ಯಾರ ಪ್ರಣಾಳಿಕೆಯಲ್ಲೇನಿದೆ? – ಸಿ.ಪಿ.ಐ(ಎಂ)

– ಅನ್ನದಾನೇಶ್

ಸಿ ಪಿ ಐ ( ಎಂ ) ಪಕ್ಷ 2014 ಲೋಕಸಬೆ ಚುನಾವಣೆಯ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಸದಾ ಎಡಪಂಥೀಯ ತತ್ವವನ್ನು ಪ್ರತಿಪಾದಿಸುವ ಸಿ ಪಿ ಐ, ಒಟ್ಟು  35 ಪುಟಗಳ ತನ್ನ ಪ್ರಣಾಳಿಕೆಯಲ್ಲಿ ಕೇವಲ ಎಡ ಪಂಥೀಯ ವಿಚಾರಗಳಲ್ಲದೆ ಒಕ್ಕೂಟ ವ್ಯವಸ್ಥೆ ಸರಿಪಡಿಸುವತ್ತ ಕೆಲವು ಅಂಶಗಳನ್ನು ಸೇರಿಸಿರುವುದು ಸ್ವಾಗತಾರ್ಹ. ಅವರು ಹೇಳಿರುವಂತ ಕೆಲವು ಅಂಶಗಳು ‘ಸರಿಯಾದ ಒಕ್ಕೂಟ ವ್ಯವಸ್ಥೆ’ ಪರವಾಗಿ ಕಂಡರೆ ಕೆಲವು ಅಂಶಗಳು ಈಗಿರುವ ಕೇಂದ್ರೀಕೃತ ವ್ಯವಸ್ಥೆಯನ್ನು ಬೆಂಬಲಿಸುವಂತಿವೆ. ಒಕ್ಕೂಟ ವ್ಯವಸ್ಥೆಯ ಕಣ್ಣಿನಿಂದ ಅವರ ಪ್ರಣಾಳಿಕೆಯ ಬಗ್ಗೆ ಒಂದು ಇಣುಕು ನೋಟ ಹೀಗಿದೆ :

1. ಸಂವಿದಾನದ ಆರ್ಟಿಕಲ್ 355 & 356 (ರಾಷ್ಟ್ರಪತಿ ಆಡಳಿತ) ದುರ್ಬಳಕೆ ಆಗದಂತೆ ತಿದ್ದುಪಡಿ ತರುವುದು

ಹಿನ್ನೆಲೆ: ಆರ್ಟಿಕಲ್ 355 – ರಾಜ್ಯಗಳ ಆಡಳಿತದಲ್ಲಿ ಕೇಂದ್ರದ ಹಸ್ತಕ್ಷೇಪ

Art 355 : Duty of the Union to protect States against external aggression and internal disturbance It shall be the duty of the Union to protect every State against external aggression and internal disturbance and to ensure that the government of every State is carried on in accordance with the provisions of this Constitution

ವಿವರಣೆ : ಹೊರಗಿನ ದಾಳಿ ಮತ್ತು ಒಳಗಿನ ಗಲಭೆ ಗಳಿಂದ ರಾಜ್ಯಗಳನ್ನು ಕಾಪಾಡುವುದು ಕೇಂದ್ರಸರ್ಕಾರದ ಕರ್ತವ್ಯ ಎಂದು ಆರ್ಟಿಕಲ್ 355 ಹೇಳುತ್ತದೆ. ರಾಜ್ಯಸರ್ಕಾರ ರಕ್ಷಣೆ ಕೊಡಲು ವಿಫಲವಾಗಿದೆ ಎಂಬ ಅನಿಸಿಕೆ ಮೂಡಿಸಿ, ಕೇಂದ್ರಸರ್ಕಾರ ರಕ್ಷಣೆ ಕೊಡಬೇಕು ಎಂದು ಒತ್ತಾಯಿಸಲು ಈ ಆರ್ಟಿಕಲ್ ಬಳಕೆ ಆಗಿರುವ ಉದಾಹರಣೆಗಳಿವೆ. ಹಾಗೆ ರಾಜ್ಯಸರ್ಕಾರದ ಒಪ್ಪಿಗೆ ಇಲ್ಲದೆ ರಾಜ್ಯದೊಳಗೆ ಕಾರ್ಯಾಚರಣೆ ಮಾಡುವ ಸ್ವಾತಂತ್ರ್ಯ ಈ ಆರ್ಟಿಕಲ್ ಕೇಂದ್ರಸರ್ಕಾರಕ್ಕೆ ಕೊಡಬಹುದು ( ನನ್ನ ವಯುಕ್ತಿಕ ಅನಿಸಿಕೆ ). ಆದರಿಂದ ರಾಜ್ಯದ ಅಧಿಕಾರವನ್ನು ಮೊಟಕುಗೊಳಿಸುವ ಈ ಆರ್ಟಿಕಲ್ ಗೆ ತಿದ್ದುಪಡಿ ಅಗತ್ಯವಿದ್ದೇ ಇದೆ .

ಹಿನ್ನೆಲೆ ಆರ್ಟಿಕಲ್ 356 – ರಾಷ್ಟ್ರಪತಿ ಆಡಳಿತ

ವಿವರಣೆ : ಜನರೇ ಒಪ್ಪಿ ಆರಿಸಿರುವ ಸರ್ಕಾರವನ್ನು ಬದಿಗಿರಿಸಿ ಕೇಂದ್ರದವರು ಆಡಳಿತ ನಡೆಸುವಂತೆ ಮಾಡುವ ಆರ್ಟಿಕಲ್ 356 ಸಂವಿಧಾನದಿಂದ ಕೈ ಬಿಡುವುದರ ಬಗ್ಗೆ, ಡಿ ಎಂ ಕೆ ಪಕ್ಷದವರು ತಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದಾರೆ (https://munnota.wordpress.com/2014/04/06/dmk/ ) ಸಿ ಪಿ ಐ ಪಕ್ಷದವರು ಈ ಎರಡೂ ಆರ್ಟಿಕಲ್ ಗಳು ದುರ್ಬಳಕೆಯಾಗದಂತೆ ತಿದ್ದುಪಡಿ ಮಾಡುವ ಇರಾದೆ ಹೊಂದಿರುವುದು ಒಳ್ಳೆ ಬೆಳವಣಿಗೆ.

2. ಕೇಂದ್ರ ಸರ್ಕಾರಕ್ಕೆ ಸಂದಾಯವಾಗಿ, ಆಮೇಲೆ ಎಲ್ಲಾ ರಾಜ್ಯಗಳಿಗೆ ಮರು-ಹಂಚಿಕೆಯಾಗುವ ತೆರಿಗೆಯ ಹಣದ ಮಿತಿಯನ್ನು ಶೇಕಡಾ 50 ಕ್ಕೆ ಏರಿಸುವುದು ಮತ್ತು ಕೇಂದ್ರ ಸರ್ಕಾರದ ‘ತೆರಿಗೆ ರಹಿತ’ ಆದಾಯವನ್ನು ರಾಜ್ಯಗಳಿಗೆ ಹಂಚಿಕೆ ಆಗಬೇಕಾದ ‘ನಿಧಿ’ ಗೆ ಸೇರಿಸುವುದು 
ವಿವರಣೆ: ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ನಾನಾ ರೀತಿಯಿಂದ ಹಣ ಸಂದಾಯವಾಗುತ್ತದೆ. ಎಲ್ಲ ರಾಜ್ಯದ ಜನರ ದುಡಿಮೆ ಮೇಲೆ ವಿಧಿಸುವ ಆದಾಯ ತೆರಿಗೆ, ಕಾರ್ಪೋರೆಟ್ ತೆರಿಗೆ, ಪರ್ಸನಲ್ ಟ್ಯಾಕ್ಸ್,  ಸೇವಾ ತೆರಿಗೆ – ಹೀಗೆ ನಾನಾ ಮೂಲಗಳಿಂದ ದುಡ್ಡನ್ನು ಕೇಂದ್ರವು ಸಂಗ್ರಹಿಸುತ್ತದೆ.

Inline image 1
ರಾಜ್ಯಗಳು ತಮ್ಮದೇ ಆದಾಯ ಮೂಲ ಹೊಂದಿದ್ದರೂ ಅದು ಕೇಂದ್ರಕ್ಕೆ ಸೇರುವ ಮೊತ್ತದಾಷ್ಟಾಗುವುದಿಲ್ಲ. ಎಲ್ಲಾ ರಾಜ್ಯಗಳಿಂದ ಕೇಂದ್ರದಲ್ಲಿ ಒಟ್ಟುಗೂಡುವ ಹಣ ರಾಜ್ಯಗಳ ಆದಾಯಕ್ಕಿಂತ ಬಹುಪಾಲು ಹೆಚ್ಚು ಅನ್ನುವುದು ಎಲ್ಲರಿಗೂ ಅರ್ಥವಾಗುವಂತ ನಿಜ. ಆದರಿಂದ, ತನ್ನ ಆಳ್ವಿಕೆಗೆ ಮತ್ತು ತಾನು ಹಮ್ಮಿಕೊಂಡಿರುವ ಯೋಜನೆಗಳಿಗೆ ಬೇಕಾದ ಹಣ ಆ ರಾಜ್ಯದಲ್ಲೇ ಹುಟ್ಟಿದರೂ, ಅದರ ಬಹುಪಾಲು ಕೇಂದ್ರಕ್ಕೆ ಸೇರುವುದರಿಂದ  ಕೇಂದ್ರದಿಂದಲೇ ತನ್ನ ಹಣವನ್ನು ಪಡೀಬೇಕಾದಂತ  ‘ಕೇಂದ್ರೀಕೃತ’ ವ್ಯವಸ್ಥೆ ಇಂದು ಭಾರತ ಹೊಂದಿದೆ. ಸರಿಯಾದ ಒಕ್ಕೂಟ ವ್ಯವಸ್ಥೆಯ ದೃಷ್ಟಿಯಿಂದ ನೋಡಿದಾಗ ರಾಜ್ಯದಿಂದ ಹುಟ್ಟುವ ಎಲ್ಲಾ ತೆರಿಗೆ ದುಡ್ಡು ರಾಜ್ಯಕ್ಕೆ ಸೇರಬೇಕು ಅಂತ ಅನಿಸಿದರೂ, ಕೇಂದ್ರದಿಂದ  ರಾಜ್ಯಗಳಿಗೆ ಮರು-ಹಂಚಿಕೆ ಆಗುವ ತೆರಿಗೆ ಹಣದ ಮಿತಿಯನ್ನು ಹೆಚ್ಚು ಮಾಡುವುದು ಒಳ್ಳೆ ಹೆಜ್ಜೆಯೇ ಆಗಿದೆ.

3. ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು (Centrally Sponsored Schemes) ರಾಜ್ಯದ ಪಟ್ಟಿಗೆ ಸೇರಿಸುವುದು
ವಿವರಣೆ: ಕೇಂದ್ರ ಪ್ರಾಯೋಜಿತ ಯೋಜನೆಗಳು ಎಂದರೆ ಕೇಂದ್ರದಿಂದ ಹಣಕಾಸು ನೆರವು ಪಡೆದು ರಾಜ್ಯಗಳು ಜಾರಿಗೆ ತರಬೇಕಾದ “ಕೇಂದ್ರ”ವೇ ನಿರ್ಧರಿಸಿದ ಯೋಜನೆಗಳು. ಸ್ವತಂತ್ರ ನಂತರ ಸಮಗ್ರ ಭಾರತದ  ಅಭಿವೃದ್ಧಿಗೆ ಹಮ್ಮಿಕೊಂಡ ಯೋಜನೆಗಳಾಗಿ ಶುರುವಾದ ಇವು, ಬರಬರುತ್ತ ಸಂಖೆಯಲ್ಲಿ ಹೆಚ್ಚಾಗುತ್ತಾ ಹೋದವು. ರಾಜ್ಯಗಳ ಆರ್ಥಿಕ ಸ್ಥಿತಿ-ಗತಿ ನೋಡದೇ ಕೇಂದ್ರವೇ ಎಲ್ಲ ಯೋಜನೆಗಳನ್ನು ನಿರ್ಧರಿಸುತ್ತಿರುವುದು, ರಾಜ್ಯಗಳಿಗೆ ಸ್ಥಳೀಯ ಸಮಸ್ಯೆಗಳ ಅನುಗುಣವಾಗಿ ಯೋಜನೆಗಳನ್ನು ರೂಪಿಸಲು ಬಿಡದೇ ಕೇಂದ್ರವೇ ಎಲ್ಲ ತೀರ್ಮಾನಿಸುತ್ತಿರುವುದು, ಈ ಯೋಜನೆಗಳಿಗೆ ಬೇಕಾದ ಅನುದಾನ ಸರಿಯಾದ ಸಮಯದಲ್ಲಿ ಬಿಡುಗಡೆ ಆಗದೆ ಇರುವುದು – ಇವೆ ಈ ಯೋಜನೆಗಳ ಸುತ್ತ ಇರುವ ಜ್ವಲಂತ ಸಮಸ್ಯೆಗಳು. ರಾಜ್ಯಗಳು ಈ ಯೋಜನೆಗಳಿಗೆ ಮೊತ್ತವನ್ನು ಹೊಂದಿಸಿ ಸರಿದೂಗಿಸಲು ಹೆಣಗಾಡುವುದನ್ನು ತಪ್ಪಿಸಲು ಈ ಯೋಜನೆಗಳನ್ನು ರಾಜ್ಯದ ಸುಪರ್ದಿಗೆ ವಹಿಸುವುದು ಒಳ್ಳೆಯ ನಡೆಯಾಗಿದೆ.

4. ರಾಜ್ಯಗಳ ಒಪ್ಪಿಗೆ ಪಡೆಯದೇ ರಾಜ್ಯವನ್ನು ಭಾಗ ಮಾಡದಂತೆ ಆರ್ಟಿಕಲ್ 3 ಕ್ಕೆ ತಿದ್ದುಪಡಿ ತರುವುದು
ವಿವರಣೆ:  ಭಾರತ ದೇಶದ ಯಾವುದೇ ರಾಜ್ಯವನ್ನು ಭಾಗ ಮಾಡುವ , ಯಾವುದೇ ಎರಡು ರಾಜ್ಯಗಳನ್ನು ಸೇರಿಸುವ, ಯಾವುದೇ ರಾಜ್ಯದ ಹರವು/ವಿಸ್ತೀರ್ಣವನ್ನು ಹೆಚ್ಚು ಅಥವಾ ಕಡಿಮೆ ಮಾಡುವ, ಯಾವುದೇ ರಾಜ್ಯದ ಗಡಿಗಳನ್ನು ಬದಲಾಯಿಸುವ, ಯಾವುದೇ ರಾಜ್ಯದ ಹೆಸರು ಬದಲಾಯಿಸುವ ಕಾನೂನು ಮಾಡಲು ಸಂಸತ್ತಿಗೆ ಅಧಿಕಾರವಿದೆ ಎಂದು ಸಂವಿಧಾನದ ಆರ್ಟಿಕಲ್ 3 ಹೇಳುತ್ತದೆ. ಈಗಾಗಲೇ ಕಂಡಿರುವಂತೆ, ಆಂಧ್ರಪ್ರದೇಶವನ್ನು ಒಡೆದು ಎರಡು ರಾಜ್ಯಗಳನ್ನಾಗಿ ಮಾಡುವ ಪ್ರಸ್ತಾವನೆ, ಸಂಸತ್ತಿನಲ್ಲಿ ಮೊದಲು ಮಂಡನೆಯಾಗಿ ಎಲ್ಲರ ಒಪ್ಪಿಗೆ ಪಡೆಯಿತು (ಆ ರಾಜ್ಯದ ಸಂಸದರನ್ನು ಅಮಾನತಿನಲ್ಲಿಟ್ಟು ಹಾಗೂ ಲೋಕಸಬೆಯಲ್ಲಿ ನಡೆಯುತ್ತಿರುವುದು ಜನರಿಗೆ ಗೊತ್ತಾಗದಂತೆ ಟಿವಿಯ ನೇರ ಪ್ರಸಾರವನ್ನು ತಡೆದು). ನಿಯಮಗಳ ಪ್ರಕಾರ ಈ ಪ್ರಸ್ತಾವನೆಯನ್ನು ಆಂಧ್ರಪ್ರದೇಶದ ವಿದಾನಸಭೆಗೆ ಕಳಿಸಲಾಯಿತು ಮತ್ತು ಅದು ಅಲ್ಲಿ ತಿರಸ್ಕೃತಗೊಂಡಿತು. ಯಾವ ರಾಜ್ಯವನ್ನು ಎರಡು ಮಾಡಬೇಕೆಂಬ ಪ್ರಸ್ತಾವನೆಯಿತ್ತೋ ಅದನ್ನು ಆ ರಾಜ್ಯದ ವಿಧಾನಸಭೆಯಲ್ಲಿ ಒಪ್ಪದಿದ್ದರೂ ಆ ರಾಜ್ಯ ಎರಡು ಭಾಗವಾಗಿದ್ದು ( ಸೀಮಾಂಧ್ರ-ತೆಲಂಗಾಣ ) ರಾಜ್ಯಗಳ ಅಧಿಕಾರದ “ಮಿತಿ”ಯನ್ನು ಮತ್ತು ಕೇಂದ್ರದ ಅಧಿಕಾರ “ವ್ಯಾಪ್ತಿ”ಯನ್ನು ತೋರಿಸುತ್ತದೆ. ಆರ್ಟಿಕಲ್ 3 ನ್ನು ಕೈ ಬಿಡುವುದು ಕಷ್ಟಸಾಧ್ಯವಾದರೂ, ಸೂಕ್ತ ತಿದ್ದುಪಡಿಯಿಂದ ಕೇಂದ್ರದ ಅಧಿಕಾರಕ್ಕೆ ಕಡಿವಾಣ ಹಾಕಬೇಕಿರುವ ಅಗತ್ಯ ಕಾಣುತ್ತಿದೆ.

ಇನ್ನು ಈ ಪಕ್ಷದ ಪ್ರಣಾಳಿಕೆಯಲ್ಲಿ ಕೇಂದ್ರೀಕೃತ ವ್ಯವಸ್ಥೆಯನ್ನು ಬೆಂಬಲಿಸುವ, ಒಕ್ಕೂಟ ವಿರೋಧಿ ಅನ್ನಿಸುವ ಅಂಶಗಳು ಹೀಗಿವೆ:

5. ಸಂವಿದಾನದ ಎಂಟನೆ ಪರಿಚೇದದಲ್ಲಿ ಪಟ್ಟಿ ಮಾಡಿರುವ ನುಡಿಗಳಿಗೆ ಪ್ರೋತ್ಸಾಹ ಕೊಡುವುದು ಮತ್ತು ಅವುಗಳನ್ನು ಬೆಳೆಸುವುದು

ವಿವರಣೆ: ಸಂವಿಧಾನದ ಎಂಟನೆ ಪರಿಚ್ಛೇಧ, ಕನ್ನಡ-ತಮಿಳು-ತೆಲುಗು ಸೇರಿದಂತೆ ಒಟ್ಟು 22 ನುಡಿಗಳನ್ನು ಗುರುತಿಸಿದೆ. ಎಂಟನೆ ಪರಿಚ್ಛೇದವು ಹಲವಾರು ಪ್ರಾದೇಶಿಕ ನುಡಿಗಳನ್ನು ಗುರುತಿಸಿದ್ದರೂ, ಹಿಂದಿ ಎಂಬ ಒಂದು ಪ್ರಾದೇಶಿಕ ನುಡಿಗೆ ಮಾತ್ರ ಕೇಂದ್ರ ಸರ್ಕಾರದ ಅಧಿಕೃತ ಭಾಷೆ ಪಟ್ಟವನ್ನು ನೀಡಲಾಗಿದೆ. ಭಾರತ ಸರ್ಕಾರ ಎಲ್ಲ 22 ನುಡಿಗಳನ್ನು ಬೆಳೆಸುವ ಜವಾಬ್ದಾರಿ ಹೊಂದಿದೆಯಾದರೂ ಕೇವಲ ಒಂದು ನುಡಿಗೆ (ಹಿಂದಿ) ಮಾತ್ರ ಹೆಚ್ಚಿನ ಪ್ರೋತ್ಸಾಹ ನೀಡಿ, ಆ ನುಡಿಯನ್ನು ಮಾತ್ರ ಬೆಳೆಸುತ್ತಾ ಉಳಿದ ನುಡಿಗಳಿಗೆ-ಭಾಷಿಕರಿಗೆ ತಾರತಮ್ಯ ಎಸಗುತ್ತಿದೆ. ಕಾರಣ, ಸಂವಿಧಾನದಲ್ಲಿ ಹಿಂದಿಯನ್ನೇ ಬಳಸುವಂತೆ-ಬೆಳೆಸುವಂತೆ ಹೇಳುವ ಆರ್ಟಿಕಲ್ ಗಳು ಹೇರಳವಾಗಿವೆ. ಸರಿಯಾದ ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ನುಡಿಗಳಿಗೆ ಕೇಂದ್ರದ ಅಧಿಕೃತ ನುಡಿ ಸ್ಥಾನಮಾನ ಸಿಗುವಂತೆ ಮಾಡಿದರೆ ಮಾತ್ರ ಆ ನುಡಿಗಳನ್ನು ಪ್ರೋತ್ಸಾಹಿಸಿದಂತೆ-ಬೆಳೆಸಿದಂತೆ. ಈ ನಿಟ್ಟಿನಲ್ಲಿ ಸಂವಿಧಾನ ಆ ಆರ್ಟಿಕಲ್ ಗಳಿಗೆ ತಿದ್ದುಪಡಿಯ ಬಗ್ಗೆ ಪ್ರಸ್ತಾಪಿಸದೆ, ಎಲ್ಲ ನುಡಿಗಳನ್ನು ಬೆಳೆಸುತ್ತೇವೆ ಎನ್ನುವುದು ತೋರಿಕೆಯ ಮಾತಾಗುತ್ತದೆ ಮತ್ತು ಈಗಿರುವ ವ್ಯವಸ್ಥೆಯನ್ನೇ ಮುಂದುವರೆಸುವ ಧೋರಣೆಯಂತೆ ಕಾಣುತ್ತದೆ.

6. ಲೋಕಪಾಲ್ ವ್ಯಾಪ್ತಿಯನ್ನು ಹೆಚ್ಚಿಸುವುದು ( ಸರ್ಕಾರ ಮತ್ತು ಕಾಸಗಿ ಕ್ಷೇತ್ರದವರ ನಡುವೆ ನಡೆಯುವ ಒಪ್ಪಂದಗಳನ್ನೂ ಒಳಗೊಂಡಂತೆ )
ವಿವರಣೆ: ಲೋಕಪಾಲ್ ಬಗ್ಗೆ ಈಗಾಗಲೇ ಹಲವಾರು ಚರ್ಚೆಗಳಾಗಿವೆ. ಭ್ರಷ್ಟಾಚಾರ ನಿರ್ಮೂಲನೆ ಅಗತ್ಯತೆಯನ್ನು ಯಾರೂ ಒಪ್ಪದೇ ಇರರು. ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬೇಕಿದ್ದ ಕೇಂದ್ರ ತನಿಖಾ ದಳ ( ಸಿ ಬಿ ಐ ) ಹೇಗೆ ಕೇಂದ್ರ ಸರ್ಕಾರದ ಕೈಗೊಂಬೆಯಾಗಿದೆ ಎಂದು ಈಗಾಗಲೇ ನೋಡಿದ್ದೇವೆ.’ಲೋಕ ಪಾಲ್’ ಕೂಡ ಅದರ ಹೊರತಾಗಿರದು. ಭ್ರಷ್ಟಾಚಾರವನ್ನು ತಡೆಯಲು ರಾಜ್ಯಗಳಲ್ಲಿರುವ ಲೋಕಾಯುಕ್ತಗಳಿಗೆ ಹೆಚ್ಚಿನ ಅಧಿಕಾರ ಕೊಡುವ ಮತ್ತು ತಂತ್ರಜ್ಞಾನವನ್ನು ಹೆಚ್ಚು ಬಳಸಿ ಸರ್ಕಾರೀ ಅಧಿಕಾರಿಗಳ ಹಸ್ತಕ್ಷೇಪ ಕಡಿಮೆ ಮಾಡುವ ದಾರಿಗಳು ಸರಿ ಕಾಣುತ್ತವೆ. ಅದನ್ನು ಬಿಟ್ಟು, ರಾಜ್ಯಗಳ ಬೆದರಿಸುವಂತ ಹೊಸದೊಂದು “ಕೇಂದ್ರೀಯ ಸಂಸ್ಥೆ”ಗೆ ಹೆಚ್ಚಿನ ಅಧಿಕಾರ ಕೊಡುವುದು “ಒಕ್ಕೂಟ ವ್ಯವಸ್ಥೆ” ದೃಷ್ಟಿಯಿಂದ ಸರಿಯಲ್ಲ.
7. ಆಯಾ ರಾಜ್ಯಗಳ ಮುಕ್ಯಮಂತ್ರಿ ಆಯ್ಕೆ ಮಾಡಿದ 3 ಜನರಲ್ಲಿ ಒಬ್ಬರನ್ನು ಆ ರಾಜ್ಯದ ರಾಜ್ಯಪಾಲರಾಗಿ ರಾಷ್ಟ್ರಪತಿಯು ಆರಿಸುವುದು
ವಿವರಣೆ:   ಒಂದು ರಾಜ್ಯದ ಆಡಳಿತವನ್ನು ಆ ರಾಜ್ಯದ ಜನರು ಆರಿಸುವ ಮುಖ್ಯಮಂತ್ರಿಗಳೇ ನಡೆಸುವರಾಗಿರುತ್ತಾರೆ. ರಾಜ್ಯಪಾಲ ಅನ್ನುವವರು ಕೇಂದ್ರ ಸರ್ಕಾರಕ್ಕೆ ಸಂಬಂಧಪಟ್ಟ ವ್ಯಕ್ತಿಯಾಗಿದ್ದು, ತಮಗೆ ನಿಯೋಜಿಸಿದ   ರಾಜ್ಯದ ಉಸ್ತುವಾರಿಯನ್ನು ವಹಿಸಿಕೊಂಡಿರುತ್ತಾರೆ. ರಾಜ್ಯಸರ್ಕಾರದ ಆಡಳಿತದ ಎಲ್ಲ ಆಗು-ಹೋಗುಗಳು ಇವರ ಕಣ್ಗಾವಲಿನಲ್ಲೇ ನಡೆಯುತ್ತಿರುತ್ತವೆ ಮತ್ತು ಆ ಕುರಿತು ಕೇಂದ್ರಕ್ಕೆ ವರದಿಯಾಗುತ್ತಿರುತ್ತವೆ.
ಸಂವಿಧಾನದತ್ತವಾಗಿ ರಾಜ್ಯಪಾಲರಿಗೂ ಕೆಲವು ಅಧಿಕಾರಗಳಿರುತ್ತವೆ. ಹೀಗಿರುವಾಗ ರಾಜ್ಯಪಾಲರ ಆಯ್ಕೆ ಆಯಾ ರಾಜ್ಯಕ್ಕೆ ಬಿಡುವುದು ಸರಿಯಾದ ನಡೆ. ರಾಜ್ಯಪಾಲರ ಆಯ್ಕೆಯ ವಿಧಾನದಲ್ಲಿ ಕೊಂಚ ಬದಲಾವಣೆ ಮಾಡಿದ್ದರೂ, ರಾಷ್ಟ್ರಪತಿಗಳೆ ಅವರನ್ನು ಆರಿಸುವುದು ಕೇಂದ್ರೀಕೃತ ವ್ಯವಸ್ಥೆಯತ್ತ ಹೊರಳುವುದೇ ಆಗಿದೆ.
This entry was posted in ಒಕ್ಕೂಟ ವ್ಯವಸ್ಥೆ, ಲೋಕಸಭೆ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s