ಪ್ರಜಾವಾಣಿಯಲ್ಲಿ ಇತ್ತೀಚಿಗೆ ಕನ್ನಡದಲ್ಲಿನ ಮಹಾಪ್ರಾಣಗಳ ಬಳಕೆ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ಅದನ್ನು ಹುಟ್ಟು ಹಾಕಿದ್ದು ನಾಗೇಶ್ ಹೆಗಡೆಯವರು. ಜುಲೈ 7 ರ ಪ್ರಜಾವಾಣಿಯಲ್ಲಿ ನಾಗೇಶ್ ಹೆಗಡೆಯವರು ಬರೆದಿರುವ ಓಲೆಯೊಂದು ಮೂಡಿಬಂದಿತ್ತು. ಕನ್ನಡ ಮಾದ್ಯಮ ಪಠ್ಯಪುಸ್ತಕಗಳಲ್ಲಿ ಉಂಟಾಗಿರುವ ಕಾಗುಣಿತ ತಪ್ಪುಗಳ ಬಗ್ಗೆ ಆ ಓಲೆಯಲ್ಲಿ ಹೇಳಲಾಗಿತ್ತು. ಆ ಓಲೆಯನ್ನು ಕೆಳಗೆ ನೋಡಬಹುದು.
ಜುಲೈ 7 ವಾಚಕರ ವಾಣಿಯಲ್ಲಿ ಬಂದ ನಾಗೇಶ್ ಹೆಗಡೆಯವರ ಓಲೆ
ಅವರ ಓಲೆಯಲ್ಲಿ ಹೆಸರಿಸಿದ ತಪ್ಪುಗಳೆಲ್ಲವೂ ಮಹಾಪ್ರಾಣಗಳ ಗೊಂದಲದಿಂದ ಆಗಿರುವಂತದ್ದು ಎಂಬುದು ಓದಿದರೆ ಗೊತ್ತಾಗುತ್ತದೆ. ಈ ಓಲೆಯಿಂದ ಮಹಾಪ್ರಾಣಗಳ ಬಗ್ಗೆ ಚರ್ಚೆ ಶುರುವಾಯಿತು.
ಅದಕ್ಕೆ ಉತ್ತರವಾಗಿ ” ಕಾಗುಣಿತ ತಪ್ಪಾಗಿರುವ ಆ ಪದಗಳೆಲ್ಲವೂ ಕನ್ನಡಕ್ಕೆ ಎರವಲಾಗಿ ಬಂದ ಪದಗಳು. ‘ಮಹಾಪ್ರಾಣ’ ಬಳಕೆ ಇಂತ ಗೊಂದಲವನ್ನು ಹುಟ್ಟು ಹಾಕಿದೆ. ಕನ್ನಡಿಗರ ಆಡುಮಾತಿನಲ್ಲಿ ಬಳಕೆಯಾಗದ ಮಹಾಪ್ರಾಣಗಳನ್ನು ವರ್ಣಮಾಲೆಯಲ್ಲಿ ಉಳಿಸಿಕೊಂಡಿರುವದರಿಂದ ಬರೆಯುವಾಗ ಇಂತ ತಪ್ಪುಗಳು ಆಗುವವು. ಬರವಣಿಗೆಯನ್ನು ಆದಷ್ಟು ಆಡುಮಾತಿನ ಹತ್ತಿರಕ್ಕೆ ಕೊಂಡೊಯ್ದರೆ ಇಂತ ತಪ್ಪುಗಳನ್ನು ತಪ್ಪಿಸಬಹುದಲ್ಲದೇ ಬರವಣಿಗೆಯನ್ನು ಸರಳಗೊಳಿಸಬಹುದಾಗಿದೆ “ ಎಂದು ಸಾರಾಂಶವಿರುವ ಓಲೆಯೊಂದನ್ನು ಪ್ರಜಾವಾಣಿಗೆ ಜುಲೈ 8 ರಂದು ಕಳಿಸಲಾಗಿತ್ತು ಮತ್ತು ಆ ಓಲೆ ಜುಲೈ 9 ರ ಪ್ರಜಾವಾಣಿಯ ವಾಚಕರ ವಾಣಿಯಲ್ಲೂ ಮೂಡಿಬಂದಿತ್ತು.
ಜುಲೈ 9 ರ ವಾಚಕರ ವಾಣಿಯಲ್ಲಿ ಬಂದ ನನ್ನ ಓಲೆ
ಇದಕ್ಕೆ ಉತ್ತರವಾಗಿ ನಾಗೇಶ್ ಹೆಗಡೆಯವರು ಮತ್ತೊಂದು ಓಲೆಯೊಂದನ್ನು ಬರೆದರು. ಮಹಾಪ್ರಾಣಗಳನ್ನು ಏಕೆ ಉಳಿಸಿಕೊಳ್ಳಬೇಕು ಎಂಬ ಅವರ ವಾದಕ್ಕೆ ಪೂರಕವಾಗಿರುವ ವಿಷಯಗಳು ಆ ಓಲೆಯಲ್ಲಿರಲಿಲ್ಲ. ಬದಲಿಗೆ, ದಕ್ಷಿಣ ಭಾಗದ ಕನ್ನಡಿಗರ ಆಡುಮಾತಿನಲ್ಲಿ ’ಅ’ಕಾರ ಮತ್ತು ’ಹ’ಕಾರಗಳ ನಡುವೆ ವ್ಯತ್ಯಾಸ ಇಲ್ಲದಿರುವುದನ್ನು ಎತ್ತಿತೋರಿಸುವ ಉತ್ತರವನ್ನು ಅವರು ನೀಡಿದ್ದರು. ಕೆಲವು ಕನ್ನಡಿಗರು ಕನ್ನಡ ನುಡಿಯುವ ಬಗೆಯನ್ನೇ ಆಡಿಕೊಂಡಂತಿತ್ತು ಅವರ ಓಲೆ. ಅದು ಜುಲೈ 10 ರ ಪ್ರಜಾವಾಣಿಯಲ್ಲಿ ಪ್ರಕಟಗೊಂಡಿತ್ತು.
ಜುಲೈ 10 ರ ವಾಚಕರ ವಾಣಿಯಲ್ಲಿ ಬಂದ ನಾಗೇಶ್ ಹೆಗಡೆಯವರ ಓಲೆ
ಜುಲೈ 10 ರ ನಾಗೇಶ್ ಹೆಗಡೆಯವರ ಓಲೆಗೆ ಉತ್ತರವಾಗಿ ಸಿ.ಪಿ ನಾಗರಾಜ್ ಎಂಬುವರು ಕನ್ನಡ ನುಡಿಯ ರಚನೆ, ಒಳ ನುಡಿಗಳ ಸ್ವರೂಪ, ನುಡಿಯ ಉಚ್ಚಾರಣೆ ಮತ್ತು ಭಾಷಾವಿಜ್ಞಾನದ ಬಗ್ಗೆ ತುಸು ಬೆಳಕು ಬೀರುವಂತ ಪ್ರತಿಕ್ರಿಯೆ ನೀಡಿದ್ದರು. ಅವರ ಓಲೆ ಜುಲೈ 13 ರ ಪ್ರಜಾವಾಣಿಯಲ್ಲಿ ಪ್ರಕಟಗೊಂಡಿತ್ತು.
ಜುಲೈ 13 ರ ವಾಚಕರ ವಾಣಿಯಲ್ಲಿ ಬಂದ ಸಿ.ಪಿ ನಾಗರಾಜ್ ಅವರ ಓಲೆ
ನಾಗೇಶ್ ಹೆಗಡೆಯವರು ಪ್ರಸ್ತಾಪಿಸಿದ ‘ಹ’ ಕಾರ – ‘ಅ’ ಕಾರ ವಿಷಯಕ್ಕಷ್ಟೇ ಅಲ್ಲದೇ, ಬರವಣಿಗೆಯಲ್ಲಿ ಮಹಾಪ್ರಾಣಗಳ ಬಳಕೆ ತರುವ ಗೊಂದಲಗಳು, ಏಳಿಗೆಯಲ್ಲಿ ಕಲಿಕೆಯ ಪಾತ್ರ, ಕಲಿಕೆಯಲ್ಲಿ ಸಮಾಜದ ಎಲ್ಲಾ ವರ್ಗದ ಜನರ ಒಳಗೊಳ್ಳುವಿಕೆ, ಆ ನಿಟ್ಟಿನಲ್ಲಿ ಲಿಪಿ ಸುಧಾರಣೆಯ ಅನುಕೂಲಗಳ ಕುರಿತು ನನ್ನ ಅನಿಸಿಕೆಯನ್ನು ಪ್ರಜಾವಾಣಿಗೆ ಜುಲೈ 11 ರಂದು ಕಳಿಸಿದ್ದೆ. ಆದರೆ ಅದು ಪ್ರಕಟವಾಗಲಿಲ್ಲವಾದ್ದರಿಂದ ಆ ಓಲೆಯನ್ನು ಇಲ್ಲಿ ಹಂಚಿಕೊಳ್ಳಲು ಬಯಸುವೆ. ಪ್ರಜಾವಾಣಿಗೆ ಕಳಿಸಿದ್ದ ಓಲೆ ಹೀಗಿದೆ.
===============================================================
ಜುಲೈ 10ರ ವಾ. ವಾ. ನಲ್ಲಿ ನಾಗೇಶ್ ಹೆಗಡೆಯವರು ಮಹಾಪ್ರಾಣಗಳು ಹುಟ್ಟಾಕಿರುವ ಗೊಂದಲದ ಬಗೆಗಿನ ಚರ್ಚೆಯಲ್ಲಿ ಹ ಕಾರ – ಅ ಕಾರ ವಿಷಯದ ಬಗ್ಗೆ ಬರೆದಿದ್ದಾರೆ. ‘ಹ’ ಕಾರದ ಬಗ್ಗೆ ಹೇಳಬೇಕೆಂದರೆ – ಇಂದಿನ ‘ಹ’ ಕಾರವು ಹಳಗನ್ನಡದ ‘ಪ’ ಕಾರದ ಮಾರ್ಪಾಡು. ಹಾಗೆಯೇ, ಹ ಕಾರದ ಬದಲು ಅ ಕಾರ ಕೂಡ. ಇದರರ್ಥ, ನುಡಿಯ ಬೆಳವಣಿಗೆ ಅಥವಾ ಹಬ್ಬುವಿಕೆಯಲ್ಲಿ ಮಾರ್ಪಾಡುಗಳು ಸ್ವಾಭಾವಿಕ ಎಂಬುವುದು. ಬೇರೆ ಬೇರೆ ಕಡೆಗಳಲ್ಲಿ ಬಗೆ ಬಗೆಯ ಶೈಲಿಯಲ್ಲಿ ಕನ್ನಡವನ್ನು ಮಾತಾಡುವುದು ನಿಜವೇ. ಆದರೆ ಜನರು ಸ್ವಾಭಾವಿಕವಾಗಿ ಕನ್ನಡ ಮಾತಾಡುವ ಬಗೆಯನ್ನು, ‘ಸರಿಯೇ?’- ‘ತಪ್ಪೇ?’ ಎಂದು ಒರೆಗೆ ಹಚ್ಚುವುದು ಅಥವಾ ಆಡಿಕೊಳ್ಳುವುದು – ಆ ಮಂದಿಯನ್ನೇ ಹೀಗಳೆದಂತೆ. ಬರವಣಿಗೆ ಬಗ್ಗೆ ಹೇಳಬೇಕೆಂದರೆ – ಜನರು ಬೇರೆ ಬೇರೆ ರೀತಿಯಲ್ಲಿ ಕನ್ನಡ ಮಾತಾಡುವಾಗ, ಅವರೆಲ್ಲರೂ ಒಪ್ಪುವಂತ ಬರವಣಿಗೆಯ ಕಟ್ಟುಪಾಡುಗಳಿರಬೇಕು ಮತ್ತು ಆ ಕಟ್ಟುಪಾಡುಗಳು ಆ ಎಲ್ಲರಿಗೂ ಸಮಾನ ಹತ್ತಿರದಲ್ಲಿರಬೇಕು. ‘ಹ’ ಕಾರದ ಬದಲಿಗೆ ‘ಅ’ ಕಾರದ ಬಳಕೆ ಹೆಗಡೆಯವರೇ ಹೇಳಿದಂತೆ ದಕ್ಷಿಣ ಭಾಗದ ಕೆಲ ಜನರಲ್ಲಿ ಮಾತ್ರವಿದೆ. ಎಲ್ಲಾ ಭಾಗದ ಕನ್ನಡಿಗರ ಉಲಿಕೆಯಲ್ಲೂ ಮಹಾಪ್ರಾಣಗಳಿಲ್ಲ. ಆದರೆ ಬರವಣಿಗೆಯಲ್ಲಿ ಮಹಾಪ್ರಾಣದ ಬಗೆಗಿನ ತೊಡಕು ಎಲ್ಲ ಭಾಗದ ಕನ್ನಡಿಗರಲ್ಲೂ ಇದೆ. ಉದಾಹರಣೆ : ವಿಶೇಷ, ವಿಶಿಷ್ಟ – ಈ ಪದಗಳನ್ನು ಹೇಳುವಾಗ ಸಣ್ಣ ಶ ಮತ್ತು ದೊಡ್ಡ ಷ ಬೇರೆ ಬೇರೆಯಾಗಿ ಹೇಳುವುದಿಲ್ಲ. ಸಣ್ಣ ಶ ವನ್ನೇ ಬಳಸಿ ಈ ಪದಗಳನ್ನು ಹೇಳುತ್ತೇವೆ. ‘ದಕ್ಷಿಣ’ ಎಂದು ಹೇಳುವಲ್ಲಿಯೂ ಸಣ್ಣ ‘ಶ’ ವನ್ನೇ ಉಲಿಯುತ್ತೇವೆ. ಆದರೆ ಬರೆಯುವಾಗ ‘ಷ’ ಬದಲು ‘ಶ’ ವನ್ನು ಬಳಸಿದರೆ, ಅವರನ್ನು ತಪ್ಪಿತಸ್ಥರನ್ನಾಗಿ ನೋಡಲಾಗುತ್ತದೆ. ಇಂಥ ಗೊಂದಲಗಳಿಂದಲೇ ಹಬ್ಬ-ಹರಿದಿನಗಳ ಹಾರೈಕೆಗಳಲ್ಲಿ ‘ಶುಭಾಶಯ’ ಬದಲಿಗೆ ‘ಶುಬಾಷಯ’, ‘ಷುಭಾಶಯ’ ಗಳು ಎಲ್ಲರಿಗೂ ನೋಡಸಿಗುತ್ತವೆ. ಗಮನಿಸಬೇಕಿರುವ ಅಂಶವೆಂದರೆ ಇಂಥ ಗೊಂದಲಗಳು ಕನ್ನಡಕ್ಕೆ ಎರವಲಾಗಿ ಬಂದ ಪದಗಳಲ್ಲಿ ಹೆಚ್ಚೆಚ್ಚು ಕಾಣುವುವು ಮತ್ತು ಈ ಗೊಂದಲಗಳು, ಮಹಾಪ್ರಾಣಗಳು ಬಳಕೆಯಾಗದೇ ಇರುವ ಪದಗಳಲ್ಲೂ ಬಳಸುವಂತೆ ಮಾಡಿದೆ. ಬರಹದಲ್ಲಿನ ಶಿಸ್ತಿನ ಬಗ್ಗೆ ಮಾತಾಡುವಾಗ ಎಲ್ಲರಿಗೂ ತೊಂದರೆ ನೀಡುತ್ತಿರುವ ಇಂಥ ತೊಡಕುಗಳನ್ನು ಮೊದಲಿಗೆ ಸರಿಪಡಿಸಬೇಕಾಗುತ್ತದೆ. ನಾಡಿನ ಮತ್ತು ಜನರ ಏಳಿಗೆಯಲ್ಲಿ ಕಲಿಕೆಯ ಪಾತ್ರ ದೊಡ್ಡದಿದೆ. ಈ ನಿಟ್ಟಿನಲ್ಲಿ ಓದು-ಬರವಣಿಗೆಯಲ್ಲಿ ಹೆಚ್ಚು ಹೆಚ್ಚು ಮಂದಿಯನ್ನು ತೊಡಗಿಸುವಲ್ಲಿ ಅನುಕೂಲವಿದೆಯೇ ಹೊರತು ಅವರನ್ನು ದೂರ ತಳ್ಳುವುದರಿಂದ ಅಲ್ಲ. ಓದು-ಬರವಣಿಗೆ ಎಲ್ಲರ ಸ್ವತ್ತು ಆಗಿರುವುದರಿಂದ, ಮಾತು ಮತ್ತು ಬರಹದ ನಡುವಿನ ವ್ಯತ್ಯಾಸ ಕಡಿಮೆಯಾದಷ್ಟೂ ಹೆಚ್ಚು ಜನರು ತೊಡಗಿಕೊಳ್ಳುತ್ತಾರೆ ಎಂಬುದನ್ನು ಅರಿಯಬೇಕಿದೆ. ಆಡುಮಾತಿಗೆ ಪೂರ್ತಿಯಾಗಿ ತಾಳೆಯಾಗುವಂತ ಬರವಣಿಗೆ ಹೊಂದಿರುವ ನುಡಿ ಯಾವುದೂ ಇರಲಾರದು. ಬರವಣಿಗೆಯನ್ನು ಆಡುಮಾತಿಗೆ ಆದಷ್ಟೂ ಹತ್ತಿರ ಒಯ್ಯಬೇಕು ಎಂಬ ಹೇಳಿಕೆಯಲ್ಲಿ, ‘ಆದಷ್ಟೂ’ ಎಂಬುದನ್ನು ಗಮನಿಸಬೇಕು. ಕನ್ನಡದ ಬಗ್ಗೆ ನಡೆಯುತ್ತಿರುವ ಚರ್ಚೆಯಲ್ಲಿ ಕನ್ನಡೇತರ (ಇಂಗ್ಲಿಶ್) ನುಡಿಯನ್ನು ತರುವುದು ಬೇಕಾಗಿರಲಿಲ್ಲ. ಇಂಗ್ಲೀಶ್ ಅಥವಾ ಫ್ರೆಂಚ್ ಭಾಷೆಯಲ್ಲಿ ಲಿಪಿ ಸುಧಾರಣೆ ಮಾಡಿಕೊಳ್ಳುವುದು-ಬಿಡುವುದು ಆ ಭಾಷಿಕರಿಗೆ ಬಿಟ್ಟದ್ದು. ಆ ಬಗ್ಗೆ ಕನ್ನಡಿಗರು ತಲೆಕೆಡಿಸಕೊಳ್ಳಬೇಕಿಲ್ಲ. ಲಿಪಿ ಸುಧಾರಣೆಗಳನ್ನು ಮಾಡಿಕೊಂಡು ಏಳಿಗೆ ಹೊಂದುತ್ತಾ ಗೆದ್ದಿರುವ ನಾಡುಗಳು ಕಣ್ ಮುಂದಿವೆ ಎಂಬುದನ್ನೂ ತಿಳಿಯಬೇಕಿದೆ.
===============================================================
ಇಂತ ಗಂಭೀರ ವಿಷಯದ ಚರ್ಚೆಗೆ ವೇದಿಕೆ ಮಾಡಿಕೊಟ್ಟಿರುವ ಪ್ರಜಾವಾಣಿ ಪತ್ರಿಕೆಯ ನಡೆಯನ್ನು ಮೆಚ್ಚಲೇಬೇಕು. ಈ ಚರ್ಚೆಯ ಮೂಲಕ ಕನ್ನಡ ನುಡಿಯ ಮಾತು ಮತ್ತು ಬರವಣಿಗೆ ಹಿಂದಿರುವ ವಿಜ್ಞಾನವು ಹೆಚ್ಚು ಜನರಿಗೆ ತಿಳಿಯಲಿ ಎಂಬ ಆಶಯ ನನ್ನದು.