ಇತ್ತೀಚೆಗೆ ಕರ್ನಾಟಕದಲ್ಲೇ ಹುಟ್ಟಿ ಬೆಳೆದ ಕೇಂದ್ರ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಒಂದರಲ್ಲಿ ಕನ್ನಡಕ್ಕೆ ಒದಗಿರುವ ಸ್ಥಿತಿಯ ಬಗ್ಗೆ ಗೆಳೆಯರೊಬ್ಬರು ತಮ್ಮ ಅನುಭವ ಹಂಚಿಕೊಂಡರು. ಎಲ್ಲೇ ಹೋದರೂ ಕನ್ನಡದಲ್ಲಿ ಗ್ರಾಹಕ ಸೇವೆಗಾಗಿ ಶಾಂತಿಯುತ ಅಸಹಕಾರ ಚಳುವಳಿಗೆ ಇಳಿಯುವ ಅವರು ಕೇಂದ್ರ ಸರ್ಕಾರ ಕಲ್ಪಿಸುವ ಎಲ್ಲ ಗ್ರಾಹಕ ಸೇವೆಗಳಲ್ಲಿ ಬಿಗಡಾಯಿಸುತ್ತಿರುವ ಕನ್ನಡದ ಸ್ಥಿತಿಯ ಬಗ್ಗೆ ತೀವ್ರವಾಗಿ ನೊಂದಿದ್ದರು. ಅವರಿಗಾದ ಅನುಭವ ಹೀಗಿತ್ತು.
ಇದು ಕರ್ನಾಟಕದ ಬ್ಯಾಂಕುಗಳಲ್ಲಿನ ಸ್ಥಿತಿ
ಬೆಂಗಳೂರಿನ ಜೆಪಿನಗರದಲ್ಲಿರುವ ಈ ಬ್ಯಾಂಕಿನ ಕಚೇರಿಗೆ ತಮ್ಮ ಖಾತೆಗೆ ಹಣ ಜಮಾಯಿಸಲು ತೆರಳಿದ್ದ ಗೆಳೆಯರು, ಗ್ರಾಹಕರು ಯಾವುದೇ ಸರತಿಸಾಲಲ್ಲಿ ನಿಲ್ಲುವ ಅಗತ್ಯವಿಲ್ಲದೇ ತಾವೇ ಹಣ ಜಮಾವಣೆ ಮಾಡುವ ಅವಕಾಶ ಕಲ್ಪಿಸಿರುವ ಹಣ ತುಂಬುವ ಕಿಯಾಸ್ಕಿಗೆ ಭೇಟಿ ನೀಡಿದ್ದಾರೆ. ಆ ಯಂತ್ರವನ್ನು ಕನ್ನಡದಲ್ಲಿ ಬಳಸಲು ಅವಕಾಶವಿದೆಯೇ ಎಂದು ಪರಿಶೀಲಿಸಿದಾಗ ಅಲ್ಲಿ ಕೇವಲ ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಆಯ್ಕೆ ಕಂಡ ಗೆಳೆಯರು ಈ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಜೊತೆ ಮಾತನಾಡಿ ತಮ್ಮ ದೂರು ಸಲ್ಲಿಸಲು ಕಾಯುತ್ತಿದ್ದಾಗ, ಅಲ್ಲಿ ಈ ಕಿಯಾಸ್ಕಿನ ಬದಲು ಸರತಿ ಸಾಲಲ್ಲೇ ನಿಂತು ಹಣ ತುಂಬಲು ಪ್ರಯತ್ನಿಸುತ್ತಿದ್ದ ಹಲವು ಕೆಳ ಮಧ್ಯಮ ವರ್ಗದ ಕನ್ನಡಿಗರನ್ನು ನೋಡಿದ್ದಾರೆ. ಅವರಲ್ಲಿ ಬಹಳಷ್ಟು ಜನರು ಬ್ಯಾಂಕಿನ ಸಿಬ್ಬಂದಿಯನ್ನೇ ತಮ್ಮ ಅರ್ಜಿ ತುಂಬಿ ಕೊಡಲು ಕೋರಿಕೊಳ್ಳುತ್ತ ಒದ್ದಾಡುತ್ತಿದ್ದದ್ದನ್ನು, ತಮ್ಮ ಕೆಲಸದ ನಡುವೆ ಇಂತಹ ಹಲವು ಒತ್ತಾಯದಿಂದ ಸಿಡಿಮಿಡಿಗೊಂಡಿದ್ದ ಸಿಬ್ಬಂದಿಯನ್ನು ಕಂಡಿದ್ದಾರೆ. ಅರ್ಜಿ ನಮೂನೆಗಳನ್ನು ಪರಿಶೀಲಿಸಿದಾಗ ಅದರಲ್ಲೆಲ್ಲೂ ಕನ್ನಡದಲ್ಲಿ ಬರೆಯುವ ಆಯ್ಕೆಯಿಲ್ಲ ಅನ್ನುವುದನ್ನು ಕಂಡುಕೊಂಡ ಗೆಳೆಯರು ಮ್ಯಾನೇಜರ್ ಬಳಿ ಈ ಎಲ್ಲ ವಿಷಯ ಪ್ರಸ್ತಾಪಿಸಲು ಕಾಯುತ್ತಿದ್ದಾಗಲೇ ಹಣತುಂಬುವ ಕಿಯಾಸ್ಕಿಗೆ ಬಂದ ಹಿಂದಿ ಭಾಷಿಕ ಕಟ್ಟಡ ಕಾರ್ಮಿಕರೊಬ್ಬರು ಯಾರ ಸಹಾಯವೂ ಇಲ್ಲದೇ ಹಿಂದಿಯಲ್ಲಿದ್ದ ಅರ್ಜಿಯನ್ನು ತುಂಬಿ, ಕಿಯಾಸ್ಕಿನ ಹಿಂದಿ ಭಾಷೆಯ ಆಯ್ಕೆಯನ್ನು ಬಳಸಿ ಹಣ ತುಂಬಿ ಸಲೀಸಾಗಿ ಐದೇ ನಿಮಿಷದಲ್ಲಿ ಅಲ್ಲಿಂದ ಹೊರಹೊಗಿದ್ದನ್ನು ಕಂಡಿದ್ದಾರೆ. ಕರ್ನಾಟಕದಲ್ಲೇ ಹುಟ್ಟಿದ ಬ್ಯಾಂಕಿನ ಕರ್ನಾಟಕದೊಳಗಿನ ಶಾಖೆಯೊಂದರಲ್ಲಿ ಕನ್ನಡದಲ್ಲಿ ಅರ್ಜಿಯೂ ಇಲ್ಲ, ಕನ್ನಡ ಮಾತನಾಡುವ ಸಿಬ್ಬಂದಿಯೂ ಇಲ್ಲ, ಕನ್ನಡದಲ್ಲಿ ವ್ಯವಹರಿಸಲೂ ಸಾಧ್ಯವಿಲ್ಲ, ಆದರೆ ಅಂತಹ ಯಾವುದೇ ತಾಪತ್ರಯ ಹಿಂದಿ ಬಲ್ಲವರಿಗಿಲ್ಲ. ಹಾಗಿದ್ದರೆ ನಮ್ಮ ನಾಡಿನ ವ್ಯವಸ್ಥೆಗಳು ಇರಬೇಕಾದದ್ದು ಯಾರ ಸಲುವಾಗಿ? ಹಿಂದಿ ಭಾಷಿಕರಿಗೆ ದೇಶದ ಯಾವುದೇ ಮೂಲೆಯಲ್ಲೂ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸುವ ಕೇಂದ್ರ ಸರ್ಕಾರಕ್ಕೆ ಇದೇ ಕಾಳಜಿ ಹಿಂದೀಗಿಂತಲೂ ಶ್ರೀಮಂತವೂ, ಇತಿಹಾಸವುಳ್ಳವೂ ಆದ ನಮ್ಮ ಭಾಷೆಗಳ ಬಗ್ಗೆ ಯಾಕಿಲ್ಲ ಅನ್ನುವ ಪ್ರಶ್ನೆಗಳನ್ನು ಬ್ಯಾಂಕ್ ಮ್ಯಾನೇಜರ್ ಮುಂದೆ ಎತ್ತಿದ್ದಾರೆ. ಬ್ಯಾಂಕಿನ ಹೆಚ್ಚಿನ ಸಿಬ್ಬಂದಿ ಕನ್ನಡ ಬಾರದವರಾಗಿದ್ದರೂ ಕನ್ನಡದವರಾಗಿದ್ದ ಮ್ಯಾನೇಜರ್ ಇದಕ್ಕೆ ಕೊಟ್ಟ ಉತ್ತರವೇನು ಗೊತ್ತೇ? “ಇದನ್ನೆಲ್ಲ ನಿರ್ಧರಿಸುವ ಅಧಿಕಾರ ನಮಗೆಲ್ಲಿದೆ ಸಾರ್? ಸೆಂಟ್ರಲ್ ಏಜೆನ್ಸಿಯಿಂದ ಎಲ್ಲ ಬರುತ್ತೆ, ಅವರು ಕೊಟ್ಟ ಭಾಷೆಯಲ್ಲಿ ಎಲ್ಲವನ್ನು ಬಳಸುವ ಅನಿವಾರ್ಯತೆ ನಮ್ಮ ಮುಂದಿದೆ. ಅದನ್ನು ಪ್ರತಿಭಟಿಸಿದರೆ ನಮ್ಮ ಕೆಲಸ, ಬಡ್ತಿ ಎಲ್ಲದಕ್ಕೂ ತೊಂದರೆ. ಹೀಗಾಗಿ ಏನೂ ಮಾಡುವ ಸ್ಥಿತಿಯಲ್ಲಿ ತಾವಿಲ್ಲ” ಎಂದು ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಗೆಳೆಯರು ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿರುವ ಗ್ರಾಹಕ ದೂರು ಪರಿಹರಿಸುವ ಕೇಂದ್ರಕ್ಕೆ ಮೇಲಿಂದ ಮೇಲೆ ಕರೆ ಮಾಡಿದ್ದರೂ ಅಲ್ಲಿ ಯಾರೂ ಫೋನಿಗೆ ಉತ್ತರ ನೀಡಿಲ್ಲ. ಅಲ್ಲಿಂದ ಅಂತರ್ಜಾಲದ ಮೂಲಕ ಈ ಬಗ್ಗೆ ದೂರು ಸಲ್ಲಿಸುವ ಪ್ರಯತ್ನ ಮಾಡಿದರೆ ಆ ವ್ಯವಸ್ಥೆಯೂ ಕೇವಲ ಹಿಂದಿ ಮತ್ತು ಇಂಗ್ಲಿಷಿನಲ್ಲಿ ನೀಡಲಾಗಿದೆ. ಇಂಗ್ಲಿಷಿನಲ್ಲೇ ದೂರು ಬರೆದ ಗೆಳೆಯರು ಬಾರದ ಉತ್ತರಕ್ಕೆ ಕಾಯುತ್ತಿದ್ದಾರೆ.
ಇದು ಮಾನವ ಹಕ್ಕುಗಳ ಉಲ್ಲಂಘನೆ
ಇದು ಬರೀ ಒಂದು ಬ್ಯಾಂಕಿನ ಕತೆಯಲ್ಲ. ಇಂದು ಕರ್ನಾಟಕದ ಸಣ್ಣಪುಟ್ಟ ಊರುಗಳಲ್ಲಿನ ಬಹುತೇಕ ಬ್ಯಾಂಕುಗಳಲ್ಲೂ ಇದೇ ಸ್ಥಿತಿ ಉಂಟಾಗಿದೆ. ಗ್ಯಾಸ್ ಸಬ್ಸಿಡಿ ನೇರವಾಗಿ ಬ್ಯಾಂಕಿಗೆ ವರ್ಗಾಯಿಸುವ ವ್ಯವಸ್ಥೆ ಬಂದ ಮೇಲಂತೂ ಕನ್ನಡ ಬಿಟ್ಟು ಇನ್ನೊಂದು ನುಡಿಯ ಪರಿಚಯವೂ ಇರದ ಸಾಮಾನ್ಯ ಜನರು ಬ್ಯಾಂಕಿಗೆ ಎಡತಾಕಬೇಕಾದ ಅನಿವಾರ್ಯತೆ ಹುಟ್ಟಿಕೊಂಡಿದೆ ಮತ್ತು ಅಲ್ಲೆಲ್ಲ ಕನ್ನಡದಲ್ಲಿ ಸೇವೆ ದೊರೆಯದೆ ತೀವ್ರ ತೊಂದರೆಗೊಳಗಾಗಿದ್ದಾರೆ. ಈ ಸ್ಥಿತಿ ಬರೀ ಬ್ಯಾಂಕಿಂಗ್ ಕ್ಷೇತ್ರವೊಂದಕ್ಕೆ ಸೀಮಿತವಾಗಿಲ್ಲ. ಕರ್ನಾಟಕದೊಳಗೆ ಓಡಾಡುವ ರೈಲಿನ ಟಿಕೇಟ್ ಕನ್ನಡದಲ್ಲಿಲ್ಲ. ರೈಲ್ವೇ ರಿಸರ್ವೇಶನ್ ಪಟ್ಟಿ ಕನ್ನಡದಲ್ಲಿಲ್ಲ. ಬೆಂಗಳೂರು-ಮಂಗಳೂರಿನಿಂದ ಹೊರಡುವ ಯಾವುದಾದರೂ ವಿಮಾನದಲ್ಲಿ ಕನ್ನಡ-ತುಳುವಿನಲ್ಲಿ ಮಾಹಿತಿ ಇದೆಯೇ? ಕನ್ನಡದಲ್ಲೇ ಆದಾಯ ತೆರಿಗೆಯನ್ನು ಪಾವತಿಸುವ ವ್ಯವಸ್ಥೆ ಇದೆಯೇ? ಯುರೋಪಿನ ಯಾವುದೇ ದೊಡ್ಡ ದೇಶಕ್ಕೆ ಹೋಲಿಸಬಹುದಾದ ಕರ್ನಾಟಕದ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆ ಅನ್ನುವುದು ದಿನೇ ದಿನೇ ಮರೀಚಿಕೆಯಾಗುತ್ತಿದೆ. ಇದರಿಂದ ದೊಡ್ಡ ಮಟ್ಟಕ್ಕೆ ತೊಂದರೆಗೊಳಗಾಗುತ್ತಿರುವವರು ಬರೀ ಕನ್ನಡವೊಂದನ್ನೇ ಬಲ್ಲ ಕೋಟಿಗಟ್ಟಲೆ ಜನರು. ಯಾವ ನುಡಿಯಲ್ಲಿ ಅವರಿಗೆ ಈ ಎಲ್ಲ ಸೌಲಭ್ಯಗಳು ಅತ್ಯಂತ ಸಹಜವಾಗಿ ಸಿಗಬೇಕಿತ್ತೋ ಅದು ದೊರೆಯುತ್ತಿಲ್ಲ ಅನ್ನುವುದು ಒಂದು ರೀತಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯೇ ಸರಿ. ಒಂದು ಕಡೆ ಮಿತಿ ಮೀರಿದ ಪ್ರಮಾಣದಲ್ಲಿ ಕನ್ನಡೇತರರ ವಲಸೆ ಕರ್ನಾಟಕದ ಬಹುತೇಕ ದೊಡ್ಡ ಊರುಗಳಿಗೆ ಆಗುತ್ತಿದೆ. ಹಾಗೇ ಬಂದವರು ಕನ್ನಡ ಕಡ್ಡಾಯವಾಗಿ ಕಲಿಯಬೇಕು ಅನ್ನುವಂತೆ ಹೇಳುವ ಅಧಿಕಾರವೂ ಕನ್ನಡಿಗರ ಸರ್ಕಾರಕ್ಕಿಲ್ಲ. ಕನ್ನಡಿಗರಿಗೆ ಉದ್ಯೋಗ ಕೊಡಿ ಎಂದು ಹೇಳುವುದೂ ಇವತ್ತಿನ ಸಂವಿಧಾನದ ಪ್ರಕಾರ ತಪ್ಪಾದೀತು. ಇನ್ನೊಂದೆಡೆ ಇರುವ ಕನ್ನಡಿಗರಿಗೂ ಈ ರೀತಿ ನಿರಂತರವಾಗಿ ಅನಾನುಕೂಲಗಳಾಗುತ್ತಿದ್ದರೂ ಅದನ್ನು ಸರಿಪಡಿಸಿಕೊಳ್ಳುವ ಆಯ್ಕೆಗಳಿಲ್ಲ. ಇತ್ತೀಚೆಗೆ ಹಾಸನದ ಆಲೂರಿನಲ್ಲಿ ಕನ್ನಡದಲ್ಲಿ ಸೇವೆ ನೀಡದ ಸಿಬ್ಬಂದಿಯನ್ನೇ ಕೂಡಿ ಹಾಕಿ ಬ್ಯಾಂಕಿಗೆ ಬೀಗ ಜಡಿಯುವ ಮೂಲಕ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದ ಘಟನೆ ವರದಿಯಾಗಿತ್ತು. ಈ ರೀತಿಯ ಪ್ರತಿಭಟನೆಯೇ ಇದಕ್ಕೆ ಪರಿಹಾರ ಅನ್ನುವಂತಾದರೆ ಸರ್ಕಾರ, ಕಾನೂನು, ವ್ಯವಸ್ಥೆ ಅನ್ನುವುದೆಲ್ಲ ಯಾಕೆ ಬೇಕು?
ಬದಲಾಗಲಿ ಭಾಷಾ ನೀತಿ
ಕೇಂದ್ರ ಸರ್ಕಾರ ಕಲ್ಪಿಸುವ ಎಲ್ಲ ನಾಗರೀಕ ಸೇವೆಗಳು ಆಯಾ ರಾಜ್ಯದಲ್ಲಿ ಅಲ್ಲಿನ ಭಾಷೆಯಲ್ಲಿ ದೊರೆಯಬೇಕು ಅನ್ನುವುದನ್ನು ಅರ್ಥ ಮಾಡಿಕೊಳ್ಳುವುದು ನಿಜಕ್ಕೂ ಅಷ್ಟು ಕಷ್ಟದ ವಿಷಯವೇ? ಸಂವಿಧಾನಕ್ಕೆ ತಿದ್ದುಪಡಿ ತಂದು ಸಂವಿಧಾನದ ಎಂಟನೆಯ ಪರಿಚ್ಛೇದದಲ್ಲಿರುವ ಎಲ್ಲ ಭಾಷೆಗಳಿಗೂ ಕೇಂದ್ರ ಸರ್ಕಾರದ ಆಡಳಿತ ಭಾಷೆಯ ಸ್ಥಾನ ಕೊಟ್ಟರೆ, ಇಂತಹ ಕಣ್ಣಿಗೆ ರಾಚುವ ಅನ್ಯಾಯಕ್ಕೆ ತಡೆ ಬೀಳಬಹುದು. ಆದರೆ ಕರ್ನಾಟಕದಲ್ಲಿ ಈ ನಿಟ್ಟಿನಲ್ಲಿ ಬೆಕ್ಕಿಗೆ ಗಂಟೆ ಕಟ್ಟುವ ಕಾಳಜಿ, ನೈತಿಕತೆ ಯಾವ ಪಕ್ಷಕ್ಕಿದೆ? ಜನಪರ ಕಾಳಜಿಯ ಬಗ್ಗೆ ಪಕ್ಷಗಳು ಏನೇ ಮಾತನಾಡಬಹುದು, ಆದರೆ ಸರ್ಕಾರ ಕಲ್ಪಿಸುವ ಸೇವೆಗಳೆಲ್ಲವೂ ಜನರ ಭಾಷೆಯಲ್ಲಿರಬೇಕು ಅನ್ನುವ ಬಗ್ಗೆ ಕೂಗೆತ್ತದೇ ಹೋದರೆ ಆ ಮಾತುಗಳಿಗೆಲ್ಲ ಏನಾದರೂ ಅರ್ಥವಿದೆಯೇ?