ಪೂರ್ಣ ಚಂದ್ರ ತೇಜಸ್ವಿಯವರೊಳಗಿದ್ದ ಒಬ್ಬ ಕನ್ನಡ ಪರ ರಾಜಕೀಯ ಚಿಂತಕ

Tejasviಇಂದಿಗೆ ತೇಜಸ್ವಿ ನಮ್ಮನ್ನಗಲಿ ಎಂಟು ವರುಶವಾಯಿತು.  ಇಂದಿನ ಯುವ ಪೀಳಿಗೆಯಲ್ಲಿ ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸವೇ ಕಡಿಮೆಯಾಗಿದ್ದರೂ ಓದುತ್ತಿರುವ ಹೆಚ್ಚಿನವರ ಪಟ್ಟಿಯಲ್ಲಿ ತೇಜಸ್ವಿಯವರ ಹೆಸರು ಇರದೇ ಇರಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಎರಡು ತಲೆಮಾರಿನ ಕನ್ನಡಿಗರನ್ನು ಆವರಿಸಿರುವ ಬರಹಗಾರ ತೇಜಸ್ವಿ. ಬರೀ ಕತೆ, ಕವನಕ್ಕೆ ಸೀಮಿತವಾಗದೇ ಪರಿಸರ ಚಳುವಳಿ, ಫೋಟೊಗ್ರಾಫಿ, ನಾಟಕ, ಸಿನೆಮಾ, ಕಂಪ್ಯೂಟರ್ಸ್, ಜಾಗತೀಕರಣ, ಎಕನಾಮಿಕ್ಸ್ ಹೀಗೆ ಅವರು ಬರೆಯದ, ಮಾತನಾಡದ ವಿಷಯವೇ ಇಲ್ಲ. ಒಂದರ್ಥದಲ್ಲಿ ಅವರು ಕನ್ನಡದ ನಿಜವಾದ global writer. ಅವರ ಬರವಣಿಗೆ ಇಂಗ್ಲಿಷಿಗೆ ಅನುವಾದಗೊಂಡಿದ್ದಲ್ಲಿ ಬ್ರೆಜಿಲಿನ ಪೌಲೊ ಕೊಯಿಲೊ ರೀತಿಯಲ್ಲಿ ಅವರು ಜಗತ್ತಿಗೇ ಪರಿಚಯವಾಗುತ್ತಿದ್ದರೆನೊ! ಅವರಲ್ಲಿ ನನಗೆ ಒಬ್ಬ ಸಾಹಿತಿಗಿಂತ ಹೆಚ್ಚಾಗಿ ಒಬ್ಬ ಪ್ರಖರ ಕನ್ನಡ ಪರ ರಾಜಕೀಯ ಚಿಂತಕ ಕಾಣಿಸುತ್ತಾರೆ. ಭಾರತದ ಕೇಂದ್ರಿಕೃತ ಒಕ್ಕೂಟ ವ್ಯವಸ್ಥೆ, ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷದ ಅಗತ್ಯ, ತಾಯ್ನುಡಿಯಲ್ಲಿ ಕಲಿಕೆಯ ಬಗ್ಗೆ ಅವರಿಗಿದ್ದ ನಂಬಿಕೆ, ಕರ್ನಾಟಕದ ನದಿ, ನೆಲ, ಗಡಿ, ಬದುಕಿನ ಸವಾಲುಗಳ ಕುರಿತ ಅವರ ಕಾಳಜಿ ಮತ್ತು ಅದನ್ನು ಅತ್ಯಂತ ಸ್ಪಷ್ಟವಾದ ಶಬ್ದಗಳಲ್ಲಿ ಅವರು ವ್ಯಕ್ತಪಡಿಸಿದ ರೀತಿಯ ಬಗ್ಗೆ ಇವತ್ತಿನ ಅಂಕಣದಲ್ಲಿ ಬೆಳಕು ಚೆಲ್ಲುವ ಚಿಕ್ಕ ಪ್ರಯತ್ನ ಇಲ್ಲಿದೆ.

ಅಧಿಕಾರ ಕೇಂದ್ರಿಕರಣದ ಬಗ್ಗೆ:

ದೆಹಲಿಯಲ್ಲಿ ಹಲವರು ಕುಳಿತು ತಮ್ಮ ಅಭಿಪ್ರಾಯಗಳನ್ನು ಇಡೀ ದೇಶದ ಮೇಲೆ ಹೇರುತ್ತ ಆಡಳಿತ ನಡೆಸುವುದರಲ್ಲಿ ಅರ್ಥವಿಲ್ಲ. ಸೋವಿಯತ್ ರಷ್ಯಾದಲ್ಲೇ ಗೊರ್ಬಚೇವ್ ತಮ್ಮ ಒಕ್ಕೂಟದ ರಚನೆ ಬಗ್ಗೆ ಮಾತನಾಡಲು ತಯ್ಯಾರಿರಬೇಕಾದಾರೆ ಭಾರತದಂತಹ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಕೇಂದ್ರಿಕರಣದ ಬಗ್ಗೆ ಮಾತುಕತೆಯಾಡಿದರೂ ಮೈಲಿಗೆಯಾಗುತ್ತದೆ, ದೇಶ ದ್ರೋಹ ಎಸಗಿದಂತಾಗುತ್ತದೆ ಎನ್ನುವವರು ನಿಜಕ್ಕೂ ದೇಶವನ್ನು ಅನಾಹುತಕ್ಕೆ ಒಯ್ಯುತ್ತಿದ್ದಾರೆ. ದೇಶ, ಭಾಷೆ, ರಾಜ್ಯ, ಧರ್ಮ, ಪ್ರತಿಯೊಂದೂ ಜನತೆಯ ಒಳಿತಿಗೆ ಅಭಿವೃದ್ಧಿಗೆ ಪೂರಕವಾಗಿರುವವರೆಗೆ ಇರುತ್ತದೆ. ಅವು ವ್ಯತಿರಿಕ್ತವಾಗುತ್ತಿದ್ದಂತೆಯೆ ಜನತೆಯಿಂದ ತಿರಸ್ಕರಿಸಲ್ಪಡುತ್ತದೆ.

ಪ್ರಾದೇಶಿಕ ಪಕ್ಷ ಮತ್ತು ಒಕ್ಕೂಟ ವ್ಯವಸ್ಥೆಯ ಬಗ್ಗೆ:

ಆಂಧ್ರ, ತಮಿಳುನಾಡುಗಳಲ್ಲಿ ಬಲವಾದ ಪ್ರಾದೇಶಿಕ ಪಕ್ಷಗಳಿವೆ. ಆದ್ದರಿಂದ ಅವರ ಮಾತಿಗೆ ಕೇಂದ್ರ ಸರ್ಕಾರವಾಗಲಿ, ನ್ಯಾಯಮಂಡಳಿಯಾಗಲಿ ಹೆಚ್ಚು ಬೆಲೆ ಕೊಡುತ್ತದೆ. ಕರ್ನಾಟಕ ಈವರೆಗೂ ಅಂತಹ ರಾಜಕೀಯ ಪಕ್ಷವನ್ನಾಗಲಿ, ರಾಜಕಾಣಿಗಳನ್ನಾಗಲಿ ರೂಪಿಸಲಿಲ್ಲ. ಕೇಂದ್ರಕ್ಕೆ ನಜರು ಒಪ್ಪಿಸುವ ಸಾಮಂತರು ಮಾತ್ರ ಇಲ್ಲಿ ಬಂದಿದ್ದಾರೆ. ಪ್ರಾದೇಶಿಕ ಪಕ್ಷ ನಮ್ಮ ಅನಿವಾರ್ಯತೆಯಾಗುವ ದಿನ ಹತ್ತಿರವಾಗುತ್ತಿದೆ. ಇದಕ್ಕೆ ಬರೀ ಕಾವೇರಿ ನೀರು ಒಂದೇ ಕಾರಣ ಅಲ್ಲ. ಜಗತ್ತಿನಾದ್ಯಂತ ದೊಡ್ಡ ದೊಡ್ಡ ರಾಷ್ಟ್ರಗಳು ಅರ್ಥಿಕ ಮತ್ತು ಆಡಳಿತಾತ್ಮಕ ಕಾರಣಗಳಿಂದ ಕುಸಿದು ಸಣ್ಣ ಸಣ್ಣ ರಾಷ್ಟ್ರಗಳಾಗಿ ಇಲ್ಲವೇ ಸಡಿಲ ಒಕ್ಕೂಟಗಳಾಗಿ ರೂಪುಗೊಳ್ಳುತ್ತಿವೆ. ಈ ಜಾಗತಿಕ ಒತ್ತಡಗಳ ಪರಿಣಾಮ ಭಾರತದ ಮೇಲೆ ಆಗೇ ಆಗುತ್ತದೆ. ನಮ್ಮ ಆರ್ಥಿಕ ಪುನರುಜ್ಜೀವನಕ್ಕೆ ಅನುಗುಣವಾಗುವಂತೆ ಈ ದೇಶವನ್ನು ಸಡಿಲ ಒಕ್ಕೂಟವನ್ನಾಗಿ ಪರಿವರ್ತಿಸಲೇಬೇಕಾಗುತ್ತದೆ. ಈಗಿನ ರೀತಿಯ ಕೇಂದ್ರಿಕೃತ ಆಡಳಿತ ವ್ಯವಸ್ಥೆಯನ್ನು ಸಾಕಲು ಹಿಂದುಳಿದ ದೇಶಗಳಿಗೆ ಸಾಧ್ಯವೇ ಇಲ್ಲ. ನಮ್ಮ ಈ ಅವಾಸ್ತವಿಕ ರಾಷ್ಟ್ರೀಯತೆಯ ದೆಸೆಯಿಂದಾಗಿ ಅಧಿಕಾರಶಾಹಿ ಭೀಕರವಾಗಿದೆ. ಭ್ರಷ್ಟಾಚಾರ ಯೋಜನಾಬದ್ಧ ಪ್ರಗತಿಯನ್ನು ಅರ್ಥಹೀನವನ್ನಾಗಿ ಮಾಡಿದೆ.

ತಾಯ್ನುಡಿಯಲ್ಲಿ ಕಲಿಕೆಯ ಬಗ್ಗೆ:

ನಮ್ಮ ಜನಸಂಖ್ಯಾಬಾಹುಳ್ಯ, ಅನಕ್ಷರತೆಯ ಮಟ್ಟ ಹಾಗೂ ಅಧುನಿಕ ಪ್ರಪಂಚದ ಜ್ಞಾನ ವಿಸ್ತರಣೆಯ ವೇಗಗಳನ್ನು ಗಮನಿಸಿದಾಗ ನಾವು ಇಂಗ್ಲಿಷ್ ಮಾಧ್ಯಮದ ಮುಖಾಂತರ ಭಾರತವನ್ನು ಮತ್ತು ಕರ್ನಾಟಕವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಏರಿಸಲು ಸಾಧ್ಯವಾಗುವುದೇ ಇಲ್ಲ. ನಾವು ವಿದೇಶಗಳಿಗೆ ಬುದ್ದಿವಂತರನ್ನು ರಫ್ತು ಮಾಡುತ್ತ, ಅಲ್ಲಿಂದ ಶಾಶ್ವತವಾಗಿ ಜ್ಞಾನವನ್ನು ಆಮದು ಮಾಡಿಕೊಳ್ಳುತ್ತ ಉಳಿಯುವ ಮೂರನೇ ದರ್ಜೆ ರಾಷ್ಟ್ರವಾಗೇ ಉಳಿಯಬೇಕಾಗುತ್ತೆ. ಜಾಗತೀಕ ಮಾರುಕಟ್ಟೆಯಲ್ಲಿ ನಾವು ನಿಜವಾಗಿಯೂ ಸೂಪರ್ ಪವರ್ ಆಗಬೇಕೆಂದಾದರೆ ಕನ್ನಡವನ್ನು ಆಶ್ರಯಿಸದೇ ಬೇರೆ ಗತಿ ಇಲ್ಲ. ಇದೆಲ್ಲವೂ ಈಗಿಂದೀಗಲೇ ಕಾರ್ಯಗತಗೊಳಿಸಲು ಕಷ್ಟಸಾಧ್ಯವಿರಬಹುದು. ಆದರೂ ಚೀನಿಯರಂತೆ ದೂರಗಾಮಿ ಯೋಜನೆಗಳನ್ನು ಈಗಲೇ ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಮಾಡುವುದು ಒಳ್ಳೆಯದು.

ಕನ್ನಡದ ಉಳಿವಿನ ಬಗ್ಗೆ:

ಒಂದು ಭಾಷೆಯ ಉಳಿವು ಅಳಿವುಗಳು ಇಂದು ನಿರ್ಧಾರವಾಗುವುದು ಅದು ಎಷ್ಟು ಲೋಕೊಪಯೋಗಿಯಾಗಿ ತನ್ನ ಕಾರ್ಯ ನಿರ್ವಹಿಸಲು ಸಮರ್ಥವಾಯ್ತು ಅನ್ನುವುದರ ಮೇಲೆಯೇ ಹೊರತು ಯಾವ ಯಾವ ಉದ್ಧಾಮ ಕವಿಗಳು, ಲೇಖಕರೂ, ಚಿತ್ರನಟರೂ ಯಾರನ್ನು ಹಾಡಿ ಹೊಗಳಿದರು ಅನ್ನುವುದರ ಮೇಲಲ್ಲ. ವೇಗವಾಗಿ ಬದಲಾಗುತ್ತಿರುವ ನಾಗರಿಕತೆಯ ಸವಾಲುಗಳನ್ನು ಅಷ್ಟೇ ವೇಗವಾಗಿ ಸ್ವೀಕರಿಸಿ ಅರಗಿಸಿಕೊಂಡು ಬೆರೆಯಲು ಸಮರ್ಥವಾದರೆ ಮಾತ್ರ ಕನ್ನಡ ಉಳಿಯುತ್ತದೆ. ಹೊಸ ಪದಗಳಿಗೆ, ಹೊಸ ಆಲೋಚನೆಗಳಿಗೆ ಒಳಗಾದರೆ ಮಾತ್ರ ಕನ್ನಡ ಉಳಿಯುತ್ತದೆ. ಪರಿಶುದ್ಧವಾಗಿ ಮಡಿಯಾಗಿ ಉಳಿದರೆ ಮಾತ್ರ ಕನ್ನಡ ತನಗಿಂತ ಬಲಿಷ್ಟ ಸುಪುಷ್ಟ ಭಾಷೆಯಿಂದ ನಾಶವಾಗುತ್ತದೆ.

ಕಾವೇರಿ ವಿವಾದದ ಬಗ್ಗೆ:

ರಾಜ್ಯ ರಾಜ್ಯಗಳ ನಡುವಿನ ವಿವಾದಗಳನ್ನು ಸರ್ವೊಚ್ಚ ನ್ಯಾಯಾಲಯ ಇಬ್ಬರು ವ್ಯಕ್ತಿಗಳ ನಡುವಿನ ವಿವಾದಗಳಂತೆ ಪರಿಗಣಿಸಿ ತೀರ್ಮಾನಿಸುವುದರಲ್ಲಿ ಅರ್ಥವೇ ಇಲ್ಲ. ಕಾವೇರಿ ನದಿ ವಿವಾದದ ದೆಸೆಯಿಂದ ಯಾವನಾದರೂ ಒಬ್ಬ ಬುದ್ಧಿ ಶೂನ್ಯ ತಮಿಳ ಎಲ್ಲಾದರೂ ಆಣೆಕಟ್ಟೆ ಒಡೆಯುವ ಪ್ರಯತ್ನ ಮಾಡಿದರೂ ಸಾಕು, ನಾನಾ ಕಾರಣಗಳಿಗಾಗಿ ಹೊಗೆಯಾಡುತ್ತಿರುವ ಪರಸ್ಪರ ಅಸಹನೆ ಭುಗಿಲೇಳುತ್ತದೆ. ಈ ಸೂಕ್ಷ್ಮ ಸಾಂಸ್ಕೃತಿಕ ಆಯಾಮಗಳನ್ನು ನಾಲ್ಕು ಗೋಡೆ ಮಧ್ಯೆ ಕುಳಿತು ತೀರ್ಪು ಕೊಡುವ ನ್ಯಾಯಾಧೀಶರು ಅರಿಯುವುದು ಸಾಧ್ಯವೇ ಇಲ್ಲ, ಮತ್ತು ಅದಕ್ಕೆ ಅವರಿಗೆ ಯಾವ ಪೂರ್ವ ಸಿದ್ಧತೆಗಳೂ ಇಲ್ಲ.

ಎಮ್.ಈ.ಎಸ್ ನ ಮೋರೆಗೆ ಮಸಿ ಬಳಿದ ಪ್ರಸಂಗದ ಬಗ್ಗೆ:

ಕನ್ನಡ ದ್ರೋಹಿಗಳಿಗೆ ಮಸಿಯಲ್ಲದೆ ಫೇರ್ ಅಂಡ್ ಲವ್ಲಿ ಹಚ್ಚಬೇಕಾ? ನಮ್ಮ ಭಾಷೆ ಉಳಿಸಿ ಎಂದು ಕಾಲಿಗೆ ಬಿದ್ದು ಕೇಳೋಣ. ಆದರೆ, ಅದನ್ನೇ ವೀಕ್ನೆಸ್ ಎಂದು ಭಾವಿಸಿ ನಮ್ಮನ್ನು ಕಾಲ ಕಸವಾಗಿ ಕಂಡರೆ ಕಪಾಳಕ್ಕೆ ಹೊಡೆಯುವ ಅನಿವಾರ್ಯ ಎದುರಾಗುತ್ತದೆ. ಮಸಿ ಬಳಿದಿದ್ದು ತಪ್ಪು ಅನ್ನುವ ಸಾಹಿತಿಗಳು ಪ್ರಜಾಸತ್ತಾತ್ಮಕವಾಗಿ ಭಾಷೆ ಉಳಿವಿಗಾಗಿ ಏನು ಮಾಡಿದ್ದಾರೆ ಎಂಬ ಬಗ್ಗೆ ಚರ್ಚೆ ನಡೆಸಿದರೆ ಏನೇನೂ ಸಿಗುವುದಿಲ್ಲ. ಸರ್ಕಾರದಿಂದ ವಿವಿಧ ಪ್ರಶಸ್ತಿ, ಮತ್ತಿತರ ಉಪಚಾರಗಳನ್ನು ಪಡೆಯುತ್ತಿದ್ದರೆ ವಿರೋಧಿಸುವ ಪ್ರಾಮಾಣಿಕ ಪ್ರಜ್ಞೆ, ಕಳಕಳಿ ಬರುವುದಾದರೂ ಎಲ್ಲಿಂದ?

ಕನ್ನಡ ಸಾಫ್ಟವೇರ್ ಬಗ್ಗೆ:

ಇ-ಆಡಳಿತದಲ್ಲಿ ಕನ್ನಡ ಬಳಕೆಗೆ ಸೂಕ್ತ ಸಾಫ್ಟವೇರ್ ಬೇಕು. ಇಲ್ಲವಾದರೆ ಕನ್ನಡಿಗರು ಫಿನಿಷ್. ಒಂದು ಭಾಷೆ ಬಳಕೆ ತಪ್ಪಿಸುವುದರಿಂದ ಅದನ್ನು ಕೊಂದು ಹಾಕೋದು ಸುಲಭಾ ಕಣ್ರೀ. ಇದೇ ಈಗಿನ ಅಪಾಯ.

ಮೇಲಿನ ಎಲ್ಲ ಮಾತುಗಳು ತೇಜಸ್ವಿಯವರು ಕಳೆದ ಮೂವತ್ತು-ನಲವತ್ತು ವರ್ಷಗಳ ನಡುವೆ ಆಡಿದಂತದ್ದು. ಎಡ-ಬಲದ ತಿಕ್ಕಾಟದಲ್ಲಿ ನಮ್ಮ ಇಂದಿನ ಹೆಚ್ಚಿನ ಬರಹಗಾರರು ಮುಳುಗಿರುವಾಗ ಎರಡು ಕಡೆಯ ಅತಿರೇಕಗಳನ್ನು ಬಯಲಿಗೆಳೆಯುತ್ತ, ಅತ್ಯಂತ ಸಮತೂಕದಿಂದ ಯಾವುದು ಕನ್ನಡ ಪರ ಅನ್ನುವುದನ್ನು ಪ್ರತಿಪಾದಿಸಿದ ಅವರ ಮಾತುಗಳು ರಾಜಕೀಯವಾಗಿ, ಆರ್ಥಿಕವಾಗಿ ಅಬ್ಬೇಪಾರಿ ಸ್ಥಿತಿಯಲ್ಲಿರುವ ಇಂದಿನ ಕನ್ನಡಿಗರಿಗೆ, ಕರ್ನಾಟಕಕ್ಕೆ ಎಂದಿಗಿಂತ ಹೆಚ್ಚು ಪ್ರಸ್ತುತ.

ಪುಸ್ತಕ ಪರಿಚಯ: ಈ ಅಂಕಣದಲ್ಲಿರುವ ಅವರ ಹೆಚ್ಚಿನ ಮಾತುಗಳನ್ನು “ಹೊಸ ವಿಚಾರಗಳು” ಅನ್ನುವ ಅವರ ಪುಸ್ತಕದಿಂದ ಆಯ್ದುಕೊಂಡಿದ್ದೇನೆ. ತೇಜಸ್ವಿಯವರ ಸಾರ್ವಜನಿಕ ಬದುಕನ್ನು ಅರಿಯಲು ಬಯಸುವವರಿಗೆ ಇದೊಂದು ಅಪರೂಪದ ಪುಸ್ತಕ.

 

This entry was posted in ಒಕ್ಕೂಟ ವ್ಯವಸ್ಥೆ, ಕನ್ನಡ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s