ಇನ್ವೆಸ್ಟ್ ಕರ್ನಾಟಕ ಅನ್ನುವ ಹೆಸರಿನಲ್ಲಿ ಕರ್ನಾಟಕಕ್ಕೆ ಬಂಡವಾಳ ಹೂಡಿಕೆದಾರರನ್ನು ಸೆಳೆಯುವ ಪ್ರಯತ್ನ ಕರ್ನಾಟಕ ಸರ್ಕಾರ ಅತ್ಯಂತ ಪರಿಶ್ರಮದಿಂದ ಮಾಡುತ್ತಿದೆ. ಮೂರು ದಿನಗಳ ಕಾಲ ನಡೆಯುವ ಈ ಸಮಾವೇಶಕ್ಕೆ ಪ್ರಪಂಚದ ಹಲವು ದೇಶಗಳಿಂದ, ಹೊರ ರಾಜ್ಯಗಳಿಂದ ಹೂಡಿಕೆದಾರರನ್ನು ಸೆಳೆಯಲು ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆಯವರು ಹಲವು ತಿಂಗಳುಗಳಿಂದ ಕೆಲಸ ಮಾಡುತ್ತಿರುವುದು ಎಲ್ಲರೂ ಬಲ್ಲರು. ಇವರ ಪ್ರಯತ್ನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒತ್ತಾಸೆಯಾಗಿ ನಿಂತಿದ್ದಾರೆ. ಕರ್ನಾಟಕವನ್ನು ಉದ್ಯಮಸ್ನೇಹಿ ರಾಜ್ಯವಾಗಿ ತೋರಿಸುವತ್ತಲಿನ ಇವರ ಶ್ರಮವನ್ನು ಮೆಚ್ಚಿಕೊಳ್ಳುತ್ತಲೇ ಕೆಲವು ಮೂಲಭೂತವಾದ ಪ್ರಶ್ನೆಗಳನ್ನು ಕನ್ನಡಿಗರು ಕೇಳಬೇಕಿದೆ.
ಹೂಡಿಕೆ ಸೆಳೆಯುವತ್ತ ಒಂದು ಹಿನ್ನೋಟ
ಮೈಸೂರು ಮಹಾರಾಜರ ಕಾಲದಿಂದಲೂ ಕರ್ನಾಟಕ ಒಂದು ಉದ್ಯಮಸ್ನೇಹಿ ರಾಜ್ಯವಾಗಿಯೇ ಗುರುತಿಸಿಕೊಂಡಿದೆ. ಸ್ವಾತಂತ್ರ್ಯಕ್ಕೆ ಮುಂಚೆಯೇ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಮೈಸೂರು ಲ್ಯಾಂಪ್ಸ್, ಮೈಸೂರು ಸ್ಯಾಂಡಲ್ ಸೋಪ್, ಭದ್ರಾವತಿ ಉಕ್ಕಿನ ಕಾರ್ಖಾನೆ, ಮೈಸೂರು ರೈಲ್ವೇಸ್ ಸೇರಿದಂತೆ ಹಲವು ಉದ್ಯಮ ಸ್ಥಾಪಿಸುವ ಮೂಲಕ ಕನ್ನಡಿಗರ ಉದ್ಯಮಶೀಲತೆಯನ್ನು 20ನೇ ಶತಮಾನದ ಆರಂಭದಲ್ಲಿ ಮುನ್ನೆಲೆಗೆ ತರುವ ಎಲ್ಲ ಪ್ರಯತ್ನಗಳನ್ನು ಮಹಾರಾಜರು ಮತ್ತು ಅವರ ಸಮರ್ಥ ದಿವಾನರು ಮಾಡಿದ್ದರು. ಇದಲ್ಲದೇ ವಿಮಾನ ಕಾರ್ಖಾನೆ ಸ್ಥಾಪಿಸುವ ಆಸೆ ಹೊತ್ತು ಬರೋಡಾ, ಗ್ವಾಲೀಯರ್, ಭಾವನಗರ ಸಂಸ್ಥಾನಗಳನ್ನು ಅಲೆದು ಮೈಸೂರಿನ ಮಹಾರಾಜರ ಬಳಿ ಬಂದಿದ್ದ ವಾಲಚಂದ್ ಹೀರಾಚಂದ್ ಅವರ ಕನಸಿಗೆ ನೀರೆರೆದು 25 ಲಕ್ಷ ರೂಪಾಯಿ ಹೂಡಿಕೆ ಮತ್ತು 700 ಎಕರೆ ಉಚಿತ ಭೂಮಿ ಕೊಡುವ ಮೂಲಕ ಹಿಂದೂಸ್ಥಾನ್ ಏರ್ ಕ್ರಾಫ್ಟ್ ಸಂಸ್ಥೆಯ ಸ್ಥಾಪನೆಗೆ ಬಲತುಂಬಿದ್ದು ಅಂದಿನ ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ ಅವರು. ಉದ್ಯಮಶೀಲತೆಯ ವಿಷಯಕ್ಕೆ ಬಂದಾಗ ಇಂತಹದೊಂದು ಭವ್ಯ ಇತಿಹಾಸ ನಮ್ಮ ನಾಡಿಗಿದೆ. ಸ್ವಾತಂತ್ರ್ಯ ಬಂದ ನಂತರ ಕೇಂದ್ರ ಸರ್ಕಾರದ ರಾಷ್ಟ್ರೀಕರಣದ ಹೊಡೆತಕ್ಕೆ ಸಿಲುಕಿ ಕನ್ನಡಿಗರ ಹಿಡಿತದಲ್ಲಿದ್ದ ಎಲ್ಲ ಉದ್ಯಮಗಳು ಕನ್ನಡಿಗರ ಕೈ ತಪ್ಪಿ ಹೋಗಿದ್ದು ಒಂದು ದುರಂತವೇ ಹೌದು. ಇದಾದ ನಂತರ ಭಾರತ ಜಾಗತೀಕರಣಕ್ಕೆ ತೆರೆದುಕೊಂಡ ನಂತರ ಅರ್ಥ ವ್ಯವಸ್ಥೆಯಲ್ಲಿ ಮತ್ತೆ ಖಾಸಗಿ ಬಂಡವಾಳದ ಹರಿವು ಶುರುವಾಯಿತು. ಶಿಕ್ಷಣ ಮತ್ತು ಉದ್ಯಮದ ವಿಷಯದಲ್ಲಿ ಮೈಸೂರಿನ ಅರಸರು ಹಾಕಿ ಹೋಗಿದ್ದ ಅಡಿಪಾಯದ ಮೇಲೆ ಬೆಂಗಳೂರಿಗೆ ಐಟಿ, ಬಿಟಿ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಬಂಡವಾಳ ಹರಿದು ಬಂತು ಮತ್ತು ಜೊತೆಯಲ್ಲೇ ಇಂತಹ ಬಂಡವಾಳದ ಹರಿವನ್ನು ಪ್ರೋತ್ಸಾಹಿಸುವುದೇ ಜನಪರ, ಅಭಿವೃದ್ಧಿ ಪರ ಎಂದು ಕಾಣಿಸಿಕೊಳ್ಳಲು ಇರುವ ದಾರಿಯೆಂಬ ಅನಿಸಿಕೆ ಕರ್ನಾಟಕದ ರಾಜಕೀಯದ ವಲಯದಲ್ಲೂ ಸ್ಥಾಪಿತವಾಯಿತು. ಬೆಂಗಳೂರು ಐಟಿ ಮೇಳದಿಂದ ಶುರುವಾಗಿ ಅನೇಕ ಜಾಗತೀಕ ಬಂಡವಾಳ ಹೂಡಿಕೆದಾರರ ಸಮಾವೇಶಗಳ ನಂತರ ಈಗ ಇನ್ವೆಸ್ಟ್ ಕರ್ನಾಟಕ ಅನ್ನುವ ಹೆಸರಿನಲ್ಲಿ ಹೂಡಿಕೆ ಸೆಳೆಯುವ ಈ ಪಯಣ ಬಂದು ನಿಂತಿದೆ.
ಕನ್ನಡಿಗರ ಉದ್ಯಮಶೀಲತೆ ಬೆಳೆಸುವುದು ಹೀಗಾ?
ಯಾವುದೇ ನಾಡಿನ ಸರ್ಕಾರ ತನ್ನ ನೆಲದಲ್ಲಿ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಲು ಇರುವ ಕಾರಣಗಳೇನು? ತನ್ನ ಜನರು ಉದ್ಯಮಿಗಳಾಗಬೇಕು, ತನ್ನ ನೆಲದ ಮಕ್ಕಳಿಗೆ ಈ ಉದ್ಯಮಗಳಲ್ಲಿ ಉದ್ಯೋಗ ದೊರೆಯಬೇಕು, ಅವರ ಏಳಿಗೆ ಸರ್ಕಾರಕ್ಕೆ ತೆರಿಗೆ ಆದಾಯ ತರಬೇಕು, ಒಟ್ಟಾರೆ ಇವೆಲ್ಲದರಿಂದ ನಾಡು ಏಳಿಗೆ ಹೊಂದಬೇಕು ಅನ್ನುವುದಲ್ಲವೇ? ಹಾಗಿದ್ದರೆ ಕರ್ನಾಟಕದಲ್ಲಿ ಈ ಬಾರಿ ನಡೆಯುತ್ತಿರುವ ಇನ್ವೆಸ್ಟ್ ಕರ್ನಾಟಕ ಸೇರಿದಂತೆ ಕಳೆದ ಹದಿನೈದು ಇಪ್ಪತ್ತು ವರ್ಷಗಳಿಂದ ನಡೆಯುತ್ತಿರುವ ಇಂತಹ ಹೂಡಿಕೆದಾರರ ಸಮಾವೇಶ ಎಷ್ಟರ ಮಟ್ಟಿಗೆ ಕನ್ನಡಿಗ ಉದ್ಯಮಿಗಳನ್ನು ಬೆಳೆಸುವ ಕೆಲಸ ಮಾಡಿದೆ? ಎಷ್ಟರ ಮಟ್ಟಿಗೆ ಕನ್ನಡಿಗರಿಗೆ ಇಲ್ಲಿ ಹುಟ್ಟುವ ಉದ್ಯೋಗಗಳ ಲಾಭ ದೊರೆಯುವಂತೆ ನೋಡಿಕೊಂಡಿದೆ? ಇನ್ವೆಸ್ಟ್ ಕರ್ನಾಟಕ 2016ರ ಗುರಿಯನ್ನು ಗಮನಿಸಿದರೆ ಅಲ್ಲಿ ಕಾಣುವುದು ಕರ್ನಾಟಕವನ್ನು ಹೊರಗಿನ ಬಂಡವಾಳದಾರರಿಗೆ ಒಂದು ಆಕರ್ಷಕ ಹೂಡಿಕೆ ತಾಣದಂತೆ ತೋರಿಸುವುದು ಮತ್ತು ಸರ್ಕಾರದ ಲಕ್ಷ್ಯವಿರುವ ಕ್ಷೇತ್ರಗಳಲ್ಲಿ ಬಂಡವಾಳ ಹೂಡುವಂತೆ ಮನವೊಲಿಸುವುದಾಗಿದೆ. ಹೊರಗಿನ ಬಂಡವಾಳ, ಅದರಲ್ಲೂ ಸಾವಿರಾರು ಕೋಟಿ ಹೂಡುವ ದೊಡ್ಡ ಉದ್ಯಮಗಳನ್ನು ಕರ್ನಾಟಕದತ್ತ ಸೆಳೆಯುವುದೇ ಉದ್ಯಮಸ್ನೇಹಿಯಾಗಿ ಕರ್ನಾಟಕವನ್ನು ತೋರಿಸುವ ದಾರಿ ಎಂದು ನಮ್ಮ ಸರ್ಕಾರ ನಂಬಿಕೊಂಡಿದೆ. ಇದಕ್ಕೆ ಈ ಹಿಂದಿನ ಸರ್ಕಾರಗಳೂ ಹೊರತಲ್ಲ. ಆದರೆ ಇದೊಂದು ದೂರಾಲೋಚನೆಯಿಲ್ಲದ ಚಿಂತನೆ. ಒಂದು ನಾಡಿನ ಏಳಿಗೆ ಸಾಧ್ಯವಾಗುವುದು ಸಾವಿರಾರು ಕೋಟಿ ಬಂಡವಾಳ ಹೂಡುವ ನಾಲ್ಕೋ ಐದೋ ದೊಡ್ಡ ಉದ್ಯಮಗಳಿಂದಲ್ಲ. ಬದಲಿಗೆ, ಸಾವಿರಾರು ಸಂಖ್ಯೆಯಲ್ಲಿ ಅತ್ಯಂತ ಕ್ರಿಯಾಶೀಲವಾದ ಚಿಕ್ಕ ಮತ್ತು ನಡು ಗಾತ್ರದ ಉದ್ಯಮಗಳು ಹುಟ್ಟಿಕೊಳ್ಳುವುದರಿಂದ. ಇಂತಹ ಉದ್ಯಮಗಳೇ ಸ್ಥಳೀಯವಾಗಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಹುಟ್ಟು ಹಾಕುತ್ತವೆ. ಆದರೆ ನಮ್ಮ ಸರ್ಕಾರಗಳ ಗಮನ ಅವರತ್ತ ಹರಿದಿಲ್ಲ. ಯಾಕೆಂದರೆ ಹೂಡಿಕೆದಾರರ ಸಮಾವೇಶ ಮುಗಿದಾಗ ಲಕ್ಷ ಕೋಟಿಯ ಲೆಕ್ಕದಲ್ಲಿ ಹೂಡಿಕೆ ಹರಿದು ಬಂದಿದೆ ಎಂದು ಜನರನ್ನು ನಂಬಿಸಲು ಅವರಿಗೆ ಬೇಕಿರುವುದು ದೊಡ್ಡ ಹೂಡಿಕೆದಾರರೇ ಹೊರತು ಇಂತಹ ಚಿಕ್ಕ ಉದ್ಯಮಿಗಳಲ್ಲ. ಹೊರಗಿನ ದೊಡ್ಡ ಬಂಡವಾಳಕ್ಕೆ ಮಣೆ ಹಾಕುವಾಗ ಸಹಜವಾಗಿಯೇ ಅಂತಹ ಶಕ್ತಿಯಿಲ್ಲದ ಚಿಕ್ಕ ಪುಟ್ಟ ಕನ್ನಡದ ಉದ್ಯಮಿಗಳು ಮೂಲೆಗುಂಪಾಗಿ, ಹೊರಗಿನ ಕನ್ನಡೇತರ ಉದ್ಯಮಿಗಳು ಕರ್ನಾಟಕದಲ್ಲಿ ಹೆಚ್ಚು ಬಲಗೊಳ್ಳುತ್ತಾರೆ. ಬೆಂಗಳೂರಿನ ರಾಜಕೀಯವನ್ನು ನಿಯಂತ್ರಿಸಲು ಪ್ರಯತ್ನಿಸುವ ಕನ್ನಡೇತರ ಉದ್ಯಮಿಗಳನ್ನು ಕಂಡವರಿಗೆ ಇದು ಅರ್ಥವಾಗದಿರದು. ಇನ್ನೊಂದೆಡೆ ಉದ್ಯಮಿಗಳು ಹೊರಗಿನವರಾದಷ್ಟು ಅವರ ಭಾಷೆ, ಸಂಸ್ಕೃತಿಯ ಪ್ರಭಾವವೂ ನಮ್ಮ ನೆಲದ ಮೇಲೆ ಹೆಚ್ಚುತ್ತದೆ ಹಾಗೂ ಕನ್ನಡ, ಕನ್ನಡಿಗರ ಪರ ಸರ್ಕಾರ ಯಾವುದೇ ನಿಲುವು ಕೈಗೊಳ್ಳುವ ಪ್ರಯತ್ನ ಮಾಡಿದಾಗಲೂ ಅದಕ್ಕೆ ಈ ಉದ್ಯಮಿಗಳಿಂದ ವಿರೋಧ ವ್ಯಕ್ತವಾಗುತ್ತದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವ ಬಗ್ಗೆ ಸರ್ಕಾರಕ್ಕೆ ಸಲ್ಲಿಕೆಯಾದ ವರದಿಗೆ ಈ ಕನ್ನಡೇತರ ವಲಯದಿಂದ ವ್ಯಕ್ತವಾದ ವಿರೋಧವನ್ನು ಇಲ್ಲಿ ನೆನೆಯಬಹುದು.
ಕನ್ನಡಿಗರಿಗೆ ಉದ್ಯೋಗ ಯಾಕಿಲ್ಲ?
ಕನ್ನಡಿಗರಲ್ಲಿ ಉದ್ಯಮಶೀಲತೆ ಬೆಳೆಸುವ ತೊಂದರೆಯದ್ದು ಒಂದು ತೂಕವಾದರೆ ಹೊರಗಿನ ಬಂಡವಾಳದಿಂದ ಹುಟ್ಟುವ ಕೆಲಸಗಳು ಸ್ಥಳೀಯರಿಗೆ ಸಿಗದಿರುವ ದುರಂತದ್ದೇ ಇನ್ನೊಂದು ತೂಕ. ಇಲ್ಲಿಯವರೆಗಿನ ಯಾವ ಬಂಡವಾಳ ಹೂಡಿಕೆ ಸಮಾವೇಶಗಳು ಬಂದಿದ್ದ ಸಂಸ್ಥೆಗಳಿಗೆ ಪ್ರತಿಭಾವಂತ ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಿ ಎಂದು ಹೇಳುವ ಧೈರ್ಯ ತೋರಿಲ್ಲ. ಅದರ ಫಲವಾಗಿ ಇಂದು ಐಟಿ, ಬಿಟಿ ಬಿಡಿ, ಕರ್ನಾಟಕದ ಇತರೆ ಭಾಗಗಳಲ್ಲಿ ಸ್ಥಾಪನೆಯಾಗಿರುವ ಉಷ್ಣ ವಿದ್ಯುತ್ ಸ್ಥಾವರ, ಸ್ಟೀಲ್ ಕಾರ್ಖಾನೆಯಂತಹ ಉದ್ಯಮಗಳಲ್ಲೂ ಕನ್ನಡೇತರರೇ ತುಂಬಿ ತುಳುಕುತ್ತಿದ್ದಾರೆ. ಒಂದೆಡೆ ಉಚಿತ ಭೂಮಿ, ಉಚಿತ ವಿದ್ಯುತ್, ಉಚಿತ ನೀರು, ತೆರಿಗೆ ವಿನಾಯ್ತಿಯಂತಹ ಸೌಲಭ್ಯಗಳ ಲಾಭ ಪಡೆಯುವ ಹೊರಗಿನ ಬಂಡವಾಳದಾರರು,ಇನ್ನೊಂದೆಡೆ ಅವರು ಹುಟ್ಟು ಹಾಕುವ ಕೆಲಸದ ಬಹುಪಾಲು ಹೊರಗಿನವರಿಗೆ ದೊರೆಯುತ್ತಿರುವಾಗ ಇಂತಹ ಸಮಾವೇಶಗಳನ್ನು ಕನ್ನಡಿಗರ ಸರ್ಕಾರ ಹಮ್ಮಿಕೊಳ್ಳುವುದು ನಿಜಕ್ಕೂ ಯಾವ ಪುರುಷಾರ್ಥಕ್ಕಾಗಿ ಅನ್ನುವ ಪ್ರಶ್ನೆ ಏಳುವುದಿಲ್ಲವೇ? ಈಗಾಗಲೇ ಜನಸಂಖ್ಯೆಯ ಬೆಳವಣಿಗೆಯ ದರ ಋಣಾತ್ಮಕವಾಗಿ ಸಾಗುತ್ತಿರುವ ಕರ್ನಾಟಕಕ್ಕೆ ಇತಿಮಿತಿಯಿಲ್ಲದ ಪರಭಾಷಿಕರ ವಲಸೆ ಮುಂದೊಂದು ದಿನ ದೊಡ್ಡ ಗಂಡಾಂತರವನ್ನೇ ತರಲಿದೆ. ಹೂಡಿಕೆದಾರರ ಸಮಾವೇಶದಲ್ಲಿ ಮುಳುಗಿರುವ ಸರ್ಕಾರಕ್ಕೆ ಕನ್ನಡಿಗರ ಕಣ್ಣಿನಿಂದ ಇದನ್ನೆಲ್ಲ ಎಂದಿಗಾದರೂ ನೋಡಲು ಸಾಧ್ಯವಾದಿತೇ?