ಕೊನೆಗೂ ರಾಜ್ಯಗಳಿಗೆ ಸಣ್ಣದೊಂದು ಸ್ವಾತಂತ್ರ್ಯೋತ್ಸವ!

ಕೇಂದ್ರದಿಂದ ರಾಜ್ಯಕ್ಕೆ ಸಂಪನ್ಮೂಲ ಹಂಚುವ ಬಗ್ಗೆ 14ನೇ ಹಣಕಾಸು ಆಯೋಗ ಮಾಡಿರುವ ಶಿಫಾರಸ್ಸುಗಳನ್ನು ಕೇಂದ್ರ ಸರ್ಕಾರ ಒಪ್ಪಿದೆ. ಇದು ಭಾರತದ ಒಕ್ಕೂಟ ವ್ಯವಸ್ಥೆಯ ವಿಕಾಸದಲ್ಲಿ ಒಂದು ಮಹತ್ವದ ಮೈಲಿಗಲ್ಲೆನ್ನುವ ವ್ಯಾಖ್ಯಾನಗಳು ಕೇಳಿ ಬರುತ್ತಿವೆ. “ರಾಜ್ಯಗಳ ಏಳಿಗೆಯಿಂದಲೇ ಭಾರತದ ಏಳಿಗೆ ಸಾಧ್ಯ, ಹೀಗಾಗಿ ಕೇಂದ್ರ ರಾಜ್ಯಗಳಿಗೆ ಹಂಚುತ್ತಿದ್ದ ನೇರ ತೆರಿಗೆಯ ಪಾಲನ್ನು ಶೇಕಡಾ 32ರಿಂದ 42ಕ್ಕೆರಿಸುವ ಹಣಕಾಸು ಆಯೋಗದ ಶಿಫಾರಸ್ಸನ್ನು ಕೇಂದ್ರ ಒಪ್ಪಿಕೊಂಡಿದೆ. ಇದು ಸಹಕಾರಿ ತತ್ವದ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವತ್ತ ತಮ್ಮ ಸರ್ಕಾರದ ಬದ್ಧತೆಯನ್ನು ತೋರಿದೆ” ಎಂದು ಪ್ರಧಾನಿ ಮೋದಿಯವರು ಹೇಳಿದ್ದಾರೆ. ಇನ್ನೊಂದೆಡೆ, ಕೇಂದ್ರ ನೇರ ತೆರಿಗೆಯಲ್ಲಿ ರಾಜ್ಯಗಳ ಪಾಲು ಹೆಚ್ಚಿಸಿದ್ದರೂ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಹಣದ ನೆರವು ಕಡಿತಗೊಳಿಸುವ ಮೂಲಕ ಈ ಕೈಯಲ್ಲಿ ಕೊಟ್ಟು ಆ ಕೈಯಲ್ಲಿ ಕಿತ್ತುಕೊಳ್ಳುವ ಕೆಲಸ ಮಾಡಿದೆ ಅನ್ನುವ ಮಾತುಗಳೂ ಕೇಳಿ ಬಂದಿವೆ. ರಾಜ್ಯಗಳಿಗೆ ಕೇಂದ್ರದಿಂದ ಸಿಗುತ್ತಿದ್ದ ಒಟ್ಟು ಹಣಕಾಸಿನ ಪ್ರಮಾಣದಲ್ಲಿ ಹೆಚ್ಚು ವ್ಯತ್ಯಾಸವಾಗದಿದ್ದರೂ, ಒಂದು ರಾಜ್ಯಕ್ಕೆ ದೊರೆಯುವ ಹಣವನ್ನು ಹೇಗೆ, ಯಾವ ರೀತಿ, ಯಾವ ಯೋಜನೆಗಳ ಮೇಲೆ ಖರ್ಚು ಮಾಡಬೇಕು ಅನ್ನುವ ವಿಷಯದಲ್ಲಿ ರಾಜ್ಯಗಳಿಗೆ ಈ ಹಿಂದೆ ಇದ್ದಿದ್ದಕ್ಕಿಂತ ಹೆಚ್ಚಿನ ಸ್ವಾತಂತ್ರ್ಯ ಸಿಕ್ಕಿದೆ ಅನ್ನುವುದಂತೂ ಸತ್ಯ. ಈ ವಿಷಯಕ್ಕೆ ಕೇಂದ್ರ ಸರ್ಕಾರವನ್ನು ಅಭಿನಂದಿಸಬೇಕು.

ತೆರಿಗೆ ಹಂಚಿಕೆಯ ಹಿನ್ನೋಟ

ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯಗಳೆರಡಕ್ಕೂ ಕೆಲವಷ್ಟು ತೆರಿಗೆ ಸಂಗ್ರಹಿಸುವ ಅವಕಾಶವಿದೆ. ಆದರೆ ಅತ್ಯಂತ ದೊಡ್ಡ ಮಟ್ಟದ ಆದಾಯ ಮೂಲಗಳಾದ ಕಾರ್ಪೋರೇಟ್ ತೆರಿಗೆ, ಆದಾಯ ತೆರಿಗೆ, ಸೇವಾ ತೆರಿಗೆ ಸೇರಿದಂತೆ ಹಲವು ಮುಖ್ಯ ಮೂಲಗಳ ಮೇಲಿನ ಹಿಡಿತವೆಲ್ಲವೂ ಕೇಂದ್ರದ ಬಳಿಯಿದೆ. ರಾಜ್ಯಗಳ ಕೈಯಲ್ಲಿ ಆಸ್ತಿ ತೆರಿಗೆ, ವಾಹನ ತೆರಿಗೆ ಮುಂತಾದ ಕೆಲ ಆದಾಯ ಮೂಲಗಳಿವೆ. ಪ್ರತಿ ರಾಜ್ಯದಲ್ಲೂ ಅಲ್ಲಿನ ಜನರ ಸುರಕ್ಷತೆ, ಕಲಿಕೆ, ಆರೋಗ್ಯ, ಸಾಮಾಜಿಕ ಭದ್ರತೆ, ಸಾರಿಗೆ, ನೀರಾವರಿ ಮುಂತಾದ ಅಗತ್ಯಗಳೆಲ್ಲವನ್ನೂ ಪೂರೈಸುವ ಹೊಣೆ ಅಲ್ಲಿನ ರಾಜ್ಯ ಸರ್ಕಾರಕ್ಕಿದೆ ಮತ್ತು ಈ ಹೊಣೆ ನಿಭಾಯಿಸಲು ರಾಜ್ಯಗಳು ಸಂಗ್ರಹಿಸುವ ಆದಾಯದ ಮೂಲ ಯಾವ ಮೂಲೆಗೂ ಸಾಲುವುದಿಲ್ಲ. ಇದಕ್ಕಾಗಿಯೇ ಕೇಂದ್ರ, ರಾಜ್ಯಗಳಿಂದಲೇ ಪಡೆಯುವ ಅಪಾರ ಪ್ರಮಾಣದ ತೆರಿಗೆಯಲ್ಲಿ ಅರ್ಧದಷ್ಟನ್ನು ಬೇರೆ ಬೇರೆ ರೂಪದಲ್ಲಿ, ಬೇರೆ ಬೇರೆ ಶರತ್ತುಗಳೊಂದಿಗೆ ಮರಳಿ ರಾಜ್ಯಗಳಿಗೆ ಹಂಚುತ್ತೆ. ಈ ಹಂಚಿಕೆಯಲ್ಲೂ ಎರಡು ಬಗೆ. ಮೊದಲನೆಯದ್ದು ಯಾವುದೇ ಶರತ್ತಿಲ್ಲದೇ ಒಂದಿಷ್ಟು ಹಣವನ್ನು ನೇರವಾಗಿ ರಾಜ್ಯಗಳಿಗೆ ವರ್ಗಾಯಿಸುವಂತದ್ದು, ಎರಡನೆಯದ್ದು ಅನುದಾನದ ಸ್ವರೂಪದಲ್ಲಿ ಹಲವು ಶರತ್ತುಗಳೊಂದಿಗೆ ಕೇಂದ್ರದ ಯೋಜನೆಗಳನ್ನು ಜಾರಿ ಮಾಡಲು ರಾಜ್ಯಕ್ಕೆ ನೀಡುವಂತದ್ದು. ಇಲ್ಲಿ ಗಮನಿಸಬೇಕಿರುವುದು, ಎಲ್ಲ ರಾಜ್ಯಗಳಿಂದಲೂ ದೂರವಿರುವ ಕೇಂದ್ರ ಸರ್ಕಾರಕ್ಕೆ ಪ್ರತಿ ರಾಜ್ಯದ ಸ್ಥಳೀಯ ಸ್ಥಿತಿಗತಿಗಳಾಗಲಿ, ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಬೇಕಿರುವ ತಿಳುವಳಿಕೆಯಾಗಲಿ ಇರಲು ಸಾಧ್ಯವಿಲ್ಲ. ಆ ಅರಿವನ್ನು ಹೊಂದಿರುವ ಮತ್ತು ಜನರಿಗೆ ನೇರ ಉತ್ತರದಾಯಿತ್ವ ಹೊಂದಿರುವ ರಾಜ್ಯ ಸರ್ಕಾರಕ್ಕೆ ತನ್ನ ಸಮಸ್ಯೆಗಳಿಗೆ ಸಾಂಸ್ಥಿಕ ಸ್ವರೂಪದ ಪರಿಹಾರಗಳನ್ನು ಕಂಡುಕೊಳ್ಳಲು ಎದುರಾಗುತ್ತಿದ್ದ ಸಂಪನ್ಮೂಲದ ಕೊರತೆಯಿಂದಾಗಿ ಅದು ಎಂದಿಗೂ ಕೇಂದ್ರಕ್ಕೆ ಮೊರೆ ಹೋಗುವುದೇ ಹಾದಿ ಎಂಬಂತೆ ಭಾರತದ ವ್ಯವಸ್ಥೆ ಕಟ್ಟಲ್ಪಟ್ಟಿದೆ. ಈ ತೊಂದರೆಗಳ ಅರಿವಿದ್ದಾಗಿಯೂ, ಎರಡನೆಯ ಪಂಚವಾರ್ಷಿಕ ಯೋಜನೆಯ ಕಾಲದಿಂದ ಹಿಡಿದು ಇಲ್ಲಿಯವರೆಗೂ ಕೇಂದ್ರ ರೂಪಿಸುವ ನೀತಿನಿಯಮಗಳ ಅನುಸಾರವೇ ರಾಜ್ಯಗಳು ಯಾವ ಯೋಜನೆಗೆ, ಯಾವ ಆದ್ಯತೆಗೆ ಹಣ ಖರ್ಚು ಮಾಡಬೇಕು ಅನ್ನುವುದು ನಿರ್ಧಾರವಾಗುತ್ತ ಬಂದಿತ್ತು. ಇತ್ತೀಚಿನ ವರ್ಷಗಳಲ್ಲಿ ಅನುದಾನದ ಮೂಲಕ ರಾಜ್ಯಗಳಿಗೆ ಹಂಚುವ ತೆರಿಗೆ ಹಣದ ವಿಚಾರದಲ್ಲಂತೂ ದೆಹಲಿಯಲ್ಲಿ ಯಾವ ರಾಜ್ಯಕ್ಕೆ ಹೆಚ್ಚಿನ ಹಿಡಿತವಿದೆಯೋ ಅವರು ಹೆಚ್ಚು ಅನುಕೂಲ ಮಾಡಿಕೊಳ್ಳುವ ಪದ್ದತಿಗಳು ಏರ್ಪಟ್ಟಿದ್ದವು. ಇವುಗಳಿಂದಾಗಿ ಪ್ರಗತಿಪರ ರಾಜ್ಯಗಳು ಹೆಚ್ಚಿನ ಏಟು ತಿಂದರೆ, ದೆಹಲಿಯಲ್ಲಿ ಪ್ರಭಾವ ಹೊಂದಿರುವ ಕೆಲವು ರಾಜ್ಯಗಳು ಹೆಚ್ಚಿನ ಲಾಭ ಮಾಡಿಕೊಂಡಿದ್ದವು. ಈಗ ಹಣಕಾಸು ಆಯೋಗದ ತೀರ್ಮಾನದಿಂದಾಗಿ ಅನುದಾನಗಳ ಮೂಲಕ ಆಗುತ್ತಿದ್ದ ಹಂಚಿಕೆ ಕಡಿಮೆಯಾಗಿ, ನೇರ ತೆರಿಗೆಯಲ್ಲಿ ಪಾಲು ಹೆಚ್ಚಿರುವುದು ಒಂದು ಒಳ್ಳೆಯ ಬೆಳವಣಿಗೆಯೇ ಸರಿ.

ರಾಜ್ಯಗಳ ಏಳಿಗೆಯಿಂದ ಭಾರತದ ಏಳಿಗೆ

ರಾಜ್ಯಗಳಿಗೆ ಕೆಲ ಮಟ್ಟಿನ ಆರ್ಥಿಕ ಅನುಕೂಲ ಹೆಚ್ಚಿಸುವ ಈ ನಡೆಯನ್ನು ವಿರೋಧಿಸುವವರು ಕೆಲವರಿದ್ದಾರೆ. ಅವರ ಪ್ರಕಾರ ರಾಜ್ಯಗಳು ಈ ಹಣವನ್ನು ಪೋಲು ಮಾಡಬಹುದು, ಖರ್ಚಿಗೆ ತಕ್ಕ ಫಲ ಜನರಿಗೆ ತಲುಪಿಸುವ ಯೋಗ್ಯತೆ ರಾಜ್ಯಗಳ ಸರ್ಕಾರಕ್ಕಿಲ್ಲ ಅನ್ನುವ ನಿರಾಶಾವಾದ ಅವರದ್ದು. ಕೆಲ ರಾಜ್ಯ ಸರ್ಕಾರಗಳ ಕೆಟ್ಟ ಆರ್ಥಿಕ ನಿರ್ವಹಣೆಯನ್ನು ಅವರು ಇದಕ್ಕೆ ಉದಾಹರಣೆಯಾಗಿ ನೀಡುತ್ತಾರೆ. ಅವರು ಮೊದಲು ಗಮನಿಸಬೇಕಿರುವುದು. ಕೇಂದ್ರ ಕೊಡುತ್ತಿರುವ ಹಣ ರಾಜ್ಯಗಳಿಂದಲೇ ಕೇಂದ್ರಕ್ಕೆ ಹೋದ ಹಣವೇ ಹೊರತು ಕೇಂದ್ರದ್ದೇ ಅಲ್ಲ. ಎರಡನೆಯದಾಗಿ, ಕೇಂದ್ರವೇ ಎಲ್ಲವನ್ನೂ ನಿರ್ಧರಿಸುವ ಕೇಂದ್ರಿಕೃತ ಮಾದರಿಯಿಂದ ಸೃಷ್ಟಿಯಾಗಿರುವ ಸಮಸ್ಯೆಗಳಿಗೆ ರಾಜ್ಯಗಳನ್ನು ದೂರುತ್ತ ಕೂರುವುದರಲ್ಲಿ ಅರ್ಥವಿಲ್ಲ. ರಾಜ್ಯಗಳಿಗೆ ಅಧಿಕಾರ, ಸಂಪನ್ಮೂಲ ಕೊಟ್ಟು ತಮ್ಮ ಹಣೆಬರಹವನ್ನು ಆಯಾ ರಾಜ್ಯಗಳೇ ಬರೆದುಕೊಳ್ಳಲು ಅನುವಾಗುವಂತೆ ಹೊಣೆಗಾರಿಕೆಯನ್ನು ಅವುಗಳ ಹೆಗಲಿಗೆ ಏರಿಸಬೇಕು. ಹೀಗೆ ಮಾಡಿದಾಗಲೇ ಕೇಂದ್ರ ರಾಜ್ಯವನ್ನು, ರಾಜ್ಯ ಕೇಂದ್ರವನ್ನು ದೂರುತ್ತ ಕೂರುವುದು ಕಡಿಮೆಯಾಗುವುದು. ರಾಜ್ಯ ರಾಜ್ಯಗಳ ನಡುವೆ ಏರ್ಪಡುವ ಆರೋಗ್ಯಕರ ಸ್ಪರ್ಧೆಯಿಂದ, ಒಂದು ರಾಜ್ಯದ ಒಳ್ಳೆಯ ನಡೆಗಳನ್ನು ಇನ್ನೊಂದು ರಾಜ್ಯ ಕಲಿಯುವುದರಿಂದ ಇವತ್ತಿನ ಸ್ಥಿತಿಯನ್ನು ಬದಲಿಸಬಹುದೇ ಹೊರತು ಸಮಸ್ಯೆಯ ಮೂಲದಲ್ಲಿರುವ “ಎಲ್ಲವನ್ನೂ ದೆಹಲಿಯಿಂದ ಬದಲಿಸೋಣ” ಅನ್ನುವ ಆಲೋಚನೆಯಲ್ಲೇ ಪರಿಹಾರ ಹುಡುಕುವುದರಿಂದಲ್ಲ. ಇನ್ನೊಂದೆಡೆ ದೆಹಲಿ ರಾಜ್ಯಗಳಿಗೆ ಏನು ಮಾಡುತ್ತಿದೆಯೋ ಅದನ್ನೇ ರಾಜ್ಯ ಸರ್ಕಾರಗಳು ಸ್ಥಳೀಯ ಸಂಸ್ಥೆಗಳಿಗೆ ಮಾಡುತ್ತಿವೆ. ಇದು ಬದಲಾಗಬೇಕು. ಅಧಿಕಾರ ಹಂಚಿಕೆ ಕೆಳಮುಖವಾಗಿ ಹರಿಯಬೇಕು. ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ಮತ್ತು ಅಧಿಕಾರ ಬಿಟ್ಟು ಕೊಡುವಂತೆ ಒತ್ತಡ ತರುವ ಕೆಲಸವನ್ನು ರಾಜ್ಯ ಸರ್ಕಾರಗಳ ಮೇಲೆ ಆಯಾ ರಾಜ್ಯದ ನಾಗರೀಕ ಸಮಾಜ ಮಾಡಬೇಕು. ಈ ಮಾದರಿಯಲ್ಲಿ ಎಲ್ಲ ಬಗೆಹರಿಯುತ್ತೆ ಅಂತೇನು ಅಲ್ಲ, ಆದರೆ ಈಗಿರುವ ಸ್ಥಿತಿಯನ್ನು ಸಾಕಷ್ಟು ಬದಲಿಸಲು ಇಂತಹ ವಿಕೇಂದ್ರಿಕರಣ ಅಗತ್ಯ.

ಒಕ್ಕೂಟ ಬಲವಾಗಲಿ

ಹಂತ ಹಂತವಾಗಿ ಭಾರತ ಒಂದು ನಿಜವಾದ ಒಕ್ಕೂಟದ ಏರ್ಪಾಡಿನತ್ತ ಸಾಗಬೇಕು. ಸಂವಿಧಾನದ ಜಂಟಿ ಪಟ್ಟಿಯಲ್ಲಿರುವ ವಿಷಯಗಳೆಲ್ಲವನ್ನೂ ರಾಜ್ಯದ ಪಟ್ಟಿಗೆ ವರ್ಗಾಯಿಸಬೇಕು. ಕೇಂದ್ರ ಸರ್ಕಾರ ರಕ್ಷಣೆ, ವಿದೇಶಾಂಗ ವ್ಯವಹಾರ, ರಾಜ್ಯ-ರಾಜ್ಯಗಳ ನಡುವಿನ ಬಿಕ್ಕಟ್ಟುಗಳಿಗೆ ಸಂಧಾನದ ಪಾತ್ರ ವಹಿಸುವಂತಹ ಕೆಲವೇ ಕೆಲವು ಮುಖ್ಯ ಜವಾಬ್ದಾರಿಗಳನ್ನು ವಹಿಸಿಕೊಳ್ಳಬೇಕು. ಹೆಚ್ಚಿನ ಭಾಷೆ, ಜನಾಂಗದ ವೈವಿಧ್ಯತೆಯಿಲ್ಲದ ಅಮೇರಿಕ ಮತ್ತು ಯುರೋಪಿನ ಹಲವು ನಾಡುಗಳಲ್ಲಿ ಇಂತಹ ಏರ್ಪಾಡಿದೆ. ಭಾರತದಂತಹ ವೈವಿಧ್ಯತೆಯೇ ತುಂಬಿರುವ ನಾಡಿನಲ್ಲಿ ಇಂತಹ ಒಕ್ಕೂಟದ ಏರ್ಪಾಟಿನಿಂದಲೇ ರಾಜ್ಯಗಳನ್ನು ಬಲಪಡಿಸುವುದು ಮತ್ತು ಬಲಿಷ್ಟ ರಾಜ್ಯಗಳ ಬಲದ ಮೇಲೆ ಬಲಿಷ್ಟವಾದ ಭಾರತದ ಒಕ್ಕೂಟವನ್ನು ಕಟ್ಟಲು ಸಾಧ್ಯ. ಹಣಕಾಸು ಆಯೋಗದ ನಡೆ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಲಿ.

This entry was posted in ಒಕ್ಕೂಟ ವ್ಯವಸ್ಥೆ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s