ಯಾರ ಪ್ರಣಾಳಿಕೆಯಲ್ಲೇನಿದೆ? – ಬಿಜೆಪಿ

ಪ್ರಿಯಾಂಕ್ ಕತ್ತಲಗಿರಿ

ಲೋಕಸಭೆ 2014ರ ಚುನಾವಣೆಗಾಗಿ ಬಿಜೆಪಿಯು ಹೊರತಂದಿರುವ ಪ್ರಣಾಳಿಕೆಯನ್ನು ಕರ್ನಾಟಕಕ್ಕೆ ಒಳಿತೋ ಕೆಡುಕೋ ಎಂದು ನೋಡುವ ಬರಹ ಇದಾಗಿದೆ. ಆಸಕ್ತರು ಪ್ರಣಾಳಿಕೆಯನ್ನು ಈ ಕೊಂಡಿಯಲ್ಲಿ ನೋಡಬಹುದಾಗಿದ್ದು, ಪ್ರಣಾಳಿಕೆಯು ಇಂಗ್ಲೀಶ್ ಮತ್ತು ಹಿಂದಿಯಲ್ಲಿ ಮಾತ್ರಾ ಸಿಗುತ್ತಿದೆ. ಕರ್ನಾಟಕದಲ್ಲಿ ಚುನಾವಣೆ ನಡೆಯಲು ಇನ್ನು ಕೆಲವೇ ದಿನಗಳು ಬಾಕಿ ಇದ್ದರೂ, ಕನ್ನಡದಲ್ಲಿ ಬಿಜೆಪಿಯ ಪ್ರಣಾಳಿಕೆಯನ್ನು ಅಚ್ಚುಹಾಕಿಸಿಲ್ಲ.  ಒಕ್ಕೂಟ ವ್ಯವಸ್ಥೆಯ ಕಣ್ಣಿನಿಂದ ಪ್ರಣಾಳಿಕೆಯನ್ನು ನೋಡುತ್ತಿರುವುದರಿಂದ ಆ ವಿಷಯಗಳತ್ತ ಮಾತ್ರವೇ ಇಲ್ಲಿ ನನ್ನ ಅನಿಸಿಕೆ ಬರೆದಿದ್ದೇನೆ.

ಆಡಳಿತ ಮತ್ತು ಅಧಿಕಾರ ವಿಕೇಂದ್ರಗೊಳಿಸುವುದಕ್ಕೆ ಒತ್ತು
ಈವತ್ತಿನ ಆಡಳಿತ ಮತ್ತು ಅಧಿಕಾರವು ದೆಹಲಿಯಲ್ಲಿ ಕೇಂದ್ರಿತಗೊಂಡಿದೆ ಎಂಬುದನ್ನು ಬಿಜೆಪಿ ಒಪ್ಪಿದೆ. ಇದು ಬದಲಾಗಬೇಕು ಮತ್ತು ಆಡಳಿತವು ವಿಕೇಂದ್ರಿತವಾಗಬೇಕು ಎಂಬ ಆಶಯವನ್ನೂ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ತೋರಿಸಿದೆ. ಆಡಳಿತ ಮತ್ತು ಅಧಿಕಾರವನ್ನು ವಿಕೇಂದ್ರಗೊಳಿಸುವ ಮೂಲಕವೇ ಇಂಡಿಯಾದಲ್ಲಿನ ಹಲಬಗೆಯ ಜನರ ಬಯಕೆಗಳನ್ನು ಈಡೇರಿಸಲು ಸಾಧ್ಯ ಎಂಬುದನ್ನು ಬಿಜೆಪಿ ಒಪ್ಪಿಕೊಂಡಂತೆ ಕಾಣುತ್ತದೆ. ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ನೀಡಬೇಕು ಎಂಬ ಬೇಡಿಕೆಗೆ ಬದ್ಧವಾಗಿರುವಂತೆ ಬಿಜೆಪಿ ಹೇಳಿಕೊಂಡಿದೆ. ಜೊತೆಯಲ್ಲಿ ರಾಜ್ಯಗಳಿಂದ ದೇಶದ ಏಳಿಗೆಯಾಗುವಂತಹ ವ್ಯವಸ್ಥೆಯತ್ತ ಮುನ್ನಡೆಯಬೇಕು ಅನ್ನುವ ಮಾತುಗಳನ್ನಾಡಿದೆ. ಇದು ನಿಜಕ್ಕೂ ಒಳ್ಳೆಯ ಅಂಶ. ಯಾವೆಲ್ಲಾ ಅಧಿಕಾರಗಳನ್ನು ರಾಜ್ಯಗಳಿಗೆ ನೀಡಲಾಗುತ್ತದೆ ಎಂಬುದನ್ನು ಬಿಜೆಪಿ ರಟ್ಟುಮಾಡಿಲ್ಲ. ಸೇನೆ, ಹೊರನಾಡುಗಳೊಂದಿಗೆ ವಹಿವಾಟು ಮತ್ತು ಹಣಕಾಸು ಏರ್ಪಾಡು ಮೇಲುಸ್ತುವಾರಿಯಂತಹ ಕೆಲವೇ ಕೆಲವು ವಿಷಯಗಳನ್ನು ಕೇಂದ್ರದ ಹಿಡಿತದಲ್ಲಿಟ್ಟುಕೊಂಡು, ಮಿಕ್ಕೆಲ್ಲಾ ವಿಷಯಗಳನ್ನೂ ರಾಜ್ಯ ಸರಕಾರಗಳಿಗೇ ವಹಿಸಿಕೊಡುವುದು ಸೂಕ್ತ. ಆದರೆ, ಈ ನಿಟ್ಟಿನಲ್ಲಿ ಬಿಜೆಪಿಯ ನಡೆ ಯಾವ ಬಗೆಯದ್ದು ಎಂಬುದು ಪ್ರಣಾಳಿಕೆಯಲ್ಲಿ ತಿಳಿಯಾಗಿಲ್ಲ. ಮೇಲಾಗಿ, ಬಲಿಷ್ಟ ಕೇಂದ್ರ ಸರಕಾರ ಮತ್ತು ಬಲಹೀನ ರಾಜ್ಯ ಸರಕಾರಗಳಿರುವುದನ್ನು ಆರ್.ಎಸ್.ಎಸ್. ತನ್ನ ಸಿದ್ಧಾಂತ ಮಾಡಿಕೊಂಡಿರುವಾಗ, ಬಿಜೆಪಿ ವಿಕೇಂದ್ರಿಕರಣಗೊಳಿNamoಸುವ ಕೆಲಸವನ್ನು ಹೇಗೆ ಮತ್ತು ಎಷ್ಟರ ಮಟ್ಟಿಗೆ ಮಾಡುತ್ತದೆ ಎಂಬುದು ಕಾದುನೋಡಬೇಕಾಗಿದೆ.

ಕೋರ್ಟುಗಳು ಜನಸಾಮಾನ್ಯರಿಗೆ ತಲುಪುವಂತೆ ಮಾಡುವ ಕೆಲಸ
ಕೋರ್ಟುಗಳು ಜನಸಾಮಾನ್ಯರಿಗೆ ಎಟುಕದಂತಾಗಿವೆ ಎಂಬುದನ್ನು ಬಿಜೆಪಿ ಕಂಡುಕೊಂಡಿದೆ. ಜನಸಾಮಾನ್ಯರಿಗೆ ನ್ಯಾಯಾಂಗ ವ್ಯವಸ್ಥೆ ಕೈಗೆಟುಕುವಂತಾಗಿಸಲು ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದಾಗಿ ಬಿಜೆಪಿ ಹೇಳಿದೆ. ಇದು ಒಳ್ಳೆಯ ನಿರ್ಧಾರವೇ. ಇವತ್ತಿನ ದಿನ, ಹೈಕೋರ್ಟುಗಳಲ್ಲಿ ಜನಸಾಮಾನ್ಯರ ನುಡಿಯನ್ನು ಬಳಸಲು ಅವಕಾಶವೇ ಇಲ್ಲ. ಇಂಗ್ಲೀಶು ಬಿಟ್ಟರೆ ಹಿಂದಿಯಲ್ಲಿ ಮಾತ್ರಾ ಹೈಕೋರ್ಟುಗಳು ನಡೆಯುತ್ತವೆ. ಜನಸಾಮಾನ್ಯರ ನುಡಿಯಲ್ಲಿ ಹೈಕೋರ್ಟುಗಳು ನಡೆಯದೇ ಇದ್ದರೆ, ಅವು ಜನರಿಂದ ದೂರವೇ ಉಳಿದಂತೆ. ಕರ್ನಾಟಕದ ಹೈಕೋರ್ಟಿನಲ್ಲಿ ಕನ್ನಡ, ತಮಿಳುನಾಡಿನ ಹೈಕೋರ್ಟಿನಲ್ಲಿ ತಮಿಳು, ಮಹಾರಾಶ್ಟ್ರದ ಹೈಕೋರ್ಟಿನಲ್ಲಿ ಮರಾಟಿ ಹೀಗೆ ಜನಸಾಮಾನ್ಯರ ನುಡಿ ಬಳಕೆಯಾಗಬೇಕು. ಆ ನಿಟ್ಟಿನಲ್ಲಿ ಯಾವುದೇ ಕೆಲಸವನ್ನು ಬಿಜೆಪಿ ಹಮ್ಮಿಕೊಂಡಿರುವುದು ಪ್ರಣಾಳಿಕೆಯಲ್ಲಿ ಕಾಣುತ್ತಿಲ್ಲ.

ಭಾರತೀಯ ನುಡಿಗಳ ಬಗ್ಗೆ

ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೀಗೆ ಹೇಳುತ್ತೆ: Languages: Indian Languages are repositories of our rich literature, history, culture, art and scientific achievements. Many of our dialects are important source for knowing our heritage. BJP would promote Indian languages, and put measures for the development of all Indian languages, so that they become a powerful vehicle for creating a knowledge society.

ಈ ಹೇಳಿಕೆ ತುಂಬಾ ಮೇಲು ಮೇಲಿನದ್ದಾಗಿದೆ. ಭಾರತೀಯ ನುಡಿಗಳಲ್ಲಿ ಎಲ್ಲ ಹಂತದ ಕಲಿಕೆ ರೂಪಿಸುವ ಭರವಸೆಯನ್ನಾಗಲಿ, ಹಿಂದಿ ಹೇರಿಕೆಗೆ ಕೊನೆ ಹಾಡಿ ಭಾರತೀಯ ನುಡಿಗಳಿಗೆಲ್ಲ ಸಮಾನ ಸ್ಥಾನಮಾನ ನೀಡುವ ಬೇಡಿಕೆ ಈಡೇರಿಸುವ ಬಗ್ಗೆಯಾಗಲಿ ಬಿಜೆಪಿ ಮಾತನಾಡಿಲ್ಲ.  ಈ ವಿಷಯದಲ್ಲಿ ತನ್ನ ನಿಲುವನ್ನು ಇನ್ನಶ್ಟು ವಿವರವಾಗಿ ಸ್ಪಷ್ಟವಾಗಿ ತಿಳಿಸಿದ್ದರೆ ಅದನ್ನು ಮೆಚ್ಚಬಹುದಿತ್ತು.

ಚಿಕ್ಕ ಚಿಕ್ಕ ರಾಜ್ಯಗಳನ್ನು ಮಾಡಲು ಬದ್ಧತೆ
“ಇಂಡಿಯಾದಲ್ಲಿ ಇನ್ನೂ ಹಲವು ಚಿಕ್ಕ ಚಿಕ್ಕ ರಾಜ್ಯಗಳನ್ನು ಮಾಡುವುದು ಆಡಳಿತವನ್ನು ಸಲೀಸು ಮಾಡುತ್ತದೆ, ಹಾಗಾಗಿ ಚಿಕ್ಕ ಚಿಕ್ಕ ರಾಜ್ಯಗಳನ್ನು ಹುಟ್ಟುಹಾಕಲು ಬಿಜೆಪಿ ಬದ್ಧವಾಗಿದೆ” ಎಂದು ಹೇಳಿಕೊಂಡಿದೆ. ಚಿಕ್ಕ ರಾಜ್ಯಗಳನ್ನು ಏಳಿಗೆಯ ಸೋಪಾನವೆಂಬಂತೆ ಬಿಂಬಿಸುವ ಬಿಜೆಪಿಯ ನಿರ್ಧಾರದ ಹಿಂದೆ ಬಲಿಷ್ಟ ಕೇಂದ್ರ, ಬಲಹೀನ ಮತ್ತು ಚಿಕ್ಕ ರಾಜ್ಯಗಳಿರಬೇಕೆಂಬ ಆರ್.ಎಸ್.ಎಸ್ ನಿಲುವಿನ ಪ್ರಭಾವ ಇದೆ ಅಂದರೆ ತಪ್ಪಾಗದು. ತೆಲುಗರ ಹಲವು ಕಳವಳಗಳನ್ನು ಪರಿಹರಿಸದೇ ತೆಲುಗರ ವಿರೋಧದ ನಡುವೆಯೂ ತೆಲಂಗಾಣ ಬಿಲ್ ಪಾಸ್ ಮಾಡಲು ಕಾಂಗ್ರೆಸ್ ಮುಂದಾದಾಗ ಲೋಕಸಭೆಯಲ್ಲಿ ಅವರಿಗೆ ಬೆಂಬಲ ಕೊಟ್ಟು ತೆಲುಗರನ್ನು ಒಡೆದ ಪಾಪದಲ್ಲಿ ಬಿಜೆಪಿಯದ್ದು ಸಮ ಪಾಲಿದೆ ಅನ್ನುವುದನ್ನು ಇಲ್ಲಿ ನೆನೆಯಬಹುದು. ಕರ್ನಾಟಕದಲ್ಲಿ ಒಡಕಿನ ಮಾತನಾಡುತ್ತಿರುವವರು ಬಿಜೆಪಿಯ ನಾಯಕರೇ ಅನ್ನುವುದನ್ನು ಇಲ್ಲಿ ಮರೆಯಬಾರದು. ಮೊದಲು ಸರಿಯಾದ ಒಕ್ಕೂಟ ವ್ಯವಸ್ಥೆ ರೂಪಿಸಿ ತದನಂತರ ಚಿಕ್ಕ ರಾಜ್ಯಗಳಾಗಲಿ ಎಂದು ಮಾತನಾಡಿದ್ದರೆ ಬಿಜೆಪಿ ಈ ಬಗ್ಗೆ ಪ್ರಾಮಾಣಿಕವಾಗಿದೆ ಅನ್ನಬಹುದಿತ್ತು.

ರಾಜ್ಯಗಳಿಗೆ ಹೆಚ್ಚಿನ ಆರ್ಥಿಕ ಸ್ವಾಯತ್ತತೆ ಸಿಗಬೇಕು. ಕೇಂದ್ರ ಮತ್ತು ರಾಜ್ಯದ ನಡುವೆ ಸೌಹಾರ್ದಯುತ ಸಂಬಂಧಗಳಿರಬೇಕು. ವಿದೇಶಿ ಹೂಡಿಕೆಯ ನಿರ್ಧಾರಗಳಲ್ಲಿ ರಾಜ್ಯಗಳಿಗೂ ದನಿಯಿರಬೇಕು. ಏಳಿಗೆ ವಂಚಿತ ಈಶಾನ್ಯ ರಾಜ್ಯಗಳತ್ತ ಹೆಚ್ಚಿನ ಗಮನ ಹರಿಸಲಾಗುವುದು. ಹೀಗೆ ಒಕ್ಕೂಟ ವ್ಯವಸ್ಥೆಯ ಕಣ್ಣಿನಿಂದ ಮೆಚ್ಚುವ ಹಲವು ಅಂಶಗಳು ಬಿಜೆಪಿ ಪ್ರಣಾಳಿಕೆಯಲ್ಲಿವೆ. ಈ ವಿಷಯದಲ್ಲಿ ಕಾಂಗ್ರೆಸಿಗಿಂತ ಬಿಜೆಪಿ ಹೆಚ್ಚು ಒಕ್ಕೂಟ ವ್ಯವಸ್ಥೆ ಪರ ಅನ್ನುವಂತೆ ಬಿಂಬಿಸಿಕೊಂಡಿದೆ. ಒಂದು ವೇಳೆ ಅಧಿಕಾರಕ್ಕೆ ಬಂದಲ್ಲಿ, ಒಕ್ಕೂಟ ವ್ಯವಸ್ಥೆಯನ್ನು ಹಿಂದಿನಿಂದಲೂ ಒಪ್ಪದ ಆರ್.ಎಸ್.ಎಸ್ ನ ವಿರೋಧದ ನಡುವೆಯೂ ಇದನ್ನು ಎಷ್ಟರಮಟ್ಟಿಗೆ ಜಾರಿಗೆ ತರಬಲ್ಲದು ಅನ್ನುವುದನ್ನು ಕಾದು ನೋಡಬೇಕಿದೆ.

This entry was posted in ಒಕ್ಕೂಟ ವ್ಯವಸ್ಥೆ, ಕರ್ನಾಟಕ, ಲೋಕಸಭೆ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s