ಹಿಂದಿ ಕಲಿತು ಸುಸಂಸ್ಕೃತರಾಗಿ : ಇದೆಂತಹ ಹುಚ್ಚು ವಾದ !

ಇತ್ತೀಚೆಗೆ ಮಕ್ಕಳ ದಿನಾಚರಣೆಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಕರ್ನಾಟಕದ ರಾಜ್ಯಪಾಲರು ಮಕ್ಕಳು ಹಿಂದಿ ಕಲಿತು ಸುಸಂಸ್ಕೃತರಾಗಬೇಕು ಎಂಬರ್ಥದ ಮಾತುಗಳನ್ನು ಆಡಿದ್ದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಕರ್ನಾಟಕಕ್ಕೆ ರಾಜ್ಯಪಾಲರಾಗಿ ಇತ್ತೀಚಿನ ದಿನದಲ್ಲಿ ಬಂದ ಪ್ರತಿಯೊಬ್ಬರೂ ಹಿಂದಿ ಪ್ರಚಾರಕ್ಕೆ ಟೊಂಕ ಕಟ್ಟಿ ನಿಂತಂತೆ ಕಾಣುವುದು ಹಳೆಯ ವಿಚಾರ. ಆದರೆ ಇಂತಹ ಹೇಳಿಕೆಯ ಹಿಂದಿರುವ ಮನಸ್ಥಿತಿಯು ಭಾರತದ ಭಾಷಾ ವೈವಿಧ್ಯತೆಯನ್ನು ಹೇಗೆ ನೋಡುತ್ತಿದೆ ಅನ್ನುವುದರತ್ತ ನಾವೆಲ್ಲರೂ ಗಮನಹರಿಸಲೇಬೇಕಿದೆ.

ವೈವಿಧ್ಯತೆ ಅನ್ನುವ ಶಾಪ !

ಕರ್ನಾಟಕಕ್ಕೆ ಬಂದಿರುವ ಈ ಹಿಂದಿನ ಯಾವುದೇ ರಾಜ್ಯಪಾಲರು ಇಲ್ಲಿ ನೆಲೆಸಿರುವ ಜನರು ಕನ್ನಡ ಕಲಿತು ಇಲ್ಲಿಯ ಮುಖ್ಯವಾಹಿನಿಯಲ್ಲಿ ಬೆರೆಯಬೇಕು ಎಂದು ಹೇಳಿದ್ದಾರಾ? ಹಿಂದಿ ಕಲಿತರೆ ಸುಸಂಸ್ಕೃತರಾಗುತ್ತೀರಾ ಅನ್ನುವ ಹೇಳಿಕೆಯಲ್ಲೇ ಇತರೆ ಭಾಷಾ ವೈವಿಧ್ಯತೆಯನ್ನು ವರವೆಂದು ಕಾಣದೇ ಶಾಪದಂತೆ ಕಾಣುವ ಮನಸ್ಥಿತಿ ಇದೆ ಅನ್ನುವ ಅನುಮಾನ ಬರುವುದಿಲ್ಲವೇ? ಕನ್ನಡ ಹತ್ತು ಸಾವಿರಕ್ಕೂ ಹೆಚ್ಚು ವರ್ಷ ಹಳೆಯದಾದ ಭಾಷೆ. ಲಿಖಿತ ಸ್ವರೂಪದಲ್ಲಿ ದೊರೆತ ಆಧಾರಗಳ ಮೇಲೆ ಅದರ ಹಳಮೆಯನ್ನು ಎರಡು ಸಾವಿರ ವರ್ಷ ಎಂದು ಹೇಳುವುದನ್ನು ಕೇಳಿದ್ದೇವೆ. ಕರ್ನಾಟಕದ ಇತರ ನುಡಿಗಳಾದ ತುಳು, ಕೊಂಕಣಿ, ಕೊಡವ, ಬ್ಯಾರಿಗಳು ಅತ್ಯಂತ ಶ್ರೀಮಂತವಾದ ನುಡಿಗಳು. ಸಾವಿರಾರು ವರ್ಷದಿಂದ ನಾವೆಲ್ಲರೂ ಈ ನುಡಿಗಳನ್ನೇ ಆಡುತ್ತ ಇಲ್ಲಿ ನೆಲೆಸಿರುರುವವರು. ಇವುಗಳಲ್ಲೇ ನಮ್ಮ ಬದುಕು, ಬವಣೆಗಳನ್ನು ಅನುಭವಿಸಿದವರು. ಇವುಗಳೇ ನಮ್ಮ ಗುರುತುಗಳು. ಇವುಗಳಲ್ಲಿರುವ ವಚನಗಳು, ಜನಪದ, ದಾಸ ಸಾಹಿತ್ಯ ಮುಂತಾದವುಗಳಲ್ಲೇ ನಮ್ಮ ಸಂಸ್ಕೃತಿಯ ಸಾರ ಅಡಗಿರೋದು. ಹೀಗಿದ್ದಾಗ ಯಾಕೆ ರಾಜ್ಯಪಾಲರು ಈ ನುಡಿಗಳನ್ನು ಕಡೆಗಣಿಸದೇ ಉಳಿಸಿ, ಬೆಳೆಸಬೇಕು ಅನ್ನುವ ಮಾತುಗಳನ್ನು ಆಡುವುದಿಲ್ಲ? ಹಿಂದಿಯನ್ನು ಭಾರತೀಯತೆಗೆ, ಸುಸಂಸ್ಕೃತ ನಡವಳಿಕೆಗೆ ತಳುಕು ಹಾಕುವುದು ಭಾರತವನ್ನು “ಒಂದು ದೇಶ–ಒಂದು ಭಾಷೆ” ಅನ್ನುವ ತತ್ವದೆಡೆಗೆ ದೂಡಬೇಕು ಅನ್ನುವ ಮನಸ್ಥಿತಿಯನ್ನು ಸೂಕ್ಷ್ಮವಾಗಿ ತೋರಿಸುವುದಿಲ್ಲವೇ?

ಈ ಚಿಂತನೆಯ ಪರಿಣಾಮಗಳು

ಇಂತಹ ಚಿಂತನೆಗಳು ಮಾಡುವ ಪರಿಣಾಮಗಳೇನು ಎಂದು ಕೆದಕಿದರೆ ನಮ್ಮ ಸುತ್ತ ದಿನವೂ ಸ್ಥಳೀಯ ಭಾಷೆಯನ್ನು ನಿರ್ಜಿವಗೊಳಿಸುತ್ತಿರುವ ಘಟನೆಗಳು ಗೋಚರಿಸಲು ಆರಂಭಿಸುತ್ತವೆ. ಎಲ್ಲೆಡೆ ಹಿಂದಿ ನಡೆಯಬೇಕು ಅನ್ನುವ ಮನಸ್ಥಿತಿಯ ಕಾರಣದಿಂದಲೇ ಇಂದು ಅತ್ಯಂತ ಸಹಜವಾಗಿ ಕರ್ನಾಟಕದಲ್ಲಿ ಕನ್ನಡದಲ್ಲಿ ದೊರೆಯಬೇಕಿದ್ದ ನಾಗರೀಕ ಸೇವೆಗಳೆಲ್ಲವೂ ಕೇವಲ ಹಿಂದಿ-ಇಂಗ್ಲಿಷಿನಲ್ಲಿ ದೊರೆಯುವಂತಾಗಿರುವುದು. ಕರ್ನಾಟಕದ ಬ್ಯಾಂಕುಗಳಲ್ಲಿ ಇಂದು ಕನ್ನಡದಲ್ಲಿ ಸೇವೆಯೇ ಸಿಗದ ಸ್ಥಿತಿ ಯಾಕೆ ಬಂದೊದಗಿದೆ? ಬ್ಯಾಂಕುಗಳಲ್ಲಿ ಉದ್ಯೋಗ ಪಡೆಯಲು ಸ್ಥಳೀಯ ಭಾಷೆಯ ಜ್ಞಾನವೇ ಬೇಡ, ಹಿಂದಿ-ಇಂಗ್ಲಿಷ್ ಇದ್ದರೆ ಸಾಕು ಅನ್ನುವ ಪರಿಸ್ಥಿತಿ ಯಾಕೆ ಹುಟ್ಟಿದೆ? ಕರ್ನಾಟಕದ ಚಿಕ್ಕ ಚಿಕ್ಕ ಊರುಗಳಲ್ಲಿನ ಕೇಂದ್ರ ಸರ್ಕಾರಿ ಉದ್ಯೋಗಕ್ಕೆ ದೊಡ್ಡ ಪ್ರಮಾಣದಲ್ಲಿ ಹಿಂದಿ ಭಾಷಿಕರ ನೇಮಕಾತಿ ಏನನ್ನು ತೋರಿಸುತ್ತೆ? ಕರ್ನಾಟಕದ ರೈಲ್ವೇ ನಿಲ್ದಾಣಗಳೆಲ್ಲವೂ ಹಂತ ಹಂತವಾಗಿ ಹಿಂದಿಮಯವಾಗುತ್ತಿರುವುದರ ಹಿಂದಿರುವ ಮರ್ಮವೇನು? ಮೈಸೂರು ಬೆಂಗಳೂರಿನ ನಡುವಿನ ರೈಲು ಟಿಕೇಟಿನಲ್ಲಿ ಕನ್ನಡ ಮಾಯವಾಗಿದ್ದು ಯಾಕೆ? ರೈಲ್ವೇ ಉದ್ಯೋಗಗಳ ಪರೀಕ್ಷೆ ಕನ್ನಡದಲ್ಲಿ ಬರೆಯಬಹುದು ಅಂತಿದ್ದರೂ ಪ್ರಶ್ನೆಪತ್ರಿಕೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ತಪ್ಪು ಶಬ್ದ, ವ್ಯಾಕರಣದ ತಪ್ಪುಗಳು ನುಸುಳಿ ಕನ್ನಡದ ಮಕ್ಕಳು ಈ ಪರೀಕ್ಷೆಗಳಲ್ಲಿ ಹಿಂದೆ ಬಿದ್ದು, ಉದ್ಯೋಗ ವಂಚಿತರಾಗುತ್ತಿರುವುದರ ಹಿಂದಿರುವ ಕಾರಣವೇನು? ರಾಜ್ಯ ಸರ್ಕಾರ ಜಾರಿಗೆ ತರುವ ಮೆಟ್ರೋ ರೈಲು, ವಿಡಿಯೋ ಎಫ್.ಐ.ಆರ್ ದಾಖಲಾತಿಯಂತಹ ಯೋಜನೆಗಳಲ್ಲೂ ನಿಧಾನಕ್ಕೆ ಎಲ್ಲೆಡೆ ಹಿಂದಿಯನ್ನು ತೂರಿಸಲು ಕಾರಣವೇನು? ಇವೆಲ್ಲವೂ ಭಾಷಾ ವೈವಿಧ್ಯತೆ ಅನ್ನುವ ಸುಕ್ಕನ್ನು ಇಸ್ತ್ರಿ ಮಾಡಿ ತೆಗೆದು ಎಲ್ಲೆಡೆ ಹಿಂದಿಯನ್ನು ಸ್ಥಾಪಿಸಿ ಪ್ರಪಂಚಕ್ಕೆ ಮಡಿ ಮಡಿಯಾದ ಭಾರತವೊಂದನ್ನು ತೋರಿಸುವ ಪ್ರಯತ್ನವೆನ್ನಲು ಬೇಕಾದಷ್ಟು ಆಧಾರಗಳು ಕಣ್ಣೆದುರಿಗಿವೆ.

ಭಾಷಾ ನೀತಿ ಅನ್ನುವ ಕಪ್ಪು ಚುಕ್ಕೆ

ಪ್ರಪಂಚದೆಲ್ಲೆಡೆ ಒಂದಕ್ಕಿಂತ ಹೆಚ್ಚು ನುಡಿಯಾಡುವ ಜನರಿರುವ ದೇಶಗಳಲ್ಲಿ ಅಲ್ಲಿನ ನುಡಿಯ ವೈವಿಧ್ಯತೆಯನ್ನು ನಿಜವಾದ ಅರ್ಥದಲ್ಲಿ (ನಮ್ಮಲ್ಲಿರುವಂತೆ ಬರೀ ಬಾಯಿ ಮಾತಿನಲ್ಲಲ್ಲ) ಗೌರವಿಸಿ ಪೊರೆಯುವ ಕೆಲಸ ಮಾಡಿದ್ದಾರೋ ಅಲ್ಲೆಲ್ಲ ಅಲ್ಲಿನ ಜನರ ನಡುವೆ ಸ್ನೇಹ, ಸಾಮರಸ್ಯ ಹೆಚ್ಚಿಸಿ ಒಗ್ಗಟ್ಟು ಸಾಧಿಸಲು ಸಾಧ್ಯವಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಒಂಬತ್ತು ನುಡಿಗಳು ಅಲ್ಲಿನ ಕೇಂದ್ರ ಸರ್ಕಾರದ ನುಡಿಗಳಾಗಿದ್ದರೆ ಫಿನ್ ಲ್ಯಾಂಡಿನಂತಹ ಚಿಕ್ಕ ನಾಡಿನಲ್ಲಿ ನಾಲ್ಕು ಭಾಷೆಗಳನ್ನು ಅಲ್ಲಿನ ಕೇಂದ್ರ ಸರ್ಕಾರ ಅಧಿಕೃತ ನುಡಿಗಳೆಂದು ಕರೆದು ಜನರ ಅನುಕೂಲಕ್ಕಾಗಿ ಹೊರ ತರುವ ಎಲ್ಲ ಯೋಜನೆಗಳಲ್ಲೂ ಈ ನುಡಿಗಳನ್ನು ಬಳಸುತ್ತಿವೆ. ಆದರೆ ಭಾರತದಲ್ಲಿ ಅಂಚೆ, ವಿಮೆ, ಬ್ಯಾಂಕು, ರೈಲು, ವಿಮಾನ ಸೇವೆ, ಪಿಂಚಣಿ, ಪೆಟ್ರೋಲ್, ಎಲ್.ಪಿ.ಜಿ, ರಾಷ್ಟ್ರೀಯ ಹೆದ್ದಾರಿ, ಆದಾಯ ತೆರಿಗೆ ಹೀಗೆ ಸಾಲು ಸಾಲು ಇಲಾಖೆಗಳು ಜನರೊಡನೆ ನೇರವಾಗಿ ಬೆರೆಯುತ್ತಿದ್ದರೂ ಅಲ್ಲಿ ಜನರ ಭಾಷೆಯನ್ನು ಬಳಸುವುದನ್ನು ಕೈ ಬಿಟ್ಟು (ಬಳಸಿದ್ದರೂ ಕಾಟಾಚಾರಕ್ಕೆ ಎಂಬಂತೆ ಬಳಸಿ) ಹಿಂದಿಯಲ್ಲಿ ಆಡಳಿತ ನಡೆಸುವುದು, ಹಿಂದಿ ಬಳಕೆಗೆ ಉತ್ತೇಜನ ನೀಡುವುದು, ಹಿಂದಿ ಬಳಸಿದವರಿಗೆ ಬಹುಮಾನ, ಬಡ್ತಿ ನೀಡುವ ಕ್ರಮ ಭವ್ಯ ಭಾರತದ ಪ್ರಜಾಪ್ರಭುತ್ವಕ್ಕೆ ಅಂಟಿರುವ ಒಂದು ಕಪ್ಪು ಚುಕ್ಕೆಯೇ ಸರಿ. ಇಂತಹ ತಾರತಮ್ಯದ ನೀತಿಯಿಟ್ಟುಕೊಂಡು ಹಲ ನುಡಿಯ ಭಾರತೀಯರನ್ನು ಒಂದಾಗಿಸಲು ನಿಜಕ್ಕೂ ಸಾಧ್ಯವೇ?

ಬದಲಾಗಲಿ ಭಾಷಾ ನೀತಿ

ಹಲವು ನುಡಿಗಳ ಒಕ್ಕೂಟವಾಗಿದ್ದ ಸೋವಿಯತ್ ರಷ್ಯಾದಲ್ಲಿ ರಸ್ಸಿಫಿಕೇಶನ್ ಹೆಸರಿನಲ್ಲಿ ಎಲ್ಲೆಡೆ ರಷ್ಯನ್ ಭಾಷೆ ಮತ್ತು ಜನರನ್ನು ಹೇರುವ ಪ್ರಯತ್ನವೇ ಮುಂದೆ ರಷ್ಯನ್ ಒಕ್ಕೂಟದ ಪತನದ ಮುಖ್ಯ ಕಾರಣಗಳಲ್ಲೊಂದಾಯ್ತು. ಒಂದೇ ಧರ್ಮದ ಪಾಕಿಸ್ತಾನ ಪೂರ್ವ ಪಾಕಿಸ್ತಾನದ ಮೇಲೆ ಉರ್ದು ಹೇರಲು ಹೊರಟು ಎರಡು ಹೋಳಾಗಿ ಬಾಂಗ್ಲಾ ದೇಶದ ಉದಯಕ್ಕೆ ಕಾರಣವಾಯಿತು. ಇತಿಹಾಸದ ಈ ಘಟನೆಗಳಿಂದ ಭಾಷಾ ವೈವಿಧ್ಯತೆಯನ್ನು ಹೇಗೆ ನಿಭಾಯಿಸಬೇಕು ಅನ್ನುವ ಪಾಠ ಭಾರತ ಕಲಿಯಬೇಕಿತ್ತು. ಆದರೆ ಇಂದಿಗೂ ದಿನ ನಿತ್ಯ ಹಿಂದಿಯೇತರ ಜನರ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಿಂದಿ ಹೇರಿಕೆಯನ್ನು ಗಮನಿಸಿದಾಗ ಭಾರತದ ಕೇಂದ್ರ ಸರ್ಕಾರಕ್ಕೆ ಈ ಎಚ್ಚರಿಕೆ ಇನ್ನೂ ಬಂದಂತಿಲ್ಲ. ಇದಕ್ಕಿರುವ ಪರಿಹಾರವೊಂದೇ, ಅದು ಭಾರತದ ಭಾಷಾ ನೀತಿಗೆ ತಿದ್ದುಪಡಿ ತಂದು ಸಂವಿಧಾನದ ಎಂಟನೆಯ ಪರಿಚ್ಛೇದದ ಎಲ್ಲ ಭಾಷೆಗಳಿಗೂ ಕೇಂದ್ರ ಸರ್ಕಾರದ ಅಧಿಕೃತ ಭಾಷೆಯ ಸ್ಥಾನಮಾನ ಕೊಡುವುದು. ಹಿಂದಿ ಭಾಷಿಕರ ಪ್ರಾಬಲ್ಯವಿರುವ ಭಾರತದ ಸಂಸತ್ತಿನಲ್ಲಿ ಇಂತಹದೊಂದು ತಿದ್ದುಪಡಿ ತರುವುದು ಸುಲಭದ ಕೆಲಸವಲ್ಲ. ಆದರೆ ಹಿಂದಿಗೆ ಮಾತ್ರ ಪ್ರಾಶಸ್ತ್ಯ ಕೊಡುವ ನೀತಿಯಿಂದ ನಲುಗುತ್ತಿರುವ ಹಿಂದಿಯೇತರ ಭಾಷಿಕ ನಾಡುಗಳೆಲ್ಲ ಒಂದಾದರೆ ಈ ತಿದ್ದುಪಡಿಯ ಕೂಗಿಗೆ ಬಲ ಬರುತ್ತದೆ. ತಮಿಳುನಾಡು ಅರವತ್ತರ ದಶಕದಲ್ಲೇ ಇಂತಹದೊಂದು ಭಾಷಾ ನೀತಿಯನ್ನು ಏಕಾಂಗಿಯಾಗಿ ಪ್ರತಿಭಟಿಸಿ ಅದರಿಂದ ವಿನಾಯ್ತಿ ಪಡೆದಿದ್ದನ್ನು ಕಂಡಾಗ ನಾಲ್ಕೈದು ರಾಜ್ಯಗಳ ರಾಜಕೀಯ ಪಕ್ಷಗಳು ಒಟ್ಟಾಗಿ ನಿಂತರೆ ಈ ಬದಲಾವಣೆ ಅಸಾಧ್ಯವೇನಲ್ಲ. ಅಲ್ಲಿಯವರೆಗೂ ಕಾಯುವುದು ಮತ್ತು ನಿರಂತರವಾಗಿ ಇಂತಹ ಹೇರಿಕೆಯನ್ನು ಪ್ರತಿಭಟಿಸುವುದೊಂದೇ ನಮಗೆ ಉಳಿದಿರುವ ದಾರಿ.

This entry was posted in ಹಿಂದಿ ಹೇರಿಕೆ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s