ಭಾರತಕ್ಕೂ ಚೀನಾಗೂ ಇರುವ ಸಾಮ್ಯತೆ – ಭಾಷಾ ಹೇರಿಕೆ

ಚೀನಾ ಅಂದ ಕೂಡಲೇ ಮೊದಲು ಕೇಳಿ ಬರುವುದೇನು? ಚೀನಾದಲ್ಲಿ ಒಂದೇ ಭಾಷೆಯಿದ್ದು, ಚೀನಿಯರೆಲ್ಲರೂ ಮ್ಯಾಂಡರೀನ್ ನುಡಿಯುತ್ತಾರೆ ಅನ್ನುವುದಲ್ಲವೇ? ಭಾರತದಲ್ಲಿ ಭಾಷಾ ವೈವಿಧ್ಯತೆ ಇರುವುದೇ ನಮ್ಮ ಸಮಸ್ಯೆ, ಚೀನಿಯರಂತೆ ನಮ್ಮಲ್ಲೂ ಒಂದೇ ನುಡಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಅನ್ನುವ ಅಭಿಪ್ರಾಯ ಕೆಲವರದ್ದು. ಆದರೆ ಪ್ರಜಾಪ್ರಭುತ್ವವಿಲ್ಲದ, ಹೊರಪ್ರಪಂಚಕ್ಕೆ ಯಾವತ್ತಿಗೂ ಮುಚ್ಚಿಕೊಂಡಿರುವ ಚೀನಾದೊಳಗೆ ಅತ್ಯಂತ ವ್ಯವಸ್ಥಿತವಾಗಿ ಅಲ್ಲಿನ ಹಲವಾರು ಭಾಷೆಗಳನ್ನು ಹಂತ ಹಂತವಾಗಿ ಮುಗಿಸಿ, ಇಡೀ ಚೀನಾ ಮ್ಯಾಂಡರೀನ್ ಮಾತನಾಡುವ ಏಕಭಾಷೆಯ ದೇಶವಾಗಿಸುವ ಪ್ರಯತ್ನ ನಡೆಯುತ್ತಿದೆ ಅನ್ನುವುದು ಬಹಳಷ್ಟು ಜನರಿಗೆ ತಿಳಿದಿರಲಾರದು.

ಚೀನಾದ ಭಾಷಾ ಇತಿಹಾಸ

ಪ್ರಪಂಚದ ಭಾಷೆಗಳನ್ನು ಗುರುತಿಸುವ ಎತ್ನಲಾಗ್ 2015ರ ವರದಿ ಪ್ರಕಾರ ಚೀನಾದಲ್ಲಿ ಸುಮಾರು 292 ಜೀವಂತ ನುಡಿಗಳಿವೆ. ಆದರೆ ಉತ್ತರ ಚೀನಾ, ಅದರಲ್ಲೂ ರಾಜಧಾನಿ ಬೀಜಿಂಗ್ ಸುತ್ತಮುತ್ತ ಮಾತನಾಡುವ ಮ್ಯಾಂಡರೀನ್ ನುಡಿಯ ಒಂದು ಒಳನುಡಿಯಾದ ಪುಟೋಂಗ್ವಾವನ್ನು ಅಲ್ಲಿನ ಸರ್ಕಾರ ಚೀನಾದ ಅಧಿಕೃತ ಭಾಷೆಯೆಂದು ಗುರುತಿಸಿದೆ. ಚೀನಾದೊಳಗೆ ಸ್ವಾಯತ್ತೆ ಇರುವ ಪ್ರಾಂತ್ಯಗಳಾದ ಹಾಂಗ್ ಕಾಂಗ್, ಮಕಾವ್ ಮತ್ತು ಟಿಬೇಟಿನಲ್ಲಿ ಮ್ಯಾಂಡರೀನ್ ಜೊತೆ ಕ್ರಮವಾಗಿ ಅಲ್ಲಿನ ನುಡಿಗಳಾದ ಇಂಗ್ಲಿಷ್, ಪೊರ್ಚುಗೀಸ್ ಮತ್ತು ಟಿಬೇಟಿಯನ್ ನುಡಿಗಳಿಗೂ ಅಧಿಕೃತ ಭಾಷೆಯ ಸ್ಥಾನ ಕೊಟ್ಟಿದೆ. ಸ್ವಾಯತ್ತೆ ಇರುವ ಈ ಪ್ರಾಂತ್ಯಗಳೆಲ್ಲವೂ ಬೇರೆ ಆಡಳಿತದಲ್ಲಿದ್ದ ಪ್ರದೇಶಗಳಾಗಿದ್ದು, ಅವುಗಳನ್ನು ಬಿಗಿಪಟ್ಟಿನಿಂದ ಚೀನಾ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು ಅನ್ನುವುದನ್ನು ಇಲ್ಲಿ ಮರೆಯಬಾರದು. ಹೀಗಾಗಿ ಅಲ್ಲಿನ ನುಡಿಗಳನ್ನು ಗುರುತಿಸುವ ಹೆಜ್ಜೆ ಎಲ್ಲೆಡೆ ಮ್ಯಾಂಡರೀನ್ ಸ್ಥಾಪಿಸುವ ಹಾದಿಯಲ್ಲಿ ತೋರಿಕೆಯ ಒಂದು ತಾತ್ಕಾಲಿಕ ಕ್ರಮವೆಂದೇ ಕಾಣಬೇಕು. ಆದರೆ ಇವತ್ತು ಹೇಳಲು ಹೊರಟಿರುವುದು ಚೀನಾದ ಒಳಗಡೆಯೇ ಇರುವ ದಕ್ಷಿಣ ಚೀನಾದ ಗ್ವಾಂಗ್ಡಂಗ್ ಪ್ರಾಂತ್ಯದಲ್ಲಿ ತಲೆತಲಾಂತರದಿಂದ ಹತ್ತು ಕೋಟಿಯಷ್ಟು ಜನರು ಮಾತನಾಡುತ್ತ ಬಂದಿರುವ ಕ್ಯಾಂಟೋನೀಸ್ ಭಾಷೆ ಮತ್ತು ಅದನ್ನು ವ್ಯವಸ್ಥಿತವಾಗಿ ಮೂಲೆಗುಂಪಾಗಿಸುತ್ತಿರುವ ನೋವಿನ ಕತೆ.

ಕ್ಯಾಂಟೋನೀಸ್ ಕತೆ

ಚೀನಾದ ದಕ್ಷಿಣ ಭಾಗದಲ್ಲಿ ಇರುವ ಗ್ವಾಂಗ್ಡಂಗ್ ಪ್ರಾಂತ್ಯ ಮತ್ತು ಪಕ್ಕದ ಹಾಂಗ್ ಕಾಂಗ್, ಮಕಾವಿನಲ್ಲಿ ಬಹುತೇಕರು ಮಾತನಾಡುತ್ತಿದ ಭಾಷೆ ಕ್ಯಾಂಟೋನೀಸ್ ಆಗಿತ್ತು. ಚೀನಾ ಆರ್ಥಿಕ ಸುಧಾರಣೆಗಳಿಗೆ ತೆರೆದುಕೊಂಡ ನಂತರ ಭೌಗೋಳಿಕವಾಗಿ ಆಯಕಟ್ಟಿನ ಪ್ರದೇಶವಾಗಿದ್ದ ಗ್ವಾಂಗ್ಡಂಗ್ ಪ್ರಾಂತ್ಯಕ್ಕೆ ಅಪಾರ ಪ್ರಮಾಣದ ವಿದೇಶಿ ಹೂಡಿಕೆ ಹರಿದು ಬಂತು. ಹೂಡಿಕೆಯ ಬೆನ್ನಲ್ಲೇ ದೊಡ್ಡ ಸಂಖ್ಯೆಯಲ್ಲಿ ಸೃಷ್ಟಿಯಾದ ಉದ್ಯೋಗವಕಾಶಗಳನ್ನು ಅರಸಿ ಮ್ಯಾಂಡರೀನ್ ನುಡಿಯಾಡುವ ಹಾನ್ ಚೈನೀಸ್ ಅನ್ನುವ ಉತ್ತರ ಚೀನಾದ ಪ್ರಬಲ ಜನಾಂಗದವರ ವಲಸೆ ಇಲ್ಲಿಗೆ ಹರಿದು ಬಂತು. ಈ ವಲಸೆ 20-30 ವರ್ಷದ ಅವಧಿಯಲ್ಲಿ ಈ ಪ್ರದೇಶದ ಸಂಪೂರ್ಣ ಜನಲಕ್ಷಣವನ್ನೇ ಬುಡಮೇಲು ಮಾಡುವ ಸ್ವರೂಪದಲ್ಲಿ ಆಯಿತು. ಮೂಲನಿವಾಸಿಗಳಷ್ಟೇ ಸಂಖ್ಯೆಯಲ್ಲಿ ವಲಸಿಗರು ನೆಲೆಸುವ ಬದಲಾವಣೆಯ ಬೆನ್ನಲ್ಲೇ ವಲಸಿಗರ ನುಡಿ ಮ್ಯಾಂಡರೀನ್ ಈ ಪ್ರಾಂತ್ಯದ ವ್ಯಾಪಾರ,ವಹಿವಾಟು, ಮಾರುಕಟ್ಟೆ, ಸಾಂಸ್ಕೃತಿಕ ವಲಯಗಳನ್ನೆಲ್ಲ ತನ್ನ ತೆಕ್ಕೆಗೆ ತೆಗೆದುಕೊಳ್ಳಲಾರಂಭಿಸಿತು. ಇಂತಹ ಹೊತ್ತಿನಲ್ಲಿ ಕ್ಯಾಂಟೋನೀಸ್ ನುಡಿಯ ಪರ ನಿಲ್ಲಬೇಕಿದ್ದ ಚೀನಾದ ಸರ್ಕಾರ, ಮ್ಯಾಂಡರೀನ್ ಹರಡುವ ತನ್ನ ಯೋಜನೆಗೆ ಇದನ್ನೊಂದು ಅಪೂರ್ವ ಅವಕಾಶ ಎಂಬಂತೆ ಕಂಡಿತಲ್ಲದೇ ಮ್ಯಾಂಡರೀನ್ ಹರಡಲು ಸಾಧ್ಯವಿರುವ ಎಲ್ಲ ಹೆಜ್ಜೆಗಳನ್ನು ತೆಗೆದುಕೊಳ್ಳಲಾರಂಭಿಸಿತು. ಮೊದಲಿಗೆ ಅಲ್ಲಿನ ಶಾಲೆಗಳಲ್ಲಿ ಮಕ್ಕಳು ಕಡ್ಡಾಯವಾಗಿ ಮ್ಯಾಂಡರೀನಿನಲ್ಲೇ ಮಾತನಾಡಬೇಕು ಅನ್ನುವ ಸುತ್ತೋಲೆ ಹೊರಡಿಸಿತು. ಮ್ಯಾಂಡರೀನ್ ಒಂದು ಸುಂದರವಾದ, ಮೆದುವಾದ, ವರ್ಚಸ್ಸಿನ ಭಾಷೆ, ಅದನ್ನು ಕಲಿಯುವುದು ಪ್ರತಿಷ್ಟೆಯ ಸಂಕೇತ ಅನ್ನುವ ಪ್ರಚಾರ ವ್ಯಾಪಕವಾಯಿತು. ಇಲ್ಲಿನ ಟಿವಿ, ರೇಡಿಯೊ ಮಾಧ್ಯಮಗಳಲ್ಲಿ ಕ್ಯಾಂಟೋನೀಸ್ ಬದಲು ಹೆಚ್ಚೆಚ್ಚು ಮ್ಯಾಂಡರೀನ್ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಂತೆ ಅಲ್ಲಿನ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಲಾಯಿತು. ಕ್ಯಾಂಟೋನೀಸ್ ಪರ ದನಿ ಎತ್ತುವ ಮೂಲನಿವಾಸಿಗಳನ್ನು ಬಂಧಿಸಿ, ಅವರು ಯಾವುದೋ ಹಿಡನ್ ಅಜೆಂಡಾ ಇಟ್ಟುಕೊಂಡಿರುವವರು ಎಂಬಂತೆ ಬಿಂಬಿಸುವ ಕೆಲಸಗಳಾದವು.ಕ್ಯಾಂಟೋನೀಸ್ ಕಲಿತರೆ ಅಂತಹ ಪ್ರಯೋಜನವೇನಿದೆ ಎಂಬ ಭಾವನೆ ಅಲ್ಲಿನ ಜನರಿಗೇ ಬರುವ ಹಾಗೇ (ಕನ್ನಡ ಕಲಿತರೆ ಏನು ಪ್ರಯೋಜನ ಎಂದು ನಮ್ಮಲ್ಲಿ ಮಾಡಲಾಗುತ್ತಿರುವಂತೆ) ಮಾಡಲಾಯಿತು. ಇದೆಲ್ಲದರ ಪರಿಣಾಮವಾಗಿ ಈಗ ಅಲ್ಲಿ ಕ್ಯಾಂಟೋನೀಸ್ ನುಡಿ ದಿನೇ ದಿನೇ ತನ್ನ ಸಾರ್ವಭೌಮತ್ವ ಕಳೆದುಕೊಂಡು ಅವಸಾನದ ಅಂಚಿಗೆ ಸಾಗುತ್ತಿದೆ. ಕನ್ ಫ್ಯೂಶಿಯಸ್ ನಂತಹ ಅಪರೂಪದ ತತ್ವಜ್ಞಾನಿಯನ್ನು ಜಗತ್ತಿಗೆ ಕೊಟ್ಟಿದೆ ಎನ್ನಲಾದ ಈ ನುಡಿ ಇನ್ನೆರಡು ತಲೆಮಾರಿನ ಅವಧಿಯಲ್ಲಿ ಪೂರ್ತಿಯಾಗಿ ಮರೆಯಾಗಬಹುದು ಅನ್ನುವುದು ಎಂತಹ ದುರಂತ ಅಲ್ಲವೇ? ಚೀನಾ ಒಂದು ಬಾಗಿಲು ಮುಚ್ಚಿದ ದೇಶವಾಗಿರುವುದರಿಂದ, ಪತ್ರಿಕಾ ಸ್ವಾತಂತ್ರ್ಯ ಅನ್ನುವುದು ಅಲ್ಲಿ ಇಲ್ಲದಿರುವುದರಿಂದ ಈ ದುರಂತ ಪ್ರಪಂಚದ ಹೆಚ್ಚಿನ ಜನರಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಪ್ರಪಂಚದಲ್ಲಿ ಬೃಹದಾಕಾರವಾಗಿ ಬೆಳೆದಿರುವ ಚೀನಿಯರ ಆರ್ಥಿಕ ಮತ್ತು ರಾಜಕೀಯ ಬಲ, ಎಲ್ಲ ದೇಶಗಳಿಗೂ ಅದರ ಸ್ನೇಹ ಸಂಪಾದಿಸುವುದನ್ನು ತಮ್ಮ ವಿದೇಶಾಂಗ ನೀತಿಯ ಒಂದು ಭಾಗವನ್ನಾಗಿಸಬೇಕಾದ ಒತ್ತಡ ತಂದಿದೆ. ಹೀಗಾಗಿ ತಮ್ಮ ತಮ್ಮ ದೇಶದ ಸ್ವಹಿತಾಸಕ್ತಿಯ ಮುಂದೆ ಚೀನಾದಲ್ಲಿ ಆಗುತ್ತಿರುವ ಈ ತೊಂದರೆಗಳಿಗೆ ಎಲ್ಲರದ್ದೂ ಜಾಣಕಿವುಡಿನ ವರ್ತನೆ. ಇಷ್ಟಾದರೂ ಕ್ಯಾಂಟೋನೀಸ್ ಪರ ದನಿ ಎತ್ತುವ ಕೆಲಸ ನಿಂತಿಲ್ಲ. ಕಳೆದು ಇನ್ನೂರು-ಮುನ್ನೂರು ವರ್ಷಗಳ ಅವಧಿಯಲ್ಲಿ ಪಶ್ಚಿಮದ ದೇಶಗಳಿಗೆ ವ್ಯಾಪಕವಾಗಿ ವಲಸೆ ಹೋಗಿದ್ದ ಕ್ಯಾಂಟೋನೀಸ್ ಭಾಷಿಕರು ಇಂದು ಆ ದೇಶಗಳಲ್ಲಿ ಸಂಘಟಿತರಾಗಿ ತಮ್ಮ ನುಡಿಯ ರಕ್ಷಣೆಗಾಗಿ ದನಿ ಎತ್ತಿದ್ದಾರೆ. ಆದರೂ ಪ್ರಜಾಪ್ರಭುತ್ವವಿಲ್ಲದ ಚೀನಾದಲ್ಲಿ ಇದನ್ನೆಲ್ಲ ಸರಿಪಡಿಸಿಕೊಳ್ಳುವುದು ಅಷ್ಟು ಸುಲಭ ಸಾಧ್ಯವಲ್ಲ.

ಭಾರತಕ್ಕೆ ಪಾಠ

ಚೀನಾದಲ್ಲಾಗುತ್ತಿರುವ ಈ ಘಟನೆಯ ಹಿಂದಿರುವವರ ಮನಸ್ಥಿತಿಗೂ ಭಾರತದಲ್ಲಿ ಎಲ್ಲೆಡೆ ಹಿಂದಿ ಹರಡಬೇಕು ಎಂದು ಹೊರಡುತ್ತಿರುವವರ ಮನಸ್ಥಿತಿಗೂ ಅಂತಹ ವ್ಯತ್ಯಾಸವೇನಿಲ್ಲ. ಭಾರತದಲ್ಲಿ ಪ್ರಜಾಪ್ರಭುತ್ವ ಇರುವುದರಿಂದ, ಬೇರೆ ಬೇರೆ ಭಾಷಿಕ ಜನರ ಆಶೋತ್ತರಗಳನ್ನು ಈಡೇರಿಸಲು ಭಾಷಾವಾರು ಪ್ರಾಂತ್ಯಗಳನ್ನು ಕಟ್ಟಿಕೊಂಡಿದ್ದರಿಂದ ಇಂತಹದೊಂದು ಹೇರಿಕೆಯ ಹೆಜ್ಜೆ ಚೀನಾದಲ್ಲಿ ಆದಷ್ಟು ವೇಗವಾಗಿ ಭಾರತದಲ್ಲಿ ಹರಡಿಲ್ಲ. ಆದರೂ ಇಂದಿಗೂ ಈ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಯತ್ನಗಳು, ಭಾರತದ ಸರ್ಕಾರದ ಎಲ್ಲ ಯೋಜನೆಗಳನ್ನು ಕೇವಲ ಹಿಂದಿ/ಇಂಗ್ಲಿಷಿನಲ್ಲಷ್ಟೆ ಜನರಿಗೆ ತಲುಪಿಸುವ ಕೆಲಸಗಳು, ಸ್ಥಳೀಯ ಭಾಷೆಗಳನ್ನು ಕಡೆಗಣಿಸಿ ಬ್ಯಾಂಕು, ಅಂಚೆ, ರೈಲು, ವಿಮಾನ ಮುಂತಾದೆಡೆಯೆಲ್ಲ ಹಿಂದಿಯನ್ನು ವ್ಯವಸ್ಥಿತವಾಗಿ ಬಳಕೆಗೆ ತರುವ ಹೆಜ್ಜೆಗಳು, ಹಿಂದಿ ಭಾಷಿಕರಿಗೆ ದೇಶದ ಎಲ್ಲೆಡೆ ವಲಸೆ ಸುಲಭವಾಗುವಂತೆ ಕಟ್ಟಲಾಗುತ್ತಿರುವ ವ್ಯವಸ್ಥೆಗಳೆಲ್ಲವನ್ನೂ ಗಮನಿಸಿದರೆ ಕ್ಯಾಂಟೋನಿಸಿಗೆ ಬಂದಿರುವ ಸ್ಥಿತಿ ನಮ್ಮ ಭಾಷೆಗಳಿಗೂ ಬರದೇ ಇರದು. ಪ್ರಜಾಪ್ರಭುತ್ವದ ಕಾರಣಕ್ಕೆ ತಡವಾಗಬಹುದು, ಆದರೆ ಬರದು ಅನ್ನಲಾಗದು. ಬೆಂಗಳೂರು, ಮುಂಬೈ, ಚೆನ್ನೈಯಂತಹ ನಗರಗಳಲ್ಲಿ ಇಂದು ಹಿಂದಿಯ ಪ್ರಾಬಲ್ಯ ಅಲ್ಲಿನ ಸ್ಥಳೀಯ ಭಾಷೆಗಳನ್ನು ಮೀರಿ ಬೆಳೆಯುತ್ತಿರುವುದನ್ನು ಈ ಕಣ್ಣಿನಿಂದ ನೋಡಿದಾಗಲಷ್ಟೇ ಅರ್ಥ ಮಾಡಿಕೊಳ್ಳಬಹುದು. ನಮ್ಮ ರಾಜಕಾರಣಿಗಳು ಈಗ ಎಚ್ಚೆತ್ತು ಭಾರತ ಸಂವಿಧಾನದ 8ನೇ ಪರಿಚ್ಛೇದದಲ್ಲಿರುವ ಎಲ್ಲ ಭಾಷೆಗಳಿಗೂ ಭಾರತ ಸರ್ಕಾರದ ಅಧಿಕೃತ ಭಾಷೆಯ ಸ್ಥಾನಮಾನ ದೊರಕಿಸಿಕೊಳ್ಳಲು ದನಿಯೆತ್ತಬೇಕು, ಇಲ್ಲದಿದ್ದರೆ ಕ್ಯಾಂಟೋನೀಸಿನ ಗತಿ ಕನ್ನಡಕ್ಕೂ ಬರಬಹುದು.

This entry was posted in ಕ್ಯಾಂಟೋನೀಸ್, ಹಿಂದಿ ಹೇರಿಕೆ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s