಿಕ, ಆರ್ಥಿಕ ಸ್ಥಿತಿಯಲ್ಲಿನ ಅಗಾಧ ವ್ಯತ್ಯಾಸಗಳನ್ನೂ, ಅಭಿವೃದ್ಧಿಯ ಆಶಯಗಳಲ್ಲಿನ ಹಲತನವನ್ನೂ ಗಮನಿಸಿದಾಗ ಭಾರತದ ಏಳಿಗೆಯಾಗಬೇಕೆಂದರೆ ಅದು ರಾಜ್ಯಗಳ ಏಳಿಗೆಯ ಮೂಲಕವೇ ಸಾಧ್ಯ ಮತ್ತು ಆ ನಿಟ್ಟಿನಲ್ಲಿ ರಾಜ್ಯಗಳಿಗೆ ಹೆಚ್ಚಿನ ರಾಜಕೀಯ ಮತ್ತು ಆರ್ಥಿಕ ಸ್ವಾಯತ್ತತೆ  ಒದಗಿಸುವುದರ ಮಹತ್ವವನ್ನು ಪ್ರಧಾನಿ ಮೋದಿಯವರಿಗೆ ತಲುಪಿಸುವಲ್ಲಿ ಈ ಸಭೆ ತಕ್ಕಮಟ್ಟಿಗೆ ಗೆಲುವು ಕಂಡಿದೆ.

ಅಂತರ್ ರಾಜ್ಯ ಸಮಿತಿ ಸಭೆಯ ಇತಿಹಾಸ

ಅಂತರ್ ರಾಜ್ಯ ಸಮಿತಿ ಸಭೆಯಲ್ಲಿ ಯಾವ ರಾಜ್ಯದ ನಾಯಕರು ಏನು ಮಾತನಾಡಿದರು ಅನ್ನುವುದನ್ನು ನೋಡುವ ಮುನ್ನ ಈ ಅಂತರ್ ರಾಜ್ಯ ಸಮಿತಿ ಸಭೆ ಯಾಕಾಗಿ ಜಾರಿಗೆ ಬಂತು, ಅದರ ಉದ್ದೇಶಗಳೇನು, ಈವರೆಗಿನ ಅದರ ಕೆಲಸಗಳೇನು ಅನ್ನುವುದನ್ನು ತಿಳಿಯಬೇಕು. ಸಂವಿಧಾನ ಜಾರಿಗೆ ಬಂದ ಹೊತ್ತಿನಲ್ಲಿ, ರಾಜ್ಯಗಳ ನಡುವಿನ ವಿವಾದಗಳನ್ನು ಬಗೆಹರಿಸಲು ಸಲಹೆ ನೀಡುವುದು, ಜನರ ಒಳಿತಿನ ಯಾವುದೇ ನೀತಿ ನಿಯಮ ರೂಪಿಸುವಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮನ್ವಯ ಸಾಧಿಸುವ ಉದ್ದೇಶಕ್ಕಾಗಿ ಸಂವಿಧಾನದ ಆರ್ಟಿಕಲ್ 263ರ ಅನ್ವಯ ಅಂತರ್ ರಾಜ್ಯ ಸಮಿತಿಯ ಸ್ಥಾಪನೆಗೆ ರಾಷ್ಟ್ರಪತಿಗಳು ಯಾವುದೇ ಹೊತ್ತಿನಲ್ಲಿ ಅನುಮತಿ ನೀಡಬಹುದು ಎಂದು ಬರೆಯಲಾಗಿತ್ತು. ಅದರಂತೆಯೇ ಹಲವಾರು ವಿಷಯಗಳ ಚರ್ಚೆಗೆ ಆಗಾಗ ಇಂತಹದೊಂದು ಸಮಿತಿ ರಚಿಸುವ ಕೆಲಸ ನಡೆಯುತ್ತಲಿತ್ತು. ಮುಂದೆ ಇದಕ್ಕೊಂದು ನಿಶ್ಚಿತ ಸ್ವರೂಪ ನೀಡುವ ಬಗ್ಗೆ ಸರ್ಕಾರಿಯಾ ಕಮಿಶನ್ ನೀಡಿದ ಶಿಫಾರಸ್ಸಿನಂತೆ 1990ರಲ್ಲಿ ಅಂತರ್ ರಾಜ್ಯ ಸಮಿತಿ ಸಭೆ ವಿಧ್ಯುಕ್ತವಾಗಿ ಜಾರಿಗೆ ಬಂತು. ಪ್ರಧಾನಿಗಳೂ  ಅಧ್ಯಕ್ಷರಾಗಿಯೂ, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರದ ಆರು ಸಚಿವರು ಸದಸ್ಯರಾಗಿಯೂ ಅಸ್ತಿತ್ವಕ್ಕೆ ಬಂದ ಸಭೆ ವರ್ಷಕ್ಕೆ ಮೂರು ಬಾರಿ ಭೇಟಿ ಆಗುವ ಗುರಿ ಹೊಂದಿತ್ತಾದರೂ 1990ರಿಂದ ಇಲ್ಲಿಯವರೆಗೆ ನಡೆದಿರುವ ಸಭೆಗಳ ಸಂಖ್ಯೆ ಕೇವಲ 11. ಇದು ಭಾರತದಲ್ಲಿ ಒಕ್ಕೂಟ ವ್ಯವಸ್ಥೆಯನ್ನು ಸಾಂಸ್ಥಿಕ ಸ್ವರೂಪದಲ್ಲಿ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎಷ್ಟರ ಮಟ್ಟಿಗೆ ಗಂಭೀರವಾಗಿದೆ ಅನ್ನುವ ಪ್ರಶ್ನೆಯನ್ನೇ ಎತ್ತುತ್ತದೆ. ತಡವಾಗಿಯಾದರೂ ಸರಿ, ಈ ನಿಟ್ಟಿನಲ್ಲಿ ಸಭೆಗೆ ಮುಂದಾದ ಪ್ರಧಾನಿಯವರನ್ನು ಅಭಿನಂದಿಸಬೇಕು. ರಾಜ್ಯ ಮತ್ತು ಕೇಂದ್ರಗಳು ಹೆಗಲಿಗೆ ಹೆಗಲು ಕೊಟ್ಟು ನಡೆದರೆ ಮಾತ್ರವೇ ದೇಶದ ಏಳಿಗೆ ಸಾಧ್ಯ ಅನ್ನುವ ಅವರ ಮಾತುಗಳು ಇಂದಿಗೆ ಅತ್ಯಂತ ಪ್ರಸ್ತುತವಾಗಿದ್ದು, ಸಭೆಯಲ್ಲಿ ವ್ಯಕ್ತವಾದ ರಾಜ್ಯಗಳ ಅಭಿಪ್ರಾಯಗಳನ್ನು ತೆರೆದ ಮನಸ್ಸಿನಿಂದ ಆದರಿಸಲು ಮುಂದಾದರೆ ಮಾತ್ರ ಸಹಕಾರಿ ತತ್ವದ ಒಕ್ಕೂಟ ವ್ಯವಸ್ಥೆಯ ಬಗೆಗಿನ ಅವರ ಮಾತುಗಳಿಗೆ ತೂಕ ಬಂದೀತು.

ಯಾರು ಏನೆಂದರು?

ಸಭೆಯಲ್ಲಿ ಮಾತನಾಡಿದ ಬಹುತೇಕರು ಸಂವಿಧಾನದ 356ನೇ ವಿಧಿಯನ್ನು ಬಳಸಿ ಜನರಿಂದ ಆಯ್ಕೆಯಾದ ಸರ್ಕಾರವನ್ನು ಕಿತ್ತೆಸೆಯುವ ಕ್ರಮದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಬ್ರಿಟಿಷ್ ಪಳಿಯುಳಿಕೆಯಾದ ರಾಜ್ಯಪಾಲರ ಹುದ್ದೆಯನ್ನು ರದ್ದು ಮಾಡಿ, ಇಲ್ಲವೇ ಕೊನೆಯ ಪಕ್ಷ ಅವರನ್ನು ನೇಮಿಸುವ, ವಜಾಗೊಳಿಸುವ ವಿಚಾರದಲ್ಲಿ ರಾಜ್ಯದ ಮುಖ್ಯಮಂತ್ರಿಗಳ ಅಭಿಪ್ರಾಯಕ್ಕೂ ಮನ್ನಣೆ ಇರಲಿ ಎಂದು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ವಾದಿಸಿದಾಗ ಸಭೆಯಲ್ಲಿ ಬಹುತೇಕರ ಒಪ್ಪಿಗೆ ಅದಕ್ಕಿತ್ತು. ಶಿರೋಮಣಿ ಅಕಾಲಿ ದಳದ ಸುಖಬೀರ್ ಸಿಂಗ್ ಬಾದಲ್ ಸಂವಿಧಾನದ ಸ್ಥಾಪಿತ ಆಶಯಗಳಿಗೆ ವಿರುದ್ಧವಾಗಿ ರಾಜ್ಯಗಳ ಹಕ್ಕು ಮತ್ತು ಅಧಿಕಾರವನ್ನು ಮೊಟಕುಗೊಳಿಸುವ ಕೆಲಸ ನಿರಂತರವಾಗಿ ನಡೆಯುತ್ತಿದ್ದು, ರಾಜ್ಯಗಳನ್ನು ಭಿಕ್ಷುಕರ ಮಟ್ಟಕ್ಕೆ ಇಳಿಸಲಾಗಿದೆ ಎಂದರು. ಕರ್ನಾಟಕವನ್ನು ಪ್ರತಿನಿಧಿಸಿದ್ದ ಡಾ.ಪರಮೇಶ್ವರ ಅವರು ರಾಜ್ಯ-ಕೇಂದ್ರದ ನಡುವಿನ ಸಮಾಲೋಚನೆಗೆ ಸಾಂಸ್ಥಿಕ ರೂಪ ಕೊಡಬೇಕು ಹಾಗೂ ರಾಜ್ಯ ಪಟ್ಟಿಯಲ್ಲಿರುವ ವಿಷಯಗಳಲ್ಲಿ ಕೇಂದ್ರದ ಮೂಗು ತೂರಿಸುವಿಕೆಗೆ ಅಂಕೆ ಹಾಕಬೇಕು ಎಂದರು. ಜಂಟಿ ಪಟ್ಟಿಯಲ್ಲಿರುವ ವಿಷಯಗಳಲ್ಲಿ ರಾಜ್ಯ ಮತ್ತು ಕೇಂದ್ರದ ನಡುವೆ ಸೌಹಾರ್ದಯುತ ಸಂಬಂಧಕ್ಕೆ ಒತ್ತು ಕೊಡಬೇಕು ಅಂದರು. ಆದರೆ ಸಭೆಯಲ್ಲಿ ಅತ್ಯಂತ ಸಮರ್ಥವಾಗಿ ಒಕ್ಕೂಟದಲ್ಲಿ ರಾಜ್ಯಗಳ ಪರ ವಕಾಲತ್ತು ಬಂದಿದ್ದು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ (ಇಂತಹ ವಾದ ಕರ್ನಾಟಕದಿಂದ ಯಾವತ್ತಿಗಾದರೂ ಬಂದೀತಾ?) ಅವರಿಂದ. ತಮಿಳುನಾಡನ್ನು ಪ್ರತಿನಿಧಿಸಿ ಬಂದಿದ್ದ ಹಣಕಾಸು ಮಂತ್ರಿ ಪನೀರ್ ಸೆಲ್ವಂ ಜಯಲಲಿತಾ ಅವರ ಭಾಷಣದ ಪ್ರತಿಯನ್ನು ಹಂಚಿದರು.

ಜಯಲಲಿತಾ ಅವರ ವಾದವೇನು?

ಸಹಕಾರಿ ತತ್ವದ ಒಕ್ಕೂಟ ವ್ಯವಸ್ಥೆಯ ಬಗೆಗಿನ ಮೋದಿಯವರ ಕಾಳಜಿಯನ್ನು ಮೆಚ್ಚುತ್ತಲೇ “ಸಹಕಾರಿ ತತ್ವದ ಒಕ್ಕೂಟ ವ್ಯವಸ್ಥೆ” ಅನ್ನುವುದು ಇಡೀ ದೇಶದಲ್ಲಿ, ಆಯಾ ರಾಜ್ಯದ ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳನ್ನು ಲೆಕ್ಕಿಸದೇ, ಒಂದೇ ಮಾದರಿಯ ಆಡಳಿತದ ಆಚರಣೆಗಳನ್ನು ಇಡೀ ದೇಶದ ಮೇಲೆ ಹೇರುವ ಪದ್ದತಿಗೆ ಇನ್ನೊಂದು ಹೆಸರಾಗಿ ಉಳಿಯದಿರಲಿ ಎಂದು ಆಶಿಸಿದ ಜಯಲಲಿತಾ ಅವರು, ರಾಜ್ಯಗಳಿಗೆ ತಕ್ಕ ಅಧಿಕಾರ ಮತ್ತು ಆರ್ಥಿಕ ಸಂಪನ್ಮೂಲ ಒದಗಿಸದಿದ್ದರೆ ಇದೆಲ್ಲವೂ ಬಾಯಿಮಾತಿನ ಬೊಗಳೆಯಾಗಿ ಉಳಿಯಬಹುದು ಎಂದು ಆತಂಕ ವ್ಯಕ್ತಪಡಿಸಿದರು. ಜಂಟಿ ಪಟ್ಟಿಯಲ್ಲಿರುವ ವಿಷಯಗಳ ಮೇಲೆ ಕೇಂದ್ರ ಸರ್ಕಾರ ಬೇಕಾಬಿಟ್ಟಿ ಕಾನೂನು ರೂಪಿಸುವುದಕ್ಕೆ ತಡೆಯಿರಬೇಕು ಎಂದಿರುವ ಜಸ್ಟಿಸ್ ಪುಂಚೀ ಕಮಿಶನ್ನಿನ ಶಿಫಾರಸ್ಸುಗಳಿಗೆ ಪೂರ್ತಿ ಬೆಂಬಲ ಸೂಚಿಸಿದರು. ತುರ್ತು ಪರಿಸ್ಥಿತಿಯಲ್ಲಿ ಸಂವಿಧಾನದ ಜಂಟಿ ಪಟ್ಟಿಗೆ ಸೇರಿಸಲಾಗಿದ್ದ “ಶಿಕ್ಷಣ”ದ ವಿಷಯವನ್ನು ಮರಳಿ ರಾಜ್ಯ ಪಟ್ಟಿಗೆ ಹಾಗೂ ಕೇಂದ್ರ ಪಟ್ಟಿಯಲ್ಲಿರುವ “ಪರಿಸರ, ಪರಿಸರ ವಿಜ್ಞಾನ, ವಾತಾವರಣ ಬದಲಾವಣೆ”ಯಂತಹ ವಿಷಯಗಳನ್ನು ಜಂಟಿ ಪಟ್ಟಿಗೆ ವರ್ಗಾಯಿಸಬೇಕು ಎಂದು ಅವರು ಆಗ್ರಹಿಸಿದರು. ರಾಜ್ಯಗಳಿಗೆ ಆರ್ಥಿಕ ಸಂಪನ್ಮೂಲ ಹೊಂದಿಸುವಲ್ಲಿ ಆಗುತ್ತಿರುವ ತೊಡಕಿನ ಬಗ್ಗೆ ಗಮನ ಸೆಳೆದ ಅವರು “ರಾಜ್ಯಗಳ ಜೊತೆ ಹಂಚಿಕೊಳ್ಳದೇ, ಕೇವಲ ಕೇಂದ್ರದ ಕೈಯಲ್ಲೇ ಉಳಿಯುವ ಸೆಸ್, ಸರ್ಚಾರ್ಜ್ ಗಳ ಸಂಖ್ಯೆ ಏರುತ್ತಿದ್ದು, ಅದಕ್ಕೆ ಕಡಿವಾಣ ಹಾಕಿ, ಮೂಲ ತೆರಿಗೆಯ ಲೆಕ್ಕಕ್ಕೆ ಇದನ್ನು ಸೇರಿಸಿ ಬರುವ ಆರ್ಥಿಕ ವರ್ಷದಿಂದ ರಾಜ್ಯಗಳ ಜೊತೆ ಮರಳಿ ಹಂಚಿಕೊಳ್ಳಬೇಕು ಎಂದು ವಾದಿಸಿದರು. ಹಂತ ಹಂತವಾಗಿ ಅಧಿಕಾರದ ತಕ್ಕಡಿ ಕೇಂದ್ರದ ಕೈಯಿಂದ ರಾಜ್ಯಗಳ ಕೈಯತ್ತ ವಾಲುತ್ತಿರುವ ಬದಲಾವಣೆಯನ್ನು ಗುರುತಿಸಿದ ಅವರು, ಇದನ್ನು ದೇಶ ಒಡೆಯುವ ದನಿಯೆಂದು ಕಾಣದೇ, ವೈವಿಧ್ಯತೆ ಮತ್ತು ಪ್ರಜಾಪ್ರಭುತ್ವ ಹೊಂದಿರುವ ದೇಶವಾಗಿ ಭಾರತದ ಒಕ್ಕೂಟ ಮಾಗುತ್ತಿರುವುದರ ಸಂಕೇತ ಎಂದು ಕಾಣಬೇಕೆಂದು ಕರೆ ನೀಡಿದರು.

ಜನರಿಗೆ ನೇರ ಉತ್ತರದಾಯಿತ್ವ ಮತ್ತು ಹೊಣೆಗಾರಿಕೆ ಹೊಂದಿರುವ ರಾಜ್ಯ ಸರ್ಕಾರಗಳ ಈ ಕಾಳಜಿ, ಕಳವಳಗಳನ್ನು ಮೋದಿಯವರು ಗಂಭೀರವಾಗಿ ಪರಿಗಣಿಸಿ ಸೂಕ್ತ ಬದಲಾವಣೆಯತ್ತ ಮುಂದಡಿಯಿಟ್ಟರೆ ರಾಜ್ಯಗಳ ಗಟ್ಟಿ ಬುನಾದಿಯ ಮೇಲೆ ಬಲವಾದ ಭಾರತದ ಒಕ್ಕೂಟ ಎದ್ದು ನಿಲ್ಲಬಹುದು. ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಮೋದಿಯವರಿಗೆ ಇದು ಅರ್ಥವಾಗದ್ದೇನು ಅಲ್ಲ.

Posted in ಒಕ್ಕೂಟ ವ್ಯವಸ್ಥೆ, ISC | ನಿಮ್ಮ ಟಿಪ್ಪಣಿ ಬರೆಯಿರಿ

ದೆಹಲಿ ತಲುಪಿದ ಭಾಷಾ ಸಮಾನತೆಯ ಕೂಗು !

ಇಂದು ಫೆಬ್ರವರಿ 21 ವಿಶ್ವ ತಾಯ್ನುಡಿ ದಿನ. 1952ರಲ್ಲಿ ಬೆಂಗಾಲಿಗಳ ಮೇಲೆ ಉರ್ದು ಹೇರಿಕೆಯನ್ನು ವಿರೋಧಿಸಿ, ಬೆಂಗಾಲಿ ಭಾಷೆಗೂ ಪಾಕಿಸ್ತಾನದ ಅಧಿಕೃತ ಭಾಷೆಯ ಸ್ಥಾನಮಾನ ನೀಡುವಂತೆ ಒತ್ತಾಯಿಸಿ, ಅಂದಿನ ಪೂರ್ವ ಪಾಕಿಸ್ತಾನ, ಇಂದಿನ ಬಾಂಗ್ಲಾದೇಶದ ಢಾಕಾ ನಗರದಲ್ಲಿ ಪೋಲಿಸರ ಗುಂಡಿಗೆ ಎದೆಯೊಡ್ಡಿ ಹುತಾತ್ಮರಾದ ಬೆಂಗಾಲಿ ವಿದ್ಯಾರ್ಥಿಗಳ ನೆನಪಿನಲ್ಲಿ ಈ ದಿನ ಆಚರಿಸಲಾಗುತ್ತದೆ. ಅಂದು ಬೆಂಗಾಲಿಗಳ ಪ್ರಾಮಾಣಿಕವೂ, ನ್ಯಾಯಸಮ್ಮತವೂ ಆದ ಬೇಡಿಕೆಗೆ ಕಿವಿಗೊಡದ ಪಾಕಿಸ್ತಾನ ಮುಂದೆ ಬಾಂಗ್ಲಾದೇಶ ಒಂದು ಪ್ರತ್ಯೇಕ ದೇಶವೇ ಆಗುವುದನ್ನು ನೋಡುವಂತಾಯಿತು. ತಮಾಷೆಯೆಂದರೆ ಉರ್ದು ಪಾಕಿಸ್ತಾನದ ಬಹುಸಂಖ್ಯಾತರ ನುಡಿಯೂ ಅಲ್ಲ . ಅಲ್ಲಿನ ನಾಲ್ಕು ಮುಖ್ಯ ಪ್ರಾಂತ್ಯಗಳಾದ ಬಲೂಚಿಸ್ತಾನ್, ಸಿಂಧ್, ಪಂಜಾಬ್ ಮತ್ತು ನಾರ್ತ್ ವೆಸ್ಟ್ ಫ್ರಂಟಿಯರ್ ಎಲ್ಲವುಗಳಿಗೂ ಅದರದ್ದೇ ಆದ ಭಾಷೆಗಳಿವೆ. ಕೇವಲ 8% ಪಾಕಿಸ್ತಾನಿಗಳ ಭಾಷೆಯಾದ ಉರ್ದುವನ್ನು ಅಲ್ಲಿ ಇತರೆಲ್ಲ ಭಾಷಿಕರ ಮೇಲೆ ಹೇರಿ ವೈವಿಧ್ಯತೆಯನ್ನು ಕೊಲ್ಲುವ ವ್ಯವಸ್ಥಿತ ಪ್ರಯತ್ನ ಪಾಕಿಸ್ತಾನ ಹುಟ್ಟಿದಾಗಿನಿಂದಲೂ ನಡೆಯುತ್ತಿದೆ, ಈಗಲೂ ನಡೆಯುತ್ತಿದೆ. ಬಾಂಗ್ಲಾದೇಶ ಬೇರೆಯಾದಂತೆ ಬಲೂಚಿಸ್ತಾನದಲ್ಲೂ ಉರ್ದು ಹೇರಿಕೆಯ ವಿರುದ್ಧದ ಆಕ್ರೋಶ ಪ್ರತ್ಯೇಕ ದೇಶದ ಚಳುವಳಿಯಾಗಿ ನಡೆಯುತ್ತಿದೆ. ತನ್ನ ಇಂತಹ ತಪ್ಪುಗಳ ಭಾರಕ್ಕೆ ಪಾಕಿಸ್ತಾನ ಒಂದು ದಿನ ಕುಸಿದು ಚೂರಾದರೆ ಅಚ್ಚರಿಯಿಲ್ಲ. ಒಟ್ಟಾರೆ ಭಾಷಾ ಹೇರಿಕೆಯ ಅಡ್ಡಪರಿಣಾಮಗಳು, ಬಹು ಭಾಷಿಕ ದೇಶಗಳಲ್ಲಿ ಭಾಷಾ ಸಮಾನತೆಯನ್ನು ಎತ್ತಿ ಹಿಡಿಯಬೇಕಾದ ಅಗತ್ಯ, ಭಾಷಾ ವೈವಿಧ್ಯತೆಯನ್ನು ಪೊರೆಯುವುದರ ಮಹತ್ವದತ್ತ ವಿಶ್ವದ ಗಮನ ಸೆಳೆಯಲು ಇದೊಂದು ಮುಖ್ಯವಾದ ದಿನ.

ಹಿಂದಿ ಹೇರಿಕೆಯ ತೊಂದರೆ

ಭಾರತದ ಸಂವಿಧಾನ, ಪ್ರಜಾಪ್ರಭುತ್ವದಡಿ ಭಾರತವನ್ನು ಒಂದು ಭಾಷಾವಾರು ಪ್ರಾಂತ್ಯಗಳ ಒಕ್ಕೂಟದ ಕಲ್ಪನೆಯಲ್ಲಿ ಕಂಡು, ಭಾಷಿಕ ರಾಜ್ಯಗಳ ರಚನೆಯ ಮೂಲಕ ಒಂದು ಹಂತದವರೆಗೆ ಭಾರತದ ಬೇರೆ ಬೇರೆ ಭಾಷಿಕರ ಆಶೋತ್ತರಗಳಿಗೆ ಬೆಂಬಲವಾಗಿ ನಿಂತಿದ್ದರಿಂದಲೇ ಭಾರತವನ್ನು ಒಗ್ಗೂಡಿಸುವುದು ಸಾಧ್ಯವಾಯಿತು. ಆದರೆ ಸ್ವಾತಂತ್ರ್ಯ ಬಂದಾಗ ಯುರೋಪಿನಲ್ಲಿ ಹುಚ್ಚೆದ್ದಿದ್ದ “ಒಂದು ದೇಶ, ಒಂದು ಭಾಷೆ” ಅನ್ನುವ ತತ್ವದ ಪ್ರಭಾವವೆಂಬಂತೆ ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ದೇಶಕ್ಕೊಂದು ಭಾಷೆ ಬೇಕು ಮತ್ತದು ಅಂದಿಗೂ, ಇಂದಿಗೂ ದೇಶದ ಕೇವಲ ಕಾಲು ಭಾಗ ಜನರ ಭಾಷೆಯಾಗಿರುವ ಹಿಂದಿಯೇ ಆಗಬೇಕು ಅನ್ನುವ ನಿಲುವು ಭಾರತದಲ್ಲಿ ನಿರಂತರವಾಗಿ ಹಿಂದಿಯೇತರರ ಮೇಲೆ ಹಿಂದಿ ಹೇರಿಕೆಗೆ ಕಾರಣವಾಗಿದೆ. ಇದರ ಪರಿಣಾಮವಾಗಿ ಭಾರತದ ಹಲವಾರು ಹಿಂದಿಯೇತರ ಭಾಷೆಗಳು ತಮ್ಮ ನೆಲೆಯನ್ನು ಕಳೆದುಕೊಂಡು, ತಮ್ಮ ಬಳಕೆಯ ವ್ಯಾಪ್ತಿಯನ್ನು ಕುಗ್ಗಿಸಿಕೊಳ್ಳುತ್ತ ಸಾಗಿವೆ. ಅವುಗಳ ಜಾಗವನ್ನು ಹಿಂದಿ ಆಕ್ರಮಿಸುತ್ತ ಬಂದಿದೆ. ಮನರಂಜನೆ, ಗ್ರಾಹಕ ಸೇವೆ, ನಾಗರೀಕ ಸೇವೆ, ಸುರಕ್ಷತೆ, ಶಿಕ್ಷಣ ಹೀಗೆ ಎಲ್ಲ ಕ್ಷೇತ್ರದಲ್ಲೂ ಇಂದು ಹಿಂದಿ ಭಾಷೆಯ ಯಜಮಾನಿಕೆ ಹಬ್ಬಿದ್ದು ಹಿಂದೀಗಿಂತಲೂ ಹಳೆಯ ಮತ್ತು ಶ್ರೀಮಂತವಾದ ಭಾರತದ ಇತರೆ ಭಾಷೆಗಳು ತಮ್ಮ ನೆಲದಲ್ಲೇ ಅನಾಥವಾಗುವ ಸ್ಥಿತಿಯುಂಟಾಗುತ್ತಿದೆ. ಕರ್ನಾಟಕದಲ್ಲೂ ನಮ್ಮ ಅಂಚೆ ಕಚೇರಿ, ಬ್ಯಾಂಕು, ರೈಲು, ವಿಮಾನ ಸೇವೆ, ಹೆದ್ದಾರಿ, ತೆರಿಗೆ, ಪಿಂಚಣಿ ಇಲಾಖೆಗಳಲ್ಲಿ ಕನ್ನಡ ಕಣ್ಮರೆಯಾಗಿ ಹಿಂದಿ/ಇಂಗ್ಲಿಷಿನಲ್ಲೇ ಆಡಳಿತ ನೆಲೆ ನಿಲ್ಲುತ್ತಿರುವುದರ ಹಿಂದೆ ಈ ಭಾಷಾ ನೀತಿಯ ಪಾತ್ರವಿದೆ. ಹಿಂದಿ ಬಳಸುವ ಅಧಿಕಾರಿಗಳಿಗೆ ಬಹುಮಾನ, ಬಡ್ತಿ, ಪ್ರಶಸ್ತಿ ನೀಡುವ ಕ್ರಮದಿಂದಾಗಿ ಕನ್ನಡ ಬಲ್ಲ ಅಧಿಕಾರಿಗಳು ಹಿಂದಿ ಬಳಸಲೇಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ. ಇದರಿಂದ ಸಾಮಾನ್ಯ ಜನರಿಗೆ, ಅದರಲ್ಲೂ ಕನ್ನಡವೊಂದನ್ನೇ ಬಲ್ಲ ಜನರಿಗೆ ಆಗುತ್ತಿರುವ ತೊಂದರೆ ಒಂದು ದೊಡ್ಡ ಮಾನವ ಹಕ್ಕುಗಳ ಉಲ್ಲಂಘನೆಯೇ ಸರಿ. ಈ ಬಗ್ಗೆ ಕರ್ನಾಟಕದ ಜನಪ್ರತಿನಿಧಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ಒಂದಿಷ್ಟು ಎಚ್ಚರ ಮೂಡುತ್ತಿದೆಯಾದರೂ ಅದು ಭಾರತದ ಹುಳುಕಿನ ಭಾಷಾ ನೀತಿಯ ಬದಲಾವಣೆಗೆ ಒತ್ತಾಯಿಸುವಷ್ಟು ತೀವ್ರವಾಗಿ ಈ ಹೊತ್ತಿನಲ್ಲಿಲ್ಲ. ಇದು ಸಾಧ್ಯವಾಗಲು ಜನಸಾಮಾನ್ಯರ ಹೋರಾಟ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಕನ್ನಡಿಗರೂ ಈಗ ಎಚ್ಚೆತ್ತುಕೊಳ್ಳುತ್ತಿದ್ದಾರೆ.

ಭಾಷಾ ಸಮಾನತೆಗಾಗಿ ದನಿ

ಹಿಂದಿ ಹೇರಿಕೆಯನ್ನು ವಿರೋಧಿಸಿ ಈ ಹಿಂದೆ ಚದುರಿದಂತೆ ಅಲ್ಲಲ್ಲಿ ಏಳುತ್ತಿದ್ದ ಪ್ರತಿರೋಧ ಈಗ ಸಾಕಷ್ಟು ವ್ಯವಸ್ಥಿತವಾಗಿ ರೂಪುಗೊಳ್ಳುತ್ತಿದೆ. ತಮಿಳರು, ಬೆಂಗಾಲಿಗಳು, ಪಂಜಾಬಿಗಳು, ಕನ್ನಡಿಗರು, ಮಲೆಯಾಳಿಗಳು, ಮರಾಠಿಗರು ಹೀಗೆ ಹಲವು ಭಾಷಿಕರು ನ್ಯಾಯಸಮ್ಮತವಾಗಿ ತಮ್ಮ ಭಾಷೆಗೆ ದಕ್ಕಬೇಕಿರುವ ಹಕ್ಕುಗಳಿಗಾಗಿ, ಹಿಂದಿ/ಇಂಗ್ಲಿಷಿಗೆ ಇರುವ ಸ್ಥಾನಮಾನಕ್ಕೆ ಸಮಾನವಾದ ಸ್ಥಾನಮಾನಕ್ಕಾಗಿ ದನಿ ಎತ್ತುವ ಬೆಳವಣಿಗೆ ಕಳೆದ ಹತ್ತು ವರ್ಷಗಳಿಂದ ವ್ಯಾಪಕಗೊಳ್ಳುತ್ತಿದೆ. ಕಳೆದ ವರ್ಷ ಆಗಸ್ಟ್ 15, ಈ ವರ್ಷದ ಜನವರಿ 26ರಂದು ಎರಡು ಬಾರಿ ಸಾಮಾಜಿಕ ತಾಣ ಟ್ವಿಟರಿನಲ್ಲಿ ಹಿಂದಿ ಹೇರಿಕೆಗೆ ತಡೆಯೊಡ್ಡಿ, ಭಾರತದ ಎಲ್ಲ ಭಾಷೆಗಳಿಗೂ ಸDelhi Demandsಮಾನ ಸ್ಥಾನಮಾನ ನೀಡುವಂತೆ ಆಗ್ರಹಿಸುವ ಅಭಿಯಾನಕ್ಕೆ ದೊಡ್ಡ ಮಟ್ಟದ ಸ್ಪಂದನೆ ಕಂಡು ಬಂದಿದ್ದು, ಅದು ಭಾರತದ ಮಟ್ಟದಲ್ಲಿ ಟ್ವಿಟರಿನಲ್ಲಿ ಟ್ರೆಂಡ್ ಆಗುವ ಮೂಲಕ ಮೂಲೆಗುಂಪಾಗಿದ್ದ ನಮ್ಮ ಭಾಷೆಗಳ ದನಿ ಮತ್ತೆ ಕೇಳಿ ಬರುವಂತಾಗಿದೆ. ಚೆನ್ನೈನಲ್ಲಿ ಕಳೆದ ಸೆಪ್ಟೆಂಬರಿನಲ್ಲಿ ನಡೆದ ಭಾಷಾ ಸಮ್ಮೇಳನದಲ್ಲಿ ತಮಿಳು, ಮಲಯಾಳಂ, ಮರಾಠಿ, ಕನ್ನಡ, ಬೆಂಗಾಲಿ ಮತ್ತು ಪಂಜಾಬಿ ಭಾಷಿಕರು ಒಂದೆಡೆ ಸೇರಿ “ಚೆನ್ನೈ ಭಾಷಾ ಹಕ್ಕುಗಳ ಘೋಷಣೆ”ಯನ್ನು ಹೊರ ತಂದಿದ್ದರು. ಈ ಘೋಷಣೆಯಲ್ಲಿ ಭಾರತದ ಸಂವಿಧಾನದ ಎಂಟನೆಯ ಪರಿಚ್ಛೇದದಲ್ಲಿರುವ ಎಲ್ಲ 22 ಭಾಷೆಗಳಿಗೂ ಕೇಂದ್ರ ಆಡಳಿತ ಭಾಷೆಯ ಸ್ಥಾನಮಾನಕ್ಕೆ ಆಗ್ರಹಿಸಲಾಗಿತ್ತು. ಅಲ್ಲದೇ ಎಂಟನೆಯ ಪರಿಚ್ಛೇದಕ್ಕೆ ಸೇರಲು ಪ್ರಯತ್ನಿಸುತ್ತಿರುವ ತುಳು, ರಾಜಸ್ಥಾನಿ ಮುಂತಾದ ಭಾಷೆಗಳ ಹೋರಾಟಕ್ಕೆ ಬೆಂಬಲ ಸೂಚಿಸಲಾಗಿತ್ತು. ಇದರೊಂದಿಗೆ ಭಾರತದ ಭಾಷೆಗಳಲ್ಲಿ ಶಿಕ್ಷಣ, ಚಿಕ್ಕಪುಟ್ಟ ಭಾಷೆಗಳಿಗೆ ಸಂವಿಧಾನಿಕ ರಕ್ಷಣೆ ಮುಂತಾದ ಬೇಡಿಕೆಗಳಿಗೂ ಸಹಮತ ವ್ಯಕ್ತವಾಗಿತ್ತು. ಈಗ ಮುಂದುವರೆದು ಇದೇ ಫೆಬ್ರವರಿ 21ರಂದು ನಡೆಯುವ ವಿಶ್ವ ತಾಯ್ನುಡಿ ದಿನವನ್ನು ದೆಹಲಿಯಲ್ಲಿ ಆಚರಿಸುವ ನಿರ್ಧಾರವನ್ನು ಈ ಉದ್ದೇಶದತ್ತ ಎಲ್ಲ ಭಾಷಿಕರನ್ನು ಒಳಗೊಂಡು ಕೆಲಸ ಮಾಡುತ್ತಿರುವ ಸೆಂಟರ್ ಫಾರ್ ಲ್ಯಾಂಗ್ವೆಜ್ ಈಕ್ವಾಲಿಟಿ ಆಂಡ್ ರೈಟ್ಸ್ (ಕ್ಲಿಯರ್) ಸಂಸ್ಥೆ ಕೈಗೊಂಡಿದೆ. ಅಂದು ದೆಹಲಿಯ ಪ್ರೆಸ್ ಕ್ಲಬ್ ಆವರಣದಲ್ಲಿ “ಡೆಲ್ಲಿ ಡಿಮಾಂಡ್ಸ್” ಹೆಸರಿನ ಭಾಷಾ ಹಕ್ಕುಗಳ ಘೋಷಣಾಪತ್ರವನ್ನು ಬಿಡುಗಡೆ ಮಾಡಲಾಗುತ್ತಿದ್ದು, ಈ ಕಾರ್ಯಕ್ರಮದಲ್ಲಿ ಭಾರತದ ನಲ್ವತ್ತಕ್ಕೂ ಹೆಚ್ಚು ಭಾಷೆಯ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಕರ್ನಾಟಕದಿಂದ ತುಳು, ಕೊಂಕಣಿ ಮತ್ತು ಕನ್ನಡ ಭಾಷೆಯ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಅದೇ ದಿನ ಸಂಜೆ ಜಂತರ್ ಮಂತರಿನಲ್ಲಿ ಸಂಜೆ 5ಕ್ಕೆ ಭಾಷಿಕ ಹಕ್ಕುಗಳ ಹೋರಾಟದಲ್ಲಿ ಪ್ರಾಣ ತ್ಯಾಗ ಮಾಡಿದ ಭಾರತೀಯರ ಸ್ಮರಣೆಯಲ್ಲಿ ಮೊಂಬತ್ತಿ ಬೆಳಗುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಒಟ್ಟಾರೆ ಭಾರತದ ಭಾಷೆಗಳೆಲ್ಲದರ ಬಗ್ಗೆ ಕಾಳಜಿಯುಳ್ಳ ಈ ಹೋರಾಟ ಸಂಸತ್ತನ್ನು ಪ್ರವೇಶಿಸಿ ಭಾಷಾ ನೀತಿ ಬದಲಾಯಿಸುವ, ಎಲ್ಲ ಭಾಷೆಗಳಿಗೂ ಸಮಾನ ಸ್ಥಾನಮಾನ ಕಲ್ಪಿಸುವ ಹೋರಾಟದ ಮೊದಲ ದೊಡ್ಡ ಹೆಜ್ಜೆ ಇದಾಗಲಿದೆ.

 

Posted in ಒಕ್ಕೂಟ ವ್ಯವಸ್ಥೆ, ಕನ್ನಡ, ಹಿಂದಿ ಹೇರಿಕೆ | 1 ಟಿಪ್ಪಣಿ

ಇನ್ವೆಸ್ಟ್ ಕರ್ನಾಟಕ ಮತ್ತು ಕನ್ನಡಿಗರ ಹಿತ

ಇನ್ವೆಸ್ಟ್ ಕರ್ನಾಟಕ ಅನ್ನುವ ಹೆಸರಿನಲ್ಲಿ ಕರ್ನಾಟಕಕ್ಕೆ ಬಂಡವಾಳ ಹೂಡಿಕೆದಾರರನ್ನು ಸೆಳೆಯುವ ಪ್ರಯತ್ನ ಕರ್ನಾಟಕ ಸರ್ಕಾರ ಅತ್ಯಂತ ಪರಿಶ್ರಮದಿಂದ ಮಾಡುತ್ತಿದೆ. ಮೂರು ದಿನಗಳ ಕಾಲ ನಡೆಯುವ ಈ ಸಮಾವೇಶಕ್ಕೆ ಪ್ರಪಂಚದ ಹಲವು ದೇಶಗಳಿಂದ, ಹೊರ ರಾಜ್ಯಗಳಿಂದ ಹೂಡಿಕೆದಾರರನ್ನು ಸೆಳೆಯಲು ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆಯವರು ಹಲವು ತಿಂಗಳುಗಳಿಂದ ಕೆಲಸ ಮಾಡುತ್ತಿರುವುದು ಎಲ್ಲರೂ ಬಲ್ಲರು. ಇವರ ಪ್ರಯತ್ನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒತ್ತಾಸೆಯಾಗಿ ನಿಂತಿದ್ದಾರೆ. ಕರ್ನಾಟಕವನ್ನು ಉದ್ಯಮಸ್ನೇಹಿ ರಾಜ್ಯವಾಗಿ ತೋರಿಸುವತ್ತಲಿನ ಇವರ ಶ್ರಮವನ್ನು ಮೆಚ್ಚಿಕೊಳ್ಳುತ್ತಲೇ ಕೆಲವು ಮೂಲಭೂತವಾದ ಪ್ರಶ್ನೆಗಳನ್ನು ಕನ್ನಡಿಗರು ಕೇಳಬೇಕಿದೆ.

ಹೂಡಿಕೆ ಸೆಳೆಯುವತ್ತ ಒಂದು ಹಿನ್ನೋಟ

ಮೈಸೂರು ಮಹಾರಾಜರ ಕಾಲದಿಂದಲೂ ಕರ್ನಾಟಕ ಒಂದು ಉದ್ಯಮಸ್ನೇಹಿ ರಾಜ್ಯವಾಗಿಯೇ ಗುರುತಿಸಿಕೊಂಡಿದೆ. ಸ್ವಾತಂತ್ರ್ಯಕ್ಕೆ ಮುಂಚೆಯೇ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಮೈಸೂರು ಲ್ಯಾಂಪ್ಸ್, ಮೈಸೂರು ಸ್ಯಾಂಡಲ್ ಸೋಪ್, ಭದ್ರಾವತಿ ಉಕ್ಕಿನ ಕಾರ್ಖಾನೆ, ಮೈಸೂರು ರೈಲ್ವೇಸ್ ಸೇರಿದಂತೆ ಹಲವು ಉದ್ಯಮ ಸ್ಥಾಪಿಸುವ ಮೂಲಕ ಕನ್ನಡಿಗರ ಉದ್ಯಮಶೀಲತೆಯನ್ನು 20ನೇ ಶತಮಾನದ ಆರಂಭದಲ್ಲಿ ಮುನ್ನೆಲೆಗೆ ತರುವ ಎಲ್ಲ ಪ್ರಯತ್ನಗಳನ್ನು ಮಹಾರಾಜರು ಮತ್ತು ಅವರ ಸಮರ್ಥ ದಿವಾನರು ಮಾಡಿದ್ದರು. ಇದಲ್ಲದೇ ವಿಮಾನ ಕಾರ್ಖಾನೆ ಸ್ಥಾಪಿಸುವ ಆಸೆ ಹೊತ್ತು ಬರೋಡಾ, ಗ್ವಾಲೀಯರ್, ಭಾವನಗರ ಸಂಸ್ಥಾನಗಳನ್ನು ಅಲೆದು ಮೈಸೂರಿನ ಮಹಾರಾಜರ ಬಳಿ ಬಂದಿದ್ದ ವಾಲಚಂದ್ ಹೀರಾಚಂದ್ ಅವರ ಕನಸಿಗೆ ನೀರೆರೆದು 25 ಲಕ್ಷ ರೂಪಾಯಿ ಹೂಡಿಕೆ ಮತ್ತು 700 ಎಕರೆ ಉಚಿತ ಭೂಮಿ ಕೊಡುವ ಮೂಲಕ ಹಿಂದೂಸ್ಥಾನ್ ಏರ್ ಕ್ರಾಫ್ಟ್ ಸಂಸ್ಥೆಯ ಸ್ಥಾಪನೆಗೆ ಬಲತುಂಬಿದ್ದು ಅಂದಿನ ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ ಅವರು. ಉದ್ಯಮಶೀಲತೆಯ ವಿಷಯಕ್ಕೆ ಬಂದಾಗ ಇಂತಹದೊಂದು ಭವ್ಯ ಇತಿಹಾಸ ನಮ್ಮ ನಾಡಿಗಿದೆ. ಸ್ವಾತಂತ್ರ್ಯ ಬಂದ ನಂತರ ಕೇಂದ್ರ ಸರ್ಕಾರದ ರಾಷ್ಟ್ರೀಕರಣದ ಹೊಡೆತಕ್ಕೆ ಸಿಲುಕಿ ಕನ್ನಡಿಗರ ಹಿಡಿತದಲ್ಲಿದ್ದ ಎಲ್ಲ ಉದ್ಯಮಗಳು ಕನ್ನಡಿಗರ ಕೈ ತಪ್ಪಿ ಹೋಗಿದ್ದು ಒಂದು ದುರಂತವೇ ಹೌದು. ಇದಾದ ನಂತರ ಭಾರತ ಜಾಗತೀಕರಣಕ್ಕೆ ತೆರೆದುಕೊಂಡ ನಂತರ ಅರ್ಥ ವ್ಯವಸ್ಥೆಯಲ್ಲಿ ಮತ್ತೆ ಖಾಸಗಿ ಬಂಡವಾಳದ ಹರಿವು ಶುರುವಾಯಿತು. ಶಿಕ್ಷಣ ಮತ್ತು ಉದ್ಯಮದ ವಿಷಯದಲ್ಲಿ ಮೈಸೂರಿನ ಅರಸರು ಹಾಕಿ ಹೋಗಿದ್ದ ಅಡಿಪಾಯದ ಮೇಲೆ ಬೆಂಗಳೂರಿಗೆ ಐಟಿ, ಬಿಟಿ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಬಂಡವಾಳ ಹರಿದು ಬಂತು ಮತ್ತು ಜೊತೆಯಲ್ಲೇ ಇಂತಹ ಬಂಡವಾಳದ ಹರಿವನ್ನು ಪ್ರೋತ್ಸಾಹಿಸುವುದೇ ಜನಪರ, ಅಭಿವೃದ್ಧಿ ಪರ ಎಂದು ಕಾಣಿಸಿಕೊಳ್ಳಲು ಇರುವ ದಾರಿಯೆಂಬ ಅನಿಸಿಕೆ ಕರ್ನಾಟಕದ ರಾಜಕೀಯದ ವಲಯದಲ್ಲೂ ಸ್ಥಾಪಿತವಾಯಿತು. ಬೆಂಗಳೂರು ಐಟಿ ಮೇಳದಿಂದ ಶುರುವಾಗಿ ಅನೇಕ ಜಾಗತೀಕ ಬಂಡವಾಳ ಹೂಡಿಕೆದಾರರ ಸಮಾವೇಶಗಳ ನಂತರ ಈಗ ಇನ್ವೆಸ್ಟ್ ಕರ್ನಾಟಕ ಅನ್ನುವ ಹೆಸರಿನಲ್ಲಿ ಹೂಡಿಕೆ ಸೆಳೆಯುವ ಈ ಪಯಣ ಬಂದು ನಿಂತಿದೆ.

ಕನ್ನಡಿಗರ ಉದ್ಯಮಶೀಲತೆ ಬೆಳೆಸುವುದು ಹೀಗಾ?

ಯಾವುದೇ ನಾಡಿನ ಸರ್ಕಾರ ತನ್ನ ನೆಲದಲ್ಲಿ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಲು ಇರುವ ಕಾರಣಗಳೇನು? ತನ್ನ ಜನರು ಉದ್ಯಮಿಗಳಾಗಬೇಕು, ತನ್ನ ನೆಲದ ಮಕ್ಕಳಿಗೆ ಈ ಉದ್ಯಮಗಳಲ್ಲಿ ಉದ್ಯೋಗ ದೊರೆಯಬೇಕು, ಅವರ ಏಳಿಗೆ ಸರ್ಕಾರಕ್ಕೆ ತೆರಿಗೆ ಆದಾಯ ತರಬೇಕು, ಒಟ್ಟಾರೆ ಇವೆಲ್ಲದರಿಂದ ನಾಡು ಏಳಿಗೆ ಹೊಂದಬೇಕು ಅನ್ನುವುದಲ್ಲವೇ? ಹಾಗಿದ್ದರೆ ಕರ್ನಾಟಕದಲ್ಲಿ ಈ ಬಾರಿ ನಡೆಯುತ್ತಿರುವ ಇನ್ವೆಸ್ಟ್ ಕರ್ನಾಟಕ ಸೇರಿದಂತೆ ಕಳೆದ ಹದಿನೈದು ಇಪ್ಪತ್ತು ವರ್ಷಗಳಿಂದ ನಡೆಯುತ್ತಿರುವ ಇಂತಹ ಹೂಡಿಕೆದಾರರ ಸಮಾವೇಶ ಎಷ್ಟರ ಮಟ್ಟಿಗೆ ಕನ್ನಡಿಗ ಉದ್ಯಮಿಗಳನ್ನು ಬೆಳೆಸುವ ಕೆಲಸ ಮಾಡಿದೆ? ಎಷ್ಟರ ಮಟ್ಟಿಗೆ ಕನ್ನಡಿಗರಿಗೆ ಇಲ್ಲಿ ಹುಟ್ಟುವ ಉದ್ಯೋಗಗಳ ಲಾಭ ದೊರೆಯುವಂತೆ ನೋಡಿಕೊಂಡಿದೆ? ಇನ್ವೆಸ್ಟ್ ಕರ್ನಾಟಕ 2016ರ ಗುರಿಯನ್ನು ಗಮನಿಸಿದರೆ ಅಲ್ಲಿ ಕಾಣುವುದು ಕರ್ನಾಟಕವನ್ನು ಹೊರಗಿನ ಬಂಡವಾಳದಾರರಿಗೆ ಒಂದು ಆಕರ್ಷಕ ಹೂಡಿಕೆ ತಾಣದಂತೆ ತೋರಿಸುವುದು ಮತ್ತು ಸರ್ಕಾರದ ಲಕ್ಷ್ಯವಿರುವ ಕ್ಷೇತ್ರಗಳಲ್ಲಿ ಬಂಡವಾಳ ಹೂಡುವಂತೆ ಮನವೊಲಿಸುವುದಾಗಿದೆ. ಹೊರಗಿನ ಬಂಡವಾಳ, ಅದರಲ್ಲೂ ಸಾವಿರಾರು ಕೋಟಿ ಹೂಡುವ ದೊಡ್ಡ ಉದ್ಯಮಗಳನ್ನು ಕರ್ನಾಟಕದತ್ತ ಸೆಳೆಯುವುದೇ ಉದ್ಯಮಸ್ನೇಹಿಯಾಗಿ ಕರ್ನಾಟಕವನ್ನು ತೋರಿಸುವ ದಾರಿ ಎಂದು ನಮ್ಮ ಸರ್ಕಾರ ನಂಬಿಕೊಂಡಿದೆ. ಇದಕ್ಕೆ ಈ ಹಿಂದಿನ ಸರ್ಕಾರಗಳೂ ಹೊರತಲ್ಲ. ಆದರೆ ಇದೊಂದು ದೂರಾಲೋಚನೆಯಿಲ್ಲದ ಚಿಂತನೆ. ಒಂದು ನಾಡಿನ ಏಳಿಗೆ ಸಾಧ್ಯವಾಗುವುದು ಸಾವಿರಾರು ಕೋಟಿ ಬಂಡವಾಳ ಹೂಡುವ ನಾಲ್ಕೋ ಐದೋ ದೊಡ್ಡ ಉದ್ಯಮಗಳಿಂದಲ್ಲ. ಬದಲಿಗೆ, ಸಾವಿರಾರು ಸಂಖ್ಯೆಯಲ್ಲಿ ಅತ್ಯಂತ ಕ್ರಿಯಾಶೀಲವಾದ ಚಿಕ್ಕ ಮತ್ತು ನಡು ಗಾತ್ರದ ಉದ್ಯಮಗಳು ಹುಟ್ಟಿಕೊಳ್ಳುವುದರಿಂದ. ಇಂತಹ ಉದ್ಯಮಗಳೇ ಸ್ಥಳೀಯವಾಗಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಹುಟ್ಟು ಹಾಕುತ್ತವೆ. ಆದರೆ ನಮ್ಮ ಸರ್ಕಾರಗಳ ಗಮನ ಅವರತ್ತ ಹರಿದಿಲ್ಲ. ಯಾಕೆಂದರೆ ಹೂಡಿಕೆದಾರರ ಸಮಾವೇಶ ಮುಗಿದಾಗ ಲಕ್ಷ ಕೋಟಿಯ ಲೆಕ್ಕದಲ್ಲಿ ಹೂಡಿಕೆ ಹರಿದು ಬಂದಿದೆ ಎಂದು ಜನರನ್ನು ನಂಬಿಸಲು ಅವರಿಗೆ ಬೇಕಿರುವುದು ದೊಡ್ಡ ಹೂಡಿಕೆದಾರರೇ ಹೊರತು ಇಂತಹ ಚಿಕ್ಕ ಉದ್ಯಮಿಗಳಲ್ಲ. ಹೊರಗಿನ ದೊಡ್ಡ ಬಂಡವಾಳಕ್ಕೆ ಮಣೆ ಹಾಕುವಾಗ ಸಹಜವಾಗಿಯೇ ಅಂತಹ ಶಕ್ತಿಯಿಲ್ಲದ ಚಿಕ್ಕ ಪುಟ್ಟ ಕನ್ನಡದ ಉದ್ಯಮಿಗಳು ಮೂಲೆಗುಂಪಾಗಿ, ಹೊರಗಿನ ಕನ್ನಡೇತರ ಉದ್ಯಮಿಗಳು ಕರ್ನಾಟಕದಲ್ಲಿ ಹೆಚ್ಚು ಬಲಗೊಳ್ಳುತ್ತಾರೆ. ಬೆಂಗಳೂರಿನ ರಾಜಕೀಯವನ್ನು ನಿಯಂತ್ರಿಸಲು ಪ್ರಯತ್ನಿಸುವ ಕನ್ನಡೇತರ ಉದ್ಯಮಿಗಳನ್ನು ಕಂಡವರಿಗೆ ಇದು ಅರ್ಥವಾಗದಿರದು. ಇನ್ನೊಂದೆಡೆ ಉದ್ಯಮಿಗಳು ಹೊರಗಿನವರಾದಷ್ಟು ಅವರ ಭಾಷೆ, ಸಂಸ್ಕೃತಿಯ ಪ್ರಭಾವವೂ ನಮ್ಮ ನೆಲದ ಮೇಲೆ ಹೆಚ್ಚುತ್ತದೆ ಹಾಗೂ ಕನ್ನಡ, ಕನ್ನಡಿಗರ ಪರ ಸರ್ಕಾರ ಯಾವುದೇ ನಿಲುವು ಕೈಗೊಳ್ಳುವ ಪ್ರಯತ್ನ ಮಾಡಿದಾಗಲೂ ಅದಕ್ಕೆ ಈ ಉದ್ಯಮಿಗಳಿಂದ ವಿರೋಧ ವ್ಯಕ್ತವಾಗುತ್ತದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವ ಬಗ್ಗೆ ಸರ್ಕಾರಕ್ಕೆ ಸಲ್ಲಿಕೆಯಾದ ವರದಿಗೆ ಈ ಕನ್ನಡೇತರ ವಲಯದಿಂದ ವ್ಯಕ್ತವಾದ ವಿರೋಧವನ್ನು ಇಲ್ಲಿ ನೆನೆಯಬಹುದು.

ಕನ್ನಡಿಗರಿಗೆ ಉದ್ಯೋಗ ಯಾಕಿಲ್ಲ?

ಕನ್ನಡಿಗರಲ್ಲಿ ಉದ್ಯಮಶೀಲತೆ ಬೆಳೆಸುವ ತೊಂದರೆಯದ್ದು ಒಂದು ತೂಕವಾದರೆ ಹೊರಗಿನ ಬಂಡವಾಳದಿಂದ ಹುಟ್ಟುವ ಕೆಲಸಗಳು ಸ್ಥಳೀಯರಿಗೆ ಸಿಗದಿರುವ ದುರಂತದ್ದೇ ಇನ್ನೊಂದು ತೂಕ. ಇಲ್ಲಿಯವರೆಗಿನ ಯಾವ ಬಂಡವಾಳ ಹೂಡಿಕೆ ಸಮಾವೇಶಗಳು ಬಂದಿದ್ದ ಸಂಸ್ಥೆಗಳಿಗೆ ಪ್ರತಿಭಾವಂತ ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಿ ಎಂದು ಹೇಳುವ ಧೈರ್ಯ ತೋರಿಲ್ಲ. ಅದರ ಫಲವಾಗಿ ಇಂದು ಐಟಿ, ಬಿಟಿ ಬಿಡಿ, ಕರ್ನಾಟಕದ ಇತರೆ ಭಾಗಗಳಲ್ಲಿ ಸ್ಥಾಪನೆಯಾಗಿರುವ ಉಷ್ಣ ವಿದ್ಯುತ್ ಸ್ಥಾವರ, ಸ್ಟೀಲ್ ಕಾರ್ಖಾನೆಯಂತಹ ಉದ್ಯಮಗಳಲ್ಲೂ ಕನ್ನಡೇತರರೇ ತುಂಬಿ ತುಳುಕುತ್ತಿದ್ದಾರೆ. ಒಂದೆಡೆ ಉಚಿತ ಭೂಮಿ, ಉಚಿತ ವಿದ್ಯುತ್, ಉಚಿತ ನೀರು, ತೆರಿಗೆ ವಿನಾಯ್ತಿಯಂತಹ ಸೌಲಭ್ಯಗಳ ಲಾಭ ಪಡೆಯುವ ಹೊರಗಿನ ಬಂಡವಾಳದಾರರು,ಇನ್ನೊಂದೆಡೆ ಅವರು ಹುಟ್ಟು ಹಾಕುವ ಕೆಲಸದ ಬಹುಪಾಲು ಹೊರಗಿನವರಿಗೆ ದೊರೆಯುತ್ತಿರುವಾಗ ಇಂತಹ ಸಮಾವೇಶಗಳನ್ನು ಕನ್ನಡಿಗರ ಸರ್ಕಾರ ಹಮ್ಮಿಕೊಳ್ಳುವುದು ನಿಜಕ್ಕೂ ಯಾವ ಪುರುಷಾರ್ಥಕ್ಕಾಗಿ ಅನ್ನುವ ಪ್ರಶ್ನೆ ಏಳುವುದಿಲ್ಲವೇ? ಈಗಾಗಲೇ ಜನಸಂಖ್ಯೆಯ ಬೆಳವಣಿಗೆಯ ದರ ಋಣಾತ್ಮಕವಾಗಿ ಸಾಗುತ್ತಿರುವ ಕರ್ನಾಟಕಕ್ಕೆ ಇತಿಮಿತಿಯಿಲ್ಲದ ಪರಭಾಷಿಕರ ವಲಸೆ ಮುಂದೊಂದು ದಿನ ದೊಡ್ಡ ಗಂಡಾಂತರವನ್ನೇ ತರಲಿದೆ. ಹೂಡಿಕೆದಾರರ ಸಮಾವೇಶದಲ್ಲಿ ಮುಳುಗಿರುವ ಸರ್ಕಾರಕ್ಕೆ ಕನ್ನಡಿಗರ ಕಣ್ಣಿನಿಂದ ಇದನ್ನೆಲ್ಲ ಎಂದಿಗಾದರೂ ನೋಡಲು ಸಾಧ್ಯವಾದಿತೇ?

Posted in ಕರ್ನಾಟಕ, Capital | ನಿಮ್ಮ ಟಿಪ್ಪಣಿ ಬರೆಯಿರಿ

“ಕನ್ನಡ ಜಗತ್ತು” ಪುಸ್ತಕದ ಬಗ್ಗೆ ವೈ.ಎಸ್.ವಿ ದತ್ತಾ ಅವರ ಅನಿಸಿಕೆಗಳು

ಡಿಸೆಂಬರ್ 12, ಶನಿವಾರ ಬನವಾಸಿ ಬಳಗ ಪ್ರಕಾಶನದಿಂದ ನನ್ನ “ಕನ್ನಡ ಜಗತ್ತು” ಪುಸ್ತಕ ಬಿಡುಗಡೆಯಾಯಿತು. ಈ ಕಾರ್ಯಕ್ರಮದ ಅತಿಥಿಗಳಲ್ಲಿ ಒಬ್ಬರಾಗಿದ್ದ ಶಾಸಕರು, ಜಾತ್ಯಾತೀತ ಜನತಾದಳದ ಹಿರಿಯ ನಾಯಕರು ಆದ ವೈ.ಎಸ್.ವಿ ದತ್ತಾ ಅವರು ಕಾರಣಾಂತರಗಳಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗದ ಕಾರಣ ಪುಸ್ತಕದ ಬಗೆಗಿನ ತಮ್ಮ ಅನಿಸಿಕೆಯನ್ನು ಪತ್ರದ ಮೂಲಕ ಬರೆದು ಕಳಿಸಿದ್ದರು. ಆ ಪತ್ರದಲ್ಲಿ ಕರ್ನಾಟಕದ, ಕನ್ನಡಿಗರ ಸಮಸ್ಯೆಗಳ ಬಗ್ಗೆ ಅವರ ಅರ್ಥಪೂರ್ಣ ಅನಿಸಿಕೆಗಳು ಇದ್ದ ಕಾರಣ ಅದನ್ನು ಮುನ್ನೋಟದ ಓದುಗರಿಗಾಗಿ ಇಲ್ಲಿ ಪ್ರಕಟಿಸುತ್ತಿರುವೆ.

-ಸಂಪಾದಕ


ಆತ್ಮಿಯರೇ,

ಗೆಳೆಯ ವಸಂತ ಶೆಟ್ಟಿಯವರ “ಕನ್ನಡ ಜಗತ್ತು” ಕ್ರತಿಯ ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ವೇದಿಕೆ ಮೇಲಿನ ಗಣ್ಯರಾದ ಶ್ರೀ ರವಿ ಹೆಗಡೆಯವರೆ, ಶ್ರೀ. ರಾಮಕ್ರಷ್ಣ ಉಪಾಧ್ಯ ಅವರೇ, ಹಾಗೂ ಭಾಗವಹಿಸಿರುವ ಕನ್ನಡದ ಮನಸ್ಸುಗಳೇ, ನಿಮಗೆ ನನ್ನ ಅಭಿನಂದನೆಗಳು. ಈ ಕಾರ್ಯಕ್ರಮದಲ್ಲಿ ನಾನು ಅನಿವಾರ್ಯ ಕಾರಣಗಳಿಂದಾಗಿ ಭಾಗವಹಿಸಲಾಗುತ್ತಿಲ್ಲ. ಹಾಗಾಗಿ ನನ್ನ ತಪ್ಪನ್ನು ತಾವೆಲ್ಲರೂ ಕ್ಷಮಿಸಬೇಕಾಗಿ ಕೋರುತ್ತೇನೆ.

ಕನ್ನಡದ ಭಾಷೆ, ಇತಿಹಾಸ, ಕನ್ನಡಕ್ಕೆ ಎದುರಾಗಿರುವ ಸಮಸ್ಯೆಗಳು, ಸವಾಲುಗಳು, ಅವುಗಳಿಗಿರುವ ಪರಿಹಾರಗಳೂ – ಹೀಗೆ, ಕನ್ನಡ ಪರವಾದ ಆಲೋಚನೆ ಮತ್ತು ಆಂದೋಲನಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ವಸಂತ ಅವರು ತಮ್ಮ ಆಲೋಚನೆಗಳನ್ನು ಉದಯವಾಣಿ ಪತ್ರಿಕೆಯಲ್ಲಿ ಅಂಕಣ ರೂಪದಲ್ಲಿ ನಮ್ಮಂತವರೊಂದಿಗೆ ಹಂಚಿಕೊಂಡು ಬಂದಿದ್ದಾರೆ. ಆ ಅಂಕಣಗಳ ಸಂಗ್ರಹವೇ ಇಂದು ಬಿಡುಗಡೆಯಾಗುತ್ತಿರುವ “ಕನ್ನಡ ಜಗತ್ತು”

ಮೊದಲಿಗೆ ಕನ್ನಡ ಜಗತ್ತು ಆಗಲೇಬೇಕಾದ ವಾಸ್ತವದೆಡೆಗೆ ನಮ್ಮ ಗಮನ ಸೆಳೆಯುತ್ತದೆ. ಜಾಗತೀಕರಣದ ನಂತರ ಇಡೀ ಜಗತ್ತೇ ಒಂದು ಹಿಡಿ ಗಾತ್ರಕ್ಕೆ ಇಳಿದಿರುವಾಗ, ಮತ್ತು ಅದರಿಂದಾಗಿ ಸೊಗಡು, ಸೊಬಗು, ಸೊಗಸು ಎಂಬ ಪ್ರಾದೇಶಿಕ ಅಂಶಗಳು ಮಾಯವಾಗತೊಡಗಿದಾಗ ಒಂದು ಪುಟ್ಟ ವ್ಯವಸ್ಥೆ ಹೇಗೆ ಜಗತ್ತಾಗಿ ಉಳಿಯುವುದು ಅನಿವಾರ್ಯವೆನ್ನುವುದನ್ನು ಈ ಪುಸ್ತಕ ಸಾರುತ್ತದೆ. ಕನ್ನಡ, ಜಗತ್ತಿನ ಒಂದು ಪುಟ್ಟ ಭಾಗ, ಆದರೆ ಅದು ಜಾಗತೀಕರಣದ ಹೊಡೆತದಲ್ಲಿ ಪುಟ್ಟ ಭಾಗವಾಗಿ ಕರಗಿ ಹೋಗದೇ, ಅದೇ ಒಂದು ಜಗತ್ತಾಗಿ ಉಳಿಯಬೇಕಾಗಿದದ್ದು ಇಂದಿನ ಸವಾಲಾಗಿದೆ. ಇದನ್ನು ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ – ಹೀಗೆ ವಿವಿಧ ಆಯಾಮಗಳಿಂದ ಚರ್ಚಿಸಿರುವ ವಸಂತ ಶೆಟ್ಟಿಯವರು, ಹೇಗೆ ಕನ್ನಡಿಗರು ನಿರ್ವಿಣ್ಣರಾಗತೊಡಗಿದ್ದಾರೆ ಎಂಬ ವಿಷಾದದ ಜೊತೆಗೆ, “ನಿರಾಸೆಯ ಕತ್ತಲಿನಲ್ಲೂ ಕ್ರಿಯಾಶೀಲನಾಗಿರು” ಎಂಬ ಲೋಹಿಯಾ ಅವರ ಮಾತಿನಂತೆ ಕನ್ನಡತನದ ಉಳಿವಿಗೆ ನಾವು ಅನುಸರಿಸಲೇಬೇಕಾದ ಮಾರ್ಗೋಪಾಯಗಳನ್ನು ಸ್ಪುಟವಾಗಿ ಚರ್ಚಿಸಿದ್ದಾರೆ.

ಭಾರತದ ಸಂವಿಧಾನವೇ ಹೇಳಿರುವಂತೆ ಮೊದಲಿಗೆ ಭಾರತ ದೇಶವಲ್ಲ. ಅದು ರಾಜ್ಯಗಳ ಒಕ್ಕೂಟ. ಹಾಗಾಗಿ “ವಿವಿಧತೆಯಲ್ಲಿ ಏಕತೆ” ಎಂಬುದು ಬರೀ ಕ್ಲಿಷೆಯ ಮಾತಲ್ಲ. ಬದಲಿಗೆ ಭಾರತದ ಮಹತ್ವ ಮತ್ತು ಕಟು ವಾಸ್ತವವನ್ನು ಸಾರುವ ಸಂದೇಶ ವಾಕ್ಯ. ಹಾಗಾಗಿ ಭಾರತದ ಅಖಂಡತೆ ಮತ್ತು ಸಮಗ್ರತೆಯ ಬಗ್ಗೆ ಹೆಚ್ಚು ಹೆಚ್ಚು ಮಾತನಾಡಿದಂತೆಲ್ಲ, ವಿವಿಧತೆ ಮಂಕಾಗುವ ಅಪಾಯವನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಜಾಗತೀಕರಣದ ನಂತರವಂತೂ ಭಾರತ ವ್ಯಾಪಾರೀಕರಣಕ್ಕೆ ಜಗತ್ತಿಗೆ ತೆರೆದುಕೊಂಡ ರೀತಿಯಿಂದಾಗಿ ವಿವಿಧತೆಗೆ ತೀವ್ರ ಪೆಟ್ಟು ಬಿದ್ದಿದೆ. ಅದಕ್ಕೆ ನಮ್ಮ ಕನ್ನಡವೂ ಹೊರತಾಗಿಲ್ಲ. ಇದು ತಮಿಳು, ತೆಲುಗು, ಬೆಂಗಾಲಿ, ಮಲೆಯಾಳಿ – ಹೀಗೆ ಎಲ್ಲ ಪ್ರಾದೇಶಿಕತೆಗಳ ಪರಿಸ್ಥಿತಿಯೂ ಹೌದು. ಆದರೆ ಕನ್ನಡಕ್ಕೆ ಮಾತ್ರ ಸುಸ್ತು ಎಂದು ಭಾವಿಸಲು ಕಾರಣ, ಉಳಿದ ಪ್ರಾದೇಶಿಕತೆಗಳಲ್ಲಿ ಅವರು ಜಾಗತೀಕರಣದ ಅಪಾಯವನ್ನು ಮೊದಲೇ ಗ್ರಹಿಸಿ, ಬೀಸಬಹುದಾದ ಸುನಾಮಿಗೆ ಪೂರ್ವ ಸಿದ್ದತೆ ಮಾಡಿಕೊಂಡು, ತಮ್ಮತನ ಮತ್ತು ತಮ್ಮ ಜಾಯಮಾನವನ್ನು ಉಳಿಸಿಕೊಂಡೇ ಬಂದಿದ್ದಾರೆ. ನಮ್ಮಲ್ಲಿ ಅಂತಹ ಪೂರ್ವ ಸಿದ್ದತೆಯೂ ಇರಲಿಲ್ಲ; ಮಾನಸಿಕ ತಯಾರಿಯೂ ಇರಲಿಲ್ಲ. ಹೀಗಾಗಿ ಕನ್ನಡದ್ದೇ ವಿಶಿಷ್ಟ ಸಮಸ್ಯೆಯಾಗಿ ನಮ್ಮನ್ನು ಕಾಡತೊಡಗಿದೆ.

ಚಾರಿತ್ರಿಕವಾಗಿ , ಸಾಹಿತ್ಯಿಕವಾಗಿ, ಸಾಂಸ್ಕ್ರುತಿಕವಾಗಿ ನಾವು ಬಹಳ ಎದೆಯುಬ್ಬಿಸಿಕೊಂಡು ಮಾತನಾಡುತ್ತೇವೆ. ಅದೆಷ್ಟು ಶ್ರೀಮಂತರು ನಾವು ಎಂದು ಕೊಚ್ಚಿಕೊಳ್ಳುತ್ತೇವೆ. ಕೊಚ್ಚಿಕೊಳ್ಳುವುದು ಬಡಾಯಿಯಲ್ಲ ಎಂಬುದಕ್ಕೆ ಅಷ್ಟೇ ಆಧಾರ ಮತ್ತು ಗ್ರಾಸಗಳು ಇವೆ. ಅದಾಗ್ಯೂ ನಾವು ಈ ದೇಶದಲ್ಲಿ ತೀವ್ರ ಅವಕ್ರಪೆಗೆ ಮತ್ತು ಅಲಕ್ಷ್ಯಕ್ಕೆ ಈಡಾಗುತ್ತಿರುವುದಕ್ಕೆ ಕಾರಣಗಳೇನು ಎಂಬ ಬಗ್ಗೆ ನಿರ್ವಿಕಾರವಾಗಿ ವಿಚಾರ ಮಾಡಬೇಕಾಗಿದೆ. ಹಿಂದಿ ಹೇರಿಕೆ ಪಕ್ಕದ ತಮಿಳುನಾಡಿನಲ್ಲಿ ಹೊಸ ವ್ಯವಸ್ಥೆಯನ್ನೇ ಹುಟ್ಟು ಹಾಕುತ್ತದೆ. ಉತ್ತರ ಭಾರತದ ದಬ್ಬಾಳಿಕೆಗೆ ಪ್ರತಿಯಾಗಿ ದಕ್ಷಿಣದ ದ್ರಾವಿಡ ಸಂಸ್ಕ್ರುತಿ ಅವಿರತವಾಗಿ, ಅವಿಚ್ಛಿನ್ನವಾಗಿ ಅಲ್ಲಿ ಪ್ರತಿಷ್ಟಾಪನೆಯಾಗುತ್ತದೆ. ಆದರೆ ನಮ್ಮಲ್ಲಿ 80ರ ದಶಕದಲ್ಲಿ ನಡೆದ ಗೋಕಾಕ್ ಚಳುವಳಿಯ ಬಿಸಿ ಕೆಲವೇ ವರ್ಷಗಳಲ್ಲಿ ಆರಿ ಹೋಗಿ ಕೇವಲ ಇಪ್ಪತ್ತು ವರ್ಷಗಳಲ್ಲಿ ಸಂಸ್ಕ್ರುತಕ್ಕೆ ಅಗ್ರ ತಾಂಬೂಲ ನೀಡುವ ಸಂಸ್ಕ್ರುತ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಮೂಲಕ ಗೋಕಾಕ್ ಚಳುವಳಿಯ ಮೂಲ ಆಶಯಕ್ಕೆ ಗೋರಿ ಕಟ್ಟಿಬಿಡುತ್ತೇವೆ. ಇದು ನಿಜಕ್ಕೂ ಚಿಂತನೆಗೆ ಯೋಗ್ಯವಾದ ವಿಶಯ. ಭಾಷೆಗೂ ಅನ್ನಕ್ಕೂ ಸಂಬಂಧವಿದೆ ಅನ್ನುವುದನ್ನೇ ನಾವು ಅರ್ಥ ಮಾಡಿಕೊಂಡಿಲ್ಲ. ಬೇರೆ ನುಡಿ ಸಮುದಾಯಗಳಿಂದ ಪಾಠವನ್ನೂ ಕಲಿತಿಲ್ಲ. ಹೀಗಾಗಿ ನಾವು ದಿನೇ ದಿನೇ ಕೊರಗಿ, ಸೊರಗಿ, ನಿಸ್ತೇಜರಾಗುತ್ತಿದ್ದೇವೆ.

ಕರ್ನಾಟಕದ ಏಕೀಕರಣದ ನಂತರದ ಸವಾಲುಗಳು ಅಷ್ಟರಮಟ್ಟಿಗೆ ಪರಿಹಾರವಾಗಿದ್ದವು ಎಂದೇ ನನ್ನ ಭಾವನೆ, ಆದರೆ ಅದು ಸಾಧ್ಯವಾಗದೇ ಹೋಗಿದ್ದಕ್ಕೆ ಕಾರಣ, ಅದಾಗ ತಾನೇ ಸ್ವಾತಂತ್ರ್ಯ ಚಳುವಳಿಯ ಹುರುಪಿನಿಂದ ಹೊರ ಬಂದಿದ್ದರ ಪರಿಣಾಮವಾಗಿ ನಮ್ಮನ್ನು ತೀವ್ರವಾಗಿ ಕಾಡುತ್ತಿದ್ದ ರಾಷ್ಟ್ರೀಯತೆಯ ಪ್ರಜ್ಞೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡರಲ್ಲೂ ಒಂದೇ ಪಕ್ಷದ ಆಡಳಿತವಿದ್ದುದರ ಪರಿಣಾಮವೆನೋ ಎಂಬಂತೆ ನಮ್ಮ ಕ್ರಷ್ಣಾ ನದಿಯ ಸಮಸ್ಯೆಯಾಗಲಿ, ವಿಜಯನಗರ ಉಕ್ಕಾಗಲಿ, ರೈಲ್ವೆ ವಲಯವಾಗಲಿ, ಎಲ್ಲವೂ ನಮ್ಮ ಅತಿಯಾದ ರಾಷ್ಟ್ರೀಯತೆಯ ಪ್ರಜ್ಞೆಯಿಂದಾಗಿ, ಅಥವಾ ಕನ್ನಡಿಗರ ಅತಿಯಾದ ಧಾರಾಳತನದಿಂದಾಗಿ ನಮ್ಮ ಕೈ ತಪ್ಪಿದವು ಮತ್ತು ಪರಿಹಾರವಾಗಬಹುದಾದದ್ದು ಪರಿಹಾರವಾಗಲಿಲ್ಲ.

ಆದರೆ 90ರ ದಶಕದ ನಂತರದ ಪರಿಸ್ಥಿತಿ ಮತ್ತೂ ಗಂಭೀರವಾದದ್ದು. ಹೊಸ ಆರ್ಥಿಕ ನೀತಿಯ ಪರಿಣಾಮವಾಗಿ ಕೊಳ್ಳುಬಾಕತನ ಸಂಸ್ಕ್ರುತಿಯ ಬೀದಿಯ ಮಾರಿ ನಮ್ಮ ಮನೆಗೇ ಬಂದು ಅಡರಿಕೊಂಡಿದೆ. ಹಾಗಾಗಿ ಕನ್ನಡಿಗರ ಪ್ರತಿ ಮನೆ, ಮನದಿಂದ ಈ ಮಾರಿಯನ್ನು ಹೊರದಬ್ಬಬೇಕಾಗಿದೆ. ಆದರೆ ಅದು ಹೇಳಿದಶ್ಟು ಸುಲಭವಲ್ಲ. ಇದಕ್ಕೆ ವ್ಯಾಪಕ ಸಿದ್ದತೆಗಳು ಬೇಕಾಗುತ್ತವೆ. ಅಂತಹ ಸಿದ್ದತೆಗಳ ಕಡೆಗೆ ವಸಂತ ಶೆಟ್ಟಿಯವರು ನಮ್ಮ ಗಮನ ಸೆಳೆದಿದ್ದಾರೆ.

ಮೊದಲಿಗೆ ನಮ್ಮಲ್ಲೆ ನಮ್ಮನ್ನು ಕಾಡುತ್ತಿರುವ ಪ್ರಾದೇಶಿಕ ಅಸಮಾನತೆ, ಗಟ್ಟಿಯಾದ ಪ್ರಾದೇಶಿಕ ಪಕ್ಷದ ಕೊರತೆ, ಬಾಹ್ಯ ಆಡಂಬರಕ್ಕೆ ಮರುಳಾಗಿ ತನ್ನನ್ನು ತಾನೇ ಮರೆತಿರುವ ಕನ್ನಡಿಗನ ಅತಂತ್ರತೆ – ಹೀಗೆ ಪಟ್ಟಿ ಮಾಡುತ್ತಲೇ ಅವುಗಳಿಗೆ ಪರಿಹಾರವನ್ನೂ ಸೂಚಿಸಿರುವುದು ವಸಂತ ಅವರ ಹೆಗ್ಗಳಿಕೆ.

ಸರಳವಾಗಿ ಮತ್ತು ಸಂಕ್ಷಿಪ್ತವಾಗಿ ಹೇಳಬೇಕೆಂದರೆ ನಾವು ಪೂರ್ಣ ಚಂದ್ರ ತೇಜಸ್ವಿಯವರ ಮಾತನ್ನೇ ಹೇಳಬೇಕಾಗುತ್ತದೆ. ಅವರು ಹೇಳಿದಂತೆ “ನಮಗೆ ಅಭಿವ್ರದ್ದಿಯೊಂದೇ ಮುಖ್ಯವಲ್ಲ, ಸ್ವಾಭಿಮಾನವೂ ಮುಖ್ಯ” ಪ್ರತಿಯೊಂದು ಆರ್ಥಿಕ, ರಾಜಕೀಯ ನೀತಿ ಹೇಗೆ ನಮ್ಮನ್ನು, ನಮ್ಮತನವನ್ನು ಕೊಲ್ಲುತ್ತಿದೆ ಎಂಬುದನ್ನು ನಾವು ನಮ್ಮ ಜನರಿಗೆ ಮನವರಿಕೆ ಮಾಡಿ ಕೊಡುತ್ತಲೇ ಇರಬೇಕಾಗಿದೆ. ಹಾಗಾಗಿ ಅವನ್ನು ಜಾಗ್ರತಗೊಳಿಸುತ್ತಲೇ ಇರಬೇಕಿದೆ. ಇಲ್ಲವಾದಲ್ಲಿ ನಮ್ಮ ನೆಲ, ಜಲವನ್ನು ಕಳೆದುಕೊಂಡು ದೆಹಲಿಯ ಆಳರಸರ ಮುಂದೆ ಜೀಹುಜೂರ್ ಗಳಾಗಿ ಬಿಡುತ್ತೇವೆ ಎಂಬ ತೇಜಸ್ವಿಯವರ ಮಾತು ಈಗ ನಮಗೆ ಪ್ರಸ್ತುತವೂ ಹೌದು, ಸ್ಪೂರ್ತಿಯೂ ಹೌದು.

ವಸಂತ ಶೆಟ್ಟಿಯವರು “ಕನ್ನಡ ಜಗತ್ತು” ಕ್ರತಿಯಲ್ಲಿ ಅದೇ ಆಶಯವನ್ನು ತಮ್ಮ ವಿಶೇಷ ಅಧ್ಯಯನದಿಂದ ಗಳಿಸಿಕೊಂಡ ವ್ಯಾಪಕ ಮಾಹಿತಿ, ಪಡೆದುಕೊಂಡ ಅನುಭವ, ಸಂಗ್ರಹಿಸಿದ ಗ್ರಾಸ – ಇವುಗಳನ್ನು ಬೆಸೆದು ಮತ್ತಶ್ಟು ಸಾಂದ್ರವಾಗಿ ಮತ್ತು ಪ್ರಚೋದಕವಾಗಿ ನಮ್ಮ ಮುಂದಿಟ್ಟಿದ್ದಾರೆ. ಇದಕ್ಕಾಗಿ ನಾನು, ನನ್ನಂತಹ ಸಮಾನ ಮನಸ್ಕ ಕನ್ನಡಿಗರ ಪರವಾಗಿ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಮತ್ತು ಪುಸ್ತಕಕ್ಕೆ ಹೆಚ್ಚಿನ ಯಶಸ್ಸುಹಾರೈಸುತ್ತೇನೆ. ನಮಸ್ಕಾರ.

 

Posted in ಕನ್ನಡ, ಕನ್ನಡತನ, ಕರ್ನಾಟಕ | ನಿಮ್ಮ ಟಿಪ್ಪಣಿ ಬರೆಯಿರಿ

ಚೆನ್ನೈ ನೆರೆ ಹಾಗೂ ದೆಹಲಿ ಮಾಧ್ಯಮಗಳ ನಿದ್ದೆ

ಚೆನ್ನೈ ನಗರflood ಕಳೆದ ನೂರು ವರುಶಗಳಲ್ಲೇ ಕಾಣದಷ್ಟು ದೊಡ್ಡ ಪ್ರಮಾಣದ ನೆರೆಗೆ ಸಿಲುಕಿ ಸಾಮಾನ್ಯ ಜನರ ಜೀವನ ಏರುಪೇರಾಗಿರುವುದನ್ನು ಕಾಣುತ್ತಿದ್ದೇವೆ. ಚೆನ್ನೈ ಒಂದೇ ಅಲ್ಲದೇ ತಮಿಳುನಾಡಿನ ಕರಾವಳಿ ಮತ್ತು ದಕ್ಷಿಣ ಆಂಧ್ರಪ್ರದೇಶದಲ್ಲೂ ಇದೇ ಸ್ಥಿತಿ ಇದೆ. ತೀವ್ರ ಕಷ್ಟಕ್ಕೆ ತಮಿಳರು ಮತ್ತು ತೆಲುಗರು ಸಿಲುಕಿರುವ ಈ ಹೊತ್ತಿನಲ್ಲಿ ಭಾರತದ ಇಂಗ್ಲಿಷ್ ಮಾಧ್ಯಮಗಳು ಇದಕ್ಕೆ ಹೇಗೆ ಸ್ಪಂದಿಸುತ್ತಿವೆ ಎಂದು ನೋಡಿದಾಗ ನಿರಾಶೆ, ಸಿಟ್ಟು ಎರಡೂ ಒಟ್ಟಿಗೆ ಬರುತ್ತದೆ.

ಇಂಡಿಯನ್ ವಾಹಿನಿಗಳಲ್ಲ, ಹಿಂದಿಯನ್ ವಾಹಿನಿಗಳು

ಭಾರತ ಹೆಸರಿಗೆ ಒಂದು ಒಕ್ಕೂಟವಾದರೂ ರಾಜ್ಯಗಳು ಹೆಚ್ಚು ಕಡಿಮೆ ಗ್ಲೋರಿಫೈಡ್ ಮುನ್ಸಿಪಾಲಿಟಿಯ ಮಟ್ಟದಲ್ಲಿರುವುದು ಎಲ್ಲರಿಗೂ ಗೊತ್ತಿರುವಂತದ್ದೇ. ಇಲ್ಲಿ ಹೆಚ್ಚಿನ ಆರ್ಥಿಕ ಮತ್ತು ರಾಜಕೀಯ ಅಧಿಕಾರವೆಲ್ಲವೂ ದೆಹಲಿಯ ಹಿಡಿತದಲ್ಲಿದೆ. ಸಹಜವಾಗಿಯೇ ದೆಹಲಿಯಲ್ಲಿ ಬೀಡು ಬಿಟ್ಟಿರುವ ಮಾಧ್ಯಮಗಳು, ಅದರಲ್ಲೂ ಚಿಂತಕ ವರ್ಗವನ್ನು ಪ್ರತಿನಿಧಿಸುವ, ದೆಹಲಿಯ ಆಳುವವರನ್ನು ಪ್ರಭಾವಿಸುವ ಇಂಗ್ಲಿಷ್ ಮಾಧ್ಯಮದ ವಾಹಿನಿಗಳು, ತಮ್ಮದೇ ಆದ ಪ್ರಭಾವ ಹೊಂದಿವೆ. ಸಾಮಾನ್ಯ ಜನರು ಇಂಗ್ಲಿಷ್ ವಾಹಿನಿಗಳನ್ನು ನೋಡುವುದು ಅಷ್ಟರಲ್ಲೇ ಇದ್ದರೂ ದೆಹಲಿಯ ಆಳುವ ವರ್ಗದ ಮೇಲೆ ಈ ವಾಹಿನಿಗಳಿಗಿರುವ ಪ್ರಭಾವದಿಂದಾಗಿ ಅವುಗಳಿಗೆ ಪ್ರಾಮುಖ್ಯತೆ ದಕ್ಕಿದೆ. ಹೀಗಾಗಿಯೇ ಈ ವಾಹಿನಿಗಳು ತಮ್ಮನ್ನು ತಾವು ನ್ಯಾಶನಲ್ ಸುದ್ದಿ ವಾಹಿನಿಗಳು ಎಂದೇ ಬಿಂಬಿಸಿಕೊಳ್ಳುತ್ತವೆ. ಆದರೆ ಈ ವಾಹಿನಿಗಳಲ್ಲಿ ಪ್ರಸಾರವಾಗುವ ಸುದ್ದಿ ಗಮನಿಸಿದರೆ ಸಾಕು, ಅವುಗಳಿಗೆ ಭಾರತದ ಆಳ, ಅಗಲ, ವೈವಿಧ್ಯತೆಯ ಬಗ್ಗೆ ಕಿಂಚಿತ್ ಮಾಹಿತಿಯಾಗಲಿ, ಗೌರವವಾಗಲಿ ಇಲ್ಲ ಅನ್ನುವುದು ಸ್ಪಷ್ಟವಾಗುತ್ತದೆ. ದೆಹಲಿಯಲ್ಲಿ ನಡೆಯುವ ಚಿಕ್ಕ ಪುಟ್ಟ ಘಟನೆಗಳನ್ನು ರಾಷ್ಟ್ರೀಯ ಸುದ್ದಿ, ರಾಷ್ಟ್ರೀಯ ದುರಂತ ಎಂದು ಬಿಂಬಿಸುವ ಈ ವಾಹಿನಿಗಳು ಕಳೆದ ಹದಿನೈದು ದಿನಗಳಿಂದ ನೆರೆಯಲ್ಲಿ ಮುಳುಗಿ ಏಳುತ್ತಿರುವ ಚೆನ್ನೈ ನಗರದ ಸಮಸ್ಯೆಗಳ ಬಗ್ಗೆ ಎಷ್ಟು ಸುದ್ದಿ ಪ್ರಸಾರ ಮಾಡಿದ್ದಾರೆ? ದಕ್ಷಿಣ ಭಾರತದ ರಾಜ್ಯಗಳ ಚುನಾವಣೆ ಫಲಿತಾಂಶ, ದೊಡ್ಡ ರಾಜಕೀಯ ಪಲ್ಲಟದಂತಹ ಸುದ್ದಿಗಳು ಚಿಕ್ಕದಾಗಿ ಪ್ರಸಾರವಾಗುವ ಈ ವಾಹಿನಿಗಳಲ್ಲಿ ಯಾವತ್ತಿಗಾದರೂ ಅದರಾಚೆ ದಕ್ಷಿಣ ಭಾರತದ ಕಲೆ, ಸಂಸ್ಕ್ರುತಿ, ಭಾಷೆ, ಸಿನೆಮಾ, ಬದುಕು, ಬವಣೆಗಳ ಬಗ್ಗೆ ವಿವರವಾದ ವರದಿಗಾರಿಕೆ ನಿಯಮಿತವಾಗಿ ಆಗುವುದನ್ನು ಕಂಡಿದ್ದೀರೆ? ಭಾರತದಲ್ಲಿ ಅತಿ ಹೆಚ್ಚು ಇಂಗ್ಲಿಷ್ ಭಾಷೆಯನ್ನು ಬಲ್ಲವರು ದಕ್ಷಿಣ ಭಾರತದಲ್ಲೇ ಇದ್ದರೂ ದಕ್ಷಿಣ ಭಾರತದ ಸುದ್ದಿಗಳಿಗೆ ಇಲ್ಲಿ ಪ್ರಾಮುಖ್ಯತೆ ಇಲ್ಲ ಅನ್ನುವುದು ಎಂತಹ ವಿಚಿತ್ರವಲ್ಲವೇ? ದಕ್ಷಿಣ ಭಾರತದ ಸುದ್ದಿಯ ಹೆಸರಿನಲ್ಲಿ ಈ ವಾಹಿನಿಗಳಲ್ಲಿ ಪ್ರಸಾರವಾಗುವುದು ಇಲ್ಲಿನ ದೊಡ್ಡ ಊರುಗಳಾದ ಬೆಂಗಳೂರು, ಹೈದರಾಬಾದ್, ಚೆನ್ನೈನ ಬೇರಿಲ್ಲದ ಕಾಸ್ಮೊಪಾಲಿಟಿನ್ ವರ್ಗದ ಜನರ ಸುದ್ದಿಗಳೇ ಹೊರತು ಸಾಮಾನ್ಯ ಕನ್ನಡಿಗರ, ತಮಿಳರ, ತೆಲುಗರ, ಮಲೆಯಾಳಿಗಳ ಸುದ್ದಿಯಲ್ಲ. ಅಲ್ಲದೇ ಈ ವಾಹಿನಿಗಳು ಹಿಂದಿ ಹೇರಿಕೆಯನ್ನು ಬಲವಾಗಿ ಸಮರ್ಥಿಸುವ ವಾಹಿನಿಗಳಾಗಿವೆ. ಈ ವಾಹಿನಿಗಳಲ್ಲಿ ಹಿಂದಿಯಲ್ಲಿ  ಯಾರೇ ಮಾತನಾಡಿದರೂ ಅದನ್ನು ಇಂಗ್ಲಿಷಿಗೆ ಅನುವಾದಿಸುವ ಪದ್ದತಿಯೇ ಇಲ್ಲ. ಕನ್ನಡದಲ್ಲೂ ಹೀಗೆ ಮಾತನಾಡಲು ಅವಕಾಶ ಕೊಡುತ್ತಾರೆಯೇ? ಇದನ್ನೆಲ್ಲ ಗಮನಿಸಿದಾಗ, ಈ ಮಾಧ್ಯಮಗಳನ್ನು ಇಂಡಿಯನ್ ವಾಹಿನಿಗಳು ಎಂದು ಕರೆಯುವುದರ ಬದಲು ಹಿಂದಿಯನ್ ವಾಹಿನಿಗಳು ಅಂತ ಕರೆಯುವುದು ಹೆಚ್ಚು ಸೂಕ್ತ ಅಲ್ಲವೇ?

ದಕ್ಷಿಣ ಭಾರತವನ್ನು ಬಿಂಬಿಸುವ ಇಂಗ್ಲಿಷ್ ವಾಹಿನಿಗಳು ಬೇಕು

ಅರಬ್ ಜಗತ್ತಿನ ಬಗ್ಗೆ ಪಶ್ಚಿಮ ದೇಶಗಳ ಬಿಬಿಸಿ, ಸಿ.ಎನ್.ಎನ್ ವಾಹಿನಿಗಳು ಮಾಡುತ್ತಿದ್ದ ವರದಿಗಾರಿಕೆಯಲ್ಲೂ ಇಂತಹದೊಂದು ತಾರತಮ್ಯ ಕಾಣುತ್ತಿತ್ತು. ಪಶ್ಚಿಮದ ದೇಶಗಳಿಗೆ ಹೇಗೆ ಬೇಕೋ ಹಾಗೇ ಅರಬ್ ಜಗತ್ತಿನ ಸುದ್ದಿಗಳನ್ನು ಹೊರಜಗತ್ತಿಗೆ ನೀಡುತ್ತಿದ್ದಕ್ಕೆ ಪ್ರತಿಯಾಗಿ ಅಲ್ ಜಜೀರಾ ತರದ ಇಂಗ್ಲಿಷ್ ವಾಹಿನಿಗಳು ಹುಟ್ಟಿಕೊಂಡು ಅರಬ್ ಜಗತ್ತಿನ ವಿದ್ಯಮಾನಗಳನ್ನು ಬಹಳ ಬೇರೆಯಾದ ರೀತಿಯಲ್ಲಿ ಜನರ ಮುಂದಿಡಲು ಆರಂಭಿಸಿದವು. ಇದರಿಂದಾಗಿ ಯಾವತ್ತಿಗೂ ಒನ್ ಸೈಡೆಡ್ ಆದ ಅರಬ್ ಜಗತ್ತಿನ ಸುದ್ದಿಗಳನ್ನು ನೋಡುತ್ತಿದ್ದವರಿಗೆ ಅರಬ್ ಜಗತ್ತಿನ ನೈಜ ಚಿತ್ರಣ ದೊರೆಯಲು ಸಾಧ್ಯವಾಯಿತು. ಈಗ ಭಾರತದ ಒಕ್ಕೂಟದಲ್ಲೂ ಇಂತಹದೊಂದು ಬದಲಾವಣೆ ಬೇಕಿದೆ. ದಕ್ಷಿಣ ಭಾರತವನ್ನೇ ಗುರಿಯಾಗಿಸಿಕೊಂಡಿರುವ, ದಕ್ಷಿಣ ಭಾರತವನ್ನು ಸರಿಯಾಗಿ ಪ್ರತಿನಿಧಿಸುವ, ಬಿಂಬಿಸುವ ಇಂಗ್ಲಿಷ್ ಸುದ್ದಿ ವಾಹಿನಿಗಳು ಈಗ ಬೇಕಾಗಿದೆ. ಇನ್ನೆಷ್ಟು ದಿನ ನಮ್ಮ ಸಮಸ್ಯೆಗಳನ್ನು ಪ್ರತಿನಿಧಿಸುವ ಪೊಳ್ಳು ನಂಬಿಕೆಯನ್ನು ಹೊತ್ತು ದೆಹಲಿಯ ಕೂಗುಮಾರಿ ವಾಹಿನಿಗಳನ್ನು ನೋಡಲಾದೀತು?

Posted in ಒಕ್ಕೂಟ ವ್ಯವಸ್ಥೆ, ದಕ್ಷಿಣ ಭಾರತ | ನಿಮ್ಮ ಟಿಪ್ಪಣಿ ಬರೆಯಿರಿ

ಈಗಿರುವ ಸ್ವರೂಪದಲ್ಲಿ ಭಾರತ ಸ್ವಚ್ಛವಾಗುವುದಿಲ್ಲ. ಯಾಕೆ ಅಂತೀರಾ?

ಕಳೆದ ವರ್ಷ ಗಾಂಧಿಜಿಯವರ ಹುಟ್ಟು ಹಬ್ಬದ ದಿನ ಬಹಳ ಸದ್ದುಗದ್ದಲದೊಂದಿಗೆ ಜಾರಿಯಾದ ಪ್ರಧಾನಿ ಮೋದಿಯವರ ಕನಸಿನ ಯೋಜನೆ ಸ್ವಚ್ಛ ಭಾರತ ಅಭಿಯಾನ. ಶುರುವಾದ ಮೊದಲ ಕೆಲ ತಿಂಗಳು ಜನಪ್ರಿಯ ನಟರು, ಪ್ರಭಾವಿಗಳು ಈ ಯೋಜನೆಯ ರಾಯಭಾರಿಗಳಾಗಿ ಪೊರಕೆ ಹಿಡಿದು ನಿಂತಾಗ ಈ ಯೋಜನೆಯ ಬಗ್ಗೆ ಒಂದಿಷ್ಟು ಸುದ್ದಿಯಾಯಿತು. ಯೋಜನೆ ಜಾರಿಯಾದ ಕಳೆದ ಒಂದು ವರ್ಷದ ಅವಧಿಯಲ್ಲಿ ನಮ್ಮ ಊರು, ಪಟ್ಟಣಗಳೆಲ್ಲ ಸ್ವಚ್ಛವಾಗಿದೆಯೇ ಎಂದು ಕಂಡರೆ ಏನು ಕಾಣಿಸುತ್ತದೆ? ಎಲ್ಲವೂ ಈ ಹಿಂದೆ ಇದ್ದಂತೆಯೇ ಇದೆ, ಕಣ್ಣಿಗೆ ಕಾಣುವ ಬದಲಾವಣೆ ಹೆಚ್ಚಾಗಿ ಎಲ್ಲೂ ಕಾಣಿಸಿಲ್ಲ. ಇದರ ನಡುವೆ ಈಗ ಬಂದಿರುವ ಹೊಸ ಸುದ್ದಿಯೆಂದರೆ ಸ್ವಚ್ಛ ಭಾರತ ಅಭಿಯಾನಕ್ಕೆ ಹಣ ಹೊಂದಿಸಲು ಕೇಂದ್ರ ಸರ್ಕಾರ ನವೆಂಬರ್ 15ರಿಂದಲೇ ಜಾರಿಗೆ ಬರುವಂತೆ ಸೇವಾ ತೆರಿಗೆ ವ್ಯಾಪ್ತಿಗೆ ಬರುವ ಎಲ್ಲ ಸೇವೆಗಳ ಮೇಲೆ 0.5% ಸೆಸ್ ಅನ್ನು ವಿಧಿಸಿದೆ. ಆದರೆ ಇದು ನಿಜಕ್ಕೂ ಸ್ವಚ್ಛತೆಯ ವಿಷಯದಲ್ಲಿ ಅಂದುಕೊಂಡ ಗುರಿ ಸಾಧಿಸುವುದೇ ಅನ್ನುವ ಪ್ರಶ್ನೆ ಕೇಳಿಕೊಳ್ಳಬೇಕಿದೆ.

ಮೊದಲಿಗೆ, ಸ್ವಚ್ಛತೆಯ ವಿಷಯಕ್ಕೆ ಬಂದಾಗ ಇಲ್ಲಿ ಎರಡು ಮುಖ್ಯ ಸಮಸ್ಯೆಗಳಿವೆ. ಮೊದಲನೆಯದ್ದು, ಸ್ವಚ್ಛತೆಯ ಬಗ್ಗೆ ಜನರ ಮನಸ್ಥಿತಿಯದ್ದು, ಎರಡನೆಯದ್ದು ನಮ್ಮ ಊರು, ಪಟ್ಟಣಗಳ ಸ್ವಚ್ಛತೆಯ ಹೊಣೆ ಹೊತ್ತ ಸ್ಥಳೀಯ ಸಂಸ್ಥೆಗಳಿಗಿರುವ ಹಣಕಾಸಿನ ಮುಗ್ಗಟ್ಟಿನದ್ದು. ಅವರೆರಡರ ಬಗ್ಗೆ ನೋಡಿದ ನಂತರ ಮತ್ತೆ ಸೆಸ್ ವಿಚಾರಕ್ಕೆ ಹೋಗೊಣ.

ಜನರ ಮನಸ್ಥಿತಿ ಬದಲಾವಣೆ

ಚಿತ್ರಕ್ರಪೆ: ಶ್ರೀಹರ್ಷ ಸಾಲಿಮಠ

ಚಿತ್ರಕ್ರಪೆ: ಶ್ರೀಹರ್ಷ ಸಾಲಿಮಠ

ಸ್ವಚ್ಛತೆಯ ವಿಷಯದಲ್ಲಿ ಬರೀ ಸರ್ಕಾರವನ್ನೇ ದೂರುವಂತಿಲ್ಲ. ಜನಸಾಮಾನ್ಯರಲ್ಲೇ ಸ್ವಚ್ಛತೆಯ ಬಗ್ಗೆ ಒಂದು ಆಳವಾದ ಸಮಸ್ಯೆ ನಮ್ಮಲ್ಲಿದೆ. ರಸ್ತೆ ಬದಿಯಲ್ಲೇ ಉಚ್ಚೆ ಮಾಡುವುದು, ಕಂಡ ಕಂಡಲ್ಲಿ ಕಸ ಎಸೆಯುವುದು, ಹಸಿ ಮತ್ತು ಒಣ ಕಸ ಬೇರ್ಪಡಿಸದೇ ಹಾಗೆಯೇ ಎಸೆಯುವುದು, ಸ್ವಚ್ಛತೆ ಏನಿದ್ದರೂ ಸರ್ಕಾರದ ಕೆಲಸ ಅನ್ನುವ ಧೋರಣೆ ಹೊಂದಿರುವುದು ಹೀಗೆ ಜನರಲ್ಲೇ ಸಮಸ್ಯೆ ಮೂಲವಿದೆ. ಬೆಂಗಳೂರಿನಂತಹ ಊರಿನಲ್ಲಿ ಜಯನಗರ, ಜೆಪಿನಗರದಂತಹ ಪ್ರತಿಷ್ಟಿತ ಮೇಲ್ ಮಧ್ಯಮ ವರ್ಗ ವಾಸಿಸುವ ಸ್ಥಳದಲ್ಲೂ ಹೆಚ್ಚಿನ ರಸ್ತೆಯ ಮೂಲೆಯಲ್ಲಿ ಪ್ಲಾಸ್ಟಿಕ್ ಬ್ಯಾಗಿನಲ್ಲಿ ಕಸ ತುಂಬಿ ರಸ್ತೆಗೆ ಎಸೆದಿರುವುದನ್ನು ಕಾಣಬಹುದು. ಮಳೆಯಾದಾಗ ಈ ಕಸವೆಲ್ಲ ಮಳೆ ನೀರನ್ನು ಗಟಾರ್ ಸೇರದಂತೆ ತಡೆ ಹಿಡಿದು ರಸ್ತೆಗಳು ಗುಂಡಿ ಬೀಳುತ್ತಿರುವುದನ್ನು ಕಾಣಬಹುದು. ಹೀಗಿರುವಾಗ ಸ್ವಚ್ಛತೆಯ ವಿಷಯದಲ್ಲಿ ಮೊದಲು ಆಗಬೇಕಿರುವುದು ಮನಸ್ಥಿತಿಯ ಬದಲಾವಣೆ. ಸ್ವಚ್ಛ ಭಾರತದಂತಹ ಯೋಜನೆ ಈ ಅರಿವು ತುಂಬುವ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿತ್ತು. ಸೆಲೆಬ್ರಿಟಿಗಳನ್ನು ರಾಯಭಾರಿಗಳಾಗಿಸುವುದರ ಹಿಂದೆ ಈ ಅರಿವು ತುಂಬುವ ಒಳ್ಳೆಯ ಉದ್ದೇಶವಿರುವಂತೆ ಕಾಣುತ್ತದೆ, ಆದರೆ ಕೇಂದ್ರ ಸರ್ಕಾರಿ ಯೋಜನೆಗಳಿಗೆಲ್ಲ ಅಂಟಿರುವ ಹಿಂದಿ ಹೇರಿಕೆಯ ಖಾಯಿಲೆ ಈ ಅಭಿಯಾನ ಹಿಂದಿಯೇತರ ರಾಜ್ಯಗಳಲ್ಲಿ ದೊಡ್ಡ ಮಟ್ಟದಲ್ಲಿ ಜನರನ್ನು ತಲುಪದಂತೆ ಮಾಡಿವೆ ಅನ್ನಬಹುದು. ಸ್ವಚ್ಛಭಾರತದ ಬಗ್ಗೆ ಬೆಂಗಳೂರಿನ ಬೀದಿಗಳಲ್ಲಿ ಹಾಕಲಾಗಿದ್ದ ಬಹುಪಾಲು ಜಾಹೀರಾತು, ಎಫ್.ಎಮ್ ವಾಹಿನಿಗಳಲ್ಲಿನ ಸಂದೇಶವೆಲ್ಲವೂ ಹಿಂದಿಯಲ್ಲಿತ್ತು. ಕನ್ನಡಿಗರನ್ನು ಕನ್ನಡದಲ್ಲಿ ತಲುಪುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದರೆ ಮನಸ್ಥಿತಿ ಬದಲಾವಣೆಯ ನಿಟ್ಟಿನಲ್ಲಿ ಇನ್ನಷ್ಟು ಗೆಲುವು ಕಾಣಬಹುದಿತ್ತೆನೋ.

ಸ್ವಚ್ಛತೆಯ ಹೊಣೆ ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳದ್ದು

ಭಾರತ ಒಂದು ಭಾಷಾವಾರು ಪ್ರಾಂತ್ಯಗಳ ಒಕ್ಕೂಟ. ಎಲ್ಲ ರಾಜ್ಯಗಳಿಗೂ ಒಂದು ಬಣ್ಣ ಕೊಟ್ಟರೆ ಮೂವತ್ತು ಬಣ್ಣಗಳ ಒಂದು ಚಿತ್ರಪಟ ಭಾರತ. ಇಲ್ಲಿ ಸ್ವಚ್ಛತೆಯ ವಿಷಯಕ್ಕೆ ಬಂದಾಗ ನಮ್ಮ ಊರು,ಪಟ್ಟಣಗಳ ಸ್ವಚ್ಛತೆಯ ನೇರ ಹೊಣೆ ರಾಜ್ಯ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳದ್ದಾಗಿರುತ್ತದೆ. ಹೀಗಿರುವಾಗ ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಒಂದು ಯೋಜನೆ ರೂಪಿಸುವುದೇ ಒಂದು Structural ಆದ ಸಮಸ್ಯೆ ಅನ್ನಬಹುದು. ಸ್ವಚ್ಛ ಭಾರತ ಯೋಜನೆ ದೇಶವ್ಯಾಪಿ ಜನಜಾಗ್ರತಿಗೆ ಸೀಮಿತವಾದ ಯೋಜನೆಯಾದರೆ ಸಂತೋಷ. ಆದರೆ ಇದು ಅಷ್ಟಕ್ಕೆ ಸೀಮಿತವಾಗಿಲ್ಲ. ಹಳ್ಳಿಗಳಲ್ಲಿ ಟಾಯ್ಲೆಟ್, ಮೋರಿ ಕಟ್ಟುವುದರಿಂದ ಹಿಡಿದು ಪಟ್ಟಣಗಳಲ್ಲಿ ಸ್ವಚ್ಛತೆಯ ಸುತ್ತ ಹತ್ತಾರು ಅಂಶಗಳು ಈ ಯೋಜನೆಯಲ್ಲಿವೆ. ಸಹಜವಾಗಿಯೇ ಅನುಷ್ಟಾನದ ಯಾವ ಅಂಗವೂ ಇಲ್ಲದ ಕೇಂದ್ರ ಸರ್ಕಾರ ಇದೆಲ್ಲದಕ್ಕೂ ರಾಜ್ಯ ಸರ್ಕಾರವನ್ನೇ ನೆಚ್ಚಿಕೊಂಡಿದೆ. ಕರ್ನಾಟಕದಂತಹ ರಾಜ್ಯ ಟಾಯ್ಲೆಟ್ ಕಟ್ಟುವ ವಿಷಯದಲ್ಲಿ ತನ್ನದೇ ಯೋಜನೆಯನ್ನೂ ಹೊಂದಿದೆಯಲ್ಲದೇ ಕಳೆದ ವರ್ಷ ದೇಶದಲ್ಲೇ ಅತಿ ಹೆಚ್ಚು ಟಾಯ್ಲೆಟ್ ಕಟ್ಟಿರುವ ಖ್ಯಾತಿಯೂ ಅದಕ್ಕಿದೆ. ಹೀಗಿರುವಾಗ ಸ್ವಚ್ಛ ಭಾರತ ಅಭಿಯಾನಕ್ಕೆಂದು ಸೆಸ್ ರೂಪದಲ್ಲಿ ಕೇಂದ್ರ ಸಂಗ್ರಹಿಸುವ ಹೆಚ್ಚಿನ ಹಣ ಯಾರ ಕೈಗೆ ಸೇರಬೇಕಿತ್ತು, ರಾಜ್ಯದ ಕೈಗೋ, ಕೇಂದ್ರದ ಕೈಗೋ? ಇವತ್ತಿಗೂ ನಮ್ಮ ಪೌರ ಕಾರ್ಮಿಕರಿಗೆ ತಮ್ಮ ಆರೋಗ್ಯ ಕಾಪಾಡಿಕೊಂಡು ಸ್ವಚ್ಛತೆಯ ಕೆಲಸ ಮಾಡಲು ಬೇಕಿರುವ ಯಾವುದೇ ಉಪಕರಣಗಳೂ ಲಭ್ಯವಿಲ್ಲ. ಬರೀಗಾಲಲ್ಲಿ, ಬರೀಗೈಯಲ್ಲಿ ನಮ್ಮ ನಗರಗಳನ್ನು ಸ್ವಚ್ಛಗೊಳಿಸುತ್ತಿರುವ ಇವರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸುವ ವಿಷಯ ಬಂದಾಗಲೆಲ್ಲ ಹಣವಿಲ್ಲ ಅನ್ನುವ ನೆಪ ಕೇಳಿ ಬರುತ್ತೆ. ಹೀಗಾಗಿ ಸ್ವಚ್ಛ ಭಾರತಕ್ಕಾಗಿ ಸಂಗ್ರಹಿಸುವ ಹಣ ನೇರವಾಗಿ ರಾಜ್ಯ ಮತ್ತು ರಾಜ್ಯದಲ್ಲಿನ ಸ್ಥಳೀಯ ಸಂಸ್ಥೆಗಳಿಗೆ ಸಿಗುವಂತಾಗಬೇಕಿದೆ.

ಸ್ವಚ್ಛ ಭಾರತ ಸೆಸ್ ಯಾಕೆ ಕೇಂದ್ರದ ಕೈಗೆ?

ಈಗ ಸೆಸ್ ವಿಚಾರಕ್ಕೆ ಬಂದರೆ ಇದೊಂದು ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ವಿಚಾರವಲ್ಲ ಎಂದು ಹೇಳಬಹುದು. ಮೋದಿಯವರ ಸರ್ಕಾರ ಬಂದಾಗಿನಿಂದಲೂ ಸಹಕಾರಿ ತತ್ವದ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವತ್ತ ತಾವು ಬದ್ಧ ಅನ್ನುವ ಮಾತುಗಳನ್ನು ಮೋದಿಯವರು ಹೇಳುತ್ತ ಬಂದಿದ್ದಾರೆ. 14ನೇ ಹಣಕಾಸು ಆಯೋಗದ ಶಿಫಾರಸ್ಸುಗಳನ್ನು ಒಪ್ಪಿ ಕೇಂದ್ರದಿಂದ ರಾಜ್ಯಗಳಿಗೆ ಆಗುವ ನೇರ ತೆರಿಗೆ ಪಾಲನ್ನು 32%ದಿಂದ 42%ಕ್ಕೆ ಏರಿಸುವ ಮೂಲಕ ತಮ್ಮ ಬದ್ಧತೆ ತೋರಿದ್ದೇವೆ ಅನ್ನುತ್ತೆ ಕೇಂದ್ರ ಸರ್ಕಾರ.. ಇದನ್ನು ಎಲ್ಲರೂ ಸ್ವಾಗತಿಸಿದ್ದಾರೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ರಾಜ್ಯ ಸರ್ಕಾರಗಳು ಪಾಲೂ ಕೊಟ್ಟು, ಅನುಷ್ಟಾನದ ಹೊಣೆ ಹೊರುವ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಕೇಂದ್ರದ ಅನುದಾನ 26% ಕಡಿಮೆಯಾಗಿದೆ. ಇದರ ಜೊತೆ ಪೆಟ್ರೊಲಿಯಂ ಉತ್ಪನ್ನಗಳ ಮೇಲಿನ ಎಕ್ಸೈಸ್ ಡ್ಯೂಟಿ ಇಳಿಸಿರುವ ಕೇಂದ್ರದ ಕ್ರಮದಿಂದ ರಾಜ್ಯಗಳಿಗೆ ಬರುತ್ತಿದ್ದ ಆದಾಯದ ಪಾಲು ಕುಗ್ಗಿದೆ. ಈ ವರ್ಷದಿಂದ ಹೆಚ್ಚಿನ ಹಣವಂತರ ಆದಾಯ ತೆರಿಗೆಯ ಮೇಲೆ ವಿಧಿಸಲಾಗುತ್ತಿದ್ದ 2% ಸರ್ಚಾರ್ಜ್ ಮೂಲಕವೂ ಕೇಂದ್ರ ಸರ್ಕಾರ ವರ್ಷಕ್ಕೆ 9000 ಕೋಟಿ ಆದಾಯ ಗಳಿಸುತ್ತಿದೆ. ಹೆಚ್ಚಿನ ಹಣವಂತರು ಹುಟ್ಟಿಕೊಳ್ಳಲು ಪೂರಕ ವಾತಾವರಣ ಕಲ್ಪಿಸುವ ರಾಜ್ಯಸರ್ಕಾರಗಳಿಗೆ ಇದರಲ್ಲಿ ಪಾಲೇನಿಲ್ಲ. ಈಗಾಗಲೇ ಶಿಕ್ಷಣ, ಉನ್ನತ ಶಿಕ್ಷಣಕ್ಕೆ ಹಾಕಲಾಗುವ ಸೆಸ್ ಮೂಲಕ ವರ್ಷಕ್ಕೆ 30,000 ಕೋಟಿ, ರಸ್ತೆ ಸೆಸ್ ಮೂಲಕ ವರ್ಷಕ್ಕೆ 50,000 ಕೋಟಿ, ರಫ್ತು ಸೆಸ್, ಕ್ಲೀನ್ ಎನರ್ಜಿ ಸೆಸ್ ಮೂಲಕ ಇನ್ನೊಂದಿಷ್ಟು, ಹೀಗೆ ವರ್ಷವೊಂದಕ್ಕೆ ಕೇಂದ್ರ ಸೆಸ್ ಗಳ ಮೂಲಕವೇ 1.16 ಲಕ್ಷ ಕೋಟಿ ಸಂಪಾದಿಸುತ್ತಿದೆ. ಇದಾವುದನ್ನು ರಾಜ್ಯಗಳ ಜೊತೆ ನೇರವಾಗಿ ಹಂಚಿಕೊಳ್ಳಲಾಗುತ್ತಿಲ್ಲ. ಈಗ ಇದರೊಂದಿಗೆ ಸೇವಾ ತೆರಿಗೆಯನ್ನು 0.5% ಏರಿಸಿರುವುದರಿಂದ ಬರುವ ಹೆಚ್ಚಿನ ಆದಾಯವೂ ಕೇಂದ್ರದ ತೆಕ್ಕೆಗೆಯೇ ಸೇರಲಿದೆ. ಹೋಗಲಿ ಹೀಗೆ ಒಟ್ಟಾಗುವ ಹಣ ಯಾವ ಉದ್ದೇಶಕ್ಕಾಗಿ ಇದನ್ನು ಸಂಗ್ರಹಿಸಲಾಗುತ್ತಿದೆಯೋ ಅದೇ ಉದ್ದೇಶಕ್ಕೆ ಬಳಸಲಾಗುತ್ತಿದೆಯೇ ಹಾಗೂ ಬಳಕೆ ಪರಿಣಾಮಕಾರಿಯಾಗಿದೆಯೋ ಎನ್ನಲು ಸಾಕಷ್ಟು ಅಂಕಿಅಂಶಗಳೂ ಇಲ್ಲ. ಹಿಂದಿನ ಯು.ಪಿ.ಎ ಸರ್ಕಾರ ತಂದ ನ್ಯಾಶನಲ್ ರೂರಲ್ ಹೆಲ್ತ್ ಮಿಶನ್ ಅನ್ನುವ ಯೋಜನೆ ದೊಡ್ಡ ಮಟ್ಟದಲ್ಲೇ ಭ್ರಷ್ಟಾಚಾರಕ್ಕೆ ತುತ್ತಾಗಿತ್ತು ಅನ್ನುವುದನ್ನು ಇಲ್ಲಿ ನೆನೆಯಬಹುದು.

ಇದು ಬಿಜೆಪಿ,ಕಾಂಗ್ರೆಸ್ ಸಮಸ್ಯೆಯಲ್ಲ

ಇದು ಬಿಜೆಪಿ ಇಲ್ಲವೇ ಕಾಂಗ್ರೆಸಿನ ಸಮಸ್ಯೆಯಲ್ಲ. ಇದು ಭಾರತದ ಸಂವಿಧಾನದಲ್ಲಿ ಅಧಿಕಾರ ಹಂಚಿಕೆಯಲ್ಲಿ ಆಗಿರುವ ತೊಂದರೆಯ ಸಮಸ್ಯೆ. ಜನರಿಗೆ ನೇರ ಉತ್ತರದಾಯಿತ್ವ ಹೊಂದಿರುವ ರಾಜ್ಯ ಸರ್ಕಾರಗಳ ಕೈಗೆ ಹೆಚ್ಚಿನ ಹೊಣೆ ಮತ್ತು ಆರ್ಥಿಕ ಸಂಪನ್ಮೂಲ ಕೊಡುವುದು ಇವತ್ತಿನ ಅಗತ್ಯ. ಅದಕ್ಕೆ ತಕ್ಕ ಸಂವಿಧಾನ ತಿದ್ದುಪಡಿ ಮಾಡಿಕೊಳ್ಳಬೇಕಾದ ತುರ್ತು ಅಗತ್ಯವಿದೆ. ರಾಜ್ಯಗಳಲ್ಲಿನ ವ್ಯವಸ್ಥೆಗಳಲ್ಲಿ ಭ್ರಷ್ಟಾಚಾರವಿರಬಹುದು, ಆದರೆ ಅದಕ್ಕೆ ಪರಿಹಾರ ದೆಹಲಿಯಿಂದ ಯೋಜನೆ ರೂಪಿಸುವುದಲ್ಲ. ನಿಜವಾದ ಪರಿಹಾರ ರಾಜ್ಯದಲ್ಲಿನ ವ್ಯವಸ್ಥೆಗಳನ್ನು ಸರಿಪಡಿಸಿಕೊಳ್ಳುವುದಾಗಿದೆ. ಇಲ್ಲದಿದ್ದಲ್ಲಿ ದೆಹಲಿಯಿಂದ ಎಷ್ಟೇ ಪ್ರಾಮಾಣಿಕ ಉದ್ದೇಶದೊಂದಿಗೆ ಯೋಜನೆಗಳು ಆರಂಭವಾದರೂ ಅವು ಜನರನ್ನು ತಲುಪುವುದಿಲ್ಲ ಮತ್ತು ನಮ್ಮ ಸ್ಥಿತಿಯಲ್ಲಿ ಯಾವ ಬದಲಾವಣೆಯೂ ಸಾಧ್ಯವಾಗುವುದಿಲ್ಲ.

Posted in ಒಕ್ಕೂಟ ವ್ಯವಸ್ಥೆ, ಕರ್ನಾಟಕ | 2 ಟಿಪ್ಪಣಿಗಳು

ಕನ್ನಡದ ಸ್ಥಿತಿಗತಿ – ಹತಾಶೆಯ ನಡುವೆಯೂ ಹೊಸ ಭರವಸೆ

ಕರ್ನಾಟಕ ಒಂದಾದ ದಿನ ಮತ್ತೆ ಬಂದಿದೆ. ಇಡೀ ನವೆಂಬರ್ ತಿಂಗಳು ರಾಜ್ಯೋತ್ಸವದ ಅಬ್ಬರದ ನಡುವೆ ಕನ್ನಡದ ದುಸ್ಥಿತಿಯ ಬಗ್ಗೆ ಆತಂಕದ ಚರ್ಚೆಗಳೂ ಏರ್ಪಡುತ್ತವೆ. ಈ ಎಲ್ಲ ಚಿಂತೆಗಳ ನಡುವೆಯೇ ಕಳೆದ ಹತ್ತು ವರ್ಷಗಳಲ್ಲಿ ಕನ್ನಡದ ಬೇರು ಬಲವಾಗುತ್ತಿರುವ ಬಗ್ಗೆ ಹಲವು ಧನಾತ್ಮಕ ಬದಲಾವಣೆಗಳನ್ನು ಗಮನಿಸಬಹುದು. ಅವು ಕನ್ನಡದ ಬಗೆಗಿನ ನಮ್ಮ ಆತಂಕಗಳನ್ನು ಸಾಕಷ್ಟು ಕಡಿಮೆ ಮಾಡುವಂತದ್ದು. ನಾಲ್ಕು ಮುಖ್ಯ ಬದಲಾವಣೆಗಳನ್ನು ಇಲ್ಲಿ ಗುರುತಿಸಬಹುದು.

ತಂತ್ರಜ್ಞಾನದಲ್ಲಿ ಕನ್ನಡ

ಒಂದು ಕಾಲದಲ್ಲಿ ಕಂಪ್ಯೂಟರಿನಲ್ಲಿ, ಮೊಬೈಲಿನಲ್ಲಿ ಕನ್ನಡದಲ್ಲಿ ಬರೆಯುವುದೇ ಒಂದು ದೊಡ್ಡ ಸಾಧನೆ ಎಂಬಂತಹ ದಿನಗಳಿದ್ದವು. ಆದರೆ ಕಳೆದ ಹತ್ತು ವರ್ಷಗಳಲ್ಲಿ ಈ ವಿಷಯದಲ್ಲಿ ಬಹಳ ದೊಡ್ಡ ಮಟ್ಟದ ಬದಲಾವಣೆಗಳಾಗಿವೆ. ಇವತ್ತು ಅಂತರ್ಜಾಲದಲ್ಲಿ ಕನ್ನಡದಲ್ಲಿ ಬರೆಯಲು, ಓದಲು ಹಲವಾರು ಆಯ್ಕೆಗಳು ದೊರೆಯುತ್ತವೆ. ಫೇಸ್ ಬುಕ್, ಟ್ವಿಟರಿನಂತಹ ಸಾಮಾಜಿಕ ತಾಣಗಳನ್ನು ಕನ್ನಡದ ಯುವಕರೇ ಒಂದು ತಂಡವಾಗಿ ಕನ್ನಡಕ್ಕೆ ಅನುವಾದಿಸಿ, ಕನ್ನಡವೊಂದನ್ನೇ ಬಲ್ಲವರು ಇಂದು ಅದನ್ನು ಬಳಸಲು ಸುಲಭವಾಗುವಂತೆ ಮಾಡಿದ್ದಾರೆ. ಕೇವಲ 252 ಪದಗಳಿದ್ದ ಕನ್ನಡ ವಿಕ್ಷನರಿಯಲ್ಲಿ ಇಂದು ಎರಡು ಲಕ್ಷಕ್ಕೂ ಹೆಚ್ಚು ಕನ್ನಡ ಪದಗಳಿವೆ. ಇದರ ಹಿಂದೆಯೂ ಕನ್ನಡದ ಯುವಕರ ಶ್ರಮವಿದೆ. ಇದರೊಂದಿಗೆ ದೊಡ್ಡ ಪ್ರಮಾಣದಲ್ಲಿ ಕನ್ನಡದಲ್ಲೇ ಅಂತರ್ಜಾಲ ಬಳಸುವವರ ಸಂಖ್ಯೆಯನ್ನು ಕಂಡ ಗೂಗಲ್ ನಂತಹ ಕಂಪನಿಗಳು ಕನ್ನಡದಲ್ಲಿ ತಂತ್ರಜ್ಞಾನದ ಇನ್ನಷ್ಟು ಸಾಧ್ಯತೆಗಳನ್ನು ಕಟ್ಟುವತ್ತ ಹೂಡಿಕೆ ಮಾಡುತ್ತಿವೆ. ಒಟ್ಟಾರೆ ಮುಂದಿನ ಹತ್ತು ವರ್ಷಗಳಲ್ಲಿ ತಂತ್ರಜ್ಞಾನಕ್ಕೂ, ಕನ್ನಡಕ್ಕೂ ನಡುವಿರುವ ತಡೆಗೋಡೆ ಪೂರ್ತಿಯಾಗಿ ಬಿದ್ದು ಹೋಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ.

ಚಿತ್ರರಂಗದಲ್ಲಿ ಹೊಸಪ್ರತಿಭೆಗಳ ಹೊಳೆ

ಕಳೆದ ಹತ್ತು ವರ್ಷಗಳಲ್ಲಿ ಹೊಸ ಪ್ರತಿಭೆಗಳು, ಹೊಸ ಮಾದರಿಗಳು, ಹೊಸ ಮಾರುಕಟ್ಟೆ ಕನ್ನಡ ಚಿತ್ರರಂಗದಲ್ಲಿ ಕಾಣಿಸಲಾರಂಭಿಸಿದೆ. ಹೆಚ್ಚು ಕಡಿಮೆ ಕನ್ನಡ ಚಿತ್ರಗಳಿಂದ ದೂರ ಸಾಗಿದ್ದ ಮೇಲ್ಮಧ್ಯಮ ವರ್ಗದ ಕನ್ನಡಿಗರು ಮತ್ತೆ ಕನ್ನಡ ಸಿನೆಮಾಗಳತ್ತ ತಿರುಗುವ ಬದಲಾವಣೆ ಕಳೆದ ಹತ್ತು ವರ್ಷದಲ್ಲಾಗಿದೆ. ಮುಂಗಾರುಮಳೆ, ದುನಿಯಾ ತರದ ಚಿತ್ರಗಳು ಇದಕ್ಕೆ ಬುನಾದಿ ಹಾಕಿದರೆ ಲೂಸಿಯಾ ತರದ ಕ್ರೌಡ್ ಫಂಡೆಡ್ ಚಿತ್ರಗಳು ಇತರೆ ಭಾಷಿಕರಿಗೆ ಸಾಧ್ಯವಾಗದ್ದನ್ನು ಕನ್ನಡದಲ್ಲಿ ಮಾಡಿ ತೋರಿಸುವ ಮೂಲಕ ಕನ್ನಡಕ್ಕೆ ಗೌರವ ತಂದು ಕೊಟ್ಟವು. ಇದರೊಟ್ಟಿಗೆ ಸ್ಪರ್ಧೆಗೆ ಸಜ್ಜಾಗಲು ಹೊಸ ಪ್ರತಿಭೆಗಳಿಗೆ ಹೆಚ್ಚು ಅವಕಾಶ ಕೊಡುವುದೇ ಸರಿಯಾದ ಹಾದಿಯೆನ್ನುವುದನ್ನು ಕಂಡುಕೊಂಡಂತೆ ಕಾಣುತ್ತಿರುವ ಕನ್ನಡ ಚಿತ್ರೋದ್ಯಮದಲ್ಲಿ ಈಗ ಹೊಸ ಕತೆಗಳದ್ದೇ ಅಬ್ಬರ. ಸಾಫ್ಟವೇರ್ ಕ್ಷೇತ್ರದಲ್ಲಿದ್ದ ಅನೂಪ್ ಭಂಡಾರಿ ತರದವರು ರಂಗೀತರಂಗ ಚಿತ್ರದ ಮೂಲಕ ಅಮೇರಿಕದಲ್ಲಿ ಕನ್ನಡ ಚಿತ್ರಗಳಿಗೆ ಎಷ್ಟು ದೊಡ್ಡ ಮಾರುಕಟ್ಟೆಯ ಸಾಧ್ಯತೆಯಿದೆ ಅನ್ನುವುದು ತೋರಿಸಿಕೊಟ್ಟರು. ಅದರ ಬೆನ್ನಲ್ಲೇ ಸಾಲು ಸಾಲು ಕನ್ನಡ ಚಿತ್ರಗಳು ಹೊರ ದೇಶದಲ್ಲಿ ಬಿಡುಗಡೆಯಾಗಿ ಇಲ್ಲಿಯವರೆಗೂ ಕನಸಾಗಿದ್ದ ಹೊರದೇಶದ ಮಾರುಕಟ್ಟೆಯೆನ್ನುವುದನ್ನು ಕೊನೆಗೂ ಕನ್ನಡದ ಪಾಲಿಗೆ ಸಾಧ್ಯವಾಗಿಸುತ್ತಿವೆ. ಕಿರುಚಿತ್ರಗಳ ವಿಷಯಕ್ಕೆ ಬಂದರೆ ಇದೇ ರೀತಿಯ ಬೆಳವಣಿಗೆಯನ್ನು ಕಾಣಬಹುದು. ಕನ್ನಡದಲ್ಲಿ ಅದ್ಭುತ ಕತೆಯ, ನಿರೂಪಣೆಯ ಕಿರುಚಿತ್ರಗಳು ಸಾಲುಸಾಲಾಗಿ ಯುಟ್ಯೂಬ್ ಮೂಲಕ ಜನರನ್ನು ತಲುಪುತ್ತಿವೆ. ಸಾಮಾಜಿಕ ತಾಣಗಳು ಕನ್ನಡಿಗರನ್ನು ಹಿಂದೆಂದೂ ಊಹಿಸಲಾಗದ ರೀತಿಯಲ್ಲಿ ಬೆಸೆಯುವುದರ ಜೊತೆ ಈ ಪ್ರಯತ್ನಗಳಿಗೆ ದೊಡ್ಡ ಬೆಂಬಲ ನೀಡುತ್ತಿವೆ.

ಕನ್ನಡಿಗರಲ್ಲಿ ಭಾಷಾ ಹಕ್ಕುಗಳ ಕುರಿತು ಹೆಚ್ಚಿನ ಅರಿವು

ಭಾಷೆಯ ಅಭಿಮಾನದ ವಿಷಯಕ್ಕೆ ಬಂದಾಗ ತಮಿಳರನ್ನು ಮಾದರಿಯಾಗಿ ಕಾಣುವ ಮನಸ್ಥಿತಿ ನಮ್ಮಲ್ಲಿತ್ತು. ಭಾಷೆಯ ಗುರುತು, ಭಾಷಾ ಹಕ್ಕುಗಳ ಬಗ್ಗೆ ಕನ್ನಡಿಗರಲ್ಲಿನ ಜಾಗೃತಿಯ ಕೊರತೆ ಕನ್ನಡಿಗರ ಮೇಲೆ ಪರಭಾಷೆಗಳ ಸವಾರಿಗೆ ಅವಕಾಶ ಕಲ್ಪಿಸಿದ್ದವು. ಆದರೆ ಕಳೆದ ಹತ್ತು ವರ್ಷಗಳಲ್ಲಿ ಇದರಲ್ಲಿ ಸಾಕಷ್ಟು ಬದಲಾವಣೆಯಾಗಿರುವುದು ಸ್ಪಷ್ಟವಾಗಿ ಗುರುತಿಸಬಹುದು. ಹಿಂದಿ ರಾಷ್ಟ್ರಭಾಷೆಯೆಂದು ಸಂವಿಧಾನದಲ್ಲೆಲ್ಲೂ ಬರೆಯದಿದ್ದರೂ ಅದನ್ನು ರಾಷ್ಟ್ರಭಾಷೆಯೆಂದು ಮೆರೆಸುವ ಮನಸ್ಥಿತಿ ಕನ್ನಡಿಗರಲ್ಲಿತ್ತು. ಅದರ ಪರಿಣಾಮವಾಗಿ ಕರ್ನಾಟಕದಾದ್ಯಂತ ಇರುವ ರೈಲು, ವಿಮಾನ ನಿಲ್ದಾಣ, ಬ್ಯಾಂಕು, ಅಂಚೆ, ಪಿಂಚಣಿ, ತೆರಿಗೆ ಹೀಗೆ ಎಲ್ಲ ಕೇಂದ್ರ ಸರ್ಕಾರಿ ಕಚೇರಿಗಳಲ್ಲೂ ಹಿಂದಿ ಹೇರಿಕೆ ಸಲೀಸಾಗಿ ನಡೆಯುತ್ತ ಕನ್ನಡ ಅಲ್ಲಿಂದ ಸಂಪೂರ್ಣವಾಗಿ ಕಣ್ಮರೆಯಾಗುವ ಹಂತ ತಲುಪಿದೆ. ಆದರೆ ಈ ಬಗ್ಗೆ ಕನ್ನಡಿಗರಲ್ಲಿ ಈಗ ಸಾಕಷ್ಟು ಜಾಗೃತಿಯಾಗಿದೆ, ಕನ್ನಡಿಗರಲ್ಲಿನ ಭಾಷಾ ಕೀಳರಿಮೆ ಕಡಿಮೆಯಾಗುತ್ತಿದೆ. ಹಿಂದಿ ಹೇರಿಕೆಯ ಬಗ್ಗೆ ಕಳೆದ ಐದು ವರ್ಷಗಳಲ್ಲಿ ಕನ್ನಡದ ಮುಖ್ಯವಾಹಿನಿಯಲ್ಲೂ ಹಲವಾರು ಚರ್ಚೆಗಳು ಏರ್ಪಡುತ್ತಿವೆ, ಬಿಜಾಪುರದ ಸಾಹಿತ್ಯ ಸಮ್ಮೇಳನದಲ್ಲಿ ಈ ಬಗ್ಗೆ ನಿರ್ಣಯವನ್ನೇ ಕೈಗೊಳ್ಳಲಾಯಿತು. ಇತ್ತೀಚೆಗೆ ಹಿಂದಿ ಹೇರಿಕೆ ವಿರೋಧವಾಗಿ ಸಾಮಾಜಿಕ ತಾಣ ಟ್ವಿಟರಿನಲ್ಲಿ ನಡೆದ ಎರಡು ಅಭಿಯಾನಗಳಲ್ಲಿ ಕನ್ನಡಿಗರ ಪಾಲ್ಗೊಳ್ಳುವಿಕೆ ತಮಿಳರನ್ನು ಮೀರಿಸುವಂತಿತ್ತು ಅಲ್ಲದೇ ದೇಶದ ಎಲ್ಲ ಭಾಷೆಗಳಿಗೂ ಸಮಾನ ಸ್ಥಾನಮಾನ ಸಿಗಬೇಕು ಅನ್ನುವ ಕೂಗಿಗೆ ಕರ್ನಾಟಕವೇ ಈಗ ಮುಂಚೂಣಿಯ ದನಿಯಾಗಿ ಪರಿಣಮಿಸಿದೆ. ಇದನ್ನು ಎಲ್ಲರಿಗಿಂತ ಹೆಚ್ಚಾಗಿ ತಮಿಳರು ಗುರುತಿಸಿ ಒಪ್ಪಿಕೊಳ್ಳುತ್ತಿರುವುದು ಕನ್ನಡಿಗರಲ್ಲಿ ತಮ್ಮ ಭಾಷಾ ಹಕ್ಕುಗಳ ಕುರಿತು ಹೆಚ್ಚಿರುವ ಅರಿವನ್ನು ಸಾರುತ್ತದೆ.

ಕನ್ನಡ ಕೇಂದ್ರಿತ ಗ್ರಾಹಕ ಚಳುವಳಿಗೆ ಬಲ

ಮುಕ್ತ ಮಾರುಕಟ್ಟೆ ಬಲಗೊಂಡ ನಂತರ ಮಾರುಕಟ್ಟೆಯಲ್ಲಿ ಖಾಸಗಿ ಬಂಡವಾಳದ ಹರಿವು ಹೆಚ್ಚುತ್ತಿದ್ದಂತೆಯೇ ನಮ್ಮ ಊರುಗಳ ಸ್ವರೂಪವೇ ಬದಲಾಯಿತು. ಆದರೆ ಈ ಬದಲಾವಣೆಯ ಜೊತೆ ಮಾರುಕಟ್ಟೆಯಲ್ಲಿ ಕನ್ನಡದ ಸ್ಥಾನಕ್ಕೂ ದೊಡ್ಡ ಏಟು ಬಿತ್ತು. ಕನ್ನಡದ ಜಾಗವನ್ನು ಇಂಗ್ಲಿಷ್/ಹಿಂದಿಗಳು ಆಕ್ರಮಿಸುವ ಸ್ಥಿತಿಯುಂಟಾಯಿತು. ಇದನ್ನು ಬದಲಾಯಿಸಲು ಕನ್ನಡಿಗರಲ್ಲಿ ತಮ್ಮ ಗ್ರಾಹಕ ಹಕ್ಕಿನ ಬಗ್ಗೆ, ಗ್ರಾಹಕರಾಗಿ ಕನ್ನಡ ಬಳಸುವ ಅಗತ್ಯದ ಬಗ್ಗೆ ಅರಿವು ಮೂಡಿಸುವ ಕೆಲಸ ನಿರಂತರವಾಗಿ ಸಾಗಿದ ಪರಿಣಾಮವಾಗಿ ಈಗ ಮಾರುಕಟ್ಟೆಯಲ್ಲಿ ಕನ್ನಡದ ಸ್ಥಿತಿಯಲ್ಲಿ ದಿನೇ ದಿನೇ ಸುಧಾರಣೆಯಾಗುತ್ತಿದೆ. ಹಲವಾರು ಬ್ಯಾಂಕುಗಳ ಎ.ಟಿ.ಎಮ್/ ಐ.ವಿ.ಆರ್ ಗಳಲ್ಲಿ ಕನ್ನಡದ ಆಯ್ಕೆ ಬಂದಿದೆ, ಬೆಂಗಳೂರಿನ ಎಫ್.ಎಮ್ ವಾಹಿನಿಗಳ ಮಾರುಕಟ್ಟೆಯ ಬಹುಪಾಲು ಕನ್ನಡಕ್ಕೇ ದಕ್ಕಿದೆ, ಕನ್ನಡದಲ್ಲೇ ಕ್ರಿಕೆಟ್ ವಿಶ್ವಕಪ್ ನೋಡಲು ಸಾಧ್ಯವಾಗಿದೆ, ಸ್ಮಾರ್ಟ್ ಫೋನುಗಳನ್ನು ಕನ್ನಡದಲ್ಲೇ ಬಳಸಲು ಸಾಧ್ಯವಾಗಿದೆ. ಇಂತಹ ನೂರಾರು ಬದಲಾವಣೆಗಳ ಹಿಂದೆ ಕೆಲಸ ಮಾಡಿರುವುದು ಗ್ರಾಹಕರಾಗಿ ತಮ್ಮ ಭಾಷಾ ಹಕ್ಕುಗಳ ಬಗ್ಗೆ ಅರಿವು ಹೊಂದಿರುವ ಕನ್ನಡದ ಯುವಕರು. ಇವರ ಸಂಖ್ಯೆ ಈಗ ಹೆಚ್ಚುತ್ತಿದೆ. ಕನ್ನಡ ಬಳಸುವ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ಇವರ ಸಂಘಟಿತ ಬಲ ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಕನ್ನಡಕ್ಕೊಂದು ಭದ್ರ ನೆಲೆ ಕಟ್ಟಿಕೊಡುವುದರಲ್ಲಿ ಅನುಮಾನವಿಲ್ಲ.

ಮೇಲಿನ ನಾಲ್ಕೂ ಬದಲಾವಣೆಗಳು ಕನ್ನಡಕ್ಕೆ ಹೊಸ ಭರವಸೆ, ಹುರುಪು ನೀಡುವಂತದ್ದು. ಆದರೆ ಇದು ಸಾಲಲ್ಲ. ಎಲ್ಲಿಯವರೆಗೂ ಕನ್ನಡಿಗರಲ್ಲಿ ಕನ್ನಡವೆನ್ನುವುದು ತಮ್ಮ ರಾಜಕೀಯ ಗುರುತಾಗಿ ಮೂಡಿ ಬರುವುದಿಲ್ಲವೋ, ಎಲ್ಲಿಯವರೆಗೂ ಭಾರತದ ಒಕ್ಕೂಟದಲ್ಲಿ ಕನ್ನಡಿಗರ ಸ್ವಹಿತಾಸಕ್ತಿಯ ಕಣ್ಣಿನಿಂದ ಎಲ್ಲವನ್ನೂ ಕನ್ನಡಿಗರು ನೋಡುವುದಿಲ್ಲವೋ ಅಲ್ಲಿಯವರೆಗೂ ರಾಜಕೀಯವಾಗಿ, ಆರ್ಥಿಕವಾಗಿ ನಾವು ಬಲಹೀನರಾಗೇ ಮುಂದುವರೆಯಬೇಕಾಗುತ್ತದೆ. ಕಳಸಾ-ಬಂಡೂರಿ, ಕಾವೇರಿಯಂತಹ ನದಿ ನೀರಿನ ವಿಚಾರವಿರಲಿ, ಗಡಿ,ನುಡಿಯ ಆದ್ಯತೆಗಳಿರಲಿ, ಕೇಂದ್ರದಿಂದ ನ್ಯಾಯಯುತವಾಗಿ ದೊರೆಯಬೇಕಾದ ಅನುದಾನ, ಯೋಜನೆಗಳಿರಲಿ, ಕನ್ನಡಿಗರಿಗೆ ನ್ಯಾಯ ದೊರೆಯಬೇಕೆಂದರೆ ನಮ್ಮ ರಾಜಕೀಯವನ್ನು ಕನ್ನಡ-ಕನ್ನಡಿಗ ಕೇಂದ್ರಿತವಾಗಿ ರೂಪಿಸಿಕೊಳ್ಳದೇ ನಮಗೆ ವಿಧಿಯಿಲ್ಲ. ಈ ದೂರಗಾಮಿ ಕನಸಿನತ್ತ ಕೆಲಸ ಮಾಡುವ ಪಣ ಕನ್ನಡದ ಯುವಕರು ತೊಡಬೇಕು.

Posted in ಕನ್ನಡ, ಕರ್ನಾಟಕ | ನಿಮ್ಮ ಟಿಪ್ಪಣಿ ಬರೆಯಿರಿ