ಇಲ್ಲಿನ ಶಾಲೆಗಳಲ್ಲಿ ಜರ್ಮನ್ ಕಲಿಸುವ ಬಗ್ಗೆ ಅದ್ಯಾಕೆ ಜರ್ಮನ್ನರು ಇಷ್ಟು ತಲೆ ಕೆಡಿಸಿಕೊಂಡಿದ್ದಾರೆ?

ಕೇಂದ್ರಿಯ ವಿದ್ಯಾಲಯಗಳಲ್ಲಿ ಮೂರನೆಯ ವಿಷಯವಾಗಿ ಕಲಿಸಲಾಗುತ್ತಿದ್ದ ಜರ್ಮನ್ ಅನ್ನು ಕೈ ಬಿಡುವ ಕೇಂದ್ರ ಸರ್ಕಾರದ ನಿಲುವು ಜರ್ಮನಿಯಲ್ಲಿ ಸಾಕಷ್ಟು ಚರ್ಚೆಯನ್ನೇ ಹುಟ್ಟು ಹಾಕಿತು. ಜರ್ಮನ್‌ನ ಚಾನ್ಸೆಲರ್ ಅಂಜೆಲಾ ಮರ್ಕೆಲ್ ಭಾರತದ ಪ್ರಧಾನಿ ಮೋದಿಯವರ ಬಳಿಯೇ ಈ ವಿಷಯ ಪ್ರಸ್ತಾಪಿಸುವ ಹಂತಕ್ಕೂ ಇದು ಹೋಯಿತು. ಇಡೀ ಭಾರತದಲ್ಲಿ ಇರುವ 1053 ಕೇಂದ್ರಿಯ ವಿದ್ಯಾಲಯಗಳಲ್ಲಿ (ಸುಮ್ಮನೆ ಹೋಲಿಕೆ ಮಾಡಿ – ಕರ್ನಾಟಕವೊಂದರಲ್ಲೇ ಐವತ್ತು ಸಾವಿರಕ್ಕೂ ಹೆಚ್ಚು ಶಾಲೆಗಳಿವೆ) ಒಂದು ಭಾಷೆ ಕಲಿಸುವ ಪುಟ್ಟ ಸಂಗತಿ ಒಂದು ರಾಜತಾಂತ್ರಿಕ ಚರ್ಚೆಯ ವಿಷಯವಾಗಿದ್ದನ್ನು ಕಂಡಾಗ ಜರ್ಮನ್ನರು ಹೊರ ಜಗತ್ತಿಗೆ ಜರ್ಮನ್ ಕಲಿಸಬೇಕು ಅನ್ನುವ ವಿಷಯದಲ್ಲಿ ಅದ್ಯಾವ ಮಟ್ಟಿಗೆ ತಲೆ ಕೆಡಿಸಿಕೊಂಡಿದ್ದಾರೆ ಅನ್ನುವುದು ಕೆಲವರಿಗೆ ಅಚ್ಚರಿಯಾಗಿ ಕಾಣಬಹುದು. ಆದರೆ ಇದು ಅಚ್ಚರಿ ಪಡಬೇಕಾದ ವಿಷಯವಲ್ಲ. ಇದರ ಹಿಂದಿರುವುದು ಜರ್ಮನ್ನರ ಪಾಲಿಗೆ ಅತ್ಯಂತ ದೂರದರ್ಶಿತ್ವ ಇರುವ ಒಂದು ಪಕ್ಕಾ ಲೆಕ್ಕಾಚಾರ. ಜಾಗತೀಕರಣದ ಕಾಲದಲ್ಲಿ ಜಗತ್ತನ್ನು ಆಳಬೇಕೆಂದರೆ ಅದು ಕೇವಲ ತಂತ್ರಜ್ಞಾನದ ಹಿಡಿತವೊಂದರಿಂದಲೇ ಸಾಧ್ಯವಿಲ್ಲ. ಅದಕ್ಕೆ ಭಾಷೆಯಂತಹ ಸಾಫ್ಟ್ ಪವರ್ ಕೂಡ ಬೇಕು ಅನ್ನುವುದು ಈ ಲೆಕ್ಕಾಚಾರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಕಾಣುತ್ತೆ.

ಯುರೋಪಿಯನ್ನರ ದಾರಿ

ಯುರೋಪಿಯನ್ನರ ಸಾಮ್ರಾಜ್ಯದಾಹ ಇತಿಹಾಸ ಓದುವ ಎಲ್ಲರಿಗೂ ಗೊತ್ತಿರುವಂತದ್ದು. ಆದರೆ ಜಗತ್ತನ್ನೇ ತಮ್ಮ ವಸಾಹತಾಗಿಸುವ ಯೋಜನೆಯಲ್ಲಿ ಹೆಚ್ಚು ಗೆಲುವು ಕಂಡ ಯುರೋಪಿಯನ್ನರೆಂದರೆ ಇಂಗ್ಲಿಷರು, ಫ್ರೆಂಚರು ಮತ್ತು ಸ್ಪ್ಯಾನಿಶರು. ಯುರೋಪಿನಲ್ಲಿ ಅಬ್ಬರಿಸಿದ್ದರೂ ಹೊರ ಜಗತ್ತಿನಲ್ಲಿ ಈ ಸ್ಪರ್ಧೆಯಲ್ಲಿ ಜರ್ಮನ್ನರು ಹಿಂದುಳಿದಿದ್ದರು. ಜಗತ್ತನ್ನು ತಮ್ಮ ವಸಾಹತು ಮಾಡಿಕೊಂಡಲ್ಲೆಲ್ಲ ಇಂಗ್ಲಿಷರು, ಫ್ರೆಂಚರು ಮತ್ತು ಸ್ಪ್ಯಾನಿಶರು ತಮ್ಮ ಭಾಷೆಯ ಬೇರನ್ನು ಆಳವಾಗಿ ಬೇರೂರಿಸಿಯೇ ಹೋದವರು. ಅದರಿಂದಾಗಿಯೇ ಇಂದು ಈ ಭಾಷೆಗಳನ್ನು ಅದರ ಮೂಲ ಆಡುಗರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಇತರೆ ಭಾಷಿಕರು ಕಲಿತಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಯ ಭಾಷೆಯಾಗಿ ಬದಲಾದ ಇಂಗ್ಲಿಷ್ ಈ ಸ್ಪರ್ಧೆಯಲ್ಲಿ ಇನ್ನು ಮುಂದಕ್ಕೆ ಹೋಗಿ ಜಗತ್ತಿನ ಅನ್ನದ, ಅರ್ಥದ ಭಾಷೆ ಅನ್ನುವ ಪಟ್ಟದೆಡೆ ಹೋಗಿ ನಿಂತಿದೆ. ಈ ರೀತಿ ತಮ್ಮ ಭಾಷೆಯನ್ನು ಹರಡಿ ಹೋದದ್ದರ ಲಾಭ ಇವರಿಗೆ ಇಂದಿಗೂ ದೊರಕುತ್ತಿದೆ. ಎಲ್ಲೆಲ್ಲಿ ಈ ಭಾಷೆಗಳನ್ನು ಕಲಿಯುತ್ತಿದ್ದಾರೋ ಅಲ್ಲೆಲ್ಲ ಈ ಭಾಷೆಗಳ ಬಗ್ಗೆ ಒಂದು ತರದ ಮೆದು ಧೋರಣೆ, ಒಪ್ಪಿಗೆಯ ಭಾವವನ್ನು ಪಡೆಯಲು ಈ ಭಾಷೆಗಳಿಗೆ ಸಾಧ್ಯವಾಗಿದೆ. ಇದರ ಬೆನ್ನಲ್ಲೇ ಇಂಗ್ಲಿಷ್ ಮತ್ತು ಫ್ರೆಂಚಿನಲ್ಲಿ ಜ್ಞಾನ ಸೃಷ್ಟಿಗೆ ಈ ಭಾಷೆ ಕಲಿತ ಇತರೆ ಭಾಷಿಕರು ವ್ಯಾಪಕವಾಗಿ ಕೊಡುಗೆ ನೀಡಿದ್ದಾರೆ. ಇದೆಲ್ಲ ನಡೆಯುವಾಗ ತಮ್ಮ ಒಳ ಕಚ್ಚಾಟಗಳಿಂದ ತಾವು ಈ ಸ್ಪರ್ಧೆಯಲ್ಲಿ ಹಿಂದೆ ಬಿದ್ದೆವು ಅನ್ನುವ ಅನಿಸಿಕೆ ಜರ್ಮನ್ನರಲ್ಲಿತ್ತು. ಇದಕ್ಕೆ ಉತ್ತರವಾಗಿ ಜರ್ಮನ್ ನುಡಿಯನ್ನು ಜಗತ್ತಿನೆಲ್ಲೆಡೆ ಹರಡುವುದು ಮುಖ್ಯ ಮತ್ತು ಆ ಕೆಲಸಕ್ಕೆ ಜರ್ಮನಿಯ ಸರ್ಕಾರ ಎಲ್ಲ ರೀತಿಯ ನೆರವು ನೀಡಬೇಕು ಅನ್ನುವ ಆಲೋಚನೆ ಅಲ್ಲಿನ ಸರ್ಕಾರಕ್ಕೆ ಅರವತ್ತು ವರ್ಶದ ಹಿಂದೆ ಬಂತು. ಈ ಗುರಿಯತ್ತ ಸಾಗಲೆಂದೇ ಗೋಯಿತೆ ಇನ್ಸ್ಟಿಟ್ಯೂಟ್ ಅನ್ನುವ ಸಂಸ್ಥೆ ಸ್ಥಾಪಿಸಿ ಜಗತ್ತಿನೆಲ್ಲೆಡೆ ಜರ್ಮನ್ ಕಲಿಸುವ ಕೆಲಸಕ್ಕೆ ಬೆಂಬಲ ನೀಡಿತು. ಇಂದು ಗೋಯಿತೆ ಇನ್ಸ್ಟಿಟ್ಯೂಟ್ ಪ್ರಪಂಚದ 93 ದೇಶಗಳಲ್ಲಿ ಜರ್ಮನ್ ಕಲಿಸುವ ಕೆಲಸದಲ್ಲಿ ನಿರತವಾಗಿದೆ. ಇದರಲ್ಲಿ ಕೆಲಸ ಮಾಡುವವರ ಸಂಖ್ಯೆಯೇ ಮೂರು ಸಾವಿರದಷ್ಟಿದೆ. ಇದರ ವಾರ್ಷಿಕ ಬಜೆಟ್ 366 ಮಿಲಿಯನ್ ಯುರೋದಷ್ಟಿದೆ. ಭಾರತದಲ್ಲಿ ಮ್ಯಾಕ್ಸ್ ಮ್ಯುಲರ್ ಭವನ ಹೆಸರಿನಲ್ಲಿ ಹತ್ತು ನಗರಗಳಲ್ಲಿ ಜರ್ಮನ್ ಕಲಿಸುವ ಕೆಲಸವಾಗುತ್ತಿದೆ. ಬರ್ಲಿನ್ ಗೋಡೆಯ ಪತನದ ನಂತರ ಜರ್ಮನಿ ಒಂದಾದ ಮೇಲೆ ಈ ಸಂಸ್ಥೆಯ ಕೆಲಸಕ್ಕೆ ಆನೆಬಲವೇ ಬಂದಿದೆ.

ಭಾಷೆ ಅನ್ನುವ ಸಾಫ್ಟ್ ಪವರ್!

ಇದೆಲ್ಲದರ ಹಿಂದಿರುವ ಆಲೋಚನೆ ಬಹಳ ಸ್ಪಷ್ಟವಾದದ್ದು. ಈ ಶತಮಾನ ಜರ್ಮನ್ನರದ್ದಾಗಬೇಕು ಅಂದರೆ ಅದಕ್ಕೆ ಜರ್ಮನ್ ನುಡಿಯಲ್ಲಿ ಅದ್ಭುತವಾದ ಕಲಿಕೆ-ದುಡಿಮೆಯ ಏಪಾಡುಗಳನ್ನು ಕಟ್ಟಿಕೊಂಡರಷ್ಟೇ ಸಾಲದು, ಪ್ರಪಂಚದಾದ್ಯಂತ ಜರ್ಮನ್ ಭಾಷೆಯನ್ನು ಒಪ್ಪಿಸುವ ಕೆಲಸವಾಗಬೇಕು. ಜರ್ಮನ್ ಭಾಷೆಯ ಸಾಫ್ಟ್ ಪವರಿನ ಮೇಲೆಯೇ ಜರ್ಮನ್ನರ ಜಾಗತೀಕ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯ ಅನ್ನುವ ಆಲೋಚನೆ ಇರುವುದರಿಂದಲೇ ಕೇಂದ್ರಿಯ ವಿದ್ಯಾಲಯದ ಸಣ್ಣ ಪ್ರಕರಣವೊಂದಕ್ಕೆ ಜರ್ಮನಿಯ ಅಧ್ಯಕ್ಷರೇ ಪ್ರತಿಕ್ರಿಯಿಸುವಂತಾಗಿದ್ದು. ಈ ಸ್ಪರ್ಧೆಯಲ್ಲಿ ಫ್ರೆಂಚರೇನು ತುಂಬ ಹಿಂದುಳಿದಿಲ್ಲ. 2050ರ ಹೊತ್ತಿಗೆ ಜಗತ್ತಿನ ಆರ್ಥಿಕ ವ್ಯವಸ್ಥೆಯನ್ನು ನಿಯಂತ್ರಿಸುವ ಶಕ್ತಿ ಆಫ್ರಿಕಾ ಖಂಡದ ದೇಶಗಳಿಗೆ ಬರಲಿದೆ ಅನ್ನುವ ಸುದ್ದಿಗೆ ಅವರು ಈಗಾಗಲೇ ಸಿದ್ದರಾಗಿರುವಂತೆ ಕಾಣುತ್ತದೆ. ಏಕೆಂದರೆ ಇಂದು ಫ್ರೆಂಚ್ ಭಾಷೆಯನ್ನು ಅತಿ ಹೆಚ್ಚು ಸಂಖ್ಯೆಯಲ್ಲಿ ಕಲಿಯುತ್ತಿರುವುದು ಸಬ್ ಸಹಾರನ್ ಆಫ್ರಿಕದ ದೇಶಗಳು. 2050ರ ವೇಳೆಗೆ ಜಗತ್ತಿನಲ್ಲಿ 75 ಕೋಟಿ ಫ್ರೆಂಚ್ ಭಾಷೆ ಬಲ್ಲವರು ಇರಬಹುದು ಅನ್ನುವ ಅಂದಾಜುಗಳಿವೆ. ಯುರೋಪಿಯನ್ನರ ಈ ದೂರಾಲೋಚನೆಯಲ್ಲಿ ಕನ್ನಡಿಗರಿಗೆ, ಭಾರತದ ಇತರೆ ಭಾಷಿಕರಿಗೆ ಇರುವ ಪಾಠವೇನು?

ನಮ್ಮ ಯೋಗ್ಯತೆ ಹೆಚ್ಚಬೇಕು

ಅವರ ಹೋಲಿಕೆಯಲ್ಲಿ ನಮ್ಮ ನುಡಿಗಳ ಸ್ಥಿತಿ ಏನಿದೆ ? ಹೊರ ದೇಶದವರಿಗೆ, ಹೊರ ರಾಜ್ಯದವರಿಗೆ ಕನ್ನಡ ಕಲಿಸುವುದು ಬಿಡಿ, ಕರ್ನಾಟಕಕ್ಕೆ ಬಂದಿರುವ ಪರಭಾಷಿಕರಿಗೆ ಕನ್ನಡ ಕಲಿಸಲು ಬೇಕಿರುವಂತಹ ವ್ಯವಸ್ಥೆಗಳನ್ನು ನಮಗೆ ಇನ್ನು ಚೆನ್ನಾಗಿ ಕಟ್ಟಿಕೊಳ್ಳಲಾಗಿಲ್ಲ. ಜರ್ಮನ್ನರು, ಫ್ರೆಂಚರು, ಇಂಗ್ಲಿಷರು ಹೊರ ಜಗತ್ತಿಗೆ ಭಾಷೆ ಕಲಿಸಲು ಹೊರಡುವ ಮುನ್ನವೇ ತಮ್ಮ ತಮ್ಮ ನೆಲೆಯಲ್ಲಿ ತಮ್ಮ ಭಾಷೆಯನ್ನು ಅದ್ಭುತವಾಗಿ ಕಟ್ಟಿಕೊಳ್ಳುವ ಕೆಲಸ ಮಾಡಿದ್ದಾರೆ. ತಮ್ಮದೇ ನುಡಿಯಲ್ಲಿ ಎಲ್ಲ ಹಂತದ ಕಲಿಕೆ, ಆಡಳಿತ, ದುಡಿಮೆಯ ಏರ್ಪಾಡುಗಳನ್ನು ಕಟ್ಟಿಕೊಂಡಿರುವ ಇವರು ಜಾಗತೀಕರಣವನ್ನು ಎದುರಿಸಲು, ಮುಂದಿನ ಐವತ್ತು ವರ್ಷದ ನಂತರವೂ ತಮ್ಮ ಹಿಡಿತ ಗಟ್ಟಿಯಾಗಿರಿಸಿಕೊಳ್ಳಲು ಏನು ಮಾಡಬೇಕೋ ಅದನ್ನೆಲ್ಲ ಈಗಿನಿಂದಲೇ ಮಾಡುತ್ತಿದ್ದಾರೆ. ಕನ್ನಡಕ್ಕಾಗಲಿ, ಭಾರತದ ಇತರೆ ನುಡಿಗಳಿಗಾಗಲಿ ಅಂತಹ ಶಕ್ತಿ ಯಾಕೆ ಬಂದಿಲ್ಲವೆಂದರೆ ಅದಕ್ಕೆ ಕಾರಣ ಒಂದೇ. ನಮ್ಮ ನುಡಿಗಳಲ್ಲಿ ಅಂತಹ ಯೋಗ್ಯತೆ ತಂದುಕೊಳ್ಳುವ ಕನಸನ್ನು ನಾವು ಕಾಣದೇ ಹೋದದ್ದು. ಹಿಂದೆ ಹಾಗಿತ್ತು, ಹೀಗಿತ್ತು, ಬೀದಿ ಬದಿಯಲ್ಲಿ ಬಂಗಾರ ಅಳೆದು ತೂಗುತ್ತಿದ್ದರು ಎಂದೆಲ್ಲ ನಾವು ಕನವರಿಸಬಹುದು, ಆದರೆ ಇವತ್ತಿನ ಜಗತ್ತಿನ ಆರ್ಥಿಕ ಮತ್ತು ರಾಜಕೀಯದ ಯುದ್ಧಕ್ಕೆ ಸಜ್ಜಾಗಲು ಅದು ಯಾವ ಪ್ರಯೋಜನಕ್ಕೂ ಬಾರದು. ಭಾರತದ ಭಾಷೆಗಳಲ್ಲಿ ಚೆನ್ನಾಗಿ ಅನ್ನದ ವಿದ್ಯೆ ಮೊದಲು ಹುಟ್ಟಿಸಬೇಕು. ಇವತ್ತಿನಂತೆ ಕಲಿಕೆಯಲ್ಲಿ ನಮ್ಮ ಭಾಷೆಗಳನ್ನು ಕೈ ಬಿಟ್ಟು ಕೆಲವರಿಗಷ್ಟೇ ಎಟುಕುವ ಇಂಗ್ಲಿಷಿನ ಹಿಂದೆ ಎಲ್ಲರೂ ಓಡುವುದರಿಂದ ಇದನ್ನು ಸಾಧಿಸಲಾಗಲ್ಲ. ಇಡೀ ಭಾರತದಲ್ಲಿ ಹಿಂದಿ ಹರಡಿ ಇದನ್ನು ಸಾಧ್ಯವಾಗಿಸುತ್ತೇನೆ ಅನ್ನುವುದು ಇನ್ನೊಂದು ತಿರುಕನ ಕನಸು. ಇದನ್ನೆಲ್ಲ ಬಿಟ್ಟು ಗಂಭೀರವಾಗಿ ಭಾರತದ ಭಾಷೆಗಳ ಯೋಗ್ಯತೆ ಎಲ್ಲ ಕ್ಷೇತ್ರದಲ್ಲೂ ಹೆಚ್ಚಿಸುವ ಕನಸಿನತ್ತ ಕೆಲಸ ಮಾಡಬೇಕು. ಅದಿಲ್ಲದಿದ್ದರೆ ಹಿಂದೆ ಬ್ರಿಟಿಷರು ನಮ್ಮನ್ನಾಳಿದ್ದರು, ಮುಂದೆ ಅಮೇರಿಕನ್ನರು, ಜರ್ಮನ್ನರು (ಮಾನಸಿಕವಾಗಿಯೇ ಸರಿ) ಆಳಬಹುದು.

 

This entry was posted in ಕನ್ನಡ, ಜಾಗತೀಕರಣ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s