“ಕನ್ನಡದಲ್ಲೇ ಎಲ್ಲ ಇದೆ” ಎಂದು ಹೇಳುವುದು ಯಾವಾಗ ಸಾಧ್ಯ ಗೊತ್ತಾ?

ಹತ್ತು ವರುಶಗಳ ಹಿಂದಿನ ಮಾತು. ಆಗಷ್ಟೇ ಓದು ಮುಗಿಸಿ ಬೆಂಗಳೂರಿನಲ್ಲಿ ಕೆಲಸವೊಂದನ್ನು ಹಿಡಿದಿದ್ದೆ. ಕಚೇರಿಯಿದ್ದ ಕೋರಮಂಗಲದ ಬೀದಿಗಳಲ್ಲಿ ಓಡಾಡುತ್ತಿದ್ದಾಗ, ಕೆಲವೊಮ್ಮೆ ಒಂದೇ ಒಂದು ಕನ್ನಡ ಪದವೂ ಕಿವಿಗೆ ಬೀಳುತ್ತಿರಲಿಲ್ಲ. ಆಗೆಲ್ಲಾ ನಮ್ಮ ಊರಿನಲ್ಲೇ ತಬ್ಬಲಿಯಾದಂತೆ ಅನಿಸುತ್ತಿತ್ತು.

ಬೆಂಗಳೂರಿನಲ್ಲಿ ಹುಟ್ಟುವ ಕೆಲಸಗಳಲ್ಲಿ ಹೆಚ್ಚಿನವು ಕನ್ನಡಿಗರಿಗೆ ಸಿಗದೇ ಇರುತ್ತಿದ್ದುದನ್ನು ನೋಡಿದಾಗ, ಸಾಕಷ್ಟು ಪ್ರಶ್ನೆಗಳು ಏಳುತ್ತಿದ್ದವು. ನಮ್ಮ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಆಫೀಸ್ ಬಾಯ್ ಕೆಲವರು ಹಿಂದಿಯವರೆದುರು ತೋರ‍್ಪಡಿಸುತ್ತಿದ್ದ ಕೀಳರಿಮೆ, ತಮಗೆ ಹಿಂದಿ ಬರುವುದಿಲ್ಲ ಎಂದು ಮರುಕಪಡುತ್ತಿದ್ದುದನ್ನು ನೋಡಿದಾಗ, ಮನಸಿನಲ್ಲೇ ಸಾಕಷ್ಟು ಪ್ರಶ್ನೆಗಳೇಳುತ್ತಿದ್ದವು. “ನಮ್ಮ ಊರಿನಲ್ಲೇ, ನಮಗೆ ಹಿಂದಿ ಬರಲ್ಲವಲ್ಲ ಎಂದು ಮರುಕಪಟ್ಟುಕೊಳ್ಳುವ ಸ್ಥಿತಿ ನಮಗ್ಯಾಕೆ ಬಂದಿದೆ?” ಎಂಬುದು ಹಲದಿನಗಳವರೆಗೂ ನನ್ನನ್ನು ಕಾಡಿತ್ತು. ಒಮ್ಮೆ ಆಫೀಸ್ ಬಾಯ್ ಒಬ್ಬರನ್ನು ಹಿಡಿದು ಕೇಳಿಯೇಬಿಟ್ಟಿದ್ದೆ. ಆಗ ಆತ ಹೇಳಿದ್ದುದು “ನಾವು ಕನ್ನಡ ಮೀಡಿಯಮ್ಮು ಸಾರ್, ಅದಕ್ಕೇ ಧೈರ‍್ಯ ಕಮ್ಮಿ. ನೀವು ನೋಡಿ ಇಂಗ್ಲೀಶ್ ಮೀಡಿಯಮ್ಮು, ಅದಿಕ್ಕೆ ಎಲ್ಲಾರ ಜೊತೆ ಧೈರ‍್ಯವಾಗಿ ಇರ‍್ತೀರಾ!”.
ಕನ್ನಡ ಮಾಧ್ಯಮದಲ್ಲೇ ಓದಿ ಬೆಳೆದಿದ್ದ ನನಗೆ, ಕನ್ನಡ ಮೀಡಿಯಂ ಅಂದರೆ ಕೆಲವರು ಕೀಳು ಅಂದುಕೊಳ್ಳುತ್ತಾರೆ ಎಂಬುದು ಗೊತ್ತಾಗಿದ್ದೇ ಅವತ್ತು. ನನ್ನ ಕೆಲಸದ ಸಲುವಾಗಿ ಒಡನಾಟ ಇಟ್ಟುಕೊಂಡಿದ್ದ ಫ್ರಾನ್ಸಿನವರು, ಹರಕು-ಮುರಕು ಇಂಗ್ಲೀಶು ಮಾತನಾಡಿಕೊಂಡಿದ್ದರೂ, ಕೀಳರಿಮೆಯಿಂದ ಬಳಲುತ್ತಿರಲಿಲ್ಲ. “ಅವರಿಗಿಲ್ಲದ ಕೀಳರಿಮೆ ಕನ್ನಡಿಗರಿಗ್ಯಾಕೆ?” ಎಂಬ ಪ್ರಶ್ನೆ ಎದ್ದಿತು. ಅದೇ ವರುಶ ನನ್ನ ದೂರದ ನೆಂಟರೊಬ್ಬರು ತಮ್ಮ ಮಗುವನ್ನು ಬೆಂಗಳೂರಿನ ಇಂಗ್ಲೀಶ್ ಮಾಧ್ಯಮ ಶಾಲೆಗೆ ಸೇರಿಸಿದರು. “ಕನ್ನಡ ಮಾಧ್ಯಮ ಶಾಲೆಗೆ ಸೇರಿಸಬೇಕಿತ್ತು, ಇಂಗ್ಲೀಶ್ ಮೀಡಿಯಂ ಇವಾಗಲೇ ಯಾಕೆ?” ಅಂತ ಅವರಲ್ಲಿ ಕೇಳಿದ್ದೆ. ಅದಕ್ಕವರು ತಿರುಗಿ ನನ್ನನ್ನು ಕೇಳಿದ್ದು “ಕನ್ನಡದಲ್ಲಿ ಏನಿದೆ? ಕನ್ನಡದಲ್ಲಿ ಏನಾಗುತ್ತೆ?”

ನಮ್ಮ ಇಲ್ಲಗಳ ಮಧ್ಯ ನಾವಿದ್ದೇವೆ
ಹೌದು. ಇವತ್ತಿನ ದಿನ ಕನ್ನಡದಲ್ಲಿ ಇಂಜಿನಿಯರಿಂಗ್, ಮೆಡಿಕಲ್ ಮುಂತಾದ ಉನ್ನತ ಕಲಿಕೆ ಸಾಧ್ಯವಿಲ್ಲ. ಅಂತಹ ಕಲಿಕೆ ಕನ್ನಡದಲ್ಲಿ ಸಾಧ್ಯವಾಗಿಸುವತ್ತ ಕನ್ನಡ ಸಮಾಜವು ಇನ್ನೂ ದುಡಿಯಬೇಕಿದೆ. “ಇಂಜಿನಿಯರಿಂಗ್, ಮೆಡಿಕಲ್, ಎಮ್.ಎಸ್.ಸಿ ಮುಂತಾದ ಉನ್ನತ ಕಲಿಕೆಯನ್ನು ಹೇಗಿದ್ದರೂ ಇಂಗ್ಲೀಶಿನಲ್ಲಿಯೇ ಓದಬೇಕು, ಹಾಗಾಗಿ ಮೊದಲ ಹಂತದಿಂದಲೇ ತಮ್ಮ ಮಗು ಇಂಗ್ಲೀಶಿನಲ್ಲಿ ಓದಲಿ” ಎಂದು ಹಲವರು ಯೋಚಿಸುವುದುಂಟು. ಇಂಗ್ಲೀಶ್ ಮಾಧ್ಯಮಕ್ಕಾಗಿ ಕನ್ನಡಿಗರು ಹಾತೊರೆಯುವುದನ್ನು ಕನ್ನಡದ ಮೇಲಿನ ಅಭಿಮಾನದ ಕೊರತೆಯೆಂದೋ, ಇಂಗ್ಲೀಶ್ ವ್ಯಾಮೋಹವೆಂದೋ ಕರೆದುಬಿಡುವುದು, ಕನ್ನಡ ಸಮಾಜದೆದುರಿರುವ ಚಾಲೆಂಜನ್ನು ಮೇಲ್ನೋಟದಿಂದಲೇ ಅಳೆದು ಗುಡಿಸಿಹಾಕುವ ಕೆಲಸವಾಗಿದೆ. ಕನ್ನಡದಲ್ಲಿ ಅರಿಮೆಯ ವಿಷಯಗಳನ್ನು ಹೇಳುವ/ಬರೆಯುವ/ಕಲಿಸುವ ಕೆಲಸ ಇನ್ನೂ ಆಗಬೇಕಿದೆ. ಇದು ಕಷ್ಟದ ಕೆಲಸವೇ ಸರಿ. ಇಂತಹ ಕಷ್ಟದ ಕೆಲಸವನ್ನು ಎದುರಿಸಿ ತಮ್ಮ ತಮ್ಮ ನುಡಿಗಳಲ್ಲಿ ಎಲ್ಲಾ ವಿಷಯಗಳನ್ನೂ ಹೇಳಬಲ್ಲ, ಬರೆಯಬಲ್ಲ ಮತ್ತು ಕಲಿಸಬಲ್ಲಂತಹ ಏರ‍್ಪಾಡು ಕಟ್ಟಿಕೊಂಡಿದ್ದರಿಂದಲೇ ಇವತ್ತು ಜಪಾನು, ತೆಂಕಣ ಕೊರಿಯಾ, ಇಸ್ರೇಲು, ಫ್ರಾನ್ಸ್, ಜರ‍್ಮನಿ ನಾಡುಗಳು ಮುಂದುವರೆದ ನಾಡುಗಳೆನಿಸಿಕೊಂಡಿರುವುದು.

ಕನ್ನಡದಲ್ಲಿಯೂ ಅರಿಮೆಯ ವಿಷಯಗಳನ್ನು ಹೇಳುವ/ಬರೆಯುವ/ಕಲಿಸುವ ಕೆಲಸಗಳು ಆಗಬೇಕಿದೆ. ಆಗ ಮಾತ್ರ, ಎಲ್ಲಾ ಕನ್ನಡಿಗರೂ ಅರಿಮೆ ಪಡೆದುಕೊಳ್ಳಲು ಸಾಧ್ಯವಾಗುವುದು. ಇವತ್ತಿನ ದಿನ ಇಂಗ್ಲೀಶ್ ಎಂಬ ಗೋಡೆಯನ್ನು ದಾಟಬಲ್ಲ ಕನ್ನಡಿಗರು ಮಾತ್ರ, ಅರಿಮೆ ಗಳಿಸಿಕೊಳ್ಳಬಲ್ಲರು ಎಂಬಂತಿದೆ. ಈ ಏರ‍್ಪಾಡು, ಎಲ್ಲಾ ಕನ್ನಡಿಗರ ಏಳಿಗೆ ದ್ರುಷ್ಟಿಯಿಂದ ಒಳಿತಲ್ಲ. ಈ ಏರ‍್ಪಾಡಿನಿಂದಲೇ ಇವತ್ತು ಬಹುಪಾಲು ಕನ್ನಡಿಗರು ಉದ್ದಿಮೆಯಲ್ಲಾಗಲೀ, ಅರಿಮೆಯಲ್ಲಾಗಲೀ ಹೆಚ್ಚಿನದೇನೂ ಸಾಧಿಸಲು ಆಗಿಲ್ಲ. ಮುಂದುವರೆದ ನಾಡುಗಳ ಜನರಲ್ಲಿಲ್ಲದ ಕೀಳರಿಮೆ ನಮ್ಮನ್ನು ಕಾಡುತ್ತಿರುವುದಕ್ಕೆ, ನಮ್ಮ ನಾಡಿನಲ್ಲಿ ಹುಟ್ಟುವ ಕೆಲಸಗಳನ್ನು ಹೊರನಾಡಿನವರು ಬಾಚಿಕೊಳ್ಳುತ್ತಿರುವುದಕ್ಕೆ, ಅರಿಮೆಯಲ್ಲಿ ನಾವು ಹಿಂದೆ ಬಿದ್ದಿರುವುದೂ ಒಂದು ಕಾರಣವಾಗಿದೆ.

ಇಂದಿನ ತೊಂದರೆಗಳೇನು?
ಕನ್ನಡದಲ್ಲಿ ಅರಿಮೆ ಬರಹಗಳನ್ನು ಮಾಡಲು, ಅರಿಮೆ ವಿಷಯಗಳನ್ನು ಚರ‍್ಚಿಸಲು, ಸಾಕಷ್ಟು ಪದಗಳ ಕೊರತೆಯಿದೆ. ಗಣಿತವನ್ನು ಕನ್ನಡದಲ್ಲಿಯೇ ಬರೆಯುತ್ತೇನೆ ಎಂದು ಪಟ್ಟು ಹಿಡಿದು ಯಾರಾದರೂ ಕೂತರೂ, ಕ್ಯಾಲ್ಕುಲಸ್ಸಿಗೆ ಏನು ಹೇಳಬೇಕು, ಇಂಟಗ್ರೇಶನ್ನಿಗೆ ಏನು ಹೇಳಬೇಕು, ಎಂಬ ಗೊಂದಲದಲ್ಲಿಯೇ ಸಿಕ್ಕಿ ಹಾಕಿಕೊಳ್ಳುವುದು ಕಟ್ಟಿಟ್ಟ ಬುತ್ತಿ. ಈ ಒಂದು ಕೊರತೆಯನ್ನು ಹೋಗಲಾಡಿಸಲು ಹಲವರು ಕನ್ನಡಿಗರು ತಮ್ಮದೇ ಬಗೆಯಲ್ಲಿ ದುಡಿದಿದ್ದಾರೆ. ಆದರೆ, ಅವರೆಲ್ಲರೂ ಮಾಡಿರುವಂತಹ ಒಂದು ಸಾಮಾನ್ಯ ತಪ್ಪೆಂದರೆ, ತೀರಾ ಹೆಚ್ಚೆನಿಸುವಶ್ಟು ಸಂಸ್ಕ್ರುತದ ಮೊರೆ ಹೋಗಿರುವುದು. “ಕನ್ನಡದಲ್ಲಿ ಪದಗಳ ಕೊರತೆ ಇರುವುದರಿಂದ, ಸಂಸ್ಕ್ರುತದ ಪದಗಳನ್ನು ಎರವಲು ತಂದರೆ ಏನು ತೊಂದರೆ?” ಎಂಬ ಪ್ರಶ್ನೆ ಹಲವರಲ್ಲಿ ಉಂಟಾಗಬಹುದು. ತೊಂದರೆ ಇಷ್ಟೇ, “ಕನ್ನಡಿಗರಿಗೆ ನೇರವಾಗಿ ಅರ್ಥವಾಗುತ್ತದೋ ಇಲ್ಲವೋ ಎಂಬುದನ್ನು ಯೋಚಿಸದೆಯೇ ಸಂಸ್ಕ್ರುತದಿಂದ ಎರವಲು ತಂದಿರುವುದು”. ಹಾಗಾಗಿಯೇ “ವ್ಯುತ್ಕ್ರಮ, ಅಕರಣಿಕಾರಕ, ಸಂಯುಗ್ಮೀಕರಣ” ಮುಂತಾದ ಪದಗಳು ಕನ್ನಡ ಮಾಧ್ಯಮ ಗಣಿತ ಪಠ್ಯಪುಸ್ತಕಗಳಲ್ಲಿ ಕಾಣಬರುತ್ತಿರುವುದು.

ಅರಿವಿನ ಹೊನಲು ಹುಟ್ಟಿದ ಕತೆ
ಕನ್ನಡದಲ್ಲಿಯೇ ಉನ್ನತ ಕಲಿಕೆ ನಡೆಸಲು ಅವಕಾಶವೇ ಇಲ್ಲದಿರುವುದು ಒಂದು ತೊಂದರೆಯಾದರೆ, ಈಗಾಗಲೇ ಇರುವ ಅರಿಮೆ ಬರಹಗಳು ಮತ್ತು ಪುಸ್ತಕಗಳಲ್ಲಿ ತೀರಾ ಹೆಚ್ಚೆನಿಸುವಶ್ಟು ಎರವಲು ಪದಗಳೇ ತುಂಬಿಕೊಂಡು ಸಾಮಾನ್ಯ ಕನ್ನಡಿಗರಿಂದ ದೂರವೇ ಉಳಿದಿರುವುದು ಇನ್ನೊಂದು ತೊಂದರೆ. ಇವೆರಡೂ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ತುಂಬಾ ಕೆಲಸಗಳಾಗಬೇಕಿದೆ. ಅರಿಮೆ ವಲಯದಲ್ಲಿ ಕನ್ನಡದ್ದೇ ಪದಗಳ ಒಂದು ಪದನೆರಕೆಯೇ ಬೇಕಿದೆ. ಕನ್ನಡದ್ದೇ ಪದಗಳನ್ನು ಬಳಸಿ, ಪದಗಳಿಲ್ಲದಿದ್ದರೆ ಹೊಸತಾಗಿ ಪದಗಳನ್ನು ಕಟ್ಟಿ, ಬುಡಮಟ್ಟದ ಅರಿಮೆಯಿಂದ ಹಿಡಿದು ಮುಂಚೂಣಿ ಅರಿಮೆಯವರೆಗೆ ಕನ್ನಡದಲ್ಲೇ ವಿಷಯಗಳನ್ನು ಬರೆಯಲಾದ ಹೊತ್ತಗೆಗಳು ಮೂಡಿಬರಬೇಕಿದೆ. ಆಗಬೇಕಾದ ಈ ಕೆಲಸಗಳ ಪಟ್ಟಿ ನೋಡಿದಾಗ, ಇದನ್ನು ಒಂದು ಸಂಸ್ಥೆಯ ಮಟ್ಟದಲ್ಲಿ ಮಾತ್ರ ಮಾಡಲು ಸಾಧ್ಯ ಎಂದನಿಸುತ್ತದೆ. ಸಂಸ್ಥೆಯಾಗಬೇಕು, ಸಂಸ್ಥೆ ಕಟ್ಟಬೇಕು ಎಂದು ಕಾಯುತ್ತಾ ಕೂರುವ ಬದಲು, ಸಣ್ಣ ಮಟ್ಟದಲ್ಲಿಯಾದರೂ ಕೆಲಸ ನಾವೇ ಶುರು ಮಾಡೋಣ ಎಂದು ನಾವು ಕೆಲವರು ಮಾತನಾಡಿಕೊಂಡಿದ್ದೆವು. ಕನ್ನಡದ್ದೇ ಪದಗಳ ಬಳಕೆ, ಮತ್ತು ಕನ್ನಡದಲ್ಲಿ ಎಲ್ಲಾ ಬಗೆಯ ಕಲಿಕೆಯನ್ನು ಸಾಧ್ಯವಾಗಿಸುವುದು, ನಮ್ಮ ನಾಡಿಗೆ ಒಂದು ವರವಾಗುವುದು ಎಂಬ ಗಟ್ಟಿ ನಂಬಿಕೆ ಹೊಂದಿದ್ದ ನಾವು ಕೆಲವು ಗೆಳೆಯರು ಒಟ್ಟು ಸೇರಿ ಶುರು ಮಾಡಿದುದೇ ಹೊನಲು (honalu.net) ಮಿಂಬಾಗಿಲು (portal). ಕನ್ನಡದಲ್ಲಿಯೇ ಪದಗಳನ್ನು ಕಟ್ಟಿ, ಅವನ್ನು ಬರಹಗಳಲ್ಲಿ ಬಳಸಿ, ಕನ್ನಡಿಗರ ಮುಂದಿಡುವುದೇ ಹೊನಲಿನಲ್ಲಿ ಕಳೆದೆರಡು ವರುಶಗಳಿಂದ ನಡೆಯುತ್ತಾ ಬಂದಿರುವ ಕೆಲಸ. ಇದೇ ತಿಂಗಳ 15ಕ್ಕೆ ಹೊನಲು ಮಿಂಬಾಗಿಲಿಗೆ ಎರಡು ವರುಶಗಳು ತುಂಬುತ್ತವೆ. ಕನ್ನಡದಲ್ಲಿ ಹಿಂದೆಂದೂ ಇರದಂತಹ ಹಲವಾರು ವಿಷಯಗಳನ್ನು ಬರೆಯುವ ಪ್ರಯತ್ನವನ್ನು ಹೊನಲಿನಲ್ಲಿ ಮಾಡಲಾಗಿದೆ. ಕತೆ, ಕವನಗಳಿಂದಾ ಹಿಡಿದು, ಬಾನರಿಮೆಯವರೆಗೂ ಬರಹಗಳು ಹೊನಲಿನಲ್ಲಿ ಮೂಡಿಬಂದಿವೆ. ಕನ್ನಡನಾಡಿನ ಏಳಿಗೆಯ ನಿಟ್ಟಿನಲ್ಲಿ ಈ ಕೆಲಸವು ಇನ್ನೂ ದೊಡ್ಡಮಟ್ಟದಲ್ಲಿ ಆಗಬೇಕಿದೆ, ಆ ದಿಕ್ಕಿನಲ್ಲಿ ಹೆಜ್ಜೆಯನ್ನು ಹೊನಲು ಮಿಂಬಾಗಿಲ ಮೂಲಕ ಇಟ್ಟಾಗಿದೆ.

ಸಾಗಬೇಕಾದ ದಾರಿ ಹಿರಿದಿದೆ!
ಯಾವುದೇ ಹೊಸ ಕೆಲಸವನ್ನು ಕೈಗೆತ್ತಿಕೊಂಡಾಗಲೂ ಇರುವಂತಹ ಅಳುಕು, ಹೊನಲು ಶುರು ಮಾಡುವಾಗ ನಮಗೂ ಇತ್ತು. “ಎಷ್ಟು ಮಂದಿ ಬರಹಗಾರರು ನಮ್ಮ ಜೊತೆ ನಿಲ್ಲುವರು? ಎಷ್ಟು ಮಂದಿ ಓದುಗರು ನಮ್ಮನ್ನು ಮೆಚ್ಚಿಕೊಳ್ಳುವರು? ದಿನಕ್ಕೆ ಒಂದಾದರೂ ಬರಹ ಮೂಡಿಸಲೇಬೇಕು ಎಂದು ನಮಗೆ ನಾವೇ ಕಟ್ಟಲೆ ಹಾಕಿಕೊಂಡಿರುವೆವು, ಈ ಕಟ್ಟಲೆ ಮುರಿಯದಂತೆ ಬರಹಗಳ ಹರಿವು ಕಾಯ್ದುಕೊಳ್ಳುವುದು ಹೇಗೆ?” ಎಂಬುದೇ ನಮ್ಮನ್ನು ಕಾಡಿದ ಪ್ರಶ್ನೆಗಳು. ಆದರೆ, ಹೊನಲು ಮಿಂಬಾಗಿಲಿಗೆ ಇದುವರೆಗೆ ಸಿಕ್ಕ ಪ್ರತಿಕ್ರಿಯೆ ನಮಗೆ ನೆಮ್ಮದಿ ನೀಡಿರುವುದಂತೂ ಹೌದು. ಇದುವರೆಗೂ 125 ಮಂದಿ ಹೊನಲಿಗಾಗಿ ಬರಹ ಮಾಡಿ ಕಳುಹಿಸಿದ್ದಾರೆ. ಹೊನಲಿನಲ್ಲಿ ಬರಹಗಳ ಕೊರತೆಯೇ ಇರದ ಹಾಗೆ ಬರಹಗಾರರು ನೋಡಿಕೊಂಡಿದ್ದಾರೆ. ಫೇಸ್ಬುಕ್ಕಿನಲ್ಲಿ ಸುಮಾರು 4,250 ಮಂದಿ ಓದುಗರು ನಮ್ಮ ಪುಟವನ್ನು ಮೆಚ್ಚಿಕೊಂಡಿದ್ದಾರೆ. ಇಂಡಿಯಾ ಅಷ್ಟೇ ಅಲ್ಲದೇ, ಬೇರೆ ಬೇರೆ ನಾಡುಗಳಲ್ಲಿ ನೆಲೆಸಿರುವ ಸಾವಿರಾರು ಕನ್ನಡಿಗರು ಪ್ರತಿದಿನ ಹೊನಲಿನಲ್ಲಿ ಮೂಡಿಬರುವ ಬರಹಗಳನ್ನು ಓದುತ್ತಿದ್ದಾರೆ. ಬೇರೆ ಬೇರೆ ವಲಯಗಳಲ್ಲಿ ತೊಡಗಿಕೊಂಡಿರುವ ಹೆಚ್ಚೆಚ್ಚು ಕನ್ನಡಿಗರು ಈ ಕೆಲಸದಲ್ಲಿ ಪಾಲ್ಗೊಂಡು, ಕನ್ನಡದಲ್ಲಿಯೇ ಎಲ್ಲಾ ವಿಷಯಗಳನ್ನು ಬರೆಯಲು ತೊಡಗಿದರೆ, “ಕನ್ನಡದಲ್ಲಿ ಏನಿದೆ?” ಅಂತ ಕೇಳುವವರಿಗೆ  “ಕನ್ನಡದಲ್ಲಿ ಇಷ್ಟೆಲ್ಲಾ ಇದೆ, ನೋಡಿ!” ಎಂದು ತೋರಿಸುವ ದಿನಗಳು ದೂರವಿಲ್ಲ.

This entry was posted in ಕನ್ನಡ, ನುಡಿ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s