ಬಾಹುಬಲಿ ಅನ್ನುವ ತೆಲುಗು ಚಿತ್ರ ಕರ್ನಾಟಕದಲ್ಲಿ ಇನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ. ಕನ್ನಡಕ್ಕೆ ಡಬ್ಬಿಂಗ್ ಬಂದರೆ ಕನ್ನಡಕ್ಕೂ, ಕನ್ನಡ ಸಂಸ್ಕೃತಿಗೂ ತೊಂದರೆ ಅನ್ನುವ ವಾದ ಮಾಡುತ್ತಿದ್ದ ನಿರ್ಮಾಪಕರೇ ಈ ಚಿತ್ರವನ್ನು ಕರ್ನಾಟಕದೆಲ್ಲೆಡೆ ತೆರೆಕಾಣಿಸಿ “ಕನ್ನಡದ ಸೇವೆ”ಗೈದಿರುವುದು ಇನ್ನೊಂದು ವಿಶೇಷ. ಈ ಹೊತ್ತಿನಲ್ಲಿ ಕನ್ನಡದಲ್ಲಿ ಡಬ್ಬಿಂಗ್ ನಿಷೇಧದ ಔಚಿತ್ಯವನ್ನು ಪ್ರಶ್ನಿಸಬೇಕಾದ ಅಗತ್ಯ ನಮ್ಮ ಮುಂದಿದೆ. ಮೊದಲಿಗೆ, ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ 7-8% ಇರುವ ತೆಲುಗರಿಗಾಗಿ ಇರುವ 600 ಚಿತ್ರಮಂದಿರಗಳಲ್ಲಿ 200ರಲ್ಲಿ ಬಾಹುಬಲಿ ಬಿಡುಗಡೆ ಮಾಡಲು ಸಾಧ್ಯವೇ? ತೆಲುಗರು ಒಂದಿಷ್ಟು ಪ್ರಮಾಣದಲ್ಲಿರುವ ಬೆಂಗಳೂರು ಮತ್ತು ಗಡಿ ಭಾಗದ 40-50 ಚಿತ್ರಮಂದಿರಗಳಲ್ಲಿ ತೆಲುಗು ಸಿನೆಮಾ ಎರಡು ವಾರ ಓಡಬಹುದು. ಹಾಗಿದ್ದರೆ ಉಳಿದ 150 ಚಿತ್ರಮಂದಿರಗಳಲ್ಲಿ ಸಿನೆಮಾ ನೋಡುವವರು ಯಾರು? ಕನ್ನಡಿಗರೇ ಅಲ್ಲವೇ? ಅವರಿಗೆಲ್ಲ ತೆಲುಗು ಬರುತ್ತದೆಯೇ? ಅವರೆಲ್ಲ ತೆಲುಗು ಸಿನೆಮಾ ನೋಡಿ, ನೋಡಿ ತೆಲುಗು ಕಲಿಯುವುದಕ್ಕಿಂತ ಕನ್ನಡದಲ್ಲೇ ಡಬ್ ಆಗಿ ಚಿತ್ರ ನೋಡಿದರೆ ಕನ್ನಡ ಬಿಟ್ಟು ಇನ್ನೊಂದು ಭಾಷೆಗೆ ಹೋಗುವ ಅಪಾಯವನ್ನಾದರೂ ತಪ್ಪಿಸಬಹುದಿತ್ತಲ್ಲವೇ? ಹುಬ್ಬಳ್ಳಿಯಂತಹ ಊರಿನಲ್ಲಿ ಬಾಹುಬಲಿ ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗುತ್ತೆ, ಆದರೆ ಕನ್ನಡದಲ್ಲಿ ಇದೇ ಚಿತ್ರ ಬಂದರೆ ನಮ್ಮ ಸಂಸ್ಕೃತಿ ನಾಶವಾಗುತ್ತೆ ಅನ್ನುವುದು ಎಂತಹ ವಿಚಿತ್ರ ವಾದವಲ್ಲವೇ? ಬದಲಿಗೆ, ಡಬ್ಬಿಂಗ್ ಮೂಲಕ ಕನ್ನಡದಲ್ಲೇ ಎಲ್ಲವನ್ನೂ ನೋಡುವುದು ರೂಢಿಯಾದ ಕನ್ನಡಿಗರು ಹೆಚ್ಚೆಚ್ಚು ಬಗೆಯ ಕನ್ನಡ ಕಂಟೆಂಟ್ ಅನ್ನು ನೋಡುವ ಸಾಧ್ಯತೆ ಹೆಚ್ಚು. ಅದರಿಂದ ಕನ್ನಡ ಬೆಳೆಯುವುದೂ ಅಲ್ಲದೇ ಕನ್ನಡದ ಮಾರುಕಟ್ಟೆಯ ಸಾಧ್ಯತೆಯೂ ಬೆಳೆಯುವುದಿಲ್ಲವೇ ? ಡಬ್ಬಿಂಗ್ ಬಿಟ್ಟುಕೊಂಡಿರುವ ತೆಲುಗು, ತಮಿಳಿನಲ್ಲಿ ಜನರು ಹೆಚ್ಚು ತಮ್ಮ ನುಡಿಗೆ ಅಂಟಿಕೊಳ್ಳುವಲ್ಲಿ ಡಬ್ಬಿಂಗ್ ಖಂಡಿತ ಒಂದು ದೊಡ್ಡ ಪಾತ್ರವಹಿಸಿದೆ. ಡಬ್ಬಿಂಗ್ ಇಲ್ಲದಿರುವುದರಿಂದ ಮನರಂಜನೆಯ ಮೊದಲ ಆಯ್ಕೆಯ ನುಡಿಯಾಗಿ ಕನ್ನಡ ತನ್ನ ಸ್ಥಾನ ಕಳೆದುಕೊಳ್ಳುತ್ತಿದೆ ಮತ್ತು ಮನರಂಜನೆಯ ವಿಷಯದಲ್ಲಿ ಕನ್ನಡಕ್ಕಿರುವ ಮಾರುಕಟ್ಟೆಯ ಸಾಧ್ಯತೆಯೂ ಕುಸಿಯುತ್ತಿದೆ. ತೆಲುಗು, ತಮಿಳು ಚಿತ್ರೋದ್ಯಮಗಳು ಸರಿ ಸುಮಾರು ಎರಡು ಸಾವಿರ ಕೋಟಿ ರೂಪಾಯಿಯ ಉದ್ಯಮವಾಗಿದ್ದರೆ ಕನ್ನಡ ಇನ್ನೂ ಇನ್ನೂರು-ಮುನ್ನೂರು ಕೋಟಿಯಲ್ಲೇ ಒದ್ದಾಡುತ್ತಿರುವುದನ್ನು ಈ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳಬೇಕು. ಅಲ್ಲದೇ ಡಬ್ಬಿಂಗ್ ನಿಷೇಧದ ಕಾರಣದಿಂದ ಕಾರ್ಟೂನು, ವಿಜ್ಞಾನವಾಹಿನಿಗಳು ಕನ್ನಡಕ್ಕೆ ಬಾರದೇ ಪುಟ್ಟ ಮಕ್ಕಳು ಕನ್ನಡಕ್ಕಿಂತ ಮೊದಲೇ ಹಿಂದಿ/ಇಂಗ್ಲಿಷ್ ಕಲಿಯುವ ಬದಲಾವಣೆಗಳಾಗುತ್ತಿವೆ. ಇವುಗಳ ಕೆಟ್ಟ ಪರಿಣಾಮ ಇನ್ನೊಂದೆರಡು ದಶಕದಲ್ಲಿ ದೊಡ್ಡ ಮಟ್ಟದಲ್ಲೇ ಕಾಣಿಸಲಿದೆ.
ಕನ್ನಡ ಚಿತ್ರೋದ್ಯಮದ ಕೆಲವರು ತಮ್ಮ ಸ್ವಾರ್ಥ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು, ರಿಮೇಕ್, ರಿಮಿಕ್ಸಿನ ತಂಗಳನ್ನವನ್ನೇ ಕನ್ನಡಿಗರಿಗೆ ಬಡಿಸುವುದನ್ನು ಮುಂದುವರೆಸಲು ಡಬ್ಬಿಂಗ್ ಅನ್ನು ಕನ್ನಡ ವಿರೋಧಿ ಅಂತ ತೋರಿಸುವ ಕೆಲಸ ಮಾಡುತ್ತಿದ್ದಾರೆ. ಬಾಹುಬಲಿಯ ಇಂತಹ ಅಬ್ಬರದ ನಡುವೆಯೂ ರಂಗಿತರಂಗದಂತಹ ನೆಲದ ಸೊಗಡಿರುವ ಹೊಸಬರ ಕತೆಯನ್ನು ಕನ್ನಡಿಗರು ಅಪ್ಪಿಕೊಂಡು ಪೊರೆಯುತ್ತಿರುವುದು ಡಬ್ಬಿಂಗ್ ಬಗೆಗಿನ ಅತಿರಂಜಿತ ಭಯವೆಲ್ಲ ಕಲ್ಪಿತ ಅನ್ನುವುದನ್ನು ಸಾಧಿಸುತ್ತಿವೆ. ವಿಶ್ವಸಂಸ್ಥೆಯ ಬಾರ್ಸಿಲೋನಾ ಭಾಷಾ ಹಕ್ಕುಗಳ ಘೋಷಣೆ ಡಬ್ಬಿಂಗ್ ಅನ್ನು ಭಾಷೆ ಬೆಳೆಸುವ, ಹರಡುವ ಒಂದು ಸಾಧನವೆಂದೇ ಕರೆದಿದೆ. ಯುರೋಪಿನ ಬಹುತೇಕ ದೇಶಗಳು ಹೊರಗಿನಿಂದ ಬರುವ ಚಿತ್ರಗಳು ತಮ್ಮ ಭಾಷೆಗೆ ಡಬ್ ಆಗಿಯೇ ಬರಬೇಕು ಅನ್ನುವ ಕಟ್ಟಳೆ ಹಾಕುತ್ತವೆ. ಭಾರತದ ಸಂವಿಧಾನ ಮತ್ತು ಕಾನೂನುಗಳು ಡಬ್ಬಿಂಗ್ ಅನ್ನು ನಿಷೇಧಿಸಿಲ್ಲ. ಹೀಗಿದ್ದರೂ ಕೆಲವರ ವೈಯಕ್ತಿಕ ಕಟ್ಟುಪಾಡುಗಳು ಒಂದಿಡೀ ಜನಸಮುದಾಯದ ಭಾಷಾ ಹಕ್ಕುಗಳನ್ನೇ ಕಸಿದುಕೊಳ್ಳುತ್ತಿರುವುದನ್ನು ನೋಡುತ್ತ ರಾಜ್ಯ ಸರ್ಕಾರ ಸುಮ್ಮನೆ ಕೂರಬಾರದು. ಕನ್ನಡಕ್ಕೆ ಡಬ್ಬಿಂಗ್ ಬರಲಿ. ಕನ್ನಡದ ಉದ್ಯಮದ ಹಿತವನ್ನು ಕಾಯ್ದುಕೊಂಡು, ಕನ್ನಡಿಗರಿಗೆ ಜಗತ್ತಿನ ಎಲ್ಲ ಬಗೆಯ ಮಾಹಿತಿ, ಮನರಂಜನೆಯೂ ಕನ್ನಡದಲ್ಲಿ ದೊರೆಯುವಂತೆ ಮಾಡುವ ನಡುವಿನ ಹಾದಿಯೊಂದು ಕಂಡುಕೊಳ್ಳುವ ಕೆಲಸ ಈಗ ತುರ್ತಾಗಿ ಆಗಲಿ.