ಪಾಲಿಕೆ ವಿಭಜನೆ – ಬೆಂಗಳೂರು ಕನ್ನಡಿಗರ ಕೈ ಬಿಟ್ಟು ಹೋದೀತು !

ನಾಡಪ್ರಭು ಕೆಂಪೇಗೌಡರು ಕಟ್ಟಿದ ಕನ್ನಡಿಗರ ಹೆಮ್ಮೆಯ ಊರು ಬೆಂಗಳೂರು ಕಳೆದ 20 ವರ್ಷಗಳಲ್ಲಿ ವ್ಯಾಪಕ ಬೆಳವಣಿಗೆ ಕಂಡು ಸರಿ ಸುಮಾರು ಒಂದು ಕೋಟಿ ಜನರು ನೆಲೆಸಿರುವ ಊರಾಗಿ ಬದಲಾಗಿದೆ. ಏಶಿಯಾದಲ್ಲೇ ಅತ್ಯಂತ ವೇಗವಾಗಿ ಬೆಳೆದ ನಗರ ಸಾಕಷ್ಟು ಆಡಳಿತದ ಸವಾಲುಗಳನ್ನು ಪಾಲಿಕೆ ಮತ್ತು ರಾಜ್ಯ ಸರ್ಕಾರದ ಮುಂದೆ ತಂದಿದೆ. ಇದಕ್ಕೆ ಪರಿಹಾರವೆಂದರೆ ಪಾಲಿಕೆಯನ್ನು ಎರಡರಿಂದ ಐದು ಭಾಗ ಮಾಡುವುದು ಅನ್ನುವ ಮಾತುಗಳು ಕೇಳಿ ಬರುತ್ತಿದ್ದು, ಅದಕ್ಕೆ ಸರಕಾರದಲ್ಲಿರುವವರು ಬೆಂಬಲವಾಗಿ ನಿಂತಂತೆ ಕಾಣುತ್ತಿದೆ. ಆದರೆ ರಾಜಕೀಯ ಲಾಭದ ಲೆಕ್ಕಾಚಾರದಲ್ಲಿ ಪಾಲಿಕೆಯ ವಿಭಜನೆಗೆ ಮುಂದಾಗುವ ಈ ಆತುರದ ನಿರ್ಧಾರ ಮುಂದಿನ ದಿನಗಳಲ್ಲಿ ಬೆಂಗಳೂರು ಕನ್ನಡಿಗರ ಕೈಯಿಂದಲೇ ಜಾರಿ ಹೋಗುವುದಕ್ಕೆ ಕಾರಣವಾಗುವ  ಆತಂಕ ನಮ್ಮೆದುರಿದೆ ಎಂದರೆ ತಪ್ಪಾಗದು.

ಬೃಹತ್ ಕತೆ ವ್ಯಥೆ

ಬೃಹದಾಕಾರವಾಗಿ ಬೆಳೆದ ಬೆಂಗಳೂರಿನ ಆಡಳಿತವನ್ನು ಸಮರ್ಪಕವಾಗಿ ನಿಭಾಯಿಸಲು 2007ರಲ್ಲಿ ಬೆಂಗಳೂರು, ಸುತ್ತಮುತ್ತಲಿನ 7 ನಗರಸಭೆ, 1 ಪುರಸಭೆ ಹಾಗೂ 110 ಹಳ್ಳಿಗಳನ್ನು ಒಳಗೊಂಡ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ತರಲಾಯಿತು. ಪಾಲಿಕೆಯನ್ನು ಎಂಟು ಆಡಳಿತ ವಲಯದಲ್ಲಿ ವಿಂಗಡಿಸಲಾಯಿತು. ಇಷ್ಟೆಲ್ಲಾ ಆದರೂ ಆಡಳಿತದ ಸಮಸ್ಯೆಗೆ ಪರಿಹಾರವೇನು ಸಿಗಲಿಲ್ಲ. ಅನಿಯಂತ್ರಿತ ವಲಸೆ ಒಂದೆಡೆ, ಇನ್ನೊಂದೆಡೆ ಬೆಂಗಳೂರಿನಲ್ಲಿ ನಾಗರಿಕ ಸೇವೆಗಳನ್ನು ಕಲ್ಪಿಸುವ ಪಾಲಿಕೆ, ಬೆಸ್ಕಾಂ, ಮೆಟ್ರೋ, ಜಲಮಂಡಲಿ, ಬಿಡಿಎ, ಬಿ.ಎಮ್.ಆರ್.ಡಿ.ಎ, ಕೆರೆ ಅಭಿವೃದ್ಧಿ ಪ್ರಾಧಿಕಾರ, ರಾಜ್ಯ ಸರ್ಕಾರಗಳ ನಡುವೆ ಯಾವುದೇ ರೀತಿಯ ಸಮನ್ವಯ ಇಲ್ಲದಿರುವುದು ಬೆಂಗಳೂರಿನ ಆಡಳಿತ ಬಿಗಡಾಯಿಸಲು ಮುಖ್ಯ ಕಾರಣಗಳು. ಬೆಂಗಳೂರಿನ ಸಮಸ್ಯೆ ಬಗೆಹರಿಸಲು ಬೇಕಿರುವ ಸ್ವಾಯತ್ತೆಯೂ ನಗರದ ಪಾಲಿಕೆಗಾಗಲಿ, ಅದರ ಮೇಯರಿಗಾಗಲಿ ಇಲ್ಲದಿರುವುದು ಇನ್ನೊಂದು ಮುಖ್ಯ ಕಾರಣವಾಗಿದೆ. ಮೂಲದಲ್ಲಿರುವ ಈ ಯಾವ ಸಮಸ್ಯೆಗಳಿಗೂ ಪರಿಹಾರ ಕಲ್ಪಿಸದೆ ಪಾಲಿಕೆ ವಿಭಜನೆಗೆ ಮುಂದಾಗುವ ನಿಲುವು, ಈ ನಿರ್ಧಾರದ ಹಿಂದಿರುವುದು ಪಾಲಿಕೆಯನ್ನು ಒಡೆದಾದರೂ ಸರಿ ಆಡಳಿತದ ಚುಕ್ಕಾಣಿ ಹಿಡಿಯಬೇಕು ಅನ್ನುವ ಕಾಂಗ್ರೆಸ್ ಪಕ್ಷದ ರಾಜಕೀಯ ಲೆಕ್ಕಾಚಾರ ಅನ್ನುವುದನ್ನು ಎತ್ತಿ ತೊರುತ್ತದೆ.  ರಾಜಕೀಯ ಲೆಕ್ಕಾಚಾರದ ವಿಭಜನೆ ಬರುವ ದಿನಗಳಲ್ಲಿ ಬೆಂಗಳೂರಿನಲ್ಲಿ ಕನ್ನಡ, ಕನ್ನಡಿಗರ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡುವ ತೊಂದರೆಯನ್ನು ಇಲ್ಲಿ ಗಮನಿಸಬೇಕಿದೆ.

ಬೆಂಗಳೂರು ಮತ್ತು ಕನ್ನಡ

ಹಿಂದಿನಿಂದಲೂ ಬೆಂಗಳೂರಿಗೆ ಪರ ಭಾಷಿಕರ ವಲಸೆ ನಡೆಯುತ್ತಲೇ ಬಂದಿದ್ದು ಬೆಂಗಳೂರಿನ ಕೆಲ ಭಾಗಗಳಲ್ಲಿ ಪರ ಭಾಷಿಕರು ಪಾಲಿಕೆಯ ಸದಸ್ಯರಾಗಿ ಆಯ್ಕೆಯಾಗಿ ಬಂದಂತಹ ನಿದರ್ಶನಗಳಿವೆ. ಹಾಗೇ ಆಯ್ಕೆಯಾಗಿ ಬಂದವರೂ ಕನ್ನಡ ಭಾಷೆಯಲ್ಲೇ ಪಾಲಿಕೆಯ ವ್ಯವಹಾರ ಮತ್ತು ಆಡಳಿತದಲ್ಲಿ ತೊಡಗಿಕೊಳ್ಳುವಂತೆ ಪಾಲಿಕೆಯ ಸ್ವರೂಪವಿತ್ತು.  2007ರಲ್ಲಿ ಬಿ.ಬಿ.ಎಮ್.ಪಿ ಎಂದು ಬದಲಾದಾಗ ನಗರದ ಹೊರ ಅಂಚಿನ ಕನ್ನಡ ಭಾಷಿಕ ಪ್ರದೇಶಗಳೆಲ್ಲ ಪಾಲಿಕೆಯ ವ್ಯಾಪ್ತಿಗೆ ಸೇರಿದ ಮೇಲೆ ಪಾಲಿಕೆಯ ಆಡಳಿತದಲ್ಲಿ ಕನ್ನಡದ ಸಾರ್ವಭೌಮತ್ವಕ್ಕೆ ಇನ್ನಷ್ಟು ಬಲ ಬಂದಿತ್ತು. ಇದರಿಂದಾಗಿ ಕನ್ನಡವನ್ನು ಕಡೆಗಣಿಸಿ, ವಲಸಿಗರ ನುಡಿಗಳನ್ನು ಬೆಂಗಳೂರಿನ ಪಾಲಿಕೆಯಲ್ಲಿ ಮೆರೆಸಬೇಕು ಅನ್ನುವ ಕನ್ನಡವಿರೋಧಿ ಮನಸ್ಥಿತಿಯ ಜನರಿಗೆ ಎಂದಿಗೂ ಮೇಲುಗೈ ಸಿಕ್ಕಿರಲಿಲ್ಲ. ಆದರೆ ಈಗ ಆಡಳಿತದ ಅನುಕೂಲದ ನೆಪದಲ್ಲಿ ಬೆಂಗಳೂರನ್ನು ಹೊಸೂರು, ಹಳೆ ಮದ್ರಾಸು, ತುಮಕೂರು ಮತ್ತು ಮೈಸೂರು ರಸ್ತೆಗೆ ತಾಕಿದಂತೆ ನಾಲ್ಕು ಪಾಲಿಕೆಗಳನ್ನಾಗಿ ವಿಭಜಿಸಬೇಕು ಅನ್ನುವ ಕೂಗು ವಲಸಿಗರು ಹೆಚ್ಚಿರುವ ಒಂದೆರಡು ಭಾಗದಲ್ಲಿ ಕನ್ನಡದ ಸಾರ್ವಭೌಮತ್ವವನ್ನು ಅಳಿಸಿ ಪರ ನುಡಿಗಳನ್ನು ಅಲ್ಲಿ ಸ್ಥಾಪಿಸುವ ಸಂಚಿನಂತೆಯೂ ಕಾಣುತ್ತಿದೆ. ಹಿಂದೆ ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಮಾಡಿ ಅನ್ನುವ ಬೇಡಿಕೆಯನ್ನು ತಮಿಳು ವಲಸಿಗರಿಂದ ಹಿಡಿದು ಬೆಂಗಳೂರಿನ ಕಾರ್ಪೋರೆಟ್ ವಲಯದ ಕೆಲವು ಕಾಸ್ಮೋ ಕನ್ನಡಿಗರವರೆಗೆ ಹಲವರು ಮಾಡಿದ್ದರು. ಬೆಂಗಳೂರಿನ ಇಂದಿನ ಆಡಳಿತ ವ್ಯವಸ್ಥೆಯಲ್ಲಿರುವ ಕನ್ನಡಿಗ ರಾಜಕಾರಣಿಗಳು, ಅಧಿಕಾರಿಗಳನ್ನು ಕೆಲಸಕ್ಕೆ ಬಾರದವರು, ಅಯೋಗ್ಯರು ಎಂಬಂತೆ ಕಾಣುವ ಮನಸ್ಥಿತಿ ಕಾರ್ಪೋರೆಟ್ ವಲಯದ ಹಲವು ಪರಭಾಶಿಕರಲ್ಲಿದೆ.  ಬೆಂಗಳೂರನ್ನು ಕರ್ನಾಟಕದಿಂದ ಬೇರೆ ಮಾಡಿ ಕೇಂದ್ರಾಡಳಿತ ಪ್ರದೇಶ ಮಾಡಬೇಕು ಅನ್ನುವ ಕೂಗಿಗೆ  ಇವರೆಲ್ಲರೂ ಬೆಂಬಲ ಸೂಚಿಸುತ್ತಿರುವುದರಿಂದ ಇವರ ಬೇಡಿಕೆಯನ್ನು ಕನ್ನಡಿಗರು ಕಟ್ಟೆಚ್ಚರದಿಂದ ಕಾಣಬೇಕಿದೆ.  ಇಂದು ಬೆಳಗಾವಿಯಲ್ಲಿ ಎಮ್.ಈ.ಎಸ್ ಮರಾಟಿ ಮತ ಬ್ಯಾಂಕಿನ ಹೆಸರಲ್ಲಿ ನಡೆಸುತ್ತಿರುವ ಪುಂಡಾಟಿಕೆ ನಾಳೆ ಬೆಂಗಳೂರಿನಲ್ಲೇ ಕಾಣಸಿಗಬಹುದು. ಬೆಂಗಳೂರಿಗೆ ಹೆಚ್ಚು ಆದಾಯ ತರುವ ಭಾಗಗಳು ಬೇರೆಯಾದರೆ ಆರ್ಥಿಕವಾಗಿ ಹಿಂದುಳಿದಿರುವ ಬೆಂಗಳೂರಿನ ಉಳಿದ  ಭಾಗಗಳು ಇನ್ನಷ್ಟು ಆಡಳಿತದ ಅರಾಜಕತೆಗೆ ನೂಕಲ್ಪಡಬಹುದು. ಅಲ್ಲದೇ, ಬೆಂಗಳೂರು ಕನ್ನಡಿಗರ ಕೈ ತಪ್ಪಿದರೆ ಕರ್ನಾಟಕದ ಇತರೆ ಭಾಗಗಳ ಏಳಿಗೆಗೆ ಸಂಪನ್ಮೂಲ ಹೊಂದಿಸುವಲ್ಲಿ ಕನ್ನಡಿಗರ ಸರ್ಕಾರಕ್ಕೂ ಸವಾಲು ಎದುರಾಗಬಹುದು.

ವಿಭಜನೆ ಪರಿಹಾರವಲ್ಲ

ಬೆಂಗಳೂರಿನ ಆಡಳಿತ ವ್ಯವಸ್ಥೆ ಸುಧಾರಿಸಬೇಕು ಅನ್ನುವ ಬೇಡಿಕೆ ಅತ್ಯಂತ ನ್ಯಾಯಯುತವಾಗಿದೆ. ಆದರೆ ಇದಕ್ಕೆ ಪಾಲಿಕೆಯನ್ನು ವಿಭಜಿಸುವುದೊಂದೇ ಹಾದಿ ಅನ್ನುವ ಮಾತು ನಂಬಲಾಗದ್ದು. ಬಿ.ಬಿ.ಎಮ್.ಪಿ ಎಂಟು ವಲಯಗಳಲ್ಲಿ ಆಡಳಿತದ ಗಡಿ ಹಾಕಿಕೊಂಡಿದ್ದು, ಈ ವಲಯ ಕಚೇರಿಗಳಿಗೆ ಅಧಿಕಾರ ವಿಕೇಂದ್ರಿಕರಣ ಮಾಡಿ, ಪಾಲಿಕೆಯ ಜೊತೆ ಹೆಚ್ಚಿನ ಸಮನ್ವಯದ ವ್ಯವಸ್ಥೆಯನ್ನು ರೂಪಿಸುವ ಮೂಲಕ ಬಿ.ಬಿ.ಎಮ್.ಪಿಯನ್ನು ಒಂದಾಗಿರಿಸಿಕೊಂಡೇ ಇವತ್ತಿನ ಹಲವು ಆಡಳಿತದ ಸಮಸ್ಯೆಗಳನ್ನು ಪರಿಹರಿಸಬಹುದಾಗಿದೆ. ಪಾಲಿಕೆ ವ್ಯಾಪ್ತಿಯ ಕೆಲಸಗಳಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸುವ ವಾರ್ಡ್ ಸಮಿತಿಗಳಿಗೆ ಬೆಂಬಲ ನೀಡಿ, ಜನರನ್ನು ತಮ್ಮ ವಾರ್ಡ್ ವ್ಯಾಪ್ತಿಯ ಯೋಜನೆಗಳ ರೂಪಿಸುವಿಕೆ, ಅನುಷ್ಟಾನ, ಪರಿಶೀಲನೆಯಲ್ಲಿ ತೊಡಗಿಕೊಳ್ಳುವಂತೆ ಮಾಡುವ ಸುಧಾರಣೆಗಳ ಮೂಲಕ ಇಂದಿನ ಕುಂದುಕೊರತೆಗಳನ್ನು ಸರಿಪಡಿಸಬಹುದಾಗಿದೆ. ಪಾಲಿಕೆಯ ಮೇಯರ್ ಹುದ್ದೆ ಇವತ್ತು ಒಂದು ವರ್ಷದ ಅವಧಿಯಾಗಿದ್ದು, ಅದನ್ನು ಕೊನೆಯ ಪಕ್ಷ ಎರಡೂವರೆ ವರ್ಷಕ್ಕೆ ಏರಿಸುವ ಮೂಲಕ ಮೇಯರ್ ಕೈ ಬಲಪಡಿಸುವ ಕೆಲಸವಾಗಬೇಕು.  ತಂತ್ರಜ್ಞಾನ ಬಳಸಿ ತೆರಿಗೆ ಸಂಗ್ರಹದ ಗುರಿ ತಲುಪುವ ಮೂಲಕ ಆದಾಯ ಮತ್ತು ಖರ್ಚಿನ ನಡುವಿನ ಕೊರತೆ ತಗ್ಗಿಸಬೇಕು. ಇಂತಹ ಹಲವು ಕ್ರಮಗಳ ಮೂಲಕ ಬೆಂಗಳೂರಿನ ಆಡಳಿತದ ಸವಾಲುಗಳಿಗೆ ಪರಿಹಾರ ಕಂಡುಕೊಂಡು ಜನಜೀವನ ಉತ್ತಮಪಡಿಸಬಹುದಾಗಿದೆ. ಪಾಲಿಕೆ ವಿಭಜಿಸುವ ಕ್ರಮ ಸಂಪನ್ಮೂಲ ಬೇಡುವುದಲ್ಲದೆ ಜನರಲ್ಲೂ ಗೊಂದಲ ಹುಟ್ಟಿಸುವ ಕ್ರಮವಾಗಬಹುದು. ಬೆಂಗಳೂರು ಕರ್ನಾಟಕದ, ಕನ್ನಡಿಗರೆಲ್ಲರ ಪಾಲಿಗೆ ಸೇರಿದ್ದು. ಬೆಂಗಳೂರಿಗೆ ಕುಡಿಯುವ ನೀರು, ತರಕಾರಿ, ಹಾಲು, ವಿದ್ಯುತ್ ಸೇರಿದಂತೆ ಹಲವು ವ್ಯವಸ್ಥೆಗಳನ್ನು ಕರ್ನಾಟಕದ ಇತರೆ ಭಾಗದ ಜನರು ಪೂರೈಸುತ್ತಿದ್ದು, ಬೆಂಗಳೂರು ಹುಟ್ಟು ಹಾಕುವ ಆದಾಯ ಕರ್ನಾಟಕದ ಇತರೆ ಭಾಗಗಳ ಏಳಿಗೆಗೂ ಬಳಕೆಯಾಗುತ್ತಿದೆ. ಈ ಮೂಲಕ ಒಂದು ಕೊಟ್ಟು ತೆಗೆದುಕೊಳ್ಳುವ ಪ್ರೀತಿಯ ಸಂಬಂಧ ಬೆಂಗಳೂರಿಗೂ ರಾಜ್ಯದ ಇತರೆ ಭಾಗಗಳಿಗೂ ಇದೆ. ಬೆಂಗಳೂರಿನ ಆಡಳಿತ ರೂಪಿಸುವ ಸಂಸ್ಥೆಗಳಲ್ಲಿ ಕನ್ನಡ ಮತ್ತು ಕನ್ನಡಿಗರ ಸಾರ್ವಭೌಮತ್ವಕ್ಕೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳುವ ಹೊಣೆ ಸರ್ಕಾರ ಮತ್ತು ರಾಜ್ಯದ ಮೂರು ಪ್ರಮುಖ ರಾಜಕೀಯ ಪಕ್ಷಗಳ ಮೇಲಿದೆ. ದೂರಾಲೋಚನೆಯಿಲ್ಲದೇ, ಕೇವಲ ರಾಜಕೀಯ ಲಾಭಕ್ಕೆ ಪಾಲಿಕೆ ವಿಭಜಿಸಿ ಕನ್ನಡ-ಕನ್ನಡಿಗರ ಕೈಯಿಂದ ಬೆಂಗಳೂರನ್ನು ಕಿತ್ತುಕೊಳ್ಳುವ ಯಾವುದೇ ಸಂಚಿಗೆ ಅವಕಾಶ ಮಾಡಿ ಕೊಡಬಾರದು. “ಕನ್ನಡ ಪರ ಮುಖ್ಯಮಂತ್ರಿ” ಸಿದ್ದರಾಮಯ್ಯನವರು ಇತ್ತ ಗಮನಹರಿಸಿಯಾರೇ?

 

This entry was posted in ಬೆಂಗಳೂರು. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s