ಹಿಂದಿಯಲ್ಲೇ ಕೊಂಕಣಿ ಬರೆಯಬೇಕೆಂಬ ಬಲವಂತದ “ಸಾಹಿತ್ಯ ಸ್ನಾನ” !

ಕರ್ನಾಟಕದ ಕೊಂಕಣಿ  ಭಾಷಿಕರು ಕನ್ನಡ ಲಿಪಿಯಲ್ಲಿ ಬರೆದರೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇಲ್ಲ !

ಇದೇ ಭಾನುವಾರ ಮಾರ್ಚ್ 16ರಂದು ಮಂಗಳೂರಿನಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಈ ಸಂದರ್ಭದಲ್ಲಿ ಕರ್ನಾಟಕದ ಕೊಂಕಣಿ ಭಾಷಿಕರು ಎದುರಿಸುತ್ತಿರುವ ಒಂದು ತೊಂದರೆಯ ಬಗ್ಗೆ ಕರ್ನಾಟಕದ ಗಮನ ಸೆಳೆಯಬೇಕಿದೆ.  ಕನ್ನಡದ ಮತ್ತು ಕರ್ನಾಟಕದ ಬೆಳವಣಿಗೆಯಲ್ಲಿ ಕೊಂಕಣಿ ಭಾಷಿಕರ ಕೊಡುಗೆ ಗಣನೀಯವಾದದ್ದು. ಅದು ಕರ್ನಾಟಕದಲ್ಲಿ ಹುಟ್ಟಿದ ಬ್ಯಾಂಕಿಂಗ್, ಸಾಫ್ಟವೇರ್ ಸಂಸ್ಥೆಗಳಿರಬಹುದು,ವೈದ್ಯಕೀಯ ರಂಗದಲ್ಲಿರಬಹುದು, ಶಿಕ್ಷಣ ಸಂಸ್ಥೆಗಳಿರಬಹುದು, ಪತ್ರಿಕೋದ್ಯಮದ ಸಂಸ್ಥೆಗಳಿರಬಹುದು ಇಲ್ಲವೇ ಕನ್ನಡದ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆಯಿರಬಹುದು, ಕರ್ನಾಟಕದ ಕೊಂಕಣಿ ನುಡಿಯಾಡುವವರ ಕೊಡುಗೆಯನ್ನು ಮರೆಯಲಾಗದು. ಸಾಹಿತ್ಯ ಲೋಕದಲ್ಲಿ ಗೋವಿಂದ ಪೈ, ಗಿರೀಶ್ ಕಾರ್ನಾಡ್, ನಾ.ಡಿಸೋಜಾ, ಯಶವಂತ್ ಚಿತ್ತಾಲ, ಗೌರೀಶ್ ಕಾಯ್ಕಿಣಿ, ಜಯಂತ್ ಕಾಯ್ಕಿಣಿ ಹೀಗೆ ಹಲವು ಪ್ರತಿಭಾವಂತರನ್ನು ಕನ್ನಡಕ್ಕೆ ಕೊಟ್ಟ ಹಿರಿಮೆ ಕೊಂಕಣಿಗರದ್ದು. ಆದರೆ ಕರ್ನಾಟಕದ ಕೊಂಕಣಿ ಜನರು ಕನ್ನಡ ಲಿಪಿಯಲ್ಲಿ ಬರೆಯುವ ಕೊಂಕಣಿ ಸಾಹಿತ್ಯಕ್ಕೆ ಭಾರತದ ಮಟ್ಟದಲ್ಲಿ ಯಾವುದೇ ಮನ್ನಣೆ ಸಿಗದಂತಹ ವ್ಯವಸ್ಥೆಯೊಂದು ಇವತ್ತು ನಮ್ಮ ನಡುವೆ ಇದೆ ಅನ್ನುವುದು ನಿಜಕ್ಕೂ ಅಚ್ಚರಿಯ ಮತ್ತು ನೋವಿನ ಸಂಗತಿಯಾಗಿದೆ.

ಕನ್ನಡ ಲಿಪಿಯಲ್ಲಿ ಬರೆದ ಕೊಂಕಣಿ ಸಾಹಿತ್ಯಕ್ಕೆ ಮನ್ನಣೆಯಿಲ್ಲ

ಕೊಂಕಣಿ ಭಾಷಿಕರು ಗುಜರಾತಿನಿಂದ ಕೇರಳದವರೆಗೆ ಐದು ರಾಜ್ಯಗಳಲ್ಲಿ ಹರಡಿಕೊಂಡಿದ್ದಾರೆ. ಕರ್ನಾಟಕದಲ್ಲಿ ಇತರೆಲ್ಲ ರಾಜ್ಯಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕೊಂಕಣಿ ಭಾಷಿಕರು ನೆಲೆಸಿದ್ದಾರೆ. ಪ್ರತಿ ರಾಜ್ಯದಲ್ಲೂ ಆಯಾ ರಾಜ್ಯದಲ್ಲಿ ಅಲ್ಲಿನ ನುಡಿ ಯಾವುದಿದೆಯೋ ಆ ಲಿಪಿಯಲ್ಲೇ ಕೊಂಕಣಿ ಸಾಹಿತ್ಯ ರಚಿಸುತ್ತಲೂ ಬಂದಿದ್ದಾರೆ. ಕರ್ನಾಟಕದಲ್ಲಿ ಕೊಂಕಣಿ ಭಾಷಿಕರು ಕನ್ನಡ ಲಿಪಿಯಲ್ಲಿ ಸಾಹಿತ್ಯ ರಚಿಸುತ್ತ ಬಂದಿದ್ದಾರೆ. ಹಾಗೆಯೇ ಕೊಂಕಣಿ ಭಾಷಿಕರು ಬೇರೆ ಬೇರೆ ರಾಜ್ಯಗಳಲ್ಲಿ ರೋಮನ್ ಲಿಪಿ, ದೇವನಾಗರಿ ಲಿಪಿ, ಮಲಯಾಳಂ ಲಿಪಿಯನ್ನು ಬಳಸುತ್ತಾ ಬಂದಿದ್ದಾರೆ. ಪ್ರದೇಶದಿಂದ ಪ್ರದೇಶಕ್ಕೆ ಅಲ್ಲಿನ ಪ್ರಮುಖ ನುಡಿಯ ಜೊತೆಗಿನ ಒಡನಾಟದಿಂದಾಗಿ ಕೊಂಕಣಿಯ ಸೊಗಡು ಬದಲಾಗುತ್ತ ಬಂದಿದೆ. ಇದರಿಂದಾಗಿ ಆಯಾ ಪ್ರದೇಶದ ಭಾಷೆಯ ಲಿಪಿಯಲ್ಲಿ ಕೊಂಕಣಿ ಸಾಹಿತ್ಯ ಬರೆಯುವ ರೀತಿಯೂ ಹಿಂದಿನಿಂದಲೂ ರೂಢಿಯಲ್ಲಿದೆ. ಆದರೆ ಕೊಂಕಣಿಗೆ ಹೇಗಾದರೂ ಸರಿ ದೇವನಾಗರಿ ಲಿಪಿಯೊಂದನ್ನೇ  ಅಳವಡಿಸಬೇಕು ಅನ್ನುವ ವೈವಿಧ್ಯತೆ ವಿರೋಧಿ ಮನಸ್ಥಿತಿಯ ಜನರಿಂದಾಗಿ ಇಂದು ದೇವನಾಗರಿಯೇತರ ಲಿಪಿಯಲ್ಲಿನ ಕೊಂಕಣಿ ಸಾಹಿತ್ಯಕ್ಕೆ ಮನ್ನಣೆ ಸಿಗದಂತಾಗಿದೆ. ಕೇಂದ್ರ ಸರ್ಕಾರ ಭಾರತದ ಬೇರೆ ಬೇರೆ ಭಾಷೆಗಳ ಸಾಹಿತ್ಯಕ್ಕೆ ಮನ್ನಣೆ ನೀಡಲು ಸ್ಥಾಪಿಸಿರುವ ಕೇಂದ್ರ ಸಾಹಿತ್ಯ ಅಕಾಡೆಮಿ ಕೊಂಕಣಿ ವಿಷಯದಲ್ಲಿ ಒಂದು ನಿಯಮ ರೂಪಿಸಿದ್ದು, ಯಾವುದೇ ಕೊಂಕಣಿ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೆ ಪರಿಗಣಿಸಲು ಅರ್ಹವಾಗಬೇಕೆಂದರೆ ಅದು ಕಡ್ಡಾಯವಾಗಿ ದೇವನಾಗರಿ ಲಿಪಿಯಲ್ಲೇ ಬರೆದಿರಬೇಕು ಅನ್ನುವ ಕಟ್ಟಳೆ ರೂಪಿಸಿದೆ. ಇದರಿಂದಾಗಿ ಹತ್ತಾರು ದಶಕಗಳಿಂದ ಕನ್ನಡ, ಮಲಯಾಳಂ, ರೋಮನ್ ಲಿಪಿಗಳಲ್ಲೂ ಅದ್ಭುತವಾದ ಕೊಂಕಣಿ ಸಾಹಿತ್ಯ ಕಟ್ಟುತ್ತಿದ್ದ ಜನರಿಗೆ ಈ ಪ್ರಶಸ್ತಿ ಎಂದಿಗೂ ಸಿಗದ ಹಾಗಾಗಿದೆ. ಜೊತೆಯಲ್ಲೇ ಆಯಾ ರಾಜ್ಯದ ಮುಖ್ಯವಾಹಿನಿಯಲ್ಲಿ ಬೆರೆತು ಹೋಗಿರುವ ಕೊಂಕಣಿಗರನ್ನು ಸಾಹಿತ್ಯದ ವಿಷಯದಲ್ಲಿ ಅಲ್ಲಿನ ಲಿಪಿಯಿಂದ ಬೇರ್ಪಡಿಸುವ ಸಂಚಿನಂತೆಯೂ ಕಾಣುತ್ತಿದೆ. ಇದು ಭಾರತದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿರುವ ಹಿಂದಿ ಹೇರಿಕೆಯ  ಮುಂದುವರೆದ ಭಾಗವೇ ಅನ್ನುವುದು ಇದರ ವಿರುದ್ಧ ಹೋರಾಡುತ್ತ ಬಂದಿರುವ ಕರ್ನಾಟಕ ಮತ್ತು ಕೇರಳದ ಕೊಂಕಣಿ ಭಾಷಿಕರ ಅಭಿಪ್ರಾಯವಾಗಿದೆ. ಈ ಅನ್ಯಾಯದ ವಿರುದ್ಧ  ಜಾಗೋತಿಕ್ ಕೊಂಕಣಿ ಸಂಘೋಟನ್ ಸಂಸ್ಥೆ ಕರ್ನಾಟಕದ ಹೈಕೋರ್ಟ್ ಮೆಟ್ಟಲನ್ನು ಏರಿದ್ದು ಪ್ರಕರಣ ವಿಚಾರಣೆಯಲ್ಲಿದೆ. ಕರ್ನಾಟಕದ ಕೊಂಕಣಿ ಭಾಷಿಕರ ಈ ಹೋರಾಟಕ್ಕೆ ಕೊಂಕಣಿ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸರ್ಕಾರ ಮತ್ತು ಕನ್ನಡಿಗರು ಸ್ಪಂದಿಸಬೇಕು. ಕೊಂಕಣಿ ನುಡಿಯಾಡುವವರು ಕನ್ನಡಕ್ಕೆ ನೀಡಿರುವ ಕೊಡುಗೆ ನೋಡಿದಾಗ ಅವರ ಈ ಕಳವಳಕ್ಕೆ ಕನ್ನಡಿಗರು ದನಿಯಾಗಬೇಕು.

ಸಮಸ್ಯೆ ಲಿಪಿಯದ್ದಲ್ಲ, ಭಾಷಾ ನೀತಿಯ ಹಿಂದಿನ ಚಿಂತನೆಯದ್ದು

ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ದೇಶಕ್ಕೊಂದು ಭಾಷೆ ಬೇಕು ಅನ್ನುವ ಚಿಂತನೆಯುಳ್ಳವರ ಒತ್ತಾಸೆಯಿಂದಾಗಿ ಬಹು ಭಾಷಾ ವೈವಿಧ್ಯತೆಯ ನಾಡಿನಲ್ಲಿ ಹಿಂಬಾಗಿಲಿನಿಂದ ಹಿಂದಿಯನ್ನು ಹೇರುವ ಕೆಲಸ ನಡೆದುಕೊಂಡು ಬರುತ್ತಿದೆ. ಜನಸಾಮಾನ್ಯರ ಅನುಕೂಲಕ್ಕೆ ಜನರ ಭಾಷೆ ಬಳಸಬೇಕು ಅನ್ನುವ ಸಾಮಾನ್ಯ ಪ್ರಜ್ಞೆಯನ್ನು ಕೈ ಬಿಟ್ಟು ದೇಶಾದ್ಯಂತ ನಾಗರೀಕ ಸೇವೆ ಕಲ್ಪಿಸುವ ಬ್ಯಾಂಕು, ರೈಲು, ಅಂಚೆ, ವಿಮೆ, ಪಿಂಚಣಿ, ವಿಮಾನಸೇವೆ ಹೀಗೆ ಎಲ್ಲ ರಂಗದಲ್ಲೂ ಹಿಂದಿ ಹೇರಿಕೆಯನ್ನು ಪ್ರೋತ್ಸಾಹಿಸುವ, ಸ್ಥಳೀಯ ನುಡಿಗಳನ್ನು ಕಡೆಗಣಿಸುವ ಭಾಷಾ ನೀತಿಯೊಂದು ಭಾರತದಲ್ಲಿ ಜಾರಿಯಲ್ಲಿದೆ. ಇದರ ಫಲವಾಗಿ ಹಿಂದಿಯೆನ್ನುವ 800 ವರ್ಷಗಳ ಇತಿಹಾಸದ ಭಾಷೆಯೆದುರು ಕನ್ನಡ, ತೆಲುಗಿನಂತಹ ಎರಡು ಸಾವಿರ ವರ್ಷಕ್ಕೂ ಹೆಚ್ಚು ಇತಿಹಾಸವಿರುವ ನುಡಿಗಳು ತಮ್ಮದೇ ನೆಲದಲ್ಲಿ ಹಿನ್ನಡೆ ಅನುಭವಿಸುತ್ತಿವೆ. ಇದಕ್ಕೆ ಹೊಸ ಸೇರ್ಪಡೆ ಭಾರತದ ಚಿಕ್ಕ ಪುಟ್ಟ ಲಿಪಿಯಿಲ್ಲದ ಭಾಷೆಗಳಿಗೆ ಹಿಂದಿಯನ್ನು ಬರೆಯಲು ಬಳಸುವ ದೇವನಾಗರಿ ಲಿಪಿಯನ್ನೇ ಅಳವಡಿಸುವ ಇನ್ನೊಂದು ಯೋಜನೆ. ಇದೆಲ್ಲವೂ ಭಾಷೆ ಮತ್ತು ಲಿಪಿಯ ವೈವಿಧ್ಯತೆಯನ್ನು ಅಳಿಸಿ ಏಕ ಭಾಷೆ, ಏಕ ಸಂಸ್ಕ್ರುತಿ ಹೇರುವ ಪ್ರಯತ್ನವೇ ಆಗಿದೆ. ಇದು ಭಾರತದಂತಹ ಭಾಷಾವಾರು ಪ್ರಾಂತ್ಯಗಳ ಒಕ್ಕೂಟಕ್ಕೆ ಒಳ್ಳೆಯದಲ್ಲ. ಈ ಹಿನ್ನೆಲೆಯಲ್ಲಿ ಮಾರ್ಚ್ 16ರ ಭಾನುವಾರ ಮಂಗಳೂರಿನ ಶಕ್ತಿನಗರದಲ್ಲಿರುವ ಕಲಾಂಗಣದಲ್ಲಿ ನಡೆಯುವ ಕರ್ನಾಟಕ ಕೊಂಕಣಿ ಸಾಹಿತ್ಯ ಸಮ್ಮೇಳನ ಕೊಂಕಣಿಗರಿಗೆ ಮಹತ್ವದ್ದು.  ಅಂದು ಜಾಗತೀಕರಣದ ಈ ದಿನದಲ್ಲಿ ಹಲವು ರಾಜ್ಯಗಳಲ್ಲಿ ಹರಡಿಕೊಂಡಿರುವ ಕೊಂಕಣಿ ಭಾಷಿಕರು ಹಲವು ಲಿಪಿಯ ವೈವಿಧ್ಯತೆಯನ್ನು ಉಳಿಸಿಕೊಂಡೇ ಕೊಂಕಣಿ ಭಾಷೆಯನ್ನು ಮುಂದಿನ ಪೀಳಿಗೆಗೆ ಒಯ್ಯುವತ್ತ ಏನು ಮಾಡಬೇಕು ಅನ್ನುವ ಬಗ್ಗೆ ಹಲವು ಒಳ್ಳೆಯ ಚರ್ಚೆಗಳು ಏರ್ಪಡುತ್ತಿವೆ. ಮಂಗಳೂರಿನ ಆಸುಪಾಸಿನವರು ಪಾಲ್ಗೊಂಡು ಬೆಂಬಲ ಸೂಚಿಸಬಹುದು.

ಈ ಅಂಕಣ ಇಂದಿನ ಉದಯವಾಣಿಯ “ಕನ್ನಡ ಜಗತ್ತು” ಅಂಕಣದಲ್ಲಿ ಪ್ರಕಟವಾಗಿದೆ.

konkani_3_14

This entry was posted in ಒಕ್ಕೂಟ ವ್ಯವಸ್ಥೆ, ಹಿಂದಿ ಹೇರಿಕೆ. Bookmark the permalink.

1 Response to ಹಿಂದಿಯಲ್ಲೇ ಕೊಂಕಣಿ ಬರೆಯಬೇಕೆಂಬ ಬಲವಂತದ “ಸಾಹಿತ್ಯ ಸ್ನಾನ” !

  1. makara ಹೇಳುತ್ತಾರೆ:

    ಹೀಗೆ ಹಿಂದಿ ಹೇರುವಿಕೆಯ ವಿರುದ್ಧ ಖಂಡಿತವಾಗಿ ನಾವೆಲ್ಲರೂ ಕೊಂಕಣಿಗರಿಗೆ ನೈತಿಕ ಬೆಂಬಲ ಕೊಡಬೇಕು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s