ಇತ್ತೀಚೆಗೆ ನಡೆದ ಬೆಂಗಳೂರು ನಗರ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿನಲ್ಲಿ ಹೊರ ಬಂದಿರುವ ಸ್ಮರಣ ಸಂಚಿಕೆಯೊಂದಕ್ಕೆ ಕನ್ನಡದಲ್ಲಿ ಗ್ರಾಹಕ ಚಳುವಳಿ ಯಾಕೆ ಮುಖ್ಯ ಮತ್ತು ಮುಂದಿನ ದಿನಗಳಲ್ಲಿ ಅದು ಹೇಗೆ ಕನ್ನಡಕ್ಕೆ ಬಲ ತುಂಬುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಲಿದೆ ಅನ್ನುವ ಬಗ್ಗೆ ಮುನ್ನೋಟ ಬ್ಲಾಗಿನ ಸಂಪಾದಕರಾದ ವಸಂತ ಶೆಟ್ಟಿ ಅವರೊಂದು ವಿಶೇಷ ಅಂಕಣ ಬರೆದಿದ್ದರು. ಅದನ್ನು ಹೆಚ್ಚು ಓದುಗರಿಗೆ ತಲುಪಿಸುವ ನಿಟ್ಟಿನಲ್ಲಿ ಮುನ್ನೋಟ ಬ್ಲಾಗಿನಲ್ಲಿ ಹಂಚಿಕೊಳ್ಳಲಾಗಿದೆ.
ಭಾರತದಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆಯ ಹೊತ್ತಿನಲ್ಲಿ ಇದ್ದ ಎರಡು ಆಶಯಗಳೇನೆಂದರೆ ಆಯಾ ನುಡಿಯಲ್ಲೇ ಅಲ್ಲಿನ ಜನರ ಕಲಿಕೆಯಾಗಬೇಕು ಮತ್ತು ಆಯಾ ನುಡಿಯಲ್ಲೇ ಸರ್ಕಾರದ ಆಡಳಿತ ಜನರಿಗೆ ತಲುಪುವಂತಾಗಬೇಕು ಅನ್ನುವುದಾಗಿತ್ತು. ಆಗಿನ ಸಂದರ್ಭದಲ್ಲಿ ಮಾರುಕಟ್ಟೆ ಅನ್ನುವ ಕಲ್ಪನೆ ಇಂದಿನಷ್ಟು ವ್ಯಾಪಕವಾದುದಾಗಿರಲಿಲ್ಲ. ಯಾಕೆಂದರೆ ಸರ್ಕಾರವೇ ಅರ್ಥ ವ್ಯವಸ್ಥೆಯ ಎಲ್ಲ ಹಂತವನ್ನು ನಿಯಂತ್ರಿಸಬೇಕು ಮತ್ತು ಆ ಮೂಲಕ ಒಂದು ನಾಡಿನ ಜನರ ಬದುಕಿನ ಎಲ್ಲ ಅಗತ್ಯಗಳನ್ನು ಸರ್ಕಾರವೇ ಪೂರೈಸಬೇಕು ಅನ್ನುವ ಚಿಂತನೆ ಅಂದಿನ ಜನರಲ್ಲೂ, ಜನನಾಯಕರಲ್ಲೂ ಒಂದೇ ಪ್ರಮಾಣದಲ್ಲಿತ್ತು. ಅರ್ಥ ವ್ಯವಸ್ಥೆಯ ಎಲ್ಲ ಮಜಲುಗಳನ್ನು ಸರ್ಕಾರವೇ ನಿಯಂತ್ರಿಸುವ ನಿಲುವಿನಿಂದಾಗಿ ಖಾಸಗಿ ಬಂಡವಾಳವಾಗಲಿ, ಖಾಸಗಿ ಸಂಸ್ಥೆಗಳಾಗಲಿ ಜನರ ಬದುಕನ್ನು ತೀವ್ರವಾಗಿ ತಲುಪುವ, ಪ್ರಭಾವಿಸುವ ವ್ಯವಸ್ಥೆಗಳಿರಲಿಲ್ಲ. ಇಂತಹದೊಂದು ವ್ಯವಸ್ಥೆಯಲ್ಲಿ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವ್ಯಾಪಕ ವಲಸೆಯಾಗಲಿ, ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಖಾಸಗಿ ಸಂಸ್ಥೆಗಳ ಇರುವಿಕೆಯಾಗಲಿ ಇರಲಿಲ್ಲ. ಆಯಾ ರಾಜ್ಯದಲ್ಲಿ ಮಾರುಕಟ್ಟೆಯಲ್ಲಿ ಅಂದಿಗೆ ಲಭ್ಯವಿದ್ದ ಎಲ್ಲ ತರದ ಗ್ರಾಹಕ ಸೇವೆಗಳು ಹೆಚ್ಚು ಕಡಿಮೆ ಅಲ್ಲಿನ ನುಡಿಯಲ್ಲೇ ದೊರಕುವ ದಿನಗಳಿದ್ದವು. ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಂಡರೆ ಜಾಗತೀಕರಣಕ್ಕೆ ಭಾರತ ತೆರೆದುಕೊಳ್ಳುವವರೆಗೂ ನಮ್ಮ ಬಹುತೇಕ ನಗರ-ಪಟ್ಟಣಗಳಲ್ಲಿನ ಮಾರುಕಟ್ಟೆಯಲ್ಲಿ ಕನ್ನಡದಲ್ಲಿ ಎಲ್ಲ ತರದ ಗ್ರಾಹಕ ಸೇವೆಯನ್ನು ಪಡೆಯುವುದು ಅಂತಹ ದೊಡ್ಡ ಸವಾಲಾಗಿರಲಿಲ್ಲ. ಆದರೆ ಇದು ಬಹಳ ದೊಡ್ಡ ರೀತಿಯಲ್ಲಿ ಬದಲಾದದ್ದು ಭಾರತ ಜಾಗತೀಕರಣಕ್ಕೆ ತೆರೆದುಕೊಂಡ ನಂತರ.
ಜಾಗತೀಕರಣಕ್ಕೆ ಭಾರತ ತೆರೆದುಕೊಳ್ಳುತ್ತಿದ್ದಂತೆಯೇ ಮೂರು ಮುಖ್ಯ ಬದಲಾವಣೆಗಳು ನಮ್ಮ ಸಮಾಜದಲ್ಲಿ ಆಗಿವೆ. ಮೊದಲನೆಯದ್ದು, ಅರ್ಥ ವ್ಯವಸ್ಥೆಯಲ್ಲಿ ಸ
ರ್ಕಾರದ ಪಾತ್ರ ಕುಸಿಯುತ್ತ, ಖಾಸಗಿ ಸಂಸ್ಥೆ ಮತ್ತು ಬಂಡವಾಳದ ಪಾತ್ರ ಬೆಳೆಯುತ್ತ ಬಂದಿದೆ. ಎರಡನೆಯದ್ದು, ತಂತ್ರಜ್ಞಾನದಲ್ಲಾಗುತ್ತಿರುವ ಕ್ಷಿಪ್ರ ಬದಲಾವಣೆಗಳು ಭಾಷೆಯ ಬಳಕೆಯ ವ್ಯಾಪ್ತಿ, ಬಗೆಯನ್ನು ಕಂಡು ಕೇಳರಿಯದ ರೀತಿಯಲ್ಲಿ ಬದಲಾಯಿಸಿದೆ. ಮೂರನೆಯದ್ದು, ಉತ್ತಮ ಆರ್ಥಿಕ ನಿರ್ವಹಣೆ ತೋರುತ್ತಿದ್ದ, ಪ್ರಗತಿಶೀಲ ರಾಜ್ಯಗಳಾದ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡಿನಂತಹ ರಾಜ್ಯಗಳ ನಗರ ಪ್ರದೇಶಗಳಿಗೆ ದೇಶದ ಇತರೆ ಭಾಗಗಳಿಂದ ಬಹಳ ದೊಡ್ಡ ಪ್ರಮಾಣದಲ್ಲಿ ವಲಸೆಯಾಗುವ ಮೂಲಕ ಅಲ್ಲಿನ ಸ್ಥಳೀಯ ಜನಲಕ್ಷಣ ಅಂದರೆ ಡೆಮಾಗ್ರಫಿಯ ಚಹರೆಯೇ ಬದಲಾಗುತ್ತಿದೆ. ಈ ಮೂರೂ ಬದಲಾವಣೆಗಳು ಕಳೆದ ಎರಡು ಸಾವಿರ ವರ್ಷಗಳಲ್ಲೇ ಎದುರಿಸದಿರುವಂತಹ ಸವಾಲುಗಳನ್ನು ಕನ್ನಡದ ಮುಂದೆ ತಂದು ನಿಲ್ಲಿಸಿದೆ ಮತ್ತು ಅವುಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ನಾವು ಎಡವಿದರೆ ಅಳಿವಿನಂಚಿನಲ್ಲಿರುವ ನುಡಿಗಳಲ್ಲಿ ಒಂದಾಗುವ ಅಪಾಯ ಇಂದಲ್ಲದಿದ್ದರೂ ಇನ್ನೊಂದು ಐವತ್ತು ವರ್ಷಗಳಲ್ಲಿ ಕಾಣುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.
ಈ ಮೂರು ಬದಲಾವಣೆಗಳ ಪೀಠಿಕೆ ಯಾಕೆ ಮುಖ್ಯವೆಂದರೆ ಈ ಮೂರು ಬದಲಾವಣೆಗಳನ್ನು ಅರಗಿಸಿಕೊಂಡು ಮಾರುಕಟ್ಟೆಯಲ್ಲಿ ಮತ್ತು ಸಮಾಜದಲ್ಲಿ ಕನ್ನಡ ಸಬಲವಾಗಿ ತಲೆ ಎತ್ತಿ ನಿಲ್ಲುವಂತೆ ಮಾಡುವಲ್ಲಿ “ಕನ್ನಡ ಕೇಂದ್ರಿತ ಗ್ರಾಹಕ ಚಳುವಳಿ”ಯ ಪಾತ್ರ ಅತ್ಯಂತ ಮುಖ್ಯವಾದುದಾಗಿದೆ. ಈ ಮೂರು ಬದಲಾವಣೆಗಳನ್ನು ಕೊಂಚ ವಿವರವಾಗಿ ನೋಡಬೇಕು.
ಮಾರುಕಟ್ಟೆಯಲ್ಲಿ ಖಾಸಗಿ ಬಂಡವಾಳದ ಪ್ರಭಾವ
ಆರ್ಥಿಕ ಸುಧಾರಣೆಗಳಿಗೆ ಭಾರತ ತೆರೆದುಕೊಂಡ ನಂತರ ಮಾರುಕಟ್ಟೆಯಲ್ಲಿ ಸರ್ಕಾರದ ಹಿಡಿತ ಕಡಿಮೆಯಾಗುತ್ತ ಬಂದಿದೆ. ಒಂದು ಕಾಲದಲ್ಲಿ ಮನೆಯೊಂದಕ್ಕೆ ಟೆಲಿಫೋನ್ ಸಂಪರ್ಕ ಪಡೆಯಬೇಕು ಎಂದರೆ ಸರ್ಕಾರಿ ಸ್ವಾಮ್ಯದ ಕಂಪನಿಯೊಂದರಿಂದ ಮಾತ್ರವೇ ಇದು ಲಭ್ಯವಿತ್ತು. ಜೊತೆಯಲ್ಲೇ ತಿಂಗಳುಗಟ್ಟಲೆ ಕಾದು ಒಂದು ಸಂಪರ್ಕ ಪಡೆಯಬೇಕಾದ ಪರಿಸ್ಥಿತಿ ಇತ್ತು. ಒಂದೊಮ್ಮೆ ಟೆಲಿಫೋನ್ ಕೆಟ್ಟು ನಿಂತರೆ ಅದನ್ನು ಸರಿ ಮಾಡಿಸಿಕೊಳ್ಳುವುದು ಒಂದು ಯುದ್ಧ ಮಾಡಿದಷ್ಟೇ ಶ್ರಮದ ಅನುಭವವಾಗಿತ್ತು. ನಿಮ್ಮ ಬಿಲ್ ಸರಿಯಾದ ಹೊತ್ತಿನಲ್ಲಿ ಪಾವತಿಸಿದ್ದರೂ ಕೆಟ್ಟು ನಿಂತ ಫೋನ್ ರಿಪೇರಿಯಾಗಲು ತಿಂಗಳುಗಳೇ ಬೇಕಿದ್ದವು. ಕೊಂಚ ಕೈ ಬಿಸಿ ಮಾಡದೇ ರಿಪೇರಿಯಾಗುತ್ತಿದ್ದದ್ದು ಅಪರೂಪವೆಂಬಂತ್ತಿತ್ತು. ಒಟ್ಟಾರೆ ದುಡ್ಡು ಕೊಟ್ಟವನು ಗ್ರಾಹಕ ಅನ್ನುವ ಕಲ್ಪನೆಯಾಗಲಿ, ಗ್ರಾಹಕನಿಗೆ ತನ್ನ ಹಣಕ್ಕೆ ತಕ್ಕೆ ಸೇವೆಗಳನ್ನು ಪಡೆಯುವ ಹಕ್ಕಿದೆಯೆನ್ನುವುದಾಗಲಿ ಅಸ್ತಿತ್ವದಲ್ಲೇ ಇಲ್ಲದ ದಿನಗಳು ಆಗ ಇದ್ದವು. ಆದರೆ ಈಗ ಆ ಸ್ಥಿತಿಯಿದೆಯೇ? ಖಾಸಗಿ ಸಂಸ್ಥೆಗಳಿಗೂ ಟೆಲಿಫೋನ್ ಸೇವೆ ನೀಡಲು ಅವಕಾಶ ಕಲ್ಪಿಸಿದ ನಂತರ ಇಪ್ಪತ್ತನಾಲ್ಕು ಗಂಟೆಗಳಲ್ಲಿ ನಿಮ್ಮ ಕೈಗೆಟುಕುವ ದರದಲ್ಲಿ ಫೋನ್ ಸಂಪರ್ಕ ಕೊಡಲು ಸಂಸ್ಥೆಗಳೇ ನಿಮ್ಮ ಬೆನ್ನು ಬೀಳುವಂತಹ ದಿನಗಳು ಈಗಿವೆ. ಟೆಲಿಫೋನ್ ಸೇವೆ ಇಲ್ಲಿ ಒಂದು ಉದಾಹರಣೆಯಷ್ಟೇ. ಜನಸಾಮಾನ್ಯರು ಬಳಸುವ ಪ್ರತಿಯೊಂದು ವಿಷಯದಲ್ಲೂ ಇಂತಹದೊಂದು ಆಯ್ಕೆ ದೊರೆಯುವ ದಿನಗಳು ಇಂದು ನಮ್ಮ ಮುಂದಿವೆ. ಇದು ಅನುಕೂಲವೇ ಸರಿ, ಆದರೆ ದಿಢೀರ್ ಆಗಿ ಸಾವಿರಾರು ಸಂಖ್ಯೆಯಲ್ಲಿ ಬಂದ ಖಾಸಗಿ ಸಂಸ್ಥೆಗಳ ಉತ್ಪನ್ನಗಳು, ಸೇವೆಗಳು ಕನ್ನಡದಲ್ಲಿ ಎಲ್ಲ ತರದ ಗ್ರಾಹಕ ಸೇವೆ ನೀಡಲು ಮುಂದಾಗಲಿಲ್ಲ ಮತ್ತು ಹಾಗೇ ಮುಂದಾಗುವಂತೆ ಅವರನ್ನು ಒತ್ತಾಯಿಸುವ ಯಾವುದೇ ಕಾನೂನಿನ ಬೆಂಬಲವೂ ಕನ್ನಡಕ್ಕಿರಲಿಲ್ಲ. ವ್ಯಾಪಾರಕ್ಕೆ ಇಳಿಯುವ ಪ್ರತಿಯೊಬ್ಬರು ಎಷ್ಟು ಸಾಧ್ಯವೋ ಅಷ್ಟು ಹಣ ಉಳಿಸಲು ಪ್ರಯತ್ನಿಸುತ್ತಾರೆ ಅನ್ನುವುದು ಸಹಜ. ಅಂತೆಯೇ ಭಾರತಕ್ಕೆ ಇಂಗ್ಲಿಷ್, ಹಿಂದಿ ಎರಡೇ ನುಡಿಗಳು ಸಾಕು ಅನ್ನುವ ಕೇಂದ್ರ ಸರ್ಕಾರದ ನಿಯಮದ ಗುರಾಣಿಯನ್ನೇ ಹಿಡಿದು ಇತರೆಲ್ಲ ಭಾಷೆಗಳನ್ನು ಕಡೆಗಣಿಸುವ ಕೆಲಸವನ್ನು ಖಾಸಗಿ ಸಂಸ್ಥೆಗಳು ಮಾಡುತ್ತ ಬಂದಿವೆ. ಕರ್ನಾಟಕದಲ್ಲಿ ವ್ಯಾಪಾರಕ್ಕಿಳಿದ ಸಂಸ್ಥೆಗಳು ತಮ್ಮ ಉತ್ಪನ್ನಗಳ ವಿವರವಾಗಲಿ, ಗ್ರಾಹಕ ಸೇವೆಯಾಗಲಿ ಕನ್ನಡದಲ್ಲಿ ಕಡ್ಡಾಯವಾಗಿ ನೀಡತಕ್ಕದ್ದು ಅನ್ನುವ ಕಾನೂನು ಕರ್ನಾಟಕದ ಸರ್ಕಾರವೂ ಮಾಡಿಲ್ಲ. ಅಂತಹದೊಂದು ಕಾನೂನು ಕರ್ನಾಟಕದ ಸರ್ಕಾರ ಮಾಡಿದರೂ (ಉದಾಹರಣೆಗೆ ನಾಮಫಲಕಗಳಲ್ಲಿ ಕನ್ನಡವಿರಬೇಕು ಅನ್ನುವ ನಿಯಮ) ಅದನ್ನು ಕೋರ್ಟಿನಲ್ಲಿ ಪ್ರಶ್ನಿಸಿ ಖಾಸಗಿ ಸಂಸ್ಥೆಗಳು ಗೆದ್ದುಕೊಂಡಂತಹ ಉದಾಹರಣೆ ನಮ್ಮ ಮುಂದಿದೆ. ಇದು ಜಾಗತೀಕರಣದ ದೆಸೆಯಿಂದ ನಮ್ಮ ಮಾರುಕಟ್ಟೆಗಳಲ್ಲಿ ಖಾಸಗಿ ಸಂಸ್ಥೆಗಳು ಬಲಗೊಂಡ ನಂತರ ಕನ್ನಡಕ್ಕೆ ಎದುರಾಗಿರುವ ಮೊದಲ ಸವಾಲು.
ತಂತ್ರಜ್ಞಾನದ ಕ್ರಾಂತಿ ಮತ್ತು ಕನ್ನಡ
ಜಾಗತೀಕರಣದ ನಂತರ ಕನ್ನಡದ ಮುಂದೆ ಬಂದಿರುವ ಎರಡನೆಯ ಮುಖ್ಯ ಸವಾಲು ತಂತ್ರಜ್ಞಾನದಲ್ಲಾಗಿರುವ ಕ್ಷಿಪ್ರ ಬದಲಾವಣೆ. ಕಳೆದ ಇಪ್ಪತ್ತು ವರ್ಷಗಳನ್ನು ಗಮನಿಸಿದರೆ ವ್ಯಕ್ತಿಯೊಬ್ಬನ ಜೀವನವನ್ನು ತಂತ್ರಜ್ಞಾನ ಯಾವ ಯಾವ ರೀತಿಯಲ್ಲಿ ಪ್ರಭಾವಿಸಿದೆ ಅನ್ನುವುದನ್ನು ಗುರುತಿಸುವುದೇ ಕಷ್ಟವೆನ್ನಬಹುದು. ಅಂತಹದೊಂದು ಸರ್ವಾಂತರ್ಯಾಮಿ ಸ್ವರೂಪದಲ್ಲಿ ತಂತ್ರಜ್ಞಾನದ ಬದಲಾವಣೆ ನಮ್ಮ ಸಮಾಜವನ್ನು ತಟ್ಟಿದೆ. ಕಂಪ್ಯೂಟರು, ಮೊಬೈಲು, ಇಂಟರ್ ನೆಟ್, ಎ.ಟಿ.ಎಮ್, ಐ.ವಿ.ಆರ್, ಟ್ಯಾಬ್ಲೆಟು, ಖಾಸಗಿ ವಾಹಿನಿಗಳು, ಎಫ್.ಎಮ್ ರೇಡಿಯೊ ಹೀಗೆ ಹಲವು ವಿಧದಲ್ಲಿ ವ್ಯಕ್ತಿಯ ಕೈ ಸೇರಿರುವ ತಂತ್ರಜ್ಞಾನದ ಪರಿಕರಗಳು ಆತ ಭಾಷೆಯನ್ನು ಬಳಸುತ್ತಿದ್ದ ಬಗೆ ಮತ್ತು ವ್ಯಾಪ್ತಿಯನ್ನು ಹಿಗ್ಗಿಸಿವೆ. ಇಪ್ಪತ್ತು ವರ್ಷದ ಹಿಂದೆ ಪತ್ರಿಕೆ, ರೇಡಿಯೊ, ಟಿವಿ, ಸಿನೆಮಾ, ರಂಗಭೂಮಿ ಹೀಗೆ ಕೆಲವು ವಿಷಯಗಳಲ್ಲಿ ಕನ್ನಡ ಬಳಸಲ್ಪಡುತ್ತಿತ್ತು, ಆದರೆ ಜಾಗತೀಕರಣದ ಪರಿಣಾಮವಾಗಿ ಪ್ರಪಂಚದ ಯಾವ ಮೂಲೆಯಲ್ಲೇ ನಡೆಯುವ ತಂತ್ರಜ್ಞಾನದ ಬೆಳವಣಿಗೆ ರಾತ್ರಿ ಬೆಳಗಾಗುವುದರೊಳಗೆ ನಮ್ಮ ನಾಡನ್ನು ಪ್ರವೇಶಿಸುವ ದಿನಗಳನ್ನು ನೋಡುತ್ತಿದ್ದೇವೆ. ದುರದೃಷ್ಟವಶಾತ್ ಈ ಬದಲಾವಣೆ ಆಗುವ ಹೊತ್ತಲ್ಲಿ ಇವೆಲ್ಲವೂ ಕನ್ನಡದಲ್ಲೇ ಸಾಧ್ಯವಾಗುವಂತಹ ಬದಲಾವಣೆಗಳು ಆಗಲಿಲ್ಲ. ಇದರ ಪರಿಣಾಮವಾಗಿ ಮೊಬೈಲು, ಕಂಪ್ಯೂಟರು, ಇಂಟರ್ ನೆಟ್, ಹೀಗೆ ಹಲವು ಹೊಸ ಸಾಧ್ಯತೆಗಳನ್ನು ಮೊದಲ ದಿನದಿಂದಲೇ ಕನ್ನಡದಲ್ಲಿ ಚೆನ್ನಾಗಿ ಬಳಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ದಿನೇ ದಿನೇ ಭಾಷೆ ಬಳಸುವ ಹೊಸ ಹೊಸ ಸಾಧ್ಯತೆಗಳಲ್ಲಿ ಕನ್ನಡ ಹಿಂದೆ ಬೀಳುತ್ತ ಬಂದಿತ್ತು. ಇದರಲ್ಲಿ ಒಂದಿಷ್ಟು ಸಮಸ್ಯೆಗಳಿಗೆ ಸಮುದಾಯದ ಪಾಲ್ಗೊಳ್ಳುವಿಕೆಯ ಯೋಜನೆಗಳು ಪರಿಹಾರವನ್ನು ಕಲ್ಪಿಸಿದವು. ಉದಾಹರಣೆಗೆ ಅಂತರ್ಜಾಲದ ವಿಕ್ಷನರಿ, ವಿಕೀಪಿಡಿಯಾ, ಫೇಸ್ ಬುಕ್ ಕನ್ನಡ ಆಯ್ಕೆ ತರದ ವಿಷಯಗಳನ್ನು ಕನ್ನಡದ ಯುವ ಸಮುದಾಯ ಒಟ್ಟಾಗಿ ಕೆಲಸ ಮಾಡಿ ಕನ್ನಡದಲ್ಲಿ ಸಾಧ್ಯವಾಗಿಸಿತು. ಆದರೆ ವ್ಯಾಪಾರಿ ನೆಲೆಯಲ್ಲಿ ಲಭ್ಯವಿದ್ದ ಮೊಬೈಲ್, ಬ್ಯಾಂಕುಗಳ ಎ.ಟಿ.ಎಮ್, ಐ.ವಿ.ಆರ್, ಖಾಸಗಿ ಎಫ್.ಎಮ್ ವಾಹಿನಿ ಮುಂತಾದ ಸವಲತ್ತುಗಳು ಕೇವಲ ಇಂಗ್ಲಿಷ್ ಇಲ್ಲವೇ ಹಿಂದಿಯಲ್ಲಿ ಮಾತ್ರವೇ ದೊರೆಯುತ್ತಿದ್ದವು. ಕನ್ನಡಕ್ಕಾಗಿ ಯಾರಾದರೂ ಕೇಳಿದರೆ ಕನ್ನಡಕ್ಕೆ ಬೇಡಿಕೆಯಿಲ್ಲ, ಮಾರುಕಟ್ಟೆಯಿಲ್ಲ ಅನ್ನುವ ಸಿದ್ಧ ಉತ್ತರಗಳು ಯಾವತ್ತಿಗೂ ದೊರೆಯುತ್ತಿದ್ದವು. ಇದು ಕನ್ನಡದ ಮುಂದೆ ಹೆಚ್ಚು ವ್ಯಾಪಕವಾದ ಸವಾಲುಗಳನ್ನು ತಂದಂತಹ ಎರಡನೆಯ ಬೆಳವಣಿಗೆಯಾಗಿತ್ತು.
ಅನಿಯಂತ್ರಿತ ವಲಸೆ ಮತ್ತು ಜನಲಕ್ಷಣ ಬದಲಾವಣೆ
ಜಾಗತೀಕರಣದ ದೆಸೆಯಿಂದ ಕನ್ನಡದ ಮುಂದೆ ಬಂದ ಮೂರನೆಯ ದೊಡ್ಡ ಸವಾಲು ಅನಿಯಂತ್ರಿತ ಪರ ಭಾಷಿಕರ ವಲಸೆ ತಂದಿರುವ ಜನಲಕ್ಷಣ ಇಲ್ಲವೇ ಡೆಮಾಗ್ರಫಿ ಬದಲಾವಣೆಯದ್ದು. ಜಾಗತೀಕರಣದ ಬೆನ್ನಲ್ಲೇ ಬೆಂಗಳೂರಿನಂತಹ ನಗರಕ್ಕೆ ಪರ ಭಾಷಿಕರ ಅನಿಯಂತ್ರಿತ ವಲಸೆ ಹರಿದು ಬಂದಿದೆ. ಅಂತಹ ವಲಸೆಯ ಮೇಲೆ ಕರ್ನಾಟಕದ ಸರ್ಕಾರಕ್ಕೆ ಯಾವುದೇ ನಿಯಂತ್ರಣವೂ ಇಲ್ಲ ಮತ್ತು ಹಾಗೆ ಬಂದವರು ಕನ್ನಡ ಕಲಿಯಬೇಕು ಅನ್ನುವುದನ್ನು ಕಡ್ಡಾಯ ಮಾಡುವಂತೆಯೂ ಇಲ್ಲ. ಅಂತಹ ಯಾವುದೇ ಪ್ರಯತ್ನವನ್ನು ಕೋರ್ಟುಗಳು ತಳ್ಳಿ ಹಾಕುತ್ತವೆ. ಇದರಿಂದಾಗಿ ಬೆಂಗಳೂರಿನಂತಹ ಊರುಗಳಲ್ಲಿ ಕನ್ನಡದ ಸಾರ್ವಭೌಮತ್ವಕ್ಕೆ ಕೆಲ ಮಟ್ಟಿಗಿನ ಸವಾಲು ಎದುರಾಗಿರುವುದು ನಿಜ. ಇನ್ನೊಂದೆಡೆ ನಮ್ಮ ನಗರಗಳಿಗೆ ಬರುತ್ತಿರುವ ಹೆಚ್ಚಿನ ವಲಸೆ, ಹೆಚ್ಚು ಸಂಪಾದನೆಯ ಬಿಳಿ ಕಾಲರ್ ಹುದ್ದೆಗಳಿಗಾಗಿ ಆಗುತ್ತಿರುವುದರಿಂದ ಆರ್ಥಿಕವಾಗಿ ಬಲಶಾಲಿಯಾಗಿರುವ ಆದರೆ, ಕನ್ನಡ ಬಾರದ, ಕಲಿಯದ ಪರಭಾಷಿಕರು ನಮ್ಮ ಊರುಗಳಲ್ಲಿ ನೆಲೆಗೊಳ್ಳುತ್ತಿದ್ದಾರೆ. ಅವರ ಮಕ್ಕಳು ಮರಿ ಕನ್ನಡದ ನೆರಳು ತಾಕದಂತೆ ನಮ್ಮ ನೆಲದಲ್ಲೇ ಬೆಳೆಯುತ್ತಿದ್ದಾರೆ. ಅಂತಹ ಎಲ್ಲ ಏರ್ಪಾಡು ಇಂದು ನಮ್ಮ ನಡುವಿದೆ. ಆರ್ಥಿಕವಾಗಿ ಬಲವಾಗಿರುವ ಕಾರಣಕ್ಕೆ ಅವರ ನುಡಿಗಳು ಮಾರುಕಟ್ಟೆಯಲ್ಲಿ ಚಲಾವಣೆಗೆ ಬರುತ್ತಿರುವುದನ್ನು ಕೆಲವು ಕಡೆ ಗಮನಿಸಬಹುದಾಗಿದೆ. ದೊಡ್ಡ ಪ್ರಮಾಣದಲ್ಲಿ ಕನ್ನಡಿಗರು ಇಂತಹ ಕೆಲಸಗಳಲ್ಲಿದ್ದರೂ ತಮ್ಮ ಭಾಷೆಯ ಕುರಿತ ನಿರಭಿಮಾನ, ಕನ್ನಡತನದ ಗುರುತಿನ ಕೊರತೆ ಮುಂತಾದ ಕಾರಣಗಳಿಂದ ಮಾರುಕಟ್ಟೆಯಲ್ಲಿ ಕನ್ನಡ ಸಾಕಷ್ಟು ನೆಮ್ಮದಿಯ ಸ್ಥಾನ ಪಡೆಯುವಲ್ಲಿ ಹಿಂದಿರುವುದನ್ನು ಕಾಣಬಹುದು. ಮಾರುಕಟ್ಟೆಯಲ್ಲಿ ಗ್ರಾಹಕನೇ ದೇವರು ಮತ್ತು ಗ್ರಾಹಕನ ಭಾಷೆಯೇ ದೇವಭಾಷೆಯಂತಿರುವುದರಿಂದ ಅನಿಯಂತ್ರಿತ ವಲಸೆ ಮತ್ತು ಕನ್ನಡಿಗರಲ್ಲಿರುವ ತನ್ನ ಗುರುತಿನ ಬಗೆಗಿನ ಗೊಂದಲಗಳು ಒಟ್ಟಾಗಿ, ನೆಲದ ಭಾಷೆಗಿಂತ ವಲಸಿಗನ ಭಾಷೆಗೆ ಹೆಚ್ಚು ಮನ್ನಣೆ ದೊರೆಯುವ ಕೆಟ್ಟ ಸ್ಥಿತಿ ನಮ್ಮ ನಾಡಿನಲ್ಲಿದೆ. ಇದು ಮಾರುಕಟ್ಟೆಯಲ್ಲಿ ಕನ್ನಡಕ್ಕೆ ದೊಡ್ಡ ಸವಾಲುಗಳನ್ನು ತಂದಿರುವ ಮೂರನೆಯ ಬೆಳವಣಿಗೆ.
ಕನ್ನಡದಲ್ಲಿ ಗ್ರಾಹಕ ಚಳುವಳಿಯೆನ್ನುವ ಫಾಸ್ಟ್ ಫುಡ್ ಅಸ್ತ್ರ!
ಮೇಲಿನ ಮೂರು ಬಗೆಯ ಸವಾಲುಗಳನ್ನು ಗಮನಿಸಿದಾಗ ಇಂದಿರುವ ವ್ಯವಸ್ಥೆಯಲ್ಲಿ ಪೂರ್ತಿಯಾಗಲ್ಲದಿದ್ದರೂ ತಕ್ಕ ಮಟ್ಟಿಗೆ ಅವುಗಳಿಗೆ ಪರಿಹಾರ ರೂಪಿಸಿಕೊಳ್ಳುವಲ್ಲಿ ಕನ್ನಡ ಕೇಂದ್ರಿತ ಗ್ರಾಹಕ ಚಳುವಳಿಯ ಪಾತ್ರ ಅತ್ಯಂತ ಹಿರಿದಿದೆ. ಹಾಗಿದ್ದರೆ ಕನ್ನಡ ಕೇಂದ್ರಿತವಾದ ಗ್ರಾಹಕ ಚಳುವಳಿಯೆಂದರೇನು? ಅದು ಹೇಗೆ ಜಾಗತೀಕರಣದ ಈ ಮೂರು ಸವಾಲುಗಳಿಗೆ ಪರಿಹಾರ ಕಲ್ಪಿಸುವ ಶಕ್ತಿ ಹೊಂದಿದೆ ಅನ್ನುವ ಪ್ರಶ್ನೆಗಳೇಳಬಹುದು. ಕರ್ನಾಟಕದಲ್ಲಿ ದೊರೆಯುವ ಯಾವುದೇ ಉತ್ಪನ್ನ ಇಲ್ಲವೇ ಸೇವೆಯಾಗಿರಲಿ, ಅದು ಸರ್ಕಾರ ಇಲ್ಲವೇ ಯಾವುದೇ ಖಾಸಗಿ ಸಂಸ್ಥೆ ಕೊಡಮಾಡಿರಲಿ, ಅಲ್ಲೆಲ್ಲ ಕನ್ನಡದಲ್ಲಿ ಸಮರ್ಪಕವಾದ ಸೇವೆ ಸಿಗಬೇಕು ಎಂದು ಸಾಮಾನ್ಯ ಕನ್ನಡದ ಗ್ರಾಹಕರು ಒತ್ತಾಯಿಸುವುದೇ ಕನ್ನಡ ಕೇಂದ್ರಿತವಾದ ಗ್ರಾಹಕ ಚಳುವಳಿ. ಇದೊಂದು ಫಾಸ್ಟ್ ಪುಡ್ ಮಾದರಿಯ ಚಳುವಳಿಯೆಂದು ಕರೆಯಬಹುದು. ಹೇಗೆ ನೂಡಲ್ಸಿನಂತಹ ಫಾಸ್ಟ್ ಫುಡ್ ಅನ್ನು ನಿಮಿಷಗಳಲ್ಲೇ ತಯಾರಿಸಬಹುದೋ, ಯಾರು ಬೇಕಾದರೂ ಮಾಡಬಹುದೋ ಮತ್ತು ಅದರ ರುಚಿ ಎಲ್ಲರಿಗೂ ಇಷ್ಟವಾಗುತ್ತೋ, ಕನ್ನಡ ಕೇಂದ್ರಿತ ಗ್ರಾಹಕ ಚಳುವಳಿಯೂ ಅದೇ ಗುಣಗಳನ್ನು ಹೊಂದಿದೆ. ನೀವೇ ನೋಡಿ, ಮಾರುಕಟ್ಟೆಯಲ್ಲಿ ಕನ್ನಡದಲ್ಲಿ ಸೇವೆ ಸಿಕ್ಕಿಲ್ಲ ಎಂದು ದೂರು ಸಲ್ಲಿಸುವ ಕೆಲಸ ನಿಮಿಷಗಳದ್ದು, ಅದನ್ನು ಒಬ್ಬ ಹತ್ತು ರೂಪಾಯಿಗೆ ಪೆನ್ನು ಕೊಂಡುಕೊಳ್ಳುವವನು ಮಾಡಬಹುದು ಇಲ್ಲವೇ ಕೋಟಿ ರೂಪಾಯಿಗೆ ಬೆಂಝ್ ಕಾರ್ ಕೊಂಡುಕೊಳ್ಳುವವನು ಮಾಡಬಹುದು ಮತ್ತು ಆ ಪ್ರಯತ್ನದಿಂದ ಕರ್ನಾಟಕದ ಮಾರುಕಟ್ಟೆಯಲ್ಲಿ ಕನ್ನಡದ ಪರವಾಗಿ ಆಗುವ ಬದಲಾವಣೆಯ ರುಚಿ ಎಡ-ಬಲವೆನ್ನದೇ ಎಲ್ಲ ಸಿದ್ಧಾಂತದ ಕನ್ನಡಿಗರಿಗೂ ಇಷ್ಟವಾಗುವಂತದ್ದು. ಈ ಹೋರಾಟ ಕಳೆದ ಹತ್ತು ವರ್ಷಗಳಿಂದ ಹಂತ ಹಂತವಾಗಿ ಬೆಳೆಯುತ್ತ ಇಂದು ಕನ್ನಡದಲ್ಲಿ ಗ್ರಾಹಕ ಸೇವೆಗಾಗಿ ಒತ್ತಾಯಿಸುವ ಒಂದು ವರ್ಗವೇ ಸೃಷ್ಟಿಯಾಗಿದೆ. ಇಂತಹ ಸಂಘಟಿತ ಗ್ರಾಹಕರ ಒತ್ತಾಯದಿಂದ ಬೆಂಗಳೂರು ಮತ್ತು ಕರ್ನಾಟಕದ ಮಾರುಕಟ್ಟೆಯಲ್ಲಿ ಆಗಿರುವ ನೂರಾರು ಬದಲಾವಣೆಗಳಲ್ಲಿ ಕೆಲವು ಇಲ್ಲಿವೆ.
ಪ್ರಕರಣ ೧: ಸುಮಾರು ಹತ್ತು-ಹನ್ನೆರಡು ವರ್ಷದ ಹಿಂದಿನ ಮಾತು. ಆಗಷ್ಟೇ ಬೆಂಗಳೂರಿಗೆ ಖಾಸಗಿ ಎಫ್.ಎಮ್ ವಾಹಿನಿಗಳ ಪ್ರವೇಶವಾಗಿತ್ತು. ಮೊದಲಿಗೆ ಬಂದ ವಾಹಿನಿಯೊಂದು ಇಂಗ್ಲಿಷ್ ಮಾತು, ಇಂಗ್ಲಿಷ್-ಹಿಂದಿ ಹಾಡುಗಳನ್ನು ಹಾಕುತ್ತ ಕನ್ನಡಕ್ಕೆ ಯಾವುದೇ ಬೆಲೆ ಕೊಡದೇ ಮುಂದುವರೆದಿತ್ತು. ಬೆಂಗಳೂರು ಐಟಿ ಸಿಟಿ, ಕಾಸ್ಮೊಪಾಲಿಟಿನ್ ನಗರ, ಇಲ್ಲಿನ ಯುವಕರಿಗೆ ಕನ್ನಡ ಬೇಡ ಅನ್ನುವ ನಿಲುವಿಗೆ ಅವರು ಬಂದಿದ್ದರು. ಕನ್ನಡದ ಗ್ರಾಹಕರು ಕನ್ನಡ ಹಾಡುಗಳಿಗಾಗಿ ನಿರಂತರವಾಗಿ ಒತ್ತಾಯಿಸಿದರ ಫಲವಾಗಿ ಉಪಕಾರ ಮಾಡಿದಂತೆ ವಾರಕ್ಕೆ ಎರಡು ಗಂಟೆ ಕನ್ನಡ ಹಾಡು ಹಾಕಲು ಮುಂದಾದರು. ಇದನ್ನೇ ಚಾತಕ ಪಕ್ಷಿಯಂತೆ ಕಾದು ಕೇಳುತ್ತಿದ್ದ ಕನ್ನಡಿಗರಿದ್ದರು. ಇದರ ಬೆನ್ನಲ್ಲೇ ಶುರುವಾದ ಇನ್ನೊಂದು ವಾಹಿನಿಯಲ್ಲಿ ಕನ್ನಡ ಮಾತು ಆದ್ರೆ ಹಿಂದಿ ಹಾಡುಗಳನ್ನು ಹಾಕುವ ಸಂಪ್ರದಾಯ ಶುರುವಾಯಿತು. ಆಗ ಕನ್ನಡ ಗ್ರಾಹಕರ ಸಂಘಟಿತವಾದ ಚಳುವಳಿಯೊಂದು ಸದ್ದಿಲ್ಲದೇ ಬೆಂಗಳೂರಿನಲ್ಲಿ ಕೆಲಸ ಮಾಡಿತು. ಆನ್ ಲೈನ್ ಸಹಿ ಸಂಗ್ರಹ ಅಭಿಯಾನವೊಂದರ ಮೂಲಕ ಐದು ಸಾವಿರಕ್ಕೂ ಹೆಚ್ಚು ಜನರು ವಾಹಿನಿಯನ್ನು ಸಂಪೂರ್ಣವಾಗಿ ಕನ್ನಡ ವಾಹಿನಿಯಾಗಿಸಲು ಒತ್ತಾಯ ಮಾಡಿದರು. ರೇಡಿಯೊ ವಾಹಿನಿಗಳಿಗೆ ನಿರಂತರವಾಗಿ ಕನ್ನಡಕ್ಕಿರುವ ಬೇಡಿಕೆಯನ್ನು, ಕನ್ನಡ ಬಳಸಿದರೆ ಹೆಚ್ಚಬಹುದಾದ ವ್ಯಾಪಾರದ ಸಾಧ್ಯತೆಯನ್ನು ಮನವರಿಕೆ ಮಾಡಿಕೊಡುವ ಕೆಲಸಕ್ಕೆ ಕೈ ಹಾಕಿದರು. ಇದರ ಫಲವಾಗಿ ಪ್ರಯೋಗಾರ್ಥವೆಂಬಂತೆ ಒಂದು ವಾಹಿನಿ ಕನ್ನಡಕ್ಕೆ ಬದಲಾಗಿ ತನ್ನನ್ನು ತಾನು ಬೆಂಗಳೂರಿನ ನೂರು ಪ್ರತಿಶತ ಕನ್ನಡ ಎಫ್.ಎಮ್ ವಾಹಿನಿ ಎಂದು ಕರೆದುಕೊಂಡಿತು. ನೋಡ ನೋಡುತ್ತಿದ್ದಂತೆಯೇ ಆ ವಾಹಿನಿಯ ಕೇಳುಗರ ಸಂಖ್ಯೆ ತೀವ್ರ ಗತಿಯಲ್ಲಿ ಏರಿಕೆ ಕಂಡಿತು. ರೇಡಿಯೊ ಕೇಳುಗರ ಸಂಖ್ಯೆಯನ್ನು ಅಳೆಯುವ RAM ರೇಟಿಂಗಿನಲ್ಲಿ ಪ್ರತಿವಾರವೂ ಕನ್ನಡ ವಾಹಿನಿಯೇ ಅತಿ ಹೆಚ್ಚು ಕೇಳುಗರನ್ನು ಹೊಂದಿರುವ ಮಾಹಿತಿ ಹೊರ ಬೀಳತೊಡಗಿತು. ಇದರ ಬೆನ್ನಲ್ಲೇ ಮತ್ತೆರಡು ವಾಹಿನಿಗಳು ಕನ್ನಡವನ್ನು ಅಪ್ಪಿಕೊಂಡವು. ಇಂದು ಸರಿ ಸುಮಾರು ಮೂರು ವಾಹಿನಿಗಳು ಪೂರ್ತಿ ಕನ್ನಡದಲ್ಲಿ ಹಾಡು ಪ್ರಸಾರ ಮಾಡುತ್ತ, ಬೆಂಗಳೂರಿನ ಖಾಸಗಿ ಬಾನುಲಿ ಮಾರುಕಟ್ಟೆಯ 75% ಮಾರುಕಟ್ಟೆಯನ್ನು ಹಿಡಿದುಕೊಂಡು ತಮ್ಮ ವ್ಯಾಪಾರ ಹೆಚ್ಚಿಸಿಕೊಂಡಿವೆ. ಬೆಂಗಳೂರಿನಲ್ಲಿ ಕನ್ನಡಿಗರು ಅಲ್ಪಸಂಖ್ಯಾತರು ಎಂದು ತಾವೂ ನಂಬಿ, ಕನ್ನಡಿಗರನ್ನು ನಂಬಿಸಲು ಪ್ರಯತ್ನಿಸುತ್ತಿರುವ ಹಲವಾರು ಜನರು ಎಫ್.ಎಮ್ ವಾಹಿನಿಗಳ RAM ರೇಟಿಂಗ್ ಅನ್ನು ಹತ್ತಿರದಿಂದ ಗಮನಿಸಿದರೆ ಬೆಂಗಳೂರಿನಲ್ಲಿ ಕನ್ನಡಕ್ಕಿರುವ ಮಾರುಕಟ್ಟೆಯನ್ನು ಅರಿಯಬಹುದು. ಕನ್ನಡ ಹಾಡುಗಳ ವಾಹಿನಿಯನ್ನು ಕನ್ನಡಿಗರೇ ಅಲ್ಲವೇ ಕೇಳುವುದು? ದಿನವೊಂದಕ್ಕೆ 50 ಲಕ್ಷಕ್ಕೂ ಅಧಿಕ ಜನ ಎಫ್,ಎಮ್ ರೇಡಿಯೋಗಳನ್ನು ಕೇಳುತ್ತಿದ್ದು ಅದರಲ್ಲಿ 75 ಪ್ರತಿಶತಕ್ಕೂ ಅಧಿಕ ಜನರು ಕನ್ನಡ ವಾಹಿನಿಯನ್ನೇ ಕೇಳುತ್ತಿರುವುದು ಏನನ್ನು ಸೂಚಿಸುತ್ತೆ? ದಿನಪತ್ರಿಕೆಗಳ ವಿಷಯದಲ್ಲಿ ಬರುವ ಎಬಿಸಿ ಮತ್ತು ಐ.ಆರ್.ಎಸ್ ವರದಿಗಳು ಬೆಂಗಳೂರಿನಲ್ಲಿ ಶೇಕಡಾ 70ರಷ್ಟು ಜನ ಕನ್ನಡ ಪತ್ರಿಕಗಳನ್ನೇ ಓದುವ ಮಾಹಿತಿ ನೀಡಿರುವುದನ್ನು ಗಮನಿಸಿದಾಗ ಬೆಂಗಳೂರಿನಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಲ್ಲ ಅನ್ನುವುದು ಸ್ಪಷ್ಟ ಪಡಿಸಿಕೊಳ್ಳಬಹುದು.
ಪ್ರಕರಣ ೨: ಅದು ಜಗತ್ತಿನ ಪ್ರಖ್ಯಾತ ಮೊಬೈಲ್ ಕಂಪನಿ. ಅಂಡ್ರಾಯ್ಡ್ ತಂತ್ರಜ್ಞಾನ ಆಧಾರಿತ ಸ್ಮಾರ್ಟ್ ಫೋನ್ ಗಳನ್ನು ಉತ್ಪಾದಿಸುವಲ್ಲಿ ಜಗತ್ತಿನಲ್ಲೇ ಮುಂಚೂಣಿಯಲ್ಲಿನ ಸಂಸ್ಥೆ. ತನ್ನ ಫೋನಿನಲ್ಲಿ ಹಲವು ವಿದೇಶಿ ಭಾಷೆಗಳ ಆಯ್ಕೆ ಕೊಟ್ಟಿದ್ದರೂ ಕನ್ನಡ ಭಾಷೆಯ ಆವೃತ್ತಿ ಹೊಂದಿರಲಿಲ್ಲ. ಕನ್ನಡದಲ್ಲೇ ಸ್ಮಾರ್ಟ್ ಫೋನ್ ಬಳಸುವ ಆಯ್ಕೆ ಕೊಡಿ ಎಂದು ನಿರಂತರವಾಗಿ ಕನ್ನಡ ಗ್ರಾಹಕರು ಬೇಡಿಕೆ ಇಟ್ಟ ಪರಿಣಾಮವಾಗಿ ಇಂದು ಕನ್ನಡದಲ್ಲೂ ತನ್ನ ಸ್ಮಾರ್ಟ್ ಫೋನ್ ಸರಣಿ ಹೊರ ತಂದಿರುವುದೇ ಅಲ್ಲದೇ “ನಿಮ್ಮ ಫೋನ್ ಕನ್ನಡದಲ್ಲಿದೆ” ಅನ್ನುವುದನ್ನೇ ಒಂದು ವ್ಯಾಪಾರದ ಹೆಗ್ಗಳಿಕೆಯಂತೆ ಬಳಸಿ ಜನ ಮನ್ನಣೆ ಗಳಿಸುತ್ತಿದೆ. ಅದರ ಬೆನ್ನಲ್ಲೇ ಇನ್ನು ಕೆಲವು ಕಂಪನಿಗಳು ಇದರತ್ತ ಹೂಡಿಕೆ ಮಾಡಲು ಮುಂದಾಗಿವೆ. ಹೊಸತಾಗಿ ನಮ್ಮ ಸಮಾಜವನ್ನು ಪ್ರವೇಶಿಸಿದ ಒಂದು ತಂತ್ರಜ್ಞಾನದ ಪರಿಕರವನ್ನು ಬಹಳ ಬೇಗನೇ ಕನ್ನಡಕ್ಕೆ ಒಗ್ಗಿಸಿಕೊಳ್ಳುವ ಕೆಲಸ ಇಲ್ಲಿ ಸಾಧ್ಯವಾಗಿದ್ದು ಕನ್ನಡ ಗ್ರಾಹಕರ ಹಕ್ಕೊತ್ತಾಯದಿಂದಲೇ. ತೀವ್ರ ಗತಿಯಲ್ಲಿ ನಮ್ಮ ಚಿಕ್ಕ ಊರು ಪಟ್ಟಣಗಳಿಗೂ ಮೊಬೈಲ್ ಮತ್ತು ಅಂತರ್ಜಾಲ ಹರಡುತ್ತಿರುವಾಗ ಮೊಬೈಲ್ ಫೋನಿನಲ್ಲಿ ಕನ್ನಡ ಸರಿಯಾಗಿ ಬಳಸಲು ದೊರೆಯುವಂತಾಗುವುದು ಬಹಳ ಮುಖ್ಯ. ಇಂತಹದೊಂದು ಬದಲಾವಣೆಗೆ ಕನ್ನಡ ಗ್ರಾಹಕರ ಹಕ್ಕೊತ್ತಾಯ ನಾಂದಿ ಹಾಡಿದೆ.
ಪ್ರಕರಣ ೩: ಅದು ಭಾರತದ ಅತಿ ದೊಡ್ಡ ಖಾಸಗಿ ಬ್ಯಾಂಕುಗಳಲ್ಲಿ ಒಂದು. ಕರ್ನಾಟಕವೊಂದರಲ್ಲೇ ಸುಮಾರು ಏಳು ನೂರಕ್ಕೂ ಹೆಚ್ಚು ಎ.ಟಿ.ಎಮ್ ಗಳನ್ನು ಹೊಂದಿರುವ ಬ್ಯಾಂಕ್ ಕೂಡಾ. ಅದರ ಎ.ಟಿ.ಎಮ್ ನಲ್ಲಿನ ಭಾಷೆಗಳ ಆಯ್ಕೆಯಲ್ಲಿ ಕೇವಲ ಇಂಗ್ಲಿಷ್ ಮತ್ತು ಹಿಂದಿ ಮಾತ್ರವೇ ಇದ್ದವು. ಬರೀ ಕನ್ನಡವೊಂದನ್ನೇ ಬಲ್ಲ ಸಾಮಾನ್ಯ ಕನ್ನಡಿಗರು ಈ ಬ್ಯಾಂಕಿನ ಸೇವೆಯನ್ನು ಬಳಸಲು ಸಾಧ್ಯವೇ ಇಲ್ಲ ಅನ್ನುವ ಸ್ಥಿತಿಯಿತ್ತು. ಆಗ ಕನ್ನಡದಲ್ಲಿ ಬ್ಯಾಂಕಿಂಗ್ ಸೇವೆಗಾಗಿ ಒತ್ತಾಯಿಸುವ ನೂರಾರು ಮಿಂಚೆಗಳು, ಫೋನ್ ಕರೆಗಳು ಬ್ಯಾಂಕಿನ ಬೇರೆ ಬೇರೆ ಶಾಖೆಗಳಿಗೆ ಹೋದವು. ಕಾರ್ಪೋರೇಟ್ ವಲಯದಲ್ಲಿ ಕೆಲಸ ಮಾಡುತ್ತಿದ್ದ ನೂರಾರು ಕನ್ನಡಿಗರು ಕನ್ನಡದಲ್ಲಿ ಸೇವೆ ನೀಡದೇ ಹೋದಲ್ಲಿ ಬ್ಯಾಂಕಿನಲ್ಲಿರುವ ತಮ್ಮ ಖಾತೆಯನ್ನು ರದ್ದುಗೊಳಿಸಿ ಕನ್ನಡದಲ್ಲಿ ಸೇವೆ ನೀಡುವ ಇನ್ನೊಂದು ಬ್ಯಾಂಕಿನತ್ತ ವಲಸೆ ಹೋಗುತ್ತೇವೆ ಅನ್ನುವ ಅಸಹಕಾರದ ಹಾದಿ ಹಿಡಿದರು. ಇದಕ್ಕೆ ಸ್ಪಂದಿಸಿದ ಬ್ಯಾಂಕ್ ಕಳೆದ ಒಂದು ವರ್ಷದ ಅವಧಿಯಲ್ಲಿ ತನ್ನೆಲ್ಲ ಎ.ಟಿ.ಎಮ್ ಗಳಲ್ಲಿ ಕನ್ನಡ ಬಳಸುವ ಆಯ್ಕೆ ಕೊಟ್ಟಿದ್ದು ದೊಡ್ಡ ಸಂಖ್ಯೆಯಲ್ಲಿ ಸಾಮಾನ್ಯ ಕನ್ನಡಿಗರಿಗೆ ಅನುಕೂಲ ಕಟ್ಟಿಕೊಟ್ಟು ತನ್ನ ವ್ಯಾಪಾರ ಹೆಚ್ಚಿಸಿಕೊಂಡಿದೆ. ಕನ್ನಡ ಬಾರದ ಸಿಬ್ಬಂದಿಗೆ ಕನ್ನಡ ಕಲಿಸುವ ಕೆಲಸವೂ ಅನೇಕ ಬ್ಯಾಂಕುಗಳಲ್ಲಿ ನಡೆಯುತ್ತಿದೆ. ಇಂತಹುದೇ ಬದಲಾವಣೆ ಹಲವಾರು ಬ್ಯಾಂಕುಗಳಲ್ಲೂ ಆಗುತ್ತಿದೆ. ನಿರಂತರವಾದ, ಶಾಂತಿಯುತವಾದ ಗ್ರಾಹಕ ಅಸಹಕಾರದ ಮಾರ್ಗದ ಮೂಲಕ ಕನ್ನಡದಲ್ಲಿ ಗ್ರಾಹಕ ಸೇವೆ ಸಾಧ್ಯವಾಗಿಸುವ ಬದಲಾವಣೆ ಇಂದು ನಮ್ಮಲ್ಲಿ ಶುರುವಾಗಿದೆ. ಇದರ ಫಲವಾಗಿ ಕನ್ನಡದಲ್ಲೇ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಸಂಸ್ಥೆಗಳಿಗೂ ಕೆಲಸ ಮತ್ತು ವ್ಯಾಪಾರ ದಕ್ಕುತ್ತಿದೆ.
ಪ್ರಕರಣ ೪: ಕನ್ನಡಿಗರು ಕ್ರಿಕೆಟ್ ಪ್ರೇಮಿಗಳಾಗಿದ್ದರೂ ಕ್ರಿಕೆಟ್ ಪಂದ್ಯಾವಳಿಯ ವೀಕ್ಷಕ ವಿವರಣೆ ಕನ್ನಡದಲ್ಲಿ ನೋಡುವ ಅವಕಾಶ ಇಲ್ಲಿಯವರೆಗೂ ಸಿಕ್ಕಿರಲಿಲ್ಲ. ರೇಡಿಯೊ ಕಾಮೆಂಟರಿ ಕಾಲದಲ್ಲಿ ಚೂರು-ಪಾರಾದರೂ ಕನ್ನಡ ಕಾಮೆಂಟರಿ ದೊರೆಯುತ್ತಿದ್ದದ್ದು ಟಿವಿ ಕಾಲಕ್ಕೆ ನಿಂತು ಹೋಗಿ, ಕ್ರಿಕೆಟ್ ಕಾಮೆಂಟರಿ ಅಂದರೆ ಕೇವಲ ಹಿಂದಿ ಮತ್ತು ಇಂಗ್ಲಿಷ್ ಅನ್ನುವ ಹಾಗಾಗಿತ್ತು. ಹಿಂದಿ ಹೇರಿಕೆಯ ಪರವಿರುವ ಕೇಂದ್ರ ಸರ್ಕಾರಗಳು ಹಿಂದಿ ಹೇರಿಕೆಯ ಪ್ರಬಲ ಅಸ್ತ್ರವಾಗಿ ಕ್ರಿಕೆಟ್ ಕಾಮೆಂಟರಿಯನ್ನು ಬಳಸಿಕೊಳ್ಳುತ್ತ ಬಂದಿದ್ದವು. ಕನ್ನಡಿಗರಿಗೆ ಎಂದಿಗೂ ಅರ್ಥವಾಗದ ಇಕ್ಯಾನವೆ, ಚೌಬೀಸ್, ಪಚತ್ತರ್ ಮುಂತಾದ ಹಿಂದಿ ಭಾಷೆಯ ಅಂಕಿ-ಸಂಕಿಗಳನ್ನೇ ಅರ್ಥವಾಗದಿದ್ದರೂ ಕೇಳಿಕೊಂಡು ಪಂದ್ಯ ನೋಡುವ ಸ್ಥಿತಿಯಿತ್ತು. ಇದೇ ಹೊತ್ತಿನಲ್ಲಿ ಜಾಗತೀಕರಣದ ನಂತರ ಮನರಂಜನೆ ವಲಯದಲ್ಲಿ ವ್ಯಾಪಕ ಪ್ರಮಾಣದಲ್ಲಿ ನಡೆದ ಖಾಸಗಿ ಬಂಡವಾಳ ಹೂಡಿಕೆಯ ಫಲವಾಗಿ ಕ್ರಿಕೆಟ್ ಪಂದ್ಯಾವಳಿ ಪ್ರಸಾರಕ್ಕೆ ಹಲವಾರು ಹೊಸ ಖಾಸಗಿ ವಾಹಿನಿಗಳು ಹುಟ್ಟಿಕೊಂಡವು. ಇಷ್ಟಾದರೂ ಕನ್ನಡದಲ್ಲಿ ಕ್ರಿಕೆಟ್ ವೀಕ್ಷಕ ವಿವರಣೆ ಸಾಧ್ಯವಾಗಿರಲಿಲ್ಲ. ಕಳೆದ ವರ್ಷ ಸ್ಟಾರ್ ಸಂಸ್ಥೆ ಕ್ರಿಕೆಟಿಗಾಗಿಯೇ ಮೀಸಲಾಗಿರುವ ನಾಲ್ಕು ಹೊಸ ಕ್ರೀಡಾವಾಹಿನಿಗಳನ್ನು ಶುರು ಮಾಡುವ ನಿರ್ಧಾರ ಕೈಗೊಂಡಾಗ ದೊಡ್ಡ ಸಂಖ್ಯೆಯಲ್ಲಿ ಕನ್ನಡದ ಗ್ರಾಹಕರು ಕನ್ನಡದಲ್ಲಿ ಕ್ರಿಕೆಟ್ ವಾಹಿನಿ ಶುರು ಮಾಡುವಂತೆಯೂ, ಕ್ರಿಕೆಟ್ ಕಾಮೆಂಟರಿ ಕನ್ನಡದಲ್ಲಿ ಕೊಡುವಂತೆಯೂ ಬೇಡಿಕೆ ಸಲ್ಲಿಸುವ ಕೆಲಸ ಮಾಡಿದರು. ಇದರ ಪರಿಣಾಮವಾಗಿ ಸ್ವಾತಂತ್ರ್ಯ ಬಂದ ನಂತರ ಮೊದಲ ಬಾರಿಗೆ ಈ ಬಾರಿಯ ವಿಶ್ವಕಪ್ ಪಂದ್ಯಾವಳಿಯೊಂದನ್ನು ಸಂಪೂರ್ಣವಾಗಿ ಕನ್ನಡದಲ್ಲೇ ನೋಡುವ ಅವಕಾಶವನ್ನು ಸ್ಟಾರ್ ಸಂಸ್ಥೆ ತನ್ನ ಸುವರ್ಣ ಪ್ಲಸ್ ವಾಹಿನಿಯ ಮೂಲಕ ಮಾಡಿಕೊಟ್ಟಿತು. ಇದು ನಿರೀಕ್ಷೆ ಮೀರಿ ಯಶಸ್ಸು ಪಡಿದಿದ್ದು, ಸಂಸ್ಥೆಗೆ ವ್ಯಾಪಾರದ ಲಾಭವಾದರೆ ಕನ್ನಡಿಗರಿಗೆ ಕ್ರಿಕೆಟ್ ಕಾಮೆಂಟರಿಯನ್ನು ತಮ್ಮದೇ ನುಡಿಯಲ್ಲಿ ನೋಡುವ ಅವಕಾಶವಾಯಿತು. ಕನ್ನಡ ಗ್ರಾಹಕರ ಸಂಘಟಿತ ಪ್ರಯತ್ನಕ್ಕೆ ಸಿಕ್ಕ ಇತ್ತೀಚಿನ ದೊಡ್ಡ ಗೆಲುವು ಇದೆನ್ನಬಹುದು.
ಇದೆಲ್ಲ ಸಾಧ್ಯವಾಗಿದ್ದು ಹೇಗೆ?
ಮೇಲೆ ನೀಡಿದ್ದು ಕಳೆದ ಹತ್ತು ವರ್ಷಗಳಲ್ಲಿ ಕರ್ನಾಟಕದ ಮಾರುಕಟ್ಟೆಯಲ್ಲಿ ಕನ್ನಡದ ಸುತ್ತ ಆದ ನೂರಾರು ಬದಲಾವಣೆಗಳಲ್ಲಿ ಆಯ್ದ ಕೆಲವು. ಈ ಯಾವ ಬದಲಾವಣೆಗಳು ಯಾವುದೇ ಸರ್ಕಾರದ ಕಾನೂನು-ನಿಯಮಗಳಿಂದ ಸಾಧ್ಯವಾಗಿದ್ದಲ್ಲ. ಇದು ಸಾಧ್ಯವಾಗಿದ್ದು ಕನ್ನಡದಲ್ಲಿ ಗ್ರಾಹಕ ಸೇವೆಗಾಗಿ ಒತ್ತಾಯಿಸುವ, ಕೊಟ್ಟಾಗ ಬಳಸುವ, ಕೊಡದಿದ್ದಾಗ ಅಂತಹ ಸಂಸ್ಥೆಗಳೊಡನೆ ಅಸಹಕಾರ ಚಳುವಳಿಗಿಳಿಯುವ ಸಾಮಾನ್ಯ ಕನ್ನಡದ ಗ್ರಾಹಕರ ಪ್ರಯತ್ನದಿಂದಾಗಿ. 1991ರಲ್ಲಿ ಭಾರತ ಮುಕ್ತ ಮಾರುಕಟ್ಟೆಯ ವ್ಯವಸ್ಥೆಗೆ ತೆರೆದುಕೊಂಡ ನಂತರ ಮಾರುಕಟ್ಟೆಯಲ್ಲಿ ಗ್ರಾಹಕ ಅನ್ನುವ ಒಬ್ಬ ವ್ಯಕ್ತಿ ಒಂದು ದೊಡ್ಡ ಶಕ್ತಿಯಾಗಿ ಹೊರ ಹೊಮ್ಮಿದ್ದಾನೆ. ಆತನ ಬೇಕು-ಬೇಡಗಳಿಗೆ ಸ್ಪಂದಿಸಲು ಸಂಸ್ಥೆಗಳು ತುದಿಗಾಲಿನಲ್ಲಿ ಸ್ಪರ್ಧೆಗೆ ನಿಲ್ಲುವಂತಹ ಬದಲಾವಣೆ ನಮ್ಮ ಸಮಾಜದಲ್ಲಾಗಿದೆ. ಹೀಗಿದ್ದಾಗಲೂ ಕರ್ನಾಟಕದ ಮಾರುಕಟ್ಟೆಗಳಲ್ಲಿ ಕನ್ನಡ ಮೊದಲ ಆದ್ಯತೆಯ ಸ್ಥಾನ ಪಡೆಯುವಲ್ಲಿ ಸೋತಿತ್ತು. ಇದಕ್ಕೆ ಕಾರಣ ಗ್ರಾಹಕ ಚಳುವಳಿ ಅನ್ನುವ ಕಲ್ಪನೆಯೇ ನಮ್ಮ ಸಮಾಜಕ್ಕೆ ಹೊಸತಾಗಿದ್ದದ್ದು. ಇದ್ದ ಚೂರು ಪಾರು ಗ್ರಾಹಕ ಹಕ್ಕಿನ ಪರಿಕಲ್ಪನೆಯೂ ಕೇವಲು ತೂಕ, ಅಳತೆ, ಗುಣಮಟ್ಟಕ್ಕೆ ಸೀಮಿತವಾಗಿತ್ತು. ಆದರೆ ಅನೇಕ ಮುಂದುವರೆದ ಭಾಷಾ ಜನಾಂಗದ ನಾಡಿನಲ್ಲಿರುವಂತೆ, ಗ್ರಾಹಕ ಸೇವೆಗೆ ಭಾಷೆಯ ಬಹು ದೊಡ್ಡ ಆಯಾಮವೊಂದಿದ್ದು, ತನ್ನ ಭಾಷೆಯಲ್ಲಿ ಸೇವೆಯನ್ನು ಕೊಡದಿರುವುದು ಗ್ರಾಹಕ ಹಕ್ಕುಗಳ ಉಲ್ಲಂಘನೆ ಅನ್ನುವ ಜಾಗೃತಿ ಹೆಚ್ಚತೊಡಗಿದಂತೆ ಕರ್ನಾಟಕದ ಮಾರುಕಟ್ಟೆಯಲ್ಲೂ ಹಲವಾರು ಕನ್ನಡ ಪರ ಬದಲಾವಣೆಗಳಾಗಿವೆ. ಇದರ ಪರಿಣಾಮವಾಗಿ ಎಂಬಂತೆ ಇತ್ತೀಚೆಗೆ ಕನ್ನಡದ ಸಿನೆಮಾ ಕಲಾವಿದರಾದ ಸುದೀಪ್, ಪುನೀತ್, ಉಪೇಂದ್ರ ಮುಂತಾದವರನ್ನು ಬಳಸಿಕೊಂಡು ಜಾಹೀರಾತು ನೀಡಲು ಹಲವಾರು ಕಂಪನಿಗಳು ಮುಂದಾಗಿವೆ. ಇವತ್ತಿಗೆ ಕರ್ನಾಟಕದ ಮಾರುಕಟ್ಟೆಯಲ್ಲಿ ಕನ್ನಡದ ವಿಷಯದಲ್ಲಿ ಎಲ್ಲವೂ ಸರಿ ಹೋಗಿದೆ ಅನ್ನಲಾಗದಿದ್ದರೂ ಸರಿ ಹೋಗಿರುವುದರಲ್ಲಿ ಹೆಚ್ಚಿನದ್ದು ಕನ್ನಡದ ಗ್ರಾಹಕರ ಹಕ್ಕೊತ್ತಾಯದಿಂದಲೇ ಅನ್ನುವುದನ್ನು ಮರೆಯಬಾರದು.
ಈ ಬದಲಾವಣೆಗಳು ಒಂದು ಬಹು ದೊಡ್ಡ ಪಾಠವನ್ನು ಕನ್ನಡ ಸಮಾಜಕ್ಕೆ ನೀಡುತ್ತಿದೆ. ಅದೇನೆಂದರೆ ಬರುವ ದಿನಗಳಲ್ಲಿ ಕನ್ನಡ ಚಳುವಳಿಯ ಬಹುದೊಡ್ಡ ಭಾಗವಾಗಿ, ಮಹತ್ವದ ಪಾತ್ರವನ್ನು ಕನ್ನಡ ಕೇಂದ್ರಿತ ಗ್ರಾಹಕ ಚಳುವಳಿ ನಿಭಾಯಿಸಲಿದೆ ಅನ್ನುವುದು. ಯಾಕೆಂದರೆ ಮಾರುಕಟ್ಟೆಯಲ್ಲಿ ಕನ್ನಡವನ್ನು ಭದ್ರವಾಗಿ ನೆಲೆ ನಿಲ್ಲಿಸಬೇಕೆಂದರೆ ಅದನ್ನು ಸಾಧ್ಯವಾಗಿಸುವುದು ಆ ಮಾರುಕಟ್ಟೆಯನ್ನು ನಿಯಂತ್ರಿಸುವ ಶಕ್ತಿ ಹೊಂದಿರುವ ಗ್ರಾಹಕರಿಂದ ಮಾತ್ರವೇ ಸಾಧ್ಯ ಅನ್ನುವುದು. ವ್ಯಾಪಾರದಲ್ಲಿರುವ ಪ್ರತಿಯೊಂದು ಕಂಪನಿಯೂ ಯಾವತ್ತು ಖರ್ಚು ಕಡಿಮೆ ಮಾಡಿಕೊಳ್ಳಲು ನೋಡುತ್ತವೆ. ಹೀಗಾಗಿ ತಮ್ಮ ಉತ್ಪನ್ನಗಳ ಮಾರಾಟ, ಸೇವೆಯಲ್ಲಿ ಎಷ್ಟು ಕಡಿಮೆ ಭಾಷೆಯಿರುತ್ತೋ ಅಷ್ಟೇ ಅವರಿಗೆ ಲಾಭ. ಆದರೆ ಗ್ರಾಹಕರಾದ ನಮಗೆ ಅವರ ಚಿಂತೆ ಬೇಕಿಲ್ಲ. ನಾವು ದುಡ್ಡು ಕೊಡುತ್ತೇವೆ, ಅದಕ್ಕೆ ತಕ್ಕುದಾಗಿ ಕನ್ನಡದಲ್ಲಿ ಎಲ್ಲ ಹಂತದ ಗ್ರಾಹಕ ಸೇವೆ ಪಡೆಯುವುದು ನಮ್ಮ ಹಕ್ಕು. ಗ್ರಾಹಕ ಚಳುವಳಿಯ ಮೂಲಕ ಜಾಗತೀಕರಣದ ನಂತರ ಕನ್ನಡ ಸಮಾಜವನ್ನು ಪ್ರವೇಶಿಸಿರುವ ಹೊಸ ಹೊಸ ಭಾಷೆ ಬಳಸುವ ಆಯ್ಕೆ (ಲ್ಯಾಂಗ್ವೇಜ್ ಪ್ಲಾನಿಂಗ್ (ನುಡಿ ಹಮ್ಮುಗೆ) ಭಾಷೆಯಲ್ಲಿ ಕರೆಯಲಾಗುವ ಲ್ಯಾಂಗ್ವೇಜ್ ರೆಜಿಸ್ಟರ್)ಗಳನ್ನು ಚೆನ್ನಾಗಿ ಕನ್ನಡದಲ್ಲಿ ಕಟ್ಟಿಕೊಳ್ಳಲು ಸಾಧ್ಯ. ಇಂದು ಮೊಬೈಲಿನಲ್ಲಿ, ಕಂಪ್ಯೂಟರಿನಲ್ಲಿ ಕನ್ನಡ ಬಳಸಲು ಸಾಧ್ಯವಾಗಿದೆ. ಬ್ಯಾಂಕಿನ ಎ.ಟಿ.ಎಮ್ ಕನ್ನಡದಲ್ಲಿ ಬಳಸಬಹುದಾಗಿದೆ. ಈ ಮೊದಲು ಪೀಠಿಕೆಯಲ್ಲಿ ಹೇಳಿದಂತೆ ಕರ್ನಾಟಕದಲ್ಲಿ ವ್ಯಾಪಾರ ಮಾಡುತ್ತಿರುವ ಖಾಸಗಿ ಸಂಸ್ಥೆಗಳು ಕನ್ನಡ ಕಡೆಗಣಿಸಿರುವುದು, ಕನ್ನಡ ಸಮಾಜವನ್ನು ಬಹಳ ದೊಡ್ಡ ಪ್ರಮಾಣದಲ್ಲಿ ಪ್ರಭಾವಿಸುತ್ತಿರುವ ತಂತ್ರಜ್ಞಾನದ ಬದಲಾವಣೆಗಳು, ಮಿತಿಮೀರಿದ ವಲಸೆಯಿಂದ ಬೆಂಗಳೂರಿನಂತಹ ಊರುಗಳಲ್ಲಿ ಕನ್ನಡದ ಸಾರ್ವಭೌಮತ್ವಕ್ಕೆ ಎದುರಾಗಿರುವ ತೊಂದರೆಗಳಿಗೆ ಸಂಘಟಿತವಾದ ಕನ್ನಡಿಗರ ಗ್ರಾಹಕ ಚಳುವಳಿ ಒಂದು ಪ್ರಬಲ ಪರಿಹಾರವಾಗಿದೆ. ಇದನ್ನು ಇನ್ನಷ್ಟು ವ್ಯಾಪಕಗೊಳಿಸಲು, ಹೆಚ್ಚೆಚ್ಚು ಕನ್ನಡಿಗರು ತಮ್ಮ ಗ್ರಾಹಕ ಹಕ್ಕನ್ನು ಚಲಾಯಿಸಿ ಕನ್ನಡದಲ್ಲಿ ಸೇವೆಗೆ ಆಗ್ರಹಿಸುವಂತಾಗಲು ಗ್ರಾಹಕ ಪ್ರಜ್ಞೆ ಮತ್ತು ಗ್ರಾಹಕ ಸೇವೆ ಪಡೆಯುವಾಗ ಕನ್ನಡದಲ್ಲಿ ಸೇವೆ ಕೇಳುವುದು ಯಾಕೆ ಮುಖ್ಯ ಅನ್ನುವುದನ್ನು ಮನವರಿಕೆ ಮಾಡಿಕೊಡುವ ಗುರುತರವಾದ ಕೆಲಸ ನಮ್ಮ ಮುಂದಿದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಬೆಂಗಳೂರಿನಲ್ಲಿ ಕನ್ನಡದ ಸಾರ್ವಭೌಮತ್ವಕ್ಕಾಗಿ ಅನೇಕ ಚಳುವಳಿಗಳು ನಡೆದಿವೆ ಮತ್ತು ಇವೆಲ್ಲವೂ ಒಂದು ಮಟ್ಟಿಗೆ ಕನ್ನಡದ ನೆಲೆಯನ್ನು ಭದ್ರಗೊಳಿಸುವಲ್ಲಿ ಸಹಾಯ ಮಾಡಿವೆ. ಆದರೆ ಜಾಗತೀಕರಣ ತಂದಿರುವ ಬದಲಾವಣೆಯ ಅಲೆ ಕನ್ನಡವು ಕಳೆದ ಎರಡು ಸಾವಿರ ವರ್ಷಗಳಲ್ಲೇ ನೋಡಿರದಂತದ್ದು. ಇದಕ್ಕೆ ನಮ್ಮ ಪ್ರತಿಕ್ರಿಯೆ ಹಳೆಯ ಮಾದರಿಯಲ್ಲಿದ್ದರೆ ಸಾಲದು. ಈ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಹೆಚ್ಚೆಚ್ಚು ಕನ್ನಡಿಗರು ಪಾಲ್ಗೊಳ್ಳುವಂತಹ, ಚಿಕ್ಕ ಚಿಕ್ಕ ಹೆಜ್ಜೆಯಿಂದಲೇ ಬದಲಾವಣೆಯತ್ತ ಸಾಗುವಂತಹ ಕ್ರಮಗಳು ಬೇಕು ಮತ್ತು ಅಂತಹದೊಂದು ಸಾಧ್ಯತೆ ಕನ್ನಡದಲ್ಲಿ ಪ್ರಬಲವಾದ ಗ್ರಾಹಕ ಚಳುವಳಿ ಸಾಧ್ಯವಾಗಿಸುತ್ತೆ. ಏಕೆಂದರೆ ಅಮೇರಿಕದ ಅಧ್ಯಕ್ಷರಾಗಿದ್ದ ಜಾನ್. ಎಫ್. ಕೆನಡಿಯವರು ಹೇಳುವಂತೆ “ನಾವೆಲ್ಲರೂ ಗ್ರಾಹಕರೇ” ಮತ್ತು ನಮಗೆಲ್ಲರಿಗೂ ಸುರಕ್ಷತೆಯ, ತಿಳಿದುಕೊಳ್ಳುವ, ಆಯ್ಕೆಯ ಮತ್ತು ನ್ಯಾಯ ಪಡೆಯುವ ಎಲ್ಲ ಹಕ್ಕುಗಳೂ ಇವೆ. ಕನ್ನಡದ ಸಂದರ್ಭದಲ್ಲಿ ಈ ಹಕ್ಕುಗಳ ಜೊತೆ ಕನ್ನಡದಲ್ಲೇ ಸೇವೆ ಪಡೆಯುವ ಭಾಷೆಯ ಹಕ್ಕೊಂದನ್ನು ನಾವು ಸೇರಿಸಿಕೊಳ್ಳಬೇಕಿದೆ. ಕನ್ನಡ ಕೇಂದ್ರಿತ ಗ್ರಾಹಕ ಚಳುವಳಿಯನ್ನು ಸಮರ್ಥವಾಗಿ, ಸಂಘಟಿತವಾಗಿ ಕಟ್ಟುವಲ್ಲಿ ಯಶಸ್ಸು ಕಂಡರೆ ಮುಂದಿನ ದಿನಗಳಲ್ಲಿ ಕನ್ನಡ ಚಳುವಳಿ, ಕನ್ನಡ ನಾಡಿನ ಮಾರುಕಟ್ಟೆಯನ್ನೇ ಕನ್ನಡಕ್ಕೆ ಒಗ್ಗಿಸಿಕೊಳ್ಳುವ ಚಳುವಳಿಯಾಗಿ, ಕನ್ನಡವನ್ನು ಭವಿಷ್ಯದತ್ತ ಮುಖ ಮಾಡಿಸುವ ಚಳುವಳಿಯಾಗಿ ರೂಪುಗೊಳ್ಳುತ್ತದೆ. ಇದರ ಶಕ್ತಿ ಕನ್ನಡ ಪರ ಸಾಹಿತಿಗಳು, ಚಿಂತಕರು, ಹೋರಾಟಗಾರರು, ಹೀಗೆ ಎಲ್ಲರಿಗೂ ಮನವರಿಕೆಯಾಗಬೇಕಿದೆ.
ಅಂಕಣವನ್ನು ಡೌನ್ ಲೋಡ್ ಮಾಡಲು ಈ ಕೊಂಡಿ ಬಳಸಿ: ಗ್ರಾಹಕಸೇವೆಯಲ್ಲಿ ಕನ್ನಡ