ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಿಸಲು ಟೊಂಕ ಕಟ್ಟಿ ನಿಂತಿರುವ ನಡಹಳ್ಳಿಯವರು ಇದಕ್ಕಾಗಿ ಮೂವತ್ತಕ್ಕೂ ಹೆಚ್ಚು ಸಂಘಸಂಸ್ಥೆಗಳನ್ನು ಸ್ಥಾಪಿಸುವ ಮಾತನ್ನಾಡಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಏಳಿಗೆಯಲ್ಲಿನ ಕೊರತೆಗಳಿಗೆ ಪ್ರತ್ಯೇಕ ರಾಜ್ಯವೇ ಪರಿಹಾರ ಅನ್ನುವ ಅತೀ ಸರಳೀಕರಿಸಿದ ವಾದವೊಂದನ್ನು ಹೊತ್ತು ಹೊರಟಿರುವ ಅವರು ಅತ್ಯಂತ ಮಹತ್ವಾಕಾಂಕ್ಷಿ ಅನ್ನುವುದು ಅವರ ರಾಜಕೀಯ ಜೀವನ ಮತ್ತು ಬಿಜಾಪುರ ಜಿಲ್ಲೆಯ ರಾಜಕೀಯವನ್ನು ಹತ್ತಿರದಿಂದ ಕಂಡವರು ಹೇಳಿಯಾರು. ಇವತ್ತಿಗೆ, ಏಳಿಗೆ ಇಲ್ಲವೇ ಪ್ರತ್ಯೇಕತೆ ಅನ್ನುವ ವಾದ ಅವರದ್ದಾಗಿದ್ದರೂ ಆಳದಲ್ಲಿ ಕರ್ನಾಟಕದ ಕೆ.ಸಿ.ಆರ್ ಆಗುವ ಉಮೇದು ಅವರಲ್ಲಿದೆ ಅನ್ನುವಂತೆಯೇ ತೋರುತ್ತಿದೆ. ಪ್ರತ್ಯೇಕತೆಯ ವಿಷಯದಲ್ಲಿ ಅವರು ಎತ್ತಿರುವ ಪ್ರಶ್ನೆಗಳೆಲ್ಲವೂ “ದಕ್ಷಿಣ ಕರ್ನಾಟಕ ಮತ್ತು ಅದರ ರಾಜಕಾರಣಿಗಳು ಉತ್ತರ ಕರ್ನಾಟಕದ ವಿರೋಧಿಗಳು” ಎಂಬಂತೆ ಬಿಂಬಿಸುವ ಮತ್ತು ಆ ಮೂಲಕ ಒಬ್ಬ ಸಾಮಾನ್ಯ ಶತ್ರುವನ್ನು ಹುಟ್ಟುವ ಹಾಕುವ ಪ್ರಯತ್ನದಂತಿದೆ. ಇಂತಹ ಮನಸ್ಸೊಡೆಯುವ ಪ್ರಯತ್ನಕ್ಕೆ ಮುಂದಾಗುವ ಮುನ್ನ ಇವತ್ತಿರುವ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ದೊಡ್ಡ ರಾಜ್ಯಗಳೇಕಿರಬೇಕು ಅನ್ನುವುದನ್ನು ಅವರು ಅರ್ಥ ಮಾಡಿಕೊಳ್ಳಬೇಕಿದೆ.
ಉತ್ತರ ಕರ್ನಾಟಕ ಅಂತ ಒಂದಿದೆಯೇ?
ದೊಡ್ಡ ರಾಜ್ಯಗಳೇಕಿರಬೇಕು ಅನ್ನುವ ಚರ್ಚೆಗೆ ಹೋಗುವ ಮುನ್ನ, ನಡಹಳ್ಳಿಯವರು ಪ್ರತಿಪಾದಿಸುತ್ತಿರುವ 13 ಜಿಲ್ಲೆಗಳ ಉತ್ತರ ಕರ್ನಾಟಕ ಅನ್ನುವ ಒಂದು ಭೌಗೋಳಿಕ ಗುರುತು ನಿಜಕ್ಕೂ ಇದೆಯೇ ಅನ್ನುವ ಪ್ರಶ್ನೆ ಎತ್ತಬೇಕಿದೆ. ಯಾವುದೇ ಒಂದು ಭೂಭಾಗವನ್ನು ಒಂದು ಗುರುತಿನಿಂದ ಕರೆಯಬೇಕೆಂದರೆ ಆ ಗುರುತಿಗೆ ಒಂದು ಇತಿಹಾಸವಿರಬೇಕಲ್ಲವೇ? ಈಗ ಉತ್ತರ ಕರ್ನಾಟಕದ ಭಾಗವೆಂದು ಪ್ರತ್ಯೇಕತಾವಾದಿಗಳು ಕರೆಯುತ್ತಿರುವ ಬೀದರಿಗೂ ಉತ್ತರ ಕನ್ನಡ ಜಿಲ್ಲೆಗೂ ಏನಾದರೂ ಸಂಬಂಧವಿದೆಯೇ? ಎರಡು ಜಿಲ್ಲೆಗಳ ಪರಿಸರ, ಆಚರಣೆ, ಆಹಾರ, ಸಂಸ್ಕೃತಿ ಹೀಗೆ ಎಲ್ಲದರಲ್ಲೂ ಸಾಕಷ್ಟು ಭಿನ್ನತೆ ಇದೆ. ಇತಿಹಾಸದಲ್ಲಿ ಇಣುಕಿ ನೋಡಿದರೆ ನಿಜವಾದ ಉತ್ತರ ಕರ್ನಾಟಕ ಯಾವುದು ಅಂತ ಹುಡುಕಿದರೆ ಇವತ್ತಿನ ಪೂರ್ತಿ ಮಹಾರಾಷ್ಟ್ರ ರಾಜ್ಯವೇ ಕಾಣಿಸೀತು. ಬೀದರಿಗೂ, ಉತ್ತರ ಕನ್ನಡಕ್ಕೂ, ಬೆಂಗಳೂರಿಗೂ, ಬಳ್ಳಾರಿಗೂ ಏನಾದರೂ ಸಾಮಾನ್ಯವಾದುದು ಇದೆಯೆಂದರೆ ಅದು ಕನ್ನಡ ಮಾತ್ರ. ಆ ಕಾರಣಕ್ಕಾಗಿಯೇ ಕನ್ನಡದ ಸುತ್ತ ಏಕೀಕರಣದ ಚಳುವಳಿಯಾಗಿತ್ತು. ಈಗ ಕನ್ನಡದ ಕೊಂಡಿಯೇ ಬೇಡ ಅನ್ನುವುದಾದರೆ ಕರ್ನಾಟಕವನ್ನು ಒಂದಲ್ಲ ಮೂವತ್ತು ಭಾಗ ಮಾಡಿದರೂ ಅದರಲ್ಲೇನು ವಿಶೇಷವಿರುವುದಿಲ್ಲ ಅಲ್ಲವೇ? ಉತ್ತರ ಕರ್ನಾಟಕ ಅನ್ನುವ ಪ್ರಜ್ಞೆ ಐತಿಹಾಸಿಕವಾದ ಹಿನ್ನೆಲೆಯನ್ನೇನಾದರೂ ಹೊಂದಿದ್ದರೆ ಕಲಬುರಗಿ ಮತ್ತು ಧಾರವಾಡ ಎರಡೂ ಜಿಲ್ಲೆಗಳು ಹೈಕೋರ್ಟ್ ಪೀಠ ತಮ್ಮಲ್ಲೇ ಆಗಲಿ ಎಂದು ವಾದಿಸುತ್ತಿರಲಿಲ್ಲ ಅಥವಾ ಈಗ ಐಐಟಿ ಧಾರವಾಡಕ್ಕೆ ಬೇಡ ರಾಯಚೂರಿಗೆ ಕೊಡಿ ಎಂದು ಮಲ್ಲಿಕಾರ್ಜುನ ಖರ್ಗೆಯಂತಹ ನಾಯಕರು ಕೇಳುತ್ತಿರಲಿಲ್ಲ ಅಲ್ಲವೇ? ಈ ಸದ್ಯದ ನಡಹಳ್ಳಿಯವರ ಪ್ರಯತ್ನವೆಲ್ಲವೂ “ಉತ್ತರ ಕರ್ನಾಟಕ” ಅನ್ನುವ ಇಲ್ಲದ ಅಸ್ತಿತ್ವವೊಂದನ್ನು ಜನರ ಮನಸ್ಸಲ್ಲಿ ಬಿತ್ತುವ ಪ್ರಯತ್ನದಂತಿದೆ.
ಭಾರತ ಒಕ್ಕೂಟದಲ್ಲಿ ದೊಡ್ಡ ರಾಜ್ಯಗಳೇಕಿರಬೇಕು?
ಚಿಕ್ಕ ರಾಜ್ಯಗಳು ಆಡಳಿತಕ್ಕೆ ಸುಲಭ ಅನ್ನುವ ವಾದ ಮಾಡುವವರು ಭಾರತದ ಒಕ್ಕೂಟ ವ್ಯವಸ್ಥೆಯನ್ನು, ಅಲ್ಲಿ ರಾಜ್ಯ ಮತ್ತು ಕೇಂದ್ರಗಳ ನಡುವೆ ಮಾಡಲಾಗಿರುವ ಅಧಿಕಾರ ಹಂಚಿಕೆಯನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಭಾರತದ ಸಂವಿಧಾನ ರಾಜ್ಯ ಮತ್ತು ಕೇಂದ್ರಗಳ ನಡುವೆ ಅಧಿಕಾರ ಹಂಚಿಕೆಯನ್ನು ಕೇಂದ್ರ, ರಾಜ್ಯ ಮತ್ತು ಜಂಟಿ ಪಟ್ಟಿ ಅನ್ನುವ ಮೂರು ಹೆಸರಿನಲ್ಲಿ ಹಂಚಿದೆ. ಜಂಟಿ ಪಟ್ಟಿಯಲ್ಲಿರುವ ಎಲ್ಲ ವಿಷಯಗಳ ಬಗ್ಗೆ ಕಾನೂನು ರೂಪಿಸುವ ಅಧಿಕಾರ ರಾಜ್ಯ ಮತ್ತು ಕೇಂದ್ರ ಎರಡಕ್ಕೂ ಇದ್ದರೂ ರಾಜ್ಯ-ಕೇಂದ್ರದ ನಡುವೆ ಭಿನ್ನಾಭಿಪ್ರಾಯ ಬಂದಾಗ ಕೇಂದ್ರದ ಮಾತೇ ಅಂತಿಮ ಎಂದು ಬರೆಯಲಾಗಿದೆ. ಜೊತೆಯಲ್ಲೇ ಯಾವಾಗ ಬೇಕಿದ್ದರೂ ರಾಜ್ಯ ಪಟ್ಟಿಯಲ್ಲಿರುವ ವಿಷಯವನ್ನು ಕೇಂದ್ರ ತನ್ನ ಹಿಡಿತಕ್ಕೆ ತೆಗೆದುಕೊಂಡು ಜಂಟಿ ಪಟ್ಟಿಗೆ ಸೇರಿಸುವ ಅಧಿಕಾರ ಹೊಂದಿದೆ. ಇದರ ಜೊತೆ ಆರ್ಥಿಕ ಸಂಪನ್ಮೂಲದ ಮೇಲೆ ಬಹುಪಾಲು ಹಿಡಿತ ಕೇಂದ್ರ ಸರ್ಕಾರಕ್ಕೆ ಮಾತ್ರವಿದೆ. ಇದರ ಜೊತೆಯಲ್ಲೇ ಜನಸಂಖ್ಯೆಯ ಆಧಾರದ ಮೇಲೆ ಸಂಸತ್ತಿನಲ್ಲಿ ರಾಜಕೀಯ ಪ್ರತಿನಿಧಿತ್ವ ಕಲ್ಪಿಸಿರುವ ಕಾರಣದಿಂದಾಗಿ ದೆಹಲಿಯಲ್ಲಿ ಹಿಂದಿ ಭಾಷಿಕರ ಪ್ರಾಬಲ್ಯವಿದೆ. ಇಂತಹದೊಂದು ವ್ಯವಸ್ಥೆಯಲ್ಲಿ ದೆಹಲಿಯಿಂದ ಒಂದು ರಾಜ್ಯಕ್ಕೆ ಬೇಕಿರುವ ಯೋಜನೆ, ಸಂಪನ್ಮೂಲ ತರುವಲ್ಲಿ ಒಂದು ರಾಜ್ಯದ ಸಂಸದರ ಸಂಖ್ಯೆ ಎಷ್ಟು ದೊಡ್ಡದಿದೆ ಅನ್ನುವುದು ಬಹಳ ಮುಖ್ಯವಾಗುತ್ತೆ. ಒಂದರಿಂದ ಹತ್ತು ಸಂಸದರಿರುವ ಚಿಕ್ಕ ರಾಜ್ಯಗಳಿಗೆ ದೆಹಲಿಯಲ್ಲಿ ಯಾವ ದನಿಯೂ ಇಲ್ಲ. ತೆಲಂಗಾಣವಾದ ನಂತರ ಎರಡೂ ತೆಲುಗು ರಾಜ್ಯಗಳು ದೆಹಲಿಯಲ್ಲಿ ಇದ್ದ ಎಲ್ಲ ಪ್ರಭಾವವನ್ನು ಕಳೆದುಕೊಂಡು ಅಪ್ರಸ್ತುತಗೊಂಡಿರುವುದನ್ನು ಇಲ್ಲಿ ನೆನೆಯಬೇಕು. ಈ ಆಯಾಮ ಪ್ರತ್ಯೇಕತೆಯ ಚರ್ಚೆಯಲ್ಲೆಲ್ಲೂ ಕರ್ನಾಟಕದಲ್ಲಿ ಕಾಣಬರುತ್ತಿಲ್ಲ. ಇದಲ್ಲದೇ ಚಿಕ್ಕ ರಾಜ್ಯವಾದಾಕ್ಷಣ ಆಡಳಿತ ಸುಲಭ, ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳನ್ನು ಸುಧಾರಿಸುವುದು ಸುಲಭ ಎಂದು ಬಿಂಬಿಸುವವರು ಭಾರತದಲ್ಲಿ ಹೊಸತಾಗಿ ಅಸ್ತಿತ್ವಕ್ಕೆ ಬಂದ ಚಿಕ್ಕ ರಾಜ್ಯಗಳ ಸ್ಥಿತಿಯನ್ನು ಅರಿಯಬೇಕಿದೆ. 2000ದಲ್ಲಿ ಹೊಸತಾಗಿ ಅಸ್ತಿತ್ವಕ್ಕೆ ಬಂದ ಜಾರ್ಖಂಡ್, ಛತ್ತೀಸಗಢ್, ಉತ್ತರಾಖಂಡ್ ಈ ಮೂರೂ ರಾಜ್ಯಗಳು ಆಡಳಿತಕ್ಕೆ ಕೇಂದ್ರದ ಹಣ ಸಹಾಯವನ್ನೇ ನೆಚ್ಚಿಕೊಂಡಿವೆ. 2006-2013ರ ನಡುವೆ ಛತ್ತೀಸಗಢ್,ಜಾರ್ಖಂಡ್ ಮತ್ತು ಉತ್ತರಾಖಂಡ್ ರಾಜ್ಯಗಳ ಆದಾಯದ ಪ್ರತಿ ನೂರು ರೂಪಾಯಿಯಲ್ಲಿ ಕೇಂದ್ರ ಕೊಟ್ಟ ಪಾಲು ಕ್ರಮವಾಗಿ 44.07, 56.74 ಮತ್ತು 55.89 ರೂಪಾಯಿಗಳಾಗಿತ್ತು. ಚಿಕ್ಕ ರಾಜ್ಯವಾದಷ್ಟು ದೆಹಲಿಯ ಹಿಡಿತದಲ್ಲಿ ಸರ್ಕಾರ ನಡೆಸಬೇಕಾಗುವುದು ಅನ್ನುವುದನ್ನು ಇವು ಸಾಬೀತು ಮಾಡಿವೆ. ಅಲ್ಲದೇ ಇದೇ ಅವಧಿಯಲ್ಲಿ ಛತ್ತೀಸಗಢ್ ರಾಜ್ಯದಲ್ಲಿ ನಕ್ಸಲ್ ಹಾವಳಿ ತೀವ್ರ ಸ್ವರೂಪದಲ್ಲಿ ಹೆಚ್ಚಾಗಿ, ರಾಜ್ಯದ ಕೆಲವು ಭಾಗಗಳಲ್ಲಿ ಸರ್ಕಾರದ ಅಸ್ತಿತ್ವವೇ ಇಲ್ಲದಿರುವ ಬೆಳವಣಿಗೆಯುಂಟಾಗಿದ್ದರೆ, ಜಾರ್ಖಂಡ್ ರಾಜ್ಯದಲ್ಲಿ ನಕ್ಸಲ್ ಹಾವಳಿಯ ಜೊತೆಗೆ ತೀವ್ರ ಸ್ವರೂಪದ ರಾಜಕೀಯ ಅಸ್ಥಿರತೆ ಉಂಟಾಗಿ 14 ವರ್ಷಗಳಲ್ಲಿ 10 ಬಾರಿ ಮುಖ್ಯಮಂತ್ರಿ ಬದಲಾವಣೆ ಮತ್ತು ಮೂರು ಬಾರಿ ರಾಷ್ಟ್ರಪತಿ ಆಡಳಿತ ಹೇರಲಾಗಿತ್ತು ಅನ್ನುವುದನ್ನು ಇಲ್ಲಿ ಪ್ರತ್ಯೇಕತೆಯ ರಾಗ ಹಾಡುವ ನಾಯಕರು ಗಮನಿಸಬೇಕಿದೆ. ನಮ್ಮೊಳಗಿನ ಸಮಸ್ಯೆಗಳನ್ನು ನಾವೇ ಕೂತು ಬಗೆಹರಿಸಿಕೊಳ್ಳುವ ಜಾಣ್ಮೆ ತೋರದೆ ಇವತ್ತಿನ ರಾಜಕೀಯ ಲಾಭದ ಲೆಕ್ಕಾಚಾರದಲ್ಲಿ ಕರ್ನಾಟಕ ಒಡೆದರೆ ಅದು ಕನ್ನಡಿಗರೆಲ್ಲರಿಗೂ ತೊಂದರೆ ಮಾಡುವಂತದ್ದು ಅನ್ನುವುದನ್ನು ಪ್ರತ್ಯೇಕತಾವಾದಿಗಳು ಅರಿತರೆ ಒಳ್ಳೆಯದು.
———————————————XXXXX —————————————————
ಜಾಗತೀಕರಣದ ಈ ಹೊತ್ತಿನಲ್ಲಿ ಕಳೆದ ಎರಡು ಸಾವಿರ ವರ್ಷಗಳಲ್ಲೇ ಎದುರಿಸದಂತಹ ಸವಾಲುಗಳನ್ನು ಕನ್ನಡ ಎದುರಿಸುತ್ತಿದೆ. ಕನ್ನಡ ಕಲಿಕೆಯ ಭಾಷೆಯ ಪಟ್ಟದಿಂದ ಜಾರುತ್ತಿದೆ. ಕನ್ನಡಕ್ಕಿರುವ ಕಸುವು, ವ್ಯಾಪ್ತಿ ಹಿಗ್ಗದೇ ಕುಗ್ಗುತ್ತಿದೆ, ತಂತ್ರಜ್ಞಾನವನ್ನು ಒಗ್ಗಿಸಿಕೊಳ್ಳುವಲ್ಲಿ ಸೋಲುತ್ತಿದೆ, ಅದರೊಟ್ಟಿಗೆ ಪ್ರತ್ಯೇಕತೆಯ ಸವಾಲುಗಳು ಎದುರಾಗಿವೆ. ಇಂತಹ ಸಂದರ್ಭದಲ್ಲಿ ಜಗತ್ತಿನ ಇತರೆ ಭಾಷಿಕರು ಇಂತಹ ಸವಾಲುಗಳನ್ನು ಹೇಗೆ ಎದುರಿಸಿದರು, ಅವರಿಂದ ನಾವೇನು ಕಲಿಯಬಹುದು ಅನ್ನುವುದನ್ನು ಹೇಳುವ ಪ್ರಯತ್ನವಾಗಿ ಶುರುವಾಗಿದ್ದು ಉದಯವಾಣಿಯ “ಕನ್ನಡ ಜಗತ್ತು” ಅನ್ನುವ ಅಂಕಣ. 77 ವಾರಗಳ ನಿರಂತರ ಬರವಣಿಗೆಯ ನಂತರ ಕೆಲವು ರಿಸರ್ಚ್ ಯೋಜನೆಗಳತ್ತ ಸಮಯ ಮತ್ತು ಗಮನ ಕೊಡಲು ಅಂಕಣ ಬರಹಕ್ಕೆ ಒಂದು ಬಿಡುವು ತೆಗೆದುಕೊಳ್ಳುತ್ತಿರುವೆ. ಹೀಗಾಗಿ ಕನ್ನಡ ಜಗತ್ತಿನ ಪ್ರಯಾಣಕ್ಕೆ ಇಂದು ತೆರೆ ಬೀಳಲಿದೆ. ನನ್ನ ಮೇಲೆ ನಂಬಿಕೆಯಿಟ್ಟು ಈ ಅಂಕಣವನ್ನು ಕೊಟ್ಟ ಉದಯವಾಣಿಯ ಸಂಪಾದಕರಾದ ಶ್ರೀ.ರವಿ ಹೆಗಡೆಯವರಿಗೂ, ಅಂಕಣದ ಉಸ್ತುವಾರಿ ಹೊತ್ತಿದ್ದ ಶ್ರೀ.ಮಹಾಬಲ ಅವರಿಗೂ ಈ ಹೊತ್ತಿನಲ್ಲಿ ಮನದಾಳದಿಂದ ವಂದಿಸುವೆ.