ಸಿಂಗಾಪುರದ ನಿರ್ಮಾತನಿಂದ ಭಾರತ ಕಲಿಯಬೇಕಾದದ್ದು, ಕಲಿಯಬಾರದ್ದು ಏನು?

ಲೀ ಕ್ವಾನ್ ಯೂ

ಆಧುನಿಕ ಸಿಂಗಾಪುರಿನ ನಿರ್ಮಾತ ಎಂದೇ ಹೆಸರಾಗಿದ್ದ ಸಿಂಗಾಪುರಿನ ಮಾಜಿ ಪ್ರಧಾನಿಯಾದ ಲೀ ಕ್ವಾನ್ ಯೂ ಮೊನ್ನೆ ಸೋಮವಾರ ನಮ್ಮನ್ನಗಲಿದರು. ಒಂದೇ ತಲೆಮಾರಿನ ಅವಧಿಯಲ್ಲಿ ಸಿಂಗಾಪುರದಂತಹ ಪುಟ್ಟ ನಾಡನ್ನು ಮೂರನೆಯ ಜಗತ್ತಿನ ಬಡ ದೇಶದ ಮಟ್ಟದಿಂದ ಮೊದಲ ಜಗತ್ತಿನ ಶ್ರ‍ೀಮಂತ ಸಿಟಿ ಸ್ಟೇಟ್ ಮಟ್ಟಕ್ಕೆ ಕೊಂಡೊಯ್ದ ಖ್ಯಾತಿ ಅವರದ್ದು. ಅವರ ಸಾಧಿಸುವ ಛಲ, ದೂರದೃಷ್ಟಿಯ ಅಭಿಮಾನಿಗಳು ಜಗತ್ತಿನಾದ್ಯಂತ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅಂತೆಯೇ ಟೀಕೆ-ಟಿಪ್ಪಣಿಯನ್ನು ಸಹಿಸದ, ರಾಜಕೀಯ ಎದುರಾಳಿಗಳನ್ನು, ತಮಗಾಗದ ಪತ್ರಕರ್ತರನ್ನು ಸಹಿಸಿಕೊಳ್ಳದ ಅವರ ಗುಣವನ್ನು ಒಬ್ಬ ಸರ್ವಾಧಿಕಾರಿಗೆ ಹೋಲಿಸುವವರು ಅಷ್ಟೇ ಸಂಖ್ಯೆಯಲ್ಲಿದ್ದಾರೆ. ಅವರ ಜೀವನ, ಸಾಧನೆಯನ್ನು ಗಮನಿಸಿದಾಗ ಸಿಂಗಾಪುರಿನಂತಹ ಪುಟ್ಟ ನಾಡಿನ ಪ್ರಗತಿಯಲ್ಲಿ ನಾವು ಪಡೆಯಬೇಕಾದ, ಪಡೆಯಬಾರದ ಅಂಶಗಳೆರಡು ಇವೆ ಅನ್ನಬಹುದು.

ಛಲ ಬಿಡದ ತ್ರಿವಿಕ್ರಮ

ಬಂದರು ನಗರ ಸಿಂಗಾಪುರ ತನ್ನ ಆಯಕಟ್ಟಿನ ನೆಲೆಯಿಂದಾಗಿ ಬ್ರಿಟಿಷರಿಗೆ ಮಹತ್ವದ ಸ್ಥಳವಾಗಿತ್ತು. 1824ರಿಂದಲೇ ಇದರ ಮೇಲೆ ಹಿಡಿತ ಸಾಧಿಸಿದ ಬ್ರಿಟಿಷರು ತಮ್ಮ ವ್ಯಾಪಾರಕ್ಕೆ ಅನುಕೂಲವಾಗಲಿ ಎಂದು ಭಾರತವೂ ಸೇರಿದಂತೆ ಬ್ರಿಟಿಷ ಆಡಳಿತವಿದ್ದ ಭಾಗದಿಂದ ಜನರನ್ನು ಮುಕ್ತವಾಗಿ ಇಲ್ಲಿಗೆ ವಲಸೆ ತಂದರು. ಚೀನಿಯರೂ ಚೀನಾದಲ್ಲಿದ್ದ ಬಡತನದಿಂದ ತಪ್ಪಿಸಿಕೊಳ್ಳಲು ದೊಡ್ಡ ಸಂಖ್ಯೆಯಲ್ಲಿ ಇಲ್ಲಿಗೆ ವಲಸೆ ಬಂದರು. ಬ್ರಿಟಿಷರ ಕಾಲೋನಿಯಾಗಿದ್ದ ಸಿಂಗಾಪುರ 1942-45ರ ನಡುವೆ ಜಪಾನಿನ ಹಿಡಿತಕ್ಕೆ ಸಿಲುಕಿ ಪೂರ್ತಿಯಾಗಿ ನಾಶವಾಗುತ್ತೆ. 1945ರಲ್ಲಿ ಜಪಾನಿನ ಪತನದ ನಂತರ ಮತ್ತೆ ಬ್ರಿಟಿಷರ ತೆಕ್ಕೆಗೆ ಬೀಳುವ ಸಿಂಗಾಪುರದಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಬೇಕು ಅನ್ನುವ ಕೂಗು ಬಲಗೊಳ್ಳುತ್ತೆ. ಇದನ್ನು ತಣ್ಣಗಾಗಿಸಲು ಸಿಂಗಾಪುರಿನ ಜನರಿಗೆ ಬಹು ಮಟ್ಟಿನ ಸ್ವಯಾಡಳಿತಕ್ಕೆ ಅವಕಾಶ ಕಲ್ಪಿಸುವ ಪ್ರಯತ್ನ ಬ್ರಿಟಿಷರು ಮಾಡುತ್ತಾರೆ. ಹೆಸರಿಗೆ ಸ್ವಯಾಡಳಿತ ಅಂತಿದ್ದರೂ ಹೆಚ್ಚಿನ ನಿಯಂತ್ರಣ ಬ್ರಿಟಿಷರ ಕೈಯಲ್ಲೇ ಉಳಿಸಿಕೊಳ್ಳುವಂತೆ ಮಾಡಿದ್ದ ವ್ಯವಸ್ಥೆ ಹೆಚ್ಚು ದಿನ ತಾಳಲಿಲ್ಲ. 1959ರಲ್ಲಿ ನಡೆದ ಚುನಾವಣೆಯಲ್ಲಿ ಲೀ ಕ್ವಾನ್ ಯೂ ಮುಂದಾಳತ್ವದ ಪೀಪಲ್ಸ್ ಆಕ್ಷನ್ ಪಾರ್ಟಿ 51ರಲ್ಲಿ 43 ಸ್ಥಾನ ಗೆದ್ದು ಲೀ ಅವರು ಮೊದಲ ಬಾರಿಗೆ ಸಿಂಗಾಪುರಿನ ಪ್ರಧಾನಿ ಹುದ್ದೆಗೇರುತ್ತಾರೆ. ಐತಿಹಾಸಿಕವಾಗಿ ಸಾಕಷ್ಟು ಹತ್ತಿರದ ನೆಂಟು ಹೊಂದಿದ್ದ ಮಲೇಶಿಯಾ ಜೊತೆಯಲ್ಲಿ ಒಂದು ಒಕ್ಕೂಟದ ಏರ್ಪಾಡು ಕಟ್ಟಿಕೊಳ್ಳುವ ಸಿಂಗಾಪುರ 1963-65ರವರೆಗೆ ಮಲೇಶಿಯಾದ ಭಾಗವಾಗಿರುತ್ತೆ. ಚೀನಿಯರ ಪ್ರಾಬಲ್ಯದ ಸಿಂಗಾಪುರ ಮತ್ತು ಮಲಯ ಜನರ ನಡುವೆ ನಡೆದ ಘರ್ಷಣೆಗಳು ಕೈ ಮೀರಿದಾಗ ಮಲೇಶಿಯಾ ಸಿಂಗಾಪುರನ್ನು ಒಕ್ಕೂಟದಿಂದ ಹೊರ ಹಾಕಿದಾಗ ಸಿಂಗಾಪುರ ಅನ್ನುವ ಪ್ರತ್ಯೇಕ ದೇಶ ಜನ್ಮ ತಾಳುತ್ತೆ. ಬಡತನ, ರೋಗ-ರುಜಿನ, ನೈಸರ್ಗಿಕ ಸಂಪನ್ಮೂಲಗಳ ಕೊರತೆಯಂತಹ ಸಮಸ್ಯೆಗಳ ಬೆಟ್ಟವನ್ನೇ ಹೊತ್ತುಕೊಂಡು ಹುಟ್ಟಿದ ದೇಶಕ್ಕೆ ಲೀ ಕ್ವಾನ್ ಯೂ ಕೇವಲ ಮೂವತ್ತು ವರ್ಷದಲ್ಲಿ ಹೊಸ ರೂಪ ಕೊಟ್ಟು ಜಗತ್ತಿನ ಮಾದರಿ ನಗರಗಳಲ್ಲೊಂದಾಗಿಸುತ್ತಾರೆ. ತಮಿಳು, ಮಲಯ, ಚೀನಿ ಜನಾಂಗದ ಜನರಿದ್ದ ಸಿಂಗಾಪುರಿನಲ್ಲಿ ಇಂಗ್ಲಿಷಿನೊಡನೆ ಈ ಮೂರು ಭಾಷೆಗಳನ್ನು ಅಧಿಕೃತ ಭಾಷೆಯಾಗಿಸಿ ಸಮಾನತೆಯ ನೆಲೆಯಲ್ಲಿ ಬಹುಭಾಷಾ ದೇಶವನ್ನು ರೂಪಿಸುತ್ತಾರೆ. ಅಮೇರಿಕದ ಮಾದರಿಯಲ್ಲಿ ಅರ್ಥ ವ್ಯವಸ್ಥೆಯನ್ನು ಕಟ್ಟಿದರೂ ಪೂರ್ವ ಏಷ್ಯಾದಲ್ಲಿರುವ “ಕುಟುಂಬಕ್ಕೆ ಮೊದಲ ಆದ್ಯತೆ” ನೀಡುವ ಪದ್ದತಿಯಂತೆ ದೇಶದ ಆರ್ಥಿಕ, ಸಾಮಾಜಿಕ ನೀತಿ-ನಿಯಮಗಳನ್ನು ರೂಪಿಸಿ ಸಿಂಗಾಪುರದ ಬೆಳವಣಿಗೆಗೆ ಕಾರಣರಾಗುತ್ತಾರೆ.

ಚೀನಾದಲ್ಲಿದ್ದಂತೆ ಬಿಗಿಯಾದ ರಾಜಕೀಯ ಹಿಡಿತದ ಶೈಲಿಯನ್ನು ತಮ್ಮದಾಗಿಸಿಕೊಂಡಿದ್ದ ಲೀ ತಮ್ಮ ನಿಲುವನ್ನು ಒಪ್ಪದ ರಾಜಕೀಯ ಎದುರಾಳಿಗಳು, ಪತ್ರಕರ್ತರ ಮೇಲೆ ಮೊಕದ್ದಮೆ ದಾಖಲಿಸಿ ಅವರನ್ನು ಆರ್ಥಿಕವಾಗಿ ದಿವಾಳಿಯಾಗಿಸುತ್ತಿದ್ದ ಇಲ್ಲವೇ ರಾಜಕೀಯದಿಂದಲೇ ದೂರ ಸರಿಯುವಂತೆ ಮಾಡುತ್ತಿದ್ದರು ಅನ್ನುವುದಕ್ಕೆ ಸಾಕಷ್ಟು ದಂತಕತೆಗಳೇ ಇವೆ. ಶಿಸ್ತಿನ ಹೆಸರಲ್ಲಿ ಮಿಲಿಟರಿ ಮತ್ತು ಪೋಲಿಸ್ ತರಬೇತಿಯಲ್ಲಿ ವಿದ್ಯಾರ್ಥಿಗಳಿಗೆ ಛಡಿಯೇಟು ನೀಡುವ ಪದ್ಧತಿ ಇರುವ ಕೆಲವೇ ಕೆಲವು ದೇಶಗಳಲ್ಲಿ ಸಿಂಗಾಪುರವೂ ಒಂದು. ಮುಕ್ತ ಪ್ರಜಾಪ್ರಭುತ್ವದ ಜೊತೆಯಲ್ಲೇ ಏಳಿಗೆ ಹೊಂದಿದ ಅಮೇರಿಕ ಮತ್ತು ಯುರೋಪಿನ ಹಲವು ನಾಡುಗಳು ಲೀ ಅವರಿಗೆ ಎಂದಿಗೂ ಆದರ್ಶಪ್ರಾಯವೆನಿಸಿರಲಿಲ್ಲ. ಪೂರ್ವ ಏಷ್ಯಾದಲ್ಲಿರುವ “ಕಮಾಂಡ್ ಅಂಡ್ ಕಂಟ್ರೊಲ್” ಅನ್ನುವ ಮಾದರಿಯೇ ಸರಿ ಅನ್ನುವುದು ಅವರ ಅನಿಸಿಕೆಯಾಗಿತ್ತು.

ಭಾರತಕ್ಕೆ ಸಿಂಗಾಪುರ ಮಾದರಿಯೇ?

ದಕ್ಷಿಣ ಏಷ್ಯಾದ ಪ್ರಮುಖರ ಸಭೆಯೊಂದರಲ್ಲಿ ಭಾರತದ ಐ.ಎ.ಎಸ್ ಅಧಿಕಾರಿಯೊಬ್ಬರು ಲೀ ಅವರನ್ನು ಭಾರತವನ್ನು ಸಿಂಗಾಪುರ ಮಾಡುವ ಅವಕಾಶ ಸಿಕ್ಕರೆ ನೀವು ಏನು ಮಾಡುತ್ತೀರಿ ಅನ್ನುವ ಪ್ರಶ್ನೆ ಕೇಳುತ್ತಾರೆ. ಇದಕ್ಕೆ ಉತ್ತರಿಸುವ ಲೀ “ ಯಾವುದೇ ಒಬ್ಬ ವ್ಯಕ್ತಿ ಭಾರತವನ್ನು ಬದಲಿಸಲು ಸಾಧ್ಯವಿಲ್ಲ. ಭಾರತ ಅನ್ನುವುದು ಬಹಳ ವೈವಿಧ್ಯಮಯವಾದ ಬಹು ಭಾಷಿಕ ದೇಶ. ನಿಮ್ಮ ಪ್ರಧಾನಿ ಮನಮೋಹನ್ ಸಿಂಗ್ ಹಿಂದಿಯಲ್ಲಿ ಮಾತನಾಡಿದರೆ ನೂರು ಇಪ್ಪತ್ತು ಕೋಟಿಯಲ್ಲಿ ಹೆಚ್ಚೆಂದರೆ ಇಪ್ಪತ್ತು ಕೋಟಿ ಜನರಿಗೆ ಅದು ಅರ್ಥವಾಗಬಹುದು. ಚೈನಾದಂತೆ ಸುಲಭಕ್ಕೆ ನಿಭಾಯಿಸಲಾಗುವ ದೇಶ ಭಾರತವಲ್ಲ. ಉದಾಹರಣೆಗೆ ಭಾರತದ ತಮಿಳು ಇಲ್ಲವೇ ತೆಲುಗು ಭಾಷೆಯ ವಿಕಾಸದ ಇತಿಹಾಸಕ್ಕೂ ಪಂಜಾಬಿ ನುಡಿಯ ಇತಿಹಾಸಕ್ಕೂ ಯಾವುದೇ ನಂಟಿಲ್ಲ. ಇಂದಿನ ರಾಜಕೀಯ ಭಾರತ ಬ್ರಿಟಿಷ ವ್ಯವಸ್ಥೆಯ ಸೃಷ್ಟಿ. ಭಾರತ ಬದಲಾಗಲು ಭ್ರಷ್ಟಾಚಾರ ನಿರ್ಮೂಲನೆ, ಪ್ರತಿಭೆಗೆ ಮನ್ನಣೆ ಮತ್ತು ಎಲ್ಲ ಜನರಿಗೂ ಸಮಾನ ಅವಕಾಶ ದೊರೆಯುವಂತಾಗುವುದು ಮುಖ್ಯ. ಸಿಂಗಾಪುರ ಇಲ್ಲಿನ ಯಾವುದೇ ಭಾಷಿಕರಿಗೆ ಹೆಚ್ಚು ಆದ್ಯತೆ ಸಿಗದಿರಲಿ ಅನ್ನುವ ಕಾರಣಕ್ಕಾಗಿಯೇ ಎಲ್ಲರಿಗೂ ಸಮಾನ ದೂರವಿರುವ ಇಂಗ್ಲಿಷ್ ಭಾಷೆಯನ್ನು ಆಯ್ಕೆ ಮಾಡಿಕೊಂಡಿದೆ. ಅಲ್ಲದೇ ನಾವೊಂದು ಚಿಕ್ಕ ದೇಶವಾಗಿರುವುದರಿಂದ ನಮ್ಮ ಆಡಳಿತ ಕಷ್ಟವಲ್ಲ. ಭಾರತ ಮತ್ತು ಅಲ್ಲಿರುವ ವೈವಿಧ್ಯತೆಯನ್ನು ಗಮನಿಸಿದಾಗ ಭಾರತದ ಸಮಸ್ಯೆಗಳಿಗೆ ನಿಮ್ಮದೇ ತಾಳ್ಮೆಯ, ನಿಮ್ಮದೇ ಆಲೋಚನೆಯ, ನಿಮ್ಮದೇ ವೇಗದಲ್ಲಿ ಪರಿಹಾರ ಕಂಡುಕೊಳ್ಳಬೇಕು. ಭಾರತದೊಳಗೆ ಹಲವು ಭಾರತಗಳಿವೆ.” ಅನ್ನುವ ಮಾತುಗಳನ್ನಾಡುತ್ತಾರೆ. ಆ ಮಾತುಗಳಲ್ಲಿ ಭಾರತದಂತಹ ವೈವಿಧ್ಯತೆಯ ದೇಶಕ್ಕೆ “ಕಮಾಂಡ್ ಅಂಡ್ ಕಂಟ್ರೊಲ್” ಮಾದರಿಯ ಯಾವುದೋ ಒಂದು ವ್ಯವಸ್ಥೆ ಕೆಲಸ ಮಾಡುವುದಿಲ್ಲ ಅನ್ನುವುದನ್ನು ಸೂಚ್ಯವಾಗಿ ತಿಳಿಸುತ್ತಾರೆ.

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯೇ ಹಲವು ಬಾರಿ ನಮ್ಮ ಬದಲಾವಣೆಯ ವೇಗವನ್ನು ಕಟ್ಟಿ ಹಾಕುತ್ತೆ ಅನ್ನುವ ಅನಿಸಿಕೆಗಳಿವೆ. ಪ್ರಜಾಪ್ರಭುತ್ವವಿರುವ ಎಲ್ಲ ನಾಡುಗಳಲ್ಲೂ ಇದು ಸಹಜ. ಆಳ್ವಿಕೆಯ ಯಾವ ಮಾದರಿಯೇ ಇರಲಿ, ಎಲ್ಲಿಯವರೆಗೂ ನಾಯಕತ್ವದಲ್ಲಿರುವವರು ಪ್ರಜಾನುರಾಗಿಯಾಗಿರುತ್ತಾರೋ ಅಲ್ಲಿಯವರೆಗೆ ಆ ಸಮಾಜ ನೆಮ್ಮದಿಯಾಗಿರುತ್ತೆ, ಆದರೆ ಯಾವತ್ತು ಜನಪರವಿಲ್ಲದ ಸ್ವಾರ್ಥಿ ನಾಯಕನಾಗುತ್ತಾನೋ, ಅಂತವನನ್ನು ಬದಲಾಯಿಸಿ ಹೊಸ ನಾಯಕತ್ವವನ್ನು ರಕ್ತಪಾತವಿಲ್ಲದೇ ತಂದುಕೊಳ್ಳುವ ವ್ಯವಸ್ಥೆ ಪ್ರಜಾಪ್ರಭುತ್ವದಲ್ಲಿ ಮಾತ್ರ ಸಾಧ್ಯ. ಸಿಂಗಾಪುರಿನಲ್ಲಿ ಲೀ ಕುಟುಂಬದವರೇ ಕಳೆದ ಐವತ್ತು ವರ್ಷಗಳಿಂದ ದೇಶವಾಳುತ್ತಿದ್ದಾರೆ. ಒಂದೊಮ್ಮೆ ಭಾರತದಲ್ಲೂ ಒಂದು ಕುಟುಂಬ ಇಂತಹ ಆಳ್ವಿಕೆಯಲ್ಲಿದ್ದಿದ್ದರೆ ದೇವೆಗೌಡರಂತಹ ಮಣ್ಣಿನ ಮಗನಾಗಲಿ, ಮೋದಿಯವರಂತಹ ಚಹಾ ಮಾರುತ್ತಿದ್ದವರೊಬ್ಬರಾಗಲಿ ಭಾರತದ ಪ್ರಧಾನಿಯಾಗಲು ಎಂದಿಗೂ ಸಾಧ್ಯವಾಗುತ್ತಿರಲಿಲ್ಲ. ಪ್ರಜಾಪ್ರಭುತ್ವ, ನಾಗರೀಕ ಹಕ್ಕುಗಳ ಜೊತೆಯಲ್ಲೇ ಭಾರತ ಏಳಿಗೆ ಹೊಂದಬೇಕು, ಅದನ್ನು ಸಾಧ್ಯವಾಗಿಸುವಂತೆ ತುರ್ತು ನೆಲೆಯಲ್ಲಿ ಭಾರತದ ಅಧಿಕಾರದ ವಿಕೇಂದ್ರಿಕರಣವಾಗಬೇಕು. ಲೀ ಅವರಿಗೆ ಅರ್ಥವಾಗಿದ್ದ ಈ ಸತ್ಯ ನಮ್ಮವರಿಗೂ ಆಗಬೇಕು.

This entry was posted in ಆಡಳಿತ, ಒಕ್ಕೂಟ ವ್ಯವಸ್ಥೆ, ಸಿಂಗಾಪುರ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s