ಜಾಗತೀಕರಣಕ್ಕೆ ಭಾರತ ತೆರೆದುಕೊಂಡ ನಂತರ ಹುಟ್ಟಿಕೊಂಡ ಒಂದು ದೊಡ್ಡ ಮಾಧ್ಯಮವೆಂದರೆ ಖಾಸಗಿ ಒಡೆತನದ ಬಾನುಲಿ ಕೇಂದ್ರಗಳು. ಇಂದು ಭಾರತದ ಯಾವುದೇ ದೊಡ್ಡ ಊರಿಗೆ ಹೋದರೂ ಅಲ್ಲಿ ಎಫ್.ಎಮ್ ವಾಹಿನಿಯ ಕಲರವ ಕೇಳಿಸದೇ ಇರದು. ಬೆಂಗಳೂರಿನಲ್ಲಿ ಇಂದು ಒಂಬತ್ತು ಎಫ್.ಎಮ್ ವಾಹಿನಿಗಳಿವೆ ಮತ್ತು ಬೆಂಗಳೂರಿನ 75 ಪ್ರತಿಶತಕ್ಕೂ ಹೆಚ್ಚಿನ ಜನರು ಕೇಳುವ ವಾಹಿನಿಗಳು ಕನ್ನಡ ವಾಹಿನಿಗಳೇ ಆಗಿವೆ. ಒಂದು ಕಾಲದಲ್ಲಿ ಒಂದೂ ಕನ್ನಡ ಎಫ್.ಎಮ್ ಇಲ್ಲದ ದಿನದಿಂದ ಇಲ್ಲಿಯವರೆಗಿನ ಈ ಬದಲಾವಣೆಯ ಹಿಂದೆ ಒಂದು ಸಣ್ಣ ಹೋರಾಟದ ಇತಿಹಾಸವೇ ಇದೆ.
ಮೊದ ಮೊದಲು
ಬೆಂಗಳೂರಿಗೆ ಮೊದಲ ಖಾಸಗಿ ಎಫ್.ಎಮ್ ವಾಹಿನಿ ಬಂದಿದ್ದು 2001ರಲ್ಲಿ. ಐಟಿ ಬೂಮ್ ಜೋರಾಗುವ ಹೊತ್ತಲ್ಲೇ ಬಂದ ಈ ವಾಹಿನಿಯ ಕಾರ್ಯಕ್ರಮಗಳಲ್ಲಿ ಕನ್ನಡದ ಗಾಳಿಗಂಧವೂ ಇರಲಿಲ್ಲ. ಇಂಗ್ಲಿಷಿನಲ್ಲಿ ಮಾತನಾಡುತ್ತಿದ್ದ ಆರ್.ಜೆಗಳು ಹಿಂದಿ ಹಾಡುಗಳನ್ನು ಪ್ರಸಾರ ಮಾಡುತ್ತಿದ್ದರು. ಬೆಂಗಳೂರಿನಲ್ಲೇ ಕನ್ನಡ ಚಿತ್ರೋದ್ಯಮ ನೆಲೆ ನಿಂತಿದ್ದರೂ, ವರ್ಷಕ್ಕೆ ನೂರಾರು ಕನ್ನಡ ಸಿನೆಮಾಗಳು ಬಿಡುಗಡೆಯಾಗುತ್ತಿದ್ದರೂ ಇಲ್ಲಿ ಕನ್ನಡಕ್ಕೆ ಯಾವುದೇ ಮನ್ನಣೆ ಇರಲಿಲ್ಲ. ಸಾಕಷ್ಟು ಜನ ಕೇಳುಗರು ಕನ್ನಡ ಹಾಡುಗಳನ್ನು ಪ್ರಸಾರ ಮಾಡಿ ಎಂದು ಒತ್ತಾಯಿಸಿದಾಗ ಪ್ರತಿ ಭಾನುವಾರ ಮೂರ್ನಾಲ್ಕು ಗಂಟೆ ಕನ್ನಡ ಹಾಡು ಪ್ರಸಾರ ಮಾಡಲು ಈ ವಾಹಿನಿ ಶುರುವಿಟ್ಟುಕೊಂಡಿತು. ಅದನ್ನೇ ಮಹಾಪ್ರಸಾದವೆಂಬಂತೆ ಕನ್ನಡಿಗರು ಕಾದು ಕೇಳುತ್ತಿದ್ದ ದಿನಗಳೂ ಇದ್ದವು. ಆದರೆ ದೊಡ್ಡ ಮಟ್ಟದಲ್ಲಿ ಬೇಡಿಕೆ ಮತ್ತು ಮಾರುಕಟ್ಟೆಯೂ ಇದೆ ಹೀಗಾಗಿ ಪೂರ್ತಿ ವಾಹಿನಿಯನ್ನೇ ಕನ್ನಡಕ್ಕೆ ಬದಲಾಯಿಸಿ ಅನ್ನುವ ಒತ್ತಾಯ ಮಾತ್ರ ಈಡೇರಿರಲಿಲ್ಲ. ಆ ಹೊತ್ತಿನಲ್ಲಿ ಶುರುವಾದ ಇನ್ನೊಂದು ವಾಹಿನಿಯಲ್ಲಿ ಆರ್.ಜೆಗಳು ಕನ್ನಡದಲ್ಲಿ ಮಾತನಾಡುತ್ತಿದ್ದರೂ ಹಿಂದಿ ಹಾಡುಗಳನ್ನು ಮಾತ್ರ ಪ್ರಸಾರ ಮಾಡುತ್ತಿದ್ದರು. “ನಾವು ನಮ್ಮ ಮಾರುಕಟ್ಟೆ ಸಮೀಕ್ಷೆ ಮಾಡಿದ್ದೇವೆ. ಅದರ ಪ್ರಕಾರ ಬೆಂಗಳೂರಿನಲ್ಲಿ ಕನ್ನಡ ಹಾಡುಗಳಿಗೆ ಬೇಡಿಕೆ ಇಲ್ಲ. ನಾವು ಬೆಂಗಳೂರಿನ ಕಾಸ್ಮೊಪಾಲಿಟಿನ್ ಯುವ ಸಮುದಾಯಕ್ಕೆ ಏನು ಬೇಕೋ ಅದನ್ನು ಕೊಡುತ್ತೇವೆ, ಹೀಗಾಗಿ ಹಿಂದಿ ಹಾಡುಗಳನ್ನು ಹಾಕುತ್ತೇವೆ. ನಿಮ್ಮ ಆಸೆಯಂತೆ ಕನ್ನಡ ಹಾಡುಗಳನ್ನೇ ಪ್ರಸಾರ ಮಾಡುವ ವಾಹಿನಿ ನಿಮ್ಮ ಪಾಲಿಗೆ ಬೇಗನೇ ದಕ್ಕಲಿ” ಎಂಬರ್ಥದ ಈಮೇಲುಗಳನ್ನು ರೇಡಿಯೋ ಸಂಸ್ಥೆಯೊಂದರ ಮಾರುಕಟ್ಟೆ ವಿಭಾಗದ ಮುಖ್ಯಸ್ಥರು ಕಳಿಸಿದ್ದು ಆಯಿತು.
ಬದಲಾದದ್ದು ಹೀಗೆ
ಇದಕ್ಕೆ ಉತ್ತರವಾಗಿ ನಡೆದಿದ್ದು ಒಂದು ಸಣ್ಣ ಜನಾಂದೋಲನವೇ ಸರಿ. ಈ ವಾಹಿನಿಗಳಲ್ಲಿ ಕನ್ನಡ ಹಾಡುಗಳನ್ನು ಪ್ರಸಾರ ಮಾಡುವಂತೆ ಮಿಂಬಲೆಯಲ್ಲಿ ಶುರುವಾದ ಆನ್ ಲೈನ್ ಪಿಟಿಶನ್ ಒಂದಕ್ಕೆ ಐದು ಸಾವಿರಕ್ಕೂ ಹೆಚ್ಚು ಜನರು ಸಹಿ ಹಾಕಿ ಬೆಂಬಲ ಸೂಚಿಸಿದರು. ಇದಲ್ಲದೇ ಬೆಂಗಳೂರು ಮತ್ತು ಸುತ್ತಲಿನ ಎಷ್ಟು ಜಿಲ್ಲೆಗಳಲ್ಲಿ ಎಫ್.ಎಮ್ ವಾಹಿನಿಗಳು ಕೇಳಿಸುತ್ತವೆ, ಅಲ್ಲಿರುವ ಭಾಷಾ ಡೆಮಾಗ್ರಫಿ ಏನು, ಅಲ್ಲಿ ಕನ್ನಡ ಸಂಗೀತ, ಸಿನಮಾಕ್ಕೆ ಇರುವ ಬೇಡಿಕೆಯೇನು, ಎಫ್.ಎಮ್ ವಾಹಿನಿಗಳಲ್ಲಿ ಭಾಷೆಯ ವಿಚಾರದಲ್ಲಿ ಇರುವ ಕಾನೂನಿನ ನಿಲುವೇನು ಅನ್ನುವುದನ್ನ ಈ ವಾಹಿನಿಗಳಿಗೆ ತಿಳಿಸಿ ಕೊಟ್ಟು, ಕನ್ನಡ ಹಾಡುಗಳ ವಾಹಿನಿಯಾಗಿ ಬದಲಾದರೆ ಅದರಿಂದ ಆಗುವ ವ್ಯಾಪಾರದ ಲಾಭದ ಬಗ್ಗೆ ತಿಳಿ ಹೇಳುವ ಕೆಲಸಗಳಾದವು. ಪತ್ರಿಕೆಗಳಲ್ಲಿ ಈ ಬಗ್ಗೆ ಪತ್ರಗಳು ಮೂಡಿ ಬಂದವು. ಇದರ ಬೆನ್ನಲ್ಲೇ ಕನ್ನಡ ಪರ ಸಂಘಟನೆಗಳಿಂದ ಈ ವಾಹಿನಿಗಳ ಬಳಿ ಪ್ರತಿಭಟನೆಗಳು ನಡೆದವು. ಇವೆಲ್ಲವೂ ತಂದ ಒತ್ತಡದ ಫಲವೆಂಬಂತೆ ಒಂದು ವಾಹಿನಿ ಪ್ರಯೋಗಾತ್ಮಾಕ ನೆಲೆಯಲ್ಲಿ ಎಂಬಂತೆ ತನ್ನನ್ನು ತಾನು ನೂರು ಪ್ರತಿಶತ ಕನ್ನಡ ವಾಹಿನಿ ಎಂದು ಕರೆದುಕೊಂಡು ಕನ್ನಡದಲ್ಲೇ ಮಾತು, ಹಾಡುಗಳ ಪ್ರಸಾರಕ್ಕೆ ನಿಂತಿತ್ತು. ನೋಡ ನೋಡುತ್ತದ್ದಂತೆಯೇ ಆ ವಾಹಿನಿಯ RAM ರೇಟಿಂಗ್ (ಕೇಳುಗರ ಸಂಖ್ಯೆಯನ್ನು ಅಳೆಯುವ ಒಂದು ವಿಧಾನ) ಗಗನಕ್ಕೇರಿತು. ಬೆಂಗಳೂರಿನಲ್ಲಿ ಕನ್ನಡ ಹಾಡುಗಳಿಗೆ ಬೇಡಿಕೆಯಿಲ್ಲ ಅನ್ನುವ ಟೊಳ್ಳು ವಾದ ಬಿದ್ದು ಹೋಯಿತು. ಅದರ ಬೆನ್ನಲ್ಲೇ ಇತರೆ ವಾಹಿನಿಗಳು ಕನ್ನಡಕ್ಕೆ ಬದಲಾಗಲಾರಂಭಿಸಿದವು. ಈ ಹಿಂದೆ ಬೆಂಗಳೂರಿನಲ್ಲಿ ಕನ್ನಡ ಹಾಡುಗಳಿಗೆ ಬೇಡಿಕೆಯಿಲ್ಲ ಎಂದಿದ್ದ ಅದೇ ವಾಹಿನಿಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥರು “ಬೆಂಗಳೂರಿನಲ್ಲಿ ವ್ಯಾಪಾರ ಮಾಡಲು ಬರುವ ಸಂಸ್ಥೆಗಳಿಗೆಲ್ಲ ನಾನೊಂದು ಕಿವಿ ಮಾತು ಹೇಳುವೆ. ಬೆಂಗಳೂರಿನಲ್ಲಿ ಚೆನ್ನಾಗಿ ವ್ಯಾಪಾರ ಮಾಡಲು ಕನ್ನಡದ ಕೈ ಹಿಡಿಯಿರಿ. ಇಲ್ಲಿನ ಕನ್ನಡಿಗರಿಗೆ ಚೆನ್ನಾಗಿ ಸಂಪಾದನೆಯಿದೆ ಮತ್ತು ಅವರು ಚೆನ್ನಾಗಿ ಖರ್ಚೂ ಮಾಡುತ್ತಾರೆ. ಕನ್ನಡ ಬಳಸಿ ನಿಮ್ಮ ವ್ಯಾಪಾರ ಹೆಚ್ಚಿಸಿಕೊಳ್ಳಿ” ಅನ್ನುವ ಮಾತುಗಳನ್ನಾಡಿದರು. ಇಂದು ಬೆಂಗಳೂರಿನ ಮೊದಲ ಮೂರು ಸ್ಥಾನದಲ್ಲಿರುವ ಎಲ್ಲ ವಾಹಿನಿಗಳು ಕನ್ನಡ ಹಾಡುಗಳನ್ನೇ ಪ್ರಸಾರ ಮಾಡುವ ವಾಹಿನಿಗಳಾಗಿವೆ. ರೇಡಿಯೊ ಸಿಟಿಯ ಸಿ.ಇ.ಒ ಅಪೂರ್ವ ಪುರೋಹಿತ್ ತಮ್ಮ ರೇಡಿಯೊದ ಯಶಸ್ಸಿಗೆ ಮುಖ್ಯ ಕಾರಣವೇ ಲೊಕಲೈಸೇಶನ್ ಅನ್ನುವ ಮಾತನ್ನು ಇತ್ತಿಚೆಗೆ ಫೊರ್ಬ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಬೆಂಗಳೂರಿನಲ್ಲಿ ರೇಡಿಯೋ ಸಿಟಿಗೆ ಈ ಸತ್ಯ ಅರ್ಥವಾಗಲು ಕೆಲ ಕಾಲ ಹಿಡಿಯಿತು. ಆದರೆ ಅದು ಅರ್ಥವಾದ ಮೇಲೆ ಕನ್ನಡಕ್ಕೆ ಬದಲಾಯಿಸಿಕೊಂಡ ನಂತರ ಅವರು ಬೆಂಗಳೂರಿನ ನಂಬರ್ ಒನ್ ಎಫ್.ಎಮ್ ವಾಹಿನಿ ಪಟ್ಟ ಪಡೆಯಲು ಸಾಧ್ಯವಾಯಿತು.
ಕನ್ನಡ ಕೇಂದ್ರಿತ ಗ್ರಾಹಕ ಚಳುವಳಿ
ಸಾಮಾನ್ಯ ಕನ್ನಡಿಗರು ತಮ್ಮ ಗ್ರಾಹಕ ಹಕ್ಕಿನ ಚಲಾವಣೆಯ ಮೂಲಕ ಕನ್ನಡಕ್ಕೆ ನಿಜವಾದ ಮಾರುಕಟ್ಟೆ ಇದೆ ಅನ್ನುವುದನ್ನು ತೋರಿಸುವ ಕೆಲಸ ಮಾಡಿದಾಗ ಆದ ಬದಲಾವಣೆಯೊಂದರಿಂದ ಇಂದು ಬೆಂಗಳೂರಿನ ಬಾನುಲಿ ಕ್ಷೇತ್ರದಲ್ಲಿ ಕನ್ನಡಕ್ಕೆ ಸಾರ್ವಭೌಮತ್ವ ದೊರಕಿದೆ. ಬೆಂಗಳೂರಿಗೆ, ಕರ್ನಾಟಕಕ್ಕೆ ಹೊರಗಡೆಯಿಂದ ಬಂಡವಾಳ ಹರಿಸಲು ಬರುವವರಿಗೆ ಇಲ್ಲಿನ ಸ್ಥಳೀಯ ಮಾರುಕಟ್ಟೆಯ ತಿಳುವಳಿಕೆ ಇರುವುದಿಲ್ಲ. ಈ ತಿಳಿವಿಗಾಗಿ ಅವರು ನೆಚ್ಚುವುದು ಮುಂಬೈ, ಚೆನ್ನೈಯಲ್ಲಿ ಕೂತಿರುವ ಮಾರುಕಟ್ಟೆ ಸಮೀಕ್ಷೆಯ ಸಂಸ್ಥೆಗಳನ್ನು. ಆ ಸಂಸ್ಥೆಗಳು ಕೊಡುವ ಎಡವಟ್ಟು ವರದಿಗಳಿಂದಾಗಿ ಬೆಂಗಳೂರಿನಲ್ಲಿ ಕನ್ನಡಕ್ಕೆ ದೊಡ್ಡ ಮಟ್ಟದ ಬೇಡಿಕೆ, ಸಾಧ್ಯತೆ ಎಲ್ಲವೂ ಇದ್ದರೂ ಅದು ವ್ಯವಸ್ಥಿತವಾಗಿ ಮುಚ್ಚಿಹೋಗಿ ಇಲ್ಲಿ ಪರನುಡಿಗಳು ಅಬ್ಬರಿಸುವಂತಾಗಿತ್ತು. ಅದನ್ನು ತಿದ್ದುವ ಕೆಲಸ ಸಾಕಷ್ಟು ಮಟ್ಟಿಗೆ ಸಾಮಾನ್ಯ ಕನ್ನಡದ ಗ್ರಾಹಕರ ಪ್ರಯತ್ನದಿಂದ ಇಂದು ಸಾಧ್ಯವಾಗುತ್ತಿದೆ. ಇಂತಹದೊಂದು ಸಂಘಟಿತ ಪ್ರಯತ್ನದ ಫಲವಾಗಿ ಇಂದು ಹಲವಾರು ಬ್ಯಾಂಕುಗಳ ಎ.ಟಿ.ಎಮ್/ಐವಿಆರ್ ಗಳಲ್ಲಿ ಕನ್ನಡದಲ್ಲಿ ಸೇವೆ ದೊರೆಯುತ್ತಿದೆ. ಅಮೇಜಾನ್ ನಂತಹ ಆನ್ ಲೈನ್ ಮಾರಾಟದ ದೈತ್ಯ ಸಂಸ್ಥೆ ಕನ್ನಡಕ್ಕೆಂದೇ ವಿಶೇಷ ಆನ್ ಲೈನ್ ಮಳಿಗೆ ಸ್ಥಾಪಿಸುವಂತಾಗಿದೆ. ಮೆಕ್-ಡಿ ತರದ ಬರ್ಗರ್ ಕಂಪನಿ ಕನ್ನಡದಲ್ಲಿ ತನ್ನ ವೆಬ್ ಸೈಟಿನಲ್ಲ ಬರ್ಗರ್ ಆರ್ಡರ್ ಮಾಡುವ ವ್ಯವಸ್ಥೆ ಕಲ್ಪಿಸಿದೆ. ಇಂತಹ ಬದಲಾವಣೆಗೆ ನೂರಾರು ಉದಾಹರಣೆಗಳನ್ನು ನೀಡಬಹುದು. ಮಾರುಕಟ್ಟೆಯಲ್ಲಿ ಕನ್ನಡಕ್ಕೊಂದು ಸ್ಥಾನ ಮತ್ತು ಆರ್ಥಿಕ ಮೌಲ್ಯ ಕಲ್ಪಿಸುವಲ್ಲಿ ಕನ್ನಡ ಕೇಂದ್ರಿತ ಗ್ರಾಹಕ ಚಳುವಳಿಯ ಪಾತ್ರ ಹಿರಿದಿದೆ. ಮುಂದಿನ ದಿನಗಳಲ್ಲಿ ಕನ್ನಡ ಚಳುವಳಿಯಲ್ಲಿ ಅದೊಂದು ದೊಡ್ಡ ಪಾತ್ರವನ್ನು ವಹಿಸಲಿದೆ.
ನೋಡಿ: ಬೆಂಗಳೂರಿನ ಎಫ್.ಎಮ್ ವಾಹಿನಿಗಳ RAM ರೇಟಿಂಗ್ ತಿಳಿಯಲು: http://www.exchange4media.com/rame4m/blr_44_2014.asp
Nice information sir! Still remember waiting for sundays to listen to kannada songs on RadioCity
ಇಂತಹ ಹೋರಾಟಗಳು ಇನ್ನೆಷ್ಟು ಜರುಗಬೇಕೋ? ಕರ್ನಾಟಕದಲ್ಲಿ ಕನ್ನಡಕ್ಕಾಗಿ ಪರದಾಡಬೇಕಾಗಿರುವುದು ನಿಜಕ್ಕೂ ಶೋಚನೀಯ ವಿಷಯ. ಅದೇನೆ ಇರಲಿ, ನಿಮ್ಮ ಹೋರಾಟ ಶ್ಲಾಘನೀಯ ಮತ್ತು ಅನುಕರಿಣೀಯ.
ಇಂತಹ ಹೋರಾಟಗಳು ಇನ್ನೆಷ್ಟು ಜರುಗಬೇಕೋ? ಕರ್ನಾಟಕದಲ್ಲಿ ಕನ್ನಡಕ್ಕಾಗಿ ಪರದಾಡಬೇಕಾಗಿರುವುದು ನಿಜಕ್ಕೂ ಶೋಚನೀಯ ವಿಷಯ. ಅದೇನೆ ಇರಲಿ, ನಿಮ್ಮ ಹೋರಾಟ ಶ್ಲಾಘನೀಯ ಮತ್ತು ಅನುಕರಿಣೀಯ.