ಚೆನ್ನೈ ನಗರ ಕಳೆದ ನೂರು ವರುಶಗಳಲ್ಲೇ ಕಾಣದಷ್ಟು ದೊಡ್ಡ ಪ್ರಮಾಣದ ನೆರೆಗೆ ಸಿಲುಕಿ ಸಾಮಾನ್ಯ ಜನರ ಜೀವನ ಏರುಪೇರಾಗಿರುವುದನ್ನು ಕಾಣುತ್ತಿದ್ದೇವೆ. ಚೆನ್ನೈ ಒಂದೇ ಅಲ್ಲದೇ ತಮಿಳುನಾಡಿನ ಕರಾವಳಿ ಮತ್ತು ದಕ್ಷಿಣ ಆಂಧ್ರಪ್ರದೇಶದಲ್ಲೂ ಇದೇ ಸ್ಥಿತಿ ಇದೆ. ತೀವ್ರ ಕಷ್ಟಕ್ಕೆ ತಮಿಳರು ಮತ್ತು ತೆಲುಗರು ಸಿಲುಕಿರುವ ಈ ಹೊತ್ತಿನಲ್ಲಿ ಭಾರತದ ಇಂಗ್ಲಿಷ್ ಮಾಧ್ಯಮಗಳು ಇದಕ್ಕೆ ಹೇಗೆ ಸ್ಪಂದಿಸುತ್ತಿವೆ ಎಂದು ನೋಡಿದಾಗ ನಿರಾಶೆ, ಸಿಟ್ಟು ಎರಡೂ ಒಟ್ಟಿಗೆ ಬರುತ್ತದೆ.
ಇಂಡಿಯನ್ ವಾಹಿನಿಗಳಲ್ಲ, ಹಿಂದಿಯನ್ ವಾಹಿನಿಗಳು
ಭಾರತ ಹೆಸರಿಗೆ ಒಂದು ಒಕ್ಕೂಟವಾದರೂ ರಾಜ್ಯಗಳು ಹೆಚ್ಚು ಕಡಿಮೆ ಗ್ಲೋರಿಫೈಡ್ ಮುನ್ಸಿಪಾಲಿಟಿಯ ಮಟ್ಟದಲ್ಲಿರುವುದು ಎಲ್ಲರಿಗೂ ಗೊತ್ತಿರುವಂತದ್ದೇ. ಇಲ್ಲಿ ಹೆಚ್ಚಿನ ಆರ್ಥಿಕ ಮತ್ತು ರಾಜಕೀಯ ಅಧಿಕಾರವೆಲ್ಲವೂ ದೆಹಲಿಯ ಹಿಡಿತದಲ್ಲಿದೆ. ಸಹಜವಾಗಿಯೇ ದೆಹಲಿಯಲ್ಲಿ ಬೀಡು ಬಿಟ್ಟಿರುವ ಮಾಧ್ಯಮಗಳು, ಅದರಲ್ಲೂ ಚಿಂತಕ ವರ್ಗವನ್ನು ಪ್ರತಿನಿಧಿಸುವ, ದೆಹಲಿಯ ಆಳುವವರನ್ನು ಪ್ರಭಾವಿಸುವ ಇಂಗ್ಲಿಷ್ ಮಾಧ್ಯಮದ ವಾಹಿನಿಗಳು, ತಮ್ಮದೇ ಆದ ಪ್ರಭಾವ ಹೊಂದಿವೆ. ಸಾಮಾನ್ಯ ಜನರು ಇಂಗ್ಲಿಷ್ ವಾಹಿನಿಗಳನ್ನು ನೋಡುವುದು ಅಷ್ಟರಲ್ಲೇ ಇದ್ದರೂ ದೆಹಲಿಯ ಆಳುವ ವರ್ಗದ ಮೇಲೆ ಈ ವಾಹಿನಿಗಳಿಗಿರುವ ಪ್ರಭಾವದಿಂದಾಗಿ ಅವುಗಳಿಗೆ ಪ್ರಾಮುಖ್ಯತೆ ದಕ್ಕಿದೆ. ಹೀಗಾಗಿಯೇ ಈ ವಾಹಿನಿಗಳು ತಮ್ಮನ್ನು ತಾವು ನ್ಯಾಶನಲ್ ಸುದ್ದಿ ವಾಹಿನಿಗಳು ಎಂದೇ ಬಿಂಬಿಸಿಕೊಳ್ಳುತ್ತವೆ. ಆದರೆ ಈ ವಾಹಿನಿಗಳಲ್ಲಿ ಪ್ರಸಾರವಾಗುವ ಸುದ್ದಿ ಗಮನಿಸಿದರೆ ಸಾಕು, ಅವುಗಳಿಗೆ ಭಾರತದ ಆಳ, ಅಗಲ, ವೈವಿಧ್ಯತೆಯ ಬಗ್ಗೆ ಕಿಂಚಿತ್ ಮಾಹಿತಿಯಾಗಲಿ, ಗೌರವವಾಗಲಿ ಇಲ್ಲ ಅನ್ನುವುದು ಸ್ಪಷ್ಟವಾಗುತ್ತದೆ. ದೆಹಲಿಯಲ್ಲಿ ನಡೆಯುವ ಚಿಕ್ಕ ಪುಟ್ಟ ಘಟನೆಗಳನ್ನು ರಾಷ್ಟ್ರೀಯ ಸುದ್ದಿ, ರಾಷ್ಟ್ರೀಯ ದುರಂತ ಎಂದು ಬಿಂಬಿಸುವ ಈ ವಾಹಿನಿಗಳು ಕಳೆದ ಹದಿನೈದು ದಿನಗಳಿಂದ ನೆರೆಯಲ್ಲಿ ಮುಳುಗಿ ಏಳುತ್ತಿರುವ ಚೆನ್ನೈ ನಗರದ ಸಮಸ್ಯೆಗಳ ಬಗ್ಗೆ ಎಷ್ಟು ಸುದ್ದಿ ಪ್ರಸಾರ ಮಾಡಿದ್ದಾರೆ? ದಕ್ಷಿಣ ಭಾರತದ ರಾಜ್ಯಗಳ ಚುನಾವಣೆ ಫಲಿತಾಂಶ, ದೊಡ್ಡ ರಾಜಕೀಯ ಪಲ್ಲಟದಂತಹ ಸುದ್ದಿಗಳು ಚಿಕ್ಕದಾಗಿ ಪ್ರಸಾರವಾಗುವ ಈ ವಾಹಿನಿಗಳಲ್ಲಿ ಯಾವತ್ತಿಗಾದರೂ ಅದರಾಚೆ ದಕ್ಷಿಣ ಭಾರತದ ಕಲೆ, ಸಂಸ್ಕ್ರುತಿ, ಭಾಷೆ, ಸಿನೆಮಾ, ಬದುಕು, ಬವಣೆಗಳ ಬಗ್ಗೆ ವಿವರವಾದ ವರದಿಗಾರಿಕೆ ನಿಯಮಿತವಾಗಿ ಆಗುವುದನ್ನು ಕಂಡಿದ್ದೀರೆ? ಭಾರತದಲ್ಲಿ ಅತಿ ಹೆಚ್ಚು ಇಂಗ್ಲಿಷ್ ಭಾಷೆಯನ್ನು ಬಲ್ಲವರು ದಕ್ಷಿಣ ಭಾರತದಲ್ಲೇ ಇದ್ದರೂ ದಕ್ಷಿಣ ಭಾರತದ ಸುದ್ದಿಗಳಿಗೆ ಇಲ್ಲಿ ಪ್ರಾಮುಖ್ಯತೆ ಇಲ್ಲ ಅನ್ನುವುದು ಎಂತಹ ವಿಚಿತ್ರವಲ್ಲವೇ? ದಕ್ಷಿಣ ಭಾರತದ ಸುದ್ದಿಯ ಹೆಸರಿನಲ್ಲಿ ಈ ವಾಹಿನಿಗಳಲ್ಲಿ ಪ್ರಸಾರವಾಗುವುದು ಇಲ್ಲಿನ ದೊಡ್ಡ ಊರುಗಳಾದ ಬೆಂಗಳೂರು, ಹೈದರಾಬಾದ್, ಚೆನ್ನೈನ ಬೇರಿಲ್ಲದ ಕಾಸ್ಮೊಪಾಲಿಟಿನ್ ವರ್ಗದ ಜನರ ಸುದ್ದಿಗಳೇ ಹೊರತು ಸಾಮಾನ್ಯ ಕನ್ನಡಿಗರ, ತಮಿಳರ, ತೆಲುಗರ, ಮಲೆಯಾಳಿಗಳ ಸುದ್ದಿಯಲ್ಲ. ಅಲ್ಲದೇ ಈ ವಾಹಿನಿಗಳು ಹಿಂದಿ ಹೇರಿಕೆಯನ್ನು ಬಲವಾಗಿ ಸಮರ್ಥಿಸುವ ವಾಹಿನಿಗಳಾಗಿವೆ. ಈ ವಾಹಿನಿಗಳಲ್ಲಿ ಹಿಂದಿಯಲ್ಲಿ ಯಾರೇ ಮಾತನಾಡಿದರೂ ಅದನ್ನು ಇಂಗ್ಲಿಷಿಗೆ ಅನುವಾದಿಸುವ ಪದ್ದತಿಯೇ ಇಲ್ಲ. ಕನ್ನಡದಲ್ಲೂ ಹೀಗೆ ಮಾತನಾಡಲು ಅವಕಾಶ ಕೊಡುತ್ತಾರೆಯೇ? ಇದನ್ನೆಲ್ಲ ಗಮನಿಸಿದಾಗ, ಈ ಮಾಧ್ಯಮಗಳನ್ನು ಇಂಡಿಯನ್ ವಾಹಿನಿಗಳು ಎಂದು ಕರೆಯುವುದರ ಬದಲು ಹಿಂದಿಯನ್ ವಾಹಿನಿಗಳು ಅಂತ ಕರೆಯುವುದು ಹೆಚ್ಚು ಸೂಕ್ತ ಅಲ್ಲವೇ?
ದಕ್ಷಿಣ ಭಾರತವನ್ನು ಬಿಂಬಿಸುವ ಇಂಗ್ಲಿಷ್ ವಾಹಿನಿಗಳು ಬೇಕು
ಅರಬ್ ಜಗತ್ತಿನ ಬಗ್ಗೆ ಪಶ್ಚಿಮ ದೇಶಗಳ ಬಿಬಿಸಿ, ಸಿ.ಎನ್.ಎನ್ ವಾಹಿನಿಗಳು ಮಾಡುತ್ತಿದ್ದ ವರದಿಗಾರಿಕೆಯಲ್ಲೂ ಇಂತಹದೊಂದು ತಾರತಮ್ಯ ಕಾಣುತ್ತಿತ್ತು. ಪಶ್ಚಿಮದ ದೇಶಗಳಿಗೆ ಹೇಗೆ ಬೇಕೋ ಹಾಗೇ ಅರಬ್ ಜಗತ್ತಿನ ಸುದ್ದಿಗಳನ್ನು ಹೊರಜಗತ್ತಿಗೆ ನೀಡುತ್ತಿದ್ದಕ್ಕೆ ಪ್ರತಿಯಾಗಿ ಅಲ್ ಜಜೀರಾ ತರದ ಇಂಗ್ಲಿಷ್ ವಾಹಿನಿಗಳು ಹುಟ್ಟಿಕೊಂಡು ಅರಬ್ ಜಗತ್ತಿನ ವಿದ್ಯಮಾನಗಳನ್ನು ಬಹಳ ಬೇರೆಯಾದ ರೀತಿಯಲ್ಲಿ ಜನರ ಮುಂದಿಡಲು ಆರಂಭಿಸಿದವು. ಇದರಿಂದಾಗಿ ಯಾವತ್ತಿಗೂ ಒನ್ ಸೈಡೆಡ್ ಆದ ಅರಬ್ ಜಗತ್ತಿನ ಸುದ್ದಿಗಳನ್ನು ನೋಡುತ್ತಿದ್ದವರಿಗೆ ಅರಬ್ ಜಗತ್ತಿನ ನೈಜ ಚಿತ್ರಣ ದೊರೆಯಲು ಸಾಧ್ಯವಾಯಿತು. ಈಗ ಭಾರತದ ಒಕ್ಕೂಟದಲ್ಲೂ ಇಂತಹದೊಂದು ಬದಲಾವಣೆ ಬೇಕಿದೆ. ದಕ್ಷಿಣ ಭಾರತವನ್ನೇ ಗುರಿಯಾಗಿಸಿಕೊಂಡಿರುವ, ದಕ್ಷಿಣ ಭಾರತವನ್ನು ಸರಿಯಾಗಿ ಪ್ರತಿನಿಧಿಸುವ, ಬಿಂಬಿಸುವ ಇಂಗ್ಲಿಷ್ ಸುದ್ದಿ ವಾಹಿನಿಗಳು ಈಗ ಬೇಕಾಗಿದೆ. ಇನ್ನೆಷ್ಟು ದಿನ ನಮ್ಮ ಸಮಸ್ಯೆಗಳನ್ನು ಪ್ರತಿನಿಧಿಸುವ ಪೊಳ್ಳು ನಂಬಿಕೆಯನ್ನು ಹೊತ್ತು ದೆಹಲಿಯ ಕೂಗುಮಾರಿ ವಾಹಿನಿಗಳನ್ನು ನೋಡಲಾದೀತು?