ಯೋಜನಾ ಆಯೋಗ ರದ್ದಾಗಲಿ, ಅದರ ಕೈಯಲ್ಲಿನ ಅಧಿಕಾರ ರಾಜ್ಯಗಳಿಗೆ ದಕ್ಕಲಿ

ಯೋಜನಾ ಆಯೋಗ ಅನ್ನುವ ಒಕ್ಕೂಟ ವಿರೋಧಿ ವ್ಯವಸ್ಥೆಯನ್ನು ರದ್ದುಗೊಳಿಸಿ ಸಹಕಾರ ತತ್ವ ಆಧರಿಸಿದ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವತ್ತ ಹೊಸ ಸಂಸ್ಥೆಯೊಂದನ್ನು ಹುಟ್ಟು ಹಾಕುವ ಬಗ್ಗೆ ಗಮನಹರಿಸುವುದಾಗಿ ಸ್ವಾತಂತ್ರ ದಿನದ ಭಾಷಣದಲ್ಲಿ ಪ್ರಧಾನಿ ಮೋದಿಯವರು ಘೋಷಿಸಿದ್ದರು. ಅದರಂತೆ ಈ ವಾರ ದೆಹಲಿಯಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಇದರ ಮುಂದಿನ ಹೆಜ್ಜೆ ಯಾವ ರೀತಿ ಇರಬೇಕು ಅನ್ನುವ ಬಗ್ಗೆ ಚರ್ಚೆ ನಡೆಸಿದ್ದಾರೆ ಅನ್ನುವ ಸುದ್ದಿ ಪತ್ರಿಕೆಗಳಲ್ಲಿದೆ. ಇದು ಆಡಳಿತ ಸುಧಾರಣೆಯ ನಿಟ್ಟಿನಲ್ಲಿ ಒಂದು ಒಳ್ಳೆಯ ಹೆಜ್ಜೆಯೆಂದೇ ಕರೆಯಬೇಕು. ಆದರೆ ಭಾರತದ ಅತಿಯಾದ ಕೇಂದ್ರಿಕೃತ ವ್ಯವಸ್ಥೆಯಲ್ಲಿ ಯೋಜನಾ ಆಯೋಗ ರದ್ದುಪಡಿಸಿ, ಅದರ ಜಾಗದಲ್ಲಿ ಇನ್ನೊಂದು “ಕೇಂದ್ರಿಯ” ವ್ಯವಸ್ಥೆ ತಂದರೆ ಅದು ಅಳಿಯ ಅಲ್ಲ ಮಗಳ ಗಂಡ ಅನ್ನುವಂತಹ ಬದಲಾವಣೆಯಾಗಬಹುದೇ ಹೊರತು ನಿಜವಾದ ಅರ್ಥದಲ್ಲಿ ಆಡಳಿತವನ್ನು ವಿಕೇಂದ್ರಿಕರಿಸುವ ಆಶಯಕ್ಕೆ ಬಲ ತುಂಬದು.

ಯೋಜನಾ ಆಯೋಗ ಅನ್ನುವ ಸೋವಿಯತ್ ಪಳಿಯುಳಿಕೆ

ಭಾರತದಲ್ಲಿ ಯೋಜನಾ ಆಯೋಗ ಅನ್ನುವುದು ಮೊದಲು ಶುರುವಾದದ್ದು 1950ರ ಮಾರ್ಚ್ 15ರಂದು ಜವಾಹರ್ ಲಾಲ್ ನೆಹರೂ ಪ್ರಧಾನಿಯಾಗಿದ್ದಾಗ. ಅದಕ್ಕೆ ಸಂವಿಧಾನದ ಮಾನ್ಯತೆಯೂ ಇರಲಿಲ್ಲ, ಅದು ಯಾವುದೇ ಸಂಸತ್ತಿನ ಕಾನೂನಿನಿಂದಲೂ ರಚಿಸಲ್ಪಟ್ಟಿಲ್ಲ. ಸ್ವತಂತ್ರ ಭಾರತ ಒಕ್ಕೂಟಕ್ಕೆ ಯಾವ ಮಾದರಿಯ ಆಡಳಿತ ವ್ಯವಸ್ಥೆ ಇರಬೇಕು ಅನ್ನುವ ಹುಡುಕಾಟ, ಚರ್ಚೆಯಾಗುತ್ತಿದ್ದ ಕಾಲದಲ್ಲಿ, ಸೋವಿಯತ್ ರಶ್ಯಾದಲ್ಲಿದ್ದ, ಎಲ್ಲವನ್ನು ಮಾಸ್ಕೊದಲ್ಲಿ ಕೂತು ಯೋಜಿಸುವ ಆನಂತರ ರಶ್ಯಾದೆಲ್ಲೆಡೆ ಜಾರಿಗೆ ತರುವಂತಹ, ಕೇಂದ್ರಿಕೃತವಾದ ವ್ಯವಸ್ಥೆ ಪ್ರಧಾನಿ ನೆಹರೂ ಅವರನ್ನು ಸೆಳೆಯಿತು ಮತ್ತು ಅದರ ಫಲವಾಗಿ ಭಾರತದಲ್ಲೂ  ಎಲ್ಲ ರಾಜ್ಯಕ್ಕೂ ಏನು ಒಳ್ಳೆಯದು, ಏನು ಕೆಟ್ಟದ್ದು ಅನ್ನುವುದನ್ನು ದೆಹಲಿಯಲ್ಲಿ ಕೂತು ನಿರ್ಧಾರ ಮಾಡುವಂತಹ ವ್ಯವಸ್ಥೆಯಾಗಿ ಯೋಜನಾ ಆಯೋಗ ಜಾರಿಗೆ ಬಂತು. ಸ್ವಾತಂತ್ರ್ಯ ಬಂದ ಹೊತ್ತಲ್ಲಿ ಎಳವೆಯಲ್ಲಿದ್ದ ಭಾರತದ ಅರ್ಥ ವ್ಯವಸ್ಥೆಯನ್ನು ಕಟ್ಟಿಕೊಳ್ಳಲು ಅಂತಹದೊಂದು ಸಂಸ್ಥೆ ಬೇಕು ಅನ್ನುವ ಮಾತಿಗೆ ಕೊಂಚವಾದರೂ ಅರ್ಥವಿತ್ತು, ಆದರೆ ಅಲ್ಲಿಂದಾಚೆ 65 ವರ್ಷದುದ್ದಕ್ಕೂ ಯೋಜನಾ ಆಯೋಗ ಅನ್ನುವ ದೆಹಲಿ ಕೇಂದ್ರಿಕೃತ ವ್ಯವಸ್ಥೆ ಭಾರತ ಒಕ್ಕೂಟಕ್ಕೆ ಒಳಿತಿಗಿಂತ ಕೆಡುಕು ಮಾಡಿರುವುದೇ ಹೆಚ್ಚು. ಇಂದು ಒಂದು ರಾಜ್ಯದ ಕೃಷಿ, ಉದ್ದಿಮೆ, ಮೂಲಭೂತ ಸೌಕರ್ಯ, ಆರೋಗ್ಯ, ಶಿಕ್ಷಣದಿಂದ ಹಿಡಿದು ಕೊನೆಗೆ ಒಂದು ರಾಜ್ಯ ಎಷ್ಟು ಮಕ್ಕಳು ಮಾಡಿಕೊಳ್ಳಬೇಕು ಅನ್ನುವುದನ್ನು ತಿಳಿಸುವ ಟೋಟಲ್ ಫರ್ಟಿಲಿಟಿ ರೇಟ್ ನಿರ್ಧರಿಸುವವರೆಗೂ ಯೋಜನಾ ಆಯೋಗದ ಕೈ ಎಲ್ಲೆಡೆ ಚಾಚಿದೆ. ಇದರ ನೇರ ಫಲವಾಗಿ ಹೆಚ್ಚಿನ ಯೋಜನೆಗಳಲ್ಲಿ ಭ್ರಷ್ಟಾಚಾರ ಮನೆ ಮಾಡಿದೆ.

ರಾಜ್ಯಗಳಿಗೆ ಬೇಕು ಸ್ವಾಯತ್ತೆ

ಈ ರೀತಿ ಎಲ್ಲವನ್ನೂ ದೆಹಲಿಯಿಂದ ರೂಪಿಸಿ ರಾಜ್ಯಗಳಿಗೆ ಜಾರಿ ಮಾಡುವ ಹೊಣೆ ಕೊಡುತ್ತೇನೆ ಅನ್ನುವವರ ಮನಸ್ಥಿತಿಯಲ್ಲೇ “ರಾಜ್ಯಗಳು ಅಯೋಗ್ಯರು, ಭ್ರಷ್ಟರು” ಅನ್ನುವ ಅನಿಸಿಕೆ ಇರುವಂತಿದೆ. ಆದರೆ ಇದು ನಿಜಕ್ಕೂ ಒಂದು ತಪ್ಪು ಯೋಚನೆ. ಸ್ವಾತಂತ್ರ್ಯ ಪೂರ್ವದಲ್ಲಿ ಕರ್ನಾಟಕದಲ್ಲಿ ಆದ ಕೆಲಸಗಳ ಪಟ್ಟಿ ಒಮ್ಮೆ ಗಮನಿಸಬೇಕು. ಕೆ.ಆರ್.ಎಸ್ ನಂತಹ ಸುಣ್ಣ,ಬೆಲ್ಲ ಬಳಸಿ ಕಟ್ಟಿದ ಇಂಜಿನಿಯರಿಂಗ್ ಮಿರಾಕಲ್, 1200 ಕಿ.ಮೀ ರೈಲ್ವೆ ಮಾರ್ಗ ನಿರ್ಮಾಣವಾದದ್ದು (ಇಂದಿರುವ ಮೂರು ಸಾವಿರ ಕಿ.ಮೀ ದಾರಿಯಲ್ಲಿ ಅರ್ಧ ಆಗಲೇ ಆಗಿತ್ತು), ಭದ್ರಾವತಿಯಲ್ಲಿ ಉಕ್ಕಿನ ಕಾರ್ಖಾನೆ ಬಂದಿದ್ದು, ಶಿವನಸಮುದ್ರದಲ್ಲಿ ವಿದ್ಯುತ್ ಹುಟ್ಟಿದ್ದು, ಕೆ.ಜಿ.ಎಫ್ ನಲ್ಲಿ ಚಿನ್ನ ತೆಗೆದಿದ್ದು, ಮೈಸೂರಿನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ವಿಮೆ ಸೌಲಭ್ಯ ಕಲ್ಪಿಸಿದ್ದ ಮೈಸೂರು ವಿಮೆ ಸಂಸ್ಥೆ ಹುಟ್ಟಿದ್ದು (ನಂತರ ಅದನ್ನು ಎಲ್.ಐ.ಸಿ ಕಬಳಿಸಿತು), ಬೆಂಗಳೂರಿನಲ್ಲಿ ಐ.ಐ.ಎಸ್.ಸಿ ಶುರುವಾದದ್ದು, ಮೈಸೂರು ವಿಶ್ವವಿದ್ಯಾಲಯ ಹುಟ್ಟಿದ್ದು, ಕರಾವಳಿಯಲ್ಲಿ ಸಾಲು ಸಾಲು ಬ್ಯಾಂಕುಗಳು ಹುಟ್ಟಿದ್ದು (ಇವೆಲ್ಲವೂ ಮುಂದೆ ರಾಷ್ಟ್ರೀಕರಣಗೊಂಡು ಕನ್ನಡಿಗರ ಕೈ ತಪ್ಪಿದವು), ಹೀಗೆ ಸ್ವಾತಂತ್ರ್ಯದ ಮುಂಚೆ ಕರ್ನಾಟಕದ ಶೈಕ್ಷಣಿಕ, ಆರ್ಥಿಕ, ಉದ್ಯಮದ ಪ್ರಗತಿಯಲ್ಲಾದ ದೊಡ್ಡ ದೊಡ್ಡ ಸಾಧನೆಗಳೆಲ್ಲವೂ ಕನ್ನಡಿಗರದೇ ಆದ ಸಾಧನೆಗಳು. ಈ ಯಾವ ಸಾಧನೆಯೂ ದೆಹಲಿಯಿಂದ ಪ್ಲಾನಿಂಗ್ ಕಮಿಶನ್ ರೀತಿಯ ಸಂಸ್ಥೆಯೊಂದು ಹೀಗೆ ಮಾಡಿ, ಹೀಗೆ ಮಾಡಬೇಡಿ ಅನ್ನುವ ಸಲಹೆ,ಸೂಚನೆ, ಆದೇಶ ಕೊಟ್ಟೇನು ಆಗಿದ್ದಲ್ಲ. ಹೀಗಿರುವಾಗ ಇವತ್ತು ಆಡಳಿತ ಸುಧಾರಣೆಗೆ ನಿಜಕ್ಕೂ ಬೇಕಿರುವುದು ರಾಜ್ಯಗಳಿಗೆ ತಮ್ಮ ಏಳಿಗೆಯ ದಾರಿಯನ್ನು ತಾವೇ ಕಂಡುಕೊಳ್ಳುವಂತಹ ಸ್ವಾಯತ್ತೆ. ಮೋದಿಯವರು ಹೇಳುತ್ತಿರುವ ಸಹಕಾರಿ ತತ್ವದ ಒಕ್ಕೂಟ ವ್ಯವಸ್ಥೆ ಗೆಲುವು ಕಾಣಬೇಕು ಅಂದರೆ ಈ ಮಾದರಿಯಲ್ಲಿ ರಾಜ್ಯಗಳಿಗೆ ಸ್ವಾಯತ್ತೆ ನೀಡುವ ಮೇಜರ್ ಸರ್ಜರಿ ಬೇಕಿದೆಯೇ ಹೊರತು ಒಂದು ಸಂಸ್ಥೆ ಮುಚ್ಚಿ, ಅಂತಹುದೇ ಇನ್ನೊಂದನ್ನು ತೆರೆಯುವ ಕಾಸ್ಮೆಟಿಕ್ ಸರ್ಜರಿಯಲ್ಲ.

ನಿಜವಾದ ಒಕ್ಕೂಟ ವ್ಯವಸ್ಥೆ ಯಾವುದು?

ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಮೂರು ಅವಧಿ ಆಳ್ವಿಕೆ ಮಾಡಿದ್ದ ಮೋದಿಯವರಿಗೆ ಕೇಂದ್ರದ ಒಕ್ಕೂಟ ವಿರೋಧಿ ನೀತಿಗಳಿಂದ ತಮ್ಮ ರಾಜ್ಯದಲ್ಲಿ ಆಡಳಿತ ನಡೆಸಲು ಉಂಟಾದ ತೊಡಕಿನ ಬಗ್ಗೆ ಸ್ಪಷ್ಟ ಅರಿವಿದೆ. ಹಿಂದೊಮ್ಮೆ “ಕೇಂದ್ರ ಗುಜರಾತಿಗೆ ನಯಾ ಪೈಸೆ ಕೊಡುವುದು ಬೇಡ, ಗುಜರಾತ್ ಕೂಡ ಕೇಂದ್ರಕ್ಕೆ ನಯಾ ಪೈಸೆ ಕೊಡದೇ ಗುಜರಾತಿನ ಏಳಿಗೆಯನ್ನು ಮಾಡಿ ತೋರಿಸುತ್ತೇನೆ” ಎಂದು ಅಂದಿನ ಕಾಂಗ್ರೆಸ್ ಸರ್ಕಾರಕ್ಕೆ ಅವರು ಸವಾಲು ಕೂಡ ಎಸೆದಿದ್ದರು. ಈಗ ಅವರದೇ ಸರ್ಕಾರ ದೆಹಲಿಯಲ್ಲಿದೆ. ಕಳೆದ ಆರು ತಿಂಗಳಲ್ಲಿ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವತ್ತ ಅವರ ಸರ್ಕಾರ ಕೈಗೊಂಡಿರುವ ನಿರ್ಧಾರಗಳು ಅಷ್ಟೊಂದು ಆಶಾದಾಯಕವಾಗಿಲ್ಲ. ರಾಜ್ಯಗಳು ದೆಹಲಿಗೆ ಕಟ್ಟುವ ತೆರಿಗೆಯಲ್ಲಿ ಇನ್ನಷ್ಟು ಹೆಚ್ಚಿನ ಪಾಲು ರಾಜ್ಯಗಳಿಗೆ ಕೊಡಬೇಕು ಅನ್ನುವ ಬೇಡಿಕೆಯನ್ನು ಅವರ ಸರ್ಕಾರ ತಳ್ಳಿ ಹಾಕಿದೆ. ಹೊಸ ಸಾರಿಗೆ ಕಾನೂನಿನ ಮೂಲಕ ರಾಜ್ಯಗಳ ಕೈಯಲ್ಲಿರುವ ಸಾರಿಗೆಯನ್ನು ಪರೋಕ್ಷವಾಗಿ ಕೇಂದ್ರದ ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಸ್ತಾವನೆಯೊಂದು ಕೇಂದ್ರ ಮುಂದಿಟ್ಟಿದೆ. ಅದೇನಾದರೂ ಜಾರಿಗೆ ಬಂದರೆ ದೇಶದಲ್ಲೇ ಲಾಭ ಮಾಡುತ್ತಿರುವ ಕೆಲವೇ ಕೆಲವು ಸಾರಿಗೆ ಸಂಸ್ಥೆಗಳಾದ ಕೆ.ಎಸ್.ಆರ್.ಟಿ.ಸಿ ಮತ್ತು ಬಿ.ಎಮ್.ಟಿ.ಸಿಗಳು ಕನ್ನಡಿಗರ ಕೈ ತಪ್ಪಬಹುದು. ರೈಲ್ವೇ ಇಲಾಖೆಯಲ್ಲಾದಂತೆ ನಮ್ಮ ಸಾರಿಗೆ ಇಲಾಖೆಯಲ್ಲೂ ಕನ್ನಡಕ್ಕೆ, ಕನ್ನಡಿಗರಿಗೆ ಕುತ್ತು ಬರುವಂತಾಗಬಹುದು. ಎಲ್ಲಕ್ಕೂ ಮಿಗಿಲಾಗಿ ದೇಶದ ಒಕ್ಕೂಟದ ವ್ಯವಸ್ಥೆಯ ಪರ ಇರುವವರು ದೇಶಿಯ ಭಾಷೆಗಳನ್ನು ಕಡೆಗಣಿಸಿ ಮುನ್ನಡೆಯಲು ಸಾಧ್ಯವೇ? ಡಿಜಿಟಲ್ ಇಂಡಿಯಾ ಯೋಜನೆಯಲ್ಲಾಗಲಿ, ಶಿಕ್ಷಣ, ಉದ್ಯೋಗದ ನೀತಿಯಲ್ಲಾಗಲಿ ಭಾರತದ ಎಲ್ಲ ಭಾಷೆಗಳನ್ನು ಬೆಳೆಸುವ, ಬೆನ್ತಟ್ಟುವ ನಡೆ ಕೇಂದ್ರ ಸರ್ಕಾರ ಕೈಗೊಂಡಿಲ್ಲ. ನಿರಂತರವಾಗ ಹಿಂದಿ ಪರ ನಿಲುವು ಪ್ರದರ್ಶಿಸುವ ಮೂಲಕ ಹಿಂದಿ ಹೇರಿಕೆಯ ಬಗ್ಗೆ ಇತರೆ ಭಾಷಿಕರಲ್ಲಿ ಒಂದು ರೀತಿಯ ಅಭದ್ರತೆ ಉಂಟಾಗುವಂತೆ ಮಾಡಿದೆ. ಇದೆಲ್ಲವೂ ಸಹಕಾರಿ ತತ್ವದ ಮೇಲೆ ಕಟ್ಟಬಯಸುವ ಒಕ್ಕೂಟ ವ್ಯವಸ್ಥೆಯನ್ನು ಗಟ್ಟಿಗೊಳಿಸುವಂತದ್ದಲ್ಲ. ಆದ್ದರಿಂದ ಮೋದಿಯವರು ರಕ್ಷಣೆ, ವಿದೇಶಾಂಗ ನೀತಿ, ಹಣಕಾಸು ನೀತಿ, ರಾಜ್ಯ ರಾಜ್ಯಗಳ ನಡುವೆ ಸಮನ್ವಯದಂತಹ ಮುಖ್ಯವಾದ ಕೆಲಸಗಳಿಗೆ ಕೇಂದ್ರವನ್ನು ಸೀಮಿತಗೊಳಿಸಿ ಉಳಿದ ಜವಾಬ್ದಾರಿಯನ್ನು ರಾಜ್ಯಗಳಿಗೆ ನೀಡುವಂತಹ ಒಕ್ಕೂಟ ವ್ಯವಸ್ಥೆಯತ್ತ ಭಾರತವನ್ನ ಒಯ್ದು ಕೇಂದ್ರಿಕೃತ ವ್ಯವಸ್ಥೆಯ ಬಂಧನದಿಂದ ರಾಜ್ಯಗಳನ್ನು ಮುಕ್ತಗೊಳಿಸಿದರೆ ರಾಜ್ಯಗಳೂ ಏಳಿಗೆ ಹೊಂದುತ್ತವೆ. ಅದರ ಬಲದ ಮೇಲೆ ಭಾರತದ ಏಳಿಗೆಯೂ ಸಾಧ್ಯವಾಗುತ್ತೆ.

 

This entry was posted in ಒಕ್ಕೂಟ ವ್ಯವಸ್ಥೆ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s