ಕರ್ನಾಟಕದ ಹಳ್ಳಿ ಹಳ್ಳಿಗಳಿಗೆ ಈಗ ತುರ್ತಾಗಿ ಬೇಕಿರುವುದು ಟಾಯ್ಲೆಟ್ ಭಾಗ್ಯ !!

ಯಾವುದೇ ಜನಾಂಗದ ಏಳಿಗೆಗೆ ಬೇಕಿರುವ ಎರಡು ಅತಿ ಮುಖ್ಯ ಆದ್ಯತೆಗಳು ಶಿಕ್ಷಣ ಮತ್ತು ಆರೋಗ್ಯ. ಜ್ಞಾನಾಧಾರಿತ ಇಂದಿನ ಜಗತ್ತಿನಲ್ಲಿ ಒಳ್ಳೆಯ ಕಲಿಕೆ ಪ್ರತಿಯೊಬ್ಬ ವ್ಯಕ್ತಿಗೂ ಮುಖ್ಯವಾದದ್ದು. ಅದರ ಜೊತೆ ಜೊತೆಯಲ್ಲೇ ಅಷ್ಟೇ ಮುಖ್ಯವಾದ ವಿಷಯವೆಂದರೆ ಆ ವ್ಯಕ್ತಿ ಆರೋಗ್ಯದಿಂದಿರುವುದು. ಎಲ್ಲಿ ಅಪೌಷ್ಟಿಕತೆ, ರೋಗರುಜಿನಗಳಿಂದ ಜನರು ಬಳಲುತ್ತಾರೋ ಅಲ್ಲಿ ಎಂತಹ ಒಳ್ಳೆಯ ಕಲಿಕೆಯ ಏರ್ಪಾಡು ಕಟ್ಟಿದರೂ ಅದು ಪ್ರಯೋಜನಕ್ಕೆ ಬಾರದು. ಕರ್ನಾಟಕದಲ್ಲಿ ಪ್ರತಿಯೊಬ್ಬರಿಗೂ ಒಳ್ಳೆಯ ಗುಣಮಟ್ಟದ ಕಲಿಕೆಯ ಸವಲತ್ತುಗಳು ಸಿಗಬೇಕು, ಅದನ್ನು ದೊರಕಿಸುವಂತಹ ಪ್ರಯತ್ನವನ್ನು ಸರ್ಕಾರ ಮಾಡುತ್ತಲೇ ಬಂದಿದೆ. ಅದಕ್ಕಾಗಿ ಪ್ರತಿ ವರ್ಷವೂ ತನ್ನ ಬಜೆಟ್ಟಿನಲ್ಲಿ 15,000 ಕೋಟಿಯಷ್ಟು ಹಣವನ್ನೂ ಖರ್ಚು ಮಾಡುತ್ತಿದೆ. ಆ ಪ್ರಯತ್ನದಲ್ಲಿನ ತೊಡಕುಗಳು ತೊಂದರೆಗಳ ಬಗ್ಗೆ ಈ ಹಿಂದೆಯೂ ಸಾಕಷ್ಟು ಬಾರಿ ಈ ಅಂಕಣದಲ್ಲಿ ಓದಿದ್ದೀರಿ. ಇವತ್ತು ಇನ್ನೊಂದು ಪ್ರಮುಖ ಆದ್ಯತೆಯಾದ ಆರೋಗ್ಯ, ಅದರಲ್ಲೂ ಶುಚಿತ್ವ(ಸ್ಯಾನಿಟೇಶನ್)ದ ವಿಷಯದಲ್ಲಿ ಕನ್ನಡ ಸಮಾಜದ ಸ್ಥಿತಿಗತಿ ಏನಿದೆ ಅನ್ನುವುದರ ಸುತ್ತ ಕೊಂಚ ಗಮನ ಹರಿಸೋಣ.

ಅಪೌಷ್ಟಿಕತೆಗೆ ಕಾರಣ ಹಸಿವೊಂದೇ ಅಲ್ಲ !

ಹಲವಾರು ದಶಕಗಳಿಂದ ಬಡತನ ಮತ್ತು ಅಪೌಷ್ಟಿಕತೆ ನಿವಾರಣೆ ಅನ್ನುವುದು ಕರ್ನಾಟಕದಲ್ಲಿರಬಹುದು, ಭಾರತದಲ್ಲಿರಬಹುದು, ಪಕ್ಷಾತೀತವಾಗಿ ಎಲ್ಲ ರಾಜಕಾರಣಿಗಳ ಪ್ರಮುಖ ಆದ್ಯತೆಯೇ ಆಗಿದೆ. ಅದಕ್ಕಾಗಿ ಲಕ್ಷಾಂತರ ಕೋಟಿ ರೂಪಾಯಿಗಳ ಹಣವೂ ವ್ಯಯಿಸಲಾಗಿದೆ. ಗಮನಿಸಿದರೆ ಈ ಎಲ್ಲ ಯೋಜನೆಗಳ ಹಿಂದಿರುವ ಆಲೋಚನೆ-ಆಶಯ ಒಂದೇ, ಅದು “ಬಡವ ಹಸಿದಿದ್ದಾನೆ, ಸರ್ಕಾರ ಅವನಿಗೆ ಅಕ್ಕಿ-ಬೆಳೆ-ಕಾಳು ಕೊಟ್ಟರೆ ಬಡತನ-ಅಪೌಷ್ಟಿಕತೆ ನಿವಾರಣೆಯಾಗುತ್ತೆ ಇಲ್ಲವೇ ಕಡಿಮೆಯಾಗುತ್ತೆ ” ಅನ್ನುವುದು. ಆದರೆ ಇದು ಸಮಸ್ಯೆಯ ಒಂದು ಭಾಗವಷ್ಟೇ ಅನ್ನುವುದು ಸಂಬಂಧ ಪಟ್ಟವರಿಗೆ ಅರಿವಾದಂತೆ ಕಾಣುತ್ತಿಲ್ಲ. ಇಂದು ಬಡತನ ಎಲ್ಲಿದೆಯೋ ಅಲ್ಲಿರುವುದು ಕೇವಲ ಹಸಿವು ನೀಗಿಸಿಕೊಳ್ಳುವ ಅಗತ್ಯವೊಂದೇ ಅಲ್ಲ, ಅಲ್ಲಿ ಅದರಷ್ಟೇ ದೊಡ್ಡ ಸಮಸ್ಯೆಯಾಗಿರುವುದು ಶುಚಿತ್ವದ ಕೊರತೆ, ಅದರಲ್ಲೂ ಮುಖ್ಯವಾಗಿ ಟಾಯ್ಲೆಟ್ ಸೌಲಭ್ಯದ ಕೊರತೆ. ಹಳ್ಳಿಗಾಡಿನ ಭಾಗದಲ್ಲಿ ಅನಾರೋಗ್ಯದ ಮುಖ್ಯ ಕಾರಣಗಳಲ್ಲೊಂದು ಶುಚಿತ್ವದ ಕೊರತೆ. ಸರ್ಕಾರ ಅನ್ನ ಭಾಗ್ಯದಂತಹ ಯೋಜನೆಗಳ ಮೂಲಕ ಅಕ್ಕಿಯೆನೋ ಕೊಡುತ್ತೆ. ಆ ಅಕ್ಕಿ ಪಡೆದು ಉಳಿಸುವ ಅಲ್ಪಸ್ವಲ್ಪ ಹಣವನ್ನು ಹಳ್ಳಿಯ ಬಡವರು ಆರೋಗ್ಯ ಸಂಬಂಧಿ ಖರ್ಚಿಗೆ ವ್ಯಯಿಸುತ್ತಿರುವುದಕ್ಕೆ ಆಧಾರಗಳಿವೆ.ಶುಚಿತ್ವ ಮತ್ತು ಶುದ್ಧ ಕುಡಿಯುವ ನೀರಿನ ಪೂರೈಕೆಯ ಕೊರತೆ ತರುವ ಕಾಯಿಲೆಗಳು ಹಳ್ಳಿಗಾಡಿನ ಜನರ ಅಪೌಷ್ಟಿಕತೆಗೆ ಮುಖ್ಯವಾದ ಕಾರಣಗಳಲ್ಲೊಂದಾಗಿದೆ. ಈ ಅಂಕಿ ಅಂಶ ಗಮನಿಸಿ:

  • 2011ರ ಜನ ಗಣತಿಯ ಪ್ರಕಾರ ಗ್ರಾಮೀಣ ಕರ್ನಾಟಕದ 28.4% ಮನೆಗಳಲ್ಲಿ ಮಾತ್ರವೇ ಟಾಯ್ಲೆಟ್ ಸೌಲಭ್ಯವಿದ್ದು, ಉಳಿದ 71.6% ಜನರು ಈಗಲೂ ಬಯಲು ಬದಿಯಲ್ಲೇ ತಮ್ಮ ದೇಹ ಭಾದೆ ಪೂರೈಸಿಕೊಳ್ಳುವ ಸ್ಥಿತಿಯಿದೆ!
  • ಮೈಸೂರು, ದಾವಣಗೆರೆಯಂತಹ ಮುಂದುವರೆದ ಜಿಲ್ಲೆಗಳು ಸೇರಿದಂತೆ ಕರ್ನಾಟಕದ 30 ಜಿಲ್ಲೆಗಳಲ್ಲಿ 22 ಜಿಲ್ಲೆಗಳ ಶೇಕಡಾ 50ಕ್ಕೂ ಹೆಚ್ಚಿನ ಗ್ರಾಮೀಣ ಭಾಗದ ಮನೆಗಳಲ್ಲಿ ಟಾಯ್ಲೆಟ್ ಸೌಲಭ್ಯವಿಲ್ಲ.
  • ಕರಾವಳಿ, ಮಲೆನಾಡು ಮತ್ತು ಬೆಂಗಳೂರು ಹೊರತು ಪಡಿಸಿದರೆ ಇನ್ನೆಲ್ಲ ಭಾಗದಲ್ಲೂ ಶುಚಿತ್ವದ ಈ ಕೊರತೆ ದೊಡ್ಡ ಮಟ್ಟದಲ್ಲಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಅಂಶವಾಗಿದೆ.
  • ಗ್ರಾಮೀಣ ಪ್ರದೇಶದಲ್ಲಿ ಟಾಯ್ಲೆಟ್ ಸೌಲಭ್ಯದ ವಿಷಯದಲ್ಲಿ ಭಾರತದ ಸರಾಸರಿ 30.7% ಇದ್ದು, ಅದು ಪ್ರಗತಿಶೀಲ ರಾಜ್ಯವೆನಿಸಿರುವ ಕರ್ನಾಟಕದ ಸರಾಸರಿಗಿಂತಲೂ 2.3% ಹೆಚ್ಚಿದೆ!
  • 2001ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಮೀಣ ಭಾಗದ 25% ಮನೆಗಳಲ್ಲಿ ಟಾಯ್ಲೆಟ್ ಸೌಲಭ್ಯವಿದ್ದರೆ 2011ರ ಹೊತ್ತಿಗೆ ಇದು 75% ತಲುಪಿದೆ. ಇದರ ಹಿಂದೆ ಜಿಲ್ಲಾ ಪಂಚಾಯತಿಯ ಮುಖ್ಯಾಧಿಕಾರಿಯಾಗಿದ್ದ ಮಂಜುಳಾ ನಾಯ್ಕ್ ಅನ್ನುವ ಅಧಿಕಾರಿಯ ಛಲದ ದುಡಿಮೆಯಿದೆ.
  • ಕರ್ನಾಟಕದಲ್ಲಿರುವ ಬಡತನ ರೇಖೆಯ ಕೆಳಗಿರುವ ಜನರ ಒಟ್ಟು ಸಂಖ್ಯೆಯ ದುಪ್ಪಟ್ಟು ಪ್ರಮಾಣದ ಜನರಿಗೆ ಟಾಯ್ಲೆಟ್ ಸೌಲಭ್ಯವಿಲ್ಲ.

ಸರ್ಕಾರ ಏನು ಮಾಡಿದೆ?

ಸರ್ಕಾರಕ್ಕೆ ಇದು ಬಗೆಹರಿಸಬೇಕಾದ ಸಮಸ್ಯೆ ಅನ್ನುವುದು ಗೊತ್ತಿಲ್ಲ ಅಂತೇನಿಲ್ಲ, ಆದರೆ ಅದರ ಆದ್ಯತೆಗಳ ಪಟ್ಟಿಯಲ್ಲಿ ಇದು ಪಡೆದುಕೊಳ್ಳಬೇಕಾದಷ್ಟು ಮಹತ್ವ ಪಡೆದುಕೊಂಡಿಲ್ಲ ಅನ್ನುವುದು ನಿಜ. ಕೇಂದ್ರ ಸರ್ಕಾರ ಸುಮಾರು 15 ವರ್ಷಗಳಿಂದ “ನಿರ್ಮಲ ಭಾರತ ಅಭಿಯಾನ” ಅನ್ನುವ ಹೆಸರಲ್ಲಿ ಹಳ್ಳಿಗಳಲ್ಲಿ ಟಾಯ್ಲೆಟ್ ಕಟ್ಟಿಕೊಳ್ಳುವವರಿಗೆ ಸಬ್ಸಿಡಿ ಕೊಡುವ ಕೇಂದ್ರ ಪ್ರಾಯೋಜಿತ ಯೋಜನೆ ನಡೆಸುತ್ತಿದೆ. ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ದಿ ಇಲಾಖೆಯೂ ಇದರತ್ತ ಗಮನಹರಿಸಿದೆ. ಆದರೆ ಹಳ್ಳಿಗಾಡಿನ ಜನರಿಗೆ ಟಾಯ್ಲೆಟ್ ಕಟ್ಟಿಕೊಳ್ಳುವುದರ ಅಗತ್ಯ, ಅದು ನೀಡುವ ಆರೋಗ್ಯದ ಲಾಭದ ಬಗ್ಗೆ ಹೆಚ್ಚಿನ ಅರಿವು ಮೂಡಿಸದೇ ಹೋದ ಪರಿಣಾಮವಾಗಿ ಹೆಚ್ಚಿನ ಎಲ್ಲ ಸರ್ಕಾರಿ ಯೋಜನೆಗಳಂತೆ ಈ ಯೋಜನೆಯೂ ಭ್ರಷ್ಟಾಚಾರ, ಕಳಪೆ ಕಾಮಗಾರಿ, ಜನರ ನಿರಾಸಕ್ತಿ ಮುಂತಾದ ಸಮಸ್ಯೆಯಲ್ಲಿ ಸಿಲುಕಿ ವಿಫಲವಾಗಿದೆ.

ಇದು ಆತ್ಮ ಗೌರವದ ಪ್ರಶ್ನೆ!

ಕನ್ನಡಿಗರ ಸ್ವಾಭಿಮಾನ, ಅತ್ಮ ಗೌರವದ ಬಗ್ಗೆ ಮಾತನಾಡುವಾಗ ಅದು ಮನೆಯಲ್ಲಿ, ಇಂತಹ ಮೂಲಭೂತ ಅಗತ್ಯ ಪೂರೈಸುವುದರಿಂದಲೇ ಶುರುವಾಗಬೇಕಿದೆ. ಕತ್ತಲಾಗುವವರೆಗೆ ಕಾದೋ, ಬೆಳಿಗ್ಗೆ ಬೆಳಕು ಮೂಡುವ ಮುನ್ನವೇ ಬಯಲು ಬಹಿರ್ದೆಸೆಗೆ ಹೋಗುವಂತಹ ಸ್ಥಿತಿ ನಾಗರೀಕ ಸಮಾಜವೇ ಒಂದು ರೀತಿಯಲ್ಲಿ ತಲೆ ತಗ್ಗಿಸಬೇಕಾದ ವಿಚಾರವಾಗಿದೆ. ಶುಚಿತ್ವ ಅನ್ನುವುದು ಮತ ಗಳಿಸುವ ವಿಷಯವಲ್ಲ ಅನ್ನುವ ಸ್ಥಿತಿ ಇತ್ತು, ಆದರೆ ಇತ್ತೀಚಿನ ವರ್ಷಗಳಲ್ಲಿ ಇದು ಬದಲಾಗುತ್ತಿದೆ. ಶುಚಿತ್ವದ ಯೋಜನೆಗಳಿಗೆ ಆದ್ಯತೆ ಕೊಡುವ ರಾಜಕಾರಣಿಗಳನ್ನು ಹಳ್ಳಿಗಾಡಿನ ಜನರು ಗೌರವಿಸುವ ಬದಲಾವಣೆ ಮೂಡುತ್ತಿದೆ. ಪ್ರತಿ ಸರ್ಕಾರಕ್ಕೂ ಜನ ಎಂದೂ ಮರೆಯದ ಯೋಜನೆಯೊಂದನ್ನು ಜಾರಿಗೆ ತರಬೇಕು, ಅದನ್ನು ಜನರು ಯಾವತ್ತಿಗೂ ನೆನೆಯಬೇಕು ಅನ್ನುವ ಆಸೆಯಿರುತ್ತೆ. ಕರ್ನಾಟಕದ ಸರ್ಕಾರ ಕರ್ನಾಟಕವನ್ನು “ಬಯಲು ಬಹಿರ್ದೆಸೆ” ಮುಕ್ತ ರಾಜ್ಯವನ್ನಾಗಿಸುವ ಸಂಕಲ್ಪ ತೊಟ್ಟು ಈ ಸಮಸ್ಯೆಗೆ ಪರಿಹಾರ ತರುವ ಕೆಲಸ ಮಾಡಿದರೆ ಅದು 66 ವರ್ಷಗಳ ಇತಿಹಾಸದಲ್ಲೇ ಯಾರು ಮಾಡಿರದ ಸಾಧನೆಯಾಗಬಹುದು. ಅಪೌಷ್ಟಿಕತೆಯ ಸಮಸ್ಯೆಗೂ ಇದು ಬಹುತೇಕ ಪರಿಹಾರ ಕಲ್ಪಿಸಬಹುದು. ಕಲಿಕೆ, ಆರೋಗ್ಯಗಳ ವಿಷಯಗಳ ಸುತ್ತ ಸರಿಯಾದ ಏರ್ಪಾಡು ಮಾಡಿಕೊಂಡರೆ ಕನ್ನಡಿಗರ ದುಡಿಮೆಯ ಸಾಮರ್ಥ್ಯ ಹೆಚ್ಚುವುದಲ್ಲದೇ ಕನ್ನಡಿಗರ ಏಳಿಗೆಗೂ ಸೋಪಾನವಾಗಬಹುದು. ಪೊಲಿಯೋದಂತಹ ಕಾಯಿಲೆಯನ್ನು ಪೂರ್ತಿಯಾಗಿ ಓಡಿಸಲಾಗುವಾಗ ಮನಸು ಮಾಡಿದಲ್ಲಿ ಈ ಗುರಿಯೂ ಸಾಧ್ಯವಿದೆ. ಸಿದ್ಧರಾಮಯ್ಯನವರು, ಎಚ್.ಕೆ.ಪಾಟೀಲ್ ಅವರು ಇತ್ತ ಗಮನ ಹರಿಸುತ್ತಾರೆಂದು ಆಶಿಸೋಣ.

ಮಾಹಿತಿ ಸಹಾಯ: ತಕ್ಷಶಿಲಾ ಸಂಸ್ಥೆಯ ಪವನ್ ಶ್ರೀನಾಥ್ ಅವರು ಈ ಅಂಕಣಕ್ಕೆ ಬೇಕಿರುವ ಸಾಕಷ್ಟು ಮಾಹಿತಿ ಒದಗಿಸಿ ಕೊಟ್ಟಿದ್ದಾರೆ. ಅವರು ಕರ್ನಾಟಕದಲ್ಲಿ ಈ ವಿಷಯದತ್ತ ಕಾಳಜಿಯಿಂದ ಹಲವು ವರ್ಷಗಳಿಂದ ದುಡಿಯುತ್ತಲೂ ಇದ್ದಾರೆ. ಅವರನ್ನು pavan.srinath@gmail.com ಮಿಂಚೆ ವಿಳಾಸದಲ್ಲಿ ಸಂಪರ್ಕಿಸಬಹುದು.

ಈ ಅಂಕಣ 30 ಮೇ 2014ರ ಉದಯವಾಣಿಯಲ್ಲಿ ಪ್ರಕಟವಾಗಿದೆ.

Rural Karnataka needs Toilet bhagya

This entry was posted in ಕನ್ನಡ, ಕರ್ನಾಟಕ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s