ನಾಡಿದು ಭಾನುವಾರ ಜನವರಿ 25ಕ್ಕೆ ತಮಿಳುನಾಡಿನಲ್ಲಿ ಹಿಂದಿ ಹೇರಿಕೆಯನ್ನು ವಿರೋಧಿಸಿ ನಡೆದ ಚಳುವಳಿಗೆ ಐವತ್ತು ವರ್ಷಗಳಾಗುತ್ತಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಭಾಷಾ ಸಮಾನತೆಗಾಗಿ ನಡೆದ ಅತಿ ದೊಡ್ಡ ಚಳುವಳಿಯಿದು. ಅನೇಕ ವಿದ್ಯಾರ್ಥಿಗಳು ತಮ್ಮ ಪ್ರಾಣ ಕೊಟ್ಟ ಚಳುವಳಿಯೆಂದು ಇದು ಇತಿಹಾಸದಲ್ಲಿ ದಾಖಲಾಗಿದೆ. ಭಾರತಕ್ಕೊಂದು ಭಾಷೆ ಬೇಕು, ಮತ್ತದು ಹಿಂದಿಯೇ ಆಗಬೇಕು ಅನ್ನುವ ಹಿಂದಿವಾದಿಗಳ ಭಾಷಾಂಧ ನಿಲುವು ಭಾರತವೆನ್ನುವ ಬಹುಭಾಷೆಗಳ ಒಕ್ಕೂಟದಲ್ಲಿ ಇಂದಿಗೂ ಭಾಷಾ ತಾರತಮ್ಯಕ್ಕೆ ಕಾರಣವಾಗಿದೆ.
ಸ್ವಾತಂತ್ರ್ಯ ಪೂರ್ವದ ಚರ್ಚೆ
ಸ್ವಾತಂತ್ರ್ಯ ಬರುವ ಮುಂಚಿನಿಂದಲೂ ದೇಶಕ್ಕೊಂದು ಭಾಷೆ ಬೇಕು ಮತ್ತು ಅದು ಹಿಂದಿಯೇ ಆಗಬೇಕು ಅನ್ನುವ ನಿಲುವು ಪಶ್ಚಿಮ-ಉತ್ತರ ಭಾರತದ ನಾಯಕರಲ್ಲಿತ್ತು. ಆದರೆ ಬಹು ಭಾಷೆಗಳ ತವರಿನಲ್ಲಿ ಹಿಂದಿ ಭಾಷೆಯೊಂದಕ್ಕೆ ಆದ್ಯತೆ ಕೊಟ್ಟು, ಸರ್ಕಾರವೇ ಅದರ ಬೆನ್ನಿಗೆ ನಿಂತರೆ, ಕೆಲವೇ ಕಾಲದಲ್ಲಿ ಆಡಳಿತ, ಉದ್ಯೋಗ, ಗ್ರಾಹಕಸೇವೆ, ಮನರಂಜನೆ, ಶಿಕ್ಷಣ ಹೀಗೆ ಎಲ್ಲ ವಿಷಯಗಳಲ್ಲೂ ಹಿಂದಿ ಮತ್ತು ಹಿಂದಿ ಭಾಷಿಕರದ್ದೇ ಮೇಲುಗೈಯಾಗಿ ಭಾರತದ ಇತರ ಭಾಷೆಯಾಡುವವರೆಲ್ಲರೂ ಅವಕಾಶ ವಂಚಿತರಾಗುತ್ತಾರೆ ಅನ್ನುವುದು ಖಚಿತವಾಗಿದ್ದರಿಂದ ಸ್ವಾತಂತ್ರ್ಯ ಪೂರ್ವದಿಂದಲೇ ಹಿಂದಿ ಹೇರಿಕೆಗೆ ಹಲವು ಭಾಷಿಕರಿಂದ ವಿರೋಧ ವ್ಯಕ್ತವಾಗಿತ್ತು. 1946ರಲ್ಲಿ ಸಂವಿಧಾನ ರಚನಾ ಸಮಿತಿಯ ಸಭೆಯಲ್ಲಿ ಹಿಂದಿವಾದಿ ಆರ್.ವಿ.ಧುಲೇಕರ್ ಅವರು “ಹಿಂದಿ ತಿಳಿಯದವರಿಗೆ ಭಾರತದಲ್ಲಿ ಬದುಕುವ ಹಕ್ಕಿಲ್ಲ.” ಅನ್ನುವ ಮಾತನ್ನಾಡಿದ್ದಾಗ ದಕ್ಷಿಣ ಭಾರತದ ಸದಸ್ಯರಾಗಿದ್ದ ಟಿ.ಟಿ.ಕೃಷ್ಣಮಾಚಾರಿಯವರು “ನನ್ನ ಉತ್ತರ ಪ್ರದೇಶದ ಗೆಳೆಯರಿಗೆ ಇಡಿಯಾದ ಭಾರತ ಬೇಕೋ, ಇಲ್ಲ ಕೇವಲ ಹಿಂದಿ ಪ್ರಾಂತ್ಯಗಳ ಹಿಂದಿ-ಭಾರತ ಬೇಕೋ ಆಯ್ದುಕೊಳ್ಳಲಿ” ಎಂದು ತಿರುಗೇಟು ನೀಡಿದ್ದರು. ಇಂತಹದೊಂದು ಕಾವೇರಿದ ಚರ್ಚೆಯ ನಂತರವೇ ಸಂವಿಧಾನ ಜಾರಿಗೆ ಬಂದ ಮೊದಲ ಹದಿನೈದು ವರ್ಷ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳು ಕೇಂದ್ರದ ಆಡಳಿತ ಭಾಷೆಗಳಾಗಿ ಉಳಿಯಲಿವೆ ಅನ್ನುವ ತೀರ್ಮಾನ ಕೈಗೊಳ್ಳಲಾಗಿತ್ತು. 1965 ಜನವರಿ 26ರಿಂದ ಇಂಗ್ಲಿಷ್ ಅನ್ನು ಕೈ ಬಿಟ್ಟು ಕೇವಲ ಹಿಂದಿಯೊಂದನ್ನೇ ಆಡಳಿತ ಭಾಷೆಯಾಗಿ ಮುಂದುವರೆಸುವ ನಿರ್ಧಾರ ಆಗ ಕೈಗೊಳ್ಳಲಾಗಿತ್ತು. ಈ ದಿನ ಹತ್ತಿರ ಬರುತ್ತಿದ್ದಂತೆಯೇ ಕರ್ನಾಟಕ, ಬಂಗಾಲ, ಕೇರಳ, ಆಂಧ್ರ ಮತ್ತು ವಿಶೇಷವಾಗಿ ತಮಿಳುನಾಡಿನಲ್ಲಿ ಪ್ರತಿಭಟನೆಗಳು ಆರಂಭವಾದವು. ಭಾರತದ ಅತಿಯಾದ ಕೇಂದ್ರಿಕೃತ ವ್ಯವಸ್ಥೆಯಲ್ಲಿ ಉದ್ಯೋಗಕ್ಕೆ ಕೇಂದ್ರ ಸರ್ಕಾರವನ್ನೇ ನೆಚ್ಚಿಕೊಳ್ಳುವ ಸ್ಥಿತಿಯಿದ್ದ ಆ ದಿನದಲ್ಲಿ ಹಿಂದಿಯೊಂದಕ್ಕೆ ಮನ್ನಣೆ ನೀಡುವ ನಿರ್ಧಾರ ಉದ್ಯೋಗದ ವಿಷಯದಲ್ಲಿ ಇತರೆ ಎಲ್ಲ ಭಾಷಿಕರಿಗೆ ಅನ್ಯಾಯ ಮಾಡುತ್ತೆ ಅನ್ನುವ ಸಹಜ ಆತಂಕ ಇದರ ಹಿಂದಿತ್ತು. ಈ ಆತಂಕವನ್ನು ಖಾತರಿಪಡಿಸುವಂತೆ ಹಿಂದಿವಾದಿಗಳು ಹಿಂದಿ ಬಾರದ ಭಾರತೀಯರನ್ನು ಭಾರತೀಯರೇ ಅಲ್ಲ ಅನ್ನುವಂತೆ ಹೀಯಾಳಿಸುವ ಕೆಲಸವೂ ನಿರಂತರವಾಗಿತ್ತು.
1965ರಲ್ಲಿ ಏನಾಯಿತು?
ಹಿಂದಿಯೊಂದಕ್ಕೇ ಪಟ್ಟ ಕಟ್ಟುವ ಜನವರಿ 26 1965 ಹತ್ತಿರ ಬರುತ್ತಿದ್ದಂತೆಯೇ ದಕ್ಷಿಣ ಭಾರತದಲ್ಲಿ ಇದರ ವಿರುದ್ಧ ಪ್ರತಿಭಟನೆಗಳು ಜೋರಾದವು. ಜನವರಿ 17ರಂದು ತಿರುಚನಾಪಳ್ಳಿಯಲ್ಲಿ ನಡೆದ ಸಮ್ಮೇಳನದಲ್ಲಿ ಮಹಾರಾಷ್ಟ್ರ, ಮೈಸೂರು, ಕೇರಳ ಮತ್ತು ತಮಿಳುನಾಡಿನ ಪ್ರತಿನಿಧಿಗಳು ಪಾಲ್ಗೊಂಡು ಹಿಂದಿ/ಇಂಗ್ಲಿಷ್ ಎರಡನ್ನೂ ಕೇಂದ್ರದ ಆಡಳಿತ ನುಡಿಗಳೆಂದು ಉಳಿಸಿಕೊಳ್ಳಬೇಕು ಅನ್ನುವ ಒತ್ತಾಯ ಮಾಡಿದರು. ಆದರೆ ಭಾರತದ ಮೂಲೆ ಮೂಲೆಯಲ್ಲೂ ಹಿಂದಿ ಹರಡಬೇಕು ಅನ್ನುವ ಅತ್ಯುತ್ಸಾಹದಲ್ಲಿದ್ದ ಅಂದಿನ ಸರ್ಕಾರದ ಅಧಿಕಾರಿಗಳು ಹಿಂದಿಯೊಂದನ್ನೇ ಆಡಳಿತ ನುಡಿಯಾಗಿಸುವ ನಿರ್ಣಯಕ್ಕೆ ಸಂಬಂಧಿಸಿದಂತೆ ಆದೇಶಗಳನ್ನು ಕಳಿಸಲು ಶುರುವಿಟ್ಟುಕೊಂಡರು. ಇದನ್ನು ವಿರೋಧಿಸಿ ಡಿ.ಎಮ್.ಕೆ ಪಕ್ಷದ ಅಣ್ಣಾದೊರೈ ಜನವರಿ 26ನ್ನು ತಮಿಳುನಾಡಿನಾದ್ಯಂತ ಶೋಕಾಚರಣೆಯ ದಿನವೆಂದು ಅಚರಿಸಲು ಕರೆ ನೀಡಿದರು. ಜನವರಿ 25ರಂದೇ ಅವರನ್ನು ಬಂಧಿಸಲಾಯಿತು. ಮರುದಿನ ಚೆನ್ನೈನ ಬೀದಿಗಿಳಿದ ಐವತ್ತು ಸಾವಿರ ಕಾಲೇಜು ವಿದ್ಯಾರ್ಥಿಗಳು ಅಂದಿನ ಕಾಂಗ್ರೆಸ್ ಮುಖ್ಯಮಂತ್ರಿ ಭಕ್ತವತ್ಸಲಂ ಅನ್ನು ಕಂಡು ಮನವಿ ಸಲ್ಲಿಸುವ ಪ್ರಯತ್ನ ಮಾಡಿದರಾದರೂ ಅದರಲ್ಲಿ ಯಶಸ್ವಿಯಾಗಲಿಲ್ಲ. ರಾಜ್ಯಾದ್ಯಂತ ನಡೆಯುತ್ತಿದ್ದ ಪ್ರತಿಭಟನೆ ಮಧುರೈನಲ್ಲಿ ಕೈ ಮೀರಿ ದೊಡ್ಡ ಗಲಭೆಗೆ ಕಾರಣವಾಯಿತು. ಆತಂಕಗೊಂಡಿದ್ದ ಜನರನ್ನು ಸಮಾಧಾನಗೊಳಿಸುವ ಬದಲು ಪ್ಯಾರಾಮಿಲಿಟರಿ ಪಡೆ ಕರೆಸಿ ದಮನಿಸುವ ಕೆಲಸಕ್ಕೆ ಅಲ್ಲಿನ ಸರ್ಕಾರ ಮುಂದಾದಾಗ ಪರಿಸ್ಥಿತಿ ಪೂರ್ತಿ ಕೈ ಮೀರಿ ಹಲವಾರು ವಿದ್ಯಾರ್ಥಿಗಳ ಆತ್ಮಾಹುತಿಗೆ ಕಾರಣವಾಯಿತು. ತಮಿಳರ ಈ ಹೋರಾಟದ ಫಲವಾಗಿ ಇಂಗ್ಲಿಷ್ ಅನ್ನು ಕೈ ಬಿಡುವ ನಿರ್ಧಾರದಿಂದ ಕೇಂದ್ರ ಹಿಂದೆ ಸರಿಯಿತು ಮತ್ತು ತಮಿಳುನಾಡಿಗೆ ಮುಂದಿನ ದಿನಗಳಲ್ಲಿ ಈ ಭಾಷಾ ನೀತಿಯಿಂದ ವಿನಾಯ್ತಿ ದೊರೆತು ಹಿಂದಿ ಹೇರಿಕೆಯ ಕಬಂಧ ಬಾಹುಗಳಿಂದ ಭಾಗಶಃ ಮುಕ್ತಿ ದೊರೆಯಿತು.
ಕಳೆದುಕೊಳ್ಳುವುದು ಅಪಾರ!
ಹಿಂದಿಗೆ ರಾಷ್ಟ್ರ ಭಾಷೆ ಅನ್ನುವ ಪಟ್ಟ ಸಂವಿಧಾನ ಎಲ್ಲೂ ಕೊಡದಿದ್ದರೂ ಹಿಂಬಾಗಿನ ಮೂಲಕ ಹಿಂದಿ ಹೇರಿಕೆ ನಡೆಸುವ ಕೆಲಸವನ್ನು ನಿರಂತರವಾಗಿ ಕೇಂದ್ರದ ಸರ್ಕಾರಗಳು ಮಾಡಿಕೊಂಡು ಬಂದಿವೆ. ಉದ್ಯೋಗ, ಆಡಳಿತ, ಮನರಂಜನೆ ಹೀಗೆ ಯಾವೆಲ್ಲ ನೆಲೆಯಲ್ಲಿ ಹಿಂದಿ ಹೇರಿಕೆಯಿಂದ ತೊಂದರೆಯಾಗಬಹುದು ಎಂದು ಐವತ್ತು ವರ್ಷದ ಹಿಂದೆ ಪ್ರತಿಭಟನೆಗಳಾಗಿದ್ದವೋ ಆ ಎಲ್ಲ ಕಾರಣಗಳು ಇಂದಿಗೂ ಪ್ರಸ್ತುತವಾಗಿವೆ. ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಂಡರೆ ಇವತ್ತು ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಕೇಂದ್ರದ ಅಂಚೆ, ವಿಮೆ, ಬ್ಯಾಂಕು, ರೈಲು ಕಚೇರಿಯ ಆಡಳಿತದಲ್ಲೆಲ್ಲ ಕನ್ನಡ ಸಂಪೂರ್ಣವಾಗಿ ಮೂಲೆಗುಂಪಾಗಿದೆ. ಅಲ್ಲಿನ ಆಡಳಿತವೆಲ್ಲ ಕೇವಲ ಹಿಂದಿ/ಇಂಗ್ಲಿಷಿನಲ್ಲಿ ನಡೆಯಬೇಕು ಅನ್ನುವ ನಿಯಮವಿರುವುದರಿಂದ ಅಲ್ಲಿ ಕನ್ನಡವೇ ಬರದಿದ್ದರೂ ಹಿಂದಿ ಭಾಷಿಕರು ಸಲೀಸಾಗಿ ಕೆಲಸ ಗಿಟ್ಟಿಸುವ ಕೆಲಸವಾಗುತ್ತಿದೆ. ಶಿಕ್ಷಣದ ಮೂಲಕ ನಿರಂತರವಾದ ಹಿಂದಿ ಹೇರಿಕೆಯಿಂದ ಅತ್ಯಂತ ದೊಡ್ಡ ಮಟ್ಟದಲ್ಲಿ ಪ್ರಯೋಜನ ಪಡೆದಿದ್ದು ಹಿಂದಿ ಚಿತ್ರರಂಗ. ಹಿಂದಿಯ ಚಿತ್ರಗಳು ಮೂನ್ನೂರು-ನಾನೂರು ಕೋಟಿ ಸಂಪಾದನೆ ಮಾಡುತ್ತಿವೆಯೆಂದರೆ ಅಂತಹದೊಂದು ಭಾಷೆಯ ಮಾರುಕಟ್ಟೆಯನ್ನು ಅವರಿಗೆ ಕಟ್ಟಿ ಕೊಟ್ಟಿದ್ದು ಸರ್ಕಾರಿ ಪ್ರಾಯೋಜಿತ ಹಿಂದಿ ಹೇರಿಕೆಯೇ ಆಗಿದೆ. ಇದರ ಜೊತೆಯಲ್ಲೇ ಇಡೀ ಭಾರತದಲ್ಲಿ ಎಲ್ಲೇ ವಲಸೆ ಹೋದರೂ ಹಿಂದಿ ಭಾಷಿಕರಿಗೆ ಬೇರಾವ ಭಾಷೆಯನ್ನು ಕಲಿಯುವ ಅಗತ್ಯವಿಲ್ಲ ಅನ್ನುವ ಸ್ಥಿತಿ ಹುಟ್ಟುತ್ತಿದೆ. ಇವು ನಮ್ಮ ಊರುಗಳಲ್ಲಿನ ಕನ್ನಡದ ಸಾರ್ವಭೌಮತ್ವವನ್ನು ಹಂತ ಹಂತವಾಗಿ ಸಡಿಲಗೊಳಿಸುತ್ತ ಕನ್ನಡವನ್ನು ಅಡುಗೆಮನೆಯತ್ತ ಅಟ್ಟುತ್ತಿವೆ. ಇದೇ ವೇಗದಲ್ಲಿ ಇನ್ನು ನಾಲ್ಕೈದ ದಶಕಗಳಲ್ಲಿ ಅತ್ಯಂತ ಶ್ರೀಮಂತವೂ, ಹಿಂದಿಗಿಂತ ಪ್ರಾಚೀನವೂ ಆದ ಅನೇಕ ಭಾರತೀಯ ಭಾಷೆಗಳು ಬಳಕೆಯಿಂದಲೇ ಬಿದ್ದು ಹೋಗುವ ಸ್ಥಿತಿ ಬರುವ ಆತಂಕ ಎದುರಾಗಿದೆ. ವಿವಿಧತೆಯಲ್ಲಿ ಏಕತೆ ಅನ್ನುವ ಅಡಿಪಾಯಕ್ಕೆ ಧಕ್ಕೆ ತರುವ ಈ ಭಾಷಾ ನೀತಿ ಬದಲಾಗಲೇಬೇಕಿದೆ. ಜಾಗತೀಕರಣದ ಈ ಕಾಲದಲ್ಲಿ ತಂತ್ರಜ್ಞಾನವನ್ನು ಬಳಸಿ ಹಲವು ನುಡಿಗಳಲ್ಲಿ ಆಡಳಿತ ನಡೆಸುವುದು ಕಷ್ಟದ ಕೆಲಸವೇನಲ್ಲ. ದಕ್ಷಿಣ ಆಫ್ರಿಕಾದಂತಹ ಪುಟ್ಟ ದೇಶದಲ್ಲಿ ಒಂಬತ್ತು ನುಡಿಯಲ್ಲಿ ಆಡಳಿತ ನಡೆಯುವಾಗ ಜಗತ್ತಿನ ಜನಸಂಖ್ಯೆಯ 17.5% ಇರುವ ಭಾರತಕ್ಕೆ ಎರಡೇ ಆಡಳಿತ ಭಾಷೆ ಇರುವುದು ತರವೇ? ಒಂದು ಭಾಷೆ ಹೇರಿ ಒಗ್ಗಟ್ಟು ಸಾಧಿಸುತ್ತೇನೆ ಎಂದು ಹೊರಟ ರಷ್ಯಾದ ಕತೆ, ಉರ್ದು ಹೇರಿಕೆಯಿಂದ ಸಿಡಿದು ಬೇರಾದ ಬಾಂಗ್ಲಾದ ಕತೆ ನಮ್ಮ ಕಣ್ತೆರೆಸಲಿ, ಎಲ್ಲ ಭಾಷೆಗಳು ಅಧಿಕೃತ ಆಡಳಿತ ಭಾಷೆಯಾಗುವ ಮೂಲಕ ವಿವಿಧತೆಯಲ್ಲಿ ಏಕತೆ ನಿಜವಾದ ಅರ್ಥದಲ್ಲಿ ಸಾಧ್ಯವಾಗಲಿ.