ಕರ್ನಾಟಕ ಒಂದಾದ ದಿನ ಮತ್ತೆ ಬಂದಿದೆ. ಇಡೀ ನವೆಂಬರ್ ತಿಂಗಳು ರಾಜ್ಯೋತ್ಸವದ ಅಬ್ಬರದ ನಡುವೆ ಕನ್ನಡದ ದುಸ್ಥಿತಿಯ ಬಗ್ಗೆ ಆತಂಕದ ಚರ್ಚೆಗಳೂ ಏರ್ಪಡುತ್ತವೆ. ಈ ಎಲ್ಲ ಚಿಂತೆಗಳ ನಡುವೆಯೇ ಕಳೆದ ಹತ್ತು ವರ್ಷಗಳಲ್ಲಿ ಕನ್ನಡದ ಬೇರು ಬಲವಾಗುತ್ತಿರುವ ಬಗ್ಗೆ ಹಲವು ಧನಾತ್ಮಕ ಬದಲಾವಣೆಗಳನ್ನು ಗಮನಿಸಬಹುದು. ಅವು ಕನ್ನಡದ ಬಗೆಗಿನ ನಮ್ಮ ಆತಂಕಗಳನ್ನು ಸಾಕಷ್ಟು ಕಡಿಮೆ ಮಾಡುವಂತದ್ದು. ನಾಲ್ಕು ಮುಖ್ಯ ಬದಲಾವಣೆಗಳನ್ನು ಇಲ್ಲಿ ಗುರುತಿಸಬಹುದು.
ತಂತ್ರಜ್ಞಾನದಲ್ಲಿ ಕನ್ನಡ
ಒಂದು ಕಾಲದಲ್ಲಿ ಕಂಪ್ಯೂಟರಿನಲ್ಲಿ, ಮೊಬೈಲಿನಲ್ಲಿ ಕನ್ನಡದಲ್ಲಿ ಬರೆಯುವುದೇ ಒಂದು ದೊಡ್ಡ ಸಾಧನೆ ಎಂಬಂತಹ ದಿನಗಳಿದ್ದವು. ಆದರೆ ಕಳೆದ ಹತ್ತು ವರ್ಷಗಳಲ್ಲಿ ಈ ವಿಷಯದಲ್ಲಿ ಬಹಳ ದೊಡ್ಡ ಮಟ್ಟದ ಬದಲಾವಣೆಗಳಾಗಿವೆ. ಇವತ್ತು ಅಂತರ್ಜಾಲದಲ್ಲಿ ಕನ್ನಡದಲ್ಲಿ ಬರೆಯಲು, ಓದಲು ಹಲವಾರು ಆಯ್ಕೆಗಳು ದೊರೆಯುತ್ತವೆ. ಫೇಸ್ ಬುಕ್, ಟ್ವಿಟರಿನಂತಹ ಸಾಮಾಜಿಕ ತಾಣಗಳನ್ನು ಕನ್ನಡದ ಯುವಕರೇ ಒಂದು ತಂಡವಾಗಿ ಕನ್ನಡಕ್ಕೆ ಅನುವಾದಿಸಿ, ಕನ್ನಡವೊಂದನ್ನೇ ಬಲ್ಲವರು ಇಂದು ಅದನ್ನು ಬಳಸಲು ಸುಲಭವಾಗುವಂತೆ ಮಾಡಿದ್ದಾರೆ. ಕೇವಲ 252 ಪದಗಳಿದ್ದ ಕನ್ನಡ ವಿಕ್ಷನರಿಯಲ್ಲಿ ಇಂದು ಎರಡು ಲಕ್ಷಕ್ಕೂ ಹೆಚ್ಚು ಕನ್ನಡ ಪದಗಳಿವೆ. ಇದರ ಹಿಂದೆಯೂ ಕನ್ನಡದ ಯುವಕರ ಶ್ರಮವಿದೆ. ಇದರೊಂದಿಗೆ ದೊಡ್ಡ ಪ್ರಮಾಣದಲ್ಲಿ ಕನ್ನಡದಲ್ಲೇ ಅಂತರ್ಜಾಲ ಬಳಸುವವರ ಸಂಖ್ಯೆಯನ್ನು ಕಂಡ ಗೂಗಲ್ ನಂತಹ ಕಂಪನಿಗಳು ಕನ್ನಡದಲ್ಲಿ ತಂತ್ರಜ್ಞಾನದ ಇನ್ನಷ್ಟು ಸಾಧ್ಯತೆಗಳನ್ನು ಕಟ್ಟುವತ್ತ ಹೂಡಿಕೆ ಮಾಡುತ್ತಿವೆ. ಒಟ್ಟಾರೆ ಮುಂದಿನ ಹತ್ತು ವರ್ಷಗಳಲ್ಲಿ ತಂತ್ರಜ್ಞಾನಕ್ಕೂ, ಕನ್ನಡಕ್ಕೂ ನಡುವಿರುವ ತಡೆಗೋಡೆ ಪೂರ್ತಿಯಾಗಿ ಬಿದ್ದು ಹೋಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ.
ಚಿತ್ರರಂಗದಲ್ಲಿ ಹೊಸಪ್ರತಿಭೆಗಳ ಹೊಳೆ
ಕಳೆದ ಹತ್ತು ವರ್ಷಗಳಲ್ಲಿ ಹೊಸ ಪ್ರತಿಭೆಗಳು, ಹೊಸ ಮಾದರಿಗಳು, ಹೊಸ ಮಾರುಕಟ್ಟೆ ಕನ್ನಡ ಚಿತ್ರರಂಗದಲ್ಲಿ ಕಾಣಿಸಲಾರಂಭಿಸಿದೆ. ಹೆಚ್ಚು ಕಡಿಮೆ ಕನ್ನಡ ಚಿತ್ರಗಳಿಂದ ದೂರ ಸಾಗಿದ್ದ ಮೇಲ್ಮಧ್ಯಮ ವರ್ಗದ ಕನ್ನಡಿಗರು ಮತ್ತೆ ಕನ್ನಡ ಸಿನೆಮಾಗಳತ್ತ ತಿರುಗುವ ಬದಲಾವಣೆ ಕಳೆದ ಹತ್ತು ವರ್ಷದಲ್ಲಾಗಿದೆ. ಮುಂಗಾರುಮಳೆ, ದುನಿಯಾ ತರದ ಚಿತ್ರಗಳು ಇದಕ್ಕೆ ಬುನಾದಿ ಹಾಕಿದರೆ ಲೂಸಿಯಾ ತರದ ಕ್ರೌಡ್ ಫಂಡೆಡ್ ಚಿತ್ರಗಳು ಇತರೆ ಭಾಷಿಕರಿಗೆ ಸಾಧ್ಯವಾಗದ್ದನ್ನು ಕನ್ನಡದಲ್ಲಿ ಮಾಡಿ ತೋರಿಸುವ ಮೂಲಕ ಕನ್ನಡಕ್ಕೆ ಗೌರವ ತಂದು ಕೊಟ್ಟವು. ಇದರೊಟ್ಟಿಗೆ ಸ್ಪರ್ಧೆಗೆ ಸಜ್ಜಾಗಲು ಹೊಸ ಪ್ರತಿಭೆಗಳಿಗೆ ಹೆಚ್ಚು ಅವಕಾಶ ಕೊಡುವುದೇ ಸರಿಯಾದ ಹಾದಿಯೆನ್ನುವುದನ್ನು ಕಂಡುಕೊಂಡಂತೆ ಕಾಣುತ್ತಿರುವ ಕನ್ನಡ ಚಿತ್ರೋದ್ಯಮದಲ್ಲಿ ಈಗ ಹೊಸ ಕತೆಗಳದ್ದೇ ಅಬ್ಬರ. ಸಾಫ್ಟವೇರ್ ಕ್ಷೇತ್ರದಲ್ಲಿದ್ದ ಅನೂಪ್ ಭಂಡಾರಿ ತರದವರು ರಂಗೀತರಂಗ ಚಿತ್ರದ ಮೂಲಕ ಅಮೇರಿಕದಲ್ಲಿ ಕನ್ನಡ ಚಿತ್ರಗಳಿಗೆ ಎಷ್ಟು ದೊಡ್ಡ ಮಾರುಕಟ್ಟೆಯ ಸಾಧ್ಯತೆಯಿದೆ ಅನ್ನುವುದು ತೋರಿಸಿಕೊಟ್ಟರು. ಅದರ ಬೆನ್ನಲ್ಲೇ ಸಾಲು ಸಾಲು ಕನ್ನಡ ಚಿತ್ರಗಳು ಹೊರ ದೇಶದಲ್ಲಿ ಬಿಡುಗಡೆಯಾಗಿ ಇಲ್ಲಿಯವರೆಗೂ ಕನಸಾಗಿದ್ದ ಹೊರದೇಶದ ಮಾರುಕಟ್ಟೆಯೆನ್ನುವುದನ್ನು ಕೊನೆಗೂ ಕನ್ನಡದ ಪಾಲಿಗೆ ಸಾಧ್ಯವಾಗಿಸುತ್ತಿವೆ. ಕಿರುಚಿತ್ರಗಳ ವಿಷಯಕ್ಕೆ ಬಂದರೆ ಇದೇ ರೀತಿಯ ಬೆಳವಣಿಗೆಯನ್ನು ಕಾಣಬಹುದು. ಕನ್ನಡದಲ್ಲಿ ಅದ್ಭುತ ಕತೆಯ, ನಿರೂಪಣೆಯ ಕಿರುಚಿತ್ರಗಳು ಸಾಲುಸಾಲಾಗಿ ಯುಟ್ಯೂಬ್ ಮೂಲಕ ಜನರನ್ನು ತಲುಪುತ್ತಿವೆ. ಸಾಮಾಜಿಕ ತಾಣಗಳು ಕನ್ನಡಿಗರನ್ನು ಹಿಂದೆಂದೂ ಊಹಿಸಲಾಗದ ರೀತಿಯಲ್ಲಿ ಬೆಸೆಯುವುದರ ಜೊತೆ ಈ ಪ್ರಯತ್ನಗಳಿಗೆ ದೊಡ್ಡ ಬೆಂಬಲ ನೀಡುತ್ತಿವೆ.
ಕನ್ನಡಿಗರಲ್ಲಿ ಭಾಷಾ ಹಕ್ಕುಗಳ ಕುರಿತು ಹೆಚ್ಚಿನ ಅರಿವು
ಭಾಷೆಯ ಅಭಿಮಾನದ ವಿಷಯಕ್ಕೆ ಬಂದಾಗ ತಮಿಳರನ್ನು ಮಾದರಿಯಾಗಿ ಕಾಣುವ ಮನಸ್ಥಿತಿ ನಮ್ಮಲ್ಲಿತ್ತು. ಭಾಷೆಯ ಗುರುತು, ಭಾಷಾ ಹಕ್ಕುಗಳ ಬಗ್ಗೆ ಕನ್ನಡಿಗರಲ್ಲಿನ ಜಾಗೃತಿಯ ಕೊರತೆ ಕನ್ನಡಿಗರ ಮೇಲೆ ಪರಭಾಷೆಗಳ ಸವಾರಿಗೆ ಅವಕಾಶ ಕಲ್ಪಿಸಿದ್ದವು. ಆದರೆ ಕಳೆದ ಹತ್ತು ವರ್ಷಗಳಲ್ಲಿ ಇದರಲ್ಲಿ ಸಾಕಷ್ಟು ಬದಲಾವಣೆಯಾಗಿರುವುದು ಸ್ಪಷ್ಟವಾಗಿ ಗುರುತಿಸಬಹುದು. ಹಿಂದಿ ರಾಷ್ಟ್ರಭಾಷೆಯೆಂದು ಸಂವಿಧಾನದಲ್ಲೆಲ್ಲೂ ಬರೆಯದಿದ್ದರೂ ಅದನ್ನು ರಾಷ್ಟ್ರಭಾಷೆಯೆಂದು ಮೆರೆಸುವ ಮನಸ್ಥಿತಿ ಕನ್ನಡಿಗರಲ್ಲಿತ್ತು. ಅದರ ಪರಿಣಾಮವಾಗಿ ಕರ್ನಾಟಕದಾದ್ಯಂತ ಇರುವ ರೈಲು, ವಿಮಾನ ನಿಲ್ದಾಣ, ಬ್ಯಾಂಕು, ಅಂಚೆ, ಪಿಂಚಣಿ, ತೆರಿಗೆ ಹೀಗೆ ಎಲ್ಲ ಕೇಂದ್ರ ಸರ್ಕಾರಿ ಕಚೇರಿಗಳಲ್ಲೂ ಹಿಂದಿ ಹೇರಿಕೆ ಸಲೀಸಾಗಿ ನಡೆಯುತ್ತ ಕನ್ನಡ ಅಲ್ಲಿಂದ ಸಂಪೂರ್ಣವಾಗಿ ಕಣ್ಮರೆಯಾಗುವ ಹಂತ ತಲುಪಿದೆ. ಆದರೆ ಈ ಬಗ್ಗೆ ಕನ್ನಡಿಗರಲ್ಲಿ ಈಗ ಸಾಕಷ್ಟು ಜಾಗೃತಿಯಾಗಿದೆ, ಕನ್ನಡಿಗರಲ್ಲಿನ ಭಾಷಾ ಕೀಳರಿಮೆ ಕಡಿಮೆಯಾಗುತ್ತಿದೆ. ಹಿಂದಿ ಹೇರಿಕೆಯ ಬಗ್ಗೆ ಕಳೆದ ಐದು ವರ್ಷಗಳಲ್ಲಿ ಕನ್ನಡದ ಮುಖ್ಯವಾಹಿನಿಯಲ್ಲೂ ಹಲವಾರು ಚರ್ಚೆಗಳು ಏರ್ಪಡುತ್ತಿವೆ, ಬಿಜಾಪುರದ ಸಾಹಿತ್ಯ ಸಮ್ಮೇಳನದಲ್ಲಿ ಈ ಬಗ್ಗೆ ನಿರ್ಣಯವನ್ನೇ ಕೈಗೊಳ್ಳಲಾಯಿತು. ಇತ್ತೀಚೆಗೆ ಹಿಂದಿ ಹೇರಿಕೆ ವಿರೋಧವಾಗಿ ಸಾಮಾಜಿಕ ತಾಣ ಟ್ವಿಟರಿನಲ್ಲಿ ನಡೆದ ಎರಡು ಅಭಿಯಾನಗಳಲ್ಲಿ ಕನ್ನಡಿಗರ ಪಾಲ್ಗೊಳ್ಳುವಿಕೆ ತಮಿಳರನ್ನು ಮೀರಿಸುವಂತಿತ್ತು ಅಲ್ಲದೇ ದೇಶದ ಎಲ್ಲ ಭಾಷೆಗಳಿಗೂ ಸಮಾನ ಸ್ಥಾನಮಾನ ಸಿಗಬೇಕು ಅನ್ನುವ ಕೂಗಿಗೆ ಕರ್ನಾಟಕವೇ ಈಗ ಮುಂಚೂಣಿಯ ದನಿಯಾಗಿ ಪರಿಣಮಿಸಿದೆ. ಇದನ್ನು ಎಲ್ಲರಿಗಿಂತ ಹೆಚ್ಚಾಗಿ ತಮಿಳರು ಗುರುತಿಸಿ ಒಪ್ಪಿಕೊಳ್ಳುತ್ತಿರುವುದು ಕನ್ನಡಿಗರಲ್ಲಿ ತಮ್ಮ ಭಾಷಾ ಹಕ್ಕುಗಳ ಕುರಿತು ಹೆಚ್ಚಿರುವ ಅರಿವನ್ನು ಸಾರುತ್ತದೆ.
ಕನ್ನಡ ಕೇಂದ್ರಿತ ಗ್ರಾಹಕ ಚಳುವಳಿಗೆ ಬಲ
ಮುಕ್ತ ಮಾರುಕಟ್ಟೆ ಬಲಗೊಂಡ ನಂತರ ಮಾರುಕಟ್ಟೆಯಲ್ಲಿ ಖಾಸಗಿ ಬಂಡವಾಳದ ಹರಿವು ಹೆಚ್ಚುತ್ತಿದ್ದಂತೆಯೇ ನಮ್ಮ ಊರುಗಳ ಸ್ವರೂಪವೇ ಬದಲಾಯಿತು. ಆದರೆ ಈ ಬದಲಾವಣೆಯ ಜೊತೆ ಮಾರುಕಟ್ಟೆಯಲ್ಲಿ ಕನ್ನಡದ ಸ್ಥಾನಕ್ಕೂ ದೊಡ್ಡ ಏಟು ಬಿತ್ತು. ಕನ್ನಡದ ಜಾಗವನ್ನು ಇಂಗ್ಲಿಷ್/ಹಿಂದಿಗಳು ಆಕ್ರಮಿಸುವ ಸ್ಥಿತಿಯುಂಟಾಯಿತು. ಇದನ್ನು ಬದಲಾಯಿಸಲು ಕನ್ನಡಿಗರಲ್ಲಿ ತಮ್ಮ ಗ್ರಾಹಕ ಹಕ್ಕಿನ ಬಗ್ಗೆ, ಗ್ರಾಹಕರಾಗಿ ಕನ್ನಡ ಬಳಸುವ ಅಗತ್ಯದ ಬಗ್ಗೆ ಅರಿವು ಮೂಡಿಸುವ ಕೆಲಸ ನಿರಂತರವಾಗಿ ಸಾಗಿದ ಪರಿಣಾಮವಾಗಿ ಈಗ ಮಾರುಕಟ್ಟೆಯಲ್ಲಿ ಕನ್ನಡದ ಸ್ಥಿತಿಯಲ್ಲಿ ದಿನೇ ದಿನೇ ಸುಧಾರಣೆಯಾಗುತ್ತಿದೆ. ಹಲವಾರು ಬ್ಯಾಂಕುಗಳ ಎ.ಟಿ.ಎಮ್/ ಐ.ವಿ.ಆರ್ ಗಳಲ್ಲಿ ಕನ್ನಡದ ಆಯ್ಕೆ ಬಂದಿದೆ, ಬೆಂಗಳೂರಿನ ಎಫ್.ಎಮ್ ವಾಹಿನಿಗಳ ಮಾರುಕಟ್ಟೆಯ ಬಹುಪಾಲು ಕನ್ನಡಕ್ಕೇ ದಕ್ಕಿದೆ, ಕನ್ನಡದಲ್ಲೇ ಕ್ರಿಕೆಟ್ ವಿಶ್ವಕಪ್ ನೋಡಲು ಸಾಧ್ಯವಾಗಿದೆ, ಸ್ಮಾರ್ಟ್ ಫೋನುಗಳನ್ನು ಕನ್ನಡದಲ್ಲೇ ಬಳಸಲು ಸಾಧ್ಯವಾಗಿದೆ. ಇಂತಹ ನೂರಾರು ಬದಲಾವಣೆಗಳ ಹಿಂದೆ ಕೆಲಸ ಮಾಡಿರುವುದು ಗ್ರಾಹಕರಾಗಿ ತಮ್ಮ ಭಾಷಾ ಹಕ್ಕುಗಳ ಬಗ್ಗೆ ಅರಿವು ಹೊಂದಿರುವ ಕನ್ನಡದ ಯುವಕರು. ಇವರ ಸಂಖ್ಯೆ ಈಗ ಹೆಚ್ಚುತ್ತಿದೆ. ಕನ್ನಡ ಬಳಸುವ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ಇವರ ಸಂಘಟಿತ ಬಲ ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಕನ್ನಡಕ್ಕೊಂದು ಭದ್ರ ನೆಲೆ ಕಟ್ಟಿಕೊಡುವುದರಲ್ಲಿ ಅನುಮಾನವಿಲ್ಲ.
ಮೇಲಿನ ನಾಲ್ಕೂ ಬದಲಾವಣೆಗಳು ಕನ್ನಡಕ್ಕೆ ಹೊಸ ಭರವಸೆ, ಹುರುಪು ನೀಡುವಂತದ್ದು. ಆದರೆ ಇದು ಸಾಲಲ್ಲ. ಎಲ್ಲಿಯವರೆಗೂ ಕನ್ನಡಿಗರಲ್ಲಿ ಕನ್ನಡವೆನ್ನುವುದು ತಮ್ಮ ರಾಜಕೀಯ ಗುರುತಾಗಿ ಮೂಡಿ ಬರುವುದಿಲ್ಲವೋ, ಎಲ್ಲಿಯವರೆಗೂ ಭಾರತದ ಒಕ್ಕೂಟದಲ್ಲಿ ಕನ್ನಡಿಗರ ಸ್ವಹಿತಾಸಕ್ತಿಯ ಕಣ್ಣಿನಿಂದ ಎಲ್ಲವನ್ನೂ ಕನ್ನಡಿಗರು ನೋಡುವುದಿಲ್ಲವೋ ಅಲ್ಲಿಯವರೆಗೂ ರಾಜಕೀಯವಾಗಿ, ಆರ್ಥಿಕವಾಗಿ ನಾವು ಬಲಹೀನರಾಗೇ ಮುಂದುವರೆಯಬೇಕಾಗುತ್ತದೆ. ಕಳಸಾ-ಬಂಡೂರಿ, ಕಾವೇರಿಯಂತಹ ನದಿ ನೀರಿನ ವಿಚಾರವಿರಲಿ, ಗಡಿ,ನುಡಿಯ ಆದ್ಯತೆಗಳಿರಲಿ, ಕೇಂದ್ರದಿಂದ ನ್ಯಾಯಯುತವಾಗಿ ದೊರೆಯಬೇಕಾದ ಅನುದಾನ, ಯೋಜನೆಗಳಿರಲಿ, ಕನ್ನಡಿಗರಿಗೆ ನ್ಯಾಯ ದೊರೆಯಬೇಕೆಂದರೆ ನಮ್ಮ ರಾಜಕೀಯವನ್ನು ಕನ್ನಡ-ಕನ್ನಡಿಗ ಕೇಂದ್ರಿತವಾಗಿ ರೂಪಿಸಿಕೊಳ್ಳದೇ ನಮಗೆ ವಿಧಿಯಿಲ್ಲ. ಈ ದೂರಗಾಮಿ ಕನಸಿನತ್ತ ಕೆಲಸ ಮಾಡುವ ಪಣ ಕನ್ನಡದ ಯುವಕರು ತೊಡಬೇಕು.