ಸಾಹಿತ್ಯ ಪರಿಷತ್ತು – ಬಂದಿದೆ ಹೊಸ ಆಲೋಚನೆಗಳಿಗೆ ತೆರೆದುಕೊಳ್ಳುವ ಹೊತ್ತು

ಮತ್ತೊಂದು ಕನ್ನಡ ಸಾಹಿತ್ಯ ಸಮ್ಮೇಳನ ನಮ್ಮ ಮುಂದಿದೆ. 1915ರಲ್ಲಿ ಹುಟ್ಟಿದ ಸಾಹಿತ್ಯ ಪರಿಷತ್ತಿಗೆ ಈಗ ನೂರು ವರುಶದ ಸಂಭ್ರಮ. ಸಾಹಿತ್ಯದ ಪಸರಿಸುವಿಕೆಗೆಂದು ಹುಟ್ಟಿದ ಪರಿಷತ್ತು ಮುಂದೆ ಕರ್ನಾಟಕದ ಏಕೀಕರಣದಲ್ಲೂ ಮುಖ್ಯ ಪಾತ್ರ ವಹಿಸಿತು. ಏಕೀಕರಣದ ನಂತರ ಕನ್ನಡಿಗರೆಲ್ಲರ ಪ್ರತಿನಿಧಿ ಸಂಸ್ಥೆಯೆಂದೇ ಮನ್ನಣೆ ಪಡೆಯಿತು. ಅಂತೆಯೇ ಪರಿಷತ್ತು ಹಮ್ಮಿಕೊಳ್ಳುವ ಸಾಹಿತ್ಯ ಸಮ್ಮೇಳನವನ್ನು ಕನ್ನಡ ಸಮಾಜ, ಕನ್ನಡದ ಸರ್ಕಾರ ಎಲ್ಲರೂ ಗಂಭೀರವಾಗಿ ಪರಿಗಣಿಸುವ ಪದ್ದತಿಯಿತ್ತು. ಆದರೆ ತನ್ನ ಕಾರ್ಯಕ್ಕೆ ಬೇಕಿರುವ ಸಂಪನ್ಮೂಲವನ್ನು ಸರ್ಕಾರದ ನೆರವಿಲ್ಲದೇ ಕಲೆಹಾಕುವ ಶಕ್ತಿ ಪರಿಷತ್ತು ಬೆಳೆಸಿಕೊಳ್ಳದೇ ಹೋದ ಕಾರಣದಿಂದ ಪರಿಷತ್ತಿಗೆ ಒಂದು ಕಾಲದಲ್ಲಿದ್ದ ನೈತಿಕ ಪ್ರಭಾವ ಇಂದಿಲ್ಲ ಅನ್ನುವುದು ನಿಜವೇ. ಪರಿಷತ್ತು ಬದಲಾದ ಕಾಲಕ್ಕೆ ತಕ್ಕಂತೆ ಕನ್ನಡದ ಮುಂದೆ ಇವತ್ತಿರುವ ಹೊಸ ಸವಾಲುಗಳನ್ನು ಗುರುತಿಸಿಕೊಂಡು ಅವುಗಳಿಗೆ ಪರಿಹಾರ ಕಂಡುಕೊಳ್ಳುವತ್ತ ಕೆಲಸ ಮಾಡಿದರಷ್ಟೇ ಬರುವ ದಿನಗಳಲ್ಲಿ ಅದು ತನ್ನ ಪ್ರಸ್ತುತತೆ ಉಳಿಸಿಕೊಳ್ಳಬಹುದು.

ಇವತ್ತಿನ ಸವಾಲುಗಳು

ಸಾಹಿತ್ಯ ಪರಿಷತ್ತು ಕೇವಲ ಸಾಹಿತ್ಯಕ್ಕೆ ಸೀಮಿತವಾದ ಒಂದು ಸಂಸ್ಥೆಯಾಗಿದ್ದರೆ ಅದರಿಂದ ನಿರೀಕ್ಷೆಗಳೂ ಹೆಚ್ಚಿರುತ್ತಿರಲಿಲ್ಲವೆನೋ. ಆದರೆ ಹಿಂದಿನಿಂದಲೂ ಅದರ ಮಾತುಗಳು ಕನ್ನಡದ ಬೌದ್ಧಿಕವಲಯದ ಮಾತುಗಳು ಅನ್ನುವ ಅಭಿಪ್ರಾಯವೇರ್ಪಟ್ಟಿದ್ದರಿಂದ ಮತ್ತು ಹಲವು ಸಂದರ್ಭಗಳಲ್ಲಿ ಅದರ ಮುಂದಾಳುಗಳು ಬೀದಿಗಿಳಿದು ಕನ್ನಡದ ಪರ ದನಿ ಎತ್ತುವ ಒಲವು ತೋರಿದ್ದರಿಂದ ಪರಿಷತ್ತಿಗೆ ಕನ್ನಡಿಗರ ಪ್ರತಿನಿಧಿ ಸಂಸ್ಥೆಯ ಪಟ್ಟ ದಕ್ಕಿತ್ತು. ಇಂತಹದೊಂದು ಪಟ್ಟ ಅದಕ್ಕಿರುವುದರಿಂದಲೇ ಪರಿಷತ್ತು ಹಮ್ಮಿಕೊಳ್ಳುವ ಸಮ್ಮೇಳನಗಳಲ್ಲಿ ಕನ್ನಡಿಗರ ಸಮಗ್ರ ಏಳಿಗೆಯ ಸವಾಲುಗಳೆಲ್ಲ ಚರ್ಚೆಯಾಗಲಿ ಅನ್ನುವ ಅನಿಸಿಕೆಯಿದೆ. ಆದರೆ ಇವತ್ತಿಗೆ ಸಾಹಿತ್ಯ ಪರಿಷತ್ತಿಗಿರುವ ಸೀಮಿತ ಶಕ್ತಿ, ಸಾಮರ್ಥ್ಯವೆಲ್ಲವನ್ನು ಗಮನಿಸಿದಾಗ ಪರಿಷತ್ತು ತನ್ನ ಸಾಹಿತ್ಯ ಪಸರಿಸುವಿಕೆಯ ಗುರಿಯನ್ನು ಹೊರತು ಪಡಿಸಿದರೆ ಎರಡೋ ಮೂರೋ ಮುಖ್ಯವಾದ ವಿಷಯಗಳ ಸುತ್ತ ಜನಾಭಿಪ್ರಾಯ ರೂಪಿಸುವ, ಆಳುವ ವರ್ಗದ ಮೇಲೆ ಒತ್ತಡ ಹೇರುವ ಕೆಲಸಕ್ಕೆ ತನ್ನನ್ನು ತಾನು ಸೀಮಿತಗೊಳಿಸಿಕೊಳ್ಳುವುದು ಹೆಚ್ಚು ಪರಿಣಾಮಕಾರಿ ಅನ್ನಿಸುತ್ತೆ.

ತಾಯ್ನುಡಿ ಶಿಕ್ಷಣ

ಕನ್ನಡ ಮಾಧ್ಯಮ ಕಡ್ಡಾಯ ಮಾಡುವ ಕರ್ನಾಟಕ ಸರ್ಕಾರದ ಭಾಷಾ ನೀತಿಗೆ ಸುಪ್ರೀಂ ಕೋರ್ಟಿನಲ್ಲಿ ಸೋಲಾಗಿದೆ. ಯಾವ ಮಾಧ್ಯಮದಲ್ಲಿ ಓದಬೇಕು ಅನ್ನುವುದು ಪಾಲಕರ ನಿರ್ಧಾರ ಅನ್ನುವ ಮೂಲಕ ಕೋರ್ಟ್ ಆದೇಶದಿಂದ ಜನರಿಂದ ಆಯ್ಕೆಯಾದ ಸರ್ಕಾರ ಈ ವಿಷಯದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವಂತಿಲ್ಲ ಅನ್ನುವಂತಾಗಿದೆ. ಮಕ್ಕಳ ಬೌದ್ಧಿಕ ವಿಕಾಸಕ್ಕೆ ತಾಯ್ನುಡಿಯಲ್ಲೇ ಕಲಿಕೆಯಾಗಬೇಕು ಅನ್ನುವುದನ್ನು ಜಗತ್ತಿನ ವಿಜ್ಞಾನಿಗಳು, ಮನಶಾಸ್ತ್ರಜ್ಞರು, ಕಲಿಕೆ ತಜ್ಞರು, ವಿಶ್ವಸಂಸ್ಥೆ ಸೇರಿದಂತೆ ಸಾವಿರಾರು ಜನರು ಪ್ರತಿಪಾದಿಸುತ್ತಾರೆ. ತಾಯ್ನುಡಿಯಲ್ಲಿ ಶಿಕ್ಷಣ ಎಲ್ಲರಿಗೂ ಕಲ್ಪಿಸುವುದೇ ಒಂದು ನಾಡಿನ ಏಳಿಗೆಗೆ ಇರುವ ದಾರಿ ಅನ್ನುವುದನ್ನು ಅರಿತಿರುವುದರಿಂದಲೇ ಮುಂದುವರೆದ ಎಲ್ಲ ನಾಡುಗಳಲ್ಲೂ ಅಲ್ಲಿನ ಸರ್ಕಾರವೇ ಗುಣಮಟ್ಟದ ಶಿಕ್ಷಣವನ್ನು ತಾಯ್ನುಡಿಯಲ್ಲಿ ಕಲ್ಪಿಸುತ್ತಿದೆ. ಆದರೆ ಕರ್ನಾಟಕದಲ್ಲಿ, ಕನ್ನಡದಲ್ಲೇ ಎಲ್ಲ ಹಂತದ, ಎಲ್ಲ ವಿಷಯಗಳ ಶಿಕ್ಷಣವನ್ನು ರೂಪಿಸುವ ಕೆಲಸ ಮಾಡದೇ ಬರೀ ಪ್ರಾಥಮಿಕ ಹಂತದಲ್ಲಿ ಮಾತ್ರ ಕನ್ನಡದಲ್ಲೇ ಕಡ್ಡಾಯವಾಗಿ ಓದಿಸಬೇಕು ಅನ್ನುವ ಸರ್ಕಾರದ ನಿಲುವು ಒಂದು ಅರೆಬರೆ ಪರಿಹಾರವಾಗಿರುವುದರಿಂದ ಈ ನಿಲುವಿಗೆ ಜನಸಾಮಾನ್ಯರಿಂದಲೂ ದೊಡ್ಡ ಮಟ್ಟದ ಬೆಂಬಲ ವ್ಯಕ್ತವಾಗುತ್ತಿಲ್ಲ. ಅಲ್ಲದೇ ಈಗಿರುವ ವ್ಯವಸ್ಥೆಯಲ್ಲೂ ಸವಲತ್ತು ಮತ್ತು ಕಲಿಸುವಿಕೆಯ ಗುಣಮಟ್ಟದಲ್ಲಿರುವ ಕೊರತೆಗಳೂ ಜನರನ್ನು ಕನ್ನಡ ಮಾಧ್ಯಮದಿಂದ ದೂರ ಒಯ್ಯುತ್ತಿವೆ. ಜೊತೆಯಲ್ಲೇ ಜಾಗತೀಕರಣದ ಈ ದಿನದಲ್ಲಿ ಎಲ್ಲದಕ್ಕೂ ಇಂಗ್ಲಿಷೇ ಪರಿಹಾರ ಅನ್ನುವ ಮಾರುಕಟ್ಟೆ ಶಕ್ತಿಗಳ ಅಬ್ಬರದ ಪ್ರಚಾರ ತಂತ್ರದ ಎದುರು ಕನ್ನಡ ಮಾಧ್ಯಮ ಸೋತು ಸೊರಗುವ ಸ್ಥಿತಿ ಬಂದಿದೆ. ಈ ಹೊತ್ತಿನಲ್ಲಿ ಸರ್ಕಾರ ತನ್ನ ಕೈಯಲ್ಲಿರುವ ಮತ್ತು ಸರ್ಕಾರದ ಅನುದಾನದಲ್ಲಿ ನಡೆಯುತ್ತಿರುವ ಶಾಲೆಗಳಲ್ಲಿನ ಗುಣಮಟ್ಟದ ತೊಂದರೆಗಳನ್ನು ಬಗೆಹರಿಸುವತ್ತ ಗಮನ ಹರಿಸಿ, ತಾಯ್ನುಡಿ ಶಿಕ್ಷಣದ ಒಳಿತನ್ನು ಜನರಿಗೆ ತಲುಪಿಸುವಂತೆ ಜನಜಾಗೃತಿ ಮೂಡಿಸುವತ್ತ ಗಮನಹರಿಸಬೇಕಿದೆ. ಇದರ ಜೊತೆಯಲ್ಲೇ ಕನ್ನಡದಲ್ಲಿ ಉನ್ನತ ಶಿಕ್ಷಣ ತರುವತ್ತ ಒಂದು ಕಾಲ ಬದ್ಧ ಯೋಜನೆ ರೂಪಿಸಿ ಅದಕ್ಕೆ ಬೇಕಿರುವ ಸಂಪನ್ಮೂಲ ದೊರಕಿಸುವ ಕೆಲಸ ಸರ್ಕಾರ ಮಾಡಬೇಕಿದೆ. ಇವತ್ತಿನ ಭಾರತದ ಸಂವಿಧಾನದಲ್ಲಿ ತಾಯ್ನುಡಿಯ ಸುತ್ತ ಇಂತಹದೊಂದು ಬದಲಾವಣೆಯನ್ನು ತಂದುಕೊಳ್ಳುವ ಸ್ವಾಯತ್ತೆ ಕರ್ನಾಟಕದ ಸರ್ಕಾರಕ್ಕಿಲ್ಲ. ಶಿಕ್ಷಣವನ್ನು ಮರಳಿ ಸಂವಿಧಾನದ ರಾಜ್ಯಪಟ್ಟಿಗೆ ಸೇರಿಸಲು ಬೇಕಿರುವ ಕೆಲಸವೂ ಆಗಬೇಕಿದೆ. ಇದಕ್ಕೆ ಪೂರಕವಾಗಿ ನಿರಂತರವಾದ ಜನಾಭಿಪ್ರಾಯ ರೂಪಿಸುವ, ಕನ್ನಡದಲ್ಲೇ ಉನ್ನತ ಕಲಿಕೆ ಕಟ್ಟುವ ಸಮಯಾಧಾರಿತ ಯೋಜನೆ ರೂಪಿಸುವಲ್ಲಿ ಕೈ ಜೋಡಿಸುವ ಕೆಲಸ ಪರಿಷತ್ತು ಮಾಡಬೇಕು.

ಭಾಷಾ ಸಮಾನತೆ

ಕೇಂದ್ರ ಸರ್ಕಾರ ಅಂಚೆ, ವಿಮಾನ ಸೇವೆ, ರೈಲ್ವೆ, ಹೆದ್ದಾರಿ, ಇಂಧನ, ಪಿಂಚಣಿ, ಬ್ಯಾಂಕು, ವಿಮೆ, ತೆರಿಗೆ ಸೇರಿದಂತೆ ಹತ್ತಾರು ನಾಗರೀಕ ಸೇವೆಗಳನ್ನು ಕಲ್ಪಿಸುತ್ತಿದೆ ಮತ್ತು ಈ ಎಲ್ಲ ಸೇವೆಗಳನ್ನು ಕೇವಲ ಹಿಂದಿ/ಇಂಗ್ಲಿಷಿನಲ್ಲಿ ಕೊಡುವ ನಿಲುವು ಹೊಂದಿದೆ. ಇದಕ್ಕೆ ಮೂಲ ಕಾರಣ ಕೇಂದ್ರದ ಹಿಂದಿ/ಇಂಗ್ಲಿಷ್ ಕೇಂದ್ರಿತ ಅಧಿಕೃತ ಭಾಷಾ ನೀತಿ. ಈ ನೀತಿ ಸಾಮಾನ್ಯ ಕನ್ನಡಿಗರಿಗೆ ಎಲ್ಲೆಡೆ ತೊಂದರೆಯುಂಟು ಮಾಡುತ್ತಿದೆ. ಅಲ್ಲದೇ ಈ ನೀತಿಯಿಂದಾಗಿ ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲೂ ಕನ್ನಡಿಗರಿಗೆ ದೊಡ್ಡ ಮಟ್ಟದಲ್ಲಿ ವಂಚನೆಯಾಗುತ್ತಿದೆ. ಇನ್ನೊಂದೆಡೆ ನಮ್ಮ ಊರುಗಳಿಗೆ ದಂಡಿಯಾಗಿ ಬರುತ್ತಿರುವ ಹಿಂದಿ ಭಾಷಿಕರು ಕನ್ನಡ ಕಲಿತು ಇಲ್ಲಿನ ಮುಖ್ಯವಾಹಿನಿ ಬೆರೆಯದಂತೆ ಮಾಡಿವೆ. ಕನ್ನಡ ಸಾಹಿತ್ಯ ಪರಿಷತ್ತು ಬಿಜಾಪುರದ ಸಮ್ಮೇಳನದಲ್ಲಿ ಭಾರತ ಸಂವಿಧಾನದ ಎಂಟನೆಯ ಪರಿಚ್ಛೇದದಲ್ಲಿರುವ ಎಲ್ಲ ನುಡಿಗಳನ್ನು ಕೇಂದ್ರದ ಆಡಳಿತ ನುಡಿಗಳನ್ನಾಗಿಸಬೇಕೆನ್ನುವ ನಿರ್ಣಯವನ್ನು ಕೈಗೊಂಡಿತ್ತು. ಈಗ ಪರಿಷತ್ತು ಈ ಬೇಡಿಕೆಯತ್ತ ಒಂದು ಅಭಿಯಾನವನ್ನೇ ಹಮ್ಮಿಕೊಳ್ಳಬೇಕು. ಇದೊಂದು ರಾಜಕೀಯವಾದ ಹೋರಾಟವಾಗಿರುವುದರಿಂದ ಕರ್ನಾಟಕದ ರಾಜಕೀಯ ವರ್ಗ ’ಕನ್ನಡಕ್ಕೂ ಕೇಂದ್ರದ ಆಡಳಿತ ಭಾಷೆಯ ಸ್ಥಾನಮಾನ’ವನ್ನು ಬೆಂಬಲಸಿ ನಿಲುವು ಕೈಗೊಳ್ಳುವವರೆಗೂ ನಿರಂತರ ಒತ್ತಡ ಹೇರುವ ಕೆಲಸ ಪರಿಷತ್ತು ಕೈಗೆತ್ತಿಕೊಳ್ಳಬೇಕು.

ನಾಡೊಂದಾಗಿರಲಿ

ಭಾರತದ ವ್ಯವಸ್ಥೆ ಅತೀಯಾಗಿ ಕೇಂದ್ರಿಕೃತವಾಗಿದೆ. ಇದರಿಂದಾಗಿ ದೆಹಲಿಯಲ್ಲಿ ದೊಡ್ಡ ಮಟ್ಟದ ರಾಜಕೀಯ ಬಲ ಹೊಂದಿರದ ರಾಜ್ಯಗಳು ಅಸಡ್ಡೆಗೆ ಒಳಗಾಗುತ್ತ ಬಂದಿವೆ. ಇಂತಹ ಹೊತ್ತಿನಲ್ಲೇ ಕರ್ನಾಟಕವನ್ನು ಒಡೆಯುವ ದನಿಗಳೆದ್ದಿವೆ. ಕರ್ನಾಟಕ ತುಂಡು ತುಂಡಾದರೆ ದೆಹಲಿಯಲ್ಲಿ ಕನ್ನಡಿಗರ ರಾಜಕೀಯ ಇನ್ನಷ್ಟು ಕುಂದಲಿದೆ. ಈಗಿರುವ 28 ಸಂಸದರಿಂದಲೇ ಕರ್ನಾಟಕದ ನದಿ, ನೆಲ, ಬದುಕಿನ ವಿಷಯಗಳಿಗೆ ನ್ಯಾಯ ಪಡೆದುಕೊಳ್ಳಲಾಗದಿರುವಾಗ ಚಿಕ್ಕ ಚಿಕ್ಕ ರಾಜ್ಯಗಳನ್ನು ಮಾಡಿಕೊಂಡರೆ ಈಶಾನ್ಯ ಭಾರತದ ರಾಜ್ಯಗಳಂತೆ ಕನ್ನಡಿಗರು ದನಿ ಕಳೆದುಕೊಳ್ಳಲಿದ್ದಾರೆ. ತೆಲಂಗಾಣ ರಾಜ್ಯವಾದ ಮೇಲೆ ತೆಲುಗರು ದಿನವೂ ಒಂದಲ್ಲ ಒಂದು ವಿಷಯಕ್ಕೆ ಬಡಿದಾಡುಕೊಳ್ಳುವಂತಾಗಿರುವುದು ಒಂದು ಭಾಷಿಕರ ನಡುವೆ ಇದ್ದ ಸಹಜ ಒಗ್ಗಟ್ಟು ಮುರಿದು ಚೂರು ಚೂರಾಗಿರುವುದನ್ನು ತೋರಿಸುತ್ತಿದೆ. ಈ ಹೊತ್ತಿನಲ್ಲಿ ಕನ್ನಡಿಗರಲ್ಲಿರುವ ಯಾವುದೇ ಭಿನ್ನಾಭಿಪ್ರಾಯಗಳನ್ನು ನಮ್ಮನಮ್ಮಲ್ಲೇ ಬಗೆಹರಿಸಿಕೊಂಡು ಕರ್ನಾಟಕ ಒಂದಾಗಿಯೇ ಮುಂದುವರೆಯುವಂತೆ ನೋಡಿಕೊಳ್ಳುವ ಹೊಣೆ ಕನ್ನಡ ಸಾಹಿತ್ಯ ಪರಿಷತ್ತಿನ ಮೇಲೂ ಇದೆ. ಇಂತಹ ಮುಖ್ಯವಾದ ಎರಡು-ಮೂರು ಮುಖ್ಯ ವಿಷಯಗಳನ್ನು ಕೈಗೆತ್ತಿಕೊಂಡು ಅಭಿಪ್ರಾಯ ಮತ್ತು ಅಭಿಯಾನ ರೂಪಿಸುವ ಕೆಲಸ ಕೈಗೊಂಡರೆ ಕನ್ನಡಿಗರೆಲ್ಲರ ದನಿಯಾಗಿ ಪರಿಷತ್ತು ಉಳಿದು ಬಾಳಬಹುದು.

This entry was posted in ಕನ್ನಡ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s