ಕನ್ನಡ ನಾಳೆಯ ನುಡಿಯಾಗಬೇಕೆಂದರೆ ಅಂತರ್ಜಾಲವನ್ನು ಕನ್ನಡಕ್ಕೆ ಒಗ್ಗಿಸಿಕೊಳ್ಳದೇ ದಾರಿಯಿಲ್ಲ

ಆ ನಿನ್ನ ದೇವರು ಎಲ್ಲಿದ್ದಾನೆ ಎಂದು ಕೇಳಿದ ಹಿರಣ್ಯಕಶಿಪುವಿಗೆ ಭಕ್ತ ಪ್ರಹ್ಲಾದ “ಎಲ್ಲೆಲ್ಲೂ ಇದ್ದಾನೆ” ಎಂದು ಉತ್ತರಿಸಿದನಂತೆ. ಇಂದೆನಾದರೂ ಈ ಪ್ರಶ್ನೆ ಕೇಳುವುದಿದ್ದರೆ ದೇವರ ಜಾಗದಲ್ಲಿ ಅಂತರ್ಜಾಲ ಬಂದು ಕೂರಬಹುದು. ಅಂತಹದೊಂದು ವ್ಯಾಪ್ತಿ ಅದಕ್ಕೆ ಇಂದು ದಕ್ಕುತ್ತಿದೆ. ಅಮೇರಿಕದ ಮಿಲಿಟರಿ ತನ್ನ ಬಳಕೆಗೆಂದು ಕಟ್ಟಿಕೊಂಡ ಚಿಕ್ಕದೊಂದು ವ್ಯವಸ್ಥೆ ಇಂದು ಅಂತರ್ಜಾಲದ ರೂಪದಲ್ಲಿ ಇಡೀ ಜಗತ್ತನ್ನೇ ತನ್ನ ಬಲೆಯಲ್ಲಿ ಹಿಡಿದಿಟ್ಟುಕೊಳ್ಳುತ್ತಿದೆ. Democratisation of Knowledge (ಅರಿವನ್ನು ಯಾವುದೇ ತಡೆಯಿಲ್ಲದೇ ಎಲ್ಲರಿಗೂ ದಕ್ಕುವಂತೆ ಮಾಡುವ ಕೆಲಸ) ಅನ್ನುವುದೇನಾದರೂ ಇಂದು ಜಗತ್ತಿನಲ್ಲಿ ನಡೆಯುತ್ತಿದ್ದರೆ ಅದು ನಡೆಯುತ್ತಿರುವುದು ಬಹುತೇಕ ಅಂತರ್ಜಾಲದಲ್ಲೇ. ಆದರೆ ಇದು ಇನ್ನಷ್ಟು ವ್ಯಾಪಕವಾಗಲು ಅಂತರ್ಜಾಲವನ್ನು ಬಹುಭಾಷೆಗೆ ಒಗ್ಗಿಸುವ ಕೆಲಸವಾಗಬೇಕು. ಏನು ಹೀಗೆಂದರೆ?

ಅಂತರ್ಜಾಲದ ಶಕ್ತಿ

ಅಂತರ್ಜಾಲದ ಜನಪ್ರಿಯತೆಗೆ ದೊಡ್ಡ ಕಾರಣವೆಂದರೆ ಅದು ಕೊಡುವ ಸ್ವಾತಂತ್ರ್ಯ. ಪತ್ರಿಕೆ,ಟಿವಿ ಮಾಧ್ಯಮಗಳಲ್ಲಿ ಜನರು ಏನು ನೋಡಬೇಕು, ಏನು ಓದಬೇಕು ಅನ್ನುವುದನ್ನು ನಿಯಂತ್ರಿಸಬಹುದು, ಜನರ ಮನಸ್ಸನ್ನು ನಿಯಂತ್ರಿಸುವ ಪ್ರಯತ್ನ ಮಾಡಬಹುದು, ಆದರೆ ತೆರೆದ ಪುಸ್ತಕದಂತಿರುವ ಅಂತರ್ಜಾಲದಲ್ಲಿ ಈ ರೀತಿಯ ನಿಯಂತ್ರಣ ಸಾಧ್ಯವಿಲ್ಲ. ವ್ಯವಸ್ಥೆ ಜನರಿಗೆ ಕೊಡಲು ಬಯಸುವ ಅಭಿಪ್ರಾಯಕ್ಕಿಂತ ಭಿನ್ನವಾದ ಅಭಿಪ್ರಾಯವೊಂದಕ್ಕೆ ಅಲ್ಲಿ ಅವಕಾಶವಿರುವುದರಿಂದಲೇ ಅದೊಂದು ಪರ್ಯಾಯ ಮಾಧ್ಯಮವಾಗಿ ಹೊರಹೊಮ್ಮಿದೆ. ಕೆಲ ವರ್ಷಗಳ ಹಿಂದೆ ಅರಬ್ ಜಗತ್ತಿನ ಹಲವು ದೇಶಗಳಲ್ಲಿ ಅಲ್ಲಿನ ಸ್ಥಾಪಿತ ರಾಜಕೀಯ ಹಿತಾಸಕ್ತಿಗಳನ್ನು ಕಿತ್ತೆಸೆದು ಕ್ರಾಂತಿಯಾಗುವಂತೆ ಮಾಡುವಲ್ಲಿ ಅಂತರ್ಜಾಲ ಮತ್ತು ಸಾಮಾಜಿಕ ತಾಣಗಳು ದೊಡ್ಡ ಪಾತ್ರವಹಿಸಿದ್ದವು. ಭಾರತದಲ್ಲೂ ಕಳೆದ ಲೋಕಸಭೆಯ ಚುನಾವಣೆಯ ನಂತರ ಅಂತರ್ಜಾಲದ ಮೂಲಕ ಜನರೊಡನೆ ಬೆರೆಯುವುದು ಯಾಕೆ ಮುಖ್ಯ ಅನ್ನುವುದು ಹೆಚ್ಚಿನ ಎಲ್ಲ ಪಕ್ಷಗಳ ನಾಯಕರಿಗೂ ಮನವರಿಕೆಯಾಗಿದೆ. ಚೀನಾದಂತಹ ಕಮ್ಯೂನಿಸ್ಟ್ ದೇಶದಲ್ಲಿ ಅಂತರ್ಜಾಲವನ್ನು ನಿಯಂತ್ರಿಸುವ ಹತ್ತಾರು ಕಾನೂನುಗಳು, ಇಪ್ಪತ್ತು ಲಕ್ಷಕ್ಕೂ ಹೆಚ್ಚು ಇಂಟರ್ನೆಟ್ ಪೋಲಿಸರಿದ್ದರೂ ಪೂರ್ತಿಯಾಗಿ ಅದನ್ನು ನಿಯಂತ್ರಿಸಲು ಚೀನಾ ಸರ್ಕಾರಕ್ಕೆ ಇಂದಿಗೂ ಸಾಧ್ಯವಾಗಿಲ್ಲ. ಇದೆಲ್ಲವೂ ಅಂತರ್ಜಾಲದ ಶಕ್ತಿಯೇ ಸರಿ.

ಇಂದಿನ ಅಂಕಿಅಂಶ

ಜಗತ್ತಿನ ಜನಸಂಖ್ಯೆ ಸುಮಾರು ಏಳು ನೂರು ಕೋಟಿಯಾಗಿದ್ದರೆ, ಅಂತರ್ಜಾಲ ಬಳಸುಗರ ಸಂಖ್ಯೆ ಈಗ ಸರಿ ಸುಮಾರು ಮುನ್ನೂರು ಕೋಟಿ ತಲುಪಿದೆ. 1995ರಲ್ಲಿ ಜಗತ್ತಿನ ಜನಸಂಖ್ಯೆಯ ಒಂದು ಪ್ರತಿಶತ ಜನರಷ್ಟೇ ಅಂತರ್ಜಾಲ ಬಳಸುತ್ತಿದ್ದರೆ ಇಂದು ಅದರ ಪ್ರಮಾಣ 40 ಪ್ರತಿಶತಕ್ಕೆ ಏರಿದೆ. ಜಗತ್ತಿನಲ್ಲೇ ಅತೀ ಹೆಚ್ಚು ಬಳಸುಗರು (64 ಕೋಟಿ) ಚೀನಾ ದೇಶದಲ್ಲಿದ್ದರೆ, ಎರಡನೆಯ ಸ್ಥಾನದಲ್ಲಿರುವ ಅಮೇರಿಕದಲ್ಲಿ 28 ಕೋಟಿ ಬಳಸುಗರಿದ್ದಾರೆ. ನಂತರದ ಸ್ಥಾನದಲ್ಲಿರುವ ಭಾರತದಲ್ಲಿ ಇಂದು 24 ಕೋಟಿ ಅಂತರ್ಜಾಲ ಬಳಸುವವರಿದ್ದಾರೆ. ಚೀನಾ ದೇಶದ ಪ್ರತಿ ನೂರು ಜನರಲ್ಲಿ 46 ಜನರು ಅಂತರ್ಜಾಲ ಬಳಸುತ್ತಿದ್ದರೆ, ಅಮೇರಿಕದಲ್ಲಿ ಇದರ ಪ್ರಮಾಣ 86 ಮತ್ತು ಭಾರತದಲ್ಲಿ 19ರಷ್ಟಿದೆ. ಪ್ರತಿ ನೂರು ಜನ ಅಂತರ್ಜಾಲ ಬಳಸುವವರಲ್ಲಿ ಇಂಗ್ಲಿಷ್, ಚೈನೀಸ್, ಸ್ಪಾನಿಶ್, ಜಪಾನೀಸ್, ಪೊರ್ಚುಗೀಸ್, ಜರ್ಮನ್, ಅರಾಬಿಕ್, ಫ್ರೆಂಚ್, ರಶ್ಯನ್ ಮತ್ತು ಕೊರಿಯನ್, ಈ ಹತ್ತು ಭಾಷೆಗಳಲ್ಲಿ ಅಂತರ್ಜಾಲ ಬಳಸುತ್ತಿರುವ ಸಂಖ್ಯೆ 83ರಷ್ಟಿದೆ ! ಜಗತ್ತಿನ ಜನಸಂಖ್ಯೆಯ 17.5% ಹೊಂದಿರುವ ಭಾರತದ ಯಾವ ಭಾಷೆಗಳೂ ಮೊದಲ ಹತ್ತರ ಪಟ್ಟಿಯಲ್ಲಿಲ್ಲ. ಭಾರತ ಹೀಗೆ ಹಿಂದುಳಿಯಲು ಟೆಲಿಕಾಮ್ ಸವಲತ್ತುಗಳ ಕೊರತೆಯೊಂದೇ ಕಾರಣವಲ್ಲ, ಭಾರತದ ಭಾಷೆಗಳನ್ನು ಅಂತರ್ಜಾಲಕ್ಕೆ ಒಗ್ಗಿಸುವ ಕೆಲಸಕ್ಕೆ ಆದ್ಯತೆ ಕೊಡದಿರುವುದೂ ಒಂದು ಮುಖ್ಯ ಕಾರಣವಾಗಿದೆ.

ಅಂತರ್ಜಾಲ ಮತ್ತು ನಮ್ಮ ಭಾಷೆಗಳು

ಅಂತರ್ಜಾಲ ಬಳಸಿಕೊಂಡು ಆಡಳಿತದಲ್ಲಿ ಜನರ ಪಾಲ್ಗೊಳ್ಳುವಿಕೆ ಹೆಚ್ಚಿಸಲು ಸರ್ಕಾರ ಕೈಗೊಳ್ಳುವ ಯೋಜನೆಗಳಿರಬಹುದು, ವಿಜ್ಞಾನ-ತಂತ್ರಜ್ಞಾನದ ಕ್ಷೇತ್ರದಲ್ಲಾಗುತ್ತಿರುವ ಅರಿವಿನ ಹೊಸ ಹೊಸ ಕವಲುಗಳನ್ನು ಹೆಚ್ಚೆಚ್ಚು ಜನರಿಗೆ ತಲುಪಿಸುವ ಪ್ರಯತ್ನಗಳಿರಬಹುದು, ಜನರ ಬದುಕನ್ನು ವ್ಯಾಪಕವಾಗಿ ತಟ್ಟುವ ರಾಜಕೀಯ ಮತ್ತು ಅರ್ಥ ವ್ಯವಸ್ಥೆಗಳನ್ನು ಅರ್ಥ ಮಾಡಿಕೊಂಡು, ಅದರಲ್ಲಿ ತೊಡಗಿಕೊಂಡು ಈ ಬದಲಾವಣೆಗಳನ್ನು ಹೆಚ್ಚೆಚ್ಚು ಜನಪರವಾಗಿ ರೂಪಿಸುವಂತೆ ಮಾಡುವ ಕೆಲಸಗಳಿರಬಹುದು, ಇವೆಲ್ಲವನ್ನು ಸಾಧ್ಯವಾಗಿಸುವಲ್ಲಿ ಅಂತರ್ಜಾಲದ ಪಾತ್ರವಿದೆ ಮತ್ತು ಅದು ಯಶಸ್ವಿಯಾಗಲು ಅಂತರ್ಜಾಲವನ್ನು ಭಾರತದ ಭಾಷೆಗಳಿಗೆ ಒಗ್ಗಿಸುವ ಕೆಲಸ ನಡೆಯಬೇಕಿದೆ. ಅಂತರ್ಜಾಲವನ್ನು ಕೆಲವೇ ಕೆಲವು ಭಾಷೆಗಳಿಂದ ಹೆಚ್ಚೆಚ್ಚು ಭಾಷೆಗೆ ಒಗ್ಗಿಸುವ ಕೆಲಸ ಪ್ರಪಂಚದ ಹಲವೆಡೆ ವೇಗವಾಗಿ ಸಾಗುತ್ತಿದೆ. ಬೈಟ್ ಲೆವೆಲ್ ರಿಸರ್ಚ್ ಸಂಸ್ಥೆಯ ಜಾನ್ ಯಂಕರ್ ಅವರ ಪ್ರಕಾರ ಮುಂದಿನ ದಿನಗಳಲ್ಲಿ ಅಂತರ್ಜಾಲ ಬಳಸಿ ಜಗತ್ತಿನಾದ್ಯಂತ ಜನರನ್ನು ತಲುಪಲು ಬಯಸುವ ಯಾರೇ ಆಗಲಿ ಜನರ ಭಾಷೆಯನ್ನು ಅಪ್ಪಿಕೊಳ್ಳದೇ ಗೆಲುವು ಕಾಣಲು ಸಾಧ್ಯವಿಲ್ಲ. ಅದಕ್ಕೊಂದು ಉದಾಹರಣೆಯಾಗಿ ಜಾಗತೀಕರಣದ ನಂತರ ಹೆಚ್ಚೆಚ್ಚು ದೇಶಗಳಲ್ಲಿ ವ್ಯಾಪಾರ ನಡೆಸುತ್ತಿರುವ ಸಂಸ್ಥೆಗಳಾದ Apple, ebay, GE, Amazon, Cocacola ಮುಂತಾದವು ಹೇಗೆ 2004ರಿಂದ 2014ರ ನಡುವಿನ ಹತ್ತು ವರ್ಷದಲ್ಲಿ ತಮ್ಮ ವೆಬ್ ಸೈಟ್ ಅನ್ನು ಹೆಚ್ಚು ಹೆಚ್ಚು ಭಾಷೆಗಳಲ್ಲಿ ಹೊರ ತರುತ್ತಿದ್ದಾರೆ ಅನ್ನುವ ಅಂಕಿಅಂಶವನ್ನು ಅವರು ನೀಡುತ್ತಾರೆ. ವೆಬ್ ಗ್ಲೋಬಲೈಸೇಶನ್ ರೆವೆಲ್ಯೂಶನ್ ಎಂದು ಇದನ್ನವರು ಕರೆಯುತ್ತಾರೆ.

ಕನ್ನಡದ ಮುಂದಿರುವ ಅವಕಾಶಗಳು

ಭಾರತದ ಇಪ್ಪತ್ತು ಕೋಟಿ ಅಂತರ್ಜಾಲ ಬಳಸುಗರಲ್ಲಿ 5% ಕರ್ನಾಟಕದ ಪಾಲು ಎಂದುಕೊಂಡರೂ ಸರಿ ಸುಮಾರು ಒಂದು ಕೋಟಿ ಬಳಸುಗರು ಕರ್ನಾಟಕದವರು. ಒಂದೆಡೆ ಸ್ಮಾರ್ಟ್ ಫೋನ್ ಗಳ ದರ ತೀವ್ರವಾಗಿ ಕುಸಿಯುತ್ತಿದೆ, ಇನ್ನೊಂದೆಡೆ ಕರ್ನಾಟಕದ ಚಿಕ್ಕ ಚಿಕ್ಕ ಊರುಗಳಲ್ಲೂ ಅಂತರ್ಜಾಲದ ಸೌಕರ್ಯ ಮತ್ತು ಸಂಪರ್ಕದ ವೇಗ ಹೆಚ್ಚುತ್ತಿದೆ. ಹೆಚ್ಚೆಚ್ಚು ಕನ್ನಡಿಗರು ಅಂತರ್ಜಾಲಕ್ಕೆ ಎಡತಾಕುತ್ತಿದ್ದಾರೆ. ಹೀಗೆ ಬರುವ ಕನ್ನಡಿಗರು ಅಂತರ್ಜಾಲವನ್ನು ಬಳಸಿಕೊಂಡು ಬರೀ ಮನರಂಜನೆ, ಕ್ರೀಡೆಯಂತಹ ವಿಷಯಕ್ಕೆ ಸೀಮಿತವಾಗದೇ ಹೆಚ್ಚೆಚ್ಚು ಜ್ಞಾನಾರ್ಜನೆ, ಕಲಿಕೆ, ದುಡಿಮೆಯ ಚಳಕಗಳನ್ನು ಕಲಿಯುವಂತಾಗಬೇಕೆಂದರೆ ಅಂತರ್ಜಾಲದಲ್ಲಿ ಇಂಗ್ಲಿಷಿನಲ್ಲಿ ಏನೆಲ್ಲ ಸಾಧ್ಯವೋ ಅದೆಲ್ಲವೂ ಕನ್ನಡದಲ್ಲೂ ಸಾಧ್ಯವಾಗಬೇಕು. ಆ ರೀತಿ ಅಂತರ್ಜಾಲವನ್ನು ಕನ್ನಡಕ್ಕೆ ಒಗ್ಗಿಸುವ ಕೆಲಸವಾಗಬೇಕು. ಇದರಲ್ಲಿ ಕನ್ನಡದಲ್ಲೇ ಹೊಸ ಹೊಸ ಪದಗಳನ್ನು ಕಟ್ಟುವುದು. ಕನ್ನಡದಲ್ಲಿ ತಂತ್ರಜ್ಞಾನದ ಟೂಲ್ಸ್ ಕಟ್ಟಿಕೊಳ್ಳುವುದು, ಕರ್ನಾಟಕದಲ್ಲಿ ವ್ಯಾಪಾರ ಮಾಡುತ್ತಿರುವ ಸಂಸ್ಥೆಗಳಿಗೆ ಕನ್ನಡ ಕೇಂದ್ರಿತ ಗ್ರಾಹಕ ಚಳುವಳಿಯ ಮೂಲಕ ಕನ್ನಡದಲ್ಲೇ ತಮ್ಮೆಲ್ಲ ಅಂತರ್ಜಾಲದ ಸೇವೆ ಒದಗಿಸುವಂತೆ ಒತ್ತಡ ತರುವುದು, ಕನ್ನಡಕ್ಕೆ ಅನುವಾದಿಸುವ ಕೆಲಸ, ಹೀಗೆ ಮಾಡಬೇಕಿರುವ ಹತ್ತಾರು ಬಗೆಯ ಕೆಲಸಗಳಿವೆ. ಇದು ರಾತ್ರೋರಾತ್ರಿ ಆಗುವ ಕೆಲಸವಲ್ಲ ಮತ್ತು ಇದನ್ನು ಸರ್ಕಾರವಾಗಲಿ, ಕೆಲವೇ ಕೆಲವು ವ್ಯಕ್ತಿಗಳಾಗಲಿ ಮಾಡಲು ಸಾಧ್ಯವಿಲ್ಲ. ಇದೊಂದು ಸಂಘಟಿತ ಪ್ರಯತ್ನದಿಂದ, ಕನ್ನಡ ಸಮುದಾಯದ ಪಾಲ್ಗೊಳ್ಳುವಿಕೆಯಿಂದ ಆಗಬೇಕಿರುವ ಕೆಲಸ. ಕನ್ನಡ ನಾಳೆಯ ನುಡಿಯಾಗಬೇಕೆಂದರೆ ಅಂತರ್ಜಾಲವನ್ನು ಕನ್ನಡಕ್ಕೆ ಒಗ್ಗಿಸಿಕೊಳ್ಳದೇ ದಾರಿಯಿಲ್ಲ.

This entry was posted in ಕನ್ನಡ, ಜಾಗತೀಕರಣ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s