ಒಡೆದು ಎರಡಾದ ಕೋರಿಯಾದ ಕತೆ ಹೇಳುತ್ತಿದೆ: ಒಗ್ಗಟ್ಟಲ್ಲೇ ಬಲವಿದೆ.

ಎರಡನೆಯ ವಿಶ್ವಯುದ್ಧ ಮುಗಿದಾಗ ಅಮೇರಿಕ ಮತ್ತು ರಷ್ಯಾದ ನಡುವಿನ ತಿಕ್ಕಾಟಕ್ಕೆ ಬಲಿಯಾಗಿ ಎರಡು ಪಾಲಾದ ಇನ್ನೊಂದು ನಾಡು ಕೋರಿಯಾ. ಸಾವಿರ ವರ್ಷಗಳ ಕಾಲ ನಿರಂತರವಾಗಿ ಒಂದಾಗಿದ್ದ ನಾಡು 60 ವರ್ಷದ ಹಿಂದೆ ಒಡೆದು ದಕ್ಷಿಣ ಮತ್ತು ಉತ್ತರವೆಂದು ಬೇರೆಯಾಯಿತು. ನಾಯಕರೆನಿಸಿಕೊಂಡವರ ಸ್ವಪ್ರತಿಷ್ಟೆ ಮತ್ತು ಅಹಂ ಕೋರಿಯನ್ನರನ್ನು ಒಂದಾಗದಂತೆ ತಡೆದಿದ್ದರೂ ಇಂದಲ್ಲ ನಾಳೆ ಒಂದಾಗಲೇಬೇಕು ಅನ್ನುವ ಅನಿಸಿಕೆ ಅಲ್ಲಿ ಇನ್ನು ಗಟ್ಟಿಯಾಗಿ ಬೇರೂರಿದೆ. ಅವರ ಒಡಕಿನ ಕತೆಯಲ್ಲಿ ನಮಗೊಂದು ಎಚ್ಚರಿಕೆಯೂ ಇದೆ.

ಕೋರಿಯಾ ಎರಡಾದ ಕತೆ                                                                                                                                                  ಕ್ರಿ.ಶ 918ರಿಂದ ಕ್ರಿ.ಶ 1910ರವರೆಗೆ ಸರಿ ಸುಮಾರು ಸಾವಿರ ವರ್ಷಗಳ ಕಾಲ ಒಂದಾಗಿದ್ದ ಕೋರಿಯಾ 1910ರಲ್ಲಿ ಅಂದಿನ ವಸಾಹತುಶಾಹಿ ಜಪಾನಿನ ಕೈವಶವಾಗುತ್ತೆ. ಅಲ್ಲಿಂದ ನಿರಂತರವಾಗಿ ಕೋರಿಯಾ ದೇಶವನ್ನು ಸಂಪೂರ್ಣವಾಗಿ ಸಾಂಸ್ಕೃತಿಕವಾಗಿ ಮತ್ತು ರಾಜಕೀಯವಾಗಿ ಜಪಾನಿನೊಂದಿಗೆ ವಿಲೀನಗೊಳಿಸಲು ವಿಫಲ ಪ್ರಯತ್ನ ಜಪಾನ್ ನಡೆಸುತ್ತೆ. ಫಲವತ್ತಾದ ಕೋರಿಯಾ ದೇಶಕ್ಕೆ ಜಪಾನೀ ರೈತರನ್ನು ದೊಡ್ಡ ಸಂಖ್ಯೆಯಲ್ಲಿ ವಲಸೆ ಮಾಡಿಸಿ, ಅವರಿಗೆ ಕೋರಿಯಾದ ಭೂಮಿಯ ಒಡೆತನ ಕೊಡಿಸಿ, ಕೋರಿಯನ್ನರನ್ನು ಅವರ ಆಳುಗಳನ್ನಾಗಿಸಿಕೊಂಡು ಅವರ ದುಡಿಮೆಯ ಫಲವನ್ನು ಲೂಟಿ ಮಾಡುತ್ತೆ. ಕೋರಿಯನ್ನರ ಇತಿಹಾಸವನ್ನು ಜಪಾನಿ ಇತಿಹಾಸದ ಭಾಗವೇ ಎಂಬಂತೆ ತೋರಿಸಲು ಜಪಾನಿನಲ್ಲಿ ಸಿಕ್ಕ ಕಲ್ಲಿನ ಸ್ಮಾರಕವೊಂದನ್ನು ಕೋರಿಯಾಗೆ ಕದ್ದು ಸಾಗಿಸಿ ಕೋರಿಯಾ ಎಂದಿಗೂ ಜಪಾನಿನ ಭಾಗವಾಗಿತ್ತು ಎಂಬಂತೆ ತೋರಿಸುವ ಪ್ರಯತ್ನವನ್ನು ಜಪಾನ್ ಮಾಡುತ್ತೆ. ಆದರೆ ಇಂತಹ ಎಲ್ಲ ಪ್ರಯತ್ನಗಳನ್ನು ಮೀರಿ ಕೋರಿಯಾವನ್ನು ಮತ್ತೆ ಒಂದಾಗಿಸಬೇಕೆಂಬ ಪ್ರಯತ್ನ ಮಂದಗಾಮಿಯಾಗಿ ಕೋರಿಯನ್ನರಲ್ಲಿ ಹರಿಯುತ್ತಲೇ ಇರುತ್ತೆ. 1945ರಲ್ಲಿ ಜಪಾನ್ ಎರಡನೆಯ ಮಹಾಯುದ್ಧದಲ್ಲಿ ಸೋತು ನೆಲಕ್ಕಚ್ಚಿದಾಗ ಕೋರಿಯಾವನ್ನು ಉತ್ತರ-ದಕ್ಷಿಣವೆಂಬ ಎರಡು ಭಾಗ ಮಾಡಿ ಉಸ್ತುವಾರಿ ವಹಿಸಿಕೊಳ್ಳುವ ರಷ್ಯಾ ಮತ್ತು ಅಮೇರಿಕ ಸೂಕ್ತ ಸಮಯದಲ್ಲಿ ಕೋರಿಯಾಗೆ ಸ್ವಯಾಡಳಿತ ಕೊಡುವ ಭರವಸೆ ನೀಡುತ್ತವೆ. ಉತ್ತರದಲ್ಲಿ ಸೋವಿಯತ್ ಆಶೀರ್ವಾದದ ಕಮ್ಯೂನಿಸ್ಟ್ ಸರ್ಕಾರವೊಂದು ಜಾರಿಗೆ ಬಂದರೆ ದಕ್ಷಿಣದಲ್ಲಿ ಅಮೇರಿಕದ ಪರವಾದ ಸರ್ಕಾರ ಜಾರಿಗೆ ಬರುತ್ತೆ. ಎರಡೂ ಸರ್ಕಾರಗಳು ತಾನೇ ಕೋರಿಯಾದ ನಿಜವಾದ ಪ್ರತಿನಿಧಿ ಎಂದು ವಾದಿಸುತ್ತವೆ. ಆದರೆ ಅವರೊಳಗಿನ ಬಿಕ್ಕಟ್ಟು ಬಗೆಹರಿಯದೇ ಇದ್ದಾಗ ಮಧ್ಯಸ್ಥಿಕೆ ವಹಿಸುವ ಅಮೇರಿಕ ವಿವಾದವನ್ನು ವಿಶ್ವಸಂಸ್ಥೆಗೆ ಎಳೆದು ಕೊನೆಯಲ್ಲಿ 1948ರಲ್ಲಿ ಉತ್ತರ ಮತ್ತು ದಕ್ಷಿಣ ಕೋರಿಯಾ ಅನ್ನುವ ಎರಡು ಪ್ರತ್ಯೇಕ ದೇಶಗಳಾಗುವಂತೆ ಮಾಡುತ್ತದೆ.

ಉತ್ತರ vs ದಕ್ಷಿಣ

ಕಮ್ಯೂನಿಸ್ಟ್ ರಷ್ಯಾದ ಬೆಂಬಲದ ಜೊತೆ ಹೇಗಾದರೂ ದಕ್ಷಿಣ ಕೋರಿಯಾವನ್ನು ಗೆದ್ದು ಕೋರಿಯಾವನ್ನು ಕಮ್ಯೂನಿಸ್ಟ್ ಆಡಳಿತದಡಿ ಒಂದಾಗಿಸಬೇಕು ಅನ್ನುವ ಉತ್ತರ ಕೋರಿಯಾದ ಪ್ರಯತ್ನ 1950ರಲ್ಲಿ ಕೋರಿಯನ್ನರ ನಡುವೆ ಯುದ್ಧಕ್ಕೆ ನಾಂದಿ ಹಾಡುತ್ತದೆ. ಮೂರು ವರ್ಷ ನಡೆಯುವ ಈ ಯುದ್ಧ ಕೊನೆಯಲ್ಲಿ ಅಮೇರಿಕ ನೇತೃತ್ವದ ವಿಶ್ವಸಂಸ್ಥೆಯ ಗುಂಪು ಮಧ್ಯ ಪ್ರವೇಶಿಸಿ ದಕ್ಷಿಣ ಕೋರಿಯಾದ ಪರ ಯುದ್ಧ ಮಾಡಿ ಉತ್ತರ ಕೋರಿಯಾವನ್ನು ಹಿಮ್ಮೆಟ್ಟಿಸುವುದರೊಂದಿಗೆ ಕೊನೆಯಾಗುತ್ತೆ. ಇದರೊಂದಿಗೆ ಎರಡು ದೇಶಗಳ ನಡುವೆ ಬಿಗಿ ಭದ್ರತೆಯ 4ಕಿ.ಮೀ ಅಗಲದ ಡಿಮಿಲಿಟರೈಸ್ಡ್ ವಲಯವೊಂದು ಸೃಷ್ಟಿಯಾಗುತ್ತೆ. ರಷ್ಯಾ, ಚೈನಾ, ಜಪಾನ್ ಹೀಗೆ ಎಲ್ಲರಿಗೂ ಕೋರಿಯಾ ಒಂದಾಗುವುದು ಬೇಕಿರಲಿಲ್ಲ. ಅದಕ್ಕೆ ತಕ್ಕಂತೆ ಒಡೆದು ಆಳುವ ರಾಜಕೀಯ ಮಾಡುವ ಈ ದೇಶಗಳು ಕೋರಿಯನ್ನರ ನಡುವಿನ ಕಂದರ ಹೆಚ್ಚುವಂತೆ ಮಾಡುತ್ತಾರೆ. ಇದೇ ಹೊತ್ತಿನಲ್ಲಿ ಜಾಗತೀಕರಣಕ್ಕೆ ತೆರೆದುಕೊಳ್ಳುತ್ತಿರುವ ನಾಡುಗಳೆಲ್ಲ ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ಸ್ ಮುಂತಾದ ಸುಧಾರಿತ ತಂತ್ರಜ್ಞಾನದ ಅಭಿವೃದ್ಧಿಯತ್ತ ಗಮನ ಹರಿಸಿ ಮುನ್ನಡೆಯುವ ಹೊತ್ತಿನಲ್ಲಿ ಅಮೇರಿಕದ ಸಹಾಯದೊಂದಿಗೆ ಇಂತಹದೊಂದು ಆರ್ಥಿಕ ಮಾದರಿಯನ್ನು ದಕ್ಷಿಣ ಕೋರಿಯಾ ಅಳವಡಿಸಿಕೊಳ್ಳುತ್ತೆ. ಅದರಂತೆ ಹ್ಯುಂಡಾಯ್, ಸ್ಯಾಮಸಂಗ್, ಎಲ್.ಜಿ ತರದ ವಿಶ್ವಮಾನ್ಯ ಸಂಸ್ಥೆಗಳು ಅಲ್ಲಿ ಯಶಸ್ವಿಯಾಗುತ್ತವೆ. ಅಲ್ಲಿನ ಜನರ ಜೀವನ ಮಟ್ಟ ವ್ಯಾಪಕವಾಗಿ ಸುಧಾರಿಸುತ್ತೆ. ಇನ್ನೊಂದೆಡೆ ಮಾವೋ-ಸ್ಟಾಲಿನ್ ವಾದಕ್ಕೆ ಅಂಟಿಕೊಂಡ ಉತ್ತರ ಕೋರಿಯಾ ಆಡಳಿತದ ಎಲ್ಲ ವ್ಯವಸ್ಥೆಯನ್ನು ಕೇಂದ್ರಿಕರಿಸಿ, ಖಾಸಗಿ ಬಂಡವಾಳ, ಉದ್ಯಮಶೀಲತೆಯೆಲ್ಲವನ್ನು ಕಡೆಗಣಿಸಿ ಮೈನಿಂಗ್, ಸ್ಟೀಲ್ ಉತ್ಪಾದನೆ, ಮಿಲಿಟರಿ ಉದ್ದಿಮೆಯತ್ತ ಗಮನಹರಿಸುತ್ತೆ. ತಮ್ಮದೇ ಸ್ವಾರ್ಥದ ಕಾರಣಕ್ಕೆ ಇದನ್ನು ಬೆಂಬಲಿಸುತ್ತಿದ್ದ ಸೋವಿಯತ್ ಒಕ್ಕೂಟ 90ರಲ್ಲಿ ತುಂಡು ತುಂಡಾಗುತ್ತೆ. ಇನ್ನೊಂದೆಡೆ ಮಾರುಕಟ್ಟೆ ಆಧಾರಿತ ಅರ್ಥ ವ್ಯವಸ್ಥೆಯೆಡೆಗೆ ಸಾಗುವ ಚೈನಾ ದೊಡ್ಡ ಮಟ್ಟದಲ್ಲಿ ತನ್ನ ಅರ್ಥವ್ಯವಸ್ಥೆಯನ್ನು, ಜನರ ಆರ್ಥಿಕ ಮಟ್ಟವನ್ನು ಸುಧಾರಿಸಿ ಮುನ್ನುಗ್ಗುತ್ತದೆ. ಚೀನಿಯರು ಕಮ್ಯೂನಿಸ್ಟ್ ಸಿದ್ಧಾಂತಕ್ಕೆ ಮೋಸ ಮಾಡಿದರು ಎಂದು ಗೊಣಗುವ ಉತ್ತರ ಕೋರಿಯಾದ ನಾಯಕರು ಪಕ್ಕದಲ್ಲೇ ಕ್ಷಿಪ್ರ ವೇಗದಲ್ಲಿ ಏಳಿಗೆಯತ್ತ ಸಾಗಿರುವ ದಕ್ಷಿಣ ಕೋರಿಯಾವನ್ನೂ ಕಂಡು ಕಾಣದಂತೆ ಕೂರುತ್ತಾರೆ. ದಿನೇ ದಿನೇ ಕುಸಿಯುವ ಅಲ್ಲಿನ ಅರ್ಥ ವ್ಯವಸ್ಥೆಯಿಂದ ಕಂಗೆಟ್ಟ ಜನರು ದಂಗೆ ಏಳಬಾರದು ಎಂದು ಇಡೀ ಸರ್ಕಾರವನ್ನೇ ಹೆಚ್ಚು ಕಡಿಮೆ ಮಿಲಿಟರಿ ಸರ್ವಾಧಿಕಾರತ್ವದತ್ತ ಕೊಂಡೊಯ್ಯುತ್ತಾರೆ. ಇದರ ಪರಿಣಾಮವಾಗಿ ಇಂದು ಉತ್ತರ ಕೋರಿಯಾ ಒಂದು ಬಡತನದ ತಾಣವಾಗಿ ಅಲ್ಲಿನ ಅರ್ಧಕ್ಕೂ ಹೆಚ್ಚು ಜನರು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ ಅನ್ನುವ ಅಂಕಿ-ಅಂಶಗಳಿವೆ.

ಕೋರಿಯನ್ನರು ಒಂದಾಗಲಿ

ಈ ಎಲ್ಲ ನೋವಿನ ನಡುವೆಯೂ ಕೋರಿಯನ್ನರನ್ನು ಒಂದಾಗಿಸಬೇಕೆಂಬ ಪ್ರಯತ್ನ ನಿರಂತರವಾಗಿ ಸಾಗಿದೆ. ಕೋರಿಯನ್ನರ ನಡುವಿನ ಸಾಂಸ್ಕೃತಿಕ ಕೊಡುಕೊಳ್ಳುವಿಕೆಯನ್ನು ಹೆಚ್ಚಿಸುವ ಪ್ರಯತ್ನ ಎರಡು ಕಡೆಯ ಕೋರಿಯನ್ನರು ಮಾಡುತ್ತಿದ್ದಾರೆ. 2000 ಮತ್ತು 2004ರ ಒಲಂಪಿಕ್ಸ್ ಆಟದ ಉದ್ಘಾಟನೆ ಸಮಯದಲ್ಲಿ ಎರಡು ದೇಶಗಳು ಒಟ್ಟಿಗೆ ಹೆಜ್ಜೆ ಹಾಕುವಷ್ಟರ ಮಟ್ಟಿಗೆ ಈಗ ಅವರು ಹತ್ತಿರ ಬಂದಿದ್ದರೂ ಕೋರಿಯನ್ನರ ಒಗ್ಗೂಡುವಿಕೆಯಿಂದ ಏಷ್ಯಾದ ಆ ಭಾಗದಲ್ಲಿ ಆಗಬಹುದಾದ ಜಿಯೋಪಾಲಿಟಿಕಲ್ ಪಲ್ಲಟಗಳಿಂದ ತೊಂದರೆಗೊಳಗಾಗಬಹುದಾದ ಚೈನಾ, ಜಪಾನ್ ಮತ್ತು ರಷ್ಯಾಗಳು ಕೋರಿಯನ್ನರ ಒಡಕು ಮುಂದುವರೆಯುವಂತೆ ನೋಡಿಕೊಳ್ಳಲು ಏನು ಮಾಡಬೇಕೋ ಅದನ್ನು ಮಾಡುತ್ತಿದ್ದಾರೆ. ಸಿದ್ಧಾಂತಗಳ ತಿಕ್ಕಾಟವನ್ನು ಮೀರಿದ ಕೋರಿಯನ್ ಯುವ ಸಮುದಾಯವೇ ಮುಂದೊಂದು ದಿನ ನಿಜವಾಗಿಯೂ ಕೋರಿಯನ್ನರ ಏಕೀಕರಣ ಸಾಧ್ಯವಾಗಿಸಬಲ್ಲರು ಅನ್ನುವ ಆಶಾವಾದ ಕೋರಿಯನ್ ಸಮಾಜದಲ್ಲಿದೆ. ಆ ದಿನ ಬೇಗನೇ ಬರಲಿ.

ನಮ್ಮ ಒಗ್ಗಟ್ಟೇ ನಮ್ಮ ಬಲ

ಭಾರತದ ಅತಿಯಾದ ಕೇಂದ್ರಿಕೃತ ವ್ಯವಸ್ಥೆಯಲ್ಲಿ ಭಾರತದ ವೈವಿಧ್ಯತೆಯನ್ನು ಶಾಪವೆಂದೇ ಪರಿಗಣಿಸಿ, ಎಲ್ಲವನ್ನು ದೆಹಲಿಯಿಂದಲೇ ನಿಯಂತ್ರಿಸುವುದೇ ಭಾರತವನ್ನು ನಡೆಸುವ ಹಾದಿ ಅನ್ನುವ ನಂಬಿಕೆ ಹಲವರಲ್ಲಿದೆ. ಆದರೆ ಜಗತ್ತಿನಾದ್ಯಂತ ಸಾಬೀತಾಗಿರುವಂತೆ ಅತಿಯಾದ ಕೇಂದ್ರಿಕೃತ ವ್ಯವಸ್ಥೆಗಳು ಎಂದಿಗೂ ನಿಜವಾದ ಏಳಿಗೆ ಹೊಂದಲು ಸಾಧ್ಯವಿಲ್ಲ. ಭಾರತದಲ್ಲಿ ರಾಜ್ಯಗಳಿಗೆ ತಮ್ಮ ಏಳಿಗೆಯ ಹಾದಿಯನ್ನು ಸ್ಪಷ್ಟವಾಗಿ ತಾವೇ ರೂಪಿಸಿಕೊಳ್ಳಲು ಬೇಕಿರುವ ಸ್ವಾಯತ್ತೆ ನೀಡದೇ ಇರುವ ದೊಡ್ಡ ರಾಜ್ಯಗಳನ್ನು ಇನ್ನಷ್ಟು ಚಿಕ್ಕದಾಗಿಸುತ್ತ ಹೋದರೆ ಅದರ ನೇರ ಲಾಭ ಕೇಂದ್ರಿಕೃತ ವ್ಯವಸ್ಥೆಯನ್ನು ಪ್ರತಿಪಾದಿಸುವ ಕೆಲವೇ ಕೆಲವರಿಗೆ ದಕ್ಕುತ್ತೆ. ಒಡೆದು ಚಿಕ್ಕದಾಗುವ ರಾಜ್ಯಗಳು ರಾಜಕೀಯವಾಗಿ ಇನ್ನಷ್ಟು ಬಲಹೀನಗೊಂಡು ದೆಹಲಿಯ ಕೈಗೊಂಬೆಗಳಾಗುತ್ತವೆ. ವಿಜಯನಗರ ಸಾಮ್ರಾಜ್ಯದ ಪತನದ ನಂತರ ಒಡೆದು ದಿಕ್ಕಾಪಾಲಾಗಿದ್ದ ಕನ್ನಡಿಗರು ಮೂನ್ನುರು ವರ್ಶಗಳಿಗೂ ಅಧಿಕ ಕಾಲ ಅನಾಥರಂತೆ ಒದ್ದಾಡಿದ್ದನ್ನು ಇಲ್ಲಿ ನೆನೆಯಬೇಕು. ಇಂದಿಗೂ ಕನ್ನಡೇತರ ಶಕ್ತಿಗಳಿಗೆ ಕನ್ನಡಿಗರು ಒಡೆದು ಹೋದಷ್ಟು ಲಾಭವೇ. ಇತರರ ಸ್ವಾರ್ಥದ ಲೆಕ್ಕಾಚಾರದಲ್ಲಿ ಸಿಲುಕಿ ಒಡೆದು ಒದ್ದಾಡುತ್ತಿರುವ ಕೋರಿಯನ್ನರ ಕತೆಯಿಂದ ಕನ್ನಡಿಗರು ಕಲಿಯಬೇಕಾದ ಪಾಠ ಇಷ್ಟೇ: ಒಗ್ಗಟ್ಟಲ್ಲಿ ಬಲವಿದೆ.

This entry was posted in ಒಕ್ಕೂಟ ವ್ಯವಸ್ಥೆ, ಕನ್ನಡ, ಕೊರಿಯನ್. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s