ಭಾರತದಲ್ಲೇಕೆ ಗ್ರಾಹಕ ಹಕ್ಕಿನ ಅರಿವು ಇನ್ನೂ ಎಳವೆಯಲ್ಲಿದೆ?

ಕಳೆದ ಭಾನುವಾರ ಮಾರ್ಚ್ 15 ವಿಶ್ವ ಗ್ರಾಹಕರ ದಿನಾಚರಣೆ. ಈ ದಿನ ಮೊದಲು ಎಲ್ಲಿ ಆಚರಣೆಗೆ ಬಂತು, ಯಾಕೆ ಬಂತು, ಅದರಿಂದ ಸಾಮಾನ್ಯ ನಾಗರೀಕನಿಗೆ ಗ್ರಾಹಕ ಸೇವೆಗಳನ್ನು ಪಡೆಯುವಾಗ ದೊರೆತ ಶಕ್ತಿಯೇನು, ಭಾರತದಲ್ಲಿ ಇದು ಯಾವ ಬದಲಾವಣೆ ತಂದಿದೆ, ಕನ್ನಡದ ಬೆಳವಣಿಗೆಗೂ ಇದು ಹೇಗೆ ಮುಖ್ಯ ಅನ್ನುವುದೆಲ್ಲವೂ ಗಮನ ಹರಿಸಬೇಕಾದ ವಿಷಯಗಳೇ.

ವಿಶ್ವ ಗ್ರಾಹಕ ದಿನದ ಇತಿಹಾಸ

ಅದು 1962ರ ಹೊತ್ತು. ಎರಡನೆಯ ವಿಶ್ವಯುದ್ಧದ ನಂತರ ಅತ್ಯಂತ ವೇಗವಾಗಿ ಆರ್ಥಿಕ ಬೆಳವಣಿಗೆ ಅಮೇರಿಕದಲ್ಲಾಗುತ್ತಿದ್ದ ದಿನಗಳು. ತಂತ್ರಜ್ಞಾನದ ಬೆಳವಣಿಗೆ, ಮಾರುಕಟ್ಟೆಯಲ್ಲಿ ಖಾಸಗಿ ಶಕ್ತಿಗಳು ದೊಡ್ಡ ಮಟ್ಟದಲ್ಲಿ ಮುಂಚೂಣಿಗೆ ಬರುತ್ತಿದ್ದ ದಿನಗಳು. ಆ ಹೊತ್ತಿನಲ್ಲಿ ಅಮೇರಿಕದಲ್ಲಿದ್ದ ಸಾಮಾನ್ಯ ದೂರೆಂದರೆ ಸರ್ಕಾರದಿಂದ ಹಿಡಿದು ಮಾರುಕಟ್ಟೆಯಲ್ಲಿನ ಸಾವಿರಾರು ಬಗೆಯ ಉತ್ಪನ್ನಗಳನ್ನು ಮಾರುವ ಖಾಸಗಿ ಸಂಸ್ಥೆಗಳವರೆಗೂ ಯಾರಿಗೂ ಗ್ರಾಹಕರ ಬಗ್ಗೆ ಒಂದು ನಿಜವಾದ ಬದ್ಧತೆ ಇಲ್ಲ. ಇದನ್ನು ಸರಿಪಡಿಸಬೇಕು ಅನ್ನುವ ಕಾಳಜಿ ಹೊಂದಿದ್ದ ಅಮೇರಿಕದ ಅಂದಿನ ಅಧ್ಯಕ್ಷ ಜಾನ್ ಎಫ್ ಕೆನಡಿ ಮಾರ್ಚ್ 15, 1962ರಂದು ಗ್ರಾಹಕರ ಹಿತಾಸಕ್ತಿ ಕಾಯುವ ಬಗ್ಗೆ ಕಾಂಗ್ರೆಸ್ ಸದಸ್ಯರನ್ನು ಉದ್ದೇಶಿಸಿ ಒಂದು ಅದ್ಭುತವಾದ ಭಾಷಣ ಮಾಡುತ್ತಾರೆ.

ಜಾನ್ ಕೆನಡಿ

“ನಾವೆಲ್ಲರೂ ಗ್ರಾಹಕರೇ. ಇಡೀ ಅರ್ಥ ವ್ಯವಸ್ಥೆಯಲ್ಲಿ ಪ್ರತಿಯೊಂದು ಸರ್ಕಾರಿ ಮತ್ತು ಖಾಸಗಿ ಆರ್ಥಿಕ ನಡೆಯನ್ನು ಪ್ರಭಾವಿಸುವ ಮತ್ತು ಅದರಿಂದ ಪ್ರಭಾವಕ್ಕೊಳಗಾಗುವವ ಬಹು ದೊಡ್ಡ ಆರ್ಥಿಕ ಗುಂಪು ಗ್ರಾಹಕರದ್ದು. ಇಷ್ಟು ಬಲವಿದ್ದಾಗಿಯೂ ಸಂಘಟಿತರಾಗಿರದ, ದನಿ ಉಡುಗಿರುವ ಗುಂಪೊಂದು ಅರ್ಥವ್ಯವಸ್ಥೆಯಲ್ಲಿದ್ದರೆ ಅದು ಗ್ರಾಹಕರು ಮಾತ್ರ. ಅಮೇರಿಕದ ಸರ್ಕಾರಕ್ಕೆ ಗ್ರಾಹಕರ ಅಗತ್ಯ ಮತ್ತು ಹಿತ ಕಾಯುವ ಒಂದು ದೊಡ್ಡ ಜವಾಬ್ದಾರಿಯಿದೆ. ಗ್ರಾಹಕರಿಗೆ ಕಳಪೆ ಉತ್ಪನ್ನಗಳು, ಕೈಗೆಟುಕದ ಬೆಲೆ, ಸುರಕ್ಷಿತವಲ್ಲದ ಔಷಧಿ ನೀಡಲಾಗುತ್ತಿದ್ದರೆ, ಗ್ರಾಹಕನಿಗೆ ಬೇಕಾದ ಮಾಹಿತಿಯೆಲ್ಲವೂ ತಕ್ಕದಾಗಿ ದೊರೆಯದಿದ್ದರೆ, ಆತನ ಹಣ, ಆರೋಗ್ಯ, ಸುರಕ್ಷತೆ ಎಲ್ಲವೂ ಅಪಾಯಕ್ಕೊಳಗಾದಂತೆಯೇ ಸರಿ. ಅದು ಅಮೇರಿಕದ ಹಿತಾಸಕ್ತಿಗೂ ಅಪಾಯ ತರುವಂತದ್ದು. ತಂತ್ರಜ್ಞಾನದ ದಾಪುಗಾಲು ನಮ್ಮ ಆಹಾರ, ಔಷಧಿ, ಮನೆಬಳಕೆಯ ವಸ್ತುಗಳವರೆಗೆ ಗ್ರಾಹಕರಿಗೆ ಎಷ್ಟು ಅನುಕೂಲ ತಂದಿದೆಯೋ, ಅಷ್ಟೇ ಮಾಹಿತಿಯ ತೊಡಕನ್ನು ತಂದಿವೆ. ಈ ಬದಲಾವಣೆಗಳು ಮನೆಯೊಡತಿಯೊಬ್ಬಳಿಗೆ ಏಕಕಾಲಕ್ಕೆ ಎಲೆಕ್ಟ್ರಿಶಯನ್, ಕೆಮಿಸ್ಟ್, ಮೆಕಾನಿಕ್, ಟಾಕ್ಸಿಕಾಲಜಿಸ್ಟ್, ಡಯಟಿಶೀಯನ್, ಮೆತಮೆಟಿಶಿಯನ್ ಎಲ್ಲವೂ ಆಗಬೇಕಾದ ಒತ್ತಡ ತಂದಿದೆ. ಆದರೆ ಈ ಎಲ್ಲ ಅಗತ್ಯಗಳನ್ನು ಆಕೆ ಪೂರೈಸಿಕೊಳ್ಳಲು ಆಕೆಗೆ ಬೇಕಿರುವ ಮಾಹಿತಿ, ಗ್ರಾಹಕ ಹಕ್ಕುಗಳ ಪರಿಚಯ ಆಕೆಗೆ ಕೊಡಲಾಗುತ್ತಿಲ್ಲ. ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ಮಾಡಿ ಜನರ ಮನಸ್ಸನ್ನು ಮರುಳು ಮಾಡಲಾಗುತ್ತಿರುವ ಈ ದಿನಗಳಲ್ಲಿ ಗ್ರಾಹಕನಲ್ಲಿ ಅರಿವು ತುಂಬದೇ ಆತನಿಗೆ ಮೋಸ ಮಾಡುವುದು ಸುಲಭ. ಆದ್ದರಿಂದ ಅಮೇರಿಕದ ಸರ್ಕಾರ ಗ್ರಾಹಕರ ಪರ ತನ್ನ ಹೊಣೆ ನಿಭಾಯಿಸಬೇಕೆಂದರೆ ಈ ಕೆಳಗಿನ ಗ್ರಾಹಕ ಹಕ್ಕುಗಳು ಖಂಡಿತವಾಗಿಯೂ ಗ್ರಾಹಕರಿಗೆ ಸಿಗುವಂತಾಗಬೇಕು:

  1. ಸುರಕ್ಷತೆಯ ಹಕ್ಕು – ಆರೋಗ್ಯ ಇಲ್ಲವೇ ಜೀವಕ್ಕೆ ಹಾನಿಯುಂಟು ಮಾಡುವ ಉತ್ಪನ್ನಗಳ ಮಾರ್ಕೆಟಿಂಗಿನಿಂದ ಗ್ರಾಹಕರ ರಕ್ಷಣೆ
  2. ತಿಳಿದುಕೊಳ್ಳುವ ಹಕ್ಕು – ತಪ್ಪು ಮಾಹಿತಿಯುಳ್ಳ ಜಾಹೀರಾತು, ಉತ್ಪನ್ನದ ಮೇಲಿನ ಬರಹ, ಮೋಸಕ್ಕೆ ಎಡೆ ಮಾಡುವ ಮಾಹಿತಿಗಳೆಲ್ಲದರಿಂದ ಗ್ರಾಹಕನ ರಕ್ಷಣೆ.
  3. ಆಯ್ಕೆಯ ಹಕ್ಕು – ಸ್ಪರ್ಧಾತ್ಮಕ ದರದಲ್ಲಿ ಎಲ್ಲ ಬಗೆಯ ಉತ್ಪನ್ನ ಮತ್ತು ಸೇವೆಗಳನ್ನು ಆಯ್ದುಕೊಳ್ಳುವ ಗ್ರಾಹಕನ ಹಕ್ಕಿನ ರಕ್ಷಣೆ.
  4. ನ್ಯಾಯ ಪಡೆಯುವ ಹಕ್ಕು – ಸರ್ಕಾರದ ನೀತಿನಿಯಮಗಳನ್ನು ರೂಪಿಸುವಾಗ ಗ್ರಾಹಕರ ಹಿತಾಸಕ್ತಿಗಳನ್ನು ಗಣನೆಗೆ ತೆಗೆದುಕೊಳ್ಳುವುದು ಮತ್ತು ಗ್ರಾಹಕರ ದೂರುಗಳಿಗೆ ನ್ಯಾಯಯುತವಾದ ಪರಿಹಾರ ಕಲ್ಪಿಸುವುದು.”

ಈ ಐತಿಹಾಸಿಕ ಭಾಷಣದ ನಂತರ ಗ್ರಾಹಕ ಹಕ್ಕುಗಳು ಮತ್ತವುಗಳ ರಕ್ಷಣೆ ಒಂದು ಮಹತ್ವದ ವಿಷಯವಾಗಿ ಪಶ್ಚಿಮದ ದೇಶಗಳಲ್ಲಿ ಮುಂಚೂಣಿಗೆ ಬಂತು. ಕೆನಡಿಯವರು ಭಾಷಣ ಮಾಡಿದ ಮಾರ್ಚ್ 15 ಅನ್ನು ವಿಶ್ವಗ್ರಾಹಕರ ದಿನಾಚರಣೆ ಎಂದು ಆಚರಿಸುವ ಪದ್ಧತಿಯೂ ಜಾರಿಗೆ ಬಂತು. ಕಳೆದ ಐವತ್ತು ವರ್ಷಗಳಲ್ಲಿ ಅತ್ಯಂತ ವ್ಯಾಪಕವಾದ ಗ್ರಾಹಕ ಚಳುವಳಿ ಪಶ್ಚಿಮದ ದೇಶಗಳಲ್ಲಿ ರೂಪುಗೊಂಡಿದೆ. ಇದು ಸರ್ಕಾರ ಮತ್ತು ಖಾಸಗಿ ಶಕ್ತಿಗಳ ಎಲ್ಲೆ ಮೀರಿದ ವರ್ತನೆಗೂ ತಡೆಯೊಡ್ಡಿದೆಯಲ್ಲದೇ ಮಾರುಕಟ್ಟೆ ಸಾಕಷ್ಟು ಜನಪರವಾಗಿರುವಂತೆ ರೂಪಿಸಿಕೊಳ್ಳಲು ನೆರವಾಗಿದೆ.

ಭಾರತದಲ್ಲೇನಿದೆ?

ಭಾರತದಲ್ಲಿ ಗ್ರಾಹಕರ ಹಕ್ಕಿನ ರಕ್ಷಣೆಯ ಬಗ್ಗೆ ಇರುವ ಮುಖ್ಯ ಕಾಯ್ದೆಯೆಂದರೆ ಗ್ರಾಹಕ ರಕ್ಷಣೆ ಕಾಯ್ದೆ 1986. ಕೆನಡಿಯವರ ಶಿಫಾರಸ್ಸಿನಲ್ಲಿರುವ ಎಲ್ಲ ಅಂಶಗಳು ಈ ಕಾನೂನಿನಲ್ಲಿವೆ. ಅಮೇರಿಕ 60ರ ದಶಕದಲ್ಲಿ ಸಾಗಿ ಬಂದ ದಾರಿಯಲ್ಲಿ ಇಂದು ಭಾರತವಿದೆ. ಜಾಗತೀಕರಣಕ್ಕೆ ತೆರೆದುಕೊಂಡ ನಂತರ ಅತ್ಯಂತ ದೊಡ್ಡ ಮಟ್ಟದಲ್ಲಿ ಖಾಸಗಿ ಬಂಡವಾಳ ಭಾರತದ ಮಾರುಕಟ್ಟೆಗೆ ಹರಿದು ಬಂದಿದೆ. ಆದರೆ ಈ ಎಲ್ಲ ಬದಲಾವಣೆಗಳನ್ನು ಪ್ರಭಾವಿಸಬಲ್ಲ, ಪ್ರಭಾವಕ್ಕೊಳಗಾಗುವ ಗ್ರಾಹಕನ ಹಕ್ಕಿನ ರಕ್ಷಣೆಯ ವಿಷಯದಲ್ಲಿ ನಾವಿನ್ನೂ ಎಳವೆಯಲ್ಲಿದ್ದೇವೆ. ಗ್ರಾಹಕ ಹಕ್ಕಿನ ಪ್ರಜ್ಞೆ ಅನ್ನುವುದು ಇನ್ನು ಆಳವಾಗಿ ನಮ್ಮಲ್ಲಿ ಬೇರೂರದಿರುವುದು ಇದಕ್ಕೆ ಕಾರಣ ಅನ್ನುವ ಮಾತುಗಳಿದ್ದರೂ ಅಂತಹ ಪ್ರಜ್ಞೆಯನ್ನು ಬೆಳೆಸಲು ತಕ್ಕ ಕೆಲಸಗಳು ವ್ಯಾಪಕವಾಗಿ ನಡೆಯುತ್ತಿಲ್ಲ ಅನ್ನುವುದು ಕಾಣುತ್ತದೆ. ಹೀಗೆ ನಡೆಯದಿರಲು ಒಂದು ಕಾರಣ ಗ್ರಾಹಕ ಹಕ್ಕಿನ ವಿಷಯದಲ್ಲಿ ಜನರ ಭಾಷೆಯ ಆಯಾಮಕ್ಕೆ ಯಾವುದೇ ಮಹತ್ವ ನಮ್ಮಲ್ಲಿಲ್ಲದಿರುವುದು. ಸುಮ್ಮನೆ ಗಮನಿಸಿ, ಕರ್ನಾಟಕದಲ್ಲಿ ಮಾರಾಟವಾಗುವ ಉತ್ಪನ್ನಗಳ ಮೇಲಿನ ವಿವರದಿಂದ ಹಿಡಿದು ಸುರಕ್ಷತಾ ಮಾಹಿತಿ, ಗ್ರಾಹಕರಾಗಿ ನಮಗಿರುವ ಹಕ್ಕು, ಸಮಸ್ಯೆಗಳಿದ್ದಲ್ಲಿ ದೂರನ್ನು ಹೇಗೆ ಕೊಡಬೇಕು ಅನ್ನುವವರೆಗೆ ಯಾವ ಮಾಹಿತಿಯೂ ಕನ್ನಡದಲ್ಲಿ ಸಿಗದ ಸ್ಥಿತಿ ನಮ್ಮಲ್ಲಿದೆ. ಇದೇ ಸ್ಥಿತಿ ಬಹುತೇಕ ಹಿಂದಿಯೇತರ ನಾಡುಗಳಲ್ಲೂ ಇದೆ. ಕೇಂದ್ರ ಸರ್ಕಾರದ ಕಾಯ್ದೆಗಳೆಲ್ಲವೂ ಹಿಂದಿ ಮತ್ತು ಇಂಗ್ಲಿಷಿಗೆ ಮನ್ನಣೆ ನೀಡುವುದರಿಂದ ಕೇಂದ್ರ ರೂಪಿಸುವ ಪ್ಯಾಕೆಜಿಂಗ್ ಕಾಯ್ದೆಗಳಾಗಿರಬಹುದು, ಬ್ಯಾಂಕು ಮತ್ತಿತರ ಹಣಕಾಸಿನ ಸಂಸ್ಥೆಗಳ ನಿರ್ವಹಣೆಯ ಸುತ್ತ ಆರ್.ಬಿ.ಐ ರೂಪಿಸುವ ನಿಯಮಗಳಿರಬಹುದು, ಕೇಂದ್ರ ಸರ್ಕಾರ ಸಾಮಾನ್ಯ ಜನರಿಗೆ ನೀಡುವ ಅಂಚೆ, ರೈಲ್ವೆ, ಪಿಂಚಣಿ, ವಿಮೆ, ವಿಮಾನ ಸೇವೆ ಮುಂತಾದ ನಾಗರೀಕ ಸೇವೆಗಳಾಗಿರಬಹುದು, ಎಲ್ಲವೂ ಕೇವಲ ಹಿಂದಿ ಮತ್ತು ಇಂಗ್ಲಿಷಿಗೆ ಮಣೆ ಹಾಕಿವೆ. ಇಂತಹದೊಂದು ತಾರತಮ್ಯದ ನೀತಿಯ ಕಾರಣದಿಂದಲೇ ಗ್ರಾಹಕ ಹಕ್ಕಿನ ಪ್ರಜ್ಞೆ ಮತ್ತು ಅದಕ್ಕಿರುವ ಭಾಷಾ ಆಯಾಮದ ಬಗ್ಗೆ ನಮ್ಮಲ್ಲಿ ಇನ್ನೂ ಅರಿವು ಮೂಡಿಲ್ಲ.

ಪರಿಹಾರವೇನು?

ಭಾರತದಲ್ಲಿ ರೂಪುಗೊಳ್ಳುವ ಯಾವುದೇ ಗ್ರಾಹಕ ಹಕ್ಕಿನ ಕಾಯ್ದೆಗಳು ಆಯಾ ರಾಜ್ಯದಲ್ಲಿ ಅಲ್ಲಿನ ನುಡಿಯಲ್ಲಿ ಎಲ್ಲ ರೀತಿಯ ಗ್ರಾಹಕ ಸೇವೆ ನೀಡುವುದನ್ನು ಕಡ್ಡಾಯಗೊಳಿಸಬೇಕು. ಇನ್ನೊಂದೆಡೆ ಅರ್ಥವ್ಯವಸ್ಥೆಯಲ್ಲಿ ಸರ್ಕಾರದ ಪಾತ್ರ ಕಿರಿದಾಗುತ್ತಿರುವ ಈ ದಿನಗಳಲ್ಲಿ ಗ್ರಾಹಕರಲ್ಲಿ ತಮ್ಮ ಹಕ್ಕಿನ ಕುರಿತ ಜಾಗೃತಿ ಹೆಚ್ಚಿಸಬೇಕು. ಮಾರುಕಟ್ಟೆಯಲ್ಲಿ ಕನ್ನಡದಲ್ಲಿ ಎಲ್ಲ ಹಂತದ ಸೇವೆಗೂ ಆಗ್ರಹಿಸುವ ಅರಿತ, ನುರಿತ ಗ್ರಾಹಕನಿಂದಲೇ ಕರ್ನಾಟಕದ ಮಾರುಕಟ್ಟೆಗಳಲ್ಲಿ ಕನ್ನಡ ಭದ್ರವಾಗಿ ನೆಲೆ ನಿಲ್ಲಲು ಸಾಧ್ಯ. ಕನ್ನಡ ಚಳುವಳಿಯಲ್ಲಿ ಗ್ರಾಹಕ ಚಳುವಳಿಯ ಈ ಆಯಾಮ ಅರ್ಥ ಮಾಡಿಕೊಂಡರೆ ಮಾತ್ರ ಜಾಗತೀಕರಣಕ್ಕೆ ಕನ್ನಡವನ್ನು ಒಗ್ಗಿಸಿಕೊಳ್ಳುವ ಕೆಲಸ ತಕ್ಕದಾಗಿ ನಡೆಯಬಹುದು.

This entry was posted in ಕನ್ನಡ, ಗ್ರಾಹಕ ಸೇವೆ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s