ಆರತಿಗೂ ಕೀರುತಿಗೂ ಒಂದೇ ಸಾಕು ಅನ್ನುವ ನಿಲುವು ಯಾಕೆ ತಪ್ಪು ಗೊತ್ತಾ?

ಇತ್ತೀಚೆಗೆ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮಗ ಎಂಬ ಮನೋಭಾವ ಬಿಟ್ಟು ಆರತಿಗೂ, ಕೀರ್ತಿಗೂ ಒಂದೇ ಮಗು ಸಾಕು ಅನ್ನುವ ಮನೋಭಾವನೆ ಬೆಳೆಸಿಕೊಳ್ಳುವಂತೆ ನೀಡಿದ ಹೇಳಿಕೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಹೀಗೊಂದು ಹೇಳಿಕೆ ಕೊಡುವಾಗ ಅವರ ಮನದಲ್ಲಿ ಜನಸಂಖ್ಯಾ ಸ್ಪೋಟದ ಗುಮ್ಮ ಕಾಡಿರಬಹುದು, ಆದರೆ ಕರ್ನಾಟಕಕ್ಕೆ ಇಂದು ಜನಸಂಖ್ಯೆ ಹೆಚ್ಚಳದ ಯಾವುದೇ ಸಮಸ್ಯೆಯಿಲ್ಲ, ಬದಲಿಗೆ ಒಂದೇ ಮಗುವಿನ ನಿಲುವಿನತ್ತ ಸಾಗಿದಷ್ಟು ಜನಸಂಖ್ಯೆ ಕೊರತೆಯ ತೀವ್ರ ಸಮಸ್ಯೆ ಕರ್ನಾಟಕವನ್ನು ಬರುವ ದಿನಗಳಲ್ಲಿ ಕಾಡಬಹುದು ಅನ್ನುವುದು ಅವರ ಗಮನಕ್ಕೆ ಬರಬೇಕಿದೆ.

ಕರ್ನಾಟಕದ ಟಿ.ಎಫ್.ಆರ್ ಈಗ 1.9 !
ಟಿ.ಎಫ್.ಆರ್ ಇಲ್ಲವೇ ಟೋಟಲ್ ಫರ್ಟಿಲಿಟಿ ರೇಟ್ (ಕನ್ನಡದಲ್ಲಿ ಹೆರುವೆಣಿಕೆ) ಅಂದರೆ ಒಂದು ಕುಟುಂಬದಲ್ಲಿ ಹೆಣ್ಣಿಗೆ ಅವಳ ಜೀವಿತಾವಧಿಯಲ್ಲಿ ಸರಾಸರಿ ಎಷ್ಟು ಮಕ್ಕಳಾಗುತ್ತವೆ ಅನ್ನುವುದರ ಅಳತೆ. ಯಾವುದೇ ಜನಾಂಗದ ಜನಸಂಖ್ಯೆ ಏರದೇ ಇಳಿಯದೇ ಸಮತೋಲನ ಸಾಧಿಸಲು ಆ ಜನಾಂಗದ ಹೆರುವೆಣಿಕೆ ಮಟ್ಟ 2.1ರಷ್ಟಿರಬೇಕು ಅನ್ನುವುದನ್ನು ಪ್ರಪಂಚದ ಎಲ್ಲ ನಾಡುಗಳು ಒಪ್ಪಿ ಅದಕ್ಕೆ ತಕ್ಕಂತೆ ತಮ್ಮ ಜನಸಂಖ್ಯಾ ನೀತಿ ರೂಪಿಸಿಕೊಳ್ಳುತ್ತವೆ. ಸದ್ಯಕ್ಕೆ 2.4 ಹೆರುವೆಣಿಕೆ ಇರುವ ಭಾರತವೂ 2.1ರ ಸಮತೋಲನದ ಗುರಿ ತಲುಪುವ ಪ್ರಯತ್ನ ಮಾಡುತ್ತಿದೆ. ಆದರೆ ಈ ಗುರಿಯನ್ನು ತಲುಪಲು ಹಾಕಿಕೊಳ್ಳುತ್ತಿರುವ ಜನಸಂಖ್ಯಾ ನಿಯಂತ್ರಣದ ಆಲೋಚನೆ ಭಾರತದ ವೈವಿಧ್ಯತೆಯನ್ನು ಗಮನದಲ್ಲಿರಿಸಿಕೊಂಡಿಲ್ಲ ಅನ್ನುವುದನ್ನು ಕಾಣಬಹುದಾಗಿದೆ. ಭಾರತ ಒಕ್ಕೂಟ 2.1ರ ಹೆರುವೆಣಿಕೆಯ ಗುರಿ ಸಾಧಿಸುವಾಗ ಒಕ್ಕೂಟದ ಪಾಲುದಾರರಾದ ಕನ್ನಡಿಗರು, ತಮಿಳರು, ತೆಲುಗರು, ಮರಾಠಿಗರು, ಹಿಂದಿಯವರು, ಬೆಂಗಾಲಿಗಳು ಹೀಗೆ ಎಲ್ಲರ ಹೆರುವೆಣಿಕೆಯೂ 2.1ರ ಹತ್ತಿರ ಇರುವಂತೆ ನೋಡಿಕೊಳ್ಳುವ ಕಾಳಜಿ ಇರಬೇಕಿತ್ತಲ್ಲವೇ? ಹಾಗಿರದೇ ಈಗಾಗಲೇ ಸಮತೋಲನದ ಮಟ್ಟದ ಕೆಳಗಿರುವ ರಾಜ್ಯಗಳಿಗೆ ಇನ್ನಷ್ಟು ಜನಸಂಖ್ಯೆ ಇಳಿಸಿಕೊಳ್ಳುವ ಗುರಿಯನ್ನು ಹಿಂದೆ ಇದ್ದ ಯೋಜನಾ ಆಯೋಗ ನೀಡಿತ್ತು. 2011ರ ಜನಗಣತಿಯ ಪ್ರಕಾರ ಕರ್ನಾಟಕದ ಟಿ.ಎಫ್.ಆರ್ ಪ್ರಮಾಣ ಸಮತೋಲನ ಮಟ್ಟಕ್ಕಿಂತ ಕೆಳಗಿಳಿದು 1.9ಕ್ಕೆ ಕುಸಿದಿದೆ. ಆದರೂ ಯೋಜನಾ ಆಯೋಗ 12ನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಕರ್ನಾಟಕಕ್ಕೆ ಕೊಟ್ಟ ಟಿ.ಎಫ್.ಆರ್ ಗುರಿ 1.7 ಆಗಿತ್ತು! ಇದೇ ವೇಗದಲ್ಲಿ ಜನಸಂಖ್ಯೆ ಕುಸಿಯಲು ಬಿಟ್ಟರೆ ಒಂದು ತಲೆಮಾರಿನ ಅವಧಿಯಲ್ಲಿ ಕನ್ನಡ ನಾಡು ತೀವ್ರ ರೀತಿಯ ಜನಸಂಖ್ಯೆಯ ಕೊರತೆಯ ಸಮಸ್ಯೆಯನ್ನು ಅನುಭವಿಸುವ ಎಲ್ಲ ಸಾಧ್ಯತೆಗಳು ನಮ್ಮ ಮುಂದಿವೆ.

ಹೆರುವೆಣಿಕೆ ಕುಸಿದ ನಾಡಲ್ಲೇನಾಗಿದೆ?
ಹೆರುವೆಣಿಕೆ ಸಮತೋಲನದ ಮಟ್ಟಕ್ಕಿಂತ ಕೆಳಗೆ ಕುಸಿದರೆ ಏನಾಗುತ್ತೆ ಅನ್ನುವುದನ್ನು ತಿಳಿಯಲು ಚೈನಾ, ಸಿಂಗಾಪುರ, ಇಟಲಿ, ಜಪಾನಿನಂತಹ ಹಲವಾರು ದೇಶಗಳಲ್ಲಿ ಆಗುತ್ತಿರುವ ತಲ್ಲಣಗಳನ್ನು ಗಮನಿಸಬೇಕು. ಚೈನಾದಲ್ಲಿ ಒಂದೇ ಮಗು ಹೊಂದಬೇಕು ಅನ್ನುವ ನೀತಿಯಿಂದ ಇನ್ನು ಒಂದು ತಲೆಮಾರಿನ ಅವಧಿಯಲ್ಲಿ ಚೈನಾ ಒಂದು ವಯೋವೃದ್ಧರೇ ತುಂಬಿರುವ ದೇಶವಾಗುವ ಸಾಧ್ಯತೆಯನ್ನು ಕಂಡ ಅಲ್ಲಿನ ಸರ್ಕಾರ ಈಗ ತನ್ನ ನೀತಿಯನ್ನು ಸಡಿಲಿಸಿಕೊಂಡು ಎರಡು ಮಕ್ಕಳಿಗೆ ಅವಕಾಶ ಕಲ್ಪಿಸುತ್ತಿದೆ. ಒಂದೇ ಮಗುವಿನ ನೀತಿಯಿಂದಾಗಿ ಲಕ್ಷಾಂತರ ಕುಟುಂಬಗಳಲ್ಲಿ ಒಂದೇ ಮಗುವಿದ್ದು, ಆ ಮಗು ಅಕಾಲಿಕ ಸಾವಿಗೀಡಾಗಿ ತಂದೆ-ತಾಯಿಯರು ಅನಾಥರಾದ ಸಾವಿರಾರು ಪ್ರಕರಣಗಳು ಚೀನಾದಲ್ಲಿ ಸಂಭವಿಸಿದ್ದು ಸರ್ಕಾರದ ನೀತಿ ಮರುಶೀಲನೆಗೆ ಕಾರಣಗಳಲ್ಲೊಂದಾಗಿತ್ತು. ಯುರೋಪಿನ ಇತಿಹಾಸದಲ್ಲಿ ತನ್ನದೇ ಆದ ಸಾಂಸ್ಕೃತಿಕ, ರಾಜಕೀಯ ಹೆಜ್ಜೆ ಗುರುತು ಹೊಂದಿರುವ ಇಟಲಿ ಇಂದು ಸಾಯುತ್ತಿರುವ ದೇಶವೆಂದು ಅಲ್ಲಿನ ಚಿಂತಕರು ಗುರುತಿಸುತ್ತಿದ್ದಾರೆ. 1861ರಲ್ಲಿ ಇಟಲಿ ಒಂದು ಹೊಸ ದೇಶವಾದ ನಂತರ ಇದೇ ಮೊದಲ ಬಾರಿಗೆ ಅಲ್ಲಿನ ಹೆರುವೆಣಿಕೆ 1.43 ಮಟ್ಟಕ್ಕೆ ತಲುಪಿದೆ. ಇದು 1.2ರ ಮಟ್ಟಕ್ಕಿಂತ ಕೆಳಗೆ ಕುಸಿದರೆ ಎಂದಿಗೂ ಸರಿಪಡಿಸಿಕೊಳ್ಳಲಾಗದು ಅನ್ನುವ ಆತಂಕ ಇಂದು ಇಟಲಿಯನ್ನು ವ್ಯಾಪಿಸಿದೆ. 60ರ ದಶಕದಲ್ಲಿ “ಸ್ಟಾಪ್ ಅಟ್ ಟೂ” ಅನ್ನುವ ಅಭಿಯಾನದಡಿ ಎರಡು ಮಕ್ಕಳ ನೀತಿಗೆ ಅಂಟಿಕೊಂಡಿದ್ದ ಸಿಂಗಾಪುರದಲ್ಲಿ ಹೆರುವೆಣಿಕೆ ಕುಸಿತ ಎಷ್ಟು ವ್ಯಾಪಕ ಪ್ರಮಾಣದಲ್ಲಿ ಆಗಿದೆಯೆಂದರೆ, 0.81 ಹೆರುವೆಣಿಕೆ ತಲುಪಿರುವ ಅಲ್ಲೀಗ ಹೊರ ದೇಶದಿಂದ ಜನರನ್ನು ವಲಸೆ ತಂದು ಅವರಿಗೆ ಸಿಂಗಾಪುರದ ನಾಗರೀಕತ್ವ ಕೊಡದೇ ಅಲ್ಲಿನ ಜನಸಂಖ್ಯೆ ಬೆಳೆಸಲು ಸಾಧ್ಯವೇ ಇಲ್ಲದ ಸ್ಥಿತಿಯುಂಟಾಗಿದೆ. ಇತ್ತೀಚೆಗೆ ಅಗಲಿದ ಅಲ್ಲಿನ ನಾಯಕ ಲೀ ಕ್ವಾನ್ ಯೂ ಸಿಂಗಾಪುರದ ನಾಗರೀಕರಿಗೆ ಮೂರು ಮಕ್ಕಳು ಮಾಡಿಕೊಳ್ಳಿ ಎಂದು ಮನವಿ ಮಾಡಿದ್ದರಲ್ಲದೇ, ಮಾಡಿಕೊಂಡರೆ ಸರ್ಕಾರದಿಂದ ಸಾಕಷ್ಟು ಸಹಾಯ ಕಲ್ಪಿಸುವ ಯೋಜನೆಯನ್ನು ಜಾರಿಗೆ ತಂದಿದ್ದರು. ಅಷ್ಟಾದರೂ ಅಲ್ಲಿನ ಸ್ಥಿತಿಯೇನು ಸುಧಾರಿಸಿಲ್ಲ. ಇನ್ನು ಒಂದು ಕಾಲದ ಏಷ್ಯಾದ ಹುಲಿ ಜಪಾನಿನ ಆರ್ಥಿಕತೆ ಕಳೆದ ಎರಡು ದಶಕಗಳಿಂದ ನಿಂತ ನೀರಾಗಿರಲು ಕಾರಣ ಅಲ್ಲಿನ ಕುಸಿದಿರುವ ಜಪಾನಿಯರ ಹೆರುವೆಣಿಕೆ. 1.4ರಲ್ಲಿರುವ ಹೆರುವೆಣಿಕೆಯಿಂದ ವಯಸ್ಸಾದವರೇ ತುಂಬಿರುವ ಜಪಾನಿನಲ್ಲಿ ದುಡಿಯುವ ಕೈಗಳು ಕಡಿಮೆಯಾಗಿ ಹಿರಿಯ ನಾಗರೀಕರನ್ನು ಸಲಹುವ ಯೋಜನೆಗಳಿಗೆ ಸರ್ಕಾರ ತೀವ್ರ ಸಂಪನ್ಮೂಲದ ಕೊರತೆ ಎದುರಿಸುತ್ತಿದೆ. ಜಪಾನಿಗೆ ಇತ್ತೀಚೆಗೆ ಭೇಟಿ ಕೊಟ್ಟಿದ್ದ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮರಳಿ ಬಂದ ನಂತರ ಜಪಾನಿನ ಸ್ಥಿತಿ ತೆಲುಗರಿಗೆ ಬರದಿರಲು ತೆಲುಗರು ಸಮತೋಲನದ ಟಿ.ಎಫ್.ಆರ್ ಸಾಧಿಸಲು ಸಾಧ್ಯವಾಗುವಂತೆ ಎರಡು ಮಕ್ಕಳನ್ನು ಮಾಡಿಕೊಳ್ಳುವುದು ಒಳ್ಳೆಯದು ಅನ್ನುವ ಹೇಳಿಕೆ ಕೊಟ್ಟಿದ್ದರು.

ಇದು ನಮ್ಮ ಅಸ್ತಿತ್ವದ ಪ್ರಶ್ನೆ
ಇದೆಲ್ಲವೂ ಒಂದು ತೆರನಾದರೆ, ಭಾರತದ ವ್ಯವಸ್ಥೆಯಲ್ಲಿ ಅಂತರ್ ರಾಜ್ಯ ವಲಸೆಯ ಮೇಲೆ ಯಾವುದೇ ನಿಯಂತ್ರಣವಿಲ್ಲದಿರುವುದರಿಂದ ತೀವ್ರ ಜನಸಂಖ್ಯೆಯ ಸುಳಿಯಲ್ಲಿ ಸಿಲುಕಿರುವ ಬಿಹಾರ್, ಉತ್ತರಪ್ರದೇಶ ಮುಂತಾದ ಉತ್ತರದ ರಾಜ್ಯಗಳಿಂದ ಜನಸಂಖ್ಯೆಯ ನಿಯಂತ್ರಣ ಸಾಧಿಸಿರುವ ಮಹಾರಾಷ್ಟ್ರ ಮತ್ತು ದಕ್ಷಿಣದ ರಾಜ್ಯಗಳಿಗೆ ಹೊಟ್ಟೆಪಾಡರಸಿ ವ್ಯಾಪಕವಾದ ವಲಸೆ ಈಗಾಗಲೇ ನಡೆಯುತ್ತಿದೆ. ಇದರ ಪ್ರಮಾಣ ಬರುವ ಎರಡು ದಶಕದಲ್ಲಿ ಇನ್ನು ವ್ಯಾಪಕ ಪ್ರಮಾಣದಲ್ಲಿ ಹೆಚ್ಚಬಹುದು ಅನ್ನುವ ಆತಂಕಗಳಿವೆ. ಅನಿಯಂತ್ರಿತ ವಲಸೆ ಒಂದೆಡೆ ನಮ್ಮ ಊರುಗಳ ಮೂಲಭೂತ ಸೌಕರ್ಯಗಳ ಮೇಲೆ ವ್ಯಾಪಕ ಒತ್ತಡ ತರುತ್ತಿದ್ದರೆ ಇನ್ನೊಂದೆಡೆ ನಮ್ಮೂರಿನ ಜನಲಕ್ಷಣ, ಭಾಷೆ, ಸಂಸ್ಕೃತಿಯ ಚಹರೆಯನ್ನೇ ಸರಿಪಡಿಸಿಕೊಳ್ಳಲಾಗದ ಮಟ್ಟದಲ್ಲಿ ತಿರುಚುತ್ತಿವೆ. ಬೆಂಗಳೂರಿನಲ್ಲಿ ಕನ್ನಡಕ್ಕೆ ತೀವ್ರ ರೀತಿಯ ಸವಾಲುಗಳು ಕಂಡು ಬರುತ್ತಿರುವ ಹಿಂದೆ ಈ ವಲಸೆಯ ಪಾತ್ರ ಹಿರಿದಿದೆ. ಇಂತಹ ಹೊತ್ತಿನಲ್ಲಿ ಈಗಾಗಲೇ ಸಮತೋಲನದ ಮಟ್ಟಕ್ಕಿಂತಲೂ ಕೆಳಗಿಳಿದಿರುವ ಕನ್ನಡಿಗರ ಜನಸಂಖ್ಯೆಯನ್ನು ಇನ್ನೂ ಕಡಿಮೆ ಮಾಡಿಕೊಳ್ಳಿ ಎಂದು ಹೊರಟರೆ ಮುಂದಿನ ಎರಡು ದಶಕದಲ್ಲಿ ಜಪಾನಿಯರು, ಇಟಾಲಿಯನ್ನರು ಎದುರಿಸುತ್ತಿರುವ ಸ್ಥಿತಿಯನ್ನೇ ಕನ್ನಡಿಗರ ಮುಂದೂ ತರಬಹುದು. 2011ರ ಜನಗಣತಿಯ ಪ್ರಕಾರ ಉಡುಪಿ, ಕೊಡಗು, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡದಂತಹ ಜಿಲ್ಲೆಗಳಲ್ಲಿ ಟಿ.ಎಫ್.ಆರ್ ಪ್ರಮಾಣ 1.5ಕ್ಕಿಂತಲೂ ಕೆಳಗಿಳಿದಿದೆ. ಇಲ್ಲೆಲ್ಲ ಕೃಷಿ, ಕೈಗಾರಿಕೆಗಳಿಗೆ ಕೆಲಸಕ್ಕೆ ಜನರೇ ಸಿಗದೇ ಮಿನಿ ಜಪಾನಿನಂತಾಗಿವೆ. ಕರಾವಳಿ, ಮಲೆನಾಡಿನ ಗದ್ದೆಗಳಲ್ಲಿ, ತೋಟಗಳಲ್ಲಿ ಹೊರ ರಾಜ್ಯದಿಂದ ಉದ್ಯೋಗ ಅರಸಿ ಬರುತ್ತಿರುವವರ ಸಂಖ್ಯೆಯೂ ತೀವ್ರಗತಿಯಲ್ಲಿ ಏರಿಕೆ ಕಾಣುತ್ತಿದೆ. ಇವೆಲ್ಲವೂ ಕರ್ನಾಟಕದ ಜನಸಂಖ್ಯೆಯನ್ನು ಸಮತೋಲನದ ಮಟ್ಟದಲ್ಲಿ ಕಾಯ್ದುಕೊಳ್ಳುವತ್ತ ತುರ್ತು ಗಮನ ಹರಿಸಬೇಕಿರುವುದನ್ನು ಎತ್ತಿ ತೋರುತ್ತಿವೆ. ಸಿದ್ದರಾಮಯ್ಯನವರಿಗೆ ಇದು ತಿಳಿಯಬೇಕಿದೆ.

Advertisements
This entry was posted in ಕರ್ನಾಟಕ, ಡೆಮಾಗ್ರಫಿ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s