ಕಳೆದ ವಾರ ಮುಗಿದ ಕ್ರಿಕೆಟ್ ವಿಶ್ವ ಕಪ್ ಪಂದ್ಯಾವಳಿ ಎರಡು ಕಾರಣಕ್ಕೆ ಕರ್ನಾಟಕಕ್ಕೆ ವಿಶೇಷವಾಗಿತ್ತು. ಮೊದಲನೆಯದ್ದು, ಹಲವು ವಿಶ್ವ ಕಪ್ ನಂತರ, ಮೊದಲ ಬಾರಿಗೆ, ಭಾರತ ತಂಡದಲ್ಲಿ ಕರ್ನಾಟಕದ ಯಾವ ಆಟಗಾರು ಸ್ಥಾನ ಪಡೆಯಲಿಲ್ಲ. ಸ್ಟುವರ್ಟ್ ಬಿನ್ನಿ ಆಯ್ಕೆಯಾದರೂ ಯಾವ ಪಂದ್ಯವನ್ನೂ ಆಡಲಿಲ್ಲ. ಕಳೆದ ಎರಡು ವರ್ಷದಿಂದ ರಣಜಿ, ಇರಾನಿ, ದುಲೀಪ್ ಟ್ರೋಫಿ ಪಂದ್ಯಾವಳಿಗಳನ್ನು ಸತತವಾಗಿ ಗೆಲ್ಲುತ್ತ ಬಂದಿರುವ ಕರ್ನಾಟಕ ತಂಡದ ಯಾವ ಪ್ರತಿಭೆಯೂ ವಿಶ್ವಕಪ್ ತಂಡದಲ್ಲಿ ಆಡಲಿಲ್ಲ ಅನ್ನುವುದು ಕನ್ನಡಿಗರಿಗೆ ಬೇಸರ ತಂದ ಸಂಗತಿ. ಎರಡನೆಯದ್ದು ಒಂದು ಸಂತಸದ ವಿಷಯ. ಇದೇ ಮೊದಲ ಬಾರಿಗೆ ಸಂಪೂರ್ಣ ವಿಶ್ವ ಕಪ್ ಪಂದ್ಯಾವಳಿಯ ಟಿವಿ ವೀಕ್ಷಕ ವಿವರಣೆ ಸುವರ್ಣ ಪ್ಲಸ್ ವಾಹಿನಿಯ ಮೂಲಕ ಕನ್ನಡದಲ್ಲಿ ಪ್ರಸಾರವಾಯಿತು ಮತ್ತು ನೋಡುಗರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಯಿತು.
ವಿಶ್ವಕಪ್ ವೀಕ್ಷಕ ವಿವರಣೆ
ಭಾರತದಲ್ಲಿ ಕ್ರಿಕೆಟಿನ ಅಮಲೇರಿಸಿದವರು ಬ್ರಿಟಿಷರು. ಅವರು ತೆರಳಿದ ನಂತರ ಬಿ.ಸಿ.ಸಿ.ಐ ಅನ್ನುವ ಖಾಸಗಿ, ಸ್ವಾಯತ್ತ ಸಂಸ್ಥೆ ಆಯ್ಕೆ ಮಾಡುವ ತಂಡ ಭಾರತವನ್ನು ಪ್ರತಿನಿಧಿಸುತ್ತ ಭಾರತ ಮತ್ತು ಹೊರದೇಶದಲ್ಲಿ ಕ್ರಿಕೆಟ್ ಆಡುತ್ತಿದೆ. ಟಿವಿಗಳಿಲ್ಲದ ಕಾಲದಲ್ಲಿ ರೇಡಿಯೋ ಮೂಲಕ ಪಂದ್ಯದ ಕಾಮೆಂಟರಿ ಪ್ರಸಾರವಾಗುತ್ತಿತ್ತು, ಆಗ ನೀಲಕಂಠ ರಾವ್ ತರದ ಕೆಲವರ ಅದ್ಭುತ ದನಿಯಲ್ಲಿ ಕನ್ನಡದಲ್ಲಿ ರೇಡಿಯೊ ಕಾಮೆಂಟರಿ ಆಗಾಗ ಪ್ರಸಾರವಾಗುತ್ತಿತ್ತು. ಆದರೆ ಪ್ರಸಾರ ಭಾರತಿಯ ಅಡಿಯಿದ್ದ ರೇಡಿಯೊ ವಾಹಿನಿಗಳಲ್ಲಿ ಇಂದಿನಂತೆ ಅಂದೂ ಹಿಂದಿಗೆ ಹೆಚ್ಚಿನ ಮನ್ನಣೆ ಇದ್ದಿದ್ದರಿಂದ ಕ್ರಿಕೆಟ್ ಕಾಮೆಂಟರಿಯ ವಿಷಯದಲ್ಲೂ ಹಿಂದಿಗೆ ಅಗ್ರಸ್ಥಾನವಿತ್ತು. ಮುಂದೆ ಪ್ರಸಾರ ಭಾರತಿಯ ಅಡಿಯಲ್ಲೇ ದೂರದರ್ಶನ ಆರಂಭವಾದಾಗಲೂ ಇದು ಬದಲಾಗಲಿಲ್ಲ. ಬದಲಿಗೆ, ಕನ್ನಡದಲ್ಲಿ ಬರುತ್ತಿದ್ದ ರೇಡಿಯೊ ಕಾಮೆಂಟರಿಯೂ ಕ್ರಮೇಣ ನಿಂತು ಹೋಯಿತು. ಅಸಂಖ್ಯ ಕ್ರಿಕೆಟ್ ಅಭಿಮಾನಿಗಳು “ಇಕ್ಯಾವನ್, ಚೌಬೀಸ್, ನಿನ್ಯಾನವೇ” ಅನ್ನುವ ತಿಳಿಯದ ಹಿಂದಿಯ ಅಂಕಿ-ಸಂಕಿಗಳನ್ನು ಕೇಳಿಸಿಕೊಂಡೇ ಪಂದ್ಯ ನೋಡುವ ಸ್ಥಿತಿಯಿತ್ತು. ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳೆಲ್ಲವೂ ಹಿಂದಿಯ ಪ್ರಚಾರ, ಪ್ರಸಾರಕ್ಕೆ ಗಮನ ಕೊಡಬೇಕು ಅನ್ನುವ ನಿಯಮದಂತೆ ಭಾರತದ ಇತರೆಲ್ಲ ಭಾಷೆಗಳನ್ನು ಕಡೆಗಣಿಸಿ ಹಿಂದಿಗೆ ಮಣೆ ಹಾಕುವ ಕೇಂದ್ರದ ನಿಲುವು ಇತರೆ ಭಾಷೆಗಳನ್ನು ಒಂದು ರೀತಿಯಲ್ಲಿ ಕಟ್ಟಿ ಹಾಕಿತ್ತು. ಮುಂದೆ 1991ರಲ್ಲಿ ಜಾಗತೀಕರಣಕ್ಕೆ ಭಾರತ ತೆರೆದುಕೊಂಡ ನಂತರ ಖಾಸಗಿ ಬಂಡವಾಳ ಉದ್ಯಮದ ಎಲ್ಲ ರಂಗಗಳಲ್ಲೂ ಹರಿದು ಬರತೊಡಗಿತು. ವ್ಯಾಪಾರಿಗಳಿಗೆ ಭಾಷೆಯಿಲ್ಲ. ಅವರು ಯಾರ ಬಳಿ ಹಣವಿದೆಯೋ ಅವರ ಭಾಷೆಗೆ ಆದ್ಯತೆ ನೀಡುತ್ತಾರೆ. ಅಂತೆಯೇ ಖಾಸಗಿ ಬಂಡವಾಳದ ಹರಿವು ಭಾರತದ ಹಿಂದಿಯೇತರ ಭಾಷೆಗಳಲ್ಲಿ ಇದ್ದ ಅಪಾರ ವ್ಯಾಪಾರದ ಸಾಧ್ಯತೆಯನ್ನು ಹಂತ ಹಂತವಾಗಿ ಹೊರ ಹಾಕಲಾರಂಭಿಸಿತು. ಇದು ಮಾಧ್ಯಮ ಪ್ರಪಂಚವನ್ನು ದೊಡ್ಡ ಮಟ್ಟದಲ್ಲಿ ಪ್ರಭಾವಿಸಿತು. ನೋಡ ನೋಡುತ್ತಿದ್ದಂತೆಯೇ ಕನ್ನಡದಲ್ಲಿ ಹತ್ತು ಸುದ್ದಿ ವಾಹಿನಿಗಳು, ಡಝನಿಗೂ ಹೆಚ್ಚು ಮನರಂಜನೆ ಮತ್ತು ಸಂಗೀತ ವಾಹಿನಿಗಳು ಕೆಲಸ ಮಾಡಲಾರಂಭಿಸಿದವು. ಇದರ ಜೊತೆಯಲ್ಲೇ ಖಾಸಗಿ ಎಫ್.ಎಮ್ ವಾಹಿನಿಗಳು ಶುರುವಾದ ಮೇಲೆ ಬೆಂಗಳೂರು, ಮೈಸೂರು, ಮಂಗಳೂರಿನಂತಹ ಊರುಗಳಲ್ಲಿ ಕನ್ನಡ ಎಫ್.ಎಮ್ ವಾಹಿನಿಗಳೂ ಕೇಳಿಸಲಾರಂಭಿಸಿದವು. ಎಲ್ಲೆಲ್ಲಿ ಕನ್ನಡ ಕಾಣಲು, ಕೇಳಲು ಕಡಿಮೆ ಅವಕಾಶಗಳಿದ್ದವೋ ಅಲ್ಲೆಲ್ಲ ದಂಡಿಯಾಗಿ ಆಯ್ಕೆ ಸಿಗುವಂತಹ ಸಾಧ್ಯತೆಗಳು ಹುಟ್ಟಿಕೊಂಡವು. ಆದರೆ ಇಷ್ಟೆಲ್ಲ ಆದರೂ ಟಿವಿಯಲ್ಲಿ ಕ್ರಿಕೆಟ್ ಕಾಮೆಂಟರಿ ಕನ್ನಡದಲ್ಲಿ ಪ್ರಸಾರವಾಗುವ ದಿನ ಬಂದಿರಲಿಲ್ಲ.
ಕನ್ನಡದಲ್ಲಿ ಕ್ರಿಕೆಟ್ ಕಾಮೆಂಟರಿ
ಕಳೆದ ವರ್ಷ ರುಪರ್ಟ್ ಮುರ್ಡೋಕ್ ಅವರ ಸ್ಟಾರ್ ವಾಹಿನಿ ಕ್ರಿಕೆಟಿಗಾಗಿ ಮೀಸಲಾದ ನಾಲ್ಕು ಹೊಸ ವಾಹಿನಿಗಳನ್ನು ಆರಂಭಿಸಿತು. ಇಂಟರ್ ನ್ಯಾಶನಲ್ ಪಂದ್ಯಗಳಲ್ಲದೇ ದೇಸಿಯವಾಗಿ ನಡೆಯುವ ಪಂದ್ಯಗಳು, ಐಪಿಎಲ್, ಚಾಂಪಿಯನ್ಸ್ ಲೀಗ್ ಪಂದ್ಯಾವಳಿಗಳನ್ನು ಭಾರತದ ಭಾಷೆಗಳಲ್ಲೇ ಪ್ರಸಾರ ಮಾಡುವ ಉದ್ದೇಶ ಇದರ ಹಿಂದಿತ್ತು. ಹಿಂದಿ/ಇಂಗ್ಲಿಷಿಗೆ ಸೀಮಿತವಾಗಿ ನಡೆದ ಈವರೆಗಿನ ಹೂಡಿಕೆಗಳಿಂದ ಹೆಚ್ಚಿನ ಲಾಭ ಇನ್ನು ದೊರೆಯಲ್ಲ ಅನ್ನುವುದು ಖಾತರಿಯಾಗಿದ್ದು ಮತ್ತು ಭಾರತದಲ್ಲಿ ಹಿಂದಿ ಮತ್ತು ಇಂಗ್ಲಿಷೇತರ ನುಡಿಗಳಲ್ಲಿದ್ದ ವ್ಯಾಪಕ ಮಾರುಕಟ್ಟೆಯ ಅವಕಾಶಗಳು ಗೋಚರಿಸಲಾರಂಭಿಸಿದ್ದು ಈ ನಿರ್ಣಯಕ್ಕೆ ಒತ್ತಾಸೆಯಾಗಿತ್ತು. ಫುಟ್ಬಾಲ್ ಕ್ರೇಜ್ ಇರುವ ಪಶ್ಚಿಮ ಬಂಗಾಳಕ್ಕೆಂದೇ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಕಾಮೆಂಟರಿ ಬೆಂಗಾಲಿ ನುಡಿಯಲ್ಲಿ ಪ್ರಸಾರ ಮಾಡುವ ಸೋನಿ ಸಂಸ್ಥೆಯ ಪ್ರಯೋಗ ನಿರೀಕ್ಷೆ ಮೀರಿ ಯಶಸ್ವಿಯಾಗಿದ್ದು ಸ್ಟಾರ್ ಸಂಸ್ಥೆಗೆ ಭಾರತದ ಇತರೆ ಭಾಷೆಗಳಲ್ಲಿ ಇಂತಹುದೇ ಹೂಡಿಕೆ ಮಾಡುವುದಕ್ಕೆ ಹೆಚ್ಚಿನ ಹುಮ್ಮಸ್ಸು ನೀಡಿತ್ತು. ಈ ಬಾರಿಯ ವಿಶ್ವ ಕಪ್ ಸಂದರ್ಭದಲ್ಲಿ ತನ್ನ ಜಾಲದ ಬೇರೆ ಬೇರೆ ವಾಹಿನಿಗಳಲ್ಲಿ ತಮಿಳು, ಕನ್ನಡ, ಬೆಂಗಾಲಿ, ಹಿಂದಿ, ಮಲಯಾಳಂ ನುಡಿಗಳಲ್ಲಿ ಕ್ರಿಕೆಟ್ ಕಾಮೆಂಟರಿ ಪ್ರಸಾರ ಮಾಡುವ ನಿರ್ಧಾರ ಕೈಗೊಂಡ ಸ್ಟಾರ್ ಸಂಸ್ಥೆಗೆ ಅದ್ಭುತವಾದ ಪ್ರತಿಕ್ರಿಯೆ ದೊರೆತಿದೆ. ಲೀಗ್ ಹಂತದಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯವನ್ನು ಭಾರತದಲ್ಲಿ 25 ಕೋಟಿ 70 ಲಕ್ಷ ವೀಕ್ಷಕರು ನೋಡಿದ್ದರೆ ಅದರಲ್ಲಿ ಪ್ರತಿಶತ 75ಕ್ಕೂ ಹೆಚ್ಚಿನ ಜನರು ಬೆಂಗಾಲಿ, ತಮಿಳು, ತೆಲುಗು, ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ನೋಡಿದ್ದು ಉಳಿದವರು ಇಂಗ್ಲಿಷಿನಲ್ಲಿ ನೋಡಿದ್ದಾರೆ ಅನ್ನುವ ಮಾಹಿತಿಯನ್ನು ಸ್ಟಾರ್ ಸಂಸ್ಥೆ ಹಂಚಿಕೊಂಡಿತ್ತು. ಇದು ಅತ್ಯಂತ ಸ್ಪಷ್ಟವಾಗಿ ಮಾಧ್ಯಮ ಕ್ಷೇತ್ರದಲ್ಲಿ ಮುಂದಿನ ಬೆಳವಣಿಗೆಯ ಅಲೆ ಭಾರತದ ಹಿಂದಿಯೇತರ ಭಾಷೆಗಳಲ್ಲಿದೆ ಅನ್ನುವುದನ್ನು ಎತ್ತಿ ತೋರಿಸಿದೆ.
ಕನ್ನಡ ಕೇಂದ್ರಿತ ಗ್ರಾಹಕ ಚಳುವಳಿಯ ಶಕ್ತಿ
ಇಲ್ಲಿ ಒಂದು ಸೂಕ್ಷ್ಮ ಗಮನಿಸಬಹುದು. ಹತ್ತು ಕೋಟಿಯಷ್ಟಿರುವ ತೆಲುಗು ಭಾಷೆಯಲ್ಲಿ ಕ್ರಿಕೆಟ್ ಕಾಮೆಂಟರಿ ಪ್ರಾರಂಭಿಸುವ ಗೋಜಿಗೆ ಹೋಗದ ಸ್ಟಾರ್ ಸಂಸ್ಥೆ ಆರು ಕೋಟಿ ಕನ್ನಡಿಗರನ್ನು ನಂಬಿಕೊಂಡು ಕನ್ನಡ ಕಾಮೆಂಟರಿ ಕೊಡಲು ಹೋಗಿದ್ದು ಹೇಗೆ? ಇದಕ್ಕೆ ಉತ್ತರ ಬೇಡಿಕೆ. ಕಳೆದ ವರ್ಷ ಸ್ಟಾರ್ ನಾಲ್ಕು ಹೊಸ ಕ್ರಿಕೆಟ್ ವಾಹಿನಿಗಳನ್ನು ಶುರು ಮಾಡುವ ನಿರ್ಧಾರ ಕೈಗೊಂಡಾಗ ಕನ್ನಡದಲ್ಲೂ ಕ್ರಿಕೆಟ್ ಕಾಮೆಂಟರಿ ಕೊಡಿ, ನೋಡುವ ಗ್ರಾಹಕರಿದ್ದಾರೆ ಅನ್ನುವ ಸಂದೇಶವನ್ನು ದೊಡ್ಡ ಪ್ರಮಾಣದಲ್ಲಿ ಸಾಮಾಜಿಕ ತಾಣಗಳ ಮೂಲಕ ಸ್ಟಾರ್ ಸಂಸ್ಥೆಗೆ ತಲುಪಿಸುವ ಕೆಲಸವನ್ನು ಸಾಮಾನ್ಯ ಕನ್ನಡದ ಗ್ರಾಹಕರು ಮಾಡಿದ್ದರು. ಕನ್ನಡದಲ್ಲಿ ಮಾರುಕಟ್ಟೆ ಇದೆ ಎಂದು ತೋರಿಸುವ ಈ ಪ್ರಯತ್ನಗಳಿಗೆ ಸ್ಪಂದಿಸಿದ ಸ್ಟಾರ್, ಸುವರ್ಣ ಪ್ಲಸ್ ಮೂಲಕ ಕ್ರಿಕೆಟ್ ಕಾಮೆಂಟರಿ ಕನ್ನಡದಲ್ಲಿ ಪ್ರಸಾರ ಮಾಡುವ ನಿರ್ಧಾರ ಕೈಗೊಂಡಿತ್ತು. ಅವರಿಗೆ ವ್ಯಾಪಾರ ದಕ್ಕಿದರೆ, ಕನ್ನಡಿಗರಿಗೆ ತಮ್ಮದೇ ನುಡಿಯಲ್ಲಿ ಕ್ರಿಕೆಟ್ ನೋಡುವ ಅವಕಾಶ ದಕ್ಕಿತು. ಮುಂದಿನ ದಿನಗಳಲ್ಲಿ ಐ.ಪಿ.ಎಲ್/ ರಣಜಿ ಟ್ರೋಫಿ ಪಂದ್ಯಾವಳಿಗೂ ಇದನ್ನು ವಿಸ್ತರಿಸುವ ಹಾಗಾಗಬೇಕು. ಕನ್ನಡಕ್ಕಿರುವ ಮಾರುಕಟ್ಟೆಯ ಸಾಧ್ಯತೆಗಳು ಹೀಗೆ ಒಂದೊಂದಾಗಿ ಹೆಚ್ಚುತ್ತ ಸಾಗಬೇಕು ಮತ್ತು ಅದನ್ನು ಸಾಧ್ಯವಾಗಿಸುವಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆಗಾಗಿ ಒತ್ತಾಯಿಸುವ ಸಾಮಾನ್ಯ ಕನ್ನಡಿಗರ ಪಾತ್ರ ಹಿರಿದಿದೆ. ಗ್ರಾಹಕ ಸೇವೆಯಲ್ಲಿ ಕನ್ನಡಕ್ಕಾಗಿ ಒತ್ತಾಯಿಸುವುದು ಮುಂದಿನ ದಿನಗಳಲ್ಲಿ ಕನ್ನಡ ಚಳುವಳಿಯಲ್ಲಿ ಒಂದು ಬಹುದೊಡ್ಡ ಪಾತ್ರವನ್ನೇ ವಹಿಸಲಿದೆ.