ಭಾರತ ಭಂಜನ (Breaking of India): ಒಡಕಿನ ಭೀತಿಯಿಂದ ವೈವಿಧ್ಯತೆಯ ಅಲ್ಲಗಳೆತ!

“ಭಾರತ ಭಂಜನ” ಅನ್ನುವ ಹೊತ್ತಗೆ ಇತ್ತೀಚೆಗೆ ಕನ್ನಡದಲ್ಲಿ ಬಿಡುಗಡೆಯಾಯಿತು. ಈ ಪುಸ್ತಕದಲ್ಲಿನ ವಾದಗಳಲ್ಲಿರುವ ಹುಳುಕುಗಳೇನು? ಭಾರತದ ಭಾಷಾ ವೈವಿಧ್ಯತೆಯನ್ನು ಅರ್ಥ ಮಾಡಿಕೊಂಡಿರುವ ರೀತಿಯಲ್ಲಿರುವ ತೊಂದರೆಗಳೇನು? ಇಂತಹ ಆಲೋಚನೆಗಳಿಂದ ಆಗಬಹುದಾದ ಅನಾಹುತಗಳೇನು ಅನ್ನುವ ಬಗ್ಗೆ ಹೊತ್ತಗೆಯನ್ನು ಓದಿ, ವಿವರವಾದ ವಿಮರ್ಶೆಯನ್ನು ಬರೆದ ಕನ್ನಡ ಪರ ಚಿಂತಕ ಆನಂದ ಜಿ ಅವರ ಬರಹವನ್ನು ಅವರ ಅನುಮತಿಯೊಂದಿಗೆ ಮುನ್ನೋಟದಲ್ಲಿ ಪ್ರಕಟಿಸಲಾಗಿದೆ. ಓದಿ, ಹಂಚಿಕೊಳ್ಳಬೇಕೆಂದು ಓದುಗ ಗೆಳೆಯರಲ್ಲಿ ಮನವಿ. – ಮುನ್ನೋಟ ಸಂಪಾದಕರು


ಇತ್ತೀಚಿಗೆ ಬೆಂಗಳೂರಿನಲ್ಲಿ ಭಾರತ ಭಂಜನ ಎನ್ನುವ ಹೊತ್ತಗೆಯೊಂದು ಬಿಡುಗಡೆಯಾಯಿತು. ಅಮೇರಿಕೆಯ ಭಾರತೀಯ ಸಂಜಾತರಾದ ಶ್ರೀ ರಾಜೀವ್ ಮಲ್ಹೋತ್ರಾ ಮತ್ತು ಇವರೊಡನೆ ಶ್ರೀ ಅರವಿಂದನ್ ನೀಲಕಂಡನ್‌ರವರು ಇಂಗ್ಲೀಷಿನಲ್ಲಿ ಬರೆದ “BREAKING INDIA” ಎನ್ನುವ ಹೊತ್ತಗೆಯ ಕನ್ನಡ ಅನುವಾದ ಇದು. ಇದರ ಕನ್ನಡ ಅವತರಣಿಕೆಯನ್ನು ಶ್ರೀ ಲಕ್ಷ್ಮೀಕಾಂತ ಹೆಗ್ಡೆ ಎನ್ನುವವರು ಬರೆದಿದ್ದಾರೆ. ಇಡೀ ಪುಸ್ತಕ ಬಹಳಷ್ಟು ಅಂಕಿ-ಅಂಶಗಳನ್ನು ಹೊಂದಿದ್ದು ಹಲವಾರು ಸಾಕ್ಷಿಪುರಾವೆಗಳನ್ನು ಎತ್ತಿತೋರುತ್ತಾ ತನ್ನದೇ ಆದ ಒಂದು ವಾದವನ್ನು ಓದುಗರ ಮುಂದಿಡುತ್ತದೆ.

ಭಾರತದ ಒಡಕಿಗೆ ಪಾಶ್ಚಾತ್ಯರ ಹುನ್ನಾರ

ಈ ಹೊತ್ತಗೆಯ ಮುಖ್ಯಸಿದ್ಧಾಂತವೇನೆಂದರೆ “ಭಾರತವನ್ನು ಒಡೆಯಲು ವಿದೇಶಿ ಶಕ್ತಿಗಳು, ವಿಶೇಷವಾಗಿ ಕ್ರೈಸ್ತ ಚರ್ಚುಗಳಿಂದ ಪ್ರೇರಿತವಾದ ಪಾಶ್ಚಾತ್ಯ ರಾಷ್ಟ್ರಗಳು, ಕಾಲಾಂತರದಿಂದ ಶ್ರಮಿಸುತ್ತಿವೆ. ಹೀಗೆ ಭಾರತವನ್ನು ಒಡೆಯಲು ಪಾಶ್ಚ್ಯಾತ್ಯರು ಬಳಸಿಕೊಂಡಿರುವ ತಂತ್ರವೇನೆಂದರೆ ಭಾರತೀಯರ ನಡುವೆ ಜಾತಿ ಮತ್ತು ಜನಾಂಗಗಳಲ್ಲಿ ಭಿನ್ನತೆ ಇದೆ ಎಂಬ ಹುಸಿಯನ್ನು ಹುಟ್ಟು ಹಾಕಿ, ಒಂದು ವರ್ಗದವರು ಮತ್ತೊಂದು ವರ್ಗವನ್ನು ಶೋಷಿಸಿದ್ದಾರೆ ಎಂದು ನಂಬಿಸಿ ಆ ಮೂಲಕ ಅಸಮಾಧಾನದ ಕಿಚ್ಚನ್ನು ಹಚ್ಚಿ… ಒಡಕಿನ ಬೀಜ ಬಿತ್ತುವುದು. ಇದರ ಬಗ್ಗೆ ಭಾರತೀಯರು ಎಚ್ಚೆತ್ತುಕೊಳ್ಳಬೇಕು. ಆರ್ಯ-ದ್ರಾವಿಡರೆಂಬ ಪ್ರತ್ಯೇಕತೆ ಹಾಗೂ ದಲಿತರ ಶೋಷಣೆ ಎಂಬ ಎರಡು ದೊಡ್ಡ ಅಸ್ತ್ರಗಳು ಇದರಲ್ಲಿ ಪ್ರಮುಖವಾಗಿವೆ. ಭಾರತಕ್ಕೆ ಸ್ವಾತಂತ್ರಕ್ಕೆ ಮೊದಲಿನಿಂದಲೇ ಇಲ್ಲಿಗೆ ಬಂದಿದ್ದ ಕ್ರೈಸ್ತ ಧರ್ಮ ಪ್ರಚಾರಕರು ಇಲ್ಲಿನ ಸ್ಥಳೀಯ ಭಾಷೆಗಳು, ಜನಾಂಗಗಳನ್ನು ಅಧ್ಯಯನ ಮಾಡುತ್ತೇವೆ ಎನ್ನುತ್ತಾ ಭಾರತೀಯತೆಗಿಂತ ನೀವು ಭಿನ್ನರು ಎಂದೋ, ನಿಮ್ಮ ಮೇಲೆ ದೌರ್ಜನ್ಯವಾಗಿದೆ ಎಂದೋ ಕೆಲವರನ್ನು ಎತ್ತಿ ಕಟ್ಟಿದ್ದಾರೆ. ಇದೆಲ್ಲಾ ಪಾಶ್ಚ್ಯಾತ್ಯರ ಹುನ್ನಾರ” ಎಂಬುದಾಗಿದೆ.

ಮುಖಪುಟದಲ್ಲಿನ ನಕ್ಷೆ

ಭಾರತ ಭಂಜನಪುಸ್ತಕದ ಮುಖಪುಟದಲ್ಲಿ ಪ್ರಕಟಿಸಿರುವ ಭಾರತದ ಭೂಪಟವನ್ನು ಗಮನಿಸಿ. ಇಲ್ಲಿ ಭಾರತವು ಮುಂದೆ ಒಡೆದು ಪ್ರತ್ಯೇಕ ದೇಶಗಳಾಗಬಹುದಾದ ಪ್ರದೇಶಗಳನ್ನು ಗುರುತಿಸಲಾಗಿದೆಯಂತೆ. ಇದನ್ನು “ಲೇಖಕರು ಯಾವುದರ ಬಗ್ಗೆ ಈ ಹೊತ್ತಗೆಯಲ್ಲಿ ಎಚ್ಚರಿಸಿದ್ದಾರೋ ಆ ಭೂಪಟ” ಎನ್ನಲಾಗಿದೆ. ಈ ಭೂಪಟದಲ್ಲಿ ತಮಿಳುನಾಡು, ಮಲಯಾಳ ನಾಡು, ಕನ್ನಡನಾಡು, ತುಳುನಾಡು, ಕೊಡವನಾಡು, ಮಹಾರಾಷ್ಟ್ರ, ಗೋವಾ ಮೊದಲಾದವನ್ನು ತೋರಿಸುತ್ತಾ ಪ್ರಮುಖವಾಗಿ ದಲಿತಸ್ತಾನ್, ದ್ರಾವಿಡಸ್ತಾನ್, ಶೂದ್ರಸ್ತಾನ್, ಮೊಗಲಸ್ತಾನ್ ಇವುಗಳನ್ನು ಒಡೆದು ಬೇರಾಗಬಹುದು ಎಂದು ಗುರುತಿಸಿದ್ದಾರೆ. ಇವರು ಈ ಎಲ್ಲಾ ನಾಡುಗಳಲ್ಲಿ ಪ್ರತ್ಯೇಕತೆಯ ಬೀಜ ಬಿತ್ತಲಾಗುತ್ತಿದೆ ಎಂದು ವಾದಿಸುತ್ತಿದ್ದಾರೆ. ದ್ರಾವಿಡಸ್ತಾನ್ ಎಂದು ಗುರುತಿಸಲಾದ ಭೂಪ್ರದೇಶದ ಭಾಗವಾಗಿ ನಮ್ಮ ಕನ್ನಡನಾಡೂ ಇದೆ. ಇವರು ಭೀತಿ ಪಡುತ್ತಿರುವುದು ಮುಖ್ಯವಾಗಿ ಕನ್ನಡ, ತಮಿಳು, ತೆಲುಗು ಮೊದಲಾದ ನುಡಿಗಳಿಗೆ ತಮ್ಮದೇ ಆದ ಅಸ್ತಿತ್ವವಿದೆ ಮತ್ತು ಅದು ಸಂಸ್ಕೃತಜನ್ಯ ಭಾಷೆಗಳಿಗಿಂತಾ ಭಿನ್ನವಾಗಿದೆ ಎಂಬುದಕ್ಕಾಗಿ. ಯಾರಿಗಾದರೋ ತಮ್ಮತನದ ಅರಿವಾಗುವುದು ಭಾರತವನ್ನು ಒಡೆಯುತ್ತದೆ ಎಂದರೆ ಭಾರತ ಎನ್ನುವ ಚೌಕಟ್ಟು ಅಷ್ಟು ಸಡಿಲಾದುದೇ ಎಂದು ಯೋಚಿಸಬೇಕಾಗುತ್ತದೆ. ಈ ಭೂಪಟ ನೋಡಿದರೆ ಇವರೆಷ್ಟು ಹುಸಿ ಆತಂಕ ಹೊಂದಿದ್ದಾರೆ ಎನ್ನಿಸುತ್ತದೆ.

ಇವರ ವಾದದಲ್ಲಿ ಎರಡು ಅಂಶಗಳಿವೆ. ಒಂದು, ಅಮೇರಿಕವು ಭಾರತದಲ್ಲಿ ಕ್ರೈಸ್ತ ಮತಪ್ರಚಾರ ಮಾಡುವುದು ಮತ್ತು ಅದಕ್ಕಾಗಿ ನಾನಾತಂತ್ರಗಳನ್ನು ಹೆಣೆಯುವುದು. ಇನ್ನೊಂದು, ಭಾರತದ ಕೆಲವು ಸಮುದಾಯಗಳಲ್ಲಿ ‘ಭಾರತದಿಂದ ನಾವು ಬೇರೆ’ ಎಂಬ ಪ್ರತ್ಯೇಕತೆಯನ್ನು ಹುಟ್ಟು ಹಾಕಿ ಭಾರತದಿಂದ ಪ್ರತ್ಯೇಕಗೊಳ್ಳುವ, ಭಾರತವನ್ನು ಒಡೆಯುವ ಹುನ್ನಾರ ನಡೆಸುವುದು. ಹೀಗೆ ಹೇಳುತ್ತಾ ಯಾರು ಯಾರು ಈ ಸಿದ್ಧಾಂತಗಳ ಬೀಜ ನೆಟ್ಟವರು ಎಂಬುದನ್ನೆಲ್ಲಾ ವಿವರಿಸಿದ್ದಾರೆ. ಒಟ್ಟಾರೆ ಪಾಶ್ಚ್ಯತ್ಯರು ಭಾರತಕ್ಕೆ ಬಂದು ಇಲ್ಲಿನ ಸಮಾಜ, ನುಡಿಗಳನ್ನು ಅಧ್ಯಯನ ಮಾಡಿದ್ದೇ ಒಡಕನ್ನು ಬಿತ್ತಲು ಎಂಬುದು ಇವರ ವಾದದ ಮುಖ್ಯಹೂರಣ. ಇವರು ದ್ರಾವಿಡ ನುಡಿಗಳ ಬಗ್ಗೆ ಮಾಡಿರುವ ವಾದಗಳಲ್ಲಿ ಕೆಲವನ್ನು ನೋಡೋಣ.

ದ್ರಾವಿಡ ಪದ ಹುಟ್ಟಿಸಿದ್ದೇ ಭಾರತ ಒಡೆಯಲು!

ಫ್ರಾನ್ಸಿಸ್ ವ್ಹಾಟ್ ಎಲ್ಲಿಸ್ ಮತ್ತು ಅಲೆಗ್ಝಾಂಡರ್ ಡಿ ಕ್ಯಾಂಪಬೆಲ್ ಥರದವರು ದಕ್ಷಿಣ ಭಾರತದ ಭಾಷೆಗಳ ಮೂಲ ಬೇರೆ ಎನ್ನುವುದನ್ನು ತಮಿಳು ಮತ್ತು ತೆಲುಗಿಗೆ ಬೇರೆಯೇ ವ್ಯಾಕರಣಗಳನ್ನು ಅಧ್ಯಯನ ಮಾಡಿ ಹೇಳಿದ್ದಾರೆ. “ದ್ರಾವಿಡ”ರು ಎಂಬುದು ಬೇರೆಯೇ ಜನಾಂಗ ಎಂಬುದನ್ನು ಕಾಲ್ಡವೆಲ್ ಥರದವರು ನುಡಿಯ ಬೇರ್ಮೆಯ ಮೂಲಕ ಪ್ರಚುರಪಡಿಸಿದರು ಎಂದೂ ಇದರಲ್ಲಿ ಬರೆಯಲಾಗಿದೆ. ದ್ರಾವಿಡ ಜನಾಂಗ ಎನ್ನುವುದಾಗಿ ಮಾಡಿದ್ದೇ ಕೃತ್ರಿಮವಾದದ್ದು ಎನ್ನುತ್ತಾರೆ. (ಸಂಸ್ಕೃತಜನ್ಯ ಭಾಷೆಗಳಿಗಿಂತಾ ತಮಿಳು ಬೇರೆಯೇ ಆದ ಸ್ವತಂತ್ರ ಭಾಷೆ ಎಂಬ ಮಂಡನೆಯೂ ಒಡಕನ್ನು ಹುಟ್ಟು ಹಾಕುವ ಯೋಜನೆಯ ಭಾಗವೇ ಆಗಿದೆ – ಎಂದು ಭೈರಪ್ಪನವರು ಬರೆದಿರುವ ಮುನ್ನುಡಿಯಲ್ಲೇ ಹೇಳಲಾಗಿದೆ.) ಇಂತಹ ಸಿದ್ಧಾಂತಗಳನ್ನು ತೋರಿಸಿಕೊಟ್ಟವರು ಕ್ರೈಸ್ತ ಮಿಷನರಿಗಳೇ ಆಗಿದ್ದುದರಿಂದ ಇದು ದ್ರಾವಿಡರನ್ನು ಕ್ರೈಸ್ತರನ್ನಾಗಿಸುವ ಸಂಚು ಎಂಬುದಾಗಿ ಬರೆಯಲಾಗಿದೆ.

ದ್ರಾವಿಡ ಎನ್ನುವ ಪದ ಸಂಸ್ಕೃತದಿಂದಲೇ ಬಂದಿದೆಯೋ ಇಲ್ಲವೋ, ಅದು ಸರಿಯಾದ ಪದವೋ ಅಲ್ಲವೋ ಅನ್ನುವುದಕ್ಕಿಂತ ಮುಖ್ಯವಾಗಿ ನಾವು ಗಮನಿಸಬೇಕಾದದ್ದು ಏನೆಂದರೆ… ಭಾಷಿಕವಾಗಿ, ಹೀಗೆ ದ್ರಾವಿಡರೆಂದು ಕರೆಯಲಾಗುತ್ತಿರುವ ಜನಸಮುದಾಯವೇ ಬೇರೆ, ಉತ್ತರದ ಜನರೇ ಬೇರೆ ಎಂಬುದನ್ನು. ಇದು ಕನ್ನಡ, ತಮಿಳು, ತೆಲುಗು, ಮಲಯಾಳಂ, ತುಳು ಮೊದಲಾದ ದ್ರಾವಿಡ ನುಡಿಗಳ ನಡುವಿನ ಸಾಮ್ಯತೆಯಿಂದಲೂ.. ಈ ನುಡಿಗಳೊಂದಿಗೆ ಉತ್ತರದ ಹಿಂದೀ ಮತ್ತಿತರ ನುಡಿಗಳು ಹೊಂದಿರುವ ವ್ಯತ್ಯಾಸದಿಂದಲೂ ಗುರುತಿಸಬಹುದಾಗಿದೆ. ಎರಡು ಜನಸಮುದಾಯಗಳು ಬೇರೆಯೇ ನುಡಿಯಾಡುತ್ತಿವೆ ಎಂದರೆ “ಅವೆರಡು ಒಂದು ಸಮಾಜದ ಅಂಗವಾಗಿರಲಿಲ್ಲಾ” ಎನ್ನುವುದು ಸಾಮಾನ್ಯಜ್ಞಾನ ಅಥವಾ ಎರಡೂ ಸಮುದಾಯಗಳ ನಡುವೆ ಒಡನಾಟ ಕಡಿಮೆ ಇದ್ದುದನ್ನು ಇದು ತೋರುತ್ತದೆ. (ಈ ನುಡಿಬೇರ್ಮೆಯನ್ನು ಗುರುತಿಸದೆ, ಹಿಂದೆ ಭಾರತವೆಲ್ಲಾ ಒಂದೇ ನುಡಿಯಾಡುತ್ತಿತ್ತು ಮತ್ತದು ಸಂಸ್ಕೃತವಾಗಿತ್ತು ಎನ್ನುವ ವಾದವನ್ನೂ ಕೆಲವು ಹುಸಿ ರಾಷ್ಟ್ರೀಯವಾದಿಗಳು ಮಂಡಿಸುತ್ತಾರೆ.) ಆದರೆ ಹುಸಿ ರಾಷ್ಟ್ರೀಯವಾದಿಗಳಿಗೆ ನಮಗೆ ಬೇರ್ಮೆಯಿದೆ ಎಂದೊಡನೆ ಒಡಕಿನ ವಾಸನೆ ಮೂಗಿಗೆ ಅಡರುತ್ತದೆ. “ದ್ರಾವಿಡ ನುಡಿಗಳು ತಮ್ಮತನವನ್ನು ಹೊಂದಿವೆ ಮತ್ತು ಅವು ಸಂಸ್ಕೃತಕ್ಕಿಂತ ಭಿನ್ನ” ಎಂದು ಯಾರಾದರೂ ಅಧ್ಯಯನ ಮಾಡಿದರೆ ಸಾಕು, ಅದು ದೇಶ ಒಡೆಯಲಿಕ್ಕೆ ಎಂದುಕೊಳ್ಳುವುದು ಅತಿ ಭೀತಿ.

dravida_asmiteದ್ರಾವಿಡ ನುಡಿಗಳ ಜನರಲ್ಲಿ ತನ್ನತನದ ಅರಿವು ಉಂಟಾದರೆ ಏನೇನಾದೀತು ಎಂಬ ಕಲ್ಪನೆಯ ಭೀತಿಯನ್ನು ಮೇಲಿನ ಚಿತ್ರ ತೋರಿಸುತ್ತದೆ. ತಮಿಳು ಎನ್ನುವುದನ್ನು ದ್ರಾವಿಡ ನುಡಿಗಳಿಗೆ ಇವರೇ ಅನ್ವಯಿಸಿರುವುದರಿಂದ ಕನ್ನಡದ ಬಗ್ಗೆಯೂ ಇವರದ್ದು ಇದೇ ನಿಲುವು ಎನ್ನಬಹುದು. ಕನ್ನಡ ನುಡಿಗೆ ತನ್ನದೇ ಆದ ವ್ಯಾಕರಣವಿದೆ ಎನ್ನುವುದನ್ನು ಇವರು “ಕೆಲಜನರು ಕನ್ನಡಕ್ಕೆ ಬೇರೆಯೇ ವ್ಯಾಕರಣ ಬರೆಯಲು ಹೊರಟಿದ್ದಾರೆ” ಎನ್ನುತ್ತಾರೆ. ವಾಸ್ತವದಲ್ಲಿ ವ್ಯಾಕರಣ ಎಂದರೆ ನುಡಿಯೊಂದು ಹೊಂದಿರುವ ಗುಣಲಕ್ಷಣ. ಯಾವುದೇ ಭಾಷೆಗೆ ವ್ಯಾಕರಣಗಳನ್ನು ಬರೆಯುವುದು ಎಂದರೆ ಆ ನುಡಿಯಾಡುವ ಜನರು ಹೇಗೆ ಪದಗಳನ್ನು ಬಳಸುತ್ತರೆ, ಯಾವ ನಿಯಮಗಳನ್ನು, ಯಾವ ರೀತಿಯ ಒಲವನ್ನು ಆ ಒಂದು ನುಡಿ ಹೊಂದಿದೆ ಎಂಬುದನ್ನು (ಅಂದರೆ ಇರುವುದನ್ನು.. ಹೀಗಿದೆ ಎಂದು) ಬರೆಯುವುದೇ ಹೊರತು “ಇದು ಸಂಸ್ಕೃತಕ್ಕಿಂತ ಬೇರೆಯಾಗಬೇಕು, ಹಾಗಾಗಿ ಇದನ್ನು ಈ ನಿಯಮದಂತೆ ಬಳಸಿ” ಎನ್ನುವುದಲ್ಲ. ಹಾಗನ್ನಲೂ ಸಾಧ್ಯವೂ ಇಲ್ಲಾ. ಒಟ್ಟಿನಲ್ಲಿ ನಮ್ಮ ನಾಡಿನ ಕುರಿತಾಗಿ ನಡೆಸುವ, ನುಡಿಯ ಕುರಿತಾಗಿ ನಡೆಸುವ ಯಾವುದೇ ಅಧ್ಯಯನ, ಸಂಶೋಧನೆ ಇವರ ಕಣ್ಣಿಗೆ ಒಡಕಿನ ದನಿಯಂತೆ ಕಾಣುತ್ತದೆ ಎನ್ನುವುದನ್ನು ಗುರುತಿಸಬಹುದಾಗಿದೆ. ಏನಿದರ ಅರ್ಥ? “ಯಾವುದೇ ಅಧ್ಯಯನ ಮಾಡಬೇಡಿ – ಮಾಡಿದರೂ ಭಾರತವು ಒಂದಾಗಿತ್ತೆಂದು ಸಾರುವುದನ್ನು ಮಾತ್ರಾ ಹೇಳಿ” ಎಂದಂತಲ್ಲವೇನು? ಕನ್ನಡಕ್ಕೆ, ತಮಿಳಿಗೆ, ಕೊಂಕಣಿಗೆ ತಮ್ಮದೇ ಆದ ಇತಿಹಾಸ, ಮೂಲಗಳಿದ್ದಾಕ್ಷಣ ಭಾರತ ಒಡೆಯುತ್ತದೆ ಎಂದು ಭೀತಿ ಪಡುವುದು ವೈವಿಧ್ಯತೆಯನ್ನು ಶಾಪವೆಂದೆಣಿಸುವಂತೆಯೇ ಸರಿ.

ಇಡೀ ಪುಸ್ತಕದಲ್ಲಿ ದ್ರಾವಿಡರ ಅನನ್ಯತೆ, ದ್ರಾವಿಡ ನುಡಿಗಳು ಸಂಸ್ಕೃತದಿಂದ ಹುಟ್ಟಿಲ್ಲ ಎಂಬುದನ್ನು ಒಪ್ಪದೇ ಇರಲು ಯಾವುದೇ ವೈಜ್ಞಾನಿಕ ಕಾರಣಗಳಿಲ್ಲ. ಇವರು ಕೊಟ್ಟಿರುವ ಏಕೈಕ ಕಾರಣ “ಇದನ್ನು ಪ್ರತಿಪಾದಿಸಿದವರು ವಿದೇಶಿ ಕ್ರೈಸ್ತ ಮಿಷನರಿಗಳು” ಎನ್ನುವುದು ಮಾತ್ರವೇ ಆಗಿದೆ. ಆದರೆ ನುಡಿಯ ವಿಷಯದಲ್ಲಿ ಹೇಗೆ ಅವರ ವಾದ ಸುಳ್ಳು ಎಂಬುದನ್ನು ಗಟ್ಟಿಯಾಗಿ ತೋರಿಸಿಕೊಟ್ಟಿಲ್ಲ. ರೆವೆರೆಂಡ್ ಕಿಟ್ಟಲ್ ಕನ್ನಡದ ನಿಘಂಟು ಕಟ್ಟಿಕೊಟ್ಟ ಮಹತ್ಕಾರ್ಯವನ್ನು ಅವರೊಬ್ಬ ಕ್ರೈಸ್ತ ಮಿಶನರಿ ಎನ್ನುವುದು ನುಂಗಿ ಹಾಕಬಲ್ಲುದೇ? ತಮಿಳಿಗೆ ಮೊದಲಬಾರಿಗೆ ಮುದ್ರಣವನ್ನು ಹೆನ್ರಿಕ್ ಎಂಬಾತ ಪರಿಚಯಿಸಿದರು ಎಂದರೆ “ಅವರು ಅಚ್ಚುಹಾಕಿದ್ದು ಬರೀ ಕ್ರೈಸ್ತ ಸಾಹಿತ್ಯ” ಎನ್ನುವ ವಾದ ಇವರದ್ದು. “ಎ ದ್ರಾವಿಡಿಯನ್ ಎಟಿಮಾಲಜಿ ಡಿಕ್ಷನರಿ”ಯನ್ನು ಬರೆದ ಎಮಿನೋ ಮತ್ತು ಬರೋ ಅವರ ಗುರಿಯೇ ಪ್ರತ್ಯೇಕತೆಯನ್ನು ಹುಟ್ಟು ಹಾಕುವುದು ಎನ್ನುವ ವಾದ ಇವರದ್ದು!

ಅವರ ಅಧ್ಯಯನಗಳನ್ನು ಇವರು ನಿರಾಕರಿಸಲು ಇರುವ ಕಾರಣವೆಂದರೆ ಇಡೀ ಅಧ್ಯಯನದಲ್ಲಿ ನುಸುಳಿಕೊಂಡಿರುವ ಕೆಲವು ತಪ್ಪುಗಳು. ಉದಾಹರಣೆಗೆ ರಿಸ್ಲೇ ಎಂಬಾತ ಮೂಗಿನ ಆಕಾರದ ಮೇಲೆ ಜನಾಂಗಗಳನ್ನು ವಿಂಗಡಿಸಬಹುದು ಎಂಬ ಮಾತನ್ನು ಮುಂದಿಟ್ಟಿದ್ದ. ಅದು ಸರಿಯಾದುದಲ್ಲಾ ಎಂಬು ಮುಂದಿನವರು ಕಂಡುಕೊಂಡರು. ಅದಕ್ಕಾಗಿ “ಮೂಗಿನ ಆಧಾರದ ಮೇಲೆ ಜನಾಂಗಗಳ ಭೇದ ಮಾಡಲಾಗದು ಹಾಗಾಗಿ ಆರ್ಯ ದ್ರಾವಿಡ ಎನ್ನುವ ಭೇದವೇ ಇಲ್ಲಾ” ಎನ್ನುವಂತೆ ವಾದ ಮಾಡುವುದನ್ನು ಹೇಗೆ ಒಪ್ಪಲಾಗುತ್ತದೆ? ಇಷ್ಟಕ್ಕೂ ಇವರ ಬಳಿ ದಕ್ಷಿಣದ ನುಡಿಗಳಿಗೂ, ಉತ್ತರದ ನುಡಿಗಳಿಗೂ ಇರುವ ಬೇರೆತನದ ಬಗ್ಗೆ ಚಕಾರವಿಲ್ಲ. ಬೇರ್ಮೆ ಇದೆ ಎಂದು ಬರೆದವರ ಬಗ್ಗೆ ಬರಿಯ ದೂಷಣೆ ಮಾಡುತ್ತಾ ಅವರು ಮಾಡಿದ್ದು ಸರಿಯಲ್ಲಾ ಎಂದ ಮಾತ್ರಕ್ಕೇ ಬೇರ್ಮೆ ಇಲ್ಲಾ ಎಂಬುದು ಸಾಬೀತಾಗದು.

ಹೊತ್ತಗೆಯ ಬಣ್ಣ!

ಈ ಪುಸ್ತಕವನ್ನು ಬರೆದ ಶ್ರೀ ರಾಜೀವ್ ಮಲ್ಹೋತ್ರಾರವರು ಮೂಲತಃ ಅನಿವಾಸಿ ಭಾರತೀಯರಾಗಿದ್ದು, ಇಡೀ ಪುಸ್ತಕವನ್ನು ನೋಡಿದಾಗ ಪಾಶ್ಚ್ಯಾತ್ಯರು ಯಾವ ನೆಲೆಯಲ್ಲಿ ನಿಂತು ಭಾರತವನ್ನು ಕಂಡಿದ್ದಾರೋ ಅದೇ ನೆಲೆಯಲ್ಲಿ ಇವರೂ ನಿಂತಿದ್ದಾರೆ ಎನ್ನಿಸುತ್ತದೆ. ಅವರದ್ದು ಭಾರತ ವಿರೋಧಿ ದೃಷ್ಟಿಕೋನ ಎನ್ನುವುದಾದರೆ ಇವರದ್ದು ಭಾರತದ ಪರವಾದದ್ದು ಎಂಬುದಷ್ಟೇ ವ್ಯತ್ಯಾಸ. ಅಂದರೆ ಪಾಶ್ಚ್ಯಾತ್ಯ ದೃಷ್ಟಿಕೋನವು ಭಾರತದಲ್ಲಿನ ಹುಳುಕುಗಳನ್ನೇ ಕಾಣುತ್ತಾ, ಎತ್ತಿತೋರುತ್ತಾ ಭಾರತವು ತಮ್ಮಿಂದ ಸುಧಾರಿಸಲ್ಪಡಲು ಯೋಗ್ಯವಾದ ದೇಶ ಎಂಬ ದೃಷ್ಟಿಕೋನ ಹೊಂದಿದ್ದರೆ ಇವರದ್ದು ಅದನ್ನು ನಿರಾಕರಿಸಲಿಕ್ಕೆ ಮಾತ್ರಾ ಸೀಮಿತವಾದ ಅಸಂಖ್ಯ ದಾಖಲೆಗಳ “ಪ್ರತಿವಾದ” ಅಷ್ಟೇ! ಹಾಳೆಗಳನ್ನು ಮಗುಚುತ್ತಿದ್ದಂತೆಯೇ ಬರಹಗಾರರ ಪೂರ್ವಾಗ್ರಹವು ಮುಖಕ್ಕೆ ರಾಚುತ್ತದೆ. ಇವರ ಕಣ್ಣಿಗೆ ಅನೇಕ ವಿದೇಶಿಯರು ಭಾರತೀಯ ಸಮಾಜದಲ್ಲಿ ಮಾಡಿರುವ ಅಧ್ಯಯನ ಹಾಗು ಕಂಡುಕೊಳ್ಳುವಿಕೆಗಳು, ಅವರು ಕ್ರೈಸ್ತ ಮಿಷನರಿಗಳು ಎನ್ನುವ ಒಂದೇ ಕಾರಣದಿಂದ, ಭಾರತ ಒಡೆಯಲು ಮಾಡಿರುವ ಹುನ್ನಾರವಾಗಿ ಕಾಣುವುದನ್ನು ನೋಡಬಹುದಾಗಿದೆ.

ಇದಕ್ಕೆ ವಿಶ್ವದಲ್ಲಿ ನಡೆದ ಅನೇಕ ಯುದ್ಧಗಳನ್ನು ಉದಾಹರಿಸುತ್ತಾ ಈ ಕೆಳಗಿನ ಪಟ್ಟಿಯನ್ನು ರೂಪಿಸಿದ್ದಾರೆ.

yuddhaಇದರಂತೆ ಬ್ರಿಟಿಶ್ ಆಡಳಿತದಿಂದಾಗಿ ತಮಿಳು ಭಾಷೆಯು ಭಾರತದ ಭಾಷೆಗಳಿಗಿಂತಾ ಭಿನ್ನವೆಂದು ಸಾಧಿಸಲಾಯಿತು. ಕಾಲ್ಡವೆಲ್ ದ್ರಾವಿಡರದ್ದು ಬೇರೆಯದೇ ಜನಾಂಗವೆಂದು ಹೇಳುವ ಮೂಲಕ ಭಾರತೀಯರಿಂದ ಬೇರೆ ಮಾಡಿದನಂತೆ. ತಮಿಳಿಗೆ ತನ್ನದೇ ಆದ ಪರಂಪರೆ ಇದೆ ಎಂದು ಸಾಬೀತು ಮಾಡುವ ಮೂಲಕ ತಮಿಳು ರಾಷ್ಟ್ರೀಯತೆಯನ್ನು ಹುಟ್ಟು ಹಾಕಿದನಂತೆ. ಇದರಿಂದಾಗಿ ಶ್ರೀಲಂಕಾದಲ್ಲಿ ತಮಿಳು – ಸಿಂಹಳಿ ಅಂತಃಕಲಹ ನಡೆಯಿತಂತೆ. ವಿಷಯ ಇಷ್ಟು ಸರಳವಾಗಿದೆಯೇ? ಶ್ರೀಲಂಕಾ ಜನಾಂಗೀಯ ಸಂಘರ್ಷಕ್ಕೆ ಕಾರಣಗಳು ಹಲವು, ಅದರಲ್ಲಿ ತಮಿಳನ್ನು ರಾಷ್ಟ್ರಭಾಷೆಯನ್ನಾಗಿಸದೆ ಹೋದದ್ದೂ ಒಂದು ಕಾರಣವಾದರೆ ೧೯೪೮ರ ಭಾರತ ಸ್ವಾತಂತ್ರ್ಯದ ನಂತರ ಸುಮಾರು ಏಳು ಲಕ್ಷ ತಮಿಳರನ್ನು ಶ್ರೀಲಂಕಾದಿಂದ ಓಡಿಸಿದ್ದು ಮತ್ತೊಂದು ಕಾರಣ. ಎಲ್.ಟಿ.ಟಿ.ಇಯಂತಹ ಸಂಘಟನೆಗೆ ತರಬೇತಿ, ಶಸ್ತ್ರಾಸ್ತ್ರ ತರಬೇತಿ ನೀಡುವಲ್ಲಿ ಯಾರ ಪಾತ್ರವಿತ್ತು? ಈ ಎಲ್ಲಾ ವಿಷಯಗಳನ್ನು ಮರೆ ಮಾಚುತ್ತಿರುವುದು ಯಾಕೆ? ತಮಿಳರಲ್ಲಿ ತಮಿಳು ಅಸ್ಮಿತೆಯನ್ನು ಹುಟ್ಟು ಹಾಕಿದ್ದೇ ಶ್ರೀಲಂಕಾದಲ್ಲಿನ ನಾಗರೀಕ ಅಶಾಂತಿಗೆ ಕಾರಣ ಎನ್ನುವುದು ಸರಿಯೇನು? ತಮಿಳರನ್ನು ಕ್ರಿಶ್ಚಿಯಾನಿಟಿಯೊಂದಿಗೆ ಜೋಡಿಸಿ ಹಿಂದುತ್ವದಿಂದ ಬೇರ್ಪಡಿಸಲಾಗುತ್ತದೆ ಎನ್ನುವ ವಾದಕ್ಕೆ ಇಂದಿನ ತಮಿಳುನಾಡಿನಲ್ಲಿರುವ ವಿವಿಧ ಧಾರ್ಮಿಕ ಗುಂಪುಗಳ ಜನಸಂಖ್ಯೆ ನೋಡಿದರೆ ಸಾಕು. ಇಂದಿಗೂ ತಮಿಳುನಾಡಿನಲ್ಲಿ ಹಿಂದೂಗಳ ಪ್ರಮಾಣ ೮೮% ಇದೆ ಎನ್ನುವುದು ರಾಜೀವ್ ಮಲ್ಹೋತ್ರಾರವರ ನುಡಿ – ಧರ್ಮ – ರಾಷ್ಟ್ರೀಯತೆ – ಪ್ರತ್ಯೇಕತೆಗಳ ನಡುವೆ ಹಾಕಿದ ತಳುಕು ಅಸಹಜವೆನ್ನಿಸದೇ?

ಒಟ್ಟಿನಲ್ಲಿ ಭಾರತದಲ್ಲಿನ ಯಾವುದೇ ರೀತಿಯ ವೈವಿಧ್ಯತೆ ಇವರಿಗೆ ಅಸಹನೀಯವಾಗಿದೆಯೇನೋ ಎನ್ನುವಂತೆ ತೋರುತ್ತದೆ ಮತ್ತು ಭಾರತದಲ್ಲಿ ಪ್ರತಿಯೊಂದು ವೈವಿಧ್ಯತೆ ಇರುವುದೂ ಭಾರತವನ್ನು ಒಡೆಯಲಿಕ್ಕಾಗಿಯೇ ಎಂಬ ಭೀತಿ ಇವರಲ್ಲಿರುವಂತೆ ತೋರಿಸಿಕೊಡುತ್ತದೆ. ಈ ಕಾರಣದಿಂದಲೇ ದ್ರಾವಿಡ ಭಾಷೆಗಳು ಬೇರೆಯದೇ ನುಡಿಕುಟುಂಬಕ್ಕೆ ಸೇರಿವೆ ಎಂದಾಕ್ಷಣ ಇವರ ಹೊಟ್ಟೆ ತೊಳೆಸಿದಂತಾಗುತ್ತದೆ. ಇವರಿಗೆ ಇಂತಹ ಬೇರ್ಮೆಗಳು ಭಾರತವನ್ನು ಒಡೆಯಲೆಂದು ಯಾರೋ ಹುಟ್ಟು ಹಾಕಿರುವುದು ಎನ್ನುವಂತೆ ಕಾಣುತ್ತದೆಯೇ ಹೊರತು “ಢಾಳಾಗಿ ಕಣ್ಣಿಗೆ ರಾಚುವಷ್ಟು ವ್ಯತ್ಯಾಸಗಳು ಸಂಸ್ಕೃತ ಮತ್ತು ದ್ರಾವಿಡ ನುಡಿಗಳ ನಡುವೆ ಇರುವುದು” ಕಾಣುವುದೇ ಇಲ್ಲಾ. ಈ ಮನಸ್ಥಿತಿಯ ಅಪಾಯವೆಂದರೆ ಇವರು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ವಿಷಯ ಮಂಡಿಸಿದರೆ ಆ ವಿಜ್ಞಾನ, ವಿಜ್ಞಾನವೇ ಅಲ್ಲಾ ಎಂದು ತೀರ್ಮಾನಿಸಿಬಿಡುತ್ತಾರೆ. ಅಂತಹ ಅಧ್ಯಯನ ಮಾಡುವವರನ್ನು ವಿದೇಶಿ ಏಜೆಂಟರು, ವಿದೇಶಿ ಫಂಡುಗಳಿಂದಾಗಿ ಇಂಥಾ ಅಧ್ಯಯನ ಮಾಡುತ್ತಾರೆ ಎಂದು ಸಾರಾಸಗಟು ತಿರಸ್ಕರಿಸಿಬಿಡುತ್ತಾರೆ. ಹಾಗಾಗಿ ಇಡೀ ಹೊತ್ತಗೆಯ ಬಣ್ಣ ಉಗ್ರರಾಷ್ಟ್ರೀಯವಾದವಾಗಿದ್ದು ಇಲ್ಲಿ ಎಲ್ಲಾ ವೈವಿಧ್ಯತೆಗಳನ್ನು ಸಮಾನತೆಯಿಂದ ಕಂಡು ಪೊರೆಯುವ ಮನಸ್ಥಿತಿಯಿರದೆ ಇರುವ ವೈವಿಧ್ಯತೆಗಳನ್ನು ಶಾಪವೆಂದೋ ಅಥವಾ ಇಲ್ಲವೇ ಇಲ್ಲವೆಂದೋ, ಹಾಗೂ ಇದ್ದರೆ ಅದನ್ನು ಅಳಿಸಿಬಿಡಬೇಕೆಂಬ ತುಡಿತ ಹೊಂದಿರುವ ಮನಸ್ಥಿತಿ ಹೊಂದಿರುವ ಅನುಮಾನಕ್ಕೆ ಕಾರಣವಾಗುತ್ತದೆ. ಕನ್ನಡನುಡಿಯ ಬಗ್ಗೆ ನಡೆಸಲಾಗುವ ವೈಜ್ಞಾನಿಕ ಅಧ್ಯಯನಗಳು ಹಾಗಾಗೇ ಇವರಿಗೆ ದೇಶದ್ರೋಹವಾಗಿ ಕಾಣುತ್ತದೆ, ಕನ್ನಡಿಗರಲ್ಲಿ ಕನ್ನಡತನದ ಜಾಗೃತಿಯಾಗುವುದು ಭಾರತದ ಒಡಕಿಗೆ ಕಾರಣವಾದೀತು ಎನ್ನುವ ಭೀತಿ ಕಂಡಾಗ ಮರುಕವಾಗುತ್ತದೆ.

ನಮ್ಮ ನಾಡಲ್ಲಿ ನಮ್ಮ ನುಡಿಯಲ್ಲಿ ಭಾರತ ಸರ್ಕಾರ ಕೆಲಸ ಮಾಡಲಿ ಎಂದು ಒತ್ತಾಯಿಸುವ, ಹಿಂದೀಯೊಂದಕ್ಕೇ ರಾಷ್ಟ್ರಭಾಷೆಯ ಸ್ಥಾನ ಕಲ್ಪಿಸಿ, ಈ ದೇಶದ ಉಳಿದ ಭಾಷೆಯ ಜನರನ್ನು ಎರಡನೇ ದರ್ಜೆಗೆ ಇಳಿಸುವ ಕೇಂದ್ರಸರ್ಕಾರದ ಹಿಂದೀ ಸಾಮ್ರಾಜ್ಯಶಾಹಿ ಮನಸ್ಥಿತಿಯನ್ನು ವಿರೋಧಿಸಿ ತಮಿಳುನಾಡೂ ಸೇರಿದಂತೆ ದೇಶದ ನಾನಾ ಕಡೆ ನಡೆದ ಹಿಂದೀ ಹೇರಿಕೆ ವಿರೋಧಿ ಹೋರಾಟಗಳು ಇವರ ಕಣ್ಣಿಗೆ ಭಾರತದಲ್ಲಿ ಯಾರೋ ಹುಟ್ಟುಹಾಕಿದ ಬಿರುಕುಗಳಾಗಿ ಕಾಣುತ್ತದೆ. ಇದನ್ನೆಲ್ಲಾ ನೋಡುತ್ತಿದ್ದರೆ ನಾವೆಲ್ಲಾ ನಮ್ಮತನಕ್ಕೆ ಎಳ್ಳುನೀರು ಬಿಟ್ಟು, ಹಿಂದೀ ಸಾಮ್ರಾಜ್ಯಶಾಹಿಯಡಿಯಲ್ಲಿ ಎರಡನೇ ದರ್ಜೆಯ ಜನರಾಗಿ ಬಾಳುವುದೇ ಭಾರತದ ಒಗ್ಗಟ್ಟಿಗೆ ಸಾಧನ ಎನ್ನುವ ನಂಬಿಕೆ ಇವರಿಗೆ ಇದ್ದಂತಿದೆ. ಒಟ್ಟಿನಲ್ಲಿ ಈ ಪುಸ್ತಕ ಓದುತ್ತಿದ್ದಂತೆಯೇ ಈ ದೃಷ್ಟಿಕೋನವು ರಾಷ್ಟ್ರೀಯವಾದದ ಅತಿರೇಕವೇನೋ ಎಂಬ ಅನಿಸಿಕೆಗೆ ಕಾರಣವಾಗುತ್ತದೆ.

ಶ್ರೀ ರಾಜೀವ್ ಮಲ್ಹೋತ್ರಾ ಅವರ ಈ ಪುಸ್ತಕವು ಬರಿಯ ಪುಸ್ತಕವಾಗಿಲ್ಲದೆ ರಾಷ್ಟ್ರೀಯತೆಯ ಹೆಸರಲ್ಲಿ ಇಡೀ ಭಾರತದ ವೈವಿಧ್ಯತೆಯನ್ನು ಅಳಿಸಿಬಿಡುವ ಉಗ್ರ ಹುಸಿ ರಾಷ್ಟ್ರೀಯವಾದಿಗಳ ಹುನ್ನಾರವಾಗಿ ಕಾಣುತ್ತಿದೆ. ಕನ್ನಡದ ಜನರಲ್ಲಿ ತನ್ನ ನುಡಿ, ನಡೆ, ಇತಿಹಾಸದ ಬಗ್ಗೆ ಅರಿವು ಹೆಚ್ಚಿದಂತೆಲ್ಲಾ ಈ ಜನರಿಗೆ ಸಂಕಟ ಶುರುವಾಗುತ್ತದೆ. ಈ ಸಂಕಟ ಭಾರತದ ಏಕತೆಗೆ ಧಕ್ಕೆ ಉಂಟಾದೀತು ಎಂಬ ಕಾರಣದಿಂದಲೇ ಎನ್ನುವುದಾದರೆ ಈ ಸಿದ್ಧಾಂತದವರು ನಮಗೆ ಕೊಡುವ ಪರಿಹಾರವೇನು? ಈ ಜನರು ಹೇಳುವ ಭಾರತೀಯರೆಲ್ಲಾ ಒಂದೇ ನಡೆನುಡಿಯ, ಒಂದೇ ಸಂಸ್ಕೃತಿಯವರು. ನಮ್ಮಲ್ಲಿ ಯಾವುದೇ ರೀತಿಯ ಭೇದಗಳಿಲ್ಲಾ… ಎಲ್ಲಾ ಭಾಷೆ ಸಂಸ್ಕೃತಿಗಳ ಬೇರು ಇರುವುದೇ ಸಂಸ್ಕೃತ, ಹಿಂದೀಯಲ್ಲಿ. ಹಾಗಾಗಿ ದೇಶದ ಜನರೆಲ್ಲಾ ನಿಮ್ಮ ನಿಮ್ಮ ನುಡಿಗಳ ಬಗ್ಗೆ ಅಧ್ಯಯನ ಮಾಡದೆ.. ತೆಪ್ಪಗೆ ಹಿಂದೀಯಲ್ಲಿ ವ್ಯವಹರಿಸಿ. ನಿಮ್ಮ ನುಡಿ, ಅನನ್ಯತೆಯನ್ನು ನಿಮ್ಮ ಮನೆಯ ಪ್ರಿಜ್ಜಿನಲ್ಲಿಡಿ. ಆಗ ದೇಶದಲ್ಲಿ ಏಕತೆ ಬಲಗೊಳ್ಳುತ್ತದೆ ಎಂಬ ಸಿದ್ಧಾಂತದ ಮನಸ್ಥಿತಿ ಹೊಂದಿರುವುದು ಕಾಣುತ್ತಿದೆ.ವಾಸ್ತವವಾಗಿ ಯಾವುವನ್ನು ಸಮಸ್ಯೆಗಳೆಂದು ಈ ಮಂದಿ ಹೇಳುತ್ತಾ ಇದ್ದಾರೋ ಆ ಸಮಸ್ಯೆಗಳು ಇವರು ಹೇಳುವ ಅಸಮಾನತೆಯ ಹೇರಿಕೆಯಿಂದಾಗಿ ಉಲ್ಬಣೀಸುತ್ತದೆಯೇ ಹೊರತು ಪರಿಹಾರವಾಗದು.

ಈ ಪುಸ್ತಕಕ್ಕಾಗಿ ಅಪಾರವಾದ ದಾಖಲೆಗಳನ್ನು ಬಹಳ ಕಷ್ಟಪಟ್ಟು ಕೂಡಿ ಹಾಕಲಾಗಿದೆಯಂತೆ. ಆದರೆ ಈ ಸಾಕ್ಷಗಳೆಲ್ಲಾ ಭಯಂಕರ ಅನುಮಾನ, ಭೀತಿ ಮತ್ತು ತಮಗೆ ಒಪ್ಪಿತವಲ್ಲದ ಸಿದ್ಧಾಂತ ಮಂಡಿಸಿದವರ ಬಗೆಗಿನ ವೈಯುಕ್ತಿಕ ಟೀಕೆಯಿಂದಲೇ ಕೂಡಿದಂತಿರುವುದರಿಂದ ಪೂರ್ವಾಗ್ರಹ ಪೀಡಿತವಾಗಿದೆ ಎನ್ನಿಸುತ್ತದೆ. ರಾಜೀವ್ ಮಲ್ಹೋತ್ರಾರ ಮಾತುಗಳಲ್ಲಿ ಗುಮ್ಮನಿಗೆ ಹೆದರಿ ಅಮ್ಮನಿಗೂ ಬಾಗಿಲು ತೆರೆಯದಂತಹ ಭೀತಿಯ ಭಾವ ಕಾಣುತ್ತದೆ. ರಾಜೀವ್ ಮಲ್ಹೋತ್ರಾರವರಿಗೆ ನಿಜವಾದ ಭಾರತದ ಒಳಗಿನ ಸ್ವರೂಪದ ಬಗ್ಗೆ, ಇಲ್ಲಿನ ವೈವಿಧ್ಯತೆಗಳ ಬಗ್ಗೆ ಅರಿವಿನ ಕೊರತೆಯಿರುವುದು ಗೊತ್ತಾಗುತ್ತದೆ.

This entry was posted in Idea of India. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s