ಎಲ್ಲ ಭಾಷೆಗಳನ್ನು ಕೇಂದ್ರದ ಅಧಿಕೃತ ನುಡಿ ಯಾಕೆ ಮಾಡಬೇಕು? – ಓಲ್ಗಾ ಕೊಸ್ಮಿಡೊ ಹೇಳ್ತಾರೆ ಕೇಳಿ

ಸಂವಿಧಾನದ ಎಂಟನೆಯ ಪರಿಚ್ಛೇದದಲ್ಲಿರುವ ಎಲ್ಲ ಭಾಷೆಗಳನ್ನು ಕೇಂದ್ರ ಸರ್ಕಾರದ ಆಡಳಿತ ನುಡಿಗಳನ್ನಾಗಿಸಿ, ಆಯಾ ರಾಜ್ಯದಲ್ಲಿ ಕೇಂದ್ರ ಸರ್ಕಾರ ಅಲ್ಲಿನ ನುಡಿಗಳಲ್ಲೇ ತನ್ನೆಲ್ಲ ನಾಗರೀಕ ಸೇವೆಗಳನ್ನು ಕೊಡಬೇಕು ಮತ್ತು ಆ ಮೂಲಕ ಸಾಮಾನ್ಯ ಜನರಿಗೆ ಅನುಕೂಲ ಕಲ್ಪಿಸಬೇಕು ಅನ್ನುವುದು ಸ್ವಾತಂತ್ರ್ಯ ಬಂದಾಗಿನಿಂದಲೂ ಇರುವ ಜೀವಂತ ಬೇಡಿಕೆ. ಈ ಬಗ್ಗೆ ಕಳೆದ ವಾರ ರಾಜ್ಯಸಭೆಯಲ್ಲಿ ತಮಿಳುನಾಡಿನ ಕಾಂಗ್ರೆಸ್ ಸದಸ್ಯ ಸುದರ್ಶನ ನಾಚಿಪ್ಪನ್ ಅವರು ಹಾಕಿದ್ದ ಸದಸ್ಯರ ಖಾಸಗಿ ಮಸೂದೆಯ ಚರ್ಚೆಗೆ ಉತ್ತರಿಸುತ್ತಿದ್ದ ಗೃಹ ಖಾತೆ ರಾಜ್ಯ ಸಚಿವ ಹರಿಬಾಯಿ ಪರತಿಬಾಯಿ ಚೌಧರಿ “ಕೇಂದ್ರ ಸರ್ಕಾರದ ಮುಂದೆ ಇನ್ನಾವುದೇ ಭಾಷೆಯನ್ನು ಕೇಂದ್ರದ ಅಧಿಕೃತ ನುಡಿಯೆಂದು ಘೋಷಿಸುವ ಆಲೋಚನೆಯಿಲ್ಲ. ಯಾಕೆಂದರೆ ಹಾಗೇ ಮಾಡಲು ನುರಿತ ಭಾಷಾ ತಜ್ಞರ ಅಗತ್ಯ ಬೀಳುತ್ತೆ.” ಅನ್ನುವ ಉಡಾಫೆಯ ಉತ್ತರವನ್ನು ಕೊಟ್ಟಿದ್ದಾರೆ. ಅಲ್ಲಿಗೆ ಕೇಂದ್ರ ಸರ್ಕಾರ ಭಾರತದ ಭಾಷಾ ವೈವಿಧ್ಯತೆಯನ್ನು ವರವೆಂದು ಕಾಣದೇ ಶಾಪದಂತೆ ಕಾಣುತ್ತೆ ಅನ್ನುವುದು ಮತ್ತೊಮ್ಮೆ ಮನವರಿಕೆಯಾಯಿತು.
ಹೆಸರಿಗೆ ಒಕ್ಕೂಟ ವ್ಯವಸ್ಥೆ
ಹೆಸರಿಗೆ ಭಾರತ ಒಂದು ಒಕ್ಕೂಟ ವ್ಯವಸ್ಥೆ ಆದರೆ ಸಂವಿಧಾನದ ಅಧಿಕಾರ ಹಂಚಿಕೆಯಲ್ಲಿ ಮೂರರಲ್ಲಿ ಎರಡು ಭಾಗ ವಿಷಯಗಳ ಮೇಲೆ ಕೇಂದ್ರದ ಹಿಡಿತವಿದೆ. ಜನಸಾಮಾನ್ಯರು ಬಳಸುವ ಬ್ಯಾಂಕು, ಅಂಚೆ, ವಿಮೆ, ವಿಮಾನ ಸೇವೆ, ರೈಲು ಸೇವೆ, ರಾಷ್ಟ್ರೀಯ ಹೆದ್ದಾರಿ, ಇಂಧನ, ಪಿಂಚಣಿ ಸೇರಿದಂತೆ ಹತ್ತಾರು ನಾಗರೀಕ ಸೇವೆಗಳನ್ನು ಕೇಂದ್ರ ಕೊಡಮಾಡುತ್ತಿದೆ. ಆದರೆ ಹೀಗೆ ಕೊಡುವ ಸೇವೆಗಳು ಜನಸಾಮಾನ್ಯರ ನುಡಿಯಲ್ಲಿರಬೇಕು ಅನ್ನುವ ಸಾಮಾನ್ಯ ಪ್ರಜ್ಞೆ ಕೇಂದ್ರದ ಸರ್ಕಾರಕ್ಕಿಲ್ಲ. ಈ ಮಾತು ಸ್ವಾತಂತ್ರ್ಯ ಬಂದಾಗಿನಿಂದಲೂ ಬಂದಿರುವ ಎಲ್ಲ ಕೇಂದ್ರ ಸರ್ಕಾರಕ್ಕೂ ಅನ್ವಯಿಸುತ್ತೆ. ಯುರೋಪಿನ ಭಾಷೆಗೊಂದು ದೇಶ ಅನ್ನುವ ತತ್ವದಿಂದ ಪ್ರೇರಿತರಾದಂತೆ ಕಂಡ ಭಾರತ ಇಡೀ ದೇಶಕ್ಕೊಂದು ಭಾಷೆ ಬೇಕು ಮತ್ತದು ಹಿಂದಿಯೇ ಆಗಬೇಕು ಎಂದು ಹೊರಟ ಪರಿಣಾಮ ಇಂದು ಹಿಂದಿಯೇತರ ನುಡಿಗಳು, ಅದನ್ನಾಡುವ ಜನರು ಹೆಚ್ಚು ಕಡಿಮೆ ಎರಡನೆಯ ದರ್ಜೆಯ ಪ್ರಜೆಗಳಂತಾಗಿ ಹೋಗಿದ್ದಾರೆ. ಯುರೋಪಿನಲ್ಲಿ ವಿಶ್ವಯುದ್ಧಗಳ ನಂತರ ಯುರೋಪಿಯನ್ ಒಕ್ಕೂಟ (ಇ.ಯು) ಜಾರಿಗೆ ಬಂತು. ಯುರೋಪಿಯನ್ ಒಕ್ಕೂಟದ ಸಂಸತ್ತಿನಲ್ಲಿ ಇಂದು ಒಕ್ಕೂಟದ ಎಲ್ಲ 23 ಭಾಷೆಗಳಿಗೂ ಅಧಿಕೃತ ಸ್ಥಾನಮಾನ ಸಿಕ್ಕಿರುವುದು ಸಮಾನತೆಯೊಂದೇ ಯುರೋಪಿಯನ್ನರನ್ನು ಒಂದಾಗಿರಿಸಬಲ್ಲದು ಅನ್ನುವ ತಿಳುವಳಿಕೆ ಅವರಿಗೆ ಬಂದ ಮೇಲೆ. ಈ ತಿಳುವಳಿಕೆ ಭಾರತದ ಒಕ್ಕೂಟಕ್ಕೆ ಬರುವುದು ಯಾವಾಗ?
ಇ.ಯು ಸಂಸತ್ತಿನಲ್ಲಿ ಭಾಷಾನುವಾದದ ಸಮಗ್ರ ಹೊಣೆ ಹೊತ್ತಿರುವ ಓಲ್ಗಾ ಕೊಸ್ಮಿಡೊ ಅನ್ನುವ ಹೆಣ್ಣುಮಗಳು “ಭಾಷಾ ವೈವಿಧ್ಯತೆ ಮತ್ತದನ್ನು ಪೊರೆಯುವ ಅಗತ್ಯದ” ಬಗ್ಗೆ ಹೇಳುವ ಮಾತುಗಳು ಭಾರತದ ಹಿಂದೀವಾದಿಗಳ ಕಣ್ಣು-ಕಿವಿ ತೆರೆಸಬೇಕು. ಅಂತರ್ಜಾಲದ ಪತ್ರಿಕೆಯೊಂದಕ್ಕೆ ಅವರು ಕೊಟ್ಟ ಸಂದರ್ಶನದ ಕೆಲ ಮುಖ್ಯ ಅಂಶಗಳು ಇಂತಿವೆ:
ಇ.ಯು ಸಂಸತ್ತಿನಲ್ಲಿ 23 ಭಾಷೆಗಳಲ್ಲಿ ಸದಸ್ಯರು ವ್ಯವಹರಿಸಬಹುದು. ಆದರೆ ನಿಜಕ್ಕೂ ಇಷ್ಟೊಂದು ಭಾಷೆಗಳು ಬೇಕಾ? ಇದು ಸುಮ್ಮನೆ ತೆರಿಗೆ ಹಣ ಪೋಲು ಮಾಡಿದಂತಲ್ಲವೇ?
ಜಗತ್ತಿನಲ್ಲಿ ಜನರಿಂದ ನೇರವಾಗಿ ಆಯ್ಕೆಯಾಗಿ ಬರುವ 27 ಸದಸ್ಯ ರಾಷ್ಟ್ರಗಳ ಸದಸ್ಯರು ಸೇರುವ ವೇದಿಕೆ ಇ.ಯು ಸಂಸತ್ತು. ಈ ಜನರು ಗೆದ್ದು ಬಂದು ಸಂಸತ್ತಿನಲ್ಲಿ ಪಾಲ್ಗೊಳ್ಳಲು ಇನ್ನೊಂದು ಹೊರನುಡಿ ಕಲಿತಿರಬೇಕು ಎಂದು ವಾದಿಸುವುದು ಮಂದಿಯಾಳ್ವಿಕೆ ಜನರಿಗೆ ಕೊಟ್ಟಿರುವ ಹಕ್ಕಿನ ಉಲ್ಲಂಘನೆ. ಇನ್ನೊಂದು ಭಾಷೆ ಕಲಿತರಷ್ಟೇ ಆತ ಸಂಸತ್ತಿನಲ್ಲಿ ಪಾಲ್ಗೊಳ್ಳಲು ಯೋಗ್ಯ ಅನ್ನುವುದು ಸದಸ್ಯನ್ನೊಬ್ಬನ ಜನಪರ ಕಾಳಜಿ, ಆಡಳಿತ ನಿಪುಣತೆಗಿಂತ ಆತನ ಭಾಷಾ ಕೌಶಲ್ಯವೇ ಮುಖ್ಯ ಅನ್ನುವ ತಪ್ಪು ಸಂದೇಶ ಕಳಿಸುವಂತದ್ದು. ಒಂದು ಗಳಿಗೆ, ಕೆಲ ಭಾಷೆಗಳಲ್ಲಷ್ಟೇ ವ್ಯವಹರಿಸುತ್ತೇವೆ ಎಂದೇ ಎಂದುಕೊಳ್ಳೊಣ. ಆಗ ಏನಾಗುತ್ತೆ? ಯಾರಿಗೆ ಈ ನುಡಿಗಳು ತಾಯ್ನುಡಿಯೋ ಅವರು ಸಹಜವಾಗಿಯೇ ತಮ್ಮ ವಾದ ಚೆನ್ನಾಗಿ ಮಂಡಿಸಬಲ್ಲರು. ಯಾರಿಗೆ ಇವು ಹೊರಗಿನವೋ ಅವರು ನಿಜಕ್ಕೂ ತಮ್ಮ ಸಮಸ್ಯೆಗಳನ್ನು ವ್ಯಕ್ತಪಡಿಸಲು ಸೋಲುತ್ತಾರೆ. ಈ ವ್ಯವಸ್ಥೆ ಎಲ್ಲರನ್ನೂ ಸಮಾನವಾಗಿ ಕಾಣಲು ಹೇಗೆ ಸಾಧ್ಯ? ಇದಲ್ಲದೇ ಇ.ಯು ಸಂಸತ್ತಿನ ಚರ್ಚೆಗಳೆಲ್ಲವೂ ಇಂಟರ್ ನೆಟ್ ಮೂಲಕ ನೇರವಾಗಿ ಜನರನ್ನು ತಲುಪುವಾಗ, ತಮ್ಮ ಪರವಾಗಿ ತಮ್ಮ ಪ್ರತಿನಿಧಿ ಏನು ಮಾತನಾಡಿದ ಅನ್ನುವುದು ಅವರಿಗೆ ತಿಳಿಯಬೇಡವೇ? ಯುರೋಪಿನ 60% ಜನರಿಗೆ ತಮ್ಮ ನುಡಿ ಬಿಟ್ಟು ಇನ್ನೊಂದು ನುಡಿ ಬಾರದು. ಅವರ ಅನುಕೂಲಕ್ಕಲ್ಲವೇ ಈ ಒಕ್ಕೂಟವಿರುವುದು?
ಇ.ಯು ಸಂಸತ್ತಿನಲ್ಲಿ ಇಷ್ಟೊಂದು ನುಡಿಗಳಲ್ಲಿ ವ್ಯವಹರಿಸಲು ತುಂಬಾ ಹಣ ಬೇಕಲ್ಲವೇ?
ಇ.ಯು ಸಂಸತ್ತಿನಲ್ಲಿ 69 ಅನುವಾದಕರಿದ್ದಾರೆ. ಅವರು ಒಂದು ಹೊತ್ತಿಗೆ 509ಕ್ಕೂ ಹೆಚ್ಚು ನುಡಿ ಆಯ್ಕೆಗಳನ್ನು ಬೆಂಬಲಿಸಬಲ್ಲರು. ವರ್ಷಕ್ಕೆ ಒಂದು ಬಿಲಿಯನ್ ಯುರೋ ವೆಚ್ಚ ತಗಲುತ್ತೆ. ಇದು ಪ್ರತಿಯೊಂದು ವರ್ಷಕ್ಕೆ, ಪ್ರತಿಯೊಬ್ಬ ಯುರೋಪಿಯನ್ನನಿಗೆ ಎರಡುವರೆ ಯುರೋದಷ್ಟಾಗುತ್ತೆ. ಇದು ಒಂದು ಕಪ್ ಕಾಫಿ ಬೆಲೆಗೆ ಸಮಾನ. ಕೋಟಿಗಟ್ಟಲೆ ಜನರನ್ನು ಕೊಂದ ಕರಾಳ ಇತಿಹಾಸದ ಮೇಲೆ ಒಗ್ಗೂಡಿರುವ ಒಕ್ಕೂಟವೊಂದರಲ್ಲಿ ಶಾಂತಿ-ಸಹಬಾಳ್ವೆಯನ್ನು ಸಾಧಿಸಲು ಇದೊಂದು ಚಿಕ್ಕ ವೆಚ್ಚವಷ್ಟೇ. ಖರ್ಚಿನ ಲೆಕ್ಕವನ್ನೇ ಹೇಳುವುದಾದರೆ ಚುನಾವಣೆಗಳಿಗೂ ಖರ್ಚಾಗುತ್ತೆ. ಹಾಗಂತ ಚುನಾವಣೆಯನ್ನೇ ಕೈಬಿಡಲಾಗುತ್ತೆಯೇ? ಎಲ್ಲ ವ್ಯವಸ್ಥೆಗಳಿರಬೇಕಾದದ್ದು ಜನರ ಅನುಕೂಲಕ್ಕೆ. ಅದಕ್ಕೆ ತಾಂತ್ರಿಕ ತೊಂದರೆಯ ಕುಂಟುನೆಪಗಳು ಅಡ್ಡಿಯಾಗಬಾರದು.
ಏನೇ ಆದರೂ ಅನುವಾದದ ಮೇಲೆ ನಡೆಯುವ ಚರ್ಚೆ ಅಷ್ಟೊಂದು ಪರಿಣಾಮಕಾರಿಯಾಗಿರಲು ಸಾಧ್ಯವೇ?
23 ಭಾಷೆಗಳಲ್ಲಿ ಆಡಳಿತ ನಡೆಸುವುದು ಅಸಾಧ್ಯ ಮತ್ತು ಇದರ ಭಾರಕ್ಕೆ ಇ.ಯು ವ್ಯವಸ್ಥೆಯೇ ಕುಸಿದು ಹೋಗುತ್ತೆ ಅಂತ ಕೆಲವರು ವರ್ಷಗಳ ಹಿಂದೆ ವಾದಿಸಿದ್ದರು. ಆದರೆ ಇಂದಿಗೂ ಇ.ಯು ಸಂಸತ್ತು ಅತ್ಯಂತ ಯಶಸ್ವಿಯಾಗಿ ಕೆಲಸ ಮಾಡುತ್ತಿದೆ. ಅತ್ಯಂತ ಶ್ರೇಷ್ಟ ಗುಣಮಟ್ಟದ ಅನುವಾದಕರನ್ನು ನಾವು ಸೇವೆಗೆ ಪಡೆದುಕೊಂಡಿದ್ದರಿಂದ ಇದು ಸಾಧ್ಯವಾಯಿತು.ನಮ್ಮ ಇಲಾಖೆ DGINTEಗೆ ಆಯ್ಕೆಯಾಗುವುದು ಅಷ್ಟು ಸುಲಭವಿಲ್ಲ. ಪ್ರತಿಭೆಯೊಂದೇ ಇಲ್ಲಿ ಮಾನದಂಡ. ಏಕೆಂದರೆ ಭಾಷಾ ವೈವಿಧ್ಯತೆಯನ್ನಿಟ್ಟುಕೊಂಡೇ ಒಂದು ವ್ಯವಸ್ಥೆ ಹೇಗೆ ಕೆಲಸ ಮಾಡಬಲ್ಲದು ಅನ್ನುವುದು ಜಗತ್ತಿಗೆ ತೋರಿಸುವ ಗುರುತರ ಹೊಣೆ ನಮ್ಮ ಮೇಲಿದೆ.ಈ ಹೊತ್ತಿನಲ್ಲಿ ದಕ್ಷಿಣ ಆಫ್ರಿಕಾದ ಮೇರು ನಾಯಕ ನೆಲ್ಸನ್ ಮಂಡೇಲಾ ಅವರ ಮಾತನ್ನು ನಾನಿಲ್ಲಿ ಹೇಳಬಯಸುತ್ತೇನೆ. “ If you want to speak to a man’s mind, speak to him in a language he understands.. If you want to speak to his heart, speak to him in his own language”. ಭಾಷಾ ವೈವಿಧ್ಯತೆ ಯುರೋಪಿನ ಜೀವಾಳ. ಅದನ್ನು ಉಳಿಸಿ, ಬೆಳೆಸಲು ಇ.ಯು. ಎಂದಿಗೂ ಬದ್ಧ.
ಭಾರತದ ಎಲ್ಲ ನುಡಿಗಳಲ್ಲಿ ಜನಸಾಮಾನ್ಯರನ್ನು ತಲುಪುವುದು ಅಸಾಧ್ಯ ಎಂದು ಕುಂಟು ನೆಪ ಹೇಳುವ ನಾಯಕರು ಓಲ್ಗಾ ಅವರ ಮಾತನ್ನೊಮ್ಮೆ ಗಮನಿಸಬೇಕು. ಅದಿರಲಿ, ಕರ್ನಾಟಕದ ಸಂಸದರೇಕೆ ಸಂಸತ್ತಿನಲ್ಲಿ ಇಂತಹ ವಿಷಯದ ಬಗ್ಗೆ ಚಕಾರವೆತ್ತುವುದಿಲ್ಲ? ಹೈಕಮಾಂಡ್ ಭಯವೋ ಇಲ್ಲ ಅಸಡ್ಡೆಯೋ ?

This entry was posted in ಒಕ್ಕೂಟ ವ್ಯವಸ್ಥೆ, ಕನ್ನಡ, ಹಿಂದಿ ಹೇರಿಕೆ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s