ಗಂಗ್ನಮ್ ಸ್ಟೈಲ್ ಅನ್ನುವ ಕೊರಿಯನ್ ಹಾಡಿನ ಗೆಲುವಿನ ಹಿಂದಿನ ಕತೆ ಗೊತ್ತೇ?

ಜಗತ್ತಿನಾದ್ಯಂತ ಹುಚ್ಚೆಬ್ಬಿಸಿದ್ದ ಕೊರಿಯನ್ ಹಾಡು ‘ಗಂಗ್ನಮ್ ಸ್ಟೈಲ್’ ಆನ್ ಲೈನ್ ವಿಡಿಯೋ ತಾಣ ಯುಟ್ಯೂಬಿನಲ್ಲಿ 214 ಕೋಟಿ ಹಿಟ್ಸ್ ಪಡೆದಿದ್ದು, ಅದರ ಹೆಚ್ಚುತ್ತಿರುವ ನೋಡುಗರ ಎಣಿಕೆಯನ್ನು ಎಣಿಸಲು ಸೋತು ಯುಟ್ಯೂಬ್ ತನ್ನ ವಿಡಿಯೋ ಎಣಿಕೆ ಸಾಮರ್ಥ್ಯವನ್ನೇ ಹೆಚ್ಚಿಸಿಕೊಂಡ ಸುದ್ದಿ ಇತ್ತೀಚೆಗೆ ಪತ್ರಿಕೆಗಳಲ್ಲಿ ಓದಿದ್ದೆವು. ಇಂಗ್ಲಿಷ್ ಅಲ್ಲದ ಭಾಷೆಯಲ್ಲಿರುವ ಹಾಡೊಂದು ಜಗತ್ತಿನ ಅತ್ಯಂತ ಜನಪ್ರಿಯ ಹಾಡಿನ ಪಟ್ಟಿಗೆ ಸೇರುವಂತಾಗಿದ್ದು ಜಾಗತೀಕರಣವನ್ನು ತಮ್ಮ ಅನುಕೂಲಕ್ಕೆ ಕೊರಿಯನ್ನರು ಎಷ್ಟು ಸೊಗಸಾಗಿ ಪಳಗಿಸಿಕೊಂಡಿದ್ದಾರೆ ಅನ್ನುವುದನ್ನು ಎತ್ತಿ ತೋರಿಸುತ್ತೆ. ಈ ಹಾಡಿನ ಗೆಲುವಿನ ಹಿಂದೆ ಬರೀ ಒಬ್ಬ ಕಲಾವಿದನ ಶ್ರಮವಿರದೇ, ಕೊರಿಯನ್ ಪಾಪ್ (ಕೆ-ಪಾಪ್) ಅನ್ನುವ ಸಂಗೀತ ಪ್ರಕಾರದ ಮೂಲಕ ಕೊರಿಯನ್ ಭಾಷೆ ಮತ್ತು ಸಂಸ್ಕೃತಿಯನ್ನು ಜಗತ್ತಿನೆಲ್ಲೆಡೆ ಹರಡಬೇಕು ಅನ್ನುವ ದಕ್ಷಿಣ ಕೋರಿಯಾ ಸರ್ಕಾರದ ಸಾಂಸ್ಕೃತಿಕ ನೀತಿಯ ಒತ್ತಾಸೆಯೂ ಇದೆ ಅನ್ನುವುದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ.

ಕೊರಿಯನ್ ಪಾಪ್ ಹುಟ್ಟಿದ ಕತೆ

ಕೊರಿಯನ್ ಯುದ್ಧದ ನಂತರ ಪ್ರತ್ಯೇಕವಾದ ದಕ್ಷಿಣ ಮತ್ತು ಉತ್ತರ ಕೊರಿಯಾದಲ್ಲಿ ದಕ್ಷಿಣ ಕೊರಿಯಾ ಅಮೇರಿಕನ್ ಮಾದರಿಯ ಮುಕ್ತ ಮಾರುಕಟ್ಟೆಯ ಅರ್ಥ ವ್ಯವಸ್ಥೆಯತ್ತ ಹೊರಳಿತು. ಆದರೆ ನಮ್ಮಂತೆ ಇಂಗ್ಲಿಷಿನ ಹುಚ್ಚಿಗೆ ಬೀಳದೆ ಇಂಜಿನಿಯರಿಂಗ್, ಮೆಡಿಕಲ್ ಸೇರಿದಂತೆ ಎಲ್ಲ ತರದ, ಎಲ್ಲ ಹಂತದ ಕಲಿಕೆಯನ್ನು ಕೊರಿಯನ್ ನುಡಿಯಲ್ಲೇ ಕಟ್ಟಿಕೊಳ್ಳುವ ಕೆಲಸ ಮಾಡಿದರು. ಇದಾದ ನಂತರ ಅಲ್ಲಿ ಮುಂಚೂಣಿಗೆ ಬಂದದ್ದು ಇಂದು ಜಗತ್ತನ್ನೇ ಆಳುತ್ತಿರುವ ಸ್ಯಾಮಸಂಗ್, ಎಲ್.ಜಿ, ಹ್ಯುಂಡೈ ತರದ ಕಂಪನಿಗಳು. ಇವೆಲ್ಲವೂ ಕೊರಿಯನ್ನರ ತಂತ್ರಜ್ಞಾನದ ಪ್ರಗತಿಯನ್ನು ಜಗತ್ತಿಗೆ ಸಾರಿದ್ದು ನಿಜವಾದರೂ ಅದು ಕೊರಿಯನ್ ಭಾಷೆಯನ್ನು ಜಗದಗಲ ಹರಡಲು ಬೇಕಾದ ಭಾಷೆಯ ಮೆದು ಬಲ (ಸಾಫ್ಟ್ ಪವರ್) ಕೊಟ್ಟಿರಲಿಲ್ಲ. ಇದೇ ಹೊತ್ತಲ್ಲಿ ಅಮೇರಿಕದಿಂದ ಹೊರ ಬರುತ್ತಿದ್ದ ಇಂಗ್ಲಿಷ್ ಪಾಪ್ ಸಂಗೀತ, ಹಾಲಿವುಡ್ ಸಿನೆಮಾಗಳು ಅಮೇರಿಕನ್ನರಿಗೆ ಅಂತಹದೊಂದು ಮೈಂಡ್ ಸ್ಪೇಸ್ ಅನ್ನು ಜಗತ್ತಿನ ಎಲ್ಲೆಡೆ ಕೊಡಿಸಿದ್ದನ್ನು ಕಂಡ ಕೊರಿಯನ್ನರಿಗೆ ಹೊಳೆದದ್ದು ಕೆ-ಪಾಪ್ ಅನ್ನುವ ಕೊರಿಯನ್ ಸಂಗೀತದ ಪ್ರಕಾರ. ಪಾಶ್ಚಿಮಾತ್ಯ ಶೈಲಿಯ ಎಲೆಕ್ಟ್ರೊ, ಡಿಸ್ಕೊ, ರಾಕ್, ಆರ್-ಎನ್-ಬಿ, ಹಿಪ್-ಹಾಪ್ ಸಂಗೀತದಲ್ಲಿ ಬರುವ ಕೊರಿಯನ್ ಹಾಡುಗಳಿಗೆ ಅಷ್ಟೇ ಸೊಗಸಾದ ಕುಣಿತವನ್ನು ಬೆರೆಸಿ, ಹದಿಹರೆಯದ ವಯಸ್ಸಿನ ಮಕ್ಕಳಿಗೆ ಇಷ್ಟವಾಗುವ ಬಣ್ಣ ಬಣ್ಣದ ಉಡುಗೆ ತೊಡುಗೆ ತೊಡಿಸಿ ಕೊರಿಯನ್ನರದ್ದೇ ಆದ ಶೈಲಿಯೊಂದರಲ್ಲಿ 1991ರಲ್ಲಿ ಶುರುವಾದ ಈ ಸಂಗೀತ ಪ್ರಕಾರ ನೋಡನೋಡುತ್ತಿದ್ದಂತೆಯೇ ಪೂರ್ವ ಏಷ್ಯಾದ ದೇಶಗಳೆಲ್ಲವನ್ನು ತನ್ನ ಮಾಯಾ ಜಾಲಕ್ಕೆ ಎಳೆದುಕೊಂಡಿತು. 2000ದ ಹೊತ್ತಿಗೆ ಇದೊಂದು ಸಂಗೀತದ ಪ್ರಕಾರದಿಂದ ಬಡ್ತಿ ಪಡೆದು ಒಂದು ರೀತಿಯ ಸಾಂಸ್ಕೃತಿಕ ಪ್ರಕಾರದ ಸ್ವರೂಪ ಪಡೆದುಕೊಂಡಿತು. ಅಲ್ಲಿಂದಾಚೆ ಲ್ಯಾಟಿನ್ ಅಮೇರಿಕ, ಈಶಾನ್ಯ ಭಾರತದ ರಾಜ್ಯಗಳು, ಪೂರ್ವ ಯುರೋಪಿನ ಬಹುತೇಕ ದೇಶಗಳಿಗೆ ದಾಳಿಯಿಟ್ಟ ಕೊರಿಯನ್ ಅಲೆ ಅಲ್ಲೆಲ್ಲ ದೊಡ್ಡ ಮಟ್ಟದಲ್ಲಿ ಕೊರಿಯನ್ ಸಂಗೀತಕ್ಕೆ ನೆಲೆ ಕಟ್ಟಿಕೊಟ್ಟಿತು. ಅಂತರ್ಜಾಲ ಮತ್ತು ಯುಟ್ಯೂಬಿನಂತಹ ವಿಡಿಯೋ ತಾಣಗಳ ಬೆಳವಣಿಗೆ ಈ ಅಲೆಗೆ ಇನ್ನಷ್ಟು ಬಲ ತುಂಬಿತು.

ಕೆ-ಪಾಪ್ ಹಿಂದೆ ನಿಂತ ಕೊರಿಯನ್ ಸರ್ಕಾರ

ಕೆ-ಪಾಪ್ ಜನಪ್ರಿಯತೆ ಬೆಳೆಯುತ್ತ ಹೋದಂತೆ ಮೊದಲು ಎಚ್ಚೆತ್ತುಕೊಂಡದ್ದು ದಕ್ಷಿಣ ಕೊರಿಯಾದ ಸರ್ಕಾರ. ಒಂದು ಸಾಂಸ್ಕೃತಿಕ ಉತ್ಪನ್ನವಾಗಿ ಕೆ-ಪಾಪ್ ಅನ್ನು ಬೆಳೆಸುವುದು ಕೊರಿಯಾದ ಆರ್ಥಿಕತೆಗೆ ಲಾಭ ತಂದು ಕೊಡುತ್ತೆ ಅನ್ನುವುದನ್ನು ಅರಿತ ಅಲ್ಲಿನ ಸರ್ಕಾರ ತನ್ನ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವಾಲಯದ ಮೂಲಕ ಕೆ-ಪಾಪ್ ಬೆಳವಣಿಗೆಗೆ ಬೇಕಿರುವ ಎಲ್ಲ ಬೆಂಬಲ ನೀಡಲು ಮುಂದಾಯ್ತು. ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಕೊರಿಯನ್ ಸಾಂಸ್ಕೃತಿಕ ಕೇಂದ್ರಗಳನ್ನು ಸ್ಥಾಪಿಸಿರುವ ಈ ಸಚಿವಾಲಯ ಆ ದೇಶಗಳಲ್ಲಿನ ತನ್ನ ರಾಯಭಾರಿ ಕಚೇರಿಯ ಮೂಲಕ ಬೇರೆ ಬೇರೆ ದೇಶಗಳಲ್ಲಿ ಕೆ-ಪಾಪ್ ರಸಸಂಜೆಗಳನ್ನು ಏರ್ಪಡಿಸಲು ಎಲ್ಲ ರೀತಿಯ ನೆರವು ನೀಡಿತು. ಅಲ್ಲದೇ ಜಗತ್ತಿನ ಮೂಲೆ ಮೂಲೆಯಲ್ಲಿರುವ ಕೆ-ಪಾಪ್ ಅಭಿಮಾನಿಗಳನ್ನು ಕೊರಿಯಾದಲ್ಲಿ ನಡೆಯುವ ವಿಶ್ವ ಕೆ-ಪಾಪ್ ಹಬ್ಬಕ್ಕೆ ಕರೆತಂದು ಅವರು ಮರಳಿ ತಮ್ಮ ದೇಶದಲ್ಲಿ ಕೆ-ಪಾಪ್ ಪ್ರಚಾರ ಮಾಡುವಂತೆ ನೋಡಿಕೊಂಡಿತು. ಇದೆಲ್ಲದರ ಪರಿಣಾಮವಾಗಿ 2013ರಲ್ಲಿ ಕೊರಿಯಾದ ಸಾಂಸ್ಕೃತಿಕ ರಫ್ತು ಸುಮಾರು 5 ಬಿಲಿಯನ್ ಅಮೇರಿಕನ್ ಡಾಲರುಗಳಿಗೆ (ಸುಮಾರು 30,000 ಕೋಟಿ !) ತಲುಪಿದೆ. ಇದನ್ನು 2017ರ ಹೊತ್ತಿಗೆ 10 ಬಿಲಿಯನ್ ಡಾಲರುಗಳಿಗೆ ಏರಿಸುವ ಗುರಿ ಕೊರಿಯನ್ ಸರ್ಕಾರದ್ದು. ಕೊರಿಯನ್ ಸರ್ಕಾರದ ಅಂದಾಜಿನ ಪ್ರಕಾರ ಪ್ರತಿ ನೂರು ಡಾಲರ್ ಕೊರಿಯನ್ ಸಾಂಸ್ಕೃತಿಕ ರಫ್ತಿನ ಬೆನ್ನಿಗೆ ಸುಮಾರು 413 ಡಾಲರಿನಷ್ಟು ಕೊರಿಯಾದ ಗ್ರಾಹಕ ಉತ್ಪನ್ನಗಳೂ ರಫ್ತಾಗುತ್ತವೆ. ಹೇಗಿದೆ ನೋಡಿ, ಒಂದೆಡೆ ಭಾಷೆ, ಇನ್ನೊಂದೆಡೆ ವ್ಯಾಪಾರ, ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆವ ಕೊರಿಯನ್ನರ ಕರಾಮತ್ತು! ಇಂತಹದೊಂದು ಉತ್ತೇಜಕ ವಾತಾವರಣದಲ್ಲಿ ಹುಟ್ಟಿದ್ದೇ ಗಂಗ್ನಮ್ ಸ್ಟೈಲ್. ಅದು ಜಗದ್ವಿಖ್ಯಾತವಾಗುತ್ತಿದ್ದಂತೆಯೇ ಕೆ-ಪಾಪ್ ಅನ್ನುವುದು ಜಗತ್ತಿನ ಹೆಚ್ಚು ಕಡಿಮೆ ಎಲ್ಲ ದೇಶಗಳ ಹದಿಹರೆಯದ ಮನಸ್ಸುಗಳಲ್ಲೂ ಜಾಗ ಪಡೆದುಕೊಂಡಿತು. ಉತ್ತರ ಮತ್ತು ದಕ್ಷಿಣ ಕೊರಿಯನ್ನರನ್ನು ಒಂದಾಗಿಸುವ ಶಕ್ತಿ ಏನಾದರೂ ಇದ್ದರೆ ಅದು ಕೆ-ಪಾಪ್ ಸಂಗೀತಕ್ಕೆ ಮಾತ್ರ ಎಂದು ಹಿಂದಿನ ದಕ್ಷಿಣ ಕೊರಿಯಾ ಅಧ್ಯಕ್ಷ ಕಿಮ್-ಡೇ-ಜಂಗ್ ಹೇಳಿದ್ದು ಕೆ-ಪಾಪ್ ಬಗ್ಗೆ ಅವರೆಷ್ಟು ಗಂಭೀರವಾಗಿದ್ದರು ಎಂದು ತೋರಿಸುತ್ತೆ. ಇದೆಲ್ಲದರಿಂದ ಕೊರಿಯನ್ನರಷ್ಟೇ ಎಣಿಕೆಯಲ್ಲಿರುವ ಕನ್ನಡಿಗರು ಕಲಿಯುವುದೇನಿದೆ?

ನಮ್ಮ ಕತೆ-ವ್ಯಥೆ

ಕರ್ನಾಟಕದಲ್ಲೂ ಕನ್ನಡಕ್ಕಾಗಿ ಹಲವು ಸರ್ಕಾರಿ ಸಂಸ್ಥೆಗಳಿವೆ. ಕರ್ನಾಟಕದ ನೆಲದ ನುಡಿಗಳಾದ ತುಳು, ಕೊಡವ, ಕೊಂಕಣಿಗಳ ಬೆಳವಣಿಗೆಗೆ ಒಂದೊಂದು ಅಕಾಡೆಮಿಗಳೂ ಇವೆ. ಆದರೆ ಈ ಯಾವ ಸಂಸ್ಥೆಗಳಿಗೂ ಒಂದು ಭಾಷೆ ಜಾಗತೀಕರಣವನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಪಳಗಿಸಿಕೊಳ್ಳುವುದು ಹೇಗೆ ಅನ್ನುವ ಬಗ್ಗೆ ಕಲ್ಪನೆಯಿದ್ದಂತಿಲ್ಲ. ಒಂದಿಷ್ಟು ಪುಸ್ತಕ ಪ್ರಕಟಿಸುವುದು, ಒಂದಿಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು, ಒಂದಿಷ್ಟು ಪ್ರಶಸ್ತಿ ಕೊಡುವುದು ಇಂತಹ ಕೆಲವೇ ಕೆಲವು ಕೆಲಸಗಳಿಗೆ ಈ ಸಂಸ್ಥೆಗಳು ಸೀಮಿತವಾಗಿವೆ. ಈ ಸಂಸ್ಥೆಗಳು ನಾಡಿನ ಯುವಕರನ್ನು, ಅದರಲ್ಲೂ ಜಾಗತೀಕರಣದ ಫಲವನ್ನು ಚೆನ್ನಾಗಿ ಬಳಸಿಕೊಳ್ಳುತ್ತಿರುವ ಯುವಕರನ್ನು ತಲುಪುವ ಪ್ರಯತ್ನವನ್ನು ಗಂಭೀರವಾಗಿ ಮಾಡಿಲ್ಲ. ಸಾಂಸ್ಕೃತಿಕವಾಗಿ ನಮ್ಮ ನುಡಿಯ ಹರಿವನ್ನು ಹೆಚ್ಚಿಸುವುದು ಹೇಗೆ, ಕರ್ನಾಟಕದಲ್ಲಿ ನೆಲೆಸಿರುವ ಪರ ನುಡಿಯವರಿಗೆ ನಮ್ಮ ನುಡಿ ಕಲಿಸುವಂತಹ ವಾತಾವರಣ ನಿರ್ಮಾಣ ಮಾಡುವುದು ಹೇಗೆ, ಬದಲಾದ ಕಾಲಮಾನಕ್ಕೆ ತಕ್ಕಂತೆ ಹೊಸ ರೂಪದಲ್ಲಿ, ಹೊಸ ವೇಷದಲ್ಲಿ ನಮ್ಮ ಭಾಷೆಯನ್ನು ಮುನ್ನೆಲೆಗೆ ತರುವುದು ಹೇಗೆ? ತಂತ್ರಜ್ಞಾನದ ಯುಗಕ್ಕೆ ನಮ್ಮ ನುಡಿಯನ್ನು ಒಗ್ಗಿಸಿಕೊಳ್ಳುವುದು ಹೇಗೆ, ಇಂತಹ ಮೂಲಭೂತ ಪ್ರಶ್ನೆಗಳನ್ನಿಟ್ಟುಕೊಂಡು ಜಾಗತೀಕರಣವನ್ನು ಹೊಸತಾಗಿ ನೋಡುವ ಕೆಲಸ ಈಗ ನಡೆಯಬೇಕಿದೆ. ಭಾರತವೆಂದರೆ ಹಿಂದಿ ಎಂದು ಜಗತ್ತಿನಾದ್ಯಂತ ಬಿಂಬಿಸುವ ಹಿಂದೀವಾದಿಗಳ ಪ್ರಯತ್ನದ ನಡುವೆ ಈ ಕೆಲಸ ಮಾಡುವುದು ಸವಾಲೂ ಹೌದು ಮತ್ತು ಒಂದು ತುರ್ತು ಅಗತ್ಯವೂ ಹೌದು. ಬಹುಷಃ ಕೆ-ಪಾಪ್ ಗೆಲುವಲ್ಲಿ ನಮಗಿರುವ ಪಾಠ ಅದೊಂದೇ.

This entry was posted in ಕನ್ನಡ, ಜಾಗತೀಕರಣ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s