ಕರ್ನಾಟಕದ ಹೊಸ ಸಂಸದರಿಗೆ 6 ಅತಿ ಮುಖ್ಯ ಕೆಲಸಗಳು !

ಅಂತೂ ಇಂತೂ ಲೋಕಸಭೆಯ ಚುನಾವಣೆ ಮುಗಿದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಕರ್ನಾಟಕದಲ್ಲಿ ಕಳೆದ ಬಾರಿ ಯಾವ ಪಕ್ಷಗಳು ಎಷ್ಟು ಸ್ಥಾನ ಗೆದ್ದಿದ್ದವೋ ಅದರ ಆಸುಪಾಸಿನಲ್ಲೇ ಈ ಬಾರಿಯೂ ಗೆದ್ದಿದ್ದಾರೆ. ಕರ್ನಾಟಕವನ್ನು ಪ್ರತಿನಿಧಿಸಲು ಕಳಿಸುತ್ತಿರುವ ಸಂಸದರ ಪಟ್ಟಿಯಲ್ಲಿ ದೇವೆಗೌಡರು, ಯಡಿಯೂರಪ್ಪ, ಸದಾನಂದಗೌಡ, ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಅನಂತಕುಮಾರರಂತಹ ಹಲವು ಅನುಭವಿಗಳು, ಹಿರಿಯ ತಲೆಗಳು ಇರುವುದು ಜೊತೆಗೆ ಬಿಜೆಪಿಯ ಹಲವು ಹಿರಿಯ ಸದಸ್ಯರು ಮಂತ್ರಿಗಳಾಗುವ ಸಾಧ್ಯತೆ, ಎಲ್ಲವು ಈ ಬಾರಿಯಾದರೂ ದೆಹಲಿಯಲ್ಲಿ ಕರ್ನಾಟಕದ ಪರ ದನಿ ಗಟ್ಟಿಯಾಗಿ ಕೇಳಬಹುದು ಅನ್ನುವ ಆಸೆ ಹುಟ್ಟಿಸಿದೆ. ಈ ಹೊತ್ತಿನಲ್ಲಿಬರೀ ಕನ್ನಡದಲ್ಲಿ ಪ್ರಮಾಣ ವಚನ ತೆಗೆದುಕೊಳ್ಳುವಂತಹ ತೋರಿಕೆಯ ಕ್ರಮಗಳಿಗಷ್ಟೇ ನಮ್ಮ ಸಂಸದರ ನಾಡಪರತೆ ನಿಲ್ಲಬಾರದು. ಈಗ ಆಯ್ಕೆಯಾಗಿರುವ ಹೊಸ ಸದಸ್ಯರಿಗೆ ಕರ್ನಾಟಕದ, ಕನ್ನಡಿಗರ ಮುಖ್ಯ ಕೆಲವು ಬೇಡಿಕೆಗಳನ್ನು ಮತ್ತೊಮ್ಮೆ ನೆನಪಿಸುವ ಕೆಲಸ ಶುರುವಿನಲ್ಲೇ ಮಾಡಬೇಕಿದೆ. ಅದರಲ್ಲಿ ಕೆಲವು:

  • ಕಾವೇರಿ ಐತೀರ್ಪು ಗೆಜೆಟ್ ನಲ್ಲಿ ಪ್ರಕಟಗೊಂಡಾಗಿದೆ, ಅದರಂತೆ ಬೆಂಗಳೂರಿನ ಕೇವಲ ಮೂರರಲ್ಲಿ ಒಂದು ಭಾಗಕ್ಕೆ ಮಾತ್ರವೇ ಕಾವೇರಿ ನೀರು ಕೊಡುವ ಲೆಕ್ಕ ನಿಗದಿಯಾಗಿದೆ. ಅಪ್ಪಿ ತಪ್ಪಿ ಈ ವರ್ಷ ಬರವೇನಾದರೂ ಬಂದಲ್ಲಿ, ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ವಿವಾದ ಭುಗಿಲೇಳುವ ಎಲ್ಲ ಸಾಧ್ಯತೆಗಳು ಇವೆ. ಹೀಗಾಗಿ ಈ ವಿವಾದವನ್ನು ಮಳೆಯ ಲೆಕ್ಕಾಚಾರಕ್ಕೆ ಬಿಡದೇ ತಮಿಳುನಾಡು ಮತ್ತು ಕರ್ನಾಟಕದ ಪ್ರತಿನಿಧಿಗಳನ್ನು ಒಂದೆಡೆ ಸೇರಿಸಿ ’ಐತೀರ್ಪಿನಲ್ಲಿ ಕರ್ನಾಟಕಕ್ಕೆ ಆಗಿರುವ ಹಲವು ಅನ್ಯಾಯಗಳನ್ನು ಇಬ್ಬರಿಗೂ ಒಪ್ಪಿಗೆಯಾಗುವ ರೀತಿಯಲ್ಲಿ ಸರಿ ಪಡಿಸುವ ಕೆಲಸ ಕೇಂದ್ರದ ಹೊಸ ಸರ್ಕಾರ ಮಾಡಲಿ’ ಅನ್ನುವ ಒತ್ತಾಯವನ್ನು ಕರ್ನಾಟಕದ ಜನಪ್ರತಿನಿಧಿಗಳು ಮಾಡಬೇಕು. ಇಷ್ಟು ವರ್ಷಗಳ ಕಾಲ ಇದ್ದಂತೆ ತಮಿಳುನಾಡಿನ ಪಕ್ಷಗಳ ಬೆಂಬಲದಿಂದಲೇ ಕೇಂದ್ರದ ಸರ್ಕಾರ ನಡೆಯುವ ಪರಿಸ್ಥಿತಿ ಈ ಬಾರಿ ಇಲ್ಲದಿರುವುದರಿಂದ ಮತ್ತು ಕರ್ನಾಟಕದ ಜನರು 17 ಜನ ಸಂಸದರನ್ನು ಬಿಜೆಪಿಗೆ ಕೊಟ್ಟಿರುವ ಕಾರಣಕ್ಕಾದರೂ ಕರ್ನಾಟಕಕ್ಕೆ ಅನ್ಯಾಯವಾಗದಂತೆ ಮೋದಿಯವರ ಸರ್ಕಾರ ನೋಡಿಕೊಳ್ಳಬೇಕು.
  • ಉತ್ತರ ಕರ್ನಾಟಕದ ಹತ್ತಕ್ಕೂ ಹೆಚ್ಚು ಊರುಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಿರುವ ಕಳಸಾ ಬಂಡೂರಿ ಯೋಜನೆ ಸುಖಾಸುಮ್ಮನೆ ನ್ಯಾಯಾಧೀಕರಣದ ಬಾಗಿಲಿಗೆ ಹೋಗಿ ನಿಂತಿದೆ. ಗೋವಾದಲ್ಲೂ ಬಿಜೆಪಿ ಸರ್ಕಾರವೇ ಇದ್ದು, ಅಲ್ಲಿನ ಮುಖ್ಯಮಂತ್ರಿ ಪರಿಕ್ಕರ್ ಮೋದಿಯವರ ಆಪ್ತರೂ ಆಗಿರುವುದರಿಂದ ಕುಡಿಯುವ ನೀರಿನ ವಿಷಯದಲ್ಲಿ ರಾಜಕೀಯ ಮಾಡದಂತೆ ಅವರ ಮನವೊಲಿಸುವ ಕೆಲಸ ಮೋದಿಯವರ ಸರ್ಕಾರ ಮಾಡಬೇಕು. ಅಂತಹದೊಂದು ಒತ್ತಡವನ್ನು ಕರ್ನಾಟಕದ ಸಂಸದರು, ಅದರಲ್ಲೂ ಬಿಜೆಪಿಯ ಸಂಸದರು ಹೇರಬೇಕು.
  • ಕನ್ನಡ ಮಾಧ್ಯಮದ ವಿಷಯದಲ್ಲಿ ಸುಪ್ರೀಂ ಕೋರ್ಟಿನ ತೀರ್ಪಿನ ನಂತರ ಕರ್ನಾಟಕದಲ್ಲಿ ಕನ್ನಡ ಭಾಷೆಯ ಸಾರ್ವಭೌಮತ್ವಕ್ಕೇ ಮುಂದಿನ ದಿನಗಳಲ್ಲಿ ಧಕ್ಕೆ ತರುವ ಆತಂಕಗಳು ಹುಟ್ಟಿವೆ. ಇದು ಭಾರತದ ಎಲ್ಲ ಭಾಷೆಗಳಿಗೂ ಸವಾಲು ತಂದಿರುವಂತದ್ದು. ಈ ನಿಟ್ಟಿನಲ್ಲಿ ಸಂವಿಧಾನ ತಿದ್ದುಪಡಿ ತಂದು ಆಯಾ ನಾಡಿನಲ್ಲಿ ಅಲ್ಲಿನ ಭಾಷೆಯಲ್ಲಿ ಗುಣಮಟ್ಟದ ಮೊದಲ ಹಂತದ ಕಲಿಕೆ ರೂಪಿಸಿಕೊಳ್ಳಲಾಗುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಕೊಡಿಸುವಂತೆ ಹೊಸ ಸರ್ಕಾರವನ್ನು ಒತ್ತಾಯಿಸಬೇಕು. ಶಿಕ್ಷಣ ಸಂವಿಧಾನದ ಜಂಟಿ ಪಟ್ಟಿಯಿಂದ ರಾಜ್ಯದ ಪಟ್ಟಿಗೆ ವರ್ಗಾಯಿಸುವ ಒತ್ತಾಯ ಹೇರಬೇಕು. ಒಕ್ಕೂಟ ವ್ಯವಸ್ಥೆಯ ಪರವಿದ್ದೇವೆ ಎಂದು ಕರೆದುಕೊಳ್ಳುವ ಮೋದಿಯವರಿಗೆ ಈ ವಿಷಯ ಮನದಟ್ಟು ಮಾಡುವ ಕೆಲಸ ನಮ್ಮ ಸಂಸದರದ್ದಾಗಿದೆ.
  • ಕರ್ನಾಟಕದ 80ಕ್ಕೂ ಹೆಚ್ಚು ತಾಲೂಕುಗಳಲ್ಲಿ ರೈಲು ಮಾರ್ಗವಿಲ್ಲ. ವಿಸ್ತೀರ್ಣದಲ್ಲಿ ಕರ್ನಾಟಕಕ್ಕಿಂತ 32% ಚಿಕ್ಕದಿರುವ ತಮಿಳುನಾಡಿನಲ್ಲಿ 5952 ಕಿ.ಮೀ ಉದ್ದದ ರೈಲು ಮಾರ್ಗವಿದ್ದರೆ, ಕರ್ನಾಟಕದಲ್ಲಿ ಕೇವಲ 3089ಕಿ.ಮೀ ಉದ್ದದ ಮಾರ್ಗವಿದೆ. ಕರ್ನಾಟಕಕ್ಕೆ ಪ್ರತಿ ಬಾರಿ ರೈಲ್ವೆ ಬಜೆಟಿನಲ್ಲೂ ಹೊರ ರಾಜ್ಯದಿಂದ ವಲಸೆ ಹೆಚ್ಚಿಸುವ ರೈಲುಗಳನ್ನೇ ಕೊಡಲಾಗುತ್ತಿದೆಯೇ ಹೊರತು ಕರ್ನಾಟಕದ ಒಳಗಿನ ಊರು-ಪಟ್ಟಣಗಳನ್ನು ಬೆಸೆದು ಕಡಿಮೆ ದರದಲ್ಲಿ ಜನರು ಪ್ರಯಾಣಿಸುವಂತೆ ಮಾಡುವ ರೈಲು ಮಾರ್ಗಗಳು ದೊರಕುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿಗಳ ವಿಚಾರದಲ್ಲೂ ಈ ಮಾತು ಅನ್ವಯಿಸುತ್ತೆ. ಮುಂದಿನ ಐದು ವರ್ಷದಲ್ಲಿ ಅದನ್ನು ಬದಲಾಯಿಸುವಂತೆ ಹೊಸ ಸರ್ಕಾರದ ಮೇಲೆ ಒತ್ತಡ ತರುವ ಕೆಲಸ ರಾಜ್ಯದ ಸಂಸದರು ಮಾಡಬೇಕು.
  • ಕರ್ನಾಟಕ ಉದ್ಯಮಶೀಲ ರಾಜ್ಯವೆನ್ನುವ ಹೆಸರು ಪಡೆದಿರುವ ಕಾರಣ ಇಲ್ಲಿ ಸಾವಿರಾರು ಉದ್ದಿಮೆಗಳು, ಲಕ್ಷಾಂತರ ಕೆಲಸಗಳೇನೊ ಹುಟ್ಟಿಕೊಳ್ಳುತ್ತಿವೆ. ಅಂತಹ ಸೌಲಭ್ಯ ಕಲ್ಪಿಸಲು ಕಡಿಮೆ ದರದಲ್ಲಿ ಭೂಮಿ, ನೀರು, ವಿದ್ಯುತ್, ತೆರಿಗೆ ವಿನಾಯ್ತಿ ಮುಂತಾದ ಸೌಲಭ್ಯ ರಾಜ್ಯ ಸರ್ಕಾರ ಕಲ್ಪಿಸುತ್ತಿದೆ. ಇಷ್ಟಾದರೂ ಇಲ್ಲಿ ಹುಟ್ಟುವ ಕೆಲಸಗಳಲ್ಲಿ ಪ್ರತಿಭಾವಂತ ಸ್ಥಳೀಯರಿಗೆ ಆದ್ಯತೆ ಇಲ್ಲದಂತಾಗಿದ್ದು, ಐಟಿ, ಮ್ಯಾನುಫ್ಯಾಕ್ಚರಿಂಗ್, ಸರ್ವಿಸಸ್ ಅನ್ನದೇ ಹೆಚ್ಚಿನಉದ್ಯಮಗಳಲ್ಲಿ ಸ್ಥಳೀಯ ಕನ್ನಡಿಗರು ಉದ್ಯೋಗವಕಾಶದಿಂದ ವಂಚಿತರಾಗಿದ್ದಾರೆ. ಸರೋಜಿನಿ ಮಹಿಷಿ ವರದಿ ಜಾರಿಗೆ ತರುವ ಮನಸ್ಸು ರಾಜ್ಯ ಸರ್ಕಾರಕ್ಕಿರಬಹುದಾದರೂ ಅದನ್ನು ಕೋರ್ಟು ಎಲ್ಲಿ ತಳ್ಳಿ ಹಾಕುತ್ತದೋ ಅನ್ನುವ ಭಯದಲ್ಲಿ ಜಾರಿಗೆ ತರಲು ಮನಸ್ಸು ಮಾಡುತ್ತಿಲ್ಲ. ಒಕ್ಕೂಟ ವ್ಯವಸ್ಥೆಯ ಪರ ಅನ್ನುವ ಮೋದಿಯವರೇ ಸರ್ಕಾರದ ಚುಕ್ಕಾಣಿ ಹಿಡಿದಿರುವುದರಿಂದ ಪ್ರತಿ ರಾಜ್ಯದಲ್ಲೂ ಅಲ್ಲಿನ ಸ್ಥಳೀಯರಿಗೆ ಉದ್ಯೋಗವಕಾಶಗಳಲ್ಲಿ ಆದ್ಯತೆ ದೊರಕುವಂತೆ ಒಂದು ರಾಷ್ಟ್ರೀಯ ಉದ್ಯೋಗ ನೀತಿ ರೂಪಿಸುವ ಕೆಲಸ ಹೊಸ ಸರ್ಕಾರ ಮಾಡಬೇಕು. ಮಿತಿಮೀರಿದ ವಲಸೆಯಿಂದ ನಲುಗಿರುವ ಹಲವು ರಾಜ್ಯಗಳ ಪ್ರತಿನಿಧಿಗಳ ಜೊತೆ ಕೈ ಜೋಡಿಸಿ ಹೊಸ ಸರ್ಕಾರದ ಮೇಲೆ ಒತ್ತಡ ತರುವ ಕೆಲಸ ನಮ್ಮ ಸಂಸದರು ಮಾಡಬೇಕು.

ಇದಲ್ಲದೇ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರಕ್ಕೆ ಇಂದಿರುವ ಅತಿಯಾದ ಬಲದಿಂದಾಗಿ ಅದು ಕೈಗೊಳ್ಳುವ ಹಲವಾರು ನಿರ್ಧಾರಗಳು ರಾಜ್ಯದ ಹಿತಾಸಕ್ತಿಗೆ ಏಟು ಕೊಡುವಂತಿರುತ್ತದೆ. ಇದನ್ನು ಸಂಸತ್ತಿನಲ್ಲಿ ಪ್ರಶ್ನಿಸಿ, ರಾಜ್ಯದ ಹಿತ ಕಾಯಬೇಕಾದ ಕೆಲಸ ನಮ್ಮ ಸಂಸದರದ್ದೇ ಆಗಿದೆ. ಹಾಗಾಗಿ ಕರ್ನಾಟಕದ ಆರ್ಥಿಕ ಮತ್ತು ರಾಜಕೀಯ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು, ರಾಜ್ಯದ ಎಲ್ಲ ಪಕ್ಷಗಳ ಸಂಸದರ ನಡುವೆ ಸಮನ್ವಯ ಸಾಧಿಸಲು ಸಾಧ್ಯವಾಗುವಂತೆ ದೆಹಲಿಯಲ್ಲಿ ಒಂದು ತಂಡ ರಚಿಸುವ ಕೆಲಸ ನಮ್ಮ ಸಂಸದರು ಮಾಡಲಿ. ಹೇಗೆ ದೆಹಲಿಯಲ್ಲಿ ತಮಿಳು ಲಾಬಿ, ಮಲಯಾಳಿಗಳ ಲಾಬಿ, ಬೆಂಗಾಲಿ ಲಾಬಿ ಇದೆಯೋ ಅಂತೆಯೇ ಕನ್ನಡಿಗರ ಲಾಬಿ ಕೂಡ ಹುಟ್ಟಬೇಕು. ಅದು ಪಕ್ಷ ಭೇದ ಮರೆತು ಕರ್ನಾಟಕದ ವಿಷಯಗಳತ್ತ ದನಿ ಎತ್ತುವ ಕೆಲಸ ಮಾಡಬೇಕು. ಅದಾಗದಿದ್ದಲ್ಲಿ ಪ್ರತಿ ಬಾರಿಯಂತೆ ಒಂದಲ್ಲ ಒಂದು ಪಕ್ಷದ ಅಲೆಯಲ್ಲಿ ಅಭ್ಯರ್ಥಿಗಳು ಗೆದ್ದು ದೆಹಲಿ ತಲುಪಬಹುದು, ಆದರೆ ಕರ್ನಾಟಕದ ಪಾಡು ಒಂದಿನಿತು ಬದಲಾಗದು. ಹಾಗಾಗದಿರಲಿ.

ಈ ಅಂಕಣ 23 ಮೇ ಉದಯವಾಣಿಯ ನನ್ನ ಅಂಕಣ “ಕನ್ನಡ ಜಗತ್ತು”ವಿನಲ್ಲಿ ಪ್ರಕಟವಾಗಿದೆ.

ಕರ್ನಾಟಕದ ಹೊಸ ಸಂಸದರಿಗೆ 6 ಮುಖ್ಯ ಕೆಲಸಗಳು

 

This entry was posted in ಒಕ್ಕೂಟ ವ್ಯವಸ್ಥೆ, ಕರ್ನಾಟಕ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s