ಕಾವೇರಿ ವಿವಾದ – ಕನ್ನಡಿಗರಿಗೆ ಕೊಡುತ್ತಿರುವ ಸಂದೇಶ
ತಮಿಳುನಾಡಿನ ಜೊತೆಗಿನ ಕರ್ನಾಟಕದ ಕಾವೇರಿ ವಿವಾದ ನೂರು ವರುಶಗಳಿಗೂ ಮಿಗಿಲಾದದ್ದು. ಸ್ವಾತಂತ್ರ್ಯಕ್ಕೆ ಮುಂಚೆ ಬ್ರಿಟಿಷರ ಪ್ರಭಾವದಿಂದಲೂ, ಸ್ವಾತಂತ್ರ್ಯ ನಂತರ ದೆಹಲಿಯಲ್ಲಿ ತಮಿಳುನಾಡಿನ ಪ್ರಾದೇಶಿಕ ಪಕ್ಷಗಳಿಗಿದ್ದ ಪ್ರಭಾವದಿಂದಲೂ ನಿರಂತರವಾಗಿ ತಮಿಳುನಾಡು ತನ್ನನ್ನು ತಾನು ಶೋಷಿತರಂತೆಯೂ, ಕರ್ನಾಟಕವನ್ನು ಶೋಷಿಸುವವರಂತೆಯೂ ಬಿಂಬಿಸುತ್ತ ಕಾವೇರಿ ನೀರಿನ ಮೇಲೆ ಹಕ್ಕು ಸಾಧಿಸಿ, ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಲೇ ಬಂದಿದೆ. ಪ್ರತಿ ಬಾರಿ ಮಳೆಯ ಕೊರತೆಯಾದಾಗಲೂ ಭುಗಿಲೇಳುವ ವಿವಾದ, ಕರ್ನಾಟಕ ತನಗೆ ಎಷ್ಟೇ ಕಷ್ಟವಾದರೂ ಕೊನೆಯಲ್ಲಿ ನೀರು ಬಿಡುವ ಮೂಲಕವೇ ಕೊನೆಯಾಗುತ್ತಿದ್ದದ್ದು ಒಂದೆಡೆಯಾದರೆ ಈ ಹಗ್ಗಜಗ್ಗಾಟದಲ್ಲಿ ಸುಪ್ರೀಂ ಕೋರ್ಟಿನ ಕಣ್ಣಲ್ಲೂ, ದೆಹಲಿಯ ಮಾಧ್ಯಮಗಳ ಕಣ್ಣಲ್ಲೂ ಮತ್ತು ದೇಶದ ಇತರೆ ರಾಜ್ಯಗಳ ಕಣ್ಣಲ್ಲೂ ಕರ್ನಾಟಕ ಒಂದು ಹಟಮಾರಿ ರಾಜ್ಯ ಎಂಬಂತೆಯೇ ಬಿಂಬಿತವಾಗುತ್ತ ಬಂದಿದ್ದು ಇನ್ನೊಂದೆಡೆ. “ಕಾವೇರಿ ನಮ್ಮದು”, “ರಕ್ತ ಕೊಟ್ಟೇವು, ನೀರು ಬಿಡೆವು” ಅನ್ನುವ ಕೂಗಿಗೆ, “ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು” ಅನ್ನುವ ಮಾಧ್ಯಮಗಳ ವರದಿಗಾರಿಕೆಗೆ, ಇಲ್ಲವೇ ನಮ್ಮ ಜನಪ್ರತಿನಿಧಿಗಳು ಸರಿಯಿಲ್ಲ ಅನ್ನುವ ಲೋಚಗುಡುವಿಕೆಗೆ ಕರ್ನಾಟಕದ ಪ್ರತಿಕ್ರಿಯೆಯೂ ಸೀಮಿತವಾಗುತ್ತಿತ್ತು. ಈ ಬಾರಿ ಕರ್ನಾಟಕದ ಪ್ರತಿಕ್ರಿಯೆ, ಚಂಡಿ ಹಿಡಿದಂತಿದ್ದ ಸುಪ್ರೀಂ ಕೋರ್ಟನ್ನು ನಿಭಾಯಿಸಿದ ರೀತಿ, ತನಗೂ ಇದಕ್ಕೂ ಸಂಬಂಧವೇ ಇಲ್ಲ ಅನ್ನುವಂತಿದ್ದ ಕೇಂದ್ರ ಸರ್ಕಾರವನ್ನು ಕೊನೆಗೂ ಎಳೆ ತಂದು ಕಾವೇರಿ ನೀರು ನಿರ್ವಹಣಾ ಮಂಡಳಿ ಮಾಡದಂತೆ ತಡೆದ ರೀತಿ ಎಲ್ಲವೂ ಒಂದು ಹೊಸ ಸಂಪ್ರದಾಯಕ್ಕೆ, ಒಂದು ಹೊಸ ಮಾದರಿಯ ರಾಜಕಾರಣಕ್ಕೆ ನಾಂದಿ ಹಾಡಿತು ಅನ್ನಬಹುದು.
ಒಗ್ಗಟ್ಟಲ್ಲಿ ಬಲ
ತಮಿಳುನಾಡಿನ ವಿಷಯಕ್ಕೆ ಬಂದಾಗ ತಮಿಳು ರಾಜಕಾರಣಿಗಳು ಎಲ್ಲವನ್ನು ಮರೆತು ಒಂದಾಗಿ ನಿಲ್ಲುತ್ತಾರೆ. ಅಂತಹದೊಂದು ಒಗ್ಗಟ್ಟು ನಮ್ಮ ರಾಜಕಾರಣಿಗಳಿರಲಿಲ್ಲ. ಕಾವೇರಿ ವಿವಾದ ಸ್ಪೋಟಗೊಂಡ ಹೊತ್ತಲ್ಲೂ ಅದು ಕಾಣಿಸಿರಲಿಲ್ಲ. ಯಾವಾಗ ಕೋರ್ಟು ಕಾವೇರಿ ಕೊಳ್ಳದ ವಸ್ತು ಸ್ಥಿತಿಯನ್ನು ಅರಿಯದೇ ಒಂದರ ಹಿಂದೆ ಒಂದರಂತೆ ನೀರು ಬಿಡಲೇಬೇಕು ಅನ್ನುವ ತೀರ್ಮಾನಗಳನ್ನು ಕೈಗೊಳ್ಳಲಾರಂಭಿಸಿತೋ ಆಗ ತೀವ್ರ ಬಿಕ್ಕಟ್ಟಿಗೆ ಸರ್ಕಾರವೂ ಸಿಲುಕಿತು, ಎಲ್ಲ ಪಕ್ಷಗಳೂ ಸಿಲುಕಿದವು. ಇಂತಹ ಹೊತ್ತಲ್ಲಿ ನಿಸ್ಸಂದೇಹವಾಗಿಯೂ ಕರ್ನಾಟಕದ ಎಲ್ಲ ನೀರಾವರಿ ವಿಚಾರಗಳಲ್ಲಿ ಆಳವಾದ ಅರಿವುಳ್ಳ ದೇವೆಗೌಡರನ್ನು ಮುಖ್ಯಮಂತ್ರಿಗಳೇ ಹೋಗಿ ಕಂಡು, ಮಾರ್ಗದರ್ಶನ ಕೋರಿದ್ದು ಒಂದು ದೊಡ್ಡ ಬದಲಾವಣೆಯ ಮೊದಲ ಹೆಜ್ಜೆಯಾಯಿತು. ಸರ್ವ ಪಕ್ಷದ ಸಭೆಗೆ ಬಿಜೆಪಿ ಗೈರಾದಾಗಲೂ ಅದನ್ನು ಉಳಿದೆರಡು ಪಕ್ಷಗಳು ರಾಜಕೀಯ ಮಾಡಲು ಬಳಸಲಿಲ್ಲ. ಬದಲಿಗೆ, ಹಾಗೇ ಗೈರಾದದ್ದು ಜನರ ಆಕ್ರೋಶ ಬಿಜೆಪಿಯತ್ತಲೇ ತಿರುಗುವಂತಾದದ್ದು ಅರಿತ ಬಿಜೆಪಿಯೂ ತಕ್ಷಣ ತನ್ನ ತಪ್ಪು ತಿದ್ದಿಕೊಂಡು ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಪಾಲ್ಗೊಂಡು, ಮೂರೂ ಪಕ್ಷಗಳು ಒಕ್ಕೊರಲಿನಿಂದ “ಕುಡಿಯುವ ನೀರಿಗಾಗಿ ಮಾತ್ರ ಕಾವೇರಿ ನೀರು ಬಳಸುತ್ತೇವೆ” ಅನ್ನುವ ಜಾಣತನದ ನಿರ್ಣಯವನ್ನು ಕೈಗೊಂಡು ಒಂದರ್ಥದಲ್ಲಿ ನದಿ ನೀರಿನಂತಹ ಸೂಕ್ಷ್ಮ ವಿಷಯಗಳಲ್ಲಿ ನ್ಯಾಯಾಂಗದ ಪಾತ್ರವೇನಿರಬೇಕು ಅನ್ನುವ ಬಗ್ಗೆಯೇ ಒಂದು ಚರ್ಚೆ ಹುಟ್ಟುವಂತೆ ಮಾಡಿದರು. ರಂಗೋಲಿ ಕೆಳಗೆ ನುಸುಳುವ ಕರ್ನಾಟಕದ ಈ ನಡೆಗೆ ಸುಪ್ರೀಂ ಕೋರ್ಟಿನಲ್ಲಿ ಸಹಜವಾಗಿಯೇ ಪ್ರತಿರೋಧ ಕಂಡು ಬಂದಿತು. ಕರ್ನಾಟಕವನ್ನು ದಂಡಿಸುವಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ ಸ್ಥಾಪನೆಯನ್ನು ಇನ್ನು ಮೂರು ದಿನದಲ್ಲಿ ಮಾಡಿ ಅನ್ನುವ ದುಡುಕಿನ ನಿರ್ಧಾರವನ್ನು ಕೇಂದ್ರಕ್ಕೆ ತಿಳಿಸಿತು. ಅದಕ್ಕೂ ಹೂಂಗುಟ್ಟಿದ ಕೇಂದ್ರದ ಆಟಾರ್ನಿ ಜನರಲ್ ನಿರ್ಧಾರ ಕರ್ನಾಟಕವನ್ನು ತೀವ್ರ ಆತಂಕಕ್ಕೆ ತಳ್ಳಿತು. ಮಹರಾಜರು ತಮ್ಮ ಮಡದಿಯ ಆಭರಣಗಳನ್ನು ಅಡ ಇಟ್ಟು ಕಟ್ಟಿದ ಕನ್ನಂಬಾಡಿಯಾಗಲಿ, ನಮ್ಮ ರಾಜ್ಯದ ಜನರ ತೆರಿಗೆ ಹಣದಿಂದಲೇ ಕಟ್ಟಿದ ಹಾರಂಗಿ, ಕಬಿನಿ, ಹೇಮಾವತಿಯನ್ನು ಕೇಂದ್ರ ಸರ್ಕಾರದ ಕೈಗೆ, ಆ ಮೂಲಕ ಪರೋಕ್ಷವಾಗಿ ತಮಿಳುನಾಡಿನ ಕೈಗೆ ಒಪ್ಪಿಸುವುದು ಕನ್ನಡಿಗರ ಆತ್ಮಾಭಿಮಾನಕ್ಕೆ ದೊಡ್ಡ ಹೊಡೆತ ನೀಡುವ ಘಟನೆಯಾಗಿತ್ತು. ಈ ಆಣೆಕಟ್ಟೆಗಳನ್ನು ಕಟ್ಟಲು ಯಾರೂ ಒಂದು ಪೈಸೆ ನೀಡಿಲ್ಲ, ಇದು ಕನ್ನಡಿಗರ ಹಣದಲ್ಲಿ ಕಟ್ಟಿದ್ದು ಅನ್ನುವರ್ಥದ ಮಾತುಗಳನ್ನು ಮುಖ್ಯಮಂತ್ರಿಗಳೇ ಆಡಿದರು. ಕುಮಾರಸ್ವಾಮಿಯವರು ಒಕ್ಕೂಟ ವ್ಯವಸ್ಥೆಯನ್ನೇ ಪ್ರಶ್ನಿಸುವ ಹಂತಕ್ಕೆ ತಲುಪಿದರು. ಇದರ ಬೆನ್ನಲ್ಲೇ ದೇವೆಗೌಡರು ಕೈಗೊಂಡ ಉಪವಾಸ ಮತ್ತು ಅದಕ್ಕೆ ಪಕ್ಷಾತೀತವಾಗಿ ವ್ಯಕ್ತವಾದ ಬೆಂಬಲ, ಮಂಡಳಿ ಸ್ಥಾಪಿಸುವ ನಿರ್ಧಾರ ಕೈಗೊಂಡರೆ ಕರ್ನಾಟಕದಲ್ಲಿ ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ಹೊಡೆತ ಕೊಡಲಿದೆ ಅನ್ನುವ ಇಂಟೆಲಿಜೆನ್ಸ್ ದೆಹಲಿಗೂ ತಲುಪಿಸಿತೆನ್ನಬಹುದು. ಅಂತಹದೊಂದು ಸಂದೇಶವನ್ನು ಪರಿಣಾಮಕಾರಿಯಾಗಿ ದೆಹಲಿಗೆ ತಲುಪಿಸುವಲ್ಲಿ ಕರ್ನಾಟಕದ ಬಿಜೆಪಿ ನಾಯಕರು ಶ್ರಮವಹಿಸಿ ದುಡಿದರು ಅನ್ನುವುದು ಸುಳ್ಳಲ್ಲ. ಅದಾದ ನಂತರವೇ ಕೇಂದ್ರ ಸರ್ಕಾರ ಈ ವಿಷಯದಲ್ಲಿ ತನ್ನ ನಿಲುವು ಬದಲಿಸಿ, ಮಂಡಳಿ ಸ್ಥಾಪಿಸುವ ನಿರ್ಧಾರ ಸಂಸತ್ತಿನದ್ದೇ ಹೊರತು ಕೋರ್ಟಿನದ್ದಲ್ಲ ಎಂದು ತನ್ನ ತಪ್ಪನ್ನು ತಿದ್ದಿಕೊಂಡಿತು. ಈ ಹೊತ್ತಿನಲ್ಲೂ ಇದನ್ನು ರಾಜಕೀಯಕ್ಕೆ ಬಳಸದೇ ಎಲ್ಲ ಪಕ್ಷಗಳೂ ಒಟ್ಟಾಗಿ ಪ್ರಧಾನಿಯವರನ್ನು, ದೇವೆಗೌಡರನ್ನು ಪಕ್ಷಾತೀತವಾಗಿ ಅಭಿನಂದಿಸಿದ್ದು ಒಂದು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿತು ಅಂದರೆ ಯಾವ ತಪ್ಪೂ ಇಲ್ಲ.
ಕರ್ನಾಟಕ ಕೇಂದ್ರಿತ ರಾಜಕಾರಣದ ಸಮಯ
ಕರ್ನಾಟಕದ ರಾಜಕಾರಣದಲ್ಲಿ ಕರ್ನಾಟಕ ಕೇಂದ್ರಿತ ವಿಷಯಗಳಿಗೆ ಬಲವಿಲ್ಲ ಅನ್ನುವ ಮಾತನ್ನು ನಾವೆಲ್ಲರೂ ಕೇಳುತ್ತಲೇ ಬಂದಿದ್ದೇವೆ. ಇಲ್ಲೇನಿದ್ದರೂ ಜಾತಿ, ಧರ್ಮ, ಹಣ, ಹೆಂಡದ ರಾಜಕೀಯ ಮಾಡಿದರೆ ಸಾಕು ಅನ್ನುವ ನಂಬಿಕೆ ಬಹಳ ಗಟ್ಟಿಯಾಗಿತ್ತು. ಆ ನಂಬಿಕೆಯನ್ನು ಕೊಂಚ ಅಲುಗಾಡಿಸಿ, ಎಲ್ಲ ಪಕ್ಷಗಳಿಗೂ ಚುರುಕು ಮುಟ್ಟಿಸುವ ಕೆಲಸ ಕಾವೇರಿಯ ವಿವಾದ ಈ ಬಾರಿ ಮಾಡಿದೆ. ಇದರ ಹಿಂದೆ ಕಳೆದ ಹತ್ತು-ಹದಿನೈದು ವರುಷಗಳಿಂದ ಸಕ್ರೀಯವಾಗಿರುವ ಕನ್ನಡ ಚಳವಳಿ, ಸಾಮಾಜಿಕ ಜಾಲ ತಾಣಗಳ ಮೂಲಕ ಕನ್ನಡಿಗರಲ್ಲಾಗುತ್ತಿರುವ ಜಾಗೃತಿ, ಸಂಘಟನೆ ಹಾಗೂ ಕನ್ನಡ ಪರವೆಂದರೇನು ಅನ್ನುವ ಬಗ್ಗೆ ಹೊಸ ಸ್ಪಷ್ಟತೆ ತರುತ್ತಿರುವ ಹೊಸ ತಲೆಮಾರಿನ ಚಿಂತಕರ ಪಾತ್ರ ಖಂಡಿತವಿದೆ. ಅದು ಪರಭಾಷಿಕರನ್ನು ರಾಜ್ಯಸಭೆಗೆ ಕಳಿಸುವ ವಿಚಾರದಲ್ಲಿ ಬಂದ ವಿರೋಧವಿರಬಹುದು, ಮಹದಾಯಿಯ ವಿಚಾರದಲ್ಲಿ ಸಮಗ್ರ ಕರ್ನಾಟಕ ಸ್ಪಂದಿಸಿರುವ ರೀತಿ ಇರಬಹುದು, ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಹಿಂದಿ ಹೇರಿಕೆಯ ಬಗ್ಗೆ ಉಂಟಾಗುತ್ತಿರುವ ವಿರೋಧವಿರಬಹುದು, ಎಲ್ಲವನ್ನೂ ಸಮಗ್ರವಾಗಿ ಗಮನಿಸಿದರೆ ಕರ್ನಾಟಕ ಕೇಂದ್ರಿತ ರಾಜಕಾರಣಕ್ಕೆ ಬೇಕಾದ ಒತ್ತಡವೊಂದು ರೂಪುಗೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಅದು ಇನ್ನು ಹೆಚ್ಚಿನ ರೀತಿಯಲ್ಲಿ ಮುನ್ನೆಲೆಗೆ ಬರಲಿದೆ ಅನ್ನುವುದನ್ನು ಕಾಣಬಹುದು. ಮತ ಪಡೆಯಲು ಈಗಿರುವ ಆಯಾಮಗಳಿಗೆ ಇದೊಂದು ಹೊಸ ಆಯಾಮವಾಗಿ ಸೇರಿಕೊಂಡು ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ವಿಷಯಗಳೂ ಚುನಾವಣೆಯ ಅಂಶಗಳಾಗುವ ದಿನ ದೂರವಿಲ್ಲ ಅನ್ನುವ ನಂಬಿಕೆ ಕನ್ನಡಿಗರಲ್ಲಿದೆ. ಭಾರತದ ಒಕ್ಕೂಟದಲ್ಲಿ ಕನ್ನಡಿಗರ ರಾಜಕೀಯ ದನಿ ಗಟ್ಟಿಗೊಳ್ಳುವಲ್ಲಿ ಈ ಬಾರಿಯ ನಮ್ಮ ಪ್ರತಿಕ್ರಿಯೆ ಬುನಾದಿಯಾಗಲಿ. ಅಂತಹ ತಮಿಳುನಾಡನ್ನೇ ಬಗ್ಗಿಸಲು ಸಾಧ್ಯವಾಗಿರುವಾಗ ಗೋವಾದಂತಹ ಚಿಕ್ಕ ರಾಜ್ಯವನ್ನು ಪಳಗಿಸುವುದು ಕಷ್ಟವಾಗಬಾರದು. ಮಹದಾಯಿಯ ವಿಚಾರದಲ್ಲೂ ಇಂತಹದೊಂದು ಇಚ್ಛಾಶಕ್ತಿಯ ಪ್ರದರ್ಶನವಾಗಲಿ.