ಕಳಸಾ ಬಂಡೂರಿ ಯೋಜನೆಯ ಸಮಗ್ರ ಇತಿಹಾಸ

ಕಳಸಾ ಬಂಡೂರಿ ಯೋಜನೆಕಳಸಾ ಬಂಡೂರಿ ಯೋಜನೆ ಜಾರಿಗಾಗಿ ಕನ್ನಡಿಗರ ಹೋರಾಟ ತೀವ್ರಗೊಂಡಿದೆ. ಈ ಹೊತ್ತಿನಲ್ಲಿ ಈ ಯೋಜನೆಯ ಸಮಗ್ರ ವಿವರವನ್ನು ಒಂದೆಡೆ ಕಲೆ ಹಾಕಿದ್ದಾರೆ ಕನ್ನಡದ ಯುವ ಬರಹಗಾರ ಮಹೇಶ್ ರುದ್ರಗೌಡರ್ ಅವರು. ಅವರು ಇದನ್ನು ಎರಡು ವರ್ಷದ ಹಿಂದೆಯೇ ಮಾಡಿದ್ದರು. ವಿವಾದ ಭುಗಿಲೇದ್ದಿರುವ ಈ ಹೊತ್ತಿನಲ್ಲಿ ಸದ್ಯದ ಪರಿಸ್ಥಿತಿಯನ್ನು ಸೇರಿಸಿ ಒಂದು ಸಮಗ್ರ ಚಿತ್ರಣವನ್ನು ಮುನ್ನೋಟದ ಓದುಗರಿಗೆ ಕಟ್ಟಿಕೊಟ್ಟಿದ್ದಾರೆ. ಓದಿ, ಹಂಚಿಕೊಳ್ಳಿ.

  • ಸಂಪಾದಕರು, ಮುನ್ನೋಟ ಬ್ಲಾಗ್

ಮಲಪ್ರಭಾ ನೀರಾವರಿ ಯೋಜನೆ ಹಿನ್ನೋಟ:

ಮೇಲಿಂದ ಮೇಲೆ ಬರಗಾಲಕ್ಕೆ ತುತ್ತಾಗುತ್ತಿದ್ದ ಗದಗ ಜಿಲ್ಲೆಯ ನರಗುಂದ, ರೋಣ, ಧಾರವಾಡ ಜಿಲ್ಲೆಯ ನವಲಗುಂದ ಹಾಗೂ ಬೆಳಗಾವಿ ಜಿಲ್ಲೆಯ ಸವದತ್ತಿ ಬೈಲಹೊಂಗಲ ತಾಲೂಕುಗಳಿಗೆ ನೀರಾವರಿಯ ಅಗತ್ಯತೆ ಇತ್ತು. ಈ ಭಾಗದ ಕುಡಿಯುವ ನೀರಿನ ಅಭಾವ ಹೇಳತೀರದಾಗಿತ್ತು. ಅದಕ್ಕಾಗಿ ರೂಪಗೊಂಡದ್ದು ಮಲಪ್ರಭಾ ನೀರಾವರಿ ಯೋಜನೆ. ಸವದತ್ತಿ ಹತ್ತಿರ `ನವಿಲು ತೀರ್ಥ ಬಳಿ ಮಲಪ್ರಭಾ ನದಿಗೆ ಅಣೆಕಟ್ಟೆ ನಿರ್ಮಿಸಿ 5.27 ಲಕ್ಷ ಎಕರೆ ಭೂಮಿಗೆ ನೀರು ಒದಗಿಸುವ ಯೋಜನೆ ಇದಾಗಿತ್ತು. ಯೋಜನೆಯ ಕಾರ್ಯ 1961 ರಲ್ಲಿ ಪ್ರಾರಂಭಗೊಂಡು 1972-73ರ ಸುಮಾರಿಗೆ ಪೂರ್ಣಗೊಂಡಿತು. ಈ ಜಲಾಶಯ 37 ಟಿಎಂಸಿ ನೀರಿನ ಸಂಗ್ರಹ ಸಾಮಥ್ರ್ಯ ಹೊಂದಿದೆ. ಆದರೆ ಇಲ್ಲಿಯವರೆಗೆ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು 3-4 ಬಾರಿ ಮಾತ್ರ. ಮಲಪ್ರಭಾ ಜಲಾಶಯ (ರೇಣುಕಾಸಾಗರ) ದಲ್ಲಿ ನೀರಿನ ಸಂಗ್ರಹ ಕಡಿಮೆಯಾದ ಕಾರಣ ಮಳೆಯ ಕೊರತೆ ಒಂದು ಕಡೆಯ ಸಮಸ್ಯೆಯಾದರೆ, ನದಿ ನೀರು ಜಲಾಶಯ ತಲುಪುವ ಪೂರ್ವದಲ್ಲೇ ರೈತರಿಂದ ದೊಡ್ಡ ಪ್ರಮಾಣದಲ್ಲಿ ಬಳಕೆಯಾಗುವುದು ಇನ್ನೊಂದು ಕಡೆಯ ಸಮಸ್ಯೆ. ಇದರೊಂದಿಗೆ ಮಲಪ್ರಭಾ ಜಲಾಯನ ಪ್ರದೇಶ ಕಿರಿದಾಗಿದೆ. ಹೀಗಾಗಿ ಘೋಷಿಸಿದ ಕ್ಷೇತ್ರಗಳಿಗೆ ನಿರೀಕ್ಷಿಸಿದ ಪ್ರಮಾಣದಲ್ಲಿ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ. ಇಷ್ಟಾಗಿ ರೋಣ ತಾಲೂಕಿನ 1.11 ಲಕ್ಷ ಎಕರೆ ಭೂಮಿಗೆ ನೀರು ಒದಗಿಸಲು ಘೋಷಿಸಿದ್ದರೂ ನೀರು ಲಭ್ಯವಾಗಿಲ್ಲ.

ಮಹದಾಯಿ ಯೋಜನೆ:

ರೇಣುಕಾಸಾಗರದ ನೀರಿನ ಕೊರತೆಯನ್ನು ನೀಗಲು ಸಿದ್ಧವಾದ ಯೋಜನೆಯೇ ಮಹದಾಯಿ ತಿರುವು ಯೋಜನೆ. ಮಲಪ್ರಭಾ ನದಿಯಂತೆ ಮಹದಾಯಿ ನದಿ ಕೂಡಾ ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನಲ್ಲಿ ಉಗಮವಾಗಿದೆ. ಸಹ್ಯಾದ್ರಿ ಬೆಟ್ಟದಲ್ಲಿ ಸಮುದ್ರ ಮಟ್ಟದಿಂದ 914 ಮೀ. ಎತ್ತರದಲ್ಲಿ ಹುಟ್ಟಿದ ಈ ನದಿ ಕರ್ನಾಟಕದಲ್ಲಿ ೩೫ ಕಿ.ಮೀ. ಕ್ರಮಿಸಿ ಗೋವಾ ರಾಜ್ಯದಲ್ಲಿ ಹರಿದು ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಗೋವಾದಲ್ಲಿ `ಮಾಂಡೋವಿ’ ಎಂದು ಹೆಸರು. ಮಹದಾಯಿ ನದಿಗೆ ಹಲತಾರಾ, ಕಳಸಾ, ಬಂಡೂರಿ, ಕಾರಂಜೋಳ, ಬೊಮ್ಮನರಿ ದೂದ ಸಾಗರ ಹೀಗೆ ಅನೇಕ ಉಪನದಿಗಳಿಂದ ಕೂಡಿದ ನದಿ ಕಣಿವೆ ಆಗಿದೆ. ಇದು ಹೆಚ್ಚು ಮಳೆಬೀಳುವ ಪ್ರದೇಶವಾಗಿದ್ದು ಸರಾಸರಿ 3,134 ಮಿಲಿಮೀಟರ್ ಮಳೆ ಬೀಳುತ್ತದೆ. ಮಹಾದಾಯಿ ನದಿ ಕಣಿವೆಯಿಂದ ಕಾಲುವೆ ಮೂಲಕ ಮಲಪ್ರಭಾ ನದಿಗೆ ನೀರು ವರ್ಗಾಯಿಸುವುದೇ ಈ ಯೋಜನೆಯ ಉದ್ದೇಶ.

ಗೋವಾದ ವಿರೋಧ:

1978ರಲ್ಲಿಯೇ ಈ ಯೋಜನೆ ಸಿದ್ಧವಾದರೂ ಕಾರ್ಯರೂಪಕ್ಕೆ ಬರಲಿಲ್ಲ. ಇದನ್ನೊಂದು ಜಲವಿದ್ಯುತ್ ಯೋಜನೆಯಾಗಿ ಮಾರ್ಪಡಿಸಿ ಮಹಾದಾಯಿ ಜಲಾಯನ ಪ್ರದೇಶದಿಂದ 9 ಟಿಎಂಸಿ ನೀರನ್ನು ಮಲಪ್ರಭಾಗೆ ವರ್ಗಾಯಿಸಿ ವಿದ್ಯುತ್ ಉತ್ಪಾದನೆಗೂ ಯೋಜಿಸಲಾಗಿತ್ತು. (5-11-1988)1988 ರಲ್ಲಿ ಇದಕ್ಕೆ ಕರ್ನಾಟಕ ಸರಕಾರ ಅನುಮೋದನೆ ನೀಡಿತು. ಆದರೆ ಗೋವಾ ಸರಕಾರದ ತೀವ್ರ ವಿರೋಧದಿಂದ ಯೋಜನೆಗೆ ತಡೆಯಾಯಿತು. ಮಹಾದಾಯಿ 2,032 ಚ.ಕಿ.ಮೀ. ಜಲಾನಯನ ಪ್ರದೇಶ ಹೊಂದಿದ್ದು ಅದರಲ್ಲಿ ಕರ್ನಾಟಕದ ಪಾಲು 412 ಚ.ಕಿ.ಮೀ. ಕೇಂದ್ರದ ಜಲ ಆಯೋಗದ ಸಮೀಕ್ಷೆಯಂತೆ ನದಿಯಲ್ಲಿ ಒಟ್ಟು 210 ಟಿಎಂಸಿ ನೀರು ಲಭ್ಯವಿದ್ದು ಕರ್ನಾಟಕ 45 ಟಿಎಂಸಿ ನೀರಿನ ಪಾಲನ್ನು ಹೊಂದಿದೆ. ಗೋವಾ ಸರಕಾರ ಮಹದಾಯಿ ನದಿಗೆ ಜಲವಿದ್ಯುತ್ ಆಗಲಿ, ಇತರ ಇನ್ನಾವುದೆ ಯೋಜನೆಯನ್ನೂ ರೂಪಿಸಿಲ್ಲ. ಕರ್ನಾಟಕ ತನ್ನ ಪಾಲಿನ ನೀರು ಪಡೆಯಲು ಯೋಜನೆ ರೂಪಿಸಿದರೂ ಅದಕ್ಕೆ ಗೋವಾ ಆತಂಕ ಒಡ್ಡುತ್ತಿದೆ.

ಕಳಸಾಬಂಡೂರಿ ಯೋಜನೆ :

ಕಳಸಾ ನಾಲಾ ತಿರುವು:

ಕಳಸಾ ಹಳ್ಳವು ಕರ್ನಾಟಕದಲ್ಲಿ ಹುಟ್ಟಿ ದಕ್ಷಿಣಾಭಿಮುಖವಾಗಿ ಹರಿದು ಗೋವಾದಲ್ಲಿ ಮಹದಾಯಿ ನದಿಯನ್ನು ಸೇರುತ್ತದೆ. ಕರ್ನಾಟಕದಲ್ಲಿ 24 ಚದರ ಕಿ.ಮೀ. ಜಲಾನಯನ ಪ್ರದೇಶ ಹೊಂದಿದ್ದು ಕೆಲವು ಉಪ ಹಳ್ಳಗಳು ಕರ್ನಾಟಕದಲ್ಲಿ ಹುಟ್ಟಿ ಗೋವಾದಲ್ಲಿ ಕಳಸಾ ಹಳ್ಳವನ್ನು ಸೇರುತ್ತವೆ. ಈ ಹಳ್ಳದಿಂದ 3.56 ಟಿಎಂಸಿ ನೀರನ್ನು ಪಡೆಯುವ ಉದ್ದೇಶದಿಂದ ಯೋಜನೆ ತಯಾರಿಸಲಾಗಿದೆ. ಕಳಸಾ ಯೋಜನೆಗೆ ಎರಡು ಅಣೆಕಟ್ಟೆಗಳನ್ನು ನಿರ್ಮಿಸುವುದು. ಹುಬ್ಬಳ್ಳಿ-ದಾರವಾಡ ಅವಳಿ ನಗರಗಳಿಗೆ ಕುಡಿಯುವ ನೀರು ಒದಗಿಸುವ ಸಲುವಾಗಿ ಅಂದಿನ ಜಲಸಂಪನ್ಮೂಲ ಸಚಿವರಾಗಿದ್ದ ಎಚ್.ಕೆ.ಪಾಟೀಲ್ ೨೦೦೦ ರಲ್ಲಿ ಕಳಸಾ ಬಂಡೂರಿ ನಾಲಾ ಯೋಜನೆಯನ್ನು ರೂಪಿಸಿದ್ದರು.

(1) ಕಳಸಾ ಹಳ್ಳಕ್ಕೆ ಅಣೆಕಟ್ಟು ಹಾಗೂ 4.8 ಕಿ.ಮಿ. ಉದ್ದದ ಕಾಲುವೆ ನಿರ್ಮಾಣ.

(2) ಹಳತಾರ ಹಳ್ಳಕ್ಕೆ ಅಣೆಕಟ್ಟು ನಿರ್ಮಿಸಿ ಅಲ್ಲಿ ಸಂಗ್ರಹವಾದ ನೀರನ್ನು 5.5 ಕಿ.ಮೀ. ಉದ್ದದ ಕಾಲುವೆಯ ಮೂಲಕ ಕಳಸಾ ಅಣೆಕಟ್ಟೆಗೆ ಸಾಗಿಸುವುದು.

ಇದರ ಒಟ್ಟು ವೆಚ್ಚ ಯೋಜನೆ ರೂಪಿಸಿದಾಗ 44 ಕೋಟಿ ರೂ.ಗಳು. ಆದರೆ ಈಗ ಅದರ ವೆಚ್ಚ 428 ಕೋಟಿ ರೂ.ಗಳು. ಈ ಪೈಕಿ ಅಂದಿನ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರ ಯೋಜನೆ ಅನುಷ್ಠಾನಗೊಳಿಸುವ ಉದ್ದೇಶದಿಂದ 125 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. ಅಂದಿನ ನೀರಾವರಿ ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ ಕಾಮಗಾರಿಗೆ ಅಡಿಗಲ್ಲು ನಿರ್ವಹಿಸಿ ಯೋಜನೆಗೆ ಚಾಲನೆ ನೀಡಿದ್ದರು.

ಬಂಡೂರಿ ನಾಲಾ ತಿರುವು:

ಬಂಡೂರಿ ಮಹದಾಯಿ ನದಿಯ ಇನ್ನೊಂದು ಉಪನದಿ. ಸಿಂಗಾರ ನಾಲಾ ಹಾಗೂ ವಾಟಿ ನಾಲಾಗಳಿಗೆ ಅಣೆಕಟ್ಟು ಕಟ್ಟಿ ಸಂಗ್ರಹವಾದ ನೀರನ್ನು ಬಂಡೂರಿ ಜಲಾಶಯಕ್ಕೆ ವರ್ಗಾಯಿಸುವುದು. ಇಲ್ಲಿ ಸಂಗ್ರಹವಾದ 4 ಟಿಎಂಸಿ ನೀರನ್ನು ೫.೧೫ ಕಿ.ಮೀ ಕಾಲುವೆ ಮೂಲಕ ಮಲಪ್ರಭಾ ನದಿಗೆ ವರ್ಗಾಯಿಸುವುದು. ಬಂಡೂರ ನಾಲಾ ಯೋಜನೆಗೊಳಪಡುವ ಜಲಾನಯನ ಪ್ರದೇಶ 32.25 ಚ.ಕಿ.ಮೀ. ಇದರಿಂದ ಒಟ್ಟು 380 ಹೆಕ್ಟೇರ್ ಭೂಮಿ ಮುಳುಗಡೆ ಆಗಲಿದೆ. ಇದರ ವೆಚ್ಚ ಯೋಜನೆ ತಯಾರಿಸುವಾಗ 49 ಕೋಟಿ ರೂ.ಗಳು. ಈಗ ಅದರ ವೆಚ್ಚ 370 ಕೋಟಿ ರೂ. ಆಗಿದೆ.

ಈ ಎರಡೂ ಯೋಜನೆಗಳಿಂದ ಒಟ್ಟು 7.56 ಟಿಎಂಸಿ ನೀರು ಲಭ್ಯವಾಗಲಿದೆ. ಇದುವೆ ಕಳಸಾ-ಬಂಡೂರಿ ನಾಲಾ ಯೋಜನೆ.

ಯೋಜನೆ ಬಗ್ಗೆ ಕರ್ನಾಟಕ, ಗೋವಾ ಸರಕಾರಗಳ ಚರ್ಚೆ ಮತ್ತು ಒಪ್ಪಂದ:

ಒಂದು ಹಂತದಲ್ಲಿ ಗೋವಾ ಮತ್ತು ಕರ್ನಾಟಕ ಸರಕಾರಗಳ ನಡುವೆ ಜಲವಿದ್ಯುತ್ ಯೋಜನೆಗೆ ಒಪ್ಪಂದವಾಗಿತ್ತು. ದಿ. 10-9-1996 ರಂದು ಗೋವಾ ಸರಕಾರದ ನೀರಾವರಿ ಮಂತ್ರಿ ಹಾಗೂ ಕರ್ನಾಟಕದ ಸರಕಾರದ ನೀರಾವರಿ ಸಚಿವರ ಒಂದು ಸಭೆ ನಡೆದು ಜಲವಿದ್ಯುತ್ ಯೋಜನೆ ಮತ್ತು ಕಳಸಾ-ಹರತಾರ ನದಿಗಳಿಂದ ನೀರು ವರ್ಗಾವಣೆ ಕುರಿತು ಚರ್ಚೆಯಾಗಿ ಕಳಸಾ ಯೋಜನೆಯಿಂದ 1.5 ಟಿಎಂಸಿ ನೀರನ್ನು ಮಾಂಡೋವಿ ಯೋಜನೆಗೆ ಹರಿಸುವ ಕರಾರಿನೊಂದಿಗೆ ಈ ಯೋಜನೆಗೆ ಒಪ್ಪಂದವಾಯಿತು. ಆದರೆ 5-3-1997 ರಂದು ಗೋವಾ ಸರಕಾರ ನೀರು ವರ್ಗಾಯಿಸುವುದಕ್ಕೆ ಒಪ್ಪಿಗೆ ಆಗಿಲ್ಲ ಎಂದು ತಿಳಿಸಿತು.

ಗೋವಾದ ವಾದವೇನು?

(1) ಮಹದಾಯಿ ನೀರಿನ ಕೊರತೆಯನ್ನು ಅನುಭವಿಸುತ್ತಿರುವ ಒಂದು ಕಣಿವೆ ಪ್ರದೇಶವಾಗಿದೆ. ಆದ್ದರಿಂದ ನೀರಿನ ಕೊರತೆ ಇರುವ ಕಣಿವೆಯಿಂದ ನೀರನ್ನು ಬೇರೆಡೆಗೆ ವರ್ಗಾಯಿಸುವುದು ಸೂಕ್ತವಲ್ಲ.

(2) ಮಹದಾಯಿ ನದಿ ನೀರನ್ನು ಬೇರೆಡೆಗೆ ವರ್ಗಾಯಿಸಿದರೆ ಪಶ್ಚಿಮ ಘಟ್ಟದ ಪರಿಸರದ ಮೇಲೆ ತೀವ್ರ ಪರಿಣಾಮ ಉಂಟಾಗುವುದು.

ಅದ್ಯಯನ ಮತ್ತು ಸಮೀಕ್ಷೆಗಳು ಹೇಳುವುದೇನು:

ಅಧ್ಯಯನಗಳು ಮತ್ತು ಸಮೀಕ್ಷೆಗಳು ಗೋವಾದ ವಾದದಲ್ಲಿರುವ ಪೊಳ್ಳುತನವನ್ನು ಎತ್ತಿತೋರಿಸಿವೆ. ಕೇಂದ್ರ ಸರಕಾರದ ಸಲಹೆಯಂತೆ ಕರ್ನಾಟಕ ಸರಕಾರ ಮಾಡಿಕೊಂಡ ಮನವಿ ಮೇರೆಗೆ ಮಹಾರಾಷ್ಟ್ರದ ನಾಗಪುರದಲ್ಲಿರುವ `ನೀರಿ’  ಅಧ್ಯಯನ ನಡೆಸಿ ಮಹದಾಯಿ ತಿರುವು ಯೋಜನೆಯಿಂದ ಪರಿಸರದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಉಂಟಾಗುವುದಿಲ್ಲವೆಂದೂ ಮತ್ತು ಮಹದಾಯಿ ಕಣಿವೆ ನೀರಿನ ಕೊರತೆ ಇರುವ ಪ್ರದೇಶ ಅಲ್ಲವೇ ಅಲ್ಲವೆಂದೂ ತಿಳಿಸಿತು. ಅದರಂತೆ ರಾಷ್ಟ್ರೀಯ ನೀರಿನ ಅಭಿವೃದ್ಧಿ ಸಂಸ್ಥೆ ಹಾಗೂ ಕೇಂದ್ರ ಜಲ ಆಯೋಗಗಳು ಕೂಡಾ ಅಧ್ಯಯನ ನಡೆಸಿ ಗೋವಾದ ವಾದದಲ್ಲಿ ಹುರುಳಿಲ್ಲ ಎಂಬುದನ್ನು ತಿಳಿಸಿವೆ. ಆದರೆ ಗೋವಾ ಸರಕಾರ ಮಾತ್ರ ಈ ಯಾವ ವರದಿಯನ್ನು ಒಪ್ಪಿಕೊಳ್ಳಲು ಸಿದ್ದವಿಲ್ಲ ಅಷ್ಟೆ.

ಕಳಸಾಬಂಡೂರಿ ನಾಲಾ ಯೋಜನೆಗೆ ಕೇಂದ್ರದ ಒಪ್ಪಿಗೆ ಹಾಗೂ ತಡೆ:

ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಿಗೆ ಹಾಗೂ ಇತರ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರನ್ನು ಪೂರೈಸಲು ಈ ಯೋಜನೆ ಅಗತ್ಯ ಎಂಬುದನ್ನು ಕರ್ನಾಟಕ ಕೇಂದ್ರಕ್ಕೆ ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಕೇಂದ್ರ ಜಲ ಆಯೋಗ ದಿ. 30-4-2002 ರಂದು ಯೋಜನೆಗೆ ತನ್ನ ತಾತ್ವಿಕ ಒಪ್ಪಿಗೆ ನೀಡಿತು. ಅದರೊಂದಿಗೆ ಕೆಲವು ಕರಾರುಗಳನ್ನು ವಿಧಿಸಿತು.

(1) 7.56 ಟಿಎಂಸಿ ನೀರನ್ನು ಕೇವಲ ಮಾನ್ಸೂನ್ ಮಳೆಗಾಲದಲ್ಲಿ ಮಾತ್ರ ವರ್ಗಾಯಿಸುವುದು.

(2) ನೀರನ್ನು ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಿಗೆ ಕುಡಿಯಲು ಮಾತ್ರ ಬಳಸುವುದು.

(3) ಅಂತರರಾಜ್ಯ ನೀರಿನ ಹಂಚಿಕೆಯಾದಾಗ ಕರ್ನಾಟಕದ ಪಾಲಿನಲ್ಲಿ ಈ 7.56 ಟಿಎಂಸಿ ನೀರನ್ನು ಹೊಂದಾಣಿಕೆ ಮಾಡಿಕೊಳ್ಳುವುದು.

(4) ಕರ್ನಾಟಕವು ಕೇಂದ್ರ ಜಲ ಆಯೋಗಕ್ಕೆ ಈ ಯೋಜನೆಗಳ ಎಲ್ಲ ತಾಂತ್ರಿಕ ಮಾಹಿತಿ ಒದಗಿಸುವುದು. ಕರ್ನಾಟಕವು ಭವಿಷ್ಯದಲ್ಲಿ ಹೆಚ್ಚಿನ ನೀರನ್ನು ವರ್ಗಾಯಿಸುವುದಿಲ್ಲ ಎಂಬುದನ್ನು ನೀಲಿ ನಕ್ಷೆಗಳಿಂದ ಖಾತ್ರಿ ಮಾಡಿಕೊಳ್ಳುವುದು.

(5) ಕೇಂದ್ರ ಜಲ ಆಯೋಗ ತಂತ್ರಜ್ಞರು, ಅಧಿಕಾರಿಗಳ ಯೋಜನಾ ಸ್ಥಳದ ಪರಿವೀಕ್ಷಣೆಗೆ ಮತ್ತು

(6) ಗೋವಾ ಹಾಗೂ ಮಹಾರಾಷ್ಟ್ರದ ಅಧಿಕಾರಿಗಳ ತಂಡ ಭೇಟಿ ಮಾಡಬಯಸಿದರೆ ಅವರ ಪರಿವೀಕ್ಷಣೆಗೆ ಅನುಮತಿಸುವುದು ಹಾಗೂ ಅನುಕೂಲ ಮಾಡಿಕೊಡುವುದು.

(7) ಉದ್ದೇಶಿತ ಕುಡಿಯುವ ನೀರಿನ ಯೋಜನೆ ಅನುಷ್ಠಾನದಲ್ಲಿ ಕರ್ನಾಟಕವು ಅಂಗೀಕೃತ ವಿಧಾನಗಳನ್ನು ಬಳಸುವುದು.

ಇದಾದ 5 ತಿಂಗಳಲ್ಲೇ ಗೋವಾ ಸರಕಾರದ ಹಠಮಾರಿತನ, ವಿರೋಧ ಹಾಗೂ ಆಕ್ಷೇಪಣೆಗಳಿಗೆ ಬಗ್ಗಿದ ಕೇಂದ್ರ ಜಲ ಆಯೋಗ ದಿ. 19-9-2002 ರಂದು ತಾನೇ ನೀಡಿದ ತಾತ್ವಿಕ ಒಪ್ಪಿಗೆಗೆ ತಡೆಯಾಜ್ಞೆ ನೀಡಿತು.

ಅರಣ್ಯ ಕಾಮಗಾರಿ:

ಹುಬ್ಬಳ್ಳಿ- ಧಾರವಾಡ ಸೇರಿದಂತೆ ಸುಮಾರು 10 ನಗರಗಳಿಗೆ ಕುಡಿಯುವ ನೀರು ಪೂರೈಸುವ ಸಲುವಾಗಿ ರೂಪಿಸಿರುವ ಕಳಸಾ- ಬಂಡೂರಿ ನಾಲೆ ಯೋಜನೆ ಅವೈಜ್ಞಾನಿಕವಾಗಿದೆ. ಇದರಿಂದ 7.32 ಹೆಕ್ಟೇರ್ ಅರಣ್ಯ ಭೂಮಿ ಹಾಗೂ 60 ಸಾವಿರ ಮರಗಳು ನಾಶವಾಗುತ್ತದೆ. ಇದರಿಂದ ಪರಿಸರಕ್ಕೆ ಹಾನಿ ಉಂಟಾಗುತ್ತದೆ. ಅಲ್ಲದೆ, ಈ ಯೋಜನೆಗೆ ಕೇಂದ್ರ ಅರಣ್ಯ ಸಚಿವಾಲಯದಿಂದ ಅನುಮತಿ ಪಡೆದಿಲ್ಲ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮೂಲಕ ಅರ್ಜಿದಾರರೊಬ್ಬರು ಆಕ್ಷೇಪಿಸಿದ್ದರು. ಇದಕ್ಕೆ ಉತ್ತರಿಸಿದ ರಾಜ್ಯ ಸರಕಾರ ಹುಬ್ಬಳ್ಳಿ – ಧಾರವಾಡ ಸೇರಿದಂತೆ ಇತರ ನಗರಗಳಿಗೆ ಕುಡಿಯುವ ನೀರು ಒದಗಿಸುವ ಕಳಸಾ- ಬಂಡೂರಿ ನಾಲೆ ಯೋಜನೆಯ ಕಾಮಗಾರಿಗೆ ಅರಣ್ಯ ಪ್ರದೇಶವನ್ನು ಬಳಸಿಕೊಳ್ಳುತ್ತಿಲ್ಲ ಎಂದು ಹೈಕೋರ್ಟ್‌ಗೆ ಸ್ಪಷ್ಟಪಡಿಸಿದೆ.

ಕಳಸಾ ಬಂಡೂರಿ ಯೋಜನೆ ಮತ್ತು ರಾಜಕೀಯ ಪಕ್ಷಗಳ ಇಚ್ಚಾಶಕ್ತಿ:

ದಶಕಗಳಿಂದ ವರದಿ ಹಂತದಲ್ಲೇ ಇದ್ದ ಕಳಸಾ ಬಂಡೂರಿ ಯೋಜನೆಯನ್ನು ಎಸ್.ಎಮ್.ಕೃಷ್ಣ ನೇತೃತ್ವದ ಕಾಂಗ್ರೆಸ್ ಸರಕಾರ ಅನುಷ್ಟಾನಕ್ಕೆ ಮುಂದಾಯಿತು. ಕರ್ನಾಟಕ ಸರಕಾರದ ಮನವಿಯಂತೆ ಕೇಂದ್ರದ ಬಿಜೆಪಿ ನೇತೃತ್ವದ ಎನ್.ಡಿ.ಎ ಸರಕಾರ ೨೦೦೨ ರಲ್ಲಿ ಯೋಜನೆಗೆ ತಾತ್ವಿಕ ಒಪ್ಪಿಗೆಯನ್ನು ನೀಡಿತು. ನಂತರ ಗೋವಾದ ಬಿಜೆಪಿ ಸರಕಾರದ ರಾಜಕೀಯ ಒತ್ತಡಕ್ಕೆ ಮಣಿದು ನೀಡಿದ್ದ ತಾತ್ವಿಕ ಒಪ್ಪಿಗೆಗೆ ತಡೆಯಾಜ್ಞೆ ನೀಡಿತು. ಅಂದು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ನೇತೃತ್ವದ ಎನ್.ಡಿ.ಎ ಸರಕಾರ ಗೋವಾದ ಬಿಜೆಪಿ ಸರಕಾರಕ್ಕೆ ಒಂದಿಷ್ಟು ತಿಳಿಹೇಳಿ ಕುಡಿಯುವ ನೀರಿನ ಆದ್ಯತೆಯ ಆಧಾರದಲ್ಲಿ ಯೋಜನೆಗೆ ಒಪ್ಪಿಗೆ ಸೂಚಿಸುವಂತೆ ತಿಳಿಸಬಹುದಿತ್ತು. ಆದರೆ ಪಕ್ಷ ರಾಜಕಾರಣ ಜನಹಿತಕ್ಕಿಂತ ಮಿಗಿಲಾದುದು ಎಂಬುದನ್ನು ಅಂದಿನ ಕೇಂದ್ರ ಸರಕಾರ ಸಾಬೀತು ಪಡಿಸಿತು.

ಮುಂದೆ ೨೦೦೪ ರಲ್ಲಿ ಸಾರ್ವತ್ರಿಕ ಚುನಾವಣೆ ನಡೆದು ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸರಕಾರ ಅಸ್ತಿತ್ವಕ್ಕೆ ಬಂದರೆ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಸರಕಾರ ಅದಿಕಾರಕ್ಕೇರಿತು. 19-9-2002 ರಂದು ಎನ್.ಡಿ.ಎ ಸರಕಾರ ನೀಡಿದ್ದ ತಾತ್ವಿಕ ಒಪ್ಪಿಗೆಯ ತಡೆಯಾಜ್ಞೆಯನ್ನು ತೆರವುಗೊಳಿಸಲು ಕರ್ನಾಟಕದ ಕಾಂಗ್ರೆಸ್ ಸರಕಾರ ತನ್ನದೇ ಯು.ಪಿ.ಎ ಸರಕಾರದ ಮೇಲೆ ಪ್ರಭಾವ ಬೀರುವುದರಲ್ಲಿ ವಿಫಲವಾಯಿತು. ಇನ್ನು, ಗೋವಾದ ವಿಧಾನ ಸಭೆಗೆ ಚುನಾವಣೆ ನಡೆದ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಚುನಾವಣಾ ಭಾಷಣ ಮಾಡುತ್ತಾ ಕಳಸಾ ಬಂಡೂರಿ ಯೋಜನೆಗೆ ಅನುಮತಿ ನೀಡುವುದಿಲ್ಲ ಎಂಬ ಭರವಸೆ ನೀಡಿದರು. ೨೦೦೬ ರಲ್ಲಿ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದ ಜೆಡಿಎಸ್ ಬಿಜೆಪಿ ಸಮ್ಮಿಶ್ರ ಸರಕಾರ ಯೋಜನೆ ಅನುಷ್ಟಾನಕ್ಕೆ ಮುಂದಾಗಿ ಕಳಸಾ ನಾಲಾ ಯೋಜನೆಗೆ ೧೨೫ ಕೋಟಿ ರೂ. ಬಿಡುಗಡೆ ಮಾಡಿ ಕಾಮಗಾರಿ ಆರಂಬಿಸಿತು. ಈ ಹಂತದಲ್ಲಿ ನೀರಾವರಿ ವಿಷಯ ರಾಜ್ಯಕ್ಕೆ ಸೇರಿದ್ದು, ವಿವಾದಿತ ಕಳಸಾ-ಬಂಡೂರಿ ಯೋಜನೆಯಲ್ಲಿ ಮಧ್ಯ ಪ್ರವೇಶ ಮಾಡದಿರಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತು. ಹಿಂದೆ ಆಂಧ್ರಪ್ರದೇಶ-ಕರ್ನಾಟಕ ನಡುವಿನ `ತೆಲುಗು ಗಂಗಾ’ ಯೋಜನೆ ವಿವಾದದಲ್ಲಿ ಕೇಂದ್ರ ನೀರಾವರಿ ರಾಜ್ಯಕ್ಕೆ ಸಂಬಂಧಿಸಿದ ವಿಷಯ ಎಂದು ಮಧ್ಯ ಪ್ರವೇಶ ಮಾಡಲು ನಿರಾಕರಿಸಿತು. ಇದೇ ನಿಲುವನ್ನು `ಕಳಸಾ-ಬಂಡೂರಿ’ ನಾಲೆ ವಿಷಯದಲ್ಲೂ ತಳೆಯಬೇಕೆಂದು ರಾಜ್ಯ ಸರಕಾರ ಮನವಿ ಮಾಡಿತು. ನಂತರದ ದಿನಗಳಲ್ಲಿ ಗೋವಾದ ನಿರಂತರ ಅಡ್ಡಿ ಮತ್ತು ನ್ಯಾಯಾದೀಕರದ ನೇಮಕ ವಿಚಾರದ ಹಿನ್ನೆಲೆಯಲ್ಲಿ ಕಾಮಗಾರಿ ನಿಧಾನವಾಗಿ ಸಾಗಿತು. ಕರ್ನಾಟಕ ಸರಕಾರಗಳೂ ಕೂಡ ನ್ಯಾಯಾಧೀಕರಣದ ಅನಗತ್ಯತೆಯ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡಿಕೊಡುವಲ್ಲಿ ವಿಫಲವಾದವು.

ನ್ಯಾಯಾಧಿಕರಣ ನೇಮಕ :

ಗೋವಾ ಸರಕಾರ ಕೇಂದ್ರ ಜಲಸಂಪನ್ಮೂಲ ಸಚಿವರಿಗೆ ದಿ. 9-7-2002 ರಂದು ಪತ್ರ ಬರೆದು ನ್ಯಾಯಾಧಿಕರಣ ರಚಿಸುವಂತೆ ಕೇಳಿಕೊಂಡಿತು. ಅದಲ್ಲದೆ 2006ರಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ದೂರು ದಾಖಲಿಸಿ ಕಳಸಾ ಬಂಡೂರಿ ಕಾಮಗಾರಿ ತಡೆಯುವಂತೆ ಹಾಗೂ ನ್ಯಾಯಾಧಿಕರಣ ನೇಮಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಬೇಕೆಂದು ವಿನಂತಿಸಿತು. ನವೆಂಬರ್ 2006ರಲ್ಲಿ ಕೇಂದ್ರ ಮಂತ್ರಾಲಯ ಕರ್ನಾಟಕ ಸರಕಾರವನ್ನು ಸಂಪರ್ಕಿಸಿ “ಈ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಲು ಅಸಾಧ್ಯ ಎಂಬ ಅಭಿಪ್ರಾಯ ಈ ಮಂತ್ರಾಲಯದ್ದಾಗಿದೆ. ಮುಂದಿನ ಕ್ರಮವನ್ನು 1956ರ ಅಂತರರಾಜ್ಯ ಜಲವಿವಾದ ಕಾಯ್ದೆ ಮೇರೆಗೆ ಕ್ರಮ ಜರುಗಿಸಲಾಗುವುದು.” ಎಂದು ತಿಳಿಸಿತು. ಕೇಂದ್ರ ಸರಕಾರ ನವೆಂಬರ್ 16, 2010 ರಂದು `ಮಹದಾಯಿ ಜಲವಿವಾದ ನ್ಯಾಯಾಧಿಕರಣ’ ರಚಿಸಿತು. ಹೀಗಾಗಿ ಕಳಸಾ ಬಂಡೂರಿ ನಾಲಾ ಯೋಜನೆ ಈಗ ನ್ಯಾಯಾಧಿಕರಣದ ಅಂಗಳದಲ್ಲಿದೆ.

ಸದ್ಯದ ಪರಿಸ್ಥಿತಿ:

ಜೆಡಿಎಸ್‌ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಕಣಕುಂಬಿ ಬಳಿ ಚಾಲನೆ ನೀಡಲಾದ ಕಳಸಾ ನಾಲೆ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, 5.15 ಕಿ.ಮೀ. ಉದ್ದದ ನಾಲಾ ಯೋಜನೆಯ ಪೈಕಿ ಈಗಾಗಲೇ ಶೇ. 95ರಷ್ಟು ಕಾಲುವೆ ಕಾಮಗಾರಿ ಪೂರ್ಣಗೊಂಡಿದೆ. ಈ ಪೈಕಿ 450 ಮೀಟರ್ ಕಾಲುವೆ ನಿರ್ಮಾಣ ಕಾಮಗಾರಿ ಉಳಿದುಕೊಂಡಿದೆ. ಬಂಡೂರಿ ನಾಲಾ ಯೋಜನೆ ಕಾಮಗಾರಿಗೆ ಚಾಲನೆ ಸಿಕ್ಕಿಲ್ಲ. ನ್ಯಾಯಾದೀಕರಣದ ತೀರ್ಪಿಗೆ ಬದ್ದವಾಗಿರುವ ಷರತ್ತನ್ನು ಒಪ್ಪಿಕೊಂಡು ಸುಪ್ರೀಂ ಕೋರ್ಟ್ ಗೆ ೨೦೦೬ ರಲ್ಲಿ ಪ್ರಮಾಣ ಪತ್ರ ಸಲ್ಲಿಸಲಾಗಿದೆ. ೨೦೧೪ ರ ವೇಳೆಗೆ ನಾಲಾ ಕಾಮಗಾರಿ ಮುಗಿಯಲಿದೆ. ಜಲಾಶಯದ ಕಾಮಗಾರಿ ಪೂರ್ಣಗೊಳ್ಳುವವರೆಗೂ ನಾಲೆಗೆ ನೀರು ಹರಿಯುವ ಸಾದ್ಯತೆಗಳಿಲ್ಲ. ನ್ಯಾಯಾದೀಕರಣದ ತೀರ್ಪು ಶೀಘ್ರ ಹೊರಬರಲಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ರಾಜ್ಯವು ತನ್ನ ವ್ಯಾಪ್ತಿಯಲ್ಲಿ ಹರಿಯುವ ನೀರನ್ನು  ಜನರಿಗೆ ಕುಡಿಯಲು ಪೂರೈಕೆ ಮಾಡುವ ಉದ್ದೇಶದಿಂದ ಈ ಕಾಮಗಾರಿಯನ್ನು ಕೈಗೊಂಡಿದೆ. ರಾಜ್ಯದ ಒಳಗೆ  ಕೈಗೆತ್ತಿ­ಕೊಳ್ಳುವ ಯೋಜನೆಗೆ ಪರವಾನಗಿ  ಪಡೆ­ಯುವ ಅಗತ್ಯ ಇಲ್ಲ. ಕುಡಿಯುವ ನೀರಿನ ಯೋಜನೆ ಕೈಗೊಳ್ಳಲು ಕೇಂದ್ರ ಸರ್ಕಾರವು ಪ್ರಾಥ­ಮಿಕ ಪರವಾನಗಿ ನೀಡಿದ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಪ್ರಮಾಣಪತ್ರದಲ್ಲಿ ತಿಳಿಸಿರುವಂತೆಯೇ ನ್ಯಾಯಮಂಡಳಿಯ ತೀರ್ಪಿನ ಬಳಿಕವೇ ಈ ನಾಲಾಗಳ ನೀರನ್ನು ತಿರುಗಿಸ­ಲಾಗುವುದು ಎಂದು ಇತ್ತೀಚಿಗೆ ರಾಜ್ಯಕ್ಕೆ ಭೇಟಿ ನೀಡಿದ ನ್ಯಾಯಮಂಡಳಿ ಅದ್ಯಕ್ಷರಿಗೆ ರಾಜ್ಯದ ಅಡ್ವೊಕೇಟ್‌ ಜನರಲ್‌ ರವಿವರ್ಮಕುಮಾರ್‌ ಭರವಸೆ ನೀಡಿದ್ದಾರೆ.

ಈ ವರ್ಷದ ಬರಗಾಲದಿಂದ ನವಿಲು ತೀರ್ಥ ಆಣೆಕಟ್ಟಿನಲ್ಲಿ ಅರ್ಧದಷ್ಟೂ ನೀರಿಲ್ಲ. ಇದರಿಂದಾಗಿ ನೀರಾವರಿಗೆ ನೀರು ಇರಲಿ, ಕುಡಿಯಲು ನೀರಿಲ್ಲದ ಸ್ಥಿತಿಯುಂಟಾಗಿದೆ. ಹೀಗಾಗಿ ಕಳಸಾ ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಬೆಳಗಾವಿ, ಧಾರವಾಡ, ಗದಗ ಮತ್ತು ಬಾಗಲಕೋಟೆ ಜಿಲ್ಲೆಯ ಕನ್ನಡಿಗರು ನಿರಂತರ ಪ್ರತಿಭಟನೆಗೆ ಇಳಿದಿದ್ದಾರೆ. ಪ್ರತಿಭಟನೆಯ ಬಿಸಿಗೆ ಸಿಲುಕಿರುವ ಮೂರೂ ರಾಜಕೀಯ ಪಕ್ಷಗಳು ಒಬ್ಬರನ್ನೊಬ್ಬರು ದೂಷಿಸುತ್ತ ರಾಜಕೀಯ ಮಾಡುವುದರಲ್ಲೇ ನಿರತರಾಗಿದ್ದಾರೆ. ಪ್ರಧಾನಿ ಬಳಿಗೆ ಹೋದ ಸರ್ವ ಪಕ್ಷ ನಿಯೋಗ ಒಂದು ಖಚಿತ ಭರವಸೆ ಪಡೆಯದೇ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಾಸ್ ಬಂದಿದ್ದಾರೆ. ನೀವು ನೀವೇ ಮಾತಾಡಿಕೊಂಡು ಆನಂತರ ದೆಹಲಿಗೆ ಬನ್ನಿ ಅನ್ನುವ ಪ್ರಧಾನಿಯವರ ಮಾತು ಜನರನ್ನು ಇನ್ನಷ್ಟು ರೊಚ್ಚಿಗೆಬ್ಬಿಸಿದೆ. ಈ ಹೊತ್ತಿನಲ್ಲಿ ಮೂರು ಪಕ್ಷಗಳೂ ತಮ್ಮ ರಾಜಕೀಯ ಬದಿಗೊತ್ತಿ ಒಂದು ದನಿಯಲ್ಲಿ ಕನ್ನಡಿಗರ ಹಿತ ಕಾಯಲು ಮುಂದಾಗಬೇಕು. ಪ್ರಧಾನಿಯವರು ಮೂರು ರಾಜ್ಯಗಳ ಸಭೆ ಕರೆಯುವಂತೆ ಒತ್ತಡ ಹೇರಬೇಕು. ಮಧ್ಯಂತರ ತೀರ್ಪೊಂದು ಕೊಡುವಂತೆ ನ್ಯಾಯಾಧೀಕರಣ ಮಂಡಳಿಗೆ ರಾಜ್ಯ ಸರ್ಕಾರ ತುರ್ತಾಗಿ ಒಂದು ಅರ್ಜಿ ಸಲ್ಲಿಸಬೇಕು, ನೊಂದಿರುವ ರೈತರ ಬೆನ್ನಿಗೆ ನಾವಿದ್ದೇವೆ ಅನ್ನುವ ಭರವಸೆಯನ್ನು ರಾಜ್ಯ ಸರ್ಕಾರ ನೀಡಬೇಕು. ಇಲ್ಲದಿದ್ದಲ್ಲಿ ಮೂರೂ ಪಕ್ಷಗಳಿಗೂ ಜನರೇ ಪಾಠ ಕಲಿಸುವ ದಿನ ದೂರವಿಲ್ಲ.

Posted in ಕರ್ನಾಟಕ, ಕಳಸಾ ಬಂಡೂರಿ | 4 ಟಿಪ್ಪಣಿಗಳು

ಭಾರತವೆಂದರೆ ಹಿಂದಿ ಮತ್ತು ಸಂಸ್ಕೃತ ಮಾತ್ರವೇ?

pv-aug22  hindustantimes-23aug

ಸಂಸ್ಕೃತ ನುಡಿಯನ್ನು ಕಲಿಯುವಂತೆ ಜಾಗೃತಿ ಮೂಡಿಸಲು ‘ಮನೆ ಮನೆಗೆ ಸಂಸ್ಕೃತ’ ಎಂಬ ರಾಷ್ಟ್ರಮಟ್ಟದ ಅಭಿಯಾನವನ್ನು ಸಂಸ್ಕೃತ ಭಾರತಿ ಹಮ್ಮಿಕೊಂಡಿರುವುದರ ಬಗ್ಗೆ ಕನ್ನಡದ ಪ್ರಮುಖ ಸುದ್ದಿಹಾಳೆಯೊಂದರಲ್ಲಿ ವರದಿಯಾಗಿದೆ ( ಪ್ರ.ವಾ ಆಗಸ್ಟ್ 22 ). ಈ ಅಭಿಯಾನದ ಅಂಗವಾಗಿ ಮನೆ ಮನೆಗೆ ತೆರಳಿ ಸಂಸ್ಕೃತದ ಬಗ್ಗೆ ಕರಪತ್ರವನ್ನು ನೀಡುವ ಮತ್ತು ಸಂಸ್ಕೃತದಲ್ಲಿ ಮಾತಾಡುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಗಳನ್ನು ಸಂಸ್ಕೃತ ಭಾರತಿ ಹಮ್ಮಿಕೊಂಡಿದೆ. ಮಧ್ಯಪ್ರದೇಶದಲ್ಲೂ ನಡೆಸಲಾದ ಈ ಅಭಿಯಾನದ ಕುರಿತಾಗಿ ಹಿಂದುಸ್ತಾನ್ ಟೈಮ್ಸ್ ಎಂಬ ಪತ್ರಿಕೆಯಲ್ಲಿಯೂ ಸುದ್ದಿ ಮೂಡಿಬಂದಿತ್ತು. “ಗೃಹಂ ಗೃಹಂ ಸಂಸ್ಕ್ರುತಂ” ಎಂಬ ಹೆಸರಿನಲ್ಲಿ ಮಧ್ಯಪ್ರದೇಶದಲ್ಲಿ ನಡೆಸಲಾದ ಅಭಿಯಾನದ ಉದ್ದೇಶಗಳನ್ನು ಪತ್ರಿಕೆಯ ವರದಿಯಲ್ಲಿ ಮೂಡಿಸಲಾಗಿದೆ. ಸಂಸ್ಕೃತಕ್ಕೆ ‘ರಾಜಭಾಷೆ’ಯ ಸ್ಥಾನಮಾನವನ್ನು ಕೊಡಿಸುವುದಲ್ಲದೇ ಭಾರತೀಯರ ನಡುವೆ ‘ಕೊಂಡಿ’ಯಾಗಿ ಸಂಸ್ಕೃತವನ್ನು ಮಾಡುವ ಬಯಕೆ ಸಂಸ್ಕೃತ ಭಾರತಿಯದ್ದಾಗಿದೆಯಂತೆ. ಆ ನಿಟ್ಟಿನಲ್ಲಿ ಶಾಲೆಗಳಲ್ಲಿ 9ನೇ ತರಗತಿಯಿಂದ ಸಂಸ್ಕೃತವನ್ನೇ ಕಲಿಕಾ ಮಾಧ್ಯಮವನ್ನಾಗಿ ಮಾಡಬೇಕೆಂಬ ಪ್ರಸ್ತಾವನೆಯನ್ನೂ ಕೇಂದ್ರ ಸರಕಾರಕ್ಕೆ ಸಂಸ್ಕೃತ ಭಾರತಿ ಸಲ್ಲಿಸುತ್ತಿದೆ. ಸಂಸ್ಕೃತ ಭಾಷೆಯನ್ನು ಉತ್ತೇಜಿಸುವುದಕ್ಕಾಗಿ ಕೇಂದ್ರ ಸರ್ಕಾರವು ಆಗಸ್ಟ್ 26 ರಿಂದ ಸೆಪ್ಟೆಂಬರ್ 1 ರ ವರೆಗೆ ಸಂಸ್ಕೃತ ಸಪ್ತಾಹವನ್ನು ಆಚರಿಸುತ್ತಿದ್ದು, ಅದಕ್ಕೆ ಹಿನ್ನೆಲೆಯಾಗಿ ಈ ಅಭಿಯಾನ ಎಂದು ಸಂಸ್ಕೃತ ಭಾರತಿ ಹೇಳುತ್ತದೆ.

ಗಮನಿಸಬೇಕಾದ ಅಂಶವೆಂದರೆ, ಕೇಂದ್ರ ಸರ್ಕಾರವು ತನ್ನ ಕಛೇರಿಗಳಲ್ಲಿ ಹಿಂದಿ ನುಡಿಯ ಬಳಕೆಯನ್ನು ಹೆಚ್ಚಿಸಲು ಸೆಪ್ಟಂಬರ್ ತಿಂಗಳನ್ನು ಅಧಿಕೃತವಾಗಿ ಬಳಸಿಕೊಳ್ಳುತ್ತದೆ. ಮೊದ ಮೊದಲು “ಒಂದು ದಿನ”ಕ್ಕೆ ಮೀಸಲು ಎಂದು ಶುರುವಾಗಿ (ಹಿಂದಿ ದಿವಸ್) ನಂತರ ಒಂದು ವಾರಕ್ಕೆ ವಿಸ್ತರಣೆಯಾಗಿ (ಹಿಂದಿ ಸಾಪ್ತಾಹ್) ಈಗ ಸೆಪ್ಟಂಬರ್ 3 – ಸೆಪ್ಟಂಬರ್ 15ರ ಎರಡು ವಾರಗಳ ಆಚರಣೆಯಾಗಿರುವುದು (ಹಿಂದಿ ಪಾಕ್ಷಿಕ) ನಮ್ಮ ಮುಂದೆಯೇ ಇದೆ. ಇಡೀ ದೇಶಕ್ಕೆ ಸಂಪರ್ಕ ನುಡಿಯಾಗಿ ಹಿಂದಿಯನ್ನು ಮಾಡುವುದೇ ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಹೀಗಿರುವಾಗ ‘ಹಿಂದಿ ಪಾಕ್ಷಿಕ’ದ ಮುಂಚಿನ ವಾರವನ್ನು ಸಂಸ್ಕೃತಕ್ಕೆ ಒತ್ತು ಕೊಡಲು ಬಳಸಿಕೊಳ್ಳುತ್ತಿರುವುದು, ಈಗಾಗಲೇ ಭಾರತದಲ್ಲಿ ಬೇರೆ ನುಡಿಗಳಿಗಾಗುತ್ತಿರುವ ಅನ್ಯಾಯದ ಗಾಯಕ್ಕೆ ಉಪ್ಪು ಸವರಿದಂತೆಯೇ ಸರಿ.

ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಅನೇಕ ವರ್ಷಗಳ ಹಿಂದಿನಿಂದಲೂ ಈ ನೆಲದಲ್ಲಿ ಹಲವಾರು ನುಡಿಗಳು ಮತ್ತು ನುಡಿಯಾಡುವವರು ಇದ್ದರು. ಬೇರೆ ಬೇರೆ ನುಡಿಯಾಡುಗರ ಸಂಸ್ಕೃತಿಯು ಅವರವರ ನುಡಿಯ ಜೊತೆ ಬೆಸೆದುಕೊಂಡಿದೆ. ಇಂತಾ ಹಲವಾರು ನುಡಿಗಳನ್ನು, ಆ ಮೂಲಕ ಆ ನುಡಿಯಾಡುಗರ ಆಚಾರ-ವಿಚಾರ-ಸಂಪ್ರದಾಯಗಳನ್ನು ರಕ್ಷಿಸಿ ಪೋಷಿಸಲೆಂದೇ ಸ್ವಾತಂತ್ರ್ಯ ಸಿಕ್ಕ ಮೇಲೆ, ಈ ದೇಶದಲ್ಲಿ ಭಾಷಾವಾರು ರಾಜ್ಯಗಳನ್ನು ಮಾಡಲಾಯಿತು. ಹೀಗೆ ಕರ್ನಾಟಕದ ಮುಖ್ಯವಾಹಿನಿಯಾಗಿ ಕನ್ನಡ ನುಡಿಯಿರುವಾಗ, ಕರ್ನಾಟಕದಲ್ಲಿ ಇಂತಹ ಬೇರೆ ನುಡಿಗಳ ಅಭಿಯಾನಗಳ ಉದ್ದೇಶವನ್ನು ಪ್ರಶ್ನಿಸಲೇಬೇಕು. ಕನ್ನಡಿಗರು ಕನ್ನಡ ಮಾತನಾಡುವುದನ್ನು ಬಿಟ್ಟು ಸಂಸ್ಕೃತ ಮಾತನಾಡುವ ಅಭ್ಯಾಸ ಯಾಕೆ ಮಾಡಿಕೊಳ್ಳಬೇಕು? ಕನ್ನಡಿಗರು ಕರ್ನಾಟಕದ ಕಚೇರಿಗಳಲ್ಲಿ ಹಿಂದಿಯಲ್ಲಿ ವ್ಯವಹರಿಸುವಂತೆ ಯಾಕೆ ಉತ್ತೇಜಿಸಬೇಕು? ಈ ನಡೆಗಳು ಕನ್ನಡವನ್ನು ತನ್ನ ತವರುಮನೆಯಿಂದಲೇ ಕಿತ್ತೊಗೆಯುವ ನಡೆಗಳೆಂದರೆ ತಪ್ಪಾಗಲಾರದು.

ಶಾಲೆಗಳಲ್ಲಿ ತಾಯ್ನುಡಿ ಮಾಧ್ಯಮದ ಕಲಿಕೆಯಿರಬೇಕಿರುವುದು ಸರಿಯಾದ ಏರ್ಪಾಡು ಮತ್ತು ಬಹಳಷ್ಟು ಶಾಲೆಗಳಲ್ಲಿ ಆ ಏರ್ಪಾಡೇ ಇದೆ. ಅಂತಾ ವ್ಯವಸ್ಥೆಯಲ್ಲಿ ತಾಯ್ನುಡಿಯನ್ನೇ ಬದಿಗೆ ತಳ್ಳಿ, ಬಳಕೆಯಲ್ಲೇ ಇರದ ಸಂಸ್ಕೃತವನ್ನು ಕಲಿಕಾ ಮಾಧ್ಯಮವಾಗಿ ಮಾಡಬೇಕೆನ್ನುವ ಉದ್ದೇಶವೇನು? ಹಿಂದಿಯನ್ನು ಹೇರುವ ಪ್ರಕ್ರಿಯೆಯಲ್ಲಿ ಸಂಸ್ಕೃತವನ್ನೂ ಸೇರಿಸಿ ಕನ್ನಡದ ಗುರುತನ್ನು ಅಳಿಸುವ ಕೆಲಸ ಚುರುಕುಗೊಳಿಸುವುದು ಬಿಟ್ಟು ಬೇರೇನೂ ಇರಲಾರದು. ಸಂಸ್ಕೃತ ಭಾರತಿ, ಶಾಲೆಗಳನ್ನು ನಡೆಸುತ್ತಿದ್ದರೆ ಅಲ್ಲಿ ಸಂಸ್ಕೃತವನ್ನು ಕಲಿಕಾ ಮಾಧ್ಯಮವನ್ನಾಗಿ ಮಾಡಿಕೊಳ್ಳಲಿ, ಅದಕ್ಕೆ ಯಾವ ತಕರಾರುಗಳೂ ಇಲ್ಲ. ಸಂಸ್ಕೃತ ಭಾಷೆಯ ಬಗ್ಗೆ ಒಲವು ಕಳಕಳಿಯುಳ್ಳ ಜನರು, ಬೇಕಿದ್ದರೆ ತಮ್ಮ ಮಕ್ಕಳನ್ನು ಸಂಸ್ಕೃತ ಮಾಧ್ಯಮ ಶಾಲೆಗಳಲ್ಲಿಯೇ ಓದಿಸಲಿ. ಹಾಗೆ ಮಾಡುವ ಎಲ್ಲಾ ಹಕ್ಕೂ ಅವರುಗಳಿಗಿದೆ. ಆದರೆ, ಎಲ್ಲಾ ಶಾಲೆಗಳಲ್ಲೂ ಸಂಸ್ಕೃತವೇ ಕಲಿಕಾ ಮಾಧ್ಯಮವಾಗಿರಬೇಕೆಂಬ ಅವರ ಪ್ರಸ್ತಾವನೆ ಒಪ್ಪಲಾಗದು. ರಾಜಕೀಯ ಬಲವನ್ನು ಬಳಸಿಕೊಂಡು, ಎಲ್ಲೆಡೆ ಸಂಸ್ಕೃತವನ್ನು ನೆಲೆಗೊಳಿಸಲು ಪ್ರಯತ್ನ ಪಡುವುದು ಹೇರಿಕೆಯೆಂದೇ ಕರೆಯಿಸಿಕೊಳ್ಳುತ್ತದೆ ಹಾಗೂ ಅದು ಪ್ರಜಾಪ್ರಭುತ್ವದಲ್ಲಿ ಒಪ್ಪುವ ನಡೆಯಲ್ಲ.

ಹಾಗೆಯೇ, ಎಲ್ಲ ನುಡಿಗಳನ್ನು ಸಮನಾಗಿ ಕಾಣಬೇಕಿರುವ ಕೇಂದ್ರ ಸರಕಾರ ಯಾವುದೋ ಒಂದೆರಡು ನುಡಿಗೆ ಮಾತ್ರ ಒತ್ತು ಕೊಟ್ಟು ಆ ನುಡಿಗಳ ಪ್ರಚಾರಕ್ಕೆ ಉಸ್ತುವಾರಿ ವಹಿಸುವುದು ಖಂಡಿತವಾಗಿಯೂ ಸರಿಯಾದ ನಡೆಯಲ್ಲ. ಆಚರಿಸುವುದಿದ್ದರೆ ಎಲ್ಲಾ ನುಡಿಗಳ ಸಪ್ತಾಹ/ಪಾಕ್ಷಿಕಗಳನ್ನು ಆಚರಿಸಲಿ, ಇಲ್ಲದಿದ್ದರೆ ಯಾವ ನುಡಿಗಳ ಆಚರಣೆಗಳನ್ನೂ ಕೇಂದ್ರ ಸರ್ಕಾರ ಮಾಡುವುದು ಬೇಡ. ಈಗಾಗಲೇ ಹಿಂದಿಯೇತರರ ತೆರಿಗೆ ಹಣವನ್ನು, ಹಿಂದಿಯೇತರರ ರಾಜ್ಯಗಳಲ್ಲಿ ಹಿಂದಿಯನ್ನು ಹರಡಲು-ಹೇರಲು ಬಳಸುತ್ತಿರುವ ಕೇಂದ್ರ ಸರ್ಕಾರ, ತನ್ನ ಹೇರಿಕೆಯ ಪಟ್ಟಿಗೆ ಸಂಸ್ಕೃತವನ್ನು ಸೇರಿಸುತ್ತಿರುವುದು, ‘ನುಡಿ ಸಮಾನತೆ’ ಯನ್ನು ಕಾಪಾಡಿಕೊಳ್ಳುವ ಇರಾದೆ ತನಗಿಲ್ಲ ಎಂದು ಸಾಬೀತು ಪಡಿಸುತ್ತಿದೆ. ಕೇಂದ್ರ ಸರ್ಕಾರಕ್ಕೆ ರಕ್ಷಣೆ-ಆಳ್ವಿಕೆ-ವಿದೇಶಾಂಗ ರೀತಿನೀತಿಗಳು ಎಂಬ ಅನೇಕ ಆದ್ಯತೆಗಳಿದ್ದು, ಅವುಗಳ ಕಡೆಯೇ ಹೆಚ್ಚು ಗಮನ ನೀಡುವುದು ಬಿಟ್ಟು ತೆರಿಗೆದಾರರ ಹಣವನ್ನು ಪೋಲು ಮಾಡುವ ಇಂತಹ ಭಾಷಾ ಹೇರಿಕೆ ಕೆಲಸಗಳನ್ನು ನಿಲ್ಲಿಸಲಿ.

ಕೊನೆ ನುಡಿ : ಹಲವಾರು ನುಡಿಯಾಡುಗರ ನಡುವೆ ‘ಕೊಂಡಿ’ ಅಥವಾ ‘ಸಂಪರ್ಕ’ ನುಡಿಯ ಅವಶ್ಯಕತೆ ಇದೆಯೇ? ಸಂಪರ್ಕ ನುಡಿಯ ಅವಶ್ಯಕತೆ ಇದ್ರೆ ಅದು ಯಾವ ನುಡಿಯಾಗಿರಬೇಕು? ಎಂಬುದನ್ನು ಜನರ ಆಯ್ಕೆಗೆ ಬಿಡುವುದು ಸರಿಯಾದ ನಡೆ. ಆದರೆ ಇಂತದ್ದೇ ನುಡಿಯನ್ನು ಸಂಪರ್ಕ ನುಡಿಯಾಗಿ ಬಳಸಿ ಎಂದು ಕೇಂದ್ರ ಸರ್ಕಾರ ‘ಅಧಿಕೃತವಾಗಿ’ ತೀರ್ಮಾನಿಸುವುದಾಗಲಿ ಅಥವಾ ಬೇರೆಯವರು ಕೇಂದ್ರ ಸರಕಾರವನ್ನು ಒತ್ತಾಯಿಸುವುದಾಗಲೀ ಸಲ್ಲದು. ‘ನುಡಿ ಸಮಾನತೆ’ಯನ್ನು ತೊಡೆದು ಹಾಕುವ ಈ ನಡೆಗಳು ನಿಲ್ಲಲಿ

Posted in ಒಕ್ಕೂಟ ವ್ಯವಸ್ಥೆ, ಕನ್ನಡ, ಕಲಿಕೆ, ನುಡಿ, ಹಿಂದಿ ಹೇರಿಕೆ | ನಿಮ್ಮ ಟಿಪ್ಪಣಿ ಬರೆಯಿರಿ

ಚಳಿಗಾಲದ ಅಧಿವೇಶನ ಮತ್ತು ಉತ್ತರ ಕರ್ನಾಟಕದ ಸಮಸ್ಯೆಗಳ ಮೂಲ

ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ವಿಧಾನಸಭೆಯ ಚಳಿಗಾಲದ ಅಧಿವೇಶನ ಜರುಗಿದೆ. ಕಬ್ಬಿನ ಬೆಳೆಗಾರರ ಸಮಸ್ಯೆ, ಲೋಕಾಯುಕ್ತರ ಭ್ರಷ್ಟಾಚಾರದ ಪ್ರಕರಣ, ರೈತರ ಆತ್ಮಹತ್ಯೆಯಂತಹ ವಿಷಯಗಳು ಅಧಿವೇಶನದಲ್ಲಿ ಹೆಚ್ಚಿನ ಚರ್ಚೆಗೊಳಗಾದವು. ಜೊತೆಯಲ್ಲೇ, ಶಾಸಕ ನಡಹಳ್ಳಿಯವರು ಉತ್ತರ ಕರ್ನಾಟಕ ಪ್ರತ್ಯೇಕತೆ ಹೋರಾಟದ ಪರ ದನಿ ಎತ್ತಿದ್ದ ಹೊತ್ತಿನಲ್ಲೇ ನಡೆದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗೆಗಿನ ಚರ್ಚೆ ಹೇಗಿತ್ತು, ಚರ್ಚೆಗಳಲ್ಲಿ ಏನಾಯಿತು ಅನ್ನುವುದು ಕುತೂಹಲದ ವಿಷಯಗಳಲ್ಲೊಂದಾಗಿತ್ತು. ಉತ್ತರ ಕರ್ನಾಟಕ ಪ್ರತ್ಯೇಕತೆಯ ಬಗ್ಗೆ ಮಾತನಾಡುವವರು ಎತ್ತುವ ಕೆಲವು ಅಂಶಗಳೆಂದರೆ ನಂಜುಂಡಪ್ಪ ವರದಿ ಅನುಷ್ಟಾನ, ಹೈದರಾಬಾದ್ ಕರ್ನಾಟಕದಲ್ಲಿ ಸಂವಿಧಾನದ 371 ಜೆ ಅನುಷ್ಟಾನ ಮತ್ತು ಕಳಸಾಬಂಡೂರಿ ಕುಡಿಯುವ ನೀರಿನ ಯೋಜನೆ. ಈ ಬಗ್ಗೆ ಅಧಿವೇಶನದ ಹೊತ್ತಿನಲ್ಲಿ ವಿಧಾನಸಭೆಯ ಒಳಗೆ ಮತ್ತು ಹೊರಗೆ ಏನು ಚರ್ಚೆಯಾಯಿತು ಅನ್ನುವುದನ್ನು ಗಮನಿಸಿದರೆ ಕಂಡಿದ್ದು ಹೀಗಿತ್ತು.

ಹೈ.ಕ ಮತ್ತು 371 ಜೆ ಅನುಷ್ಟಾನ

  1. ಹೈದರಾಬಾದ್ ಕರ್ನಾಟಕದ ಮೂಲದವರಿಗೆ ಅಲ್ಲಿನ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ಆದರೆ ಅಭ್ಯರ್ಥಿಗಳಿಗೆ ತಾವು ಅಲ್ಲಿಯವರು ಎಂದು ಸಾಧಿಸಲು ಬೇಕಿರುವ ಅರ್ಹತಾ ಪತ್ರ ಕೊಡುವಲ್ಲಿ ಅಧಿಕಾರಿಗಳು ಕಿರಿಕಿರಿಯುಂಟು ಮಾಡುತ್ತಿದ್ದಾರೆ.
  2. ಕರ್ನಾಟಕದ ಮಿಕ್ಕ ಭಾಗಗಳಲ್ಲಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಕೊಡಬೇಕಿರುವ 8% ಮೀಸಲಾತಿಯನ್ನು ಸರಿಯಾಗಿ ಕೊಡುತ್ತಿಲ್ಲ.
  3. ಹೈ.ಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಗೆ ಬರುವ ಹಣ ಸರಿಯಾದ ಕ್ರಿಯಾ ಯೋಜನೆ ರೂಪುಗೊಳ್ಳದ ಕಾರಣ ಲ್ಯಾಪ್ಸ್ ಆಗುತ್ತಿದೆ, ಹೀಗೆ ಲ್ಯಾಪ್ಸ್ ಆಗಲು ರಾಜ್ಯಪಾಲರು ಸರಿಯಾದ ಸಮಯಕ್ಕೆ ಕ್ರಿಯಾಯೋಜನೆಗೆ ಅನುಮತಿ ಕೊಡದಿರುವುದು ಕಾರಣ ಅನ್ನುವ ಮಾತುಗಳು ಕೇಳಿ ಬಂದವು.

ಇವುಗಳಲ್ಲಿ ಮೊದಲೆರಡು ದೂರುಗಳಲ್ಲಿ ಎಷ್ಟರಮಟ್ಟಿಗೆ ಸತ್ಯಾಂಶವಿದೆ ಎಂದು ಗಮನಿಸಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಇನ್ನು ರಾಜ್ಯಪಾಲರು ಸೂಕ್ತಸಮಯಕ್ಕೆ ಕ್ರಿಯಾಯೋಜನೆಗೆ ಒಪ್ಪಿಗೆ ಕೊಡದಿರುವ ವಿಚಾರ ಗಮನಿಸಿದಾಗ 371 ಜೆ ಅನುಷ್ಟಾನದ ಸೂತ್ರ ಸಿದ್ಧಪಡಿಸುವಲ್ಲೇ ಎಡವಿರುವುದು ಸ್ಪಷ್ಟವಾಗುತ್ತೆ. ಜನರಿಂದ ಆಯ್ಕೆಯಾದ ಸರ್ಕಾರದ ಬದಲು ದೆಹಲಿಯಿಂದ ಹೇರಲ್ಪಡುವ, ಇಲ್ಲಿಯ ಸ್ಥಳೀಯ ಜನಜೀವನ, ಸಮಸ್ಯೆಗಳ ಬಗ್ಗೆ ಯಾವುದೇ ಅರಿವಿರದ ರಾಜ್ಯಪಾಲರ ಕೈಗೆ ಇದರ ಅನುಷ್ಟಾನದ ಹೊಣೆ ಕೊಟ್ಟಿರುವುದು ಒಂದು ದೊಡ್ಡ ಎಡವಟ್ಟೇ ಸರಿ. ಹಿಂದಿನ ಬಿಜೆಪಿ ಸರ್ಕಾರ ರಾಜ್ಯಪಾಲರ ಕೈಗೆ ಇದರ ಹೊಣೆಯನ್ನು ಕೊಡುವುದನ್ನು ವಿರೋಧಿಸಿತ್ತು, ಆದರೆ ದೆಹಲಿಯಲ್ಲಿ ಆಗ ಆಳ್ವಿಕೆಯಲ್ಲಿದ್ದ ಕಾಂಗ್ರೆಸ್ ಪಕ್ಷ ವಿಶೇಷ ಸ್ಥಾನಮಾನ ಜಾರಿಯ ಶ್ರೇಯಸ್ಸು ಆಗಿನ ರಾಜ್ಯ ಸರ್ಕಾರಕ್ಕೆ ದಕ್ಕಬಾರದು ಎಂದೇ ಇದನ್ನು ರಾಜ್ಯಪಾಲರ ತೆಕ್ಕೆಗೆ ಹಾಕಿತ್ತು ಅನ್ನುವ ಮಾತುಗಳು ಕೇಳಿ ಬಂದಿದ್ದವು. ಒಟ್ಟಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸಿನ ರಾಜಕೀಯ ಹಗ್ಗಜಗ್ಗಾಟದಲ್ಲಿ ವಿಶೇಷ ಸ್ಥಾನಮಾನದ ಲಾಭ ಆ ಭಾಗದ ಕನ್ನಡಿಗರಿಗೆ ಸಮಯಕ್ಕೆ ಸರಿಯಾಗಿ ಸಿಗದಂತೆ ಆಗಿರುವುದು ಕಾಣಿಸುತ್ತೆ.

ಕಳಸಾ ಬಂಡೂರಿ ಯೋಜನೆ

ಬೇಸಿಗೆಯಲ್ಲಿ ತಿಂಗಳಿಗೊಮ್ಮೆ ಕುಡಿಯುವ ನೀರು ನೋಡುವ ಸ್ಥಿತಿ ಹುಬ್ಬಳ್ಳಿ-ಧಾರವಾಡ ನಗರಗಳಿಗಿದೆ. ಇದಕ್ಕೆ ಪರಿಹಾರವಾಗಿ ಕಳಸಾಬಂಡೂರಿ ನಾಲೆ ಯೋಜನೆಯ ಮೂಲಕ ಬೆಳಗಾವಿ ವಿಭಾಗದ ಹತ್ತಕ್ಕೂ ಹೆಚ್ಚು ಊರುಗಳಿಗೆ ಕುಡಿಯುವ ನೀರು ಕಲ್ಪಿಸುವ ಯೋಜನೆಗೆ ಕರ್ನಾಟಕದ ಒಂದು ಜಿಲ್ಲೆಯ ಗಾತ್ರದ ಗೋವಾ ರಾಜ್ಯ ತಡೆ ಹಾಕಿದೆ. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಗೋವಾದಲ್ಲೂ ಇದ್ದ ಬಿಜೆಪಿ ಸರ್ಕಾರದ ಜೊತೆ ಮಾತನಾಡಿ ಬಗೆಹರಿಸುವ ಜಾಣ್ಮೆ ತೋರದೆ ಅನವಶ್ಯಕವಾಗಿ ಈ ವಿವಾದ ಟ್ರಿಬುನಲ್ ಮೆಟ್ಟಿಲೇರುವ ಹಾಗಾಯಿತು. ಗೋವಾದಂತಹ ಚಿಕ್ಕ ರಾಜ್ಯ ಕರ್ನಾಟಕದಂತಹ ದೊಡ್ಡ ರಾಜ್ಯವನ್ನು ಆಟವಾಡಿಸುವುದನ್ನು ಕಂಡಾಗ ರಾಜಕೀಯವಾಗಿ ಕನ್ನಡಿಗರು ಎಷ್ಟು ಬಲಹೀನರಾಗಿದ್ದಾರೆ ಅನ್ನುವುದು ಕಾಣುತ್ತೆ. ಈಗಂತೂ ಈ ಯೋಜನೆ ಬಿಜೆಪಿ, ಕಾಂಗ್ರೆಸ್ ಇಬ್ಬರಿಗೂ ಒಬ್ಬರನ್ನೊಬ್ಬರು ಉತ್ತರ ಕರ್ನಾಟಕ ವಿರೋಧಿ ಎಂದು ತೋರಿಸಲಷ್ಟೇ ಬಳಕೆಯಾಗುತ್ತಿದೆ. ಈ ಬಾರಿಯ ಅಧಿವೇಶನದಲ್ಲಿ ಪ್ರಧಾನಿ ಬಳಿಗೆ ಸರ್ವಪಕ್ಷಗಳ ನಿಯೋಗವೊಂದನ್ನು ಒಯ್ಯಬೇಕು ಅನ್ನುವ ಮಾತಿಗೆ ಎಲ್ಲ ಪಕ್ಷಗಳೂ ಒಪ್ಪಿದ್ದನ್ನು ಬಿಟ್ಟರೆ ಈ ಯೋಜನೆಯ ನಿಟ್ಟಿನಲ್ಲಿ ಹೆಚ್ಚೇನು ಪ್ರಗತಿಯಾಗಿಲ್ಲ. ವಿವಾದ ಟ್ರಿಬುನಲ್ ಬಳಿ ಇರುವಾಗ ಪ್ರಧಾನಿ ಬಳಿ ಹೋಗಿ ದುಃಖ ತೋಡಿಕೊಂಡರೆ ಅದರಿಂದ ಏನಾಗುತ್ತೆ ಅನ್ನುವುದನ್ನು ತಾಯಿ ಭುವನೇಶ್ವರಿಯೇ ಹೇಳಬೇಕು.

ನಂಜುಂಡಪ್ಪ ವರದಿ ಅನುಷ್ಟಾನ

ನಂಜುಂಡಪ್ಪ ವರದಿ ಪ್ರಕಾರ ರಾಜ್ಯದ 114 ತಾಲೂಕುಗಳು ಹಿಂದುಳಿದಿವೆ, ಅದರಲ್ಲಿ ಹೆಚ್ಚಿನವು ಉತ್ತರ ಕರ್ನಾಟಕದಲ್ಲಿವೆ ಅನ್ನುವ ಮಾತನ್ನು ಶೆಟ್ಟರ್ ಅವರು ಆಡಿದ್ದಾರೆ. ಆದರೆ ವರದಿಯನ್ವಯ ರಾಜ್ಯದ ಎರಡೂ ಭಾಗದಲ್ಲೂ ಹೆಚ್ಚು ಕಡಿಮೆ ಸಮಾನ ಸಂಖ್ಯೆಯಲ್ಲೇ (59 ಉತ್ತರದಲ್ಲೂ ಮತ್ತು 55 ದಕ್ಷಿಣದಲ್ಲೂ) ಹಿಂದುಳಿದ ತಾಲೂಕುಗಳಿವೆ. ವರದಿಯ ಅನುಷ್ಟಾನಕ್ಕೆ 2007-08ರಿಂದ ಈಚೆಗೆ ಸರ್ಕಾರ ಒಟ್ಟಾರೆ 14,635 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, ಇದರಲ್ಲಿ 95% ಖರ್ಚಾಗಿದೆ ಅನ್ನುವ ಮಾಹಿತಿ ಸಿದ್ದರಾಮಯ್ಯನವರು ಕೊಟ್ಟಿದ್ದಾರೆ. ಇಷ್ಟಾದರೂ ಅಭಿವೃದ್ಧಿಯ ಅನುಭವ ಅಲ್ಲಿಯ ಜನತೆಗೆ ಆಗಿಲ್ಲ ಅನ್ನುವ ಮಾತು ಶೆಟ್ಟರ್ ಅವರದ್ದು. ಇನ್ನೂ ಐದು ವರ್ಷಗಳ ಕಾಲ ವರ್ಷಕ್ಕೆ 3,000 ಕೋಟಿಯಂತೆ 15,000 ಕೋಟಿ ರೂಪಾಯಿಯನ್ನು ವರದಿಯ ಅನುಷ್ಟಾನಕ್ಕೆ ಕೊಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಇನ್ನಷ್ಟು ಹಣ ಬಿಡುಗಡೆ ಮಾಡುವ ಮೊದಲು ಆಗಬೇಕಿರುವುದು ಈಗ ಖರ್ಚಾಗಿರುವ ಹಣದ ಲೆಕ್ಕ ಕೇಳುವ ಕೆಲಸ. ಜೆಡಿಎಸ್ಸಿನ ವೈ.ಎಸ್.ವಿ ದತ್ತಾ ಅವರು ಹೇಳಿರುವಂತೆ 1956ರಿಂದಲೂ ಉತ್ತರ ಮತ್ತು ದಕ್ಷಿಣ ಭಾಗಕ್ಕೆ ಹಣದ ಹಂಚಿಕೆ ಹೇಗಾಗಿದೆ, ಬಿಡುಗಡೆಯಾದ ಹಣ ಎಲ್ಲಿ ಹೋಗಿದೆ, ಆದ ಕೆಲಸಗಳೇನು ಅನ್ನುವ ಬಗ್ಗೆ ಒಂದು ವಸ್ತುನಿಷ್ಟ ವರದಿ ಹೊರತರಲು ಆಯೋಗ ರಚಿಸಿ ಅದರ ವರದಿ ಆಧಾರದ ಮೇಲೆ ಮುಂದುವರೆಯುವುದು ಸೂಕ್ತ. ಇದರಿಂದ ಅನ್ಯಾಯ ಆಗಿದೆ ಅನ್ನುವ ಕೂಗಿನಲ್ಲಿ ಎಷ್ಟು ನಿಜ, ಎಷ್ಟು ಪೊಳ್ಳು ಅನ್ನುವ ಸತ್ಯಾಂಶವೂ ಹೊರ ಬರುವುದು.

ಒಗ್ಗಟ್ಟಾಗಿಯೇ ಏಳಿಗೆ

ಉತ್ತರ ಕರ್ನಾಟಕಕ್ಕೆ ಸರ್ಕಾರಕ್ಕಿಂತ ಅಧಿಕಾರಿಗಳಿಂದಲೇ ಅನ್ಯಾಯವಾಗಿದೆ ಅನ್ನುವುದು ಕಾಂಗ್ರೆಸ್ಸಿನ ಬಸವರಾಜ ರಾಯರೆಡ್ಡಿಯವರ ಅನಿಸಿಕೆ. ಆದರೆ ಪ್ರಜಾಪ್ರಭುತ್ವದಲ್ಲಿ ಅಧಿಕಾರಿಗಳಿಂದ ಕೆಲಸ ತೆಗೆಸಬೇಕಾದವರು ಜನಪ್ರತಿನಿಧಿಗಳೇ ಅಲ್ಲವೇ? ಉತ್ತರ ಕರ್ನಾಟಕದ ಏಳಿಗೆಯ ಬಗ್ಗೆ ನಿಜವಾದ ಕಾಳಜಿ ಅಲ್ಲಿನ ಜನಪ್ರತಿನಿಧಿಗಳಿಗಿದ್ದರೆ ಅಲ್ಲಿನ ಸ್ಥಿತಿ ಇನ್ನಷ್ಟು ಉತ್ತಮವಾಗಿರುತ್ತಿತ್ತು. ಉತ್ತರ ಕರ್ನಾಟಕದ ಬಗ್ಗೆಯೇ ಚರ್ಚೆ ಏರ್ಪಟ್ಟ ದಿನ ಉತ್ತರದ 96 ಶಾಸಕರಲ್ಲಿ ಸದನದಲ್ಲಿ ಹಾಜರಿದ್ದದ್ದು ಕೇವಲ 30 ಜನ ಅನ್ನುವ ಮಾಹಿತಿಯಲ್ಲೇ ಅಲ್ಲಿನ ಸಮಸ್ಯೆಗಳ ಮೂಲ ಎಲ್ಲಿದೆ ಅನ್ನುವುದನ್ನು ತಿಳಿಯಬಹುದು. ಕೊನೆಯಲ್ಲಿ, ಸಿದ್ದರಾಮಯ್ಯನವರು ಏಳಿಗೆಯಲ್ಲಿ ಎಂತಹುದೇ ವ್ಯತ್ಯಾಸವಿರಲಿ, ಅದನ್ನು ಕೂಡಿ ಬಗೆಹರಿಸಿಕೊಳ್ಳೊಣ, ಆದರೆ ಪ್ರತ್ಯೇಕ ರಾಜ್ಯದ ಮಾತು ಆಡಬೇಡಿ ಎಂದು ಮನವಿ ಮಾಡಿದ್ದು ಈ ಅಧಿವೇಶನದಿಂದ ಹೊರ ಹೊಮ್ಮಿದ ಒಂದು ಒಳ್ಳೆಯ ಸಂದೇಶವೇ ಸರಿ.

Posted in ಕನ್ನಡ, ಕರ್ನಾಟಕ | ನಿಮ್ಮ ಟಿಪ್ಪಣಿ ಬರೆಯಿರಿ

ಕನ್ನಡ ಲಿಪಿ ಮಾರ್ಪಡಿಸುವ ಚರ್ಚೆಗೆ ಇದು ಸರಿಯಾದ ಹೊತ್ತು

ಪ್ರಜಾವಾಣಿಯಲ್ಲಿ ಇತ್ತೀಚಿಗೆ ಕನ್ನಡದಲ್ಲಿನ ಮಹಾಪ್ರಾಣಗಳ ಬಳಕೆ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ಅದನ್ನು ಹುಟ್ಟು ಹಾಕಿದ್ದು ನಾಗೇಶ್ ಹೆಗಡೆಯವರು. ಜುಲೈ 7 ರ ಪ್ರಜಾವಾಣಿಯಲ್ಲಿ ನಾಗೇಶ್ ಹೆಗಡೆಯವರು ಬರೆದಿರುವ ಓಲೆಯೊಂದು ಮೂಡಿಬಂದಿತ್ತು. ಕನ್ನಡ ಮಾದ್ಯಮ ಪಠ್ಯಪುಸ್ತಕಗಳಲ್ಲಿ ಉಂಟಾಗಿರುವ ಕಾಗುಣಿತ ತಪ್ಪುಗಳ ಬಗ್ಗೆ ಆ ಓಲೆಯಲ್ಲಿ ಹೇಳಲಾಗಿತ್ತು. ಆ ಓಲೆಯನ್ನು ಕೆಳಗೆ ನೋಡಬಹುದು.

ಜುಲೈ 7 ವಾಚಕರ ವಾಣಿಯಲ್ಲಿ ಬಂದ ನಾಗೇಶ್ ಹೆಗಡೆಯವರ ಓಲೆ

nhegde1ಅವರ ಓಲೆಯಲ್ಲಿ ಹೆಸರಿಸಿದ ತಪ್ಪುಗಳೆಲ್ಲವೂ ಮಹಾಪ್ರಾಣಗಳ ಗೊಂದಲದಿಂದ ಆಗಿರುವಂತದ್ದು ಎಂಬುದು ಓದಿದರೆ ಗೊತ್ತಾಗುತ್ತದೆ. ಈ ಓಲೆಯಿಂದ ಮಹಾಪ್ರಾಣಗಳ ಬಗ್ಗೆ ಚರ್ಚೆ ಶುರುವಾಯಿತು.

ಅದಕ್ಕೆ ಉತ್ತರವಾಗಿ ” ಕಾಗುಣಿತ ತಪ್ಪಾಗಿರುವ ಆ ಪದಗಳೆಲ್ಲವೂ ಕನ್ನಡಕ್ಕೆ ಎರವಲಾಗಿ ಬಂದ ಪದಗಳು. ‘ಮಹಾಪ್ರಾಣ’ ಬಳಕೆ ಇಂತ ಗೊಂದಲವನ್ನು ಹುಟ್ಟು ಹಾಕಿದೆ. ಕನ್ನಡಿಗರ ಆಡುಮಾತಿನಲ್ಲಿ ಬಳಕೆಯಾಗದ ಮಹಾಪ್ರಾಣಗಳನ್ನು ವರ್ಣಮಾಲೆಯಲ್ಲಿ ಉಳಿಸಿಕೊಂಡಿರುವದರಿಂದ ಬರೆಯುವಾಗ ಇಂತ ತಪ್ಪುಗಳು ಆಗುವವು. ಬರವಣಿಗೆಯನ್ನು ಆದಷ್ಟು ಆಡುಮಾತಿನ ಹತ್ತಿರಕ್ಕೆ ಕೊಂಡೊಯ್ದರೆ ಇಂತ ತಪ್ಪುಗಳನ್ನು ತಪ್ಪಿಸಬಹುದಲ್ಲದೇ ಬರವಣಿಗೆಯನ್ನು ಸರಳಗೊಳಿಸಬಹುದಾಗಿದೆ  ಎಂದು ಸಾರಾಂಶವಿರುವ ಓಲೆಯೊಂದನ್ನು ಪ್ರಜಾವಾಣಿಗೆ ಜುಲೈ 8 ರಂದು ಕಳಿಸಲಾಗಿತ್ತು ಮತ್ತು ಆ ಓಲೆ ಜುಲೈ 9 ರ ಪ್ರಜಾವಾಣಿಯ ವಾಚಕರ ವಾಣಿಯಲ್ಲೂ ಮೂಡಿಬಂದಿತ್ತು.

ಜುಲೈ 9 ರ ವಾಚಕರ ವಾಣಿಯಲ್ಲಿ ಬಂದ ನನ್ನ ಓಲೆ 

nannaole-9july2015ಇದಕ್ಕೆ ಉತ್ತರವಾಗಿ ನಾಗೇಶ್ ಹೆಗಡೆಯವರು ಮತ್ತೊಂದು ಓಲೆಯೊಂದನ್ನು ಬರೆದರುಮಹಾಪ್ರಾಣಗಳನ್ನು ಏಕೆ ಉಳಿಸಿಕೊಳ್ಳಬೇಕು ಎಂಬ ಅವರ ವಾದಕ್ಕೆ ಪೂರಕವಾಗಿರುವ ವಿಷಯಗಳು ಆ ಓಲೆಯಲ್ಲಿರಲಿಲ್ಲ. ಬದಲಿಗೆ, ದಕ್ಷಿಣ ಭಾಗದ ಕನ್ನಡಿಗರ ಆಡುಮಾತಿನಲ್ಲಿ ’ಅ’ಕಾರ ಮತ್ತು ’ಹ’ಕಾರಗಳ ನಡುವೆ ವ್ಯತ್ಯಾಸ ಇಲ್ಲದಿರುವುದನ್ನು ಎತ್ತಿತೋರಿಸುವ ಉತ್ತರವನ್ನು ಅವರು ನೀಡಿದ್ದರು. ಕೆಲವು ಕನ್ನಡಿಗರು ಕನ್ನಡ ನುಡಿಯುವ ಬಗೆಯನ್ನೇ ಆಡಿಕೊಂಡಂತಿತ್ತು ಅವರ ಓಲೆಅದು ಜುಲೈ 10 ರ ಪ್ರಜಾವಾಣಿಯಲ್ಲಿ ಪ್ರಕಟಗೊಂಡಿತ್ತು.

ಜುಲೈ 10 ರ ವಾಚಕರ ವಾಣಿಯಲ್ಲಿ ಬಂದ ನಾಗೇಶ್ ಹೆಗಡೆಯವರ ಓಲೆ

nhegde2ಜುಲೈ 10 ರ ನಾಗೇಶ್ ಹೆಗಡೆಯವರ ಓಲೆಗೆ ಉತ್ತರವಾಗಿ ಸಿ.ಪಿ ನಾಗರಾಜ್ ಎಂಬುವರು ಕನ್ನಡ ನುಡಿಯ ರಚನೆ, ಒಳ ನುಡಿಗಳ ಸ್ವರೂಪ, ನುಡಿಯ ಉಚ್ಚಾರಣೆ ಮತ್ತು ಭಾಷಾವಿಜ್ಞಾನದ ಬಗ್ಗೆ ತುಸು ಬೆಳಕು ಬೀರುವಂತ ಪ್ರತಿಕ್ರಿಯೆ ನೀಡಿದ್ದರು. ಅವರ ಓಲೆ ಜುಲೈ 13 ರ ಪ್ರಜಾವಾಣಿಯಲ್ಲಿ ಪ್ರಕಟಗೊಂಡಿತ್ತು.

ಜುಲೈ 13 ರ ವಾಚಕರ ವಾಣಿಯಲ್ಲಿ ಬಂದ ಸಿ.ಪಿ ನಾಗರಾಜ್  ಅವರ ಓಲೆ 

cpnagaraj

ನಾಗೇಶ್ ಹೆಗಡೆಯವರು ಪ್ರಸ್ತಾಪಿಸಿದ ‘ಹ’ ಕಾರ – ‘ಅ’ ಕಾರ ವಿಷಯಕ್ಕಷ್ಟೇ ಅಲ್ಲದೇ, ಬರವಣಿಗೆಯಲ್ಲಿ ಮಹಾಪ್ರಾಣಗಳ ಬಳಕೆ ತರುವ ಗೊಂದಲಗಳು, ಏಳಿಗೆಯಲ್ಲಿ ಕಲಿಕೆಯ ಪಾತ್ರ, ಕಲಿಕೆಯಲ್ಲಿ ಸಮಾಜದ ಎಲ್ಲಾ ವರ್ಗದ ಜನರ ಒಳಗೊಳ್ಳುವಿಕೆ, ಆ ನಿಟ್ಟಿನಲ್ಲಿ ಲಿಪಿ ಸುಧಾರಣೆಯ ಅನುಕೂಲಗಳ ಕುರಿತು ನನ್ನ ಅನಿಸಿಕೆಯನ್ನು ಪ್ರಜಾವಾಣಿಗೆ ಜುಲೈ 11 ರಂದು ಕಳಿಸಿದ್ದೆ. ಆದರೆ ಅದು ಪ್ರಕಟವಾಗಲಿಲ್ಲವಾದ್ದರಿಂದ ಆ ಓಲೆಯನ್ನು ಇಲ್ಲಿ ಹಂಚಿಕೊಳ್ಳಲು ಬಯಸುವೆ. ಪ್ರಜಾವಾಣಿಗೆ ಕಳಿಸಿದ್ದ ಓಲೆ ಹೀಗಿದೆ.

===============================================================
ಜುಲೈ 10ರ ವಾ. ವಾ. ನಲ್ಲಿ ನಾಗೇಶ್ ಹೆಗಡೆಯವರು ಮಹಾಪ್ರಾಣಗಳು ಹುಟ್ಟಾಕಿರುವ ಗೊಂದಲದ ಬಗೆಗಿನ ಚರ್ಚೆಯಲ್ಲಿ ಹ ಕಾರ – ಅ ಕಾರ ವಿಷಯದ ಬಗ್ಗೆ ಬರೆದಿದ್ದಾರೆ. ‘ಹ’ ಕಾರದ ಬಗ್ಗೆ ಹೇಳಬೇಕೆಂದರೆ – ಇಂದಿನ ‘ಹ’ ಕಾರವು ಹಳಗನ್ನಡದ ‘ಪ’ ಕಾರದ ಮಾರ್ಪಾಡು. ಹಾಗೆಯೇ, ಹ ಕಾರದ ಬದಲು ಅ ಕಾರ ಕೂಡ. ಇದರರ್ಥ, ನುಡಿಯ ಬೆಳವಣಿಗೆ ಅಥವಾ ಹಬ್ಬುವಿಕೆಯಲ್ಲಿ ಮಾರ್ಪಾಡುಗಳು ಸ್ವಾಭಾವಿಕ ಎಂಬುವುದು. ಬೇರೆ ಬೇರೆ ಕಡೆಗಳಲ್ಲಿ ಬಗೆ ಬಗೆಯ ಶೈಲಿಯಲ್ಲಿ ಕನ್ನಡವನ್ನು ಮಾತಾಡುವುದು ನಿಜವೇ. ಆದರೆ ಜನರು ಸ್ವಾಭಾವಿಕವಾಗಿ ಕನ್ನಡ ಮಾತಾಡುವ ಬಗೆಯನ್ನು, ‘ಸರಿಯೇ?’- ‘ತಪ್ಪೇ?’ ಎಂದು ಒರೆಗೆ ಹಚ್ಚುವುದು ಅಥವಾ ಆಡಿಕೊಳ್ಳುವುದು – ಆ ಮಂದಿಯನ್ನೇ ಹೀಗಳೆದಂತೆ. ಬರವಣಿಗೆ ಬಗ್ಗೆ ಹೇಳಬೇಕೆಂದರೆ – ಜನರು ಬೇರೆ ಬೇರೆ ರೀತಿಯಲ್ಲಿ ಕನ್ನಡ ಮಾತಾಡುವಾಗ, ಅವರೆಲ್ಲರೂ ಒಪ್ಪುವಂತ ಬರವಣಿಗೆಯ ಕಟ್ಟುಪಾಡುಗಳಿರಬೇಕು ಮತ್ತು ಆ ಕಟ್ಟುಪಾಡುಗಳು ಆ ಎಲ್ಲರಿಗೂ ಸಮಾನ ಹತ್ತಿರದಲ್ಲಿರಬೇಕು. ‘ಹ’ ಕಾರದ ಬದಲಿಗೆ ‘ಅ’ ಕಾರದ ಬಳಕೆ ಹೆಗಡೆಯವರೇ ಹೇಳಿದಂತೆ ದಕ್ಷಿಣ ಭಾಗದ ಕೆಲ ಜನರಲ್ಲಿ ಮಾತ್ರವಿದೆ. ಎಲ್ಲಾ ಭಾಗದ ಕನ್ನಡಿಗರ ಉಲಿಕೆಯಲ್ಲೂ ಮಹಾಪ್ರಾಣಗಳಿಲ್ಲ. ಆದರೆ ಬರವಣಿಗೆಯಲ್ಲಿ ಮಹಾಪ್ರಾಣದ ಬಗೆಗಿನ ತೊಡಕು ಎಲ್ಲ ಭಾಗದ ಕನ್ನಡಿಗರಲ್ಲೂ ಇದೆ.  ಉದಾಹರಣೆ : ವಿಶೇಷ, ವಿಶಿಷ್ಟ – ಈ ಪದಗಳನ್ನು ಹೇಳುವಾಗ ಸಣ್ಣ ಶ ಮತ್ತು ದೊಡ್ಡ ಷ ಬೇರೆ ಬೇರೆಯಾಗಿ ಹೇಳುವುದಿಲ್ಲ. ಸಣ್ಣ ಶ ವನ್ನೇ ಬಳಸಿ ಈ ಪದಗಳನ್ನು ಹೇಳುತ್ತೇವೆ. ‘ದಕ್ಷಿಣ’ ಎಂದು ಹೇಳುವಲ್ಲಿಯೂ ಸಣ್ಣ ‘ಶ’ ವನ್ನೇ ಉಲಿಯುತ್ತೇವೆ. ಆದರೆ ಬರೆಯುವಾಗ ‘ಷ’ ಬದಲು ‘ಶ’ ವನ್ನು ಬಳಸಿದರೆ, ಅವರನ್ನು ತಪ್ಪಿತಸ್ಥರನ್ನಾಗಿ ನೋಡಲಾಗುತ್ತದೆ. ಇಂಥ ಗೊಂದಲಗಳಿಂದಲೇ ಹಬ್ಬ-ಹರಿದಿನಗಳ ಹಾರೈಕೆಗಳಲ್ಲಿ ‘ಶುಭಾಶಯ’ ಬದಲಿಗೆ ‘ಶುಬಾಷಯ’, ‘ಷುಭಾಶಯ’ ಗಳು ಎಲ್ಲರಿಗೂ ನೋಡಸಿಗುತ್ತವೆ. ಗಮನಿಸಬೇಕಿರುವ ಅಂಶವೆಂದರೆ ಇಂಥ ಗೊಂದಲಗಳು ಕನ್ನಡಕ್ಕೆ ಎರವಲಾಗಿ ಬಂದ ಪದಗಳಲ್ಲಿ ಹೆಚ್ಚೆಚ್ಚು ಕಾಣುವುವು ಮತ್ತು ಈ ಗೊಂದಲಗಳು, ಮಹಾಪ್ರಾಣಗಳು ಬಳಕೆಯಾಗದೇ ಇರುವ ಪದಗಳಲ್ಲೂ ಬಳಸುವಂತೆ ಮಾಡಿದೆ. ಬರಹದಲ್ಲಿನ ಶಿಸ್ತಿನ ಬಗ್ಗೆ ಮಾತಾಡುವಾಗ ಎಲ್ಲರಿಗೂ ತೊಂದರೆ ನೀಡುತ್ತಿರುವ ಇಂಥ ತೊಡಕುಗಳನ್ನು ಮೊದಲಿಗೆ ಸರಿಪಡಿಸಬೇಕಾಗುತ್ತದೆ. ನಾಡಿನ ಮತ್ತು ಜನರ ಏಳಿಗೆಯಲ್ಲಿ ಕಲಿಕೆಯ ಪಾತ್ರ ದೊಡ್ಡದಿದೆ. ಈ ನಿಟ್ಟಿನಲ್ಲಿ ಓದು-ಬರವಣಿಗೆಯಲ್ಲಿ ಹೆಚ್ಚು ಹೆಚ್ಚು ಮಂದಿಯನ್ನು ತೊಡಗಿಸುವಲ್ಲಿ ಅನುಕೂಲವಿದೆಯೇ ಹೊರತು ಅವರನ್ನು ದೂರ ತಳ್ಳುವುದರಿಂದ ಅಲ್ಲ. ಓದು-ಬರವಣಿಗೆ ಎಲ್ಲರ ಸ್ವತ್ತು ಆಗಿರುವುದರಿಂದ, ಮಾತು ಮತ್ತು ಬರಹದ ನಡುವಿನ ವ್ಯತ್ಯಾಸ ಕಡಿಮೆಯಾದಷ್ಟೂ ಹೆಚ್ಚು ಜನರು ತೊಡಗಿಕೊಳ್ಳುತ್ತಾರೆ ಎಂಬುದನ್ನು ಅರಿಯಬೇಕಿದೆ. ಆಡುಮಾತಿಗೆ ಪೂರ್ತಿಯಾಗಿ ತಾಳೆಯಾಗುವಂತ ಬರವಣಿಗೆ ಹೊಂದಿರುವ ನುಡಿ ಯಾವುದೂ ಇರಲಾರದು. ಬರವಣಿಗೆಯನ್ನು ಆಡುಮಾತಿಗೆ ಆದಷ್ಟೂ ಹತ್ತಿರ ಒಯ್ಯಬೇಕು ಎಂಬ ಹೇಳಿಕೆಯಲ್ಲಿ, ‘ಆದಷ್ಟೂ’ ಎಂಬುದನ್ನು ಗಮನಿಸಬೇಕು. ಕನ್ನಡದ ಬಗ್ಗೆ ನಡೆಯುತ್ತಿರುವ ಚರ್ಚೆಯಲ್ಲಿ ಕನ್ನಡೇತರ (ಇಂಗ್ಲಿಶ್) ನುಡಿಯನ್ನು ತರುವುದು ಬೇಕಾಗಿರಲಿಲ್ಲ. ಇಂಗ್ಲೀಶ್ ಅಥವಾ ಫ್ರೆಂಚ್ ಭಾಷೆಯಲ್ಲಿ ಲಿಪಿ ಸುಧಾರಣೆ ಮಾಡಿಕೊಳ್ಳುವುದು-ಬಿಡುವುದು ಆ ಭಾಷಿಕರಿಗೆ ಬಿಟ್ಟದ್ದು. ಆ ಬಗ್ಗೆ ಕನ್ನಡಿಗರು ತಲೆಕೆಡಿಸಕೊಳ್ಳಬೇಕಿಲ್ಲ. ಲಿಪಿ ಸುಧಾರಣೆಗಳನ್ನು ಮಾಡಿಕೊಂಡು ಏಳಿಗೆ ಹೊಂದುತ್ತಾ ಗೆದ್ದಿರುವ ನಾಡುಗಳು ಕಣ್ ಮುಂದಿವೆ ಎಂಬುದನ್ನೂ ತಿಳಿಯಬೇಕಿದೆ.
===============================================================

ಇಂತ ಗಂಭೀರ ವಿಷಯದ ಚರ್ಚೆಗೆ ವೇದಿಕೆ ಮಾಡಿಕೊಟ್ಟಿರುವ ಪ್ರಜಾವಾಣಿ ಪತ್ರಿಕೆಯ ನಡೆಯನ್ನು ಮೆಚ್ಚಲೇಬೇಕು. ಈ ಚರ್ಚೆಯ ಮೂಲಕ ಕನ್ನಡ ನುಡಿಯ ಮಾತು ಮತ್ತು ಬರವಣಿಗೆ ಹಿಂದಿರುವ ವಿಜ್ಞಾನವು ಹೆಚ್ಚು ಜನರಿಗೆ ತಿಳಿಯಲಿ ಎಂಬ ಆಶಯ ನನ್ನದು.

 

Posted in ಕನ್ನಡ, ನುಡಿ | ನಿಮ್ಮ ಟಿಪ್ಪಣಿ ಬರೆಯಿರಿ

ಕರ್ನಾಟಕದಲ್ಲಿ ತೆಲುಗು ಸಿನೆಮಾಗಳನ್ನು ನೋಡುತ್ತಿರುವವರು ಯಾರು?

ಬಾಹುಬಲಿ ಅನ್ನುವ ತೆಲುಗು ಚಿತ್ರ ಕರ್ನಾಟಕದಲ್ಲಿ ಇನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ. ಕನ್ನಡಕ್ಕೆ ಡಬ್ಬಿಂಗ್ ಬಂದರೆ ಕನ್ನಡಕ್ಕೂ, ಕನ್ನಡ ಸಂಸ್ಕೃತಿಗೂ ತೊಂದರೆ ಅನ್ನುವ ವಾದ ಮಾಡುತ್ತಿದ್ದ ನಿರ್ಮಾಪಕರೇ ಈ ಚಿತ್ರವನ್ನು ಕರ್ನಾಟಕದೆಲ್ಲೆಡೆ ತೆರೆಕಾಣಿಸಿ “ಕನ್ನಡದ ಸೇವೆ”ಗೈದಿರುವುದು ಇನ್ನೊಂದು ವಿಶೇಷ. ಈ ಹೊತ್ತಿನಲ್ಲಿ ಕನ್ನಡದಲ್ಲಿ ಡಬ್ಬಿಂಗ್ ನಿಷೇಧದ ಔಚಿತ್ಯವನ್ನು ಪ್ರಶ್ನಿಸಬೇಕಾದ ಅಗತ್ಯ ನಮ್ಮ ಮುಂದಿದೆ. ಮೊದಲಿಗೆ, ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ 7-8% ಇರುವ ತೆಲುಗರಿಗಾಗಿ ಇರುವ 600 ಚಿತ್ರಮಂದಿರಗಳಲ್ಲಿ 200ರಲ್ಲಿ ಬಾಹುಬಲಿ ಬಿಡುಗಡೆ ಮಾಡಲು ಸಾಧ್ಯವೇ? ತೆಲುಗರು ಒಂದಿಷ್ಟು ಪ್ರಮಾಣದಲ್ಲಿರುವ ಬೆಂಗಳೂರು ಮತ್ತು ಗಡಿ ಭಾಗದ 40-50 ಚಿತ್ರಮಂದಿರಗಳಲ್ಲಿ ತೆಲುಗು ಸಿನೆಮಾ ಎರಡು ವಾರ ಓಡಬಹುದು. ಹಾಗಿದ್ದರೆ ಉಳಿದ 150 ಚಿತ್ರಮಂದಿರಗಳಲ್ಲಿ ಸಿನೆಮಾ ನೋಡುವವರು ಯಾರು? ಕನ್ನಡಿಗರೇ ಅಲ್ಲವೇ? ಅವರಿಗೆಲ್ಲ ತೆಲುಗು ಬರುತ್ತದೆಯೇ? ಅವರೆಲ್ಲ ತೆಲುಗು ಸಿನೆಮಾ ನೋಡಿ, ನೋಡಿ ತೆಲುಗು ಕಲಿಯುವುದಕ್ಕಿಂತ ಕನ್ನಡದಲ್ಲೇ ಡಬ್ ಆಗಿ ಚಿತ್ರ ನೋಡಿದರೆ ಕನ್ನಡ ಬಿಟ್ಟು ಇನ್ನೊಂದು ಭಾಷೆಗೆ ಹೋಗುವ ಅಪಾಯವನ್ನಾದರೂ ತಪ್ಪಿಸಬಹುದಿತ್ತಲ್ಲವೇ? ಹುಬ್ಬಳ್ಳಿಯಂತಹ ಊರಿನಲ್ಲಿ ಬಾಹುಬಲಿ ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗುತ್ತೆ, ಆದರೆ ಕನ್ನಡದಲ್ಲಿ ಇದೇ ಚಿತ್ರ ಬಂದರೆ ನಮ್ಮ ಸಂಸ್ಕೃತಿ ನಾಶವಾಗುತ್ತೆ ಅನ್ನುವುದು ಎಂತಹ ವಿಚಿತ್ರ ವಾದವಲ್ಲವೇ? ಬದಲಿಗೆ, ಡಬ್ಬಿಂಗ್ ಮೂಲಕ ಕನ್ನಡದಲ್ಲೇ ಎಲ್ಲವನ್ನೂ ನೋಡುವುದು ರೂಢಿಯಾದ ಕನ್ನಡಿಗರು ಹೆಚ್ಚೆಚ್ಚು ಬಗೆಯ ಕನ್ನಡ ಕಂಟೆಂಟ್ ಅನ್ನು ನೋಡುವ ಸಾಧ್ಯತೆ ಹೆಚ್ಚು. ಅದರಿಂದ ಕನ್ನಡ ಬೆಳೆಯುವುದೂ ಅಲ್ಲದೇ ಕನ್ನಡದ ಮಾರುಕಟ್ಟೆಯ ಸಾಧ್ಯತೆಯೂ ಬೆಳೆಯುವುದಿಲ್ಲವೇ ? ಡಬ್ಬಿಂಗ್ ಬಿಟ್ಟುಕೊಂಡಿರುವ ತೆಲುಗು, ತಮಿಳಿನಲ್ಲಿ ಜನರು ಹೆಚ್ಚು ತಮ್ಮ ನುಡಿಗೆ ಅಂಟಿಕೊಳ್ಳುವಲ್ಲಿ ಡಬ್ಬಿಂಗ್ ಖಂಡಿತ ಒಂದು ದೊಡ್ಡ ಪಾತ್ರವಹಿಸಿದೆ. ಡಬ್ಬಿಂಗ್ ಇಲ್ಲದಿರುವುದರಿಂದ ಮನರಂಜನೆಯ ಮೊದಲ ಆಯ್ಕೆಯ ನುಡಿಯಾಗಿ ಕನ್ನಡ ತನ್ನ ಸ್ಥಾನ ಕಳೆದುಕೊಳ್ಳುತ್ತಿದೆ ಮತ್ತು ಮನರಂಜನೆಯ ವಿಷಯದಲ್ಲಿ ಕನ್ನಡಕ್ಕಿರುವ ಮಾರುಕಟ್ಟೆಯ ಸಾಧ್ಯತೆಯೂ ಕುಸಿಯುತ್ತಿದೆ. ತೆಲುಗು, ತಮಿಳು ಚಿತ್ರೋದ್ಯಮಗಳು ಸರಿ ಸುಮಾರು ಎರಡು ಸಾವಿರ ಕೋಟಿ ರೂಪಾಯಿಯ ಉದ್ಯಮವಾಗಿದ್ದರೆ ಕನ್ನಡ ಇನ್ನೂ ಇನ್ನೂರು-ಮುನ್ನೂರು ಕೋಟಿಯಲ್ಲೇ ಒದ್ದಾಡುತ್ತಿರುವುದನ್ನು ಈ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳಬೇಕು. ಅಲ್ಲದೇ ಡಬ್ಬಿಂಗ್ ನಿಷೇಧದ ಕಾರಣದಿಂದ ಕಾರ್ಟೂನು, ವಿಜ್ಞಾನವಾಹಿನಿಗಳು ಕನ್ನಡಕ್ಕೆ ಬಾರದೇ ಪುಟ್ಟ ಮಕ್ಕಳು ಕನ್ನಡಕ್ಕಿಂತ ಮೊದಲೇ ಹಿಂದಿ/ಇಂಗ್ಲಿಷ್ ಕಲಿಯುವ ಬದಲಾವಣೆಗಳಾಗುತ್ತಿವೆ. ಇವುಗಳ ಕೆಟ್ಟ ಪರಿಣಾಮ ಇನ್ನೊಂದೆರಡು ದಶಕದಲ್ಲಿ ದೊಡ್ಡ ಮಟ್ಟದಲ್ಲೇ ಕಾಣಿಸಲಿದೆ.

ಕನ್ನಡ ಚಿತ್ರೋದ್ಯಮದ ಕೆಲವರು ತಮ್ಮ ಸ್ವಾರ್ಥ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು, ರಿಮೇಕ್, ರಿಮಿಕ್ಸಿನ ತಂಗಳನ್ನವನ್ನೇ ಕನ್ನಡಿಗರಿಗೆ ಬಡಿಸುವುದನ್ನು ಮುಂದುವರೆಸಲು ಡಬ್ಬಿಂಗ್ ಅನ್ನು ಕನ್ನಡ ವಿರೋಧಿ ಅಂತ ತೋರಿಸುವ ಕೆಲಸ ಮಾಡುತ್ತಿದ್ದಾರೆ. ಬಾಹುಬಲಿಯ ಇಂತಹ ಅಬ್ಬರದ ನಡುವೆಯೂ ರಂಗಿತರಂಗದಂತಹ ನೆಲದ ಸೊಗಡಿರುವ ಹೊಸಬರ ಕತೆಯನ್ನು ಕನ್ನಡಿಗರು ಅಪ್ಪಿಕೊಂಡು ಪೊರೆಯುತ್ತಿರುವುದು ಡಬ್ಬಿಂಗ್ ಬಗೆಗಿನ ಅತಿರಂಜಿತ ಭಯವೆಲ್ಲ ಕಲ್ಪಿತ ಅನ್ನುವುದನ್ನು ಸಾಧಿಸುತ್ತಿವೆ. ವಿಶ್ವಸಂಸ್ಥೆಯ ಬಾರ್ಸಿಲೋನಾ ಭಾಷಾ ಹಕ್ಕುಗಳ ಘೋಷಣೆ ಡಬ್ಬಿಂಗ್ ಅನ್ನು ಭಾಷೆ ಬೆಳೆಸುವ, ಹರಡುವ ಒಂದು ಸಾಧನವೆಂದೇ ಕರೆದಿದೆ. ಯುರೋಪಿನ ಬಹುತೇಕ ದೇಶಗಳು ಹೊರಗಿನಿಂದ ಬರುವ ಚಿತ್ರಗಳು ತಮ್ಮ ಭಾಷೆಗೆ ಡಬ್ ಆಗಿಯೇ ಬರಬೇಕು ಅನ್ನುವ ಕಟ್ಟಳೆ ಹಾಕುತ್ತವೆ. ಭಾರತದ ಸಂವಿಧಾನ ಮತ್ತು ಕಾನೂನುಗಳು ಡಬ್ಬಿಂಗ್ ಅನ್ನು ನಿಷೇಧಿಸಿಲ್ಲ. ಹೀಗಿದ್ದರೂ ಕೆಲವರ ವೈಯಕ್ತಿಕ ಕಟ್ಟುಪಾಡುಗಳು ಒಂದಿಡೀ ಜನಸಮುದಾಯದ ಭಾಷಾ ಹಕ್ಕುಗಳನ್ನೇ ಕಸಿದುಕೊಳ್ಳುತ್ತಿರುವುದನ್ನು ನೋಡುತ್ತ ರಾಜ್ಯ ಸರ್ಕಾರ ಸುಮ್ಮನೆ ಕೂರಬಾರದು. ಕನ್ನಡಕ್ಕೆ ಡಬ್ಬಿಂಗ್ ಬರಲಿ. ಕನ್ನಡದ ಉದ್ಯಮದ ಹಿತವನ್ನು ಕಾಯ್ದುಕೊಂಡು, ಕನ್ನಡಿಗರಿಗೆ ಜಗತ್ತಿನ ಎಲ್ಲ ಬಗೆಯ ಮಾಹಿತಿ, ಮನರಂಜನೆಯೂ ಕನ್ನಡದಲ್ಲಿ ದೊರೆಯುವಂತೆ ಮಾಡುವ ನಡುವಿನ ಹಾದಿಯೊಂದು ಕಂಡುಕೊಳ್ಳುವ ಕೆಲಸ ಈಗ ತುರ್ತಾಗಿ ಆಗಲಿ.

Posted in ಡಬ್ಬಿಂಗ್ | ನಿಮ್ಮ ಟಿಪ್ಪಣಿ ಬರೆಯಿರಿ

ನಡಹಳ್ಳಿ ಪಾದಯಾತ್ರೆ – ದಕ್ಷಿಣ ಕರ್ನಾಟಕ ಅನ್ನುವ ಇಲ್ಲದ ಶತ್ರುವನ್ನು ಹುಟ್ಟು ಹಾಕುವ ಯತ್ನ

ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಿ, ಅದರ ಮೊದಲ ಮುಖ್ಯಮಂತ್ರಿಯಾಗಬೇಕು ಅನ್ನುವ ಕನಸು ಹೊತ್ತಂತೆ ಕಾಣುತ್ತಿರುವ ನಡಹಳ್ಳಿಯವರು ಇತ್ತೀಚೆಗೆ ವಿಜಯಪುರದಿಂದ ರಾಯಚೂರಿನವರೆಗೆ ಪಾದಯಾತ್ರೆಯೊಂದನ್ನು ಹಮ್ಮಿಕೊಂಡಿದ್ದರು. ಈ ಪಾದಯಾತ್ರೆಯ ಗುರಿ ನಂಜುಂಡಪ್ಪ ವರದಿಯ ಅನುಷ್ಟಾನಕ್ಕೆ ಒತ್ತಾಯ ತರುವುದು ಎಂದು ಹೇಳಲಾಗಿದ್ದರೂ ಪ್ರತ್ಯೇಕ ಉತ್ತರ ಕರ್ನಾಟಕದ ಬಾವುಟ, ನಕ್ಷೆ ಸಿದ್ದಪಡಿಸಿಕೊಂಡು ಹಾದಿಯುದ್ದಕ್ಕೂ ದಕ್ಷಿಣ ಕರ್ನಾಟಕವನ್ನು ದೂರುತ್ತ ಸಾಗಿದ ರೀತಿ ನೋಡಿದ ಯಾರಿಗೇ ಆದರೂ ದಕ್ಷಿಣ ಕರ್ನಾಟಕ ಅನ್ನುವ ಇಲ್ಲದ UV_Vijayapura__edition_25Jun2015_1ಸಾಮಾನ್ಯ ಶತ್ರುವೊಂದನ್ನು ಉತ್ತರದ ಜನರ ಮನಸ್ಸಲ್ಲಿ ಬಿತ್ತುವ ಪ್ರಯತ್ನವಾಗಿಯೇ ಈ ಯಾತ್ರೆ ಕೈಗೊಳ್ಳಲಾಗಿತ್ತು ಅನಿಸಿದರೆ ಅಚ್ಚರಿಯಿಲ್ಲ. ನಡಹಳ್ಳಿಯವರ ರಾಜಕೀಯ ಲೆಕ್ಕಾಚಾರದ ಈ ಹೋರಾಟದಲ್ಲಿ ಸಾಹಿತಿಗಳಾದ ಚಂಪಾ ಮತ್ತು ಕುಂ.ವೀರಭದ್ರಪ್ಪನವರು ಪಾಲ್ಗೊಂಡಿದ್ದು ನೋಡಿದರೆ ಕರ್ನಾಟಕದ ಒಡಕು ರಾಜಕೀಯವಾಗಿ ಕನ್ನಡಿಗರನ್ನು ಎಂತಹ ಬಲಹೀನ ಸ್ಥಿತಿಗೆ ತಂದು ನಿಲ್ಲಿಸಬಹುದು ಅನ್ನುವ ಅರಿವು ಇವರಿಗೆ ಇಲ್ಲವೆನೋ ಅನ್ನುವ ಅನುಮಾನ ತರುತ್ತದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾಗಿರುವ ಚಂಪಾ ಅವರು ಕನ್ನಡ ಪರ ಹೋರಾಟಕ್ಕೆ ಹೊಸಬರಲ್ಲ. ಹಲವು ದಶಕಗಳಿಂದ ರಾಜಕೀಯವಾಗಿ ಕನ್ನಡಿಗರ ಗುರುತೊಂದು ಹುಟ್ಟಬೇಕು ಅನ್ನುವ ವಾದ ಮಂಡಿಸುತ್ತ ಬಂದಿದ್ದ ಚಂಪಾರವರು ಕನ್ನಡಿಗರ ರಾಜಕೀಯ ಒಗ್ಗಟ್ಟನ್ನೇ ಮುರಿಯಬೇಕು ಎಂಬಂತೆ ನಿಂತಿರುವ ನಡಹಳ್ಳಿಯವರ ಜೊತೆ ಪಾದಯಾತ್ರೆಯಲ್ಲಿ ಕಾಣಿಸಿಕೊಂಡಿದ್ದೇ ಒಂದು ಅಚ್ಚರಿ. ಉತ್ತರ ಕರ್ನಾಟಕ ಅನ್ನುವ ರಾಜಕೀಯ ಗುರುತು ಹಿಂದೆಯೂ ಇರಲಿಲ್ಲ, ಈಗಲೂ ಇಲ್ಲ. ಉತ್ತರ ಕರ್ನಾಟಕ ಎಂದು ನಡಹಳ್ಳಿಯವರು ಕರೆದುಕೊಳ್ಳುತ್ತಿರುವ 13 ಜಿಲ್ಲೆಗಳಲ್ಲೇ ಸಾಮ್ಯತೆಯಿಲ್ಲ. ಇಡೀ ಕರ್ನಾಟಕವನ್ನು ಬೆಸೆಯುವ ಕೊಂಡಿಯೇನಾದರೂ ಇದ್ದರೆ ಅದು ಅಂದಿಗೂ, ಇಂದಿಗೂ ಕನ್ನಡವೊಂದೇ. ಆ ಗುರುತೇ ನಗಣ್ಯವಾದರೆ ಒಂದಲ್ಲ ಮೂವತ್ತು ರಾಜ್ಯವಾದರೂ ಅಚ್ಚರಿಯಿಲ್ಲ. ಇಂತಹ ಇಲ್ಲದಿರುವ ಗುರುತೊಂದನ್ನು ಜನರ ಮನಸ್ಸಲ್ಲಿ ಬಿತ್ತಲೆಂದೇ ಶುರುವಾದ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ಒಡಕಿನ ದನಿಗೆ ಒಂದು ರೀತಿಯ ಲೆಜಿಟಿಮಸಿ ಕೊಡುವ ಕೆಲಸ ಚಂಪಾರಂತಹ ಹಿರಿಯ ಕನ್ನಡ ಪರ ಚಿಂತಕರಿಂದ ಆಯಿತಾ ಅನ್ನುವ ಬೇಸರ ಹಲವು ಕನ್ನಡಿಗರಲ್ಲಿದೆ. ನಂಜುಂಡಪ್ಪ ವರದಿಯ ಅನುಷ್ಟಾನದ ಮೂಲಕ ಉತ್ತರ ಕರ್ನಾಟಕದ ಏಳಿಗೆಯಾಗಲಿ ಅನ್ನುವ ಮಾತುಗಳನ್ನು ಚಂಪಾರವರು ಆಡಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದೆ. ಆದರೆ ನಂಜುಂಡಪ್ಪ ವರದಿ ಅನ್ನುವುದು ಕೇವಲ ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗೆಗಿನ ವರದಿಯಲ್ಲ. ಅಲ್ಲಿ ಉತ್ತರದ 59 ತಾಲೂಕುಗಳ ಜೊತೆ ದಕ್ಷಿಣದ 55 ತಾಲೂಕುಗಳು ಹಿಂದುಳಿದಿವೆ ಅನ್ನುವ ಮಾಹಿತಿಯಿದೆ. ಬೆಂಗಳೂರಿನಿಂದ ಕೂಗಳತೆಯಲ್ಲಿರುವ ಕನಕಪುರ, ಮಾಗಡಿ ತಾಲೂಕುಗಳೂ ಅತ್ಯಂತ ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲಿವೆ. ನಂಜುಂಡಪ್ಪ ವರದಿಯ ಸರಿಯಾದ ಅನುಷ್ಟಾನದ ಮೂಲಕ ಸಮಗ್ರ ಕರ್ನಾಟಕದ ಏಳಿಗೆಯಾಗಲಿ ಅನ್ನುವ ಮಾತು ಚಂಪಾರಂತಹ ಹಿರಿಯರು ಆಡಿದ್ದರೆ ಯಾವುದು ಕನ್ನಡ ಪರ ಅನ್ನುವ ವಿಷಯದಲ್ಲಿ ಅವರಿಗೊಂದು ಸೈದ್ಧಾಂತಿಕ ಸ್ಪಷ್ಟತೆಯಿದೆ ಅನ್ನುವ ಅನಿಸಿಕೆಯನ್ನು ಗಟ್ಟಿಗೊಳಿಸುತ್ತಿತ್ತು.

ಇನ್ನೊಂದೆಡೆ ಮಾತನಾಡಿದ ಹಿರಿಯ ಸಾಹಿತಿ ಕುಂ.ವೀರಭದ್ರಪ್ಪನವರು ಉತ್ತರ ಕರ್ನಾಟಕದವರ ಮೇಲೆ ದಕ್ಷಿಣದವರ ಸಾಂಸ್ಕೃತಿಕ ಹೇರಿಕೆಯಾಗುತ್ತಿದೆ ಅನ್ನುವ ಮಾತುಗಳನ್ನಾಡಿದ್ದಾರೆ. ಕನ್ನಡ ಸಿನೆಮಾಗಳಲ್ಲಿ ದಕ್ಷಿಣದವರ ಭಾಷೆಯೇ ಬಳಕೆಯಾಗುತ್ತೆ. ಅಕಾಡೆಮಿಗಳಿಗೆ ನೇಮಕಾತಿ ಮತ್ತು ಪ್ರಶಸ್ತಿ ನೀಡುವಾಗ ಉತ್ತರದವರಿಗೆ ಅನ್ಯಾಯವಾಗುತ್ತೆ ಅನ್ನುವ ಮಾತುಗಳನ್ನೂ ಅವರು ಆಡಿದ್ದಾರೆ. ಮೊದಲಿಗೆ, ಕನ್ನಡ ಸಿನೆಮಾ ಉದ್ಯಮ ಅನ್ನುವುದು ಒಂದು ಖಾಸಗಿ ಮನರಂಜನಾ ಉದ್ದಿಮೆ. ಅಲ್ಲಿ ಯಾವ ಭಾಷೆ ಬಳಸಬೇಕು, ಯಾವುದು ಬಳಸಬಾರದು ಅನ್ನುವ ಬಗ್ಗೆ ಯಾವುದೇ ಅಡೆತಡೆ ಯಾರಿಗೂ ಇಲ್ಲ. ಕನ್ನಡ ಚಿತ್ರಗಳಲ್ಲಿ ಹೆಚ್ಚಾಗಿ ಬಳಕೆಯಾಗುವುದು ಮಂಡ್ಯ, ಬೆಂಗಳೂರಿನ ಕನ್ನಡ. ದಕ್ಷಿಣ ಕರ್ನಾಟಕ ಎಂದು ನಡಹಳ್ಳಿಯವರು ಕರೆಯುವ ಉಡುಪಿಯ ಕುಂದಗನ್ನಡವಾಗಲಿ, ಮಲೆನಾಡಿನ ಕನ್ನಡವಾಗಲಿ, ಚಾಮರಾಜನಗರದ ಕನ್ನಡವಾಗಲಿ ಅಲ್ಲಿ ಬಳಕೆಯಾಗಲ್ಲ. ಹಾಗಿದ್ದರೆ ಅವರೂ ಕೂಡಾ ನಮ್ಮ ಮೇಲೆ ಸಾಂಸ್ಕೃತಿಕ ಹೇರಿಕೆಯಾಗುತ್ತಿದೆ ಎಂದು ವಾದಿಸಿ ಬೇರೆ ರಾಜ್ಯ ಕೇಳಬೇಕೇ? ಎರಡನೆಯದ್ದಾಗಿ, ಧಾರವಾಡದ ಕನ್ನಡಕ್ಕೂ, ಕಲಬುರಗಿಯ ಕನ್ನಡಕ್ಕೂ, ಬಳ್ಳಾರಿಯ ಕನ್ನಡಕ್ಕೂ ಸಾಕಷ್ಟು ಸೊಗಡಿನ ವ್ಯತ್ಯಾಸವಿದೆ. ಯಾವುದನ್ನು ಕುಂ.ವೀ ಅವರು ಉತ್ತರ ಕರ್ನಾಟಕದ ಕನ್ನಡವೆಂದು ಕರೆಯುತ್ತಿದ್ದಾರೆ? ಮೂರನೆಯದ್ದಾಗಿ, ಧಾರವಾಡ ಶೈಲಿಯ ಕನ್ನಡ ಬಳಸಿ ತೆರೆಗೆ ಬಂದ ನಾಗಮಂಡಲ, ರಾಮ ಶಾಮ ಭಾಮದಂತಹ ಚಿತ್ರಗಳನ್ನು ಕನ್ನಡಿಗರು ಮನದುಂಬಿ ನೋಡಿ ಗೆಲ್ಲಿಸಿದ್ದು ಏನನ್ನು ತೋರಿಸುತ್ತೆ? ನಡಹಳ್ಳಿಯವರ ಅಕ್ಕ ಪಕ್ಕ ಓಡಾಡುತ್ತಿರುವ ರಂಗನಟ ರಾಜು ತಾಳಿಕೋಟಿ ಕರ್ನಾಟಕದಲ್ಲಿ ಮನೆಮಾತಾಗಿದ್ದೇ ಯೋಗರಾಜಭಟ್ಟರ ಸಿನೆಮಾಗಳಲ್ಲಿ ಧಾರವಾಡದ ಸೊಗಡಿನ ಕನ್ನಡ ಬಳಸಿ ಅಲ್ಲವೇ? ಅಕಾಡೆಮಿಯ ಸ್ಥಾನ ಮತ್ತು ಪ್ರಶಸ್ತಿಯ ಮಾತಿಗೆ ಬಂದರೆ ಅಲ್ಲಿ ಯಾವುದೇ ರೀತಿಯ ತಾರತಮ್ಯವಾಗುತ್ತಿದ್ದರೂ ಅದನ್ನು ಆಯಾ ಭಾಗದ ಜನಪ್ರತಿನಿಧಿಗಳು ದನಿ ಎತ್ತಿ ಸರಿಪಡಿಸಿಕೊಳ್ಳಬೇಕು. ಇಂತಹ ಸಾಂಸ್ಕೃತಿಕ ನೆಲೆಯ ಪ್ರಶ್ನೆಯೊಂದನ್ನು ಒಡಕಿನ ರಾಜಕೀಯ ಮಾಡುವ ವೇದಿಕೆಯಲ್ಲಿ ಎತ್ತಬೇಕೇ ಅನ್ನುವುದನ್ನು ಎಲ್ಲ ಭಾಗದ ಕನ್ನಡಿಗರು ಇಷ್ಟ ಪಡುವ ಕುಂ.ವೀಯವರು ಕೇಳಿಕೊಳ್ಳಲಿ. ನಂಜುಂಡಪ್ಪ ವರದಿಯಲ್ಲಿ ಸಾಂಸ್ಕೃತಿಕ ಆಯಾಮವಿಲ್ಲ ಅನ್ನುವ ಪ್ರಶ್ನೆಯನ್ನೂ ಕುಂ.ವೀ ಅವರು ಎತ್ತಿದ್ದಾರೆ. ಆದರೆ ನಂಜುಂಡಪ್ಪ ವರದಿಯ ಉದ್ದೇಶವಿದ್ದಿದ್ದೇ ಆರ್ಥಿಕ ಮತ್ತು ಸಾಮಾಜಿಕ ಆಯಾಮದಲ್ಲಿ ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿನ ಏಳಿಗೆಯ ಸವಾಲುಗಳ ಬಗ್ಗೆ ಅಧ್ಯಯನ ಮಾಡುವುದಾಗಿತ್ತು. ಜನರ ಜೀವನವನ್ನು ಸುಧಾರಿಸುವಲ್ಲಿ ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ, ಉದ್ದಿಮೆಗಳು ಮುಖ್ಯವಾಗುತ್ತವೆ, ಆದ್ದರಿಂದಲೇ ನಂಜುಂಡಪ್ಪ ವರದಿ ಈ ಮುಖ್ಯ ವಿಷಯಗಳ ಸುತ್ತ ಗಮನ ಹರಿಸಿತ್ತು. ಕೊನೆಯಲ್ಲಿ ದಕ್ಷಿಣ ಕರ್ನಾಟಕದಲ್ಲಿ ನೀರಿಗೆ ಬರವಿಲ್ಲ, ಆದರೆ ಉತ್ತರ ಕರ್ನಾಟಕದಲ್ಲಿ ಜನರು ಹತ್ತಾರು ಕಿ,ಮೀ ಅಲೆಯಬೇಕಾದ ಸ್ಥಿತಿಯಿದೆ ಅನ್ನುವ ಮಾತನ್ನು ಕುಂ.ವೀ ಅವರು ಹೇಳಿದ್ದಾರೆ. ಇದೊಂದು ಅತೀ ಸರಳಗೊಳಿಸಿದ ವಾದವೇ ಸರಿ. ಕೋಲಾರ, ತುಮಕೂರು, ಚಿಕ್ಕಬಳ್ಳಾಪುರದಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿಲ್ಲದೇ ಹೋಗಿದ್ದರೆ ಎತ್ತಿನಹೊಳೆ ಯೋಜನೆಯಿಂದ ನೀರು ತನ್ನಿ ಎಂದು ಇಷ್ಟೆಲ್ಲ ಗಲಾಟೆಗಳಾಗುತ್ತಿದ್ದವೇ? ಕೋಲಾರದಲ್ಲಿನ ಫ್ಲೊರೈಡ್ ಸಮಸ್ಯೆಯ ಬಗ್ಗೆ ಕುಂ.ವೀ ಅವರಿಗೆ ತಿಳಿದಿಲ್ಲವೇ?

ಒಟ್ಟಾರೆಯಾಗಿ ಈ ಪಾದಯಾತ್ರೆಯಲ್ಲಿ ಉತ್ತರ ಕರ್ನಾಟಕದ ಏಳಿಗೆಗೆ ಅಲ್ಲಿನ ಜನಪ್ರತಿನಿಧಿಗಳು ಒಟ್ಟಾಗಿ ಏನು ಮಾಡಬೇಕು ಅನ್ನುವ ಚರ್ಚೆಗಿಂತ ಹೆಚ್ಚಾಗಿ ದಕ್ಷಿಣ ಕರ್ನಾಟಕ ಮತ್ತು ಅದರ ರಾಜಕಾರಣಿಗಳು ವಿಲನ್ ಎಂದು ಬಿಂಬಿಸುವ ಮತ್ತು ಆ ಮೂಲಕ ಒಬ್ಬ ಸಾಮಾನ್ಯ ಶತ್ರುವನ್ನು ಹುಟ್ಟು ಹಾಕುವ ಪ್ರಯತ್ನಕ್ಕೆ ಮುನ್ನುಡಿ ಬರೆಯುವಂತಿತ್ತು. 750 ವರ್ಷಗಳ ನಂತರ ಕನ್ನಡಿಗರು ಏಕೀಕರಣ ಚಳುವಳಿಯ ಮೂಲಕ ಒಂದಾದರು. ಏಳಿಗೆಯಲ್ಲಿ ಬೇರೆ ಬೇರೆ ಮಟ್ಟದಲ್ಲಿದ್ದ ಪ್ರದೇಶಗಳೆಲ್ಲ ಸೇರಿ ಆದ ಕರ್ನಾಟಕದಲ್ಲಿ ಎಲ್ಲ ಭಾಗದಲ್ಲೂ ಅರವತ್ತು ವರ್ಷದಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಆದರೆ ಇದರಲ್ಲಿ ಉತ್ತರ ದಕ್ಷಿಣವೆನ್ನದೇ ಎಲ್ಲ ಕಡೆಯೂ ಸಾಕಷ್ಟು ಕೊರತೆಯಿದೆ ಅನ್ನುವುದನ್ನು ನಂಜುಂಡಪ್ಪ ವರದಿಯೇ ಹೇಳುತ್ತೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಕನ್ನಡಿಗರು ಒಟ್ಟಾಗಿಯೇ ದುಡಿಯಬೇಕಿದೆಯೇ ಹೊರತು ಒಡೆದು ಆಳುವ ನೀತಿ ಅನುಸರಿಸುವುದರಿಂದಲ್ಲ. ತೆಲಂಗಾಣವಾದ ಮೇಲೆ ತೆಲುಗರು ಹಗಲು,ರಾತ್ರಿ ಬಡಿದಾಡಿಕೊಳ್ಳುತ್ತ ಬಲಹೀನವಾಗಿರುವುದನ್ನು ನೋಡಿಯಾದರೂ ನಾವು ಎಚ್ಚೆತ್ತುಕೊಳ್ಳಬೇಕು.

Posted in ಕನ್ನಡ, ಕರ್ನಾಟಕ | ನಿಮ್ಮ ಟಿಪ್ಪಣಿ ಬರೆಯಿರಿ

ಬಾಹುಬಲಿಗೆ ರಂಗೀತರಂಗ ಬಲಿ ಮತ್ತು ಡಬ್ಬಿಂಗ್ ನಿಷೇಧ

ಬಾಹುಬಲಿ ಅನ್ನುವ ತೆಲುಗು ಸಿನೆಮಾ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಕರ್ನಾಟಕದ ಇನ್ನೂರು ಚಿತ್ರಮಂದಿರಗಳಲ್ಲಿ ನಾಳೆ ಬಿಡುಗಡೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲೇ ಕನ್ನಡದಲ್ಲಿ ಬಂದ ಅತ್ಯುತ್ತಮ ಚಿತ್ರ ಅನ್ನುವ ಹೆಸರು ಗಳಿಸಿದ್ದ ರಂbbಗೀತರಂಗ ಚಿತ್ರ ಬಾಹುಬಲಿಯ ಹಣಬಲದ ಮುಂದೆ ಸ್ಪರ್ಧಿಸಲಾಗದೇ ಅರ್ಧದಷ್ಟು ಚಿತ್ರಮಂದಿರಗಳಿಂದ ಹೊರ ನಡೆಯುತ್ತಿದೆ. ಅನೂಪ್ ಭಂಡಾರಿಯಂತಹ ಯುವ, ಪ್ರತಿಭಾವಂತ ಕನ್ನಡಿಗನನ್ನು ಕನ್ನಡ ಚಿತ್ರರಂಗ ಪಡೆಯುವ ಮುನ್ನವೇ ಕಳೆದುಕೊಳ್ಳುವಂತೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ತೆಲುಗು ಚಿತ್ರಗಳು, ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಮಾರುಕಟ್ಟೆ ಕಟ್ಟಿಕೊಂಡ ಬಗ್ಗೆ ಒಂದು ವಿಶ್ಲೇಷಣೆ.

ಹತ್ತು ಹದಿನೈದು ವರ್ಷಗಳ ಹಿಂದೆ ಉತ್ತರ ಕರ್ನಾಟಕದ ಭಾಗದಲ್ಲಿ ತೆಲುಗು ಸಿನೆಮಾಗಳ ಹಾವಳಿ ಇವತ್ತಿನಷ್ಟಿರಲಿಲ್ಲ. ಎಲ್ಲೋ ಅಪರೂಪಕ್ಕೆ ಒಂದೋ ಎರಡೋ ಸಿನೆಮಾಗಳು ಬರುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಉತ್ತರ ಕರ್ನಾಟಕದ ಬಹುತೇಕ ದೊಡ್ಡ ಊರುಗಳಲ್ಲಿ ಪ್ರಮುಖ ಚಿತ್ರಮಂದಿರಗಳಲ್ಲಿ ತೆಲುಗು ಚಿತ್ರಗಳು ನಿಯಮಿತವಾಗಿ ಪ್ರದರ್ಶನವಾಗುತ್ತಿವೆ. ಈ ಬದಲಾವಣೆ ಹೇಗಾಯ್ತು ? ಸಿನೆಮಾ ಉದ್ಯಮವನ್ನು ಹತ್ತಿರದಿಂದ ನೋಡಿದವರು ಹೇಳುವ ಪ್ರಕಾರ “ತೆಲುಗು ಚಿತ್ರಗಳಿಗೆ ಕರ್ನಾಟಕ ಸೆಕೆಂಡರಿ ಮಾರುಕಟ್ಟೆಯಾಗಿರುವುದರಿಂದ ಸರಿ ಸುಮಾರು ಇಪ್ಪತ್ತು ವರ್ಷಗಳ ಕಾಲ ತೆಲುಗು ಚಿತ್ರಗಳನ್ನು ಬಿಸಾಡುವ ಬೆಲೆಗೆ ಉತ್ತರ ಕರ್ನಾಟಕದಲ್ಲಿ ಹಂಚಿಕೆದಾರರಿಗೆ, ಪ್ರದರ್ಶಕರಿಗೆ ಕೊಡಲಾಯಿತು. ಪರಭಾಷಾ ಚಿತ್ರಗಳ ಮೇಲೆ ತೆರಿಗೆ ಇರುವಾಗ, ಅದನ್ನು ಕದಿಯಲು ಹಲವು ಚಿತ್ರಮಂದಿರಗಳಿಗೂ ಇದೊಂದು ಒಳ್ಳೆಯ ಅವಕಾಶವಾಯ್ತು. ತೆಲುಗು ಉದ್ಯಮದವರಿಗೆ ಬಂದಷ್ಟು ಬರಲಿ ಅನ್ನುವ ಲೆಕ್ಕಾಚಾರ. ಆದರೆ ಇಪ್ಪತ್ತು ವರ್ಷಗಳ ಕಾಲ ನಿರಂತರವಾಗಿ ಜನರಿಗೆ ತೆಲುಗು ಸಿನೆಮಾಗಳನ್ನು ನೋಡುವ ಅಭ್ಯಾಸ ಬೆಳೆಸಿದ ಮೇಲೆ ಈಗ ಉತ್ತರ ಕರ್ನಾಟಕ ತೆಲುಗು ಚಿತ್ರಗಳಿಗೆ ದೊಡ್ಡ ಮಾರುಕಟ್ಟೆಯಾಗಿ ಪರಿಣಮಿಸುತ್ತಿವೆ. ಜೊತೆಯಲ್ಲೇ ತೆಲುಗು ಸಿನೆಮಾಗಳ ಬಗ್ಗೆ ಹೆಚ್ಚಿನ ಕನ್ನಡ ಮಾಧ್ಯಮಗಳು ಕನ್ನಡಕ್ಕಿಂತಲೂ ಹೆಚ್ಚಿನ ಪ್ರಚಾರ ನೀಡಿ ತೆಲುಗು ಮಾರುಕಟ್ಟೆ ಬೆಳೆಸುವಲ್ಲಿ ತಮ್ಮದೇ ಆದ ಸೇವೆ ಸಲ್ಲಿಸಿವೆ. ಮಾಧ್ಯಮಗಳು ಹೀಗೆ ಮಾಡಲು ವ್ಯಾಪಾರಿ ಕಾರಣಗಳು ಇದ್ದಂತಿವೆ. ”

ಡಬ್ಬಿಂಗ್ ಮೇಲಿನ ತಡೆಯಿಂದಾಗಿ ಮೂಲ ಭಾಷೆಯಲ್ಲೇ ತೆಲುಗು ಚಿತ್ರಗಳನ್ನು ನೋಡಿ ನೋಡಿ ಅಲ್ಲಿನ ಯುವಕರು ತೆಲುಗು ಕಲಿತಿರುವುದು ಅಲ್ಲದೇ ಕನ್ನಡ ಚಿತ್ರನಟರಿಗಿಂತ ಅವರೇ ಹೆಚ್ಚು ಜನಪ್ರಿಯರು ಅನ್ನುವ ಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದು ಕಡೆ ಡಬ್ಬಿಂಗ್ ಬ್ಯಾನ್ ಮಾಡಿ, ರಿಮೇಕು, ರಿಮಿಕ್ಸು ತರದ ಸಿನೆಮಾಗಳನ್ನೇ ಮಾಡಿ ಮಾಡಿ ಕನ್ನಡಿಗರು ಕನ್ನಡ ಚಿತ್ರಗಳಿಂದಲೇ ದೂರ ಸರಿದು ಪರ ಭಾಷೆಯತ್ತ ವಲಸೆ ಹೋಗುವಂತೆಯೂ ನಮ್ಮ ಉದ್ಯಮ ನೋಡಿಕೊಂಡಿದೆ. ಹೊಸ ಕತೆ, ಹೊಸ ಐಡಿಯಾ ಇಟ್ಕೊಂಡು ಉದ್ಯಮಕ್ಕೆ ಬಂದವರಿಗೆ ಇಲ್ಲಿನ ಕಾರ್ಟೆಲ್ ಗಳನ್ನು ಮೀರಿ ಬೆಳೆಯುವ ಅವಕಾಶವೇ ಇಲ್ಲದಿದ್ದರಿಂದ ಹೊಸ ಪ್ರತಿಭೆಗಳೂ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಚಿತ್ರೋದ್ಯಮಕ್ಕೆ ಬರಲೂ ಇಲ್ಲ, ಬಂದವರು ಕೆಲಸವಿಲ್ಲದೇ ಕೊರಗುತ್ತಿರುವ, ಇಲ್ಲವೇ ಹೊಟ್ಟೆಪಾಡಿಗೆ ಅದೇ ರಿಮೇಕ್, ರಿಮಿಕ್ಸ್ ಸಿನೆಮಾ ಒಪ್ಪಿಕೊಂಡ ಹಲವು ಉದಾಹರಣೆಗಳಿವೆ. ಇವೆಲ್ಲ ಒಟ್ಟಾಗಿ ಈಗ rangiಏನಾಗುತ್ತಿದೆ ಅಂದರೆ ಪರಭಾಷೆಯ ಸಿನೆಮಾವೊಂದು ಕರ್ನಾಟಕದ ಇರುವ ಆರು ನೂರು ಚಿತ್ರಮಂದಿರಗಳಲ್ಲಿ ಇನ್ನೂರು ಚಿತ್ರಮಂದಿರವನ್ನು ಕಿತ್ತುಕೊಂಡು ರಂಗೀತರಂಗ ತರದ ಅಪರೂಪದ ಚಿತ್ರವನ್ನು ಓಡಿಸುವ ಹಂತಕ್ಕೆ ತಲುಪುತ್ತಿದೆ. ಇಷ್ಟಾದರೂ ಇನ್ನೂ ಉದ್ಯಮವನ್ನು ಒಂದು ಪ್ರೊಫೆಶನಲ್ ಆದ ಉದ್ದಿಮೆಯಾಗದಂತೆ ತಡೆಯುತ್ತಿರುವ ಡಬ್ಬಿಂಗ್ ಬ್ಯಾನ್ ಬಗ್ಗೆ ಉದ್ಯಮದ ಮಂದಿಯ ನಿಲುವು ಬದಲಾಗಿಲ್ಲ. ದಿನೇ ದಿನೇ ಕನ್ನಡಿಗರು ಕನ್ನಡ ಚಿತ್ರಗಳಿಂದಲೇ ದೂರ ಸರಿದರೆ ಕನ್ನಡ ಚಿತ್ರೋದ್ಯಮ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವ ಸ್ಥಿತಿ ತಲುಪಲು ಹೆಚ್ಚು ದಿನ ಬೇಕಾಗದು.

ಡಬ್ಬಿಂಗ್ ಬ್ಯಾನ್ ಒಮ್ಮೆ ಹೋದರೆ ಜಿಡ್ಡುಗಟ್ಟಿರುವ ಉದ್ಯಮದ ಒಂದಿಷ್ಟು ಕೊಳೆ ತೊಳೆದು ಕನ್ನಡ ಚಿತ್ರೋದ್ಯಮ ಸ್ವಚ್ಛವಾಗುವ ಸಾಧ್ಯತೆ ಇದೆ. ಅದು ಸ್ಪರ್ಧೆಗೂ, ಹೊಸ ಬಗೆಯ ಕತೆಗಳಿಗೂ, ಹೊಸ ಪ್ರತಿಭೆಗಳಿಗೂ ಅವಕಾಶ ಮಾಡಿಕೊಡುವ ಸುಧಾರಣೆಯಾಗಬಹುದು. ಅದೊಂದೇ ಉಳಿದಿರುವ ಹಾದಿ. #RemoveDubbingBan

Posted in ಕನ್ನಡ, ಡಬ್ಬಿಂಗ್ | ನಿಮ್ಮ ಟಿಪ್ಪಣಿ ಬರೆಯಿರಿ

ಕನ್ನಡದ ವಿಜ್ಞಾನದ ಬರಹಗಳಲ್ಲಿ ಪದಬಳಕೆಯ ಸಮಸ್ಯೆಗಳು 1 – ಪದಕಾಂಡಗಳು

ವಿಜ್ಞಾನದ ಬರಹಗಳನ್ನು ಕನ್ನಡದಲ್ಲಿ ಓದಿದವರಿಗೆ ಪದಗಳ ತೊಡಕು ಮತ್ತು ಗೊಂದಲಗಳ ಅರಿವಿರುತ್ತದೆ. ಮೊದಲೇ ವಿಜ್ಞಾನದ ವಿಷಯಗಳು ತೊಡಕಿನದ್ದಾಗಿರುವ ಕಾರಣ ಅವನ್ನು ಓದಿ ತಿಳಿಯುವುದು ಸುಲಭದ ಕೆಲಸವೇನೂ ಅಲ್ಲ. ವಿಷಯದ ಆಳಕ್ಕೆ ಇಳಿದಂತೆ ಈ ತೊಡಕು, ಗೊಂದಲಗಳು ಹೆಚ್ಚಾಗುತ್ತಲೇ ಹೋಗುತ್ತವೆ. ಆದ್ದರಿಂದ ತಿಳಿಯಾಗಿ, ನೇರವಾಗಿ, ಗೊಂದಲಗಳಿಲ್ಲದೆ, ಓದುಗರಿಗೆ ಅರ್ಥವಾಗುವಂತೆ, ತಿಳಿಸಬೇಕಾದ ವಿಷಯಗಳನ್ನು ಪದಗಳು ತಿಳಿಸಿದರೆ ವಿಜ್ಞಾನವನ್ನು ಓದಿ ತಿಳಿಯುವುದು ಸುಲಭವಾಗುತ್ತದೆ. ಆದರೆ ಇಂದಿನ ಕನ್ನಡದ ವಿಜ್ಞಾನದ ಬರಹಗಳಲ್ಲಿ ಪದಗಳೇ ಹೆಚ್ಚಿನ ಗೊಂದಲಗಳನ್ನು ಒಡ್ಡುತ್ತವೆ. ಹಾಗಾಗಿ ಕನ್ನಡ ಬರಹದ ಮೂಲಕ ವಿಜ್ಞಾನವನ್ನು ಓದಿ ತಿಳಿಯುವುದರಲ್ಲಿ ಬಹಳಷ್ಟು ತೊಡಕುಗಳುಂಟಾಗಿವೆ.

ಇದಕ್ಕೆ ಒಂದು ಮುಖ್ಯವಾದ ಕಾರಣವೇನೆಂದರೆ ಕನ್ನಡದಲ್ಲಿ ವಿಷಯವನ್ನು ತಿಳಿಸುವಾಗ, ಅಗತ್ಯವಿಲ್ಲದಿರುವಲ್ಲೂ ಸಂಸ್ಕೃತದ ಪದಗಳು ಮತ್ತು ಪದರೂಪಗಳನ್ನು ಬಳಸುವುದು. ಆದರೆ ಹೀಗೆ ಬೇಡದ ಕಡೆಯೆಲ್ಲಾ ಸಂಸ್ಕೃತದ ಪದಗಳನ್ನು, ಪದರೂಪಗಳನ್ನು ಬಳಸುವ ಬದಲು, ಕನ್ನಡದ ಓದುಗರಿಗೆ ಸುಲಭವಾಗಿ ತಿಳಿಯಬಲ್ಲ ಕನ್ನಡದ್ದೇ ಪದಗಳನ್ನು ಬಳಸಿದರೆ ವಿಜ್ಞಾನದ ಬರಹಗಳನ್ನು ಸುಲಭವಾಗಿಸಬಹುದೆಂಬುದನ್ನು ಡಾ. ಡಿ. ಎನ್. ಶಂಕರ ಬಟ್ಟರು ತೋರಿಸಿಕೊಟ್ಟಿದ್ದಾರೆ. ಇಂದಿನ ವಿಜ್ಞಾನದ ಬರಹಗಳ ಹಲವು ತೊಂದರೆಗಳಲ್ಲಿ, ಪಾರಿಭಾಷಿಕ ಪದಗಳಲ್ಲಿ ಕನ್ನಡ ಪದಕಾಂಡಗಳನ್ನು ಬಳಸದಿರುವುದೂ ಒಂದು. ಇಲ್ಲಿ ಕೆಳಗೆ ಕೊಟ್ಟಿರುವ ಉದಾಹರಣೆಗಳನ್ನು ಒಮ್ಮೆ ಗಮನಿಸೋಣ:

ಅಧಿಚಕ್ರ

ಅಧೋರಚನೆ

ಪುನಶ್ಶೋಷಣೆ

ರಕ್ತಾಭ

ಕೀವುಯುಕ್ತ

ಮೇಲೆ ನೀಡಿರುವಂತಹ ಸಂಸ್ಕೃತ (ಇಲ್ಲವೇ ಇಂಗ್ಲಿಶ್) ಪದಗಳನ್ನು ಬಳಸಲೇಬೇಕಾದಾಗ ಅವುಗಳಲ್ಲಿ ಬಳಸಿರುವ ಸಂಸ್ಕೃತದ ಪದಕಾಂಡಗಳ ಬದಲಾಗಿ ಕನ್ನಡದ್ದೇ ಪದಕಾಂಡಗಳನ್ನು ಬಳಸಿದರೆ ಗೊಂದಲಗಳನ್ನು ಆದಷ್ಟೂ ಕಡಿಮೆ ಮಾಡಬಹುದು. ಮೇಲಿನ ಉದಾಹರಣೆಗಳಲ್ಲಿ ನೀಡಿರುವ ಅಧಿ, ಅಧಃ, ಪುನಃ, ಆಭ, ಯುಕ್ತ ಎಂಬಂತಹ ಪದಕಾಂಡಗಳ ಬದಲಾಗಿ ಕನ್ನಡದವೇ ಆದ ಮೇಲು (ಮೇಲ್), ಕೆಳ, ಮರು, ಅಂತಹ, ಇರುವ ಎಂಬ ಪದಕಾಂಡಗಳನ್ನು ಬಳಸಬಹುದು. ಈ ಬಗೆಯ ಕನ್ನಡದ ಪದಕಾಂಡಗಳನ್ನು ಹೊಂದಿರುವ ಪದಗಳು ಓದುಗರಿಗೆ ಹೆಚ್ಚು ಹತ್ತಿರವಾಗುತ್ತವೆ. ಹೇಗೆ ಎಂಬುದನ್ನು ಕೆಳಗಿನ ಈ ಉದಾಹರಣೆಗಳನ್ನು ಗಮನಿಸಿದಾಗ ತಿಳಿಯುತ್ತದೆ.

ಇಂದಿನ ಪದಬಳಕೆಗಳು ಸರಳಗೊಳಿಸಿದ ಪದಬಳಕೆಗಳು
ಆಂತರಿಕ ಶಕ್ತಿ ಒಳಶಕ್ತಿ
ಆಂತರಿಕ ಸ್ರಾವ ಒಳಸ್ರಾವ
ಅಧಸ್ತರ ಕೆಳಸ್ತರ
ಅಧಶ್ಚರ್ಮ ಕೆಳಚರ್ಮ
ಅಧೋರಚನೆ ಕೆಳರಚನೆ
ಅಧಿಪೊರೆ ಮೇಲ್ಪೋರೆ
ಅಧಿಚಕ್ರ ಮೇಲ್ಚಕ್ರ
ಅಧಿರಚನೆ ಮೆಲ್ರಚನೆ
ನವಕೇಂಬ್ರಿಯನ್ ಹೊಸಕೇಂಬ್ರಿಯನ್
ನವಡಾರ್ವಿನಿಸಂ ಹೊಸಡಾರ್ವಿನಿಸಂ
ನವಜೀವವಿಜ್ಞಾನ ಹೊಸಜೀವವಿಜ್ಞಾನ
ಪುನರ್ ನಿರೂಪಣೆ ಮರುನಿರೂಪಣೆ
ಪುನಸ್ಸಂಯೋಜಿತ ಮರುಸಂಯೋಜಿತ
ಪುನರ್ಯಾಚನೆ ಮರುಯಾಚನೆ
ಪುನಶ್ಶೋಷಣೆ ಮರುಶೋಷಣೆ
ಕೀವುಯುಕ್ತ ಕೀವಿರುವ
ರೋಮಯುಕ್ತ ರೋಮವಿರುವ
ಮುದ್ರೆಯುಕ್ತ ಮುದ್ರೆಯಿರುವ
ರಕ್ತಾಭ ರಕ್ತದಂತಹ
ಕ್ಯಾನ್ಸರಾಭ ಕ್ಯಾನ್ಸರ್‌ನಂತಹ
ಏಕವೇಲೆನ್ಸೀಯ ಒರ್ವೇಲೆನ್ಸೀಯ
ತ್ರಿವೇಲೆನ್ಸೀಯ ಮೂವೇಲೆನ್ಸೀಯ
ಚತುರ್ವೇಲೆನ್ಸೀಯ ನಾಲ್ವೇಲೆನ್ಸೀಯ

ಕನ್ನಡದ್ದೇ ಆದ ‘ಹೊಸ’, ‘ಮರು’, ‘ಅಂತಹ’ ಎಂಬ ಪದಗಳು ಮತ್ತು ಪದರೂಪಗಳು ಓದುಗರಿಗೆ ಹೆಚ್ಚು ಹತ್ತಿರವಾಗಬಲ್ಲವಲ್ಲದೆ, ಅಧಶ್ಚರ್ಮ, ಅಧೋರಚನೆ, ಪುನಸ್ಸಂಯೋಜಿತ, ಪುನಶ್ಶೋಷಣೆ ಮುಂತಾದ ಪದಗಳಲ್ಲಿ ಬರುವ, ನೇರವಾಗಿ ತಿಳಿಯಲಾರದ ಸಂಸ್ಕೃತದ ಸಂಧಿ ರೂಪಗಳ ಸಮಸ್ಯೆಯನ್ನೂ ನೀಗಿಸಬಹುದು. ‘ಚತುರ್ವೇಲೆನ್ಸೀಯ’ ಎಂಬ ಪದದಲ್ಲಿ ಬರುವ ‘ಚತುರ್’ ಎಂಬ ಎಣಿಕೆಯನ್ನು ಸೂಚಿಸುವ ಪದಗಳ ಬದಲಾಗಿ, ಕನ್ನಡದ ನಾಲ್ ಇಲ್ಲವೇ ನಾಲ್ಕು ಎಂಬಂತಹ ಪದಗಳನ್ನೇ ಬಳಸಿದಾಗ ಹೆಚ್ಚು ತಿಳಿಯಾಗಿರುತ್ತದೆ. ಎಣಿಕೆಯು ಹೆಚ್ಚಾದಂತೆಲ್ಲ ಕನ್ನಡ ಪದಗಳ ಬಳಕೆಯ ಸರಳತೆ ತಿಳಿಯಾಗುತ್ತದೆ. ಉದಾಹರಣೆಗೆ, ಅಷ್ಟಾದಶ ಎಂದು ಬಳಸುವ ಬದಲು ‘ಹದಿನೆಂಟು’ ಎಂದೇ ಬಳಸಿದರೆ ಹಲವು ಮಂದಿಗೆ ಗೊಂದಲಗಳು ಕಡಿಮೆಯಾಗುತ್ತವೆ.

ಈ ಬಗೆಯ ಪದಕಾಂಡಗಳ ಸಮಸ್ಯೆ ಇದ್ದ ಹಾಗೆ ವಿಜ್ಞಾನ ಬರಹಗಳಲ್ಲಿ ಹಲವು ಸಮಸ್ಯೆಗಳಿವೆ. ಡಾ. ಡಿ. ಎನ್. ಶಂಕರ ಬಟ್ಟರು ಇಂತಹ ಹಲವು ಸಮಸ್ಯೆಗಳನ್ನು ತೋರಿಸಿಕೊಟ್ಟು ಅವನ್ನು ಬಗೆಹರಿಸುವುದು ಹೇಗೆ ಎಂಬುದನ್ನು, ತಮ್ಮ ‘ಕನ್ನಡ ಬರಹವನ್ನು ಸರಿಪಡಿಸೋಣ’ ಎಂಬ ಪುಸ್ತಕದಲ್ಲಿ ತಿಳಿಸಿದ್ದಾರೆ. ಮುಂದಿನ ಬರಹಗಳಲ್ಲಿ ಇವುಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳೋಣ.

Posted in ಕನ್ನಡ, ನುಡಿಯರಿಮೆ | ನಿಮ್ಮ ಟಿಪ್ಪಣಿ ಬರೆಯಿರಿ

ನಮಗೇನು ಬೇಕು? Self rule or dependent rule?

ಸಹಕಾರಿ ತತ್ವದ ಒಕ್ಕೂಟ ವ್ಯವಸ್ಥೆ ಅನ್ನುವ ಪದಗಳು ಮೋದಿ ಸರ್ಕಾರ ಬಂದಾಗಿನಿಂದ ಹೆಚ್ಚೆಚ್ಚು ಚಾಲನೆಯಲ್ಲಿವೆ. 14ನೇ ಹಣಕಾಸು ಆಯೋಗದ ವರದಿಯನ್ನು ಜಾರಿಗೊಳಿಸುವ ಮೂಲಕ ಕೇಂದ್ರದಿಂದ ರಾಜ್ಯಕ್ಕೆ ವರ್ಗಾವಣೆಯಾಗುವ ತೆರಿಗೆ ಹಣದ ಪ್ರಮಾಣವನ್ನು 32ರಿಂದ 42 ಪ್ರತಿಶತಕ್ಕೆ ಏರಿಸಲಾಗಿರುವುದು ಮೋದಿ ಸರ್ಕಾರ ರಾಜ್ಯಗಳ ಪರ ಕೈಗೊಂಡ ದೊಡ್ಡ ನಿರ್ಧಾರವೆಂದೇ ಬಿಂಬಿತವಾಗಿದೆ. ಆದರೆ ಇದರ ಬೆನ್ನಲ್ಲೇ ಹಲವಾರು ವಿಷಯಗಳಲ್ಲಿ ರಾಜ್ಯ ಸರ್ಕಾರಕ್ಕೆ ಬರುವ ಆದಾಯದ ಮೇಲೆ ಕತ್ತರಿ ಹಾಕಿ, ಆ ಆದಾಯದ ಮೂಲವನ್ನು ಕೇಂದ್ರದ ತೆಕ್ಕೆಗೆ ತೆಗೆದುಕೊಳ್ಳುವ ನಡೆಗಳು ಒಕ್ಕೂಟ ವ್ಯವಸ್ಥೆಯ ಬಗ್ಗೆ ಮೋದಿ ಸರ್ಕಾರದ ಬದ್ಧತೆಯ ಬಗ್ಗೆ ಪ್ರಶ್ನೆ ಎತ್ತುವಂತೆ ಮಾಡಿವೆ ಅಂದರೆ ತಪ್ಪಾಗದು.

ಕೆಲವು ನಡೆಗಳು.

ಮೋದಿ ಸರ್ಕಾರ ರಾಜ್ಯಗಳ ಆದಾಯ ಮೂಲಕ್ಕೆ ಕತ್ತರಿ ಹಾಕುವ ಪ್ರಯತ್ನ ಮಾಡುತ್ತಿದೆಯೇ ಅನ್ನುವ ಅನುಮಾನ ಹುಟ್ಟಿಸುವ ಹಲವು ನಡೆಗಳು ಇತ್ತೀಚಿನ ದಿನಗಳಲ್ಲಿ ಕಾಣಬಹುದು. ಅವುಗಳಲ್ಲಿ ಕೆಲವು ಮುಖ್ಯವಾದವು.

  1. ಮೋಟಾರು ವಾಹನ ಕಾಯ್ದೆಯ ಜಾಗದಲ್ಲಿ ಕೇಂದ್ರ ತರಲು ಬಯಸಿರುವ ರಸ್ತೆ ಸಾರಿಗೆ ಮತ್ತು ಸುರಕ್ಷಾ ಕಾಯಿದೆ ಈಗ ರಾಜ್ಯ ಸರ್ಕಾರದ ಬಳಿಯಿರುವ ಆರ್.ಟಿ.ಓ ಇಲಾಖೆಯನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಯೋಜನೆ ಹೊಂದಿದೆ. ರಾಜ್ಯ ಸರ್ಕಾರ ಈಗ ನೀಡುತ್ತಿರುವ ವಾಹನ ನೋಂದಣಿ, ಚಾಲನಾ ಪತ್ರಗಳನ್ನು ಡಿಜಿಟಲೈಸ್ ಮಾಡುವ ಹೆಸರಿನಲ್ಲಿ ರಾಜ್ಯ ಸರ್ಕಾರದ ಕೈಯಿಂದಲೇ ಕಿತ್ತುಕೊಳ್ಳುವ ನಿಲುವುಗಳನ್ನು ಈ ಕಾಯ್ದೆಯ ಕರಡು ಪ್ರತಿಯಲ್ಲಿ ಕಾಣಬಹುದು. ವಾಹನ ನೋಂದಣಿಯಿಂದ ರಾಜ್ಯ ಸರ್ಕಾರಕ್ಕೆ ಬರುವ ತೆರಿಗೆಯನ್ನು ಕೇಂದ್ರ ತನ್ನ ವಶಕ್ಕೆ ಪಡೆದುಕೊಂಡರೆ ರಾಜ್ಯಗಳಿಗೆ ಬಹಳ ದೊಡ್ಡ ರೀತಿಯಲ್ಲಿ ಆದಾಯದ ಕೊರತೆ ಎದುರಾಗಲಿದೆ. ಜನರಿಗೆ ಒಳ್ಳೆಯ ರಸ್ತೆ, ಫುಟಪಾತ್ ಕಲ್ಪಿಸುವ ಜವಾಬ್ದಾರಿ ಹೊಂದಿರುವ ರಾಜ್ಯ ಸರ್ಕಾರಕ್ಕೆ ಅದಕ್ಕೆ ಬೇಕಾದ ಆದಾಯದ ದೊಡ್ಡ ಪಾಲು ದೊರಕುವುದು ವಾಹನ ತೆರಿಗೆಯಿಂದ, ಅದನ್ನೇ ಕಿತ್ತುಕೊಂಡರೆ ರಾಜ್ಯಗಳಿಗೆ ತೀವ್ರ ತೊಂದರೆಯಾಗಲಿದೆ.
  2.  ಜಿ.ಎಸ್.ಟಿ ಕಾಯ್ದೆ ತರಲು ತುದಿಗಾಲಲ್ಲಿ ನಿಂತಿರುವ ಕೇಂದ್ರ, ಕೇಂದ್ರ ಜಿ.ಎಸ್.ಟಿ ವ್ಯಾಪ್ತಿಗೆ ಪೆಟ್ರೋಲಿಯಂ ಉತ್ಪನ್ನಗಳ ಮಾರಾಟವನ್ನು ಸೇರಿಸಬೇಕು ಎಂದು ನಿಂತಿದೆ. ಪೆಟ್ರೋಲಿಯಂ ಉತ್ಪನ್ನಗಳ ಮಾರಾಟದ ಮೇಲಿನ ತೆರಿಗೆ ಇಂದು ರಾಜ್ಯಗಳ ಬಹುದೊಡ್ಡ ಆದಾಯ ಮೂಲವಾಗಿದೆ. ಇದನ್ನು ಕಿತ್ತುಕೊಂಡರೆ ರಾಜ್ಯಗಳಿಗೆ ಆದಾಯದ ಕೊರತೆ ದೊಡ್ಡ ಮಟ್ಟದಲ್ಲೇ ಕಾಡಲಿದೆ. ಅಲ್ಲದೇ ಹತ್ತಿ, ಎಣ್ಣೆ, ಸಕ್ಕರೆ, ಬಟ್ಟೆ, ತಂಬಾಕು, ಬೇಳೆ ಕಾಳುವಿನಂತಹ ಉತ್ಪನ್ನಗಳನ್ನು ಘೋಷಿತ ಸರಕು ಅನ್ನುವ ವ್ಯಾಪ್ತಿಗೆ ತರುವ ಕೇಂದ್ರದ ನಿರ್ಧಾರವೇನಾದರೂ ಜಾರಿಗೆ ಬಂದರೆ ಈ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸುವ ಹಕ್ಕು ಕೇವಲ ಕೇಂದ್ರಕ್ಕೆ ಮಾತ್ರ ದೊರೆಯಲಿದೆ. ಇದನ್ನು ಜಿ.ಎಸ್.ಟಿ ಸರಿಯಾಗಿ ಪರಿಹರಿಸಿರುವ ಬಗ್ಗೆ ಮಾಹಿತಿಯಿಲ್ಲ.
  3. ಹೆಂಡ-ಸಾರಾಯಿ ಮೇಲೆ ತಡೆಯೊಡ್ಡಬೇಕು ಅನ್ನುವ ನಿಲುವು ಹೊಂದಿರುವ ಕೇಂದ್ರ ಅದಕ್ಕಾಗಿ ಆಯ್ದುಕೊಳ್ಳಬೇಕೆಂದಿರುವ ದಾರಿ ತಪ್ಪಾಗಿದೆ ಅನ್ನಬಹುದು. ಹೆಂಡದ ಮೇಲೆ ತೆರಿಗೆ ವಿಧಿಸುವ ಹಕ್ಕು ಈಗ ರಾಜ್ಯ ಸರ್ಕಾರಗಳ ಕೈಯಲ್ಲಿದೆ. ಆದರೆ ಕೇಂದ್ರಕ್ಕೆ ಸಲ್ಲಿತವಾಗಿರುವ ಹಲವು ಶಿಫಾರಸ್ಸುಗಳಲ್ಲಿ ಈ ಅಧಿಕಾರವನ್ನು ರಾಜ್ಯಗಳ ಕೈಯಿಂದ ಕಿತ್ತು ಕೇಂದ್ರವೇ ತೆಗೆದುಕೊಳ್ಳಬೇಕು ಅನ್ನುವ ಮಾತುಗಳು ಕೇಳಿ ಬಂದಿವೆ. ಇದೊಂದು ವೇಳೆ ಜಾರಿಗೆ ಬಂದರೆ ಹೆಂಡದ ಮೇಲಿನ ತೆರಿಗೆಯೂ ರಾಜ್ಯಗಳ ಕೈತಪ್ಪಲಿದೆ.

ನಮಗೇನು ಬೇಕು? Self rule or dependent rule?

ಹೀಗೆ ರಾಜ್ಯಗಳ ಬಳಿಯಿರುವ ತೆರಿಗೆ ವಿಧಿಸುವ ಅಧಿಕಾರವೆಲ್ಲವನ್ನು ಒಂದೊಂದಾಗಿ ಮೊಟಕುಗೊಳಿಸುತ್ತ ಹೋದರೆ ಆಗುವ ಪರಿಣಾಮವೇನು? ಆರ್ಥಿಕವಾಗಿ ಇನ್ನಷ್ಟು ಬಲಶಾಲಿಯಾಗುವ ಕೇಂದ್ರದ ಬಳಿ ಭಿಕ್ಷೆ ಪಾತ್ರೆ ಹಿಡಿದುಕೊಂಡು ರಾಜ್ಯಗಳು ಯಾವತ್ತಿಗೂ ದೆಹಲಿಯ ಹಂಗಿನಲ್ಲೇ ಸರ್ಕಾರ ನಡೆಸಬೇಕಾದ ಸ್ಥಿತಿ ಒದಗಬಹುದು. ರಾಜ್ಯಗಳಿಂದ ಪಡೆದ ಹಣವನ್ನು ಕೇಂದ್ರ ಮರಳಿ ರಾಜ್ಯಗಳಿಗೆ ಹಂಚಬಹುದು, ಆದರೆ ನಮ್ಮ ಹಣವನ್ನು ನಾವೇ ಗಳಿಸಿ, ಖರ್ಚು ಮಾಡುವುದಕ್ಕೂ, ನಮ್ಮದೇ ಹಣವನ್ನು ಇನ್ನೊಬ್ಬರಿಗೆ ಕೊಟ್ಟು, ಅವರಿಂದ ಮತ್ತೆ ಪಡೆದು ಅವರ ಹಂಗಿನಲ್ಲಿ ಖರ್ಚು ಮಾಡುವುದಕ್ಕೂ ವ್ಯತ್ಯಾಸವಿದೆಯಲ್ಲವೇ? ಮೊದಲನೆಯದ್ದು self rule. ಎರಡನೆಯದ್ದು dependent rule. ನಮ್ಮ ಆಯ್ಕೆ ಯಾವುದಾಗಿರಬೇಕು?

Posted in ಒಕ್ಕೂಟ ವ್ಯವಸ್ಥೆ | ನಿಮ್ಮ ಟಿಪ್ಪಣಿ ಬರೆಯಿರಿ

ಭಾರತದಲ್ಲಿ ದೊಡ್ಡ ರಾಜ್ಯಗಳೇಕಿರಬೇಕು ?

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಿಸಲು ಟೊಂಕ ಕಟ್ಟಿ ನಿಂತಿರುವ ನಡಹಳ್ಳಿಯವರು ಇದಕ್ಕಾಗಿ ಮೂವತ್ತಕ್ಕೂ ಹೆಚ್ಚು ಸಂಘಸಂಸ್ಥೆಗಳನ್ನು ಸ್ಥಾಪಿಸುವ ಮಾತನ್ನಾಡಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಏಳಿಗೆಯಲ್ಲಿನ ಕೊರತೆಗಳಿಗೆ ಪ್ರತ್ಯೇಕ ರಾಜ್ಯವೇ ಪರಿಹಾರ ಅನ್ನುವ ಅತೀ ಸರಳೀಕರಿಸಿದ ವಾದವೊಂದನ್ನು ಹೊತ್ತು ಹೊರಟಿರುವ ಅವರು ಅತ್ಯಂತ ಮಹತ್ವಾಕಾಂಕ್ಷಿ ಅನ್ನುವುದು ಅವರ ರಾಜಕೀಯ ಜೀವನ ಮತ್ತು ಬಿಜಾಪುರ ಜಿಲ್ಲೆಯ ರಾಜಕೀಯವನ್ನು ಹತ್ತಿರದಿಂದ ಕಂಡವರು ಹೇಳಿಯಾರು. ಇವತ್ತಿಗೆ, ಏಳಿಗೆ ಇಲ್ಲವೇ ಪ್ರತ್ಯೇಕತೆ ಅನ್ನುವ ವಾದ ಅವರದ್ದಾಗಿದ್ದರೂ ಆಳದಲ್ಲಿ ಕರ್ನಾಟಕದ ಕೆ.ಸಿ.ಆರ್ ಆಗುವ ಉಮೇದು ಅವರಲ್ಲಿದೆ ಅನ್ನುವಂತೆಯೇ ತೋರುತ್ತಿದೆ. ಪ್ರತ್ಯೇಕತೆಯ ವಿಷಯದಲ್ಲಿ ಅವರು ಎತ್ತಿರುವ ಪ್ರಶ್ನೆಗಳೆಲ್ಲವೂ “ದಕ್ಷಿಣ ಕರ್ನಾಟಕ ಮತ್ತು ಅದರ ರಾಜಕಾರಣಿಗಳು ಉತ್ತರ ಕರ್ನಾಟಕದ ವಿರೋಧಿಗಳು” ಎಂಬಂತೆ ಬಿಂಬಿಸುವ ಮತ್ತು ಆ ಮೂಲಕ ಒಬ್ಬ ಸಾಮಾನ್ಯ ಶತ್ರುವನ್ನು ಹುಟ್ಟುವ ಹಾಕುವ ಪ್ರಯತ್ನದಂತಿದೆ. ಇಂತಹ ಮನಸ್ಸೊಡೆಯುವ ಪ್ರಯತ್ನಕ್ಕೆ ಮುಂದಾಗುವ ಮುನ್ನ ಇವತ್ತಿರುವ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ದೊಡ್ಡ ರಾಜ್ಯಗಳೇಕಿರಬೇಕು ಅನ್ನುವುದನ್ನು ಅವರು ಅರ್ಥ ಮಾಡಿಕೊಳ್ಳಬೇಕಿದೆ.

ಉತ್ತರ ಕರ್ನಾಟಕ ಅಂತ ಒಂದಿದೆಯೇ?

ದೊಡ್ಡ ರಾಜ್ಯಗಳೇಕಿರಬೇಕು ಅನ್ನುವ ಚರ್ಚೆಗೆ ಹೋಗುವ ಮುನ್ನ, ನಡಹಳ್ಳಿಯವರು ಪ್ರತಿಪಾದಿಸುತ್ತಿರುವ 13 ಜಿಲ್ಲೆಗಳ ಉತ್ತರ ಕರ್ನಾಟಕ ಅನ್ನುವ ಒಂದು ಭೌಗೋಳಿಕ ಗುರುತು ನಿಜಕ್ಕೂ ಇದೆಯೇ ಅನ್ನುವ ಪ್ರಶ್ನೆ ಎತ್ತಬೇಕಿದೆ. ಯಾವುದೇ ಒಂದು ಭೂಭಾಗವನ್ನು ಒಂದು ಗುರುತಿನಿಂದ ಕರೆಯಬೇಕೆಂದರೆ ಆ ಗುರುತಿಗೆ ಒಂದು ಇತಿಹಾಸವಿರಬೇಕಲ್ಲವೇ? ಈಗ ಉತ್ತರ ಕರ್ನಾಟಕದ ಭಾಗವೆಂದು ಪ್ರತ್ಯೇಕತಾವಾದಿಗಳು ಕರೆಯುತ್ತಿರುವ ಬೀದರಿಗೂ ಉತ್ತರ ಕನ್ನಡ ಜಿಲ್ಲೆಗೂ ಏನಾದರೂ ಸಂಬಂಧವಿದೆಯೇ? ಎರಡು ಜಿಲ್ಲೆಗಳ ಪರಿಸರ, ಆಚರಣೆ, ಆಹಾರ, ಸಂಸ್ಕೃತಿ ಹೀಗೆ ಎಲ್ಲದರಲ್ಲೂ ಸಾಕಷ್ಟು ಭಿನ್ನತೆ ಇದೆ. ಇತಿಹಾಸದಲ್ಲಿ ಇಣುಕಿ ನೋಡಿದರೆ ನಿಜವಾದ ಉತ್ತರ ಕರ್ನಾಟಕ ಯಾವುದು ಅಂತ ಹುಡುಕಿದರೆ ಇವತ್ತಿನ ಪೂರ್ತಿ ಮಹಾರಾಷ್ಟ್ರ ರಾಜ್ಯವೇ ಕಾಣಿಸೀತು. ಬೀದರಿಗೂ, ಉತ್ತರ ಕನ್ನಡಕ್ಕೂ, ಬೆಂಗಳೂರಿಗೂ, ಬಳ್ಳಾರಿಗೂ ಏನಾದರೂ ಸಾಮಾನ್ಯವಾದುದು ಇದೆಯೆಂದರೆ ಅದು ಕನ್ನಡ ಮಾತ್ರ. ಆ ಕಾರಣಕ್ಕಾಗಿಯೇ ಕನ್ನಡದ ಸುತ್ತ ಏಕೀಕರಣದ ಚಳುವಳಿಯಾಗಿತ್ತು. ಈಗ ಕನ್ನಡದ ಕೊಂಡಿಯೇ ಬೇಡ ಅನ್ನುವುದಾದರೆ ಕರ್ನಾಟಕವನ್ನು ಒಂದಲ್ಲ ಮೂವತ್ತು ಭಾಗ ಮಾಡಿದರೂ ಅದರಲ್ಲೇನು ವಿಶೇಷವಿರುವುದಿಲ್ಲ ಅಲ್ಲವೇ? ಉತ್ತರ ಕರ್ನಾಟಕ ಅನ್ನುವ ಪ್ರಜ್ಞೆ ಐತಿಹಾಸಿಕವಾದ ಹಿನ್ನೆಲೆಯನ್ನೇನಾದರೂ ಹೊಂದಿದ್ದರೆ ಕಲಬುರಗಿ ಮತ್ತು ಧಾರವಾಡ ಎರಡೂ ಜಿಲ್ಲೆಗಳು ಹೈಕೋರ್ಟ್ ಪೀಠ ತಮ್ಮಲ್ಲೇ ಆಗಲಿ ಎಂದು ವಾದಿಸುತ್ತಿರಲಿಲ್ಲ ಅಥವಾ ಈಗ ಐಐಟಿ ಧಾರವಾಡಕ್ಕೆ ಬೇಡ ರಾಯಚೂರಿಗೆ ಕೊಡಿ ಎಂದು ಮಲ್ಲಿಕಾರ್ಜುನ ಖರ್ಗೆಯಂತಹ ನಾಯಕರು ಕೇಳುತ್ತಿರಲಿಲ್ಲ ಅಲ್ಲವೇ? ಈ ಸದ್ಯದ ನಡಹಳ್ಳಿಯವರ ಪ್ರಯತ್ನವೆಲ್ಲವೂ “ಉತ್ತರ ಕರ್ನಾಟಕ” ಅನ್ನುವ ಇಲ್ಲದ ಅಸ್ತಿತ್ವವೊಂದನ್ನು ಜನರ ಮನಸ್ಸಲ್ಲಿ ಬಿತ್ತುವ ಪ್ರಯತ್ನದಂತಿದೆ.

ಭಾರತ ಒಕ್ಕೂಟದಲ್ಲಿ ದೊಡ್ಡ ರಾಜ್ಯಗಳೇಕಿರಬೇಕು?

ಚಿಕ್ಕ ರಾಜ್ಯಗಳು ಆಡಳಿತಕ್ಕೆ ಸುಲಭ ಅನ್ನುವ ವಾದ ಮಾಡುವವರು ಭಾರತದ ಒಕ್ಕೂಟ ವ್ಯವಸ್ಥೆಯನ್ನು, ಅಲ್ಲಿ ರಾಜ್ಯ ಮತ್ತು ಕೇಂದ್ರಗಳ ನಡುವೆ ಮಾಡಲಾಗಿರುವ ಅಧಿಕಾರ ಹಂಚಿಕೆಯನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಭಾರತದ ಸಂವಿಧಾನ ರಾಜ್ಯ ಮತ್ತು ಕೇಂದ್ರಗಳ ನಡುವೆ ಅಧಿಕಾರ ಹಂಚಿಕೆಯನ್ನು ಕೇಂದ್ರ, ರಾಜ್ಯ ಮತ್ತು ಜಂಟಿ ಪಟ್ಟಿ ಅನ್ನುವ ಮೂರು ಹೆಸರಿನಲ್ಲಿ ಹಂಚಿದೆ. ಜಂಟಿ ಪಟ್ಟಿಯಲ್ಲಿರುವ ಎಲ್ಲ ವಿಷಯಗಳ ಬಗ್ಗೆ ಕಾನೂನು ರೂಪಿಸುವ ಅಧಿಕಾರ ರಾಜ್ಯ ಮತ್ತು ಕೇಂದ್ರ ಎರಡಕ್ಕೂ ಇದ್ದರೂ ರಾಜ್ಯ-ಕೇಂದ್ರದ ನಡುವೆ ಭಿನ್ನಾಭಿಪ್ರಾಯ ಬಂದಾಗ ಕೇಂದ್ರದ ಮಾತೇ ಅಂತಿಮ ಎಂದು ಬರೆಯಲಾಗಿದೆ. ಜೊತೆಯಲ್ಲೇ ಯಾವಾಗ ಬೇಕಿದ್ದರೂ ರಾಜ್ಯ ಪಟ್ಟಿಯಲ್ಲಿರುವ ವಿಷಯವನ್ನು ಕೇಂದ್ರ ತನ್ನ ಹಿಡಿತಕ್ಕೆ ತೆಗೆದುಕೊಂಡು ಜಂಟಿ ಪಟ್ಟಿಗೆ ಸೇರಿಸುವ ಅಧಿಕಾರ ಹೊಂದಿದೆ. ಇದರ ಜೊತೆ ಆರ್ಥಿಕ ಸಂಪನ್ಮೂಲದ ಮೇಲೆ ಬಹುಪಾಲು ಹಿಡಿತ ಕೇಂದ್ರ ಸರ್ಕಾರಕ್ಕೆ ಮಾತ್ರವಿದೆ. ಇದರ ಜೊತೆಯಲ್ಲೇ ಜನಸಂಖ್ಯೆಯ ಆಧಾರದ ಮೇಲೆ ಸಂಸತ್ತಿನಲ್ಲಿ ರಾಜಕೀಯ ಪ್ರತಿನಿಧಿತ್ವ ಕಲ್ಪಿಸಿರುವ ಕಾರಣದಿಂದಾಗಿ ದೆಹಲಿಯಲ್ಲಿ ಹಿಂದಿ ಭಾಷಿಕರ ಪ್ರಾಬಲ್ಯವಿದೆ. ಇಂತಹದೊಂದು ವ್ಯವಸ್ಥೆಯಲ್ಲಿ ದೆಹಲಿಯಿಂದ ಒಂದು ರಾಜ್ಯಕ್ಕೆ ಬೇಕಿರುವ ಯೋಜನೆ, ಸಂಪನ್ಮೂಲ ತರುವಲ್ಲಿ ಒಂದು ರಾಜ್ಯದ ಸಂಸದರ ಸಂಖ್ಯೆ ಎಷ್ಟು ದೊಡ್ಡದಿದೆ ಅನ್ನುವುದು ಬಹಳ ಮುಖ್ಯವಾಗುತ್ತೆ. ಒಂದರಿಂದ ಹತ್ತು ಸಂಸದರಿರುವ ಚಿಕ್ಕ ರಾಜ್ಯಗಳಿಗೆ ದೆಹಲಿಯಲ್ಲಿ ಯಾವ ದನಿಯೂ ಇಲ್ಲ. ತೆಲಂಗಾಣವಾದ ನಂತರ ಎರಡೂ ತೆಲುಗು ರಾಜ್ಯಗಳು ದೆಹಲಿಯಲ್ಲಿ ಇದ್ದ ಎಲ್ಲ ಪ್ರಭಾವವನ್ನು ಕಳೆದುಕೊಂಡು ಅಪ್ರಸ್ತುತಗೊಂಡಿರುವುದನ್ನು ಇಲ್ಲಿ ನೆನೆಯಬೇಕು. ಈ ಆಯಾಮ ಪ್ರತ್ಯೇಕತೆಯ ಚರ್ಚೆಯಲ್ಲೆಲ್ಲೂ ಕರ್ನಾಟಕದಲ್ಲಿ ಕಾಣಬರುತ್ತಿಲ್ಲ. ಇದಲ್ಲದೇ ಚಿಕ್ಕ ರಾಜ್ಯವಾದಾಕ್ಷಣ ಆಡಳಿತ ಸುಲಭ, ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳನ್ನು ಸುಧಾರಿಸುವುದು ಸುಲಭ ಎಂದು ಬಿಂಬಿಸುವವರು ಭಾರತದಲ್ಲಿ ಹೊಸತಾಗಿ ಅಸ್ತಿತ್ವಕ್ಕೆ ಬಂದ ಚಿಕ್ಕ ರಾಜ್ಯಗಳ ಸ್ಥಿತಿಯನ್ನು ಅರಿಯಬೇಕಿದೆ. 2000ದಲ್ಲಿ ಹೊಸತಾಗಿ ಅಸ್ತಿತ್ವಕ್ಕೆ ಬಂದ ಜಾರ್ಖಂಡ್, ಛತ್ತೀಸಗಢ್, ಉತ್ತರಾಖಂಡ್ ಈ ಮೂರೂ ರಾಜ್ಯಗಳು ಆಡಳಿತಕ್ಕೆ ಕೇಂದ್ರದ ಹಣ ಸಹಾಯವನ್ನೇ ನೆಚ್ಚಿಕೊಂಡಿವೆ. 2006-2013ರ ನಡುವೆ ಛತ್ತೀಸಗಢ್,ಜಾರ್ಖಂಡ್ ಮತ್ತು ಉತ್ತರಾಖಂಡ್ ರಾಜ್ಯಗಳ ಆದಾಯದ ಪ್ರತಿ ನೂರು ರೂಪಾಯಿಯಲ್ಲಿ ಕೇಂದ್ರ ಕೊಟ್ಟ ಪಾಲು ಕ್ರಮವಾಗಿ 44.07, 56.74 ಮತ್ತು 55.89 ರೂಪಾಯಿಗಳಾಗಿತ್ತು. ಚಿಕ್ಕ ರಾಜ್ಯವಾದಷ್ಟು ದೆಹಲಿಯ ಹಿಡಿತದಲ್ಲಿ ಸರ್ಕಾರ ನಡೆಸಬೇಕಾಗುವುದು ಅನ್ನುವುದನ್ನು ಇವು ಸಾಬೀತು ಮಾಡಿವೆ. ಅಲ್ಲದೇ ಇದೇ ಅವಧಿಯಲ್ಲಿ ಛತ್ತೀಸಗಢ್ ರಾಜ್ಯದಲ್ಲಿ ನಕ್ಸಲ್ ಹಾವಳಿ ತೀವ್ರ ಸ್ವರೂಪದಲ್ಲಿ ಹೆಚ್ಚಾಗಿ, ರಾಜ್ಯದ ಕೆಲವು ಭಾಗಗಳಲ್ಲಿ ಸರ್ಕಾರದ ಅಸ್ತಿತ್ವವೇ ಇಲ್ಲದಿರುವ ಬೆಳವಣಿಗೆಯುಂಟಾಗಿದ್ದರೆ, ಜಾರ್ಖಂಡ್ ರಾಜ್ಯದಲ್ಲಿ ನಕ್ಸಲ್ ಹಾವಳಿಯ ಜೊತೆಗೆ ತೀವ್ರ ಸ್ವರೂಪದ ರಾಜಕೀಯ ಅಸ್ಥಿರತೆ ಉಂಟಾಗಿ 14 ವರ್ಷಗಳಲ್ಲಿ 10 ಬಾರಿ ಮುಖ್ಯಮಂತ್ರಿ ಬದಲಾವಣೆ ಮತ್ತು ಮೂರು ಬಾರಿ ರಾಷ್ಟ್ರಪತಿ ಆಡಳಿತ ಹೇರಲಾಗಿತ್ತು ಅನ್ನುವುದನ್ನು ಇಲ್ಲಿ ಪ್ರತ್ಯೇಕತೆಯ ರಾಗ ಹಾಡುವ ನಾಯಕರು ಗಮನಿಸಬೇಕಿದೆ. ನಮ್ಮೊಳಗಿನ ಸಮಸ್ಯೆಗಳನ್ನು ನಾವೇ ಕೂತು ಬಗೆಹರಿಸಿಕೊಳ್ಳುವ ಜಾಣ್ಮೆ ತೋರದೆ ಇವತ್ತಿನ ರಾಜಕೀಯ ಲಾಭದ ಲೆಕ್ಕಾಚಾರದಲ್ಲಿ ಕರ್ನಾಟಕ ಒಡೆದರೆ ಅದು ಕನ್ನಡಿಗರೆಲ್ಲರಿಗೂ ತೊಂದರೆ ಮಾಡುವಂತದ್ದು ಅನ್ನುವುದನ್ನು ಪ್ರತ್ಯೇಕತಾವಾದಿಗಳು ಅರಿತರೆ ಒಳ್ಳೆಯದು.

———————————————XXXXX —————————————————

ಜಾಗತೀಕರಣದ ಈ ಹೊತ್ತಿನಲ್ಲಿ ಕಳೆದ ಎರಡು ಸಾವಿರ ವರ್ಷಗಳಲ್ಲೇ ಎದುರಿಸದಂತಹ ಸವಾಲುಗಳನ್ನು ಕನ್ನಡ ಎದುರಿಸುತ್ತಿದೆ. ಕನ್ನಡ ಕಲಿಕೆಯ ಭಾಷೆಯ ಪಟ್ಟದಿಂದ ಜಾರುತ್ತಿದೆ. ಕನ್ನಡಕ್ಕಿರುವ ಕಸುವು, ವ್ಯಾಪ್ತಿ ಹಿಗ್ಗದೇ ಕುಗ್ಗುತ್ತಿದೆ, ತಂತ್ರಜ್ಞಾನವನ್ನು ಒಗ್ಗಿಸಿಕೊಳ್ಳುವಲ್ಲಿ ಸೋಲುತ್ತಿದೆ, ಅದರೊಟ್ಟಿಗೆ ಪ್ರತ್ಯೇಕತೆಯ ಸವಾಲುಗಳು ಎದುರಾಗಿವೆ. ಇಂತಹ ಸಂದರ್ಭದಲ್ಲಿ ಜಗತ್ತಿನ ಇತರೆ ಭಾಷಿಕರು ಇಂತಹ ಸವಾಲುಗಳನ್ನು ಹೇಗೆ ಎದುರಿಸಿದರು, ಅವರಿಂದ ನಾವೇನು ಕಲಿಯಬಹುದು ಅನ್ನುವುದನ್ನು ಹೇಳುವ ಪ್ರಯತ್ನವಾಗಿ ಶುರುವಾಗಿದ್ದು ಉದಯವಾಣಿಯ “ಕನ್ನಡ ಜಗತ್ತು” ಅನ್ನುವ ಅಂಕಣ. 77 ವಾರಗಳ ನಿರಂತರ ಬರವಣಿಗೆಯ ನಂತರ ಕೆಲವು ರಿಸರ್ಚ್ ಯೋಜನೆಗಳತ್ತ ಸಮಯ ಮತ್ತು ಗಮನ ಕೊಡಲು ಅಂಕಣ ಬರಹಕ್ಕೆ ಒಂದು ಬಿಡುವು ತೆಗೆದುಕೊಳ್ಳುತ್ತಿರುವೆ. ಹೀಗಾಗಿ ಕನ್ನಡ ಜಗತ್ತಿನ ಪ್ರಯಾಣಕ್ಕೆ ಇಂದು ತೆರೆ ಬೀಳಲಿದೆ. ನನ್ನ ಮೇಲೆ ನಂಬಿಕೆಯಿಟ್ಟು ಈ ಅಂಕಣವನ್ನು ಕೊಟ್ಟ ಉದಯವಾಣಿಯ ಸಂಪಾದಕರಾದ ಶ್ರೀ.ರವಿ ಹೆಗಡೆಯವರಿಗೂ, ಅಂಕಣದ ಉಸ್ತುವಾರಿ ಹೊತ್ತಿದ್ದ ಶ್ರೀ.ಮಹಾಬಲ ಅವರಿಗೂ ಈ ಹೊತ್ತಿನಲ್ಲಿ ಮನದಾಳದಿಂದ ವಂದಿಸುವೆ.

Posted in ಕನ್ನಡ, ಕರ್ನಾಟಕ | ನಿಮ್ಮ ಟಿಪ್ಪಣಿ ಬರೆಯಿರಿ