ಮೋದಿ ಸರ್ಕಾರಕ್ಕೆ ಒಂದು ವರುಶ – ಒಕ್ಕೂಟ ವ್ಯವಸ್ಥೆಯ ಕಣ್ಣಿನಿಂದ ಒಂದು ವಿಮರ್ಶೆ

ಮೋದಿಯವರ ಸರ್ಕಾರಕ್ಕೆ ಒಂದು ವರುಶ ತುಂಬಿದ್ದು, ಸರ್ಕಾರದ ಸಾಧನೆ, ವೈಫಲ್ಯಗಳ ಬಗ್ಗೆ ಚರ್ಚೆಯಾಗುತ್ತಿದೆ. ಮೋದಿ ಗುಜರಾತಿನ ಮುಖ್ಯಮಂತ್ರಿ ಹುದ್ದೆಯಿಂದ ಪ್ರಧಾನಿ ಹುದ್ದೆಗೇರಿದವರು ಮತ್ತು ಸತತವಾಗಿ ಸಹಕಾರಿ ತತ್ವದ ಒಕ್ಕೂಟ ವ್ಯವಸ್ಥೆ ಬಗ್ಗೆ ಮಾತನಾಡುತ್ತ ಬಂದವರು. ಹೀಗಾಗಿ ಅವರ ಸರ್ಕಾರ “ಒಕ್ಕೂಟ ವ್ಯವಸ್ಥೆ”ಯ ವಿಷಯದಲ್ಲಿ ಏನು ಮಾಡಿದೆ ಅನ್ನುವುದನ್ನು ಗಮನಿಸುತ್ತ ಬಂದಿದ್ದ ನನಗೆ ಕಂಡ ಕೆಲ ಅಂಶಗಳನ್ನು ಓದುಗರೊಡನೆ ಹಂಚಿಕೊಳ್ಳುತ್ತಿರುವೆ.

ಒಳ್ಳೆಯದು:

  1. ಭಾರತದಲ್ಲಿ ಒಕ್ಕೂಟ ವ್ಯವಸ್ಥೆ / ಫೆಡರಲಿಸಂ ಅನ್ನುವುದು ಮುಖ್ಯವಾಹಿನಿಯಲ್ಲಿ ಎಂದಿಗೂ ಬಳಸದ ಪದವಾಗಿಯೇ ಉಳಿದಿತ್ತು. ಮೋದಿ ನಿರಂತರವಾಗಿ “ರಾಜ್ಯಗಳಿಂದಲೇ ದೇಶ” ಎಂದು ಮಾತನಾಡುತ್ತ ಅದನ್ನೊಂದು ಮುಖ್ಯವಾಹಿನಿಯ ವಿಷಯವಾಗಿಸಿದ್ದಕ್ಕೆ ಅವರನ್ನು ಮೆಚ್ಚಿಕೊಳ್ಳಬೇಕು.
  2. 14ನೇ ಹಣಕಾಸು ಆಯೋಗದ ಶಿಫಾರಸ್ಸನ್ನು ಒಪ್ಪಿ ಕೇಂದ್ರದಿಂದ ರಾಜ್ಯಗಳಿಗೆ ಹೋಗುವ ತೆರಿಗೆ ಹಣದ ನೇರ ವರ್ಗಾವಣೆಯ ಪ್ರಮಾಣವನ್ನು 32ರಿಂದ 42ಕ್ಕೆ ಏರಿಸಿದ್ದನ್ನು ಒಂದು ಒಳ್ಳೆಯ ಹೆಜ್ಜೆಯೆಂದೇ ನೋಡಬೇಕು. ಈ ಕ್ರಮದಿಂದ ಕೇಂದ್ರಕ್ಕೆ ಹಣದ ಕೊರತೆಯಾಗುತ್ತೆ ಅನ್ನುವ ಮೋದಿಯವರ ಮಾತುಗಳಲ್ಲಿ ಹುರುಳಿಲ್ಲ. ಯಾಕೆಂದರೆ CSS ಮತ್ತು ಅನುದಾನದಲ್ಲಿ ರಾಜ್ಯಗಳಿಗೆ ಕಡಿತ ಮಾಡಿ, ಅದೇ ಹಣವನ್ನು ನೇರ ವರ್ಗಾವಣೆಯ ಪ್ರಮಾಣಕ್ಕೆ ಸೇರಿಸಿರುವುದರಿಂದ ಕೇಂದ್ರಕ್ಕೆ ಯಾವುದೇ ಹಣದ ಕೊರತೆಯಾಗಿಲ್ಲ. ಬದಲಿಗೆ, ಕರ್ನಾಟಕದಂತಹ ರಾಜ್ಯಕ್ಕೆ ಸರಿ ಸುಮಾರು 3-4 ಸಾವಿರ ಕೋಟಿಯಷ್ಟು ಕೊರತೆಯೇ ಆಗಿದೆ. ಆದರೆ ಈ ಹೆಜ್ಜೆಯಲ್ಲಿ ಆಗಿರುವ ಒಂದು ಒಳ್ಳೆಯ ಕೆಲಸವೆಂದರೆ ರಾಜ್ಯ ಸರ್ಕಾರಗಳು ತಮಗೆ ಬರುವ ನೇರ ವರ್ಗಾವಣೆಯ ಹಣವನ್ನು ಯಾವ ಆದ್ಯತೆಗೆ, ಯಾವ ಯೋಜನೆಗಳಿಗೆ ಖರ್ಚು ಮಾಡಬೇಕು ಅನ್ನುವ ನಿಟ್ಟಿನಲ್ಲಿ ಒಂದಿಷ್ಟು ಹೆಚ್ಚಿನ ಸ್ವಾತಂತ್ರ್ಯ ಸಿಕ್ಕಿದೆ ಅನ್ನಬಹುದು. ಅದಕ್ಕಾಗಿ ಮೋದಿ ಸರ್ಕಾರಕ್ಕೊಂದು ಮೆಚ್ಚುಗೆ ಸಲ್ಲಬೇಕು.
  3. ಕಲ್ಲಿದ್ದಲಿನಂತಹ ಸಂಪತ್ತಿನ ಹರಾಜಿನಿಂದ ಬರುವ ಆದಾಯವನ್ನು ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಂಚುವ ನಿರ್ಧಾರ ಸ್ವಾಗತಾರ್ಹ. ಇದು ಪಶ್ಚಿಮ ಬಂಗಾಳ, ಜಾರ್ಖಂಡ್, ಓಡಿಶಾದಂತಹ ಬಡ ರಾಜ್ಯಗಳಿಗೆ ಹೆಚ್ಚಿನ ನೆರವು ಕಲ್ಪಿಸುತ್ತದೆ. ಈ ಬಡ ರಾಜ್ಯಗಳು ಹೆಚ್ಚು ಆರ್ಥಿಕವಾಗಿ ಬಲವಾದರೆ ಇಲ್ಲಿಂದ ದಕ್ಷಿಣದ ರಾಜ್ಯಗಳಿಗೆ ಆಗುತ್ತಿರುವ ತಡೆರಹಿತ ವಲಸೆಯೂ ಕಡಿಮೆಯಾಗಬಹುದು.

ಕೆಟ್ಟದ್ದು:

  1. ಮೋದಿಯವರ ಸರ್ಕಾರ ಬಂದಾಗಿನಿಂದಲೂ ಅತ್ಯಂತ ಸ್ಪಷ್ಟವಾಗಿ ತಾನು ಹಿಂದಿ ಪರ ಅನ್ನುವುದನ್ನು ತೋರಿಸುತ್ತ ಬಂದಿದೆ. ಕೇಂದ್ರ ಸರ್ಕಾರಿ ಆಡಳಿತದಲ್ಲಿ ಹಿಂದಿ ಕಡ್ಡಾಯದ ಸುತ್ತ ಹೊರಡಿಸಿದ ಸುತ್ತೋಲೆಗಳಿಂದ ಹಿಡಿದು, ಕೇಂದ್ರ ಆರಂಭಿಸಿರುವ ಪ್ರತಿಯೊಂದು ಯೋಜನೆಗೂ ಹಿಂದಿ ಹೆಸರನ್ನೇ ಇಡುವುದರಿಂದ ಹಿಡಿದು, ಪ್ರಪಂಚದ ಎಲ್ಲೇ ಹೋದರೂ ತಮ್ಮ ತಾಯ್ನುಡಿ ಗುಜರಾತಿಯನ್ನು ಕೈಬಿಟ್ಟು ಹಿಂದಿಯಲ್ಲೇ ಮಾತನಾಡುತ್ತ ಭಾರತವೆಂದರೆ ಹಿಂದಿ, ಹಿಂದಿಯೆಂದರೆ ಭಾರತ ಅನ್ನುವ ಅನಿಸಿಕೆಯನ್ನು ಗಟ್ಟಿಗೊಳಿಸುವ ಕೆಲಸವನ್ನು ಮೋದಿ ಸರ್ಕಾರ ಮಾಡಿದೆ. ಇದು ಭಾರತದ ಭಾಷಾ ವೈವಿಧ್ಯತೆಗೆ ಒಂದು ಹೊಡೆತ ಎಂದೇ ಪರಿಗಣಿಸಬೇಕು. ಹಿಂದಿ ಹೇರಿಕೆ ಕೈ ಬಿಟ್ಟು ಎಲ್ಲ ನುಡಿಗಳಿಗೂ ಸಮಾನ ಸ್ಥಾನಮಾನ ಕಲ್ಪಿಸುವ ನಿಲುವು ಇನ್ನು ಕಂಡಿಲ್ಲ.
  2. ರಾಜ್ಯಗಳ ತೆರಿಗೆ ಸಂಗ್ರಹದ ಸಾಮರ್ಥ್ಯಕ್ಕೆ ಕೊಡಲಿಯೇಟು ನೀಡಲಿರುವ ಜಿ.ಎಸ್.ಟಿ ಮಸೂದೆ ಜಾರಿಗೆ ತುದಿಗಾಲಲ್ಲಿ ನಿಂತಿರುವ ಕೇಂದ್ರ ಸರ್ಕಾರ ಕೇಂದ್ರ ಜಿ.ಎಸ್.ಟಿ ಪಟ್ಟಿಗೆ ರಾಜ್ಯಕ್ಕೆ ಹೆಚ್ಚಿನ ಆದಾಯ ತಂದುಕೊಡುತ್ತಿದ್ದ ತೈಲ ಉತ್ಪನ್ನಗಳು, ತಂಬಾಕು ಉತ್ಪನ್ನಗಳನ್ನು ಎಳೆದುಕೊಳ್ಳುವ ಮೂಲಕ ರಾಜ್ಯಗಳ ತೆರಿಗೆ ಸಂಗ್ರಹ ಸಾಮರ್ಥ್ಯಕ್ಕೆ ತೀವ್ರ ಹಿನ್ನಡೆಯಾಗುವಂತೆ ಮಾಡುತ್ತಿದೆ.
  3. ಭೂಮಿ ಅನ್ನುವುದು ಸಂವಿಧಾನದ ರಾಜ್ಯದ ಪಟ್ಟಿಯಲ್ಲಿದ್ದರೂ ಭೂ ಮಸೂದೆಯ ಮೂಲಕ ಕೇಂದ್ರ ಮೂಗು ತೂರಿಸುತ್ತಿದೆ. ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರಗಳು ಕೇವಲ ಕೇಂದ್ರದ ಆದೇಶದಂತೆ ಭೂಮಿ ವಶಪಡಿಸಿಕೊಳ್ಳುವ ಕೆಲಸಕ್ಕೆ ಸೀಮಿತಗೊಳಿಸುವಂತಿರುವ ಭೂ ಮಸೂದೆಯಿಂದ ರಾಜ್ಯಗಳ ಕೈಯಲ್ಲಿನ ಅಧಿಕಾರ ಇನ್ನಷ್ಟು ಮೊಟಕುಗೊಳ್ಳುವ ಸಾಧ್ಯತೆಗಳಿವೆ.ರೈತರಿಂದ ಭೂಮಿ ವಶಪಡಿಸಿಕೊಳ್ಳುವ ಹೊಣೆ ರಾಜ್ಯ ಸರ್ಕಾರಕ್ಕಿರುವುದರಿಂದ ರೈತರ ಆಕ್ರೋಶವೂ ರಾಜ್ಯ ಸರ್ಕಾರಗಳೇ ಎದುರಿಸಬೇಕಾಗುತ್ತೆ. ಈ ವಿಷಯದಲ್ಲಿ ಕೇಂದ್ರ ಮೂಗು ತೂರಿಸದೇ ರಾಜ್ಯಗಳಿಗೆ ಬಿಡುವುದೇ ಒಳಿತು ಅನ್ನುವ ನಿಲುವನ್ನು ಬಿಜೆಪಿಯ ಹಿರಿಯ ನಾಯಕ ಅರುಣ್ ಶೌರಿಯವರೂ ಹೇಳಿದ್ದಾರೆ.
  4. ಕೇಂದ್ರ ಜಾರಿ ಮಾಡಲು ಹೊರಟಿರುವ ಹೊಸ ಸಾರಿಗೆ ಕಾಯ್ದೆ ವಾಹನ ನೋಂದಣಿ, ಚಾಲನಾಪತ್ರ ನೀಡುವ ವಿಷಯದಲ್ಲಿ ರಾಜ್ಯ ಸರ್ಕಾರಕ್ಕಿದ್ದ ಅಧಿಕಾರ ಮತ್ತು ತೆರಿಗೆ ಸಂಗ್ರಹದ ಸಾಮರ್ಥ್ಯ ಎರಡನ್ನು ಕಿತ್ತುಕೊಳ್ಳುತ್ತಿದೆ. ಇದು ಈಗಾಗಲೇ ಸಂಪನ್ಮೂಲದ ಕೊರತೆ ಎದುರಿಸುತ್ತಿರುವ ರಾಜ್ಯ ಸರ್ಕಾರಗಳಿಗೆ ಇನ್ನಷ್ಟು ತೊಡಕುಂಟು ಮಾಡುವಂತದ್ದು. ಒಂದು ರಾಜ್ಯದ ಒಳಗೆ ಓಡಾಡುವ ವಾಹನಗಳು ಅಲ್ಲಿನ ರಸ್ತೆಯ ಸೌಕರ್ಯವನ್ನು ಬಳಸುವಾಗ, ಅಲ್ಲಿನ ಸ್ಥಳೀಯ ಸರ್ಕಾರಕ್ಕೆ ತೆರಿಗೆ ಕಟ್ಟಬೇಕಾದದ್ದು ನ್ಯಾಯಯುತವಾದದ್ದು. ಅಮೇರಿಕದಲ್ಲೂ ರಾಜ್ಯಗಳೇ ಈ ವಿಷಯದಲ್ಲಿ ಸರ್ವಾಧಿಕಾರ ಹೊಂದಿವೆ. ಇದನ್ನು ಕಿತ್ತುಕೊಳ್ಳುವುದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತದ್ದು.
  5. ಕೇಂದ್ರದ ಡಿಜಿಟಲ್ ಇಂಡಿಯಾ ಯೋಜನೆಯಲ್ಲಾಗಲಿ, ಶಿಕ್ಷಣದ ಬಗೆಗಿನ ನಿಲುವಲ್ಲಾಗಲಿ ಭಾರತದ ಎಲ್ಲ ಭಾಷೆಗಳನ್ನು ಪೊರೆಯುವ ನಿಲುವು ಇಂದಿಗೂ ಕಂಡಿಲ್ಲ. ಸುಪ್ರೀಂ ಕೋರ್ಟಿನ ತೀರ್ಪಿನಿಂದ ತಾಯ್ನುಡಿಯಲ್ಲಿ ಮೊದಲ ಹಂತದ ಶಿಕ್ಷಣ ಕಲ್ಪಿಸುವುದಕ್ಕೆ ಹಿನ್ನಡೆಯಾಗಿದ್ದರೂ ಇದಕ್ಕೆ ಸಂವಿಧಾನ ತಿದ್ದುಪಡಿ ತರುವತ್ತ ಕೇಂದ್ರ ಸರ್ಕಾರ ಯಾವುದೇ ಆಸಕ್ತಿ ತೋರಿಸಿಲ್ಲ.

ಒಟ್ಟಿನಲ್ಲಿ ಒಕ್ಕೂಟ ವ್ಯವಸ್ಥೆಯತ್ತ ಒಂದಿಷ್ಟು ಬದ್ಧತೆಯನ್ನು ಮೋದಿ ಸರ್ಕಾರ ತೋರಿದ್ದರೂ ಆಳದಲ್ಲಿ ರಾಜ್ಯಗಳಿಗಿಂತ ಕೇಂದ್ರಕ್ಕೆ ಹೆಚ್ಚು ಗೊತ್ತು, ಕೇಂದ್ರ ಹೇಳಿದಂತೆ ರಾಜ್ಯಗಳು ಕೇಳಲಿ ಅನ್ನುವ ನಿಲುವು ಇರುವಂತೆ ತೋರುತ್ತದೆ. ಭಾರತ ಒಂದು ಒಕ್ಕೂಟ ವ್ಯವಸ್ಥೆ ಅನ್ನುವುದನ್ನು ಎಂದಿಗೂ ಒಪ್ಪದ ಸಂಘಪರಿವಾರದ ಎಲ್ಲೆ ಮೀರಿ ಮೋದಿ ಭಾರತವನ್ನು ಒಂದು ಒಕ್ಕೂಟ ವ್ಯವಸ್ಥೆಯಾಗಿ ಬಲಪಡಿಸಬಹುದು ಅನ್ನುವುದು ಸಂದೇಹವೇ ಸರಿ. ಇದನ್ನು ಕಾಲವೇ ಉತ್ತರಿಸಲಿದೆ.

 

This entry was posted in ಒಕ್ಕೂಟ ವ್ಯವಸ್ಥೆ, ಹಿಂದಿ ಹೇರಿಕೆ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s